ವಿ.ಜಯರಾಮ್
ಬೆಂಗಳೂರಿಗೆ ಗರ ಬಡಿದಿದೆ. ಸದಾ ಗಿಜಿಗುಡುವ ರಸ್ತೆಗಳು ಈಗ ಬಣಬಣ. ಮಾಲು, ಮಂದಿರ ಮುಚ್ಚಿವೆ. ಶಾಲಾ ಕಾಲೇಜುಗಳಿಗೆ ಬಿದ್ದ ಬೀಗ ತೆರೆದಿಲ್ಲ. ವಿಧಾನಸೌಧ, ಹೈಕೋರ್ಟಿನಂತಹ ಶಕ್ತಿ ಕೇಂದ್ರಗಳೇ ಜನವಿಲ್ಲದೆ ಕಳೆಗುಂದಿ ಹೋಗಿವೆ. ಅಣುಬಾಂಬಿಗೂ ಹೆದರದ ಈ ಮಹಾನಗರದ ಬದುಕು ಅಣುವಿಗಿಂತಲೂ ಕಡೆ ಎನಿಸಿದ, ಕಣ್ಣಿಗೆ ಕಾಣಸಿಗದ ಯಕಃಶ್ಚಿತ್ ಒಂದು ಕ್ಷುದ್ರ ಕ್ರಿಮಿಗೆ ಬೆದರಿ ಬೆಚ್ಚಿ ಕುಳಿತಿದೆ. ಎಲ್ಲವೂ ಖಾಲಿ ಖಾಲಿ. ಕಚೇರಿಗಳಲ್ಲಿ ಸಿಬ್ಬಂದಿ ಇಲ್ಲ. ರಸ್ತೆಗಳಲ್ಲಿ ವಾಹನವಿಲ್ಲ. ಮಾರುಕಟ್ಟೆಗಳಲ್ಲಿ ಜನವಿಲ್ಲ. ಮೂರು ತಿಂಗಳಿಂದ ಮರೆಯಾದ ಲವಲವಿಕೆ ಮರಳುವುದು ಯಾವಾಗ ಗೊತ್ತಿಲ್ಲ.
ಕೋವಿಡ್ ಎಂಬ ಒಂದು ಕ್ರಿಮಿಯ ರೂಪದಲ್ಲಿ ಬಂದೆರಗಿದ ಬವಣೆಗೆ ಬದುಕು ಎಷ್ಟೆಲ್ಲ ಬದಲಾಗಿದೆ?!
ತಾನು ಅತಿ ಬಲಿಷ್ಠ ಎಂದು ಬೀಗುತ್ತಿದ್ದ ಸರಕಾರವೂ ಹೆಚ್ಚುತ್ತಿರುವ ಪ್ರಕರಣಗಳಿಂದ ತಬ್ಬಿಬ್ಬಾಗಿದೆ. ನಿಜಕ್ಕೂ ಸರಕಾರದ ಕೈಯಿಂದಲೂ ನಿಯಂತ್ರಿಸಲಾಗದ ಸಾಂಕ್ರಾಮಿಕವೇ ಇದು? ಖಂಡಿತ ಇಲ್ಲ. ಖಚಿತ ನಿರ್ಧಾರಗಳೊಂದಿಗೆ ಹೊರಟರೆ ಈ ಕ್ರಿಮಿಯ ಅಟ್ಟಹಾಸ ಕಟ್ಟಿಹಾಕುವುದು ಕಷ್ಟವೇನಲ್ಲ.
ಇಲ್ಲಿ ಬೆಂಗಳೂರಿನ ಪರಿಸ್ಥಿತಿಯನ್ನೇ ನೋಡಿ ಏನಾಗಿದೆ?
ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ನಿತ್ಯ 1000 ಹೊಸ ಪ್ರಕರಣ ಪತ್ತೆಯಾಗುತ್ತಿವೆ. ಮುಂಬಯಿ ನಗರದ ಛಿದ್ರಗೊಂಡ ಬದುಕಿನ ಕರಾಳ ಚಿತ್ರ ಕಣ್ಣು ಕಟ್ಟುತ್ತಿದೆ. ಯಾಕೆ ಹೀಗಾಗಿದೆ?
ಈ ಪ್ರಶ್ನೆಯನ್ನು ಕನ್ನಡಪ್ರೆಸ್.ಕಾಂ ಕೆಲವು ದಕ್ಷ ಅಧಿಕಾರಿಗಳ ಮುಂದೆ ಇಟ್ಟಾಗ “ಹೌದು, ಈ ವೈಫಲ್ಯದಲ್ಲಿ ನಮ್ಮ ಅಧಿಕಾರಿ ವರ್ಗದ ಪಾತ್ರ ಢಾಳಾಗಿದೆ” ಎಂದು ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ.ಸರಕಾರದ ಮಟ್ಟದಲ್ಲಿ ತೆಗೆದುಕೊಳ್ಳುವ ಕಠಿಣ ನಿರ್ಧಾರಗಳು ಜಾರಿಗೆ ಬರುವ ಸಮಯದಲ್ಲಿ ಕಠಿಣತೆಯನ್ನು ಕಳೆದುಕೊಳ್ಳುತ್ತಿವೆ.
1. ಬೆಂಗಳೂರಿನಲ್ಲಿ ಸೋಂಕು ಅಟ್ಟಹಾಸ ಮೇರೆ ಮೀರಲು ಗ್ರೌಂಡ್ ಲೆವೆಲ್ ನಲ್ಲಿ ಕೆಲಸ ಮಾಡುವ ಅಧಿಕಾರಿಗಳ ಲೋಪ ಮಖ್ಯವಾಗುತ್ತಿದೆ. ಕೆಳವರ್ಗದ ದಕ್ಷತೆ ತೀರಾ ಕಳಪೆಯಾಗಿದೆ. ಇದಕ್ಕೆ ಪಕ್ಕದ ಕೇರಳ ಅಪವಾದ. ಅಲ್ಲಿ ಕೆಳ ವರ್ಗದ ಅಧಿಕಾರಿಗಳ ದಕ್ಷತೆ ಸಮರ್ಥವಾಗಿದೆ. ಆ ಕಾರಣ ಸೋಂಕು ಹೆಚ್ಚು ಆರ್ಭಟಿಸುತ್ತಿಲ್ಲ.ನಮ್ಮ ರಾಜ್ಯದ ಕೆಲವು ಜಿಲ್ಲೆಗಳಲ್ಲೂ ಸೋಂಕು ನಿಯಂತ್ರಣದಲ್ಲಿದೆ.
2 ಅಂತಾರಾಜ್ಯಗಳಿಂದ ನೇರ ಬೆಂಗಳೂರಿಗೆ ಬರುವ ಜನರ ತಪಾಸಣೆ ವ್ಯವಸ್ಥೆ ತೀರ ಹದಗೆಟ್ಟು ಹೋಗಿದೆ. ಇವರು ಯಾವ ಅಡೆ ತಡೆಯೂ ಇಲ್ಲದೆ ನಗರದ ತಮ್ಮ ಗಮ್ಯ ಸೇರಿಕೊಳ್ಳಬಹುದಾಗಿದೆ. ಇವರಲ್ಲಿ ಇರಬಹುದಾದ ಸೋಂಕಿತರು ಸಮುದಾಯ ಮಟ್ಟಕ್ಕೆ ಸಾಂಕ್ರಾಮಿಕವನ್ನು ಕೊಂಡೊಯ್ಯುತ್ತಿರುವುದು ವರದಿಯಾಗುತ್ತಿದೆ.
3.ಅತಿ ಸೋಂಕು ಬಾಧಿತ ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ನಿತ್ಯ ಲಕ್ಷಾಂತರ ಜನ ಬಂದು ಹೋಗುತ್ತಿದ್ದಾರೆ. ಇವರನ್ನು ಪರೀಕ್ಷೆಗೆ ಒಳಪಡಿಸುವ ಯಾವುದೇ ನಿಯಮ ಜಾರಿಯಲ್ಲಿಲ್ಲ.
4. ಕೆಲವು ನಿರ್ಬಂಧಗಳು ಇದ್ದರೂ ಅವುಗಳ ಜಾರಿ ಇಲ್ಲವಾಗಿದೆ. ಗಡಿಯಲ್ಲಿ ಸೋಂಕಿತರು ಕೂಡ ನಿರಾಯಾಸವಾಗಿ ನುಸುಳಿ ಬರುತ್ತಿದ್ದಾರೆ. ದುಡ್ಡು, ಗಡಿ ಕಾವಲು ಸಿಬ್ಬಂದಿಯ ಕೈಬಿಸಿ ಮಾಡುತ್ತಿದ್ದು ನಿಯಮಗಳು ಚಿಂದಿಯಾಗಲು ಕಾರಣವಾಗಿದೆ.
5. ನಾಗರಿಕ ಪ್ರಜ್ಞೆ ಕೊರತೆ ಕೂಡ ಬೆಂಗಳೂರಿನ ಸೋಂಕು ಉಲ್ಬಣಗೊಳ್ಳಲು ಪ್ರಧಾನ ಕಾರಣವಾಗಿದೆ. ಕೆಲಸವಿಲ್ಲದೇ ಅನಗತ್ಯ ಸುತ್ತಾಡುವುದು, ಮೋಜುಮಸ್ತಿ ಗೋಷ್ಠಿಗಳನ್ನು ಸೇರುವುದು, ಸೋಂಕು ಹಾಗೂ ಶುಚಿತ್ವದ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವುದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ.
ಸರಕಾರ ಲಾಕ್ ಡೌನ್ ಸಮಯದಲ್ಲಿದ್ದ ಕಠಿಣ ಕ್ರಮಗಳನ್ನು ಮತ್ತೆ ಅಳವಡಿಸಿದರೆ ಮಾತ್ರ ಸೋಂಕು ನಿಯಂತ್ರಣಕ್ಕೆ ಬರಬಹುದು.
ಬಹಳ ಮುಖ್ಯವಾದ ಪಂಚ ಕಾರಣಗಳು. ಕೊಟ್ಟಿದ್ದೀರಿ… ಮೊದಲನೇ ಪ್ಯಾರ ಕಾವ್ಯ ಮಾಯವಾಗಿದೆ.. 👍
ಮುಂದಿನ ದಿನಗಳಲಿ ಆದರೂ ಅಧಿಕಾರಿಗಳು ಜೊತೆಗೆ ಪ್ರಮುಖವಾಗಿ ನಾಗರೀಕರು ಜಾಗ್ರತೆಯಿಂದ ಇರಲಿ. ಲೇಖಕರಿಗೆ ವಂದನೆಗಳು