19.5 C
Karnataka
Thursday, November 21, 2024

    ಹೆಚ್ಚುತ್ತಿರುವ ಸೋಂಕು; ಮುನ್ನೆಚ್ಚರಿಕೆ ಇಲ್ಲದೆ ಅನ್‌ಲಾಕ್ ಮಾಡಿದ್ದೇ ಮುಳುವಾಯ್ತ

    Must read

    .ಅಶೋಕ ಹೆಗಡೆ
    ಕರ್ನಾಟಕದಲ್ಲಿ, ಅದರಲ್ಲಿಯೂ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವಿಪರೀತ ಏರುತ್ತಿದೆ. ಎರಡು ದಿನಗಳಿಂದ ಈಚೆಗೆ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಸಾವಿರದ ಆಸುಪಾಸಿನಲ್ಲಿದೆ. ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ ಅವರ ಈ ಕೆಳಗಿನ ಟ್ವೀಟ್ ಇದನ್ನು ದೃಢಪಡಿಸುತ್ತದೆ.

    ವೈದ್ಯಕೀಯ ಶಿಕ್ಷಣ ಸಚಿವರೇನೋ ಎಲ್ಲರಿಗೂ ಚಿಕಿತ್ಸೆ ನೀಡಲು ಸರಕಾರ ಸಜ್ಜಾಗಿದೆ ಎನ್ನುತ್ತಾರೆ. ಆದರೆ ಈ ಕೆಳಗಿನ ಘಟನೆಗಳು ಸರಕಾರದ ಸಿದ್ಧತೆಯನ್ನು ದೃಢೀಕರಿಸುವುದಿಲ್ಲ. ಅನ್ಲಾಕ್ ಆದ ನಂತರ ಸೋಂಕು ಜಾಸ್ತಿ ಆಗಬಹುದು ಎಂಬ ಅರಿವಿದ್ದರೂ ಬಿಬಿಎಂಪಿ ಅದನ್ನು ನಿಭಾಯಿಸಲು ಹೆಣಗಾಡುತ್ತಿರುವುದು ನಿತ್ಯವೂ ಸಾಬೀತಾಗುತ್ತಿದೆ. ಈಗಾಗಲೇ ವರದಿ ಆಗಿರುವ ಈ ಘಟನೆಗಳು ಬಿಬಿಎಂಪಿ ಕೈ ಚೆಲ್ಲಿ ಬಿಟ್ಟಿದೆಯೆ ಎಂಬ ಅನುಮಾನ ಮೂಡಿಸುವಂತೆ ಇದೆ.

    ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಾಯವಾಣಿಗೆ ಕರೆ ಮಾಡಿ ವಿಷಯ ತಲುಪಿಸಿದರು. ಬಿಬಿಎಂಪಿ ಅವರನ್ನು ಕರೆದೊಯ್ಯಲು ಬಂದಿದ್ದು ಎರಡು ದಿನಗಳ ಬಳಿಕ! ಆ ಎರಡು ದಿನದಲ್ಲೇ ಅವರು ನರಕ ನೋಡಿಬಿಟ್ಟರು. ಮನೆಯಮಂದಿ ಜತೆ ಮಾತನಾಡುವುದಿರಲಿ, ಮನೆಯಲ್ಲಿ ಇರುವ ಏಕೈಕ ಟಾಯ್ಲಟ್ ಬಳಸಲೂ ಭಯ.

    ಮತ್ತೊಂದು ಘಟನೆಯಲ್ಲಿ ಆರೋಗ್ಯ ವಿಭಾಗದ ಸಿಬ್ಬಂದಿ ಆ ವ್ಯಕ್ತಿಗೆ ಮುಂಜಾನೆ ಕರೆ ಮಾಡಿ, ‘ನಿಮಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ನಿಮ್ಮನ್ನು ಕರೆದೊಯ್ಯಲು ಆಂಬುಲೆನ್ಸ್ ಬರುತ್ತದೆ. ಸರಿಯಾಗಿ ಬೆಳಗ್ಗೆ 10 ಗಂಟೆಗೆ ಎರಡು ಜತೆ ಬಟ್ಟೆ ಜತೆ ಇಂತಹ ಸ್ಥಳಕ್ಕೆ ಬನ್ನಿ,” ಎಂದು ಹೇಳಿದರು. ಲಗೇಜ್ ಸಮೇತ ಅವರು 9.50ಕ್ಕೆ ನಿಗದಿತ ಸ್ಥಳದಲ್ಲಿ ಹಾಜರಿದ್ದರು. ಆದರೆ ಆಂಬುಲೆನ್ಸ್ ಬಂದಿದ್ದು ರಾತ್ರಿ 11 ಗಂಟೆಗೆ! ಮನೆಗೆ ಹೋಗುವಂತಿಲ್ಲ, ಹೋಟೆಲ್-ಬೇಕರಿಗೆ ಹೋಗಿ ಊಟ-ತಿಂಡಿ ಮಾಡುವಂತಿಲ್ಲ. ಅದು ಹೋಗಲಿ, ರಸ್ತೆ ಪಕ್ಕ ಕೂರಲೂ ಭಯ- ತಮ್ಮಿಂದಾಗಿ ಬೇರೆಯವರಿಗೆ ಸೋಂಕು ಅಂಟಿಕೊಂಡರೆ ಎಂಬ ಆತಂಕ!

    ಇನ್ನೊಂದು ಘಟನೆಯಲ್ಲಿ ಬಿಬಿಎಂಪಿ ಹೇಳಿದ ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳದಲ್ಲಿ ಆಂಬುಲೆನ್ಸ್ ಬಂತು. ಇವರೂ ಹತ್ತಿ ಕುಳಿತರು. ಆದರೆ ಇವರನ್ನು ಯಾವ ಆಸ್ಪತ್ರೆಗೆ ಕರೆದೊಯ್ಯಬೇಕು ಎನ್ನುವುದೇ ಆಂಬುಲೆನ್ಸ್ ಚಾಲಕನಿಗೆ ಗೊತ್ತಿರಲಿಲ್ಲ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿಸಿ ಕೊನೆಗೆ ಎಲ್ಲೋ ಒಂದು ಕಡೆ ಹಾಸಿಗೆ ವ್ಯವಸ್ಥೆ ಮಾಡುವಷ್ಟರಲ್ಲಿ ಇವರ ಸ್ಥಿತಿ ಗಂಭೀರವಾಗಿ ನೇರವಾಗಿ ಐಸಿಯುಗೆ ದಾಖಲಿಸಬೇಕಾಗಿ ಬಂತು!

    ಬೆಂಗಳೂರಿನ ಅವ್ಯವಸ್ಥೆಯನ್ನು ಸಾದರಪಡಿಸುವ ಘಟನೆಗಳಿವು. ಇಡೀ ದೇಶದಲ್ಲಿ ಲಾಕ್‌ಡೌನ್ ಇದ್ದಾಗ ಬೆಂಗಳೂರು ಸೇರಿದಂತೆ ಎಲ್ಲೆಡೆ ಸೋಂಕು ನಿಯಂತ್ರಣದಲ್ಲಿತ್ತು. ಅನ್‌ಲಾಕ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಸ್ಫೋಟಗೊಂಡಿತು. ಸೂಕ್ತ ಮುನ್ನೆಚ್ಚರಿಕೆ ಇಲ್ಲದೆ ಅನ್‌ಲಾಕ್ ಪ್ರಕ್ರಿಯೆ ಜಾರಿಗೊಳಿಸಲು ಮುಂದಾದದ್ದೇ ಇದಕ್ಕೆ ಕಾರಣ. ಈಗ ಹೇಗಾಗಿದೆ ಎಂದರೆ ಯಾರು ಎಲ್ಲಿ ಏಕೆ ಸಂಚಾರ ಮಾಡುತ್ತಿದ್ದಾರೆ ಎನ್ನುವುದೇ ತಿಳಿಯುತ್ತಿಲ್ಲ.

    ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ

    ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಪತ್ತೆಯೂ ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆಯಿಂದ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವುದು ಸೋಂಕು ದೃಢಪಟ್ಟ ಬಳಿಕ ಕನಿಷ್ಠ ಎರಡು ದಿನ ತಡವಾಗುತ್ತಿದೆ. ಇದರಿಂದ ಏನಿಲ್ಲವೆಂದರೂ ಒಬ್ಬ ವ್ಯಕ್ತಿಯಿಂದ ಕಡೇಪಕ್ಷ ಹತ್ತು ಮಂದಿಗಾದರೂ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸೋಂಕು ಅಂಟಿರುತ್ತದೆ. ಸ್ವತಃ ಸೋಂಕಿತನ ಸ್ಥಿತಿಯೂ ಆಸ್ಪತ್ರೆ ಸೇರುವಷ್ಟರಲ್ಲಿ ಗಂಭೀರವಾಗಿರುತ್ತದೆ. ಮರಣ ಪ್ರಮಾಣ ಹೆಚ್ಚಲು ಇದೂ ಕಾರಣ.
    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎರಡು ವಾರ ಹಿಂದೆಯೇ ಭಾನುವಾರದ ಲಾಕ್‌ಡೌನ್ ಪ್ರಸ್ತಾಪ ಮಾಡಿದ್ದರು. ಹಿರಿಯ ಸಚಿವರ ವಿರೋಧದಿಂದ ಅದನ್ನು ಕೈ ಬಿಟ್ಟು, ಈಗ ಪರಿಸ್ಥಿತಿ ಉಲ್ಬಣಿಸಿದ ಬಳಿಕ ಮತ್ತೆ ಮುಂದಿನ ವಾರದಿಂದ ಭಾನುವಾರದ ಲಾಕ್‌ಡೌನ್ ಜಾರಿಗೆ ಮುಂದಾಗಿದ್ದಾರೆ.

    ರಾತ್ರಿ10ರಿಂದ ಬೆಳಗ್ಗೆ 5ರವರೆಗೆ ಸಂಚಾರ ನಿರ್ಬಂಧ ಜಾರಿಯಲ್ಲಿದ್ದರೂ ಕಟ್ಟುನಿಟ್ಟಾಗಿ ಜಾರಿಯಾಗಿಯೇ ಇಲ್ಲ. ಯಾವ್ಯಾವ ಪ್ರದೇಶಗಳಿಂದ ಸೋಂಕು ಹರಡುತ್ತಿದೆ ಎಂಬುದು ಗೊತ್ತಿದ್ದರೂ ‘ಭಯ’ದಿಂದ ಅಧಿಕಾರಿಗಳು ಅಂತಹ ಪ್ರದೇಶಗಳತ್ತ ಸುಳಿಯುತ್ತಲೇ ಇಲ್ಲ. ಕೆಲವರಿಗೆ ಬಾಯಿಮಾತಿನಲ್ಲಿ ಹೇಳಿದವರಿಗೆ ಅರ್ಥವಾಗುವುದಿಲ್ಲ, ದಂಡ ಪ್ರಯೋಗ ಅನಿವಾರ್ಯ. ಪೊಲೀಸ್ ಬಲದೊಂದಿಗೆ ಅಂತಹ ಪ್ರದೇಶಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ ಜಾರಿಗೆ ಪ್ರಯತ್ನ ಮಾಡಿದ್ದರೆ ಪರಿಸ್ಥಿತಿ ಸ್ವಲ್ಪವಾದರೂ ಹಿಡಿತದಲ್ಲಿರುತ್ತಿತ್ತು.

    ಇನ್ನು ಹಾಸಿಗೆ ವಿಚಾರಕ್ಕೆ ಬರೋಣ. ನಾರಾಯಣ ಹೃದಯಾಲಯದ ಡಾ.ದೇವಿಶೆಟ್ಟಿ ಅವರು ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಬಹುದೆಂದು ಆರಂಭದಲ್ಲಿಯೇ ಎಚ್ಚರಿಕೆ ನೀಡಿದ್ದರು. ತಪಾಸಣೆಗೆ ವೇಗ ನೀಡುತ್ತಿದ್ದಂತೆಯೇ ಹೆಚ್ಚಿನ ಹಾಸಿಗೆ, ವೈದ್ಯ ಸಿಬ್ಬಂದಿಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಿತ್ತು. ಅದನ್ನೂ ಮಾಡಲಿಲ್ಲ. ಸಾವಿರಾರು ಹಾಸಿಗೆ ಸಾಮರ್ಥ್ಯದ ಕೋಚ್‌ಗಳು ರೆಡಿ ಇವೆ, ಅವುಗಳನ್ನು ಒದಗಿಸಲು ರಾಜ್ಯ ಸರಕಾರದಿಂದ ಮನವಿ ಬಂದಿಲ್ಲ ಎಂದು ರೈಲ್ವೆ ಇಲಾಖೆ ಹಲವು ಸಲ ಮಾಧ್ಯಮಗಳ ಮೂಲಕ ಬಹಿರಂಗ ಹೇಳಿಕೆ ನೀಡಿದರೂ ಅದನ್ನು ಬಳಸಿಕೊಳ್ಳುವ ಗೋಜಿಗೇ ಸರಕಾರ ಹೋಗಲಿಲ್ಲ.

    ಈಗ ರೈಲ್ವೆ ಕೋಚ್, ಸಮುದಾಯ ಭವನ, ಕ್ರೀಡಾಂಗಣ, ಹಾಸ್ಟೆಲ್‌ಗಳ ಪಟ್ಟಿ ಮಾಡುತ್ತಿದ್ದಾರೆ. ಹಾಸ್ಟೆಲ್‌ಗಳಲ್ಲಿ ಇರುವವರನ್ನೂ ಏಕಾಏಕಿ ತೆರವುಗೊಳಿಸಲಾಗುತ್ತಿದೆ. ಇದನ್ನೆಲ್ಲ ನೋಡಿದರೆ ರಾಜ್ಯ ಸರಕಾರ, ಬಿಬಿಎಂಪಿಗಳೇ ನಗರದ ಜನರ ಪ್ರಾಣದ ಜತೆ ಚೆಲ್ಲಾಟವಾಡುತ್ತಿವೆ ಎಂಬ ಭಾವನೆ ಮೂಡಿದರೆ ತಪ್ಪಲ್ಲ.

    ಹಳ್ಳಿಗಳಲ್ಲೂ ಮಹಾಸ್ಫೋಟ?
    ಬೆಂಗಳೂರು ಹೊರತುಪಡಿಸಿದರೆ ಉಳಿದ ಜಿಲ್ಲೆಗಳು ಹಾಗೂ ಗ್ರಾಮೀಣ ಪ್ರದೇಶಗಳೇ ಎಷ್ಟೋ ವಾಸಿ. ವಲಸಿಗರ ಸಮಸ್ಯೆ ಇದ್ದರೂ ಜಿಲ್ಲಾಡಳಿತಗಳು ಸಮರ್ಥವಾಗಿ ನಿಭಾಯಿಸುತ್ತಿವೆ. ಹಳ್ಳಿಗಳಲ್ಲಿ ಜನರೇ ಸ್ವಯಂ ದಿಗ್ಬಂಧನ ವಿಧಿಸಿಕೊಳ್ಳುತ್ತಿದ್ದಾರೆ. ಊರಿಗೆ ಯಾರೊಬ್ಬರೂ ಹೊರಗಿನಿಂದ, ಸ್ವತಃ ಮಹಾನಗರಗಳಲ್ಲಿ ಇರುವ ತಮ್ಮೂರಿನ ಜನ ಕೂಡ ಕಾಲಿಡದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಉತ್ತರ ಕನ್ನಡದಂತಹ ಜಿಲ್ಲೆಗಳಲ್ಲಿ ಬೆಂಗಳೂರಿನಿಂದ ಬರುವ ಬಸ್‌ಗಳು ನೇರವಾಗಿ ತಾಲೂಕು ಆಸ್ಪತ್ರೆಗೆ ತೆರಳಿ, ಪ್ರತಿಯೊಬ್ಬರ ಥರ್ಮಲ್ ತಪಾಸಣೆ ಕಡ್ಡಾಯ ಎಂಬ ನಿಯಮ ರೂಪಿಸಿಕೊಂಡಿವೆ. ವಿಶೇಷವಾಗಿ ಗ್ರಾಮ ಪಂಚಾಯಿತಿಗಳು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ.

    ಕಾಯಂ ನಿವಾಸಿ ಅಲ್ಲದ ಯಾರೇ ಊರಿಗೆ ಯಾರಾದರೂ ತಕ್ಷಣದಲ್ಲಿ ಆಶಾ ಕಾರ್ಯಕರ್ತೆಯರಿಗೆ, ಪಂಚಾಯಿತಿಯವರಿಗೆ ಮಾಹಿತಿ ರವಾನೆಯಾಗುವ ವ್ಯವಸ್ಥೆ ಇದೆ. ಗ್ರಾಮ ಪಂಚಾಯಿತಿ ಸದಸ್ಯರು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರಕಾರ ಅಲ್ಲಿಯೂ ಎಡವಟ್ಟು ಮಾಡಿಕೊಳ್ಳುತ್ತಿದೆ. ಗ್ರಾಮ ಪಂಚಾಯಿತಿಗಳ ಅವಧಿ ಮುಗಿದಿದೆ ಎಂಬ ನೆಪ ಹೇಳಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದೆ.

    ಸುಗ್ರೀವಾಜ್ಞೆ ಮೂಲಕ ಆರು ತಿಂಗಳು ಪಂಚಾಯಿತಿ ಅವಧಿ ವಿಸ್ತರಿಸಿದ್ದರೆ ಯಾವ ಸಮಸ್ಯೆಯೂ ಇರುತ್ತಿರಲಿಲ್ಲ. ಈಗ ಆಡಳಿತಾಧಿಕಾರಿಗಳ ಸುಪರ್ದಿಗೆ ಒಪ್ಪಿಸಿ ಮತ್ತೊಂದು ಮಹಾಸ್ಫೋಟಕ್ಕೆ ಮುನ್ನಡಿ ಬರೆದಂತಿದೆ ಸರಕಾರದ ನಡೆ.

    spot_img

    More articles

    2 COMMENTS

    1. ಲೇಖಕರು ಹೇಳಿದೆಲ್ಲವೂ ನಿಜ. ಆದರೆ ಇದರಲಿ ನಮ್ಮಗಳ ಪಾತ್ರವೂ ಇದೆ. ಅವರು ಕೆಲವು ಕಾರಣಗಳಿಗೆ ಅನ್ ಲಾಕ್ ಮಾಡಿದರೆ ಈ ಜನ ಬೇಕಾದ ಹಾಗೆ ತಿರುಗಾಟ ಮಾಡಿದರು. ಎಲ್ಲವನೂ Govt ಮಾಡಲಾಗಲ್ಲ . ನಾವುಗಳು ಕೂಡ ಮಾಡಬೇಕು. ಈ ಲೇಖನ ಓದಿದ ಮೇಲಾದರೂ ನಾವು ಹುಷಾರಾಗಿ ಇರೋಣ. ಆಡಳಿತ ಮಾಡೋರಿಗೆ ಅನುಕೂಲ ಒದಗಿಸಲು ಕೇಳೋಣ ಲೇಖಕರು ಈಗಿನ ವಾಸ್ತವ ಚಿತ್ರಣ ನೀಡಿದಾರೆ. ತಿಳಿದು ಕೊಳೋದು ನಮ್ಮದು.

    2. ಲೇಖನ ನಿಜವಾದ ಇಂದಿನ ಪರಿಸ್ಥಿತಿ ಯನ್ನು ಪರಿಣಾಮಕಾರಿಯಾಗಿ ಬಿಂಬಿಸಿದೆ. ಆದರೆ ಇದರಲ್ಲಿ ಸಾಮಾನ್ಯ ಜನರ ಪಾತ್ರವು ಸಹಕಾರಿ ಯಾಗಿರಬೇಕು. ಎಲ್ಲಿಯವರೆಗು ಜನರು ತಮ್ಮ ಜವಾಬ್ದಾರಿಯನ್ನು ಅರಿಯುವುದಿಲ್ಲವೋ ,ಅಲ್ಲಿಯವರೆಗು ಪರಿಸ್ಥಿತಿ ಸುಧಾರಿಸುವುದಿಲ್ಲ. ಬರಿ ವ್ಯವಸ್ಥೆ ಯಲ್ಲಿ ಹುಳುಕು ತೋರಿಸುವುದರಿಂದ ಪ್ರಯೋಜನವಿಲ್ಲ .

    LEAVE A REPLY

    Please enter your comment!
    Please enter your name here

    Latest article

    error: Content is protected !!