21.4 C
Karnataka
Thursday, November 21, 2024

    ಅರಿತು ಹೂಡಿಕೆ ಮಾಡಿರಿ- ಅನುಸರಿಸಬೇಡಿರಿ

    Must read

    ಇಂದಿನ ದಿನಗಳಲ್ಲಿ ಷೇರುಪೇಟೆಯ ಚಟುವಟಿಕೆ ಹೇಗಿದೆ ಎಂದರೆ ಯಾವುದೇ ವಿಧದಲ್ಲಿ ಸಮೀಕರಿಸಲು ಸಾಧ್ಯವಾಗದ ರೀತಿಯಲ್ಲಿರುತ್ತದೆ. ಇತ್ತೀಚಿನ ಮಾಧ್ಯಮ ವರದಿಯ ಪ್ರಕಾರ ಪ್ರಮುಖ ವಿಮಾ ಕಂಪನಿಗಳಾದ ಎಸ್ ಬಿ ಐ ಲೈಫ್ ಇನ್ಶುರೆನ್ಸ್ ಕಂಪನಿ ಮತ್ತು ಎಚ್ ಡಿ ಎಫ್ ಸಿ ಲೈಫ್ ಕಂಪೆನಿಗಳು ನ್ಯಾಶನಲ್‌ ಸ್ಟಾಕ್‌ ಎಕ್ಸ್ ಚೇಂಜ್‌ ನ ನಿಫ್ಟಿ ಯಲ್ಲಿ ಸೇರುವ ಸಾಧ್ಯತೆ ಕಂಡು ಬರುತ್ತಾ ಇದೆ. ಹೀಗೆಂದ ಮಾತ್ರಕ್ಕೆ ಈ ವಿಮಾ ಕಂಪನಿಗಳ ಷೇರುಗಳು ಹೆಚ್ಚಿನ ಅಭಿವೃದ್ದಿಯನ್ನು ಕಾಣುತ್ತವೆ ಎಂದು ನಿರ್ಧರಿಸುವುದು ಸರಿಯಲ್ಲ. ಇದನ್ನು ದೃಢೀಕರಿಸಲು ಈ ಕೆಳಗಿನ ಉದಾಹರಣೆಯತ್ತ ಕಣ್‌ ಹಾಯಿಸಿರಿ.

    2017 ರ ನವೆಂಬರ್‌ ನಲ್ಲಿ ಪ್ರತಿ ಷೇರಿಗೆ ರೂ.800 ರಂತೆ ಆರಂಭಿಕ ಷೇರು ವಿತರಣೆಯನ್ನು ಮಾಡಿದ ಸಾರ್ವಜನಿಕ ವಲಯದ ನ್ಯೂ ಇಂಡಿಯಾ ಅಶುರೆನ್ಸ್ ಕಂಪೆನಿ ಲಿಮಿಟೆಡ್ ಅ ವರ್ಷ ರೂ.8.75 ನ್ನು ಡಿವಿಡೆಂಡ್‌ ಆಗಿ ವಿತರಿಸಿತು. 2018 ರಲ್ಲಿ 1:1 ರ ಅನುಪಾತದ ಬೋನಸ್‌ ಷೇರನ್ನು ವಿತರಿಸಿ, ಹೂಡಿಕೆಯ ಮೊತ್ತವನ್ನು ರೂ.400 ಕ್ಕೆ ಇಳಿಸಿತು. ಹಿಂದಿನ ವರ್ಷ ಪ್ರತಿ ಷೇರಿಗೆ ರೂ.1.50 ಯಂತೆ ಡಿವಿಡೆಂಡ್‌ ವಿತರಿಸಿದೆ. ಆದರೆ ಮಾರ್ಚ್‌ ನಲ್ಲಿ ಪೇಟೆ ಕಂಡ ಭಾರಿ ಕುಸಿತದ ಕಾರಣ ಷೇರಿನ ಬೆಲೆ ರೂ.75 ಕ್ಕೆ ಜಾರಿ ಇಂದು ರೂ.116 ರ ಸಮೀಪವಿದೆ. ನಿನ್ನೆ ಕಂಪನಿಯು ತನ್ನ ವಾರ್ಷಿಕ ಫಲಿತಾಂಶ ಪ್ರಕಟಿಸಿತು. ಅದರಂತೆ ಕಂಪನಿಯ ಲಾಭ ಗಳಿಕೆ ಹೆಚ್ಚು ಕುಸಿತ ಕಂಡಿದ್ದು ವಾರ್ಷಿಕ ಲಾಭವು ಹಿಂದಿನ ವರ್ಷದ ರೂ.483.04 ಕೋಟಿಗೆ ಬದಲಾಗಿ ಈ ವರ್ಷ ರೂ.126.64ಕೋಟಿ ಗೆ ಇಳಿದಿದೆ. ಲಾಭ ಗಳಿಕೆ ಭಾರಿ ಇಳಿಕೆಯ ಕಾರಣ ಈ ವರ್ಷ ಡಿವಿಡೆಂಡನ್ನು ಘೋಷಿಸಿಲ್ಲ. ಅಂದರೆ IPO ನಲ್ಲಿ ಹೂಡಿದ ರೂ.400 ಹೇಗೆ ಕರಗಿ ರೂ.116 ರ ಸಮೀಪಕ್ಕೆ ಕರಗಿರುವುದರೊಂದಿಗೆ ಮೂರು ವರ್ಷದ ಹೂಡಿಕೆಯೂ ನಿರುಪಯುಕ್ತವಾಗಿದೆ.

    ಇದು ಕೇವಲ ಈ ಕಂಪನಿಯ ಕಥೆಯಲ್ಲ ಇಂತಹ ಅನೇಕ IPO ಗಳ ಪಟ್ಟಿಯೇ ಇದೆ. 2018 ರಲ್ಲಿ HAL ಕಂಪನಿಯ IPO ರೂ.1,215 ರಂತೆ ಮಾಡಿತಾದರೂ ಇದುವರೆಗೂ ವಿತರಣೆ ಬೆಲೆ ತಲುಪಲಾಗಿಲ್ಲ. ಇನ್ನು ಖಾಸಗಿ ವಲಯದ ಕಂಪನಿ ರಿಯಲ್‌ ಎಸ್ಟೇಟ್‌ ಕಂಪನಿಗಳಾದ ಶೋಭಾ ಡೆವಲಪರ್ಸ, ಡಿ ಬಿ ರಿಯಾಲ್ಟಿ, ಅಲ್ಲದೆ ಜೆಟ್‌ ಏರ್ವೇಸ್‌, ಮನ್ ಪಸಂದ್‌ ಬೆವರೇಜಸ್‌, ಪಿ ಎನ್‌ ಬಿ ಹೌಸಿಂಗ್ ಗಳಂತಹ ಕಂಪನಿಗಳು ಹೂಡಿಕೆದಾರರ ಸಂಪತ್ತನ್ನು ಕರಗಿಸಿವೆ.

    ಇನ್ನು 2010 ರಲ್ಲಿ ಕೋಲ್‌ ಇಂಡಿಯಾ ರೂ.245 ರಂತೆ IPO ಮೂಲಕ ಪೇಟೆ ಪ್ರವೇಶಿಸಿತು. ಆ ಸಮಯದಲ್ಲಿ ಷೇರಿನ ಬೆಲೆ ರೂ.440 ರವರೆಗೂ ಏರಿಕೆ ಕಂಡು ವಿಜೃಂಬಿಸಿತು. ಆನಂತರದಲ್ಲಿ ಷೇರಿನ ಬೆಲೆ ಕುಸಿಯುತ್ತಾ ಜಾರಿದೆ. ಒಂದು ಸಮಾಧಾನಕರ ಅಂಶವೆಂದರೆ ಈ ಕಂಪನಿಯು ಹಲವು ಭಾರಿ ಆಕರ್ಷಕ ಡಿವಿಡೆಂಡ್‌ ವಿತರಿಸಿದೆ.

    ಒಟ್ಟಾರೆ ಹಣ ಹೂಡಿಕೆಗೂ ಮುನ್ನ ಯಾವುದೇ ಪ್ರಚಾರಿಕ ಅಂಶಗಳಿಗೆ ಮಾರುಹೋಗದೆ ಯೋಗ್ಯತೆಯ ಮಾಪನಮಾಡಿ ನಿರ್ಧರಿಸಿದಲ್ಲಿ ಹೂಡಿಕೆ ಸ್ವಲ್ಪಮಟ್ಟಿನ ಸುರಕ್ಷತೆ ಕಾಣಲು ಸಾಧ್ಯ.

    ಅರಿತು ಹೂಡಿಕೆ ಮಾಡಿರಿ- ಅನುಸರಿಸಬೇಡಿರಿ. ಉಳಿಸಿದ ಹಣ – ಗಳಿಸಿದ ಹಣ

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    1 COMMENT

    1. Mr.K G KRUPAL advice of doing research on your own and knowledge of previous experience will guide for further investment in share market. Fundamentally strong companies profile in next article is our readers desire from Mr.K G.Krupal

    LEAVE A REPLY

    Please enter your comment!
    Please enter your name here

    Latest article

    error: Content is protected !!