ಹೊರಗಡೆ ವರ್ಷಧಾರೆ ಸುರಿಯುತ್ತಿರಬೇಕಾದರೆ ಮನೆಯೊಳಗಡೆ ಬಿಸಿ ಬಿಸಿ ತಿನಿಸುಗಳ ಸಮಾರಾಧನೆ ಶುರುವಾಗುತ್ತದೆ. ಬಿಸಿ ಬಿಸಿ ಕಾಫಿ, ಟೀ, ಕಷಾಯದ ಜೊತೆಗೆ ಕೆಲವು ತಿಂಡಿಗಳ ನೆನಪು ಬೇಡವೆಂದರೂ ಕಾಡುತ್ತದೆ. ಮಳೆಗಾಲದಲ್ಲೇ ತಿನ್ನಬೇಕೆಂದು ಅನಿಸುವ ಈ ತಿಂಡಿಗಳು ಮುಂಗಾರನ್ನು ಹಿತವಾಗಿಸುತ್ತವೆ. ನಗರವಾಸಿಗಳಿಗೂ ಮಳೆಗಾಲದಲ್ಲಿ ಆಪ್ತವೆನಿಸುವ ಈ ತಿನಿಸುಗಳನ್ನು ತಿನ್ನುವಾಗ ಅವರು ತಮ್ಮೂರಿನ ಸವಿನೆನಪುಗಳ ಮೆರವಣಿಗೆಯಲ್ಲಿ ಕಳೆದು ಹೋಗುತ್ತಾರೆ…
ಪ್ರಕೃತಿ ಮತ್ತು ಆಹಾರದ ಬೆಸುಗೆ ಎಂದೂ ಬಿಡಿಸಲಾಗದು. ಪ್ರಕೃತಿ ಬದಲಾದಂತೆ ಆಹಾರವೂ ಬದಲಾಗುತ್ತದೆ ಮತ್ತು ಬದಲಾಗಲೇಬೇಕು. ಯಾಕೆಂದರೆ ಆಯಾ ಋತುಮಾನಕ್ಕೆ ಇಂಥದ್ದೇ ಆಹಾರ ಸೇವಿಸಬೇಕು ಎಂಬುದು ನಿಸರ್ಗದ ನಿಯಮ. ಅದಕ್ಕೆ ತಕ್ಕಂತೆಯೇ ನಮ್ಮ ಆಹಾರ ಕ್ರಮಗಳು ರೂಪುಗೊಂಡಿವೆ. ಈ ಆಹಾರ ನಿಯಮ ಪಾಲಿಸದಿದ್ದರೆ ಆಯಾ ಸೀಸನ್‌ಗೆ ಸಿಗುವ ಕೆಲವು ಪ್ರಕೃತಿದತ್ತ ಆಹಾರಗಳ ಪೋಷಕಾಂಶಗಳಿಂದ ವಂಚಿತರಾಗುತ್ತೇವೆ ಮತ್ತು ಸುಲಭವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತೇವೆ.
ಮಾನ್ಸೂನ್ ರುಚಿಗಳು
ಬೇಸಿಗೆ ಸೀಸನ್‌ನ ಧಗೆ ಮುಗಿದು ಈಗಷ್ಟೇ ಮಳೆಗಾಲ ಆರಂಭವಾಗಿದೆ. ಆಗಲೇ ಇಳೆಯೆಲ್ಲ ತಂಪಾಗಿದೆ. ಈ ಸೀಸನ್‌ಗೆ ಬೇಸಿಗೆ ಕಾಲದ ಆಹಾರಗಳನ್ನೇ ಸೇವಿಸಲಾಗುವುದಿಲ್ಲ. ಮಳೆಗಾಲ ಶುರುವಾದಾಗಲೇ ನಮಗೆ ಅರಿವಿಲ್ಲದಂತೆಯೇ ನಮ್ಮ ನಾಲಗೆ ರುಚಿ ರುಚಿಯಾದ ತಿನಿಸುಗಳನ್ನು ಬಯಸುತ್ತದೆ. ಜಡಿಮಳೆ ಸುರಿದಾಗ ಮರೆತೇ ಹೋಗಿದ್ದ ಕೆಲವು ತಿಂಡಿ, ತಿನಿಸುಗಳು ನೆನಪಾಗುತ್ತವೆ. ಅವುಗಳನ್ನು ಮಳೆಗಾಲದಲ್ಲಿ ತಿಂದರೇನೇ ರುಚಿ ಜಾಸ್ತಿ. ಹಲಸಿನಕಾಯಿ ಚಿಪ್ಸ್, ಹಪ್ಪಳ, ಕಳಲೆ ಪಲ್ಯ, ಕೆಸುವಿನೆಲೆಯ ಪತ್ರೊಡೆ, ಹೊಳೆ ಮೀನಿನ ಸಾರು, ಮಳೆಗಾಲದಲ್ಲೇ ಚಿಗುರಿಕೊಳ್ಳುವ ತಗ್ಚೆ, ಒಂದೆಲಗ ಮುಂತಾದ ಸೊಪ್ಪುಗಳ ಪಲ್ಯ, ಚಟ್ನಿಗಳು ಮಳೆಗಾಲದಲ್ಲೇ ಅತ್ಯಂತ ಟೇಸ್ಟಿಯೆನಿಸುತ್ತವೆ. ಇವುಗಳನ್ನು ಬೇರೆ ಸೀಸನ್‌ಗಳಲ್ಲಿ ಸವಿದಿದ್ದರೂ ಮಳೆಗಾಲದಲ್ಲಿ ಸಿಗುವ ರುಚಿಯೇ ಬೇರೆ. ಈ ಸಮಯದಲ್ಲಿ ಅದೆಷ್ಟೇ ಬಜ್ಜಿ, ಬೋಂಡಾ ಕರಿದು ತಿಂದರೂ ಹಲಸಿನ ಹಣ್ಣಿನ ಬೀಜಗಳನ್ನು ಸುಟ್ಟು ತಿನ್ನುವುದರಲ್ಲಿ ಇರುವ ಸ್ವಾದ ಬೇರೆ ಯಾವುದರಲ್ಲೂ ಸಿಗಲ್ಲ. ಇದುವೇ ಮಳೆಗಾಲದತಿನಿಸುಗಳ ವಿಶೇಷ.
ಪ್ರಾದೇಶಿಕ ವೈವಿಧ್ಯ
ಮಳೆಗಾಲದ ತಿನಿಸುಗಳಲ್ಲೂ ಪ್ರಾದೇಶಿಕ ವೈವಿಧ್ಯವಿದೆ. ಆಯಾ ಪ್ರದೇಶದಲ್ಲಿ ಆ ಸೀಸನ್‌ಗೆ ಸಿಗುವ ಹಣ್ಣು, ತರಕಾರಿಗಳಿಂದ ಮಾಡುವ ಕೆಲವು ವಿಶೇಷ ತಿನಿಸುಗಳು ಅವುಗಳ ಪ್ರಾದೇಶಿಕ ವೈಶಿಷ್ಟ್ಯವನ್ನೂ ಸಾರುತ್ತವೆ. ಉದಾಹರಣೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆಗಾಲ ಬಂತೆಂದರೆ ಪ್ರತಿ ಮನೆಗಳಲ್ಲಿ ಕೆಸುವಿನೆಲೆಯ ಪತ್ರೊಡೆ, ಹಲಸಿನಹಣ್ಣಿ ಕಡುಬು, ಮುಳ್ಕ, ತಗ್ಚೆ ಪಲ್ಯ, ಅರಿಶಿನ ಎಲೆಯ ಕಡುಬು, ಹಲಸಿನ ಹಣ್ಣಿನ ಬೇಯಿಸಿ ಒಣಗಿಸಿದ ಬೀಜ, ಕಾಡು ಅಣಬೆಯ ಪಲ್ಯ, ಅಮಟೆಕಾಯಿ ಉಪ್ಪಿನಕಾಯಿ, ಹುರುಳಿಕಾಳಿನ ಸಾರು ಇತ್ಯಾದಿಗಳು ಘಮಗುಟ್ಟಿದರೆ, ಉತ್ತರ ಕನ್ನಡದ ಭಾಗಗಳಲ್ಲಿ ಹಲಸಿನ ಚಿಪ್ಸ್, ಹಪ್ಪಳ, ಅಪ್ಪಿ ಪಾಯಸ, ಝುಣಕ ವಡೆ ಕಂಪು ಬೀರುತ್ತವೆ. ಧಾರಾಕಾರ ಮಳೆಯ ಸಮಯದಲ್ಲಿ ಕೈತೋಟ, ಹೊಲ, ಕಾಡುಗಳಲ್ಲಿ ಯಾವುದೇ ಶ್ರಮವಿಲ್ಲದೆ ತಮ್ಮ ಪಾಡಿಗೇ ಬೆಳೆದ ಹಸಿರು ಸೊಪ್ಪು, ತರಕಾರಿ, ಹಣ್ಣುಗಳೇ ಜನರಿಗೆ ಆಧಾರವಾಗುತ್ತವೆ. ಬಿಡದೇ ಸುರಿಯುವ ಮಳೆಗೆ ಹೊರಗಡೆ ಹೋಗಿ ತರಕಾರಿ, ಹಣ್ಣುಗಳನ್ನು ತರುವುದು ಕಷ್ಟವಾಗುವ ಕಾರಣ ಒಂದು ರೀತಿಯಲ್ಲಿ ಪ್ರಕೃತಿಯೇ ಜನರಿಗೆ ದಯಪಾಲಿಸಿರುವ ಆಹಾರಗಳಿವು.
ಮಳೆಗಾಲದಲ್ಲಿ ತಿನ್ನಲೇಬೇಕಾದ ಅಂಥ ಕೆಲವು ರುಚಿ ವೈವಿಧ್ಯವನ್ನು ಮಾಡುವ ವಿಧಾನ ಇಲ್ಲಿದೆ.
ಹಲಸಿನ ಹಣ್ಣಿನ ಕಡುಬು
ಬೇಕಾಗುವ ಸಾಮಗ್ರಿ
ಚೆನ್ನಾಗಿ ಮಾಗಿರುವ ಹಲಸಿನ ಹಣ್ಣಿನ ತೊಳೆಗಳು-ಎರಡೂವರೆ ಕಪ್, ಬೆಲ್ಲ-ಅರ್ಧ ಕಪ್, ಏಲಕ್ಕಿ ಪುಡಿ-ಅರ್ಧ ಚಮಚ, ತೆಂಗಿನಕಾಯಿ ತುರಿ-೧ ಕಪ್, ಅಕ್ಕಿ-೨ ಕಪ್, ಉಪ್ಪು-ರುಚಿಗೆ ತಕ್ಕಷ್ಟು, ಕಾಳುಮೆಣಸು-ಅರ್ಧ ಚಮಚ, ತೇಗದ ಎಲೆ ಅಥವಾ ಬಾಳೆ ಎಲೆ-೨೦.
ಮಾಡುವ ವಿಧಾನ
ಅಕ್ಕಿಯನ್ನು ತೊಳೆದು ನೀರಿನಲ್ಲಿ ಆರು ಗಂಟೆ ನೆನೆಸಿಡಿ. ತೇಗದ ಎಲೆಗಳನ್ನು ಸ್ವಚ್ಛ ಮಾಡಿ ಒರೆಸಿ ಒಣಗಿಸಿ. ಹಲಸಿನ ಹಣ್ಣಿನ ತೊಳೆಗಳ ಬೀಜಗಳನ್ನು ತೆಗೆದು ಸಣ್ಣದಾಗಿ ಕತ್ತರಿಸಿ ಮಿಕ್ಸಿ ಜಾರ್‌ಗೆ ಹಾಕಿ. ಇದಕ್ಕೆ ಬೆಲ್ಲ, ಏಲಕ್ಕಿ ಪುಡಿ ಹಾಕಿ ನುಣ್ಣಗೆ ಅರೆಯಿರಿ. ನಂತರ ತೆಂಗಿನಕಾಯಿ ತುರಿ ಮತ್ತು ಹಲಸಿನ ಹಣ್ಣಿನ ತೊಳೆಗಳನ್ನು ಹಾಕಿ ಮತ್ತೆ ನುಣ್ಣಗೆ ಅರೆಯಿರಿ. ಈ ಹಂತಗಳಲ್ಲಿ ಸ್ವಲ್ಪವೂ ನೀರು ಹಾಕಬಾರದು. ಈ ಮಿಶ್ರಣಕ್ಕೆ ಸ್ವಲ್ಪ ಉಪ್ಪು, ಕಾಳುಮೆಣಸು ಮತ್ತು ಒಂದು ಚಿಟಿಕೆ ಅರಶಿನ ಹಾಕಿ. ಈ ಒಂದೊಂದು ತೇಗದ ಎಲೆಗೆ ಈ ಮಿಶ್ರಣವನ್ನು ಒಂದೊಂದು ಸೌಟಿನಂತೆ ಹಾಕಿ ಎಲೆಯ ನಾಲ್ಕು ಅಂಚುಗಳನ್ನು ಮಡಚಿ ಇಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ ಅರ್ಧ ಗಂಟೆ ಬೇಯಿಸಿ. ನಂತರ ಇದರ ಎಲೆಗಳನ್ನು ಬಿಡಿಸಿ ಬಿಸಿ ಬಿಸಿ ಕಡುಬನ್ನು ತುಪ್ಪದ ಜೊತೆಗೆ ತಿನ್ನಿ.
ಕೆಸುವಿನೆಲೆಯ ತೇಟ್ಲ
ಬೇಕಾಗುವ ಸಾಮಗ್ರಿ
ಮಧ್ಯಮ ಗಾತ್ರದ ಕೆಸುವಿನ ಎಲೆ-೨೦, ಉಪ್ಪು-ರುಚಿಗೆ ತಕ್ಕಷ್ಟು, ಮಸಾಲೆಗೆ ಬ್ಯಾಡಗಿ ಮೆಣಸು-೬, ಅರಶಿನ ಪುಡಿ-ಅರ್ಧ ಟೀ ಸ್ಪೂನ್, ಜೀರಿಗೆ-ಅರ್ಧ ಟೀ ಸ್ಪೂನ್, ಬೆಳ್ಳುಳ್ಳಿ-೩ ಎಸಳು, ಮಧ್ಯಮ ಗಾತ್ರದ ಈರುಳ್ಳಿ-೧, ಹುಣಸೆ ಹಣ್ಣು-೧ ನಿಂಬೆ ಗಾತ್ರದ್ದು, ಒಗ್ಗರಣೆಗೆ ಸಾಸಿವೆ-ಕಾಲು ಟೀ ಸ್ಪೂನ್, ಜಜ್ಜಿದ ಬೆಳ್ಳುಳ್ಳಿ-೩, ಎಣ್ಣೆ-ಸ್ವಲ್ಪ.
ಮಾಡುವ ವಿಧಾನ
ಹಿಂದಿನ ದಿನ ಕೆಸುವಿನ ಎಲೆಗಳನ್ನು ಚೆನ್ನಾಗಿ ತೊಳೆದು ಒರೆಸಿ ಒಣಗಿಸಿ. ಮರುದಿನ ಪ್ರತಿ ಎಲೆಯನ್ನು ಉದ್ದಕ್ಕೆ ಸುರುಳಿ ಸುತ್ತಿ ಕೊನೆಗೆ ಒಂದು ಗಂಟು ಹಾಕಿ. ಮಸಾಲೆ ಸಾಮಗ್ರಿಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ಅರೆಯಿರಿ. ಮಸಾಲೆಯ ನೀರಿನಲ್ಲಿ ಕೆಸುವಿನ ಎಲೆಯ ಗಂಟುಗಳನ್ನು ಐದು ನಿಮಿಷ ಬೇಯಿಸಿ ಆಮೇಲೆ ಅರೆದ ಮಸಾಲೆ ಮತ್ತು ಉಪ್ಪು ಹಾಕಿ ಮಂದ ಉರಿಯಲ್ಲಿ ಹತ್ತು ನಿಮಿಷ ಕುದಿಸಿ. ನಂತರ ಇದಕ್ಕೆ ಸಾಸಿವೆ ಮತ್ತು ಬೆಳ್ಳುಳ್ಳಿ ಒಗ್ಗರಣೆ ಕೊಡಿ. ಇದಕ್ಕೆ ಹಲಸಿನ ಬೀಜ ಹಾಕಿ ಮಾಡಿದರೆ ಇನ್ನೂ ರುಚಿಯಾಗಿರುತ್ತದೆ.
ತಗ್ಚೆ ಸೊಪ್ಪಿನ ಪಲ್ಯ
ಬೇಕಾಗುವ ಸಾಮಗ್ರಿ
ತಗ್ಚೆ ಸೊಪ್ಪು-೧ ಬಟ್ಟಲು, ಬ್ಯಾಡಗಿ ಮೆಣಸು-೫, ಜೀರಿಗೆ-ಅರ್ಧ ಚಮಚ, ಕೊತ್ತಂಬರಿ ಬೀಜ-೧ ಚಮಚ, ಮೆಂತ್ಯೆ ಕಾಳು-ಅರ್ಧ ಚಮಚ, ಅರಶಿನ ಪುಡಿ-ಅರ್ಧ ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ತೆಂಗಿನಕಾಯಿ ತುರಿ-ಅರ್ಧ ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ-೧ ಕಪ್, ಜಜ್ಜಿದ ಬೆಳ್ಳುಳ್ಳಿ-೩, ಸಾಸಿವೆ-ಅರ್ಧ ಚಮಚ, ಕರಿಬೇವಿನ ಎಲೆ-ಸ್ವಲ್ಪ, ಎಣ್ಣೆ-ಸ್ವಲ್ಪ.
ಮಾಡುವ ವಿಧಾನ
ತಗ್ಚೆ ಸೊಪ್ಪನ್ನು ಚೆನ್ನಾಗಿ ತೊಳೆದು ಹೆಚ್ಚಿಡಿ. ಮಸಾಲೆ ಸಾಮಗ್ರಿಗಳನ್ನು ಸ್ವಲ್ಪ ಹುರಿದು ಮಿಕ್ಸಿ ಜಾರ್‌ನಲ್ಲಿ ಪುಡಿ ಮಾಡಿ. ಇದಕ್ಕೆ ಹುರಿದ ತೆಂಗಿನಕಾಯಿ ತುರಿ ಹಾಕಿ ತರಿತರಿಯಾಗಿ ರುಬ್ಬಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಕರಿಬೇವು ಮತ್ತು ಜಜ್ಜಿದ ಬೆಳ್ಳುಳ್ಳಿ ಹಾಕಿ ಸಿಡಿಸಿ. ಇದಕ್ಕೆ ಈರುಳ್ಳಿ ಹಾಕಿ ಹುರಿಯಿರಿ. ನಂತರ ತಗ್ಚೆ ಸೊಪ್ಪು ಹಾಕಿ ಚೆನ್ನಾಗಿ ಹುರಿದು ಬಾಡಿಸಿ. ಇದು ಬೆಂದ ಮೇಲೆ ಉಪ್ಪು ಮತ್ತು ಮಸಾಲೆ ಮಿಶ್ರಣ ಹಾಕಿ ಚೆನ್ನಾಗಿ ಮಿಶ್ರ ಮಾಡಿ ಬೇಯಿಸಿ.
ಮಳೆಗಾಲದ ತಿನಿಸು. ಹಳ್ಳಿಯಲ್ಲಿ ಇರುವವರಿಗೆ ಸವಿಯುವ ಸೌಭಾಗ್ಯ.
ಪಿಜ್ಜಾ. ಬರ್ಗರ್. ರೋಲ್ಸ್. ಬೇಕರಿ ತಿಂಡಿಗಳ ಪರಿಚಯ ಇರುವ ಜನರಿಗೆ ಇಂತಹ ದೇಸಿಯ ತಿನಿಸುಗಳ ಪರಿಚಯ ಮಾಡಿ ಕೊಟ್ಟದ್ದಕ್ಕೆ ಧನ್ಯವಾದಗಳು. ಅದು ಮಾಡುವ ವಿಧಾನ ದೊಂದಿಗೆ ಬಾಯಲ್ಲಿ ನೀರೂರಿಸುತ್ತೆ. ತಿನ್ಬೇಕು ಅನಿಸುತ್ತೆ. ಮತ್ತೆ ನಮ್ಮ ಉತ್ತರ ಕರ್ನಾಟಕ ದ ಅಡುಗೆಯ ಸವಿಯು ಬರಲಿ ಎಂದು ಎದುರು ನೋಡುತ್ತೇವೆ.
Thanks for the recepie….
ಮುಗಿಲೋಡಿನಿಂದ ಬಂದ ಅದೂ ಮಲೆನಾಡಿನಿಂದ ಬಂದ ಹೆಣ್ಣು ಮಗಳ ಎರಡು ಪದಗಳ ಉತ್ತರ ನೋಡಿ ಬೇಸರವಾಯಿತು. ಇದಕ್ಕೆ ಪಟ್ಟ ಶ್ರಮಕ್ಕೆ ನೀವು ಒಂದು ಪ್ರಬಂಧ ಬರೆದಿದ್ದರೆ ಚೆನ್ನಾಗಿರ್ತಿತ್ತು .
Recepie try maadi amele prabandha bareyuttene…
Nice sir