ವಾಸ್ತವ ಗಡಿ ರೇಖೆಯಲ್ಲಿ ಭಾರತ-ಚೀನಾ ಸಮರ ಸನ್ನದ್ಧತೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಸೇನಾ ಸಂಖ್ಯೆ, ಯುದ್ಧ ವಿಮಾನಗಳು, ಕ್ಷಿಪಣಿ ನಿರೋಧಕ ಪಡೆ ಹೀಗೆ ಈ ಪಟ್ಟಿ ಹೆಚ್ಚುತ್ತಲೇ ಹೋಗುತ್ತಿದೆ. ಆದರೆ, ಉಭಯ ರಾಷ್ಟ್ರಗಳ ಮಧ್ಯೆ ಈಗಿರುವ ಒಪ್ಪಂದದ ಪ್ರಕಾರ ಬೆಂಕಿಯುಗುಳುವ ಅಸ್ತ್ರಗಳ ಪ್ರಯೋಗ (ಫೈರ್ ಆರ್ಮ್) ಬಳಸುವಂತಿಲ್ಲ. ಅದರ ಕಾರಣದಿಂದಾಗಿಯೇ ಕಳೆದ ಕೆಲ ದಿನಗಳ ಹಿಂದೆ ಮೊಳೆಗಳನ್ನು ಅಳವಡಿಸಿದ ಬಡಿಗೆಗಳಿಂದಲೇ ಉಭಯ ದೇಶಗಳ ಯೋಧರು ಕಾದಾಡಿದ್ದರು. ಚೀನಿಯರಿಗೆ ತಕ್ಕ ಶಾಸ್ತಿ ಮಾಡುತ್ತಲೇ ಹಲವು ಭಾರತೀಯ ಯೋಧರು ಹುತಾತ್ಮರಾಗಿದ್ದರು.
ಈಗ ಭಾರತದ ಘಾತಕ್ ತುಕಡಿ ಕಮಾಂಡೋಗಳ ಭಯಕ್ಕೆ ಬಿದ್ದಿರುವ ಚೀನಾ ಸೇನಾ ಪಡೆಯುವ ಟಿಬೆಟ್ ಭಾಗದಲ್ಲಿ ತನ್ನ ಸೇನಾ ಪಡೆಗೆ ತರಬೇತಿ ನೀಡಲು ಕನಿಷ್ಠವೆಂದರೂ 20 ಮಾರ್ಷಲ್ ಆರ್ಟ್ಸ್ ಪರಿಣಿತರನ್ನು ನೇಮಕ ಮಾಡಿದೆ ಎಂದು ತಿಳಿದು ಬಂದಿದೆ.
ಘಾತಕ್ ಕಮಾಂಡೋ
ಜೂನ್ 15ರಂದು ಗಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಯೋಧರ ನಡುವೆ ಸಂಘರ್ಷ ಆರಂಭವಾಗುವ ಮೊದಲೇ ಭಾರತ ತನ್ನ ಘಾತಕ್ ಕಮಾಂಡೋಗಳನ್ನು ಈ ಭಾಗದಲ್ಲಿ ನಿಯೋಜಿಸಿತ್ತು ಎಂದು ಹೇಳಲಾಗುತ್ತಿದೆ. ಕೈ-ಕೈ ಹೋರಾಟದಲ್ಲಿ ಅತಿ ಪರಿಣತಿಯನ್ನು ಈ ಕಮಾಂಡೋಗಳು ಹೊಂದಿದ್ದಾರೆ. ವಿಶೇಷವೆಂದರೆ ಇವರಿಗೆ ಕರ್ನಾಟಕದ ಬೆಳಗಾವಿ ಸೇನಾ ನೆಲೆಯಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಇವರೆಲ್ಲರಿಗೂ 43 ದಿನಗಳ ವಿಶೇಷ ತರಬೇತಿ ನೀಡಲಾಗುತ್ತದೆಯಂತೆ. ಮೈಮೇಲೆ 35 ಕೆ. ಜಿ. ಗೂ ಅಧಿಕ ಭಾರ ಹೊತ್ತು ಸುಮಾರು 40 ಕಿ.ಮೀ. ವಿಶ್ರಾಂತಿ ಇಲ್ಲದೆ ಓಡುವ ತರಬೇತಿಯೂ ಇವರು ಪಡೆಯುತ್ತಾರೆ. ಒಮ್ಮೆ ಇವರ ತರಬೇತಿ ಪೂರ್ಣಗೊಂಡರೆ ಬಳಿಕ ಮರುಭೂಮಿ, ನಾನಾ ಭೌಗೋಳಿಕ ಸನ್ನಿವೇಶಗಳಲ್ಲಿ ಅವರನ್ನು ನಿಯೋಜಿಸಿ ತರಬೇತಿಯನ್ನು ನಿಯಮಿತವಾಗಿ ಮುಂದುವರಿಸಲಾಗುತ್ತದೆ.
ಹಲವು ಕಮಾಂಡೋಗಳು
ಪ್ರತಿ ಘಾತಕ್ ಕಮಾಂಡೋ ಯೂನಿಟ್ ನಲ್ಲಿ ಒಬ್ಬ ಹಿರಿಯ ಅಧಿಕಾರಿ ಮತ್ತು 22 ಯೋಧರು ಇರುತ್ತಾರೆ. ಸದ್ಯದ ಮಟ್ಟಿಗೆ ಚೀನಾ ಗಡಿಯಲ್ಲಿ 40-45 ಇಂತಹ ಯೋಧರನ್ನು ನಿಯೋಜನೆ ಮಾಡಲಾಗಿದೆ. ಉಳಿದವರು ಈ ಕಮಾಂಡೋಗಳಿಗೆ ಬ್ಯಾಕ್ ಅಫ್ ಆಗಿ ಹಿನ್ನೆಲೆಯಲ್ಲಿ ಇರುತ್ತಾರೆ.
ಪ್ರತಿ ಬಾರಿಯೂ ಪದಾತಿ ಯೋಧರ ನೇಮಕ (ಇನ್ ಫ್ಯಾಂಟ್ರಿ)ವಾದಾಗಲೂ ಅವರಲ್ಲಿ ಕನಿಷ್ಠವೆಂದರೂ 40 ಜನರನ್ನು ಅವರ ಆರೋಗ್ಯ, ದೈಹಿಕ ಸಾಮರ್ಥ್ಯವನ್ನು ಪರಿಗಣಿಸಿ ಈ ಪಡೆಗೆ ಸೇರಿಸಲಾಗುತ್ತದೆ. ಬಳಿಕ ಅತಿ ಕಠಿಣ ತರಬೇತಿ ನೀಡಲಾಗುತ್ತದೆ.
ಯಾಕೆ ಈ ಕಮಾಂಡೋಗಳು
ಭಾರತ ಮತ್ತು ಚೀನಾ ನಡುವೆ 1996ರಲ್ಲಿ ಆದ ಒಪ್ಪಂದದ ಪ್ರಕಾರ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಬಂದೂಕು, ಸ್ಫೋಟಕ ಮತ್ತು ರಾಸಾಯನಿಕ ಅಸ್ತ್ರಗಳನ್ನು ಉಭಯ ದೇಶಗಳು ಬಳಕೆ ಮಾಡುವಂತಿಲ್ಲ. ಇದೇ ಕಾರಣಕ್ಕಾಗಿಯೇ ಬಡಿಗೆ ಹೊಡೆದಾಟ ಈ ಬಾರಿ ಸಂಭವಿಸಿತ್ತು.