29.3 C
Karnataka
Sunday, September 22, 2024

    ನಿನ್ನ ನೀ ಪ್ರೀತಿಸು

    Must read

    ಉದ್ಯೋಗ ಸಿಕ್ಕಿದ್ದು, ನನ್ನ ಪಾಲಿಗೆ ದಕ್ಕಿದ ಪುಣ್ಯವೆಂದೇ ಭಾವಿಸಿ ಕಂಪನಿಯೊಂದಕ್ಕೆ ಕೆಲಸಕ್ಕೆ ಸೇರಿರುತ್ತೇವೆ. ಕ್ರಮೇಣ ಅಲ್ಲಿನ ವ್ಯವಸ್ಥೆಗಳಿಗೆ (ಅದು ಹೇಗೇ ಇದ್ದರೂ) ಹೊಂದಿಕೊಳ್ಳುತ್ತಾ ಬದುಕು ಕಟ್ಟಿಕೊಳ್ಳಲು ಶುರು ಮಾಡಿರುತ್ತೇವೆ. ವರ್ಷ ಕಳೆದಂತೆ ಆ ಸಂಸ್ಥೆಯೊಂದಿಗೆ ಅದೇನೋ ಒಂದು ರೀತಿಯ ಬಂಧ ಇನ್ನಿಲ್ಲದಂತೆ ಬೆಳೆದು ಬಿಟ್ಟಿರುತ್ತದೆ.

    ಏಳೆಂಟು ವರ್ಷ ದುಡಿದರೂ ಒಂದು ಪ್ರೊಮೋಷನ್ ಇರುವುದಿಲ್ಲ, ಹೇಳಿಕೊಳ್ಳುವಂತಹ ಹೈಕ್ ಕೂಡಾ ಸಿಕ್ಕಿರುವುದಿಲ್ಲ, ಅದೆಲ್ಲಾ ನಾಳೆಗೆ ಸರಿ ಹೋಗುತ್ತದೆ ಎನ್ನುವ ನಂಬಿಕೆಯೂ ಅಲ್ಲಿಲ್ಲ. ಆದರೂ ಅಲ್ಲಿಂದ ಸ್ವತಃ ತಾನೇ ಗಟ್ಟಿ ಮನಸ್ಸು ಮಾಡಿ ಎದ್ದು ಹೋಗುವುದಕ್ಕೆ ಮನಸ್ಸು ಮಾಡಿರುವುದಿಲ್ಲ. ಯಾಕಂದರೆ ತಮ್ಮದೇ ಸಂಸ್ಥೆಯೆಂಬಂತೆ ನಿತ್ಯ ದುಡಿಯುತ್ತೇವೆ. ನಿಯತ್ತಿನಿಂದ ಕೆಲಸ ಮಾಡಿರುತ್ತೇವೆ. ಅದುವೇ ಜೀವನ ಎಂಬಂತೆ ಅದೇ ವೃತ್ತಿಯಲ್ಲಿ ಹೊಂದಿಕೊಂಡು ಕೆಲಸ ಮಾಡುತ್ತೇವೆ. ನನಗೆ ಋಣ ಇರುವವರೆಗೂ ಅಲ್ಲಿ ದುಡಿಯುತ್ತೇನೆ ಎನ್ನುವ ನೆಪ ಹೇಳಿಕೊಂಡು ಅಲ್ಲೇ ಇರಲು ಪ್ರಯತ್ನಿಸುತ್ತೇವೆ.

    ಕಂಫರ್ಟ್‍ಝೋನ್

    ಸಂಸ್ಥೆಯೊಂದಿಗೆ ನಿಷ್ಠುರವಾಗಿ ದುಡಿಯುವ ಕೆಲವರಿಗೆ ನಾನು ಇದ್ದಷ್ಟೂ ಸಮಯ ಅಲ್ಲಿ ಯಾವುದೇ ರೀತಿಯ ನನ್ನ ಬೆಳವಣಿಗೆಗೂ ಅವಕಾಶ ಇರುವುದಿಲ್ಲ ಅನ್ನೋದು ಗೊತ್ತು. ಆದರೂ ಅಲ್ಲೇ ಉಳಿಯುತ್ತಾನೆ. ಯಾಕಂದರೆ ಅಲ್ಲಿ ಕೆಲಸ ಮಾಡುವುದರ ಜತೆಗೆ ಅಲ್ಲೊಂದು ಕಂಫರ್ಟ್‍ಝೋನ್ ಸೃಷ್ಟಿಸಿಕೊಂಡುಬಿಟ್ಟಿರುತ್ತೇವೆ.
    ಕಚೇರಿಯಲ್ಲಿನ ವಾತಾವರಣ, ನಮ್ಮ ವೃತ್ತಿ ಬಗೆಗೆ ನಮಗೇ ಇರುವ ಅಪನಂಬಿಕೆ, ಆಫೀಸ್ ಪಾಲಿಟಿಕ್ಸ್, ಹೀಗೆ ಹಲವು ವಿಚಾರಗಳು ಆಗಾಗ್ಗೆ ಮನಸ್ಸಿಗೆ ಬಂದು ಗೊಂದಲ ಸೃಷ್ಟಿಸುತ್ತಿರುತ್ತದೆ. ಇದರ ಫಲಿತಾಂಶ ಕೇವಲ ನಮ್ಮ ಮೇಲೇ ನಮಗೆ ಉಂಟಾಗುವ ಅಪನಂಬಿಕೆ ಮತ್ತು ಖಿನ್ನತೆ.

    ಅದರ ಮಧ್ಯೆ ಒಮ್ಮೆ ಉದ್ಯೋಗ ಕಳೆದುಕೊಂಡ ಮೇಲೆ ಬೇರೆ ದಾರಿ ಇಲ್ಲವೇನೋ ಎಂಬಂತೆ ಕುಸಿದು ಕುಳಿತು ಬಿಡುತ್ತಾನೆ. ಆದರೆ ಜಗತ್ತಿನಲ್ಲಿ ಪರಿಸ್ಥಿತಿ ಖಂಡಿತಾ ಹಾಗಿರುವುದಿಲ್ಲ. ಮಾಡಲು ಮನಸ್ಸಿದ್ದರೆ ಅವಕಾಶಗಳು ಹಲವು. ಬದುಕು ಕಟ್ಟಿಕೊಳ್ಳಲು ನೂರಾರು ದಾರಿ ಇವೆ. ಅದನ್ನು ನಾವೇ ಕಂಡುಕೊಳ್ಳಬೇಕಷ್ಟೇ.ಹಿರಿಯರೊಬ್ಬರು ಹೇಳಿದ ಪ್ರಸಿದ್ಧ ಮಾತು “ನಿಮ್ಮ ಕೆಲಸವನ್ನು ಪ್ರೀತಿಸಿ, ಸಂಸ್ಥೆಯನ್ನಲ್ಲ. ಯಾಕಂದರೆ ಕಂಪನಿ ಯಾವಾಗ ನಿಮ್ಮನ್ನು ಪ್ರೀತಿಸುವುದನ್ನು ನಿಲ್ಲಿಸುತ್ತದೋ ಗೊತ್ತಿಲ್ಲ’ ಎಂದು. ಸಂಸ್ಥೆ ದೂರ ಮಾಡಿದರೂ ಅದೇ ಕೆಲಸ ನಮ್ಮನ್ನು ಯಾವ ಸಂದರ್ಭದಲ್ಲಿ ಎಲ್ಲಿ ಬೇಕಾದರೂ ಕೈಹಿಡಿಯುತ್ತದೆ. ಅನುಭವಕ್ಕೆ ಅವಕಾಶಗಳು ಹೆಚ್ಚು. ಗಳಿಸಿದ ಜ್ಞಾನ ಮತ್ತು ಅನುಭವ ನಮಗೆ ಅವಕಾಶಗಳನ್ನು ಹುಡುಕಿಕೊಡುತ್ತದೆ ಎಂಬುದು ಸತ್ಯ.

    ಆತ್ಮಗೌರವ ಇರಲಿ
    ಅದಕ್ಕೂ ಮೊದಲು ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದನ್ನು ಕಲಿತುಕೊಳ್ಳಬೇಕು. ತನ್ನನ್ನು ತಾನು ಪ್ರೀತಿಸುವುದು ಅಂದರೆ ಆತ್ಮಗೌರವ, ಮನಸ್ಸಿನಲ್ಲಿ ಸಕಾರಾತ್ಮಕ ಭಾವ, ಯಾವುದೇ ಕಂಡೀಶನ್‍ಗಳಿಲ್ಲದೇ ತನ್ನನ್ನು ತಾನು ಮೊದಲು ಒಪ್ಪಿಕೊಳ್ಳುವುದು. ಇದೊಂದು ರೀತಿಯಲ್ಲಿ ಆರೋಗ್ಯಕರ ಚಿಂತನೆ. ಈ ಜಗತ್ತಿನಲ್ಲಿ ಯಾರೂ ಕೂಡಾ ಪರಿಪೂರ್ಣರಲ್ಲ.

    ಪ್ರತಿಯೊಬ್ಬರಲ್ಲೂ ಬಲ ಮತ್ತು ಬಲಹೀನತೆಗಳಿರುತ್ತವೆ. ಅದನ್ನು ನಾವೇ ಸರಿಪಡಿಸಿಕೊಳ್ಳಬೇಕಷ್ಟೇ. ಯಾವಾಗ ನಮ್ಮನ್ನು ನಾವು ಇಷ್ಟಪಡುದಿಲ್ಲವೋ ಅಲ್ಲಿಯವರೆಗೆ ನಾವು ಇತರರ ಬಗ್ಗೆಯೂ ಒಲವು, ಪ್ರೀತಿಯ ಭಾವ, ಒಟ್ಟಿನಲ್ಲಿ ನಮ್ಮದೇ ಜೀವನದ ಬಗ್ಗೆ ಕನಸು ಕಟ್ಟಿಕೊಳ್ಳುವುದಕ್ಕೆ ಸಾಧ್ಯ ಇಲ್ಲ.
    ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದರಿಂದ, ನಮ್ಮೊಳಗಿನ ಕೌಶಲಗಳನ್ನು ಗುರುತಿಸಿಕೊಳ್ಳುವುದರಿಂದ ಮತ್ತಷ್ಟು ಬೆಳವಣಿಗೆ ಸಾಧ್ಯ.

    ಉದಾಹರಣೆಗೆ ಉದ್ಯೋಗ ಕಳೆದುಕೊಂಡಾಗ ಧೃತಿಗೆಡದೆ ನಮ್ಮದೇ ಆಸಕ್ತಿಯ ಆಯ್ಕೆಯನ್ನು ಮಾಡಿಕೊಳ್ಳಬಹುದು. ಅಲ್ಲಿ ಕೆಲಸ ಮಾಡಲು ಇತರರ ಅಪ್ರೂವಲ್‍ಗಾಗಿ ಕಾಯಬೇಕಿಲ್ಲ. ಅದರಿಂದ ವೈಯಕ್ತಿಕ ಬೆಳವಣಿಗೆ ಸಾಧ್ಯ. ಅದು ನಮ್ಮನ್ನು ಉತ್ತಮ ಸ್ಥಿತಿಯೆಡೆಗೆ ಕರೆದೊಯ್ಯುವ ದಾರಿ ಕೂಡಾ ಅದಾಗಿರುತ್ತದೆ. ಬೆಳವಣಿಗೆಯ ಹಾದಿಯಲ್ಲಿ ಎದುರಾಗುವ ಪ್ರತಿಯೊಂದು ತೊಂದರೆಗಳನ್ನು ಎದುರಿಸಬಲ್ಲ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ. ಅಂತಹ ಆತ್ಮವಿಶ್ವಾಸ ಮತ್ತು ನಂಬಿಕೆ ಬಹಳ ಮುಖ್ಯ. ಯಾವಾಗ ನಮ್ಮನ್ನು ನಾವು ಪ್ರೀತಿಸಲು ಶುರು ಮಾಡುತ್ತೇವೆಯೋ ಆಗ ಮಾನಸಿಕವಾಗಿ, ದೈಹಿಕವಾಗಿ ಹಾಗೂ ಭಾವನಾತ್ಮಕವಾಗಿಯೂ ಆರೋಗ್ಯವಾಗಿರುತ್ತೇವೆ. ಅದರ ಫಲಿತಾಂಶ ಎಲ್ಲವುಗಳಿಗಿಂತ ವಿಭಿನ್ನವಾಗಿರುತ್ತದೆ.

    ಚಿತ್ರ ಕೃಪೆ : eberhard grossgasteiger from Pexels

    ಶ್ರೀದೇವಿ ಅಂಬೆಕಲ್ಲು
    ಶ್ರೀದೇವಿ ಅಂಬೆಕಲ್ಲು
    ಶ್ರೀದೇವಿ ಅಂಬೆಕಲ್ಲು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ. ಪದವಿ ಪಡೆದಿದ್ದು ಉಜಿರೆಯ ಶ್ರೀ ಧರ್ಮಸ್ಥಳ ಮಂಜನಾಥೇಶ್ವರ ಕಾಲೇಜಿನಲ್ಲಿ. ಪತ್ರಿಕೋದ್ಯಮ ಪದವಿ ಮಂಗಳೂರು ವಿವಿ. ಆಸಕ್ತಿದಾಯಕ ಓದು ಇವರ ಬರವಣಿಗೆಯ ವಿಶೇಷ.
    spot_img

    More articles

    9 COMMENTS

    1. “ನಿಮ್ಮ ಕೆಲಸವನ್ನು ಪ್ರೀತಿಸಿ, ಸಂಸ್ಥೆಯನ್ನಲ್ಲ. ಯಾಕಂದರೆ ಕಂಪನಿ ಯಾವಾಗ ನಿಮ್ಮನ್ನು ಪ್ರೀತಿಸುವುದನ್ನು ನಿಲ್ಲಿಸುತ್ತದೋ ಗೊತ್ತಿಲ್ಲ” ಹಿರಿಯರೊಬ್ಬರು ಮಾರು ವರ್ಷಗಳ ಹಿಂದೆ ಹೇಳಿದ ಮಾತು…

      ನೆನಪಿರುವ ಹಾಗೆ 1990-91 ರ ವರೆಗೆ ಕೆಲಸಗಾರರಿಗೆ /ಕಾರ್ಮಿಕರಿಗೆ ಸಂಸ್ಥೆ ಎಂದ್ರೆ ಅಪಾರವಾದ ಪ್ರೀತಿ ಹಗಳರುಳು ದುಡಿಯುವ ಆಸೆ, ಪ್ರಾಮಾಣಿಕತೆ, ಹಿರಿಯರು ಯಾವಾಗ್ಲೂ ಹೇಳುವವರು ನ್ಯಾಯವಾಗಿ ಒಂದು ಕಡೆ ಕೆಲಸದಲ್ಲಿ ಇರು.. ಮಂಗನಾಗಿ ಅಲ್ಲಿ ಇಲ್ಲಿ ನೆಗೀಬೇಡ ಅಂತ.
      ಯಾವಾಗ ಐಟಿ ಕಂಪನಿಗಳು ಬೆಂಗಳೂರಿಗೆ ಬಂತೋ ಶುರುವಾಯ್ತು ಅವಕಾಶಗಳು… ತಮ್ಮನ್ನು ತಾವು ಅರಿತುಕೊಂಡು ಬೆಳೆಯತೊಡಗಿ ಕಂಪನಿ ಬಗ್ಗೆ ಅಪ್ಯಾಯತೆ, ಪ್ರೀತಿ ದೊರವಾಗಿ ಪ್ರತಿ ಎರಡು ವರ್ಷಕ್ಕೊಮ್ಮೆ ಒಂದು ಕಂಪನಿ ಸೇರಿ ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳೆದ.
      ಅದುದೆಲ್ಲ ಒಳ್ಳೇದು.. ಅಲ್ವೇ..

    2. ನಿನ್ನ ನೀನು ಪ್ರೀತಿಸು. ಈ ಶೇರ್ಷಿಕೆ ತುಂಬಾ ಅರ್ಥ ಗರ್ಬಿತವಾಗಿದೆ. ಇಲ್ಲಿ ನಾವು ನಮ್ಮನ್ನ ಪ್ರೀತಿಸಿ ಕೊಳ್ಳೊವುದು ಅಂದ್ರೇ ನಮ್ಮ ಸೌನ್ದರ್ಯ ವನ್ನ ಅಲ್ಲಾ.ಪ್ರತಿಯಾಬ್ಬರಿಗೂ ಆತ್ಮ ಗೌರವ ಇರುತ್ತೆ. ಒನ್ನದೊಂದು ಸಾರಿ ಇದನ್ನು ಬಿಟ್ಟು ಕೆಲಸ ಮಾಡಬೇಕು ಎನ್ನುವ ಸನ್ದರ್ಭ ಬರಬಹುದು ಆಗ ನಾವು ಯೋಚಿಸಿ ನಮ್ಮ ಮುಂದಿನ ಹೆಜ್ಜೆ ಇಡಬೇಕು ಈ ನಿಮ್ಮ ಲೇಖನ ತುಂಬಾ ಉಪಯೋಗ ವಾಗಿದೆ. ಧನ್ಯವಾದಗಳು. ಮೇಡಂ

    3. ಕಣ್ತೆರೆಸುವ

      ಅತ್ಯುಪಯುಕ್ತ ಲೇಖನ

    4. ಉತ್ತಮ ಬರಹ. ಮನಸಿಗೆ ಧೈರ್ಯ ತುಂಬುವ ಬರಹ. ಆದರೆ ಐ.ಟಿ.ಬಿ.ಟಿ ಗಳು ಬಂದ ಮೇಲೆ ಕಂಪನಿ ಮೇಲೂ ಗೌರವ ಇಲ್ಲ ಕೆಲಸದ ಮೇಲೂ ಇಲ್ಲ ಸಂಬಳ ಮಾತ್ರ ಪ್ರಮುಖ ಜಾಗ ಪಡೆಯುವುದು. ಆದರೆ ….. ಗೌರವ, ಇಷ್ಟದಿಂದ ಕೆಲಸ ಮಾಡುವಂತೆ ಮಾಡುವ ಬರಹ ಲೇಖಕಿಗೆ ಅಭಿನಂದನೆಗಳು

    LEAVE A REPLY

    Please enter your comment!
    Please enter your name here

    Latest article

    error: Content is protected !!