18.6 C
Karnataka
Friday, November 22, 2024

    ರಾಜೀವ್ ಫೌಂಡೇಶನ್ನೂ, ಯುಪಿಎ ಸರಕಾರವೂ, ಮೋದಿ ಆಡಳಿತವೂ…

    Must read

    ನಿಮ್ಮ ವೋಟು ಯಾರಿಗೆ? ಕಾಂಗ್ರೆಸ್ ಗೇ…ಇಂದಿರಾ ಗಾಂಧಿಗೆ….ಹಸು ಕರು ಗುರ್ತಿಗೆ… ಹಾಗೆನ್ನುವ ಘೋಷಣೆಗಳನ್ನು ಕೇಳಿಕೊಂಡೇ ಬೆಳೆದವನು ನಾನು. ಇವುಗಳ ಜೊತೆಯಲ್ಲಿ ಗರೀಬಿ ಹಟವೋ, ಇಪ್ಪತ್ತು ಅಂಶಗಳ ಕಾರ್ಯಕ್ರಮ, ಉಳುವವನೇ ಭೂಮಿಯ ಒಡೆಯ,ಕೊಟ್ಟ ಸಾಲ ಕೊಡಬೇಡಿ… ಎನ್ನುವ ಘೋಷಣೆಗಳೊಂದಿಗೆ ನಿಮ್ಮ ಓಟು ಯಾರಿಗೆ?…ಹಸ್ತದ ಗುರುತಿಗೆ,ಇಂದಿರಾ ಕಾಂಗ್ರೆಸ್ ಗೆ… ಅನ್ನುವುದನ್ನು ಕೇಳುವಾಗ,ನಾನೂ ಗುಂಪಿನಲ್ಲಿ ಹೋಗಿ ಬೊಬ್ಬೆ ಹೊಡೆಯಬೇಕು ಎನ್ನುವ ಆಸೆ. ಆದರೆ ಅಪ್ಪನ ಭಯ.

    ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಅಪ್ಪ,ನಾನು ಸರ್ಕಾರಿ ನೌಕರ,ಹಾಗಾಗಿ ನಮ್ಮ ಮನೆಯಲ್ಲಿ ಇದೆಲ್ಲವೂ ನಿಷಿದ್ಧ. ನಾವ್ಯಾರೂ ರಾಜಕೀಯದ ಬಗ್ಗೆ ಮುಕ್ತವಾಗಿ ಮಾತಾಡುವುದು ಅಪರಾಧ ಎಂದೇ ಅಪ್ಪನ ಅಪ್ಪಣೆ! ಎರಡು ದಿನ ತಡವಾಗಿ ಬರುತ್ತಿದ್ದ ದಿನಪತ್ರಿಕೆ ಹಿಡಿದು,ಸಾಯಂಕಾಲ ಕಟ್ಟೆಗೆ ತನ್ನ ಸ್ನೇಹಿತರೊಂದಿಗೆ ಕುಳಿತುಕೊಳ್ಳುತ್ತಿದ್ದ ಅಪ್ಪ ದೇವರಾಜ್ ಅರಸ್ ಹೀಗೆಂದರು,ವೀರೇಂದ್ರ ಪಾಟೀಲರು ಹೀಗೆಂದರು,ಜಾರ್ಜ್ ಫರ್ನಾಂಡಿಸ್,ರಾಮಕೃಷ್ಣ ಹೆಗಡೆ, ಮಧು ದಂಡವತೆ,ರಾಜ್ ನಾರಾಯಣ್,ಜಯಪ್ರಕಾಶ್ ನಾರಾಯಣ್,ಚರಣ್ ಸಿಂಗ್,ಮೊರಾರ್ಜಿ ದೇಸಾಯಿ ಏನಂತ ತಮ್ಮ ಅಭಿಪ್ರಾಯ ಮಂಡಿಸಿದರು ಅಂತ ಬಲು ಸ್ವಾರಸ್ಯವಾಗಿ ಪೇಪರಿನಲ್ಲಿ ಮುದ್ರಿಸಿದ್ದ ವಿಷಯವನ್ನು ಒಬ್ಬೊರಿಂದ ಒಬ್ಬರಿಗೆ ಹೇಳಿಕೊಳ್ಳುತ್ತಿದ್ದರು.

    8-10 ವರ್ಷದವನಿದ್ದ ನನಗೆ ವಿಷಯ ಅರ್ಥ ಆಗದಿದ್ದರೂ, ಅಪ್ಪನಿಗೆ,ಅವರ ಗೆಳೆಯರಿಗೆ ಕಾಂಗ್ರೆಸ್,ಇಂದಿರಾಗಾಂಧಿ ಎಂದರೆ ಒಳ್ಳೆ ಅಭಿಪ್ರಾಯ ಇಲ್ಲ ಅನ್ನುವುದಂತೂ ಸ್ಪಷ್ಟವಾಗುತ್ತಿತ್ತು. ಇಡೀ ಕಾಂಗ್ರೆಸ್ ಬೆಂಬಲಿಗರಿಂದ ತುಂಬಿದ್ದ ನನ್ನೂರಲ್ಲಿ 2 ಅಥವಾ 3 ಮನೆಗಳು ಮಾತ್ರ ವ್ಯತಿರಿಕ್ತವಾಗಿದ್ದವು. ಚುನಾವಣೆ ಮುಗಿದು,ಫಲಿತಾಂಶ ಬಂದ ದಿನ ನಮ್ಮ ಮನೆಯ ಮುಂದೆ ನಡು ರಾತ್ರಿಯವರೆಗೆ ತಪ್ಪಡಿ ಬಡಿಯುತ್ತ,ಹೆಂಡ ಕುಡಿದ ಜನರ ಕುಣಿತವೋ ಕುಣಿತ, ಅಪ್ಪನನ್ನು ಹಂಗಿಸುವ ರೀತಿ!!!…ಮತ್ತೆಲ್ಲವೂ ಸ್ತಬ್ಧ,ಮತ್ತೆ ಚುನಾವಣೆ ಬರುವ ತನಕ.ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ಸೇ ಗೆಲ್ಲುತ್ತಿದ್ದುದು. ಅದಕ್ಕೆ ವಿರೋಧವೇ ಇರಲಿಲ್ಲ ಎನ್ನಬಹುದು. ಇದ್ದರೂ ಊರಿಗೆ ಒಂದೋ,ಎರಡೋ ಮನೆಗಳು.

    1975 ರ ತುರ್ತುಪರಿಸ್ಥಿತಿ

    ಹತ್ತು ವರ್ಷವಿದ್ದ ನನಗೆ,1975 ರ ತುರ್ತುಪರಿಸ್ಥಿತಿ ಚೆನ್ನಾಗಿಯೇ ನೆನಪಿದೆ. ಹಲವಾರು ರಾಜಕೀಯ ನಾಯಕರ ಹೆಸರುಗಳು ನನಗೆ ಪರಿಚಯವಾದದ್ದೇ ಆಗ. ಕರಾಳ ದಿನಗಳನ್ನು ಅಪ್ಪ ಭಯಂಕರ ಚಿಂತಿತರಾಗಿ, ಕಾಂಗ್ರೆಸ್ ನಡೆಗೆ,ಇಂದಿರಾಗಾಂಧಿ ಎಡೆಗೆ ಅಸಮಾಧಾನ ಹೊರಹಾಕುತ್ತಿದ್ದರು. ಅಪ್ಪಟ ಗಾಂಧೀ ಪ್ರೇಮಿಯಾಗಿದ್ದ ಅಪ್ಪ, ಗಾಂಧಿ,ಸ್ವತಂತ್ರ ಬಂದ ತಕ್ಷಣ, ಕಾಂಗ್ರೆಸ್ ಹೆಸರಿನ ಪಕ್ಷವನ್ನು ವಿಸರ್ಜಿಸಿ ಬಿಡಿ ಅಂದರೂ ನೆಹರು ಕೇಳಲಿಲ್ಲ ಅಂತ ಆಗಾಗ ಹೇಳುತ್ತಿದ್ದರು. 1977 ರ ತುರ್ತುಪರಿಸ್ಥಿತಿ,ನಂತರ ಪ್ರಥಮ ಕಾಂಗ್ರೆಸ್ಸೇತರ,ಜನತಾ ಪಕ್ಷದ ಮೊರಾರ್ಜಿಯವರ ಸರ್ಕಾರ ರಚನೆ,ಮತ್ತೆ ಆರು ತಿಂಗಳಲ್ಲಿ ಚರಣ್ ಸಿಂಗರ ಪತನ,ಮತ್ತೆ ಚುನಾವಣೆ,ಮತ್ತೆ ಇಂದಿರಾಗಾಂಧಿ ಅಧಿಕಾರಕ್ಕೆ ಬಂದಾಗ, ಅಪ್ಪ ವಿರೋಧಪಕ್ಷದವರ ಕಚ್ಚಾಟಕ್ಕೆ ಬೇಸತ್ತು,ಸ್ವಲ್ಪದಿನ ರಾಜಕೀಯ ಮಾತಾಡುವುದನ್ನೇ ಬಿಟ್ಟು ಬಿಟ್ಟಿದ್ದರು!

    ರಾಜಕೀಯಕ್ಕೆ ಪ್ರವೇಶ ಇಲ್ಲ ಎನ್ನುವ ಫಲಕ ಇದ್ದ ಮಲ್ಲಾಡಿಹಳ್ಳಿಯ ಆಶ್ರಮಕ್ಕೆ ಪ್ರೌಢ ಶಿಕ್ಷಣಕ್ಕೆ ಸೇರಿದ ನಂತರ ರಾಜಕೀಯ ನನ್ನಿಂದಲೂ ದೂರ ಆಯ್ತು. ರಜೆಗೆ ಊರಿಗೆ ಹೋದಾಗ,ಯಾವುದಾದ್ರು ಚುನಾವಣೆ ಬಂದವು ಅಂದ್ರೆ ಜನತಾಪಕ್ಷದ ನೇಗಿಲು ಹೊತ್ತ ರೈತ ನ ಪರ ಪ್ರಚಾರಕ್ಕೆ ಅಪ್ಪನ ಬೈಗುಳದ ನಡುವೆಯೂ ಊರೂರು ತಿರುಗುತ್ತಿದ್ದೆ. ಆಗ ಅದೆಲ್ಲ ಏನೋ ಖುಷಿಯ ವಿಚಾರ. ಕಾಂಗ್ರೆಸ್ ನವರಿಗೆ ಹಣ ಸಿಕ್ಕಾಪಟ್ಟೆ ಮೇಲಿಂದ ಬರುತ್ತಿತ್ತು. ಜನತಾ ಪಕ್ಷದವರಿಗೆ ಹಣವೇ ಇಲ್ಲ. ಕಾರ್ಯಕರ್ತರೇ ವಂತಿಗೆ ಹಾಕಿಕೊಂಡು ಪ್ರಚಾರ ಮಾಡಬೇಕಾದ ಸ್ಥಿತಿ ಆಗ.

    ಮೌಲ್ಯಾಧಾರಿತ ರಾಜಕೀಯ

    1983 ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ಮೌಲ್ಯಾಧಾರಿತ ರಾಜಕೀಯ ಎನ್ನುವ ಹೊಸ ಶಬ್ದದೊಂದಿಗೆ ರಾಜ್ಯವಾಳುವಾಗ, ನಾನು ಸುರತ್ಕಲ್ ಎಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದಿದ್ದೆ. ಅಲ್ಲಿಯ ವಿದ್ಯಾರ್ಥಿ ಜೀವನದಲ್ಲಿ ಬೇರೆ ಯಾವ ವಿಷಯಕ್ಕೂ ಸಮಯವೇ ಇರುತ್ತಿರಲಿಲ್ಲ. ಹೀಗೆ ನನ್ನ ಬಾಲ್ಯದ ರಾಜಕೀಯ ಯಾವಾಗಲೋ ಒಮ್ಮೆ ತವರಿಗೆ ಬಂದ ಹೆಣ್ಣಿನ ಸ್ಥಿತಿಯಂತೆ ಇತ್ತು. ನಂತರ ಯಾಕೋ ರಾಜಕೀಯ ಹೇಸಿಗೆ ಅನ್ನುವಷ್ಟು ಬೇಸರವಾಗಿ ಅದರ ತಂಟೆಗೇ ಹೋಗುವುದನ್ನು ಬಿಟ್ಟುಬಿಟ್ಟಿದ್ದೆ. ಆದರೂ ರಾಜಕೀಯ ಬೆಳವಣಿಗೆಗಳ ಅರಿವು ಇತ್ತು.

    ಬಹಳ ದಿನಗಳ ವರೆಗೆ ನಮ್ಮೂರಲ್ಲಿ ಕಾಂಗ್ರೆಸ್,ಜನತಾ ಪಕ್ಷ(ದಳ) ಇದ್ದವೇ ಹೊರತು ಬಿಜೆಪಿ ಇರಲೇ ಇಲ್ಲ. ಇನ್ನು ರಾಮಕೃಷ್ಣ ಹೆಗಡೆಯಂತಹ ಮೌಲ್ಯಾಧಾರಿತ ನಾಯಕನನ್ನು ಆಗಿನ ಅವರದೇ ಪಕ್ಷದವರು ಅವಮಾನ ಮಾಡಿದ್ದ ರೀತಿ ಬಹಳ ಕಾಲದವರೆಗೆ ನನ್ನಲ್ಲಿ ಬೇಸರ ತರಿಸಿತ್ತು. ರಾಜಕೀಯಕ್ಕೆ ಬೇರೆಯೇ ತೆರನಾದ ವ್ಯಕ್ತಿತ್ವ ಬೇಕೇನೋ ಎನ್ನುವಷ್ಟು ನಿರಾಶೆ ಹೊಂದಿ,ಅದರಿಂದ ದೂರ ಆಗಿದ್ದೆ. ಆಗ ವೃತ್ತ ಪತ್ರಿಕೆಗಳೊಂದೇ ಮಾಧ್ಯಮಗಳಾಗಿದ್ದು,ಈಗಿನಷ್ಟು ಕಳಪೆ,ಅಮೌಲ್ಯಯುತವಾಗಿರಲಿಲ್ಲ. ಸ್ವಲ್ಪ ಮಟ್ಟಿಗೆ ಪ್ರಜಾಪ್ರಭುತ್ವದ ನಾಲ್ಕನೇ ಸ್ಥoಭವಾಗಿ ಕೆಲಸ ಮಾಡಿದ್ದಿದೆ.

    ಕಾರ್ಯಾಂಗ, ಶಾಸಕಾಂಗ ಒಂದು ನಿರ್ದಿಷ್ಟ ಕುಟುಂಬದ ಒಡೆತನದಲ್ಲಿದ್ದಾಗ, ಬಹುತೇಕ ದೇಶವಾಸಿಗಳೂ ಅದಕ್ಕೇ ಬೆಂಬಲವಾಗಿದ್ದಾಗ,ನಿರಂಕುಶ ಆಡಳಿತದ ಎಲ್ಲ ಲಕ್ಷಣಗಳೂ ಬರಿ ಕಣ್ಣಿಗೆ ರಾಚುತ್ತಿದ್ದಾಗ,ತುರ್ತುಪರಿಸ್ಥಿತಿಯಂತಹ ಕರಾಳ ವ್ಯವಸ್ಥೆಯನ್ನು ಸಹಿಸಿಕೊಂಡು,ಪ್ರಜಾಪ್ರಭುತ್ವ ಇಂದು ಜೀವಂತವಾಗಿದೆ ಎಂದರೆ,ಅದರ ಶ್ರೇಯಸ್ಸು,ನ್ಯಾಯಾಂಗ ಮತ್ತು ಪತ್ರಿಕಾ ಮಾಧ್ಯಮಕ್ಕೆ ಸಲ್ಲಬೇಕು. ವಿರೋಧ ಪಕ್ಷಗಳು,ಎಡರಂಗ ಗಳು ಇದ್ದವಾದ್ರೂ,ಯಾವಾಗ ಎಲ್ಲರೂ ಅಧಿಕಾರ,ಹಣಕ್ಕಾಗಿ ಒಂದಾಗಿ, ಜನರನ್ನು, ಪಕ್ಷಗಳ ಸಿದ್ಧಾಂತಗಳನ್ನು ಗಾಳಿಗೆ ತುರಿಬಿಡುತ್ತಾರೋ ಎನ್ನುವಂತಹ ದುಗುಡು ಯಾವಾಗಲೂ ಇರುತ್ತಿತ್ತು. ಕಾಂಗ್ರೆಸ್ ಬಿಟ್ಟರೆ,ಬೇರ್ಯಾರೂ ಸ್ಥಿರ ಸರ್ಕಾರ ಕೊಡಲು ಸಾಧ್ಯವೇ ಇಲ್ಲ ಎನ್ನುವಂತಹ ಅಸಹಾಯಕ ಸ್ಥಿತಿಯಲ್ಲಿ ಕಾಂಗ್ರೆಸ್ಸೇತರರು ಚುನಾವಣೆಗಳಲ್ಲಿ ಭಾಗವಹಿಸುವುದನ್ನೇ ನಿಲ್ಲಿಸಿದ್ದಂತಹ ಕಾಲ ಅದು. ಮತದಾನ ಪ್ರತಿಶತ 40-45 ಇರುತ್ತಿತ್ತು ಎಂದ್ರೆ, ಯಾರಾದ್ರೂ ಊಹಿಸಿಕೊಳ್ಳಿ,ಅಂದಿನ ರಾಜಕೀಯವನ್ನು. ಅಂತಹ ರಾಜಕೀಯ ವಾತಾವರಣ,ಇಂದಿರಾ ಮತ್ತು ರಾಜೀವರ ಹತ್ಯೆಗಳಲ್ಲಿ ಪರ್ಯಾವಸನ ವಾಗಬಹುದು ಅಂತ ಯಾರೂ ಊಹಿಸಲು ಸಾಧ್ಯವೇ ಇರಲಿಲ್ಲ.ನಂತರ ಭಾರತದಲ್ಲಿ ಆರ್ಥಿಕ ಸುಧಾರಣೆಗಳಿಗೆ ಅಡಿಪಾಯ ಹಾಕಿದ ನರಸಿಂಹರಾಯರ ಆಡಳಿತವನ್ನು ನೋಡಿ ಆಯಿತು. ಈ ವರ್ಷ ನರಸಿಂಹಾರಾಯರ ಜನ್ಮ ಶತಮಾನೋತ್ಸವ. ತೆಲಾಂಗಣ ಸರಕಾರ ಅದನ್ನು ಆಚರಿಸುತ್ತಿದೆ. ಬಹುಶಃ ಕಾಂಗ್ರೆಸ್ ಪಕ್ಷಕ್ಕೆ ತಮ್ಮದೆ ಪಕ್ಷದ ನಾಯಕನೊಬ್ಬನ ಜನ್ನಮ ಶತಮಾನೋತ್ಸವ ಎಂಬುದು ನೆನಪಿದೆಯೋ ಕಾಣೆ.

    ಲಂಚ ಕೊಟ್ಟರೆ,ಭಾರತದಲ್ಲಿ ದೆಹಲಿಯಿಂದ ಹಳ್ಳಿಯವರೆಗೆ ಯಾವ ಸರ್ಕಾರಿ ಕೆಲಸ ಬೇಕಾದ್ರೂ ಮಾಡಿಕೊಳ್ಳಬಹುದು ಎನ್ನುವ ಅಂಶ ಸಾರ್ವತ್ರಿಕವಾಗಿ ಜನರಲ್ಲಿ,ನಾಯಕರಲ್ಲಿ,ಅಧಿಕಾರಿಗಳಲ್ಲಿ ಮನೆ ಮಾಡಿಕೊಂಡು ಬಿಟ್ಟಿತ್ತು. ರಾಜಕೀಯ, ಸರ್ಕಾರ,ನೌಕರಿ ಕೆಲವೇ ಕೆಲವು ಜನಕ್ಕೆ ಬಿಟ್ಟರೆ, ಸಾಮಾನ್ಯ ಜನಗಳಿಗೆ ಎಟುಕದ ಮತ್ತು ಸಂಬಂಧ ಇಲ್ಲದ ವಿಷಯಗಳು ಎನ್ನುವ ಹಣೆ ಪಟ್ಟ ಹೊತ್ತು ಗಾಢವಾದ ನಿದ್ರೆಯಲ್ಲಿ ಸಮಾಜ ಮಲಗಿಬಿಟ್ಟಿತ್ತು. ಆಗ ವಾಜಪೇಯಿ ಬಂದ್ರು. ಜನಗಳಿಗೆ ಏನೋ ಆಸೆ. ಉ ಹುಂ…ಬಹುಮತವಿಲ್ಲದೆ, ಹಲವಾರು ಸಿದ್ಧಾಂತಗಳ ಪಕ್ಷಗಳೊಡನೆ ಅಧಿಕಾರ ನಡೆಸಿದ್ದೇ ಸಾಹಸ ಎಂಬಂತಾಗಿ,ಅಂತಹ ಮುತ್ಸದ್ದಿಯೇ ಇನ್ನು ಏನಿದ್ದರೂ ಸಮ್ಮಿಶ್ರ ಸರ್ಕಾರಗಳ ಕಾಲ, ಏಕ ಪಕ್ಷ ಆಡಳಿತ ಕೊನೆಯಾಗಲಿದೆ ಅಂತ ಹೇಳಿದಾಗ ನಾನಂತೂ ಬಹುವಾಗಿ ನೊಂದಿದ್ದೆ.

    90 ಬಂದವನು ಜವಾನನಾಗಿ,40 ಬಂದವನು ದಿವಾನರಾಗಿದ್ದ ದಿನಗಳನ್ನು ನೋಡಿದ್ದ ನಾನು, 20 ಸೀಟ್ ಪಡೆದ ಪಕ್ಷದವರು ದೆಲ್ಲಿಯ ಗದ್ದುಗೆ ಹಿಡಿದದ್ದೂ ನೋಡಿದೆ. ಇತ್ತೀಚೆಗೆ, 224 ಸೀಟ್ ಗಳ ಕರ್ನಾಟಕ ವಿಧಾನ ಸಭೆಯ ಅತಿರಥ,ಮಹಾರಥರು ತೆಪ್ಪಗೆ ಕುಳಿತು,35-40 ಇದ್ದವರು ಆಡಳಿತ ಮಾಡುವುದನ್ನು ನೋಡಿಯೂ ಆಯ್ತು.

    ನರಸಿಂಹರಾಯರ ಸರಕಾರದಲ್ಲಿ ಸಕ್ರಿಯರಾಗಿದ್ದ ಮನಮೋಹನ ಸಿಂಗ್ ಅವರು ತಾವೇ ಪ್ರಧಾನಿ ಆದಗ ಮಹಾಮೌನಿಯಾದರು. ಅಸಹ್ಯ ಎನ್ನುವಷ್ಟು ಹಗರಣಗಳು ನಡೆದವು. ದಿನವೂ ಹಗರಣ ಕೇಳುತ್ತಿದ್ದ ಜನರು,ಇಷ್ಟೆಲ್ಲಾ ಹಳ್ಳಿಯಿಂದ, ದಿಲ್ಲಿಯವರೆಗೆ, ಚುನಾಯಿತರು ದೇಶವನ್ನು ಕೊಳ್ಳೆ ಹೊಡೆದರೂ ಭಾರತ ಉಸಿರಾಡುತ್ತಿದೆಯಲ್ಲ,ಇನ್ನೆಷ್ಟು ಶ್ರೀಮಂತವಾಗಿರಬೇಕು ನನ್ನ ಭಾರತ ಅಂತ ಅದರಲ್ಲೇ ಶ್ರೇಷ್ಟತೆ ಗುರುತಿಸಿ,ಬೆನ್ನು ತಟ್ಟಿಕೊಳ್ಳುವ ಜನರ ಮಧ್ಯದಿಂದ ಬಂದ ನೋಡಿ ನರೇಂದ್ರ ದಾಮೋದರ ಮೋದಿ. ವಾಜಪೇಯಿ ಯನ್ನೇ ನೋಡಿದ್ದ ಜನ,ಅಡ್ವಾಣಿ,ಸುಷ್ಮಾ ಸ್ವರಾಜ್ ಅಂತಹ ಘಟಾನುಘಟಿಗಳನ್ನು ಹಿಂದಿಕ್ಕಿ ಸಂಸದ್ ಭವನದ ಮೆಟ್ಟಿಲಿಗಳಿಗೆ ತಲೆ ಬಾಗಿ ವಂದಿಸಿ ಮೊದಲ ಬಾರಿಗೇ ಪ್ರಧಾನಿ ಪಟ್ಟ ಏರಿ ಎಲ್ಲರ ಗಮನ ಸೆಳೆದಿದ್ದರು. ಅಲ್ಲಿಯತನಕದ ಭಾರತದ ಇತಿಹಾಸದಲ್ಲಿ ಹಗರಣ ರಹಿತ ಸರ್ಕಾರ ಎನ್ನಿಸಿಕೊಂಡು ದಿವಾಳಿ ಭಾರತ ವನ್ನು ಸ್ವಚ್ಛ ಭಾರತ ಅಂತ ಎತ್ತಿ ನಿಲ್ಲಿಸಿದ್ದು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರದಿಂದ ಬರೆಯಲ್ಪಡುತ್ತದೆ.

    ರಾಜೀವ್ ಗಾಂಧೀ ಫೌಂಡೇಶನ್ ವಿವಾದ

    2014 ರ ತನಕ ಕಾಂಗ್ರೆಸ್ ಮಾಡಿದ ಅವಾಂತರ …4G ಹಗರಣ, ಕಾಮನ್ವೆಲ್ತ್ ಗೇಮ್ ಹಗರಣ, ಕಲ್ಲಿದ್ದಲು ಹಗರಣ ಎಲ್ಲ ಅವರ ಕಾಲಾವಧಿಯಲ್ಲೇ ಬಯಲಿಗೆ ಬಂದು,ಸರ್ಕಾರದ ಪಾಲುದಾರರೇ ಜೈಲಿನ ಪಾಲಾಗಿದ್ದು ಒಂದೆಡೆ ಆದರೆ, ಯಾರಿಗೂ ಗೊತ್ತಾಗದ ಹಾಗೆ ಖಾಸಗಿ ಒಡೆತನದ ರಾಜೀವ್ ಗಾಂಧೀ ಫೌಂಡೇಶನ್ ಗೆ ಸರಕಾರಿ ಉದ್ಯಮಗಳಿಂದ ದೇಣಿಗೆ ಹೋಗುತ್ತಿತ್ತು ಎಂಬ ಸಂಗತಿ ಬೆಚ್ಚಿ ಬೀಳಿಸಿದೆ.ಸಾರ್ವಜನಿಕರು PMNRF ಗೆ ಕೊಟ್ಟ ಹಣವನ್ನು ರಾಜೀವಗಾಂಧಿ ಫೌಂಡೇಶನ್ ಟ್ರಸ್ಟ್ ಎನ್ನುವ ಖಾಸಗಿ ಸಂಸ್ಥೆಗೆ ವರ್ಗಾಯಿಸಿಕೊಂಡಿದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.ಚೀನಾದಿಂದಲೂ ಈ ಫೌಂಡೇಶನ್ ಗೆ ಹಣ ಬಂದಿರುವುದು ಈಗ ಮತ್ತೊಂದು ವಿವಾದ.

    ಸಮಾಜವಾದದ ಹಿನ್ನೆಲೆಯಿಂದ,ಜಾತ್ಯಾತೀತರಾಗಿ ಗುರುತಿಸಿಕೊಂಡಿರುವ, ಕಾಂಗ್ರೆಸ್ ನ ವಂಶ ಪಾರಂಪರ್ಯ ನಾಯಕತ್ವ ವನ್ನು ಧಿಕ್ಕರಿಸಿದಂತಹ ದೇವೇಗೌಡರು, 2019 ರ ಚುನಾವಣೆಯಲ್ಲಿ ಸೋತು, ತಮ್ಮ 88ನೇ ತಾರುಣ್ಯದಲ್ಲಿ ಕಾಂಗ್ರೆಸ್ ಸಹಾಯದಿಂದ ರಾಜ್ಯಸಭೆಗೆ ಹೋದ ಮರುದಿನವೇ ಹೇಳ್ತಾರೆ… ಮೋದಿಯವರೇ ದೇಶದಲ್ಲಿ ರಾಷ್ಟ್ರೀಯತೆ ಹೆಚ್ಚಾಗ್ತಿದೆ,ದಯಮಾಡಿ ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳಿ ಅಂತ!

    ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ 32 ಲಕ್ಷ ಕೋಟಿಗಳಷ್ಟು ಸಾಲ ಪಡೆದು,ದೇಶಬಿಟ್ಟು ಹೋಗಿರುವ ಕಳ್ಳರನ್ನು ಹಿಡಿದು ತರಲು ಮೋದಿ ಶ್ರಮಿಸುತ್ತಿದ್ದರೆ, ಯಾರೊಬ್ಬರೂ ಪ್ರಶಂಸಿವುದು ಇರಲಿ,ಸೌಜನ್ಯದ ಸಹಕಾರವನ್ನೂ ಕೊಡದೆ,ಉಲ್ಟಾ ಇವರು ಮಾಡಿರುವ ತಪ್ಪುಗಳನ್ನೆಲ್ಲ ಮೋದಿ ಮೇಲೆ ಹಾಕಿ ಮಾತಾಡುತ್ತಾರಲ್ಲ,ಇನ್ನೆಂತಹ ಧೈರ್ಯ ಇವರದ್ದು?

    ವಿನಾಶದತ್ತ ಹೊರಟಿದ್ದ ಭಾರತವನ್ನು ರಕ್ಷಿಸಿದ ಕೀರ್ತಿ ಮೋದಿಗೆ ಇತಿಹಾಸ ಸಲ್ಲಿಸುತ್ತದೆ,ಅದರಲ್ಲಿ ಯಾವ ಸಂಶಯವೂ ಬೇಡ. ಅಪರೂಪಕ್ಕೆ ಸಿಕ್ಕ ಇಂತಹ ನಾಯಕನನ್ನು ಗೌರವಿಸಿ,ಅನುಸರಿಸುವುದು,ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ ಆಗುವುದು ಯಾವಾಗ? ಒಳಿತು,ಕೆಡುಕುಗಳು ಕಣ್ಣ ಮುಂದೆ ಸ್ಪಷ್ಟವಾಗಿ ಇದ್ದರೂ ಪ್ರಜೆಗಳು ಯಾವುದೋ ಮಂಕುಜಾಲದಲ್ಲಿ ಬಿದ್ದ ಹಾಗೆ ವರ್ತಿಸುವುದನ್ನು ಕಂಡಾಗ ತುಂಬಾ ನೋವಾಗುತ್ತದೆ.

    ಮಂಜುನಾಥ ಬೊಮ್ಮಘಟ್ಟ
    ಮಂಜುನಾಥ ಬೊಮ್ಮಘಟ್ಟ
    ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಬರಹಗಾರ. ಸಧ್ಯ ಬಳ್ಳಾರಿಯಲ್ಲಿ ವಾಸ.
    spot_img

    More articles

    11 COMMENTS

    1. Very nicely summarized the historical events of Congress government which by the slogan of “Garibi Hatao” was able to loot India even today. On the other hand Modi is trying hard to rebuild India inspite of all the adverse challenges.

    2. ಬರಹ ಬಹಳ ಚನ್ನಾಗಿದೆ ಹಾಗೆಯೆ ಕೆಲ ಭ್ರಷ್ಟ ರಾಜಕಾರಣಿ ಗಳು ಅಧಿಕಾರಕ್ಕಾಗಿ ಮತ್ತು ಹಣ ಮಾಡಲು ನಾಚಿಕೆ ಇಲ್ಲದೆ ಮತ್ತು ನೈತಿಕತೆ ಇಲ್ಲದೆ ಭಾರತದ ಖಜಾನೆ ಲೂಟಿ ಮಾಡಿದ್ದಾರೆ

    3. Outstanding article by Mr.Manjunath Bommagatta. The flow of facts runs like a cinema which takes the contemporary persons to their memoirs of Indian politics. The meritorious people has to suffer under the corrupt leaders and their administration. ಯಥಾ ರಾಜ ತಥಾ ಪ್ರಜಾ . We are indeed lucky to have very able leader at present. Very well written by Mr.Manjunath Bommagatta.

    4. ವಾವ್ ತುಂಬಾ ಉಪಯುಕ್ತ ಲೇಖನ. ನಮ್ಮ ದೇಶದಲ್ಲಿ ಕಾಂಗ್ರೆಸ್ ಬಿಟ್ರೆ ಬೇರೆ ಯಾರು ಆಡಳಿತ ನಡೆಸೋಕ್ಕೆ ಆಗೋಲ್ಲ ಅವರೇ ಸರಿ ಅನ್ನುವ ಕಾಲ ಬದಲಾಗಿ.ಬೇರೆ ಬೇರೆ ಪಕ್ಷ ಗಳು ಬಂದ್ವು. ಆದರೆ ಇಲ್ಲಿ ಜನರ ಅಭಿರುದ್ದಿ ಗಿಂತ. ದೇಶದ ಅಭಿರುದ್ದಿ ಗಿಂತ ರಾಜಕಾರಣಿ ಗಳ ಅಭಿರುದ್ದಿ ಆಗಿದೆ. ಆಗ್ತಾ ಇದೆ. ನೈತಿಕತೆ ಮಾಯವಾಗ್ತಿದೆ. ಇಂತಹ ಸಮಯದಲ್ಲಿ. ಅಂಕಿ ಅಂಶಗಳ ಸಮೇತ ಬರೆದಿರುವ ನಿಮ್ಮ ಲೇಖನ ಸ್ವಲ್ಪ ಜನರ ಕಣ್ಣು ತೆರೆಸಲಿ. ಇದನ್ನೆಲ್ಲಾ ನೋಡಿದಾಗ ಅಂದ್ರೇ ಈ ಹೊಲಸು ರಾಜಕೀಯ.. ಧನ್ಯವಾದಗಳು. BM.ಇನ್ನು ಇನ್ನು ಇಂತಹ ಲೇಖನ ಗಳು ನಿಮ್ಮ ಕಡೆಯಿಂದ ಬರಲಿ.

    5. Manjunath free flow of thoughts and the way you have written in shortest time provokes to brood over the past facts for better future.

    6. ತುಂಬಾ ಚೆನ್ನಾಗಿದೆ.ಆದರೂ ನಮ್ಮ ದೇಶಕ್ಕೆ ಪಿ ವಿ ನರಸಿಂಹರಾವ್ ಕಾಣಿಕೆ ಅಮೂಲ್ಯವಾದದ್ದು. ಒಂದು ವಿಷಯ ಅರ್ಥವಾಗುತ್ತಿಲ್ಲ…
      ಇದೆ ಮನಮೋಹನ ಸಿಂಗ್ ಅವರು ನರಸಿಂಹರಾವ್ ಕಾಲದಲ್ಲಿ ಸ್ವಾರ್ಥತೆ ಇಲ್ಲದೆ ಆರ್ಥಿಕತೆಗೆ ಒಳ್ಳೆಯ ಸ್ವರೂಪ ಕೊಟ್ಟು ಮುಂದೆ ರಬ್ಬರ್ ಸ್ಟಾಂಪ್ ರೀತಿ ಮಹಾ ಮೌನಿಯಾದರೇಕೆ ?!!!

    7. ಆತ್ಮೀಯರಾದ ಮಂಜುನಾಥ್ ರವರೇ
      ನಿಮ್ಮ ಈ ಬರಹ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಬರಹದ ಶೈಲಿ ನನಗಂತೂ ತುಂಬಾ ನೇ ಇಷ್ಟ ಎಲ್ಲಾ ವಿಷಯಗಳಲ್ಲಿ ಸುಲಲಿತವಾಗಿ ಬರೆದು ಮುಗಿಸುವ ನಿಮ್ಮ ಶೈಲಿ ಗೆ hats off ಹೀಗೆ ನೇ ನಿಮ್ಮ ಬರವಣಿಗೆ ಮುಂದುವರೆಸಿ
      . ಅಶೋಕ್ ಅರಳಿಮರ

    8. ಅಭಿಮಾನದ ಅನ್ನಿಸಿಕೆಗಳಿಗೆ ಅಭಿನಂದನೆಗಳು….

    9. ಇಂದಿನ ರಾಜಕೀಯದ ಕಠೋರ ಸತ್ಯ. ಆದರೆ ಬಹು ಪಾಲು ಜನರಿಗೆ ಸತ್ಯ ಕಹಿ. ಲೇಖಕರು ಬಹುಪಾಲು ರಾಜಕೀಯ ನಾಯಕರ ಜಾತಕದ ಕೆಲವು ಪುಟ ತೆರಿದಿದಾರೆ. ನಿಜ ಸರಕಾರಿ ನೌಕರ ಸರಕಾರದ ಆಗು ಹೋಗುಗಳ ಕುರಿತು ಮಾತಾಡುವ ಹಾಗಿಲ್ಲ.ಅಪರಾಧ ಆಗುತ್ತದೆ. ಇದು ಸರಕಾರದ ಕಾನೂನು. ಏನೇ ಆಗಲಿ. ಬಿ.ಎಮ್ ಇಂತಹ ಲೇಖನಗಳು ಜನರಿಗೆ ತಲುಪುವ ಹಾಗೆ ಬರೆಯಿರಿ. ಯುವ ಸಮೂಹಕೆ ಪ್ರಯೋಜನವಾಗ ಬಹುದು

    10. ಪ್ರಸ್ತುತ ರಾಜಕೀಯ ವಿದ್ಯಮಾನಗಳ ವಿಶ್ಲೇಷಣೆ ಅತ್ಯಂತ ಅರ್ಥಗರ್ಭಿತ.
      ದೇಶದ ಚುಕ್ಕಾಣಿ ಹಿಡಿದಿದ್ದವರು ,ಹಿಡಿದಿರುವವರು , ಮುಂದೆ ಹಿಡಿಯಬೇಕಾದ ವರಿಗೆ ಅರ್ಥಪೂರ್ಣ ಸಂದೇಶ

    LEAVE A REPLY

    Please enter your comment!
    Please enter your name here

    Latest article

    error: Content is protected !!