ಇತ್ತೀಚಿಗೆ, ಮೈಸೂರಿಗರ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದ ಪದ್ಮ(ಪ್ರಭುದೇವ) ಮತ್ತು ಶಾಂತಲಾ ಚಿತ್ರಮಂದಿರಗಳನ್ನು ಮುಚ್ಚುವ ಸುದ್ದಿಯನ್ನು ಮಾಧ್ಯಮಗಳಲ್ಲಿ ನೋಡಿ ಆಘಾತವಾಯಿತು. ನನ್ನ ಮನಃಪಟಲದಲ್ಲಿ ಸಾಲು ಸಾಲು ನೆನಪುಗಳ ಮೆರವಣಿಗೆ.
ಈ ಎರಡು ಚಿತ್ರಮಂದಿರಗಳ ಜೊತೆಗಿನ ನನ್ನ ನೆನಪುಗಳು ಹಾಗೂ ಅನುಭವಗಳು ಅಚ್ಚಳಿಯದೆ ಉಳಿದಿವೆ. ಇಂದು ವಿಶೇಷವಾಗಿ ಶಾಂತಲ ಚಿತ್ರಮಂದಿರದ ಕುರಿತು ಅನಿಸಿಕೆ, ನೆನಪುಗಳನ್ನು ಹಂಚಿಕೊಳ್ಳಬಯಸುವೆ.
ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಡಬ್ಬಲ್ ರೋಡ್ ಗೆ ತಾಕಿದಂತಿರುವ ಶಾಂತಲ ಚಿತ್ರಮಂದಿರ ಬಹಳ ಹೆಸರು ವಾಸಿ. ಹಿಂದೆ ಓಂಕಾರ್ ಸೌಂಡ್ ಸಿಸ್ಟಮ್, ಎದುರುಗಡೆ ಸುಬ್ಬರಾಯ ಕೆರೆ.. ಸುಬ್ಬರಾಯ ಕೆರೆಯ ಈಜುಕೊಳ, ದಸರಾ ಸಮಯದ ಕೊಕ್ಕೋ ಮತ್ತು ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಗಳು.. ಶಾಂತಲಾ ಒಟ್ಟಿಗೆ ಮೇಳೈಸಿವೆ. ಈ ಚಿತ್ರಮಂದಿರದ ವಿಶೇಷ ಅಂದ್ರೆ ಇಲ್ಲಿ ಯಾವಾಗಲೂ ಕನ್ನಡ ಚಿತ್ರಗಳನ್ನು ಪ್ರದರ್ಶನ ಮಾಡ್ತಾ ಇದ್ದದ್ದು. ಪ್ರಶಸ್ತಿ ವಿಜೇತ ಗ್ರಹಣ ಇಲ್ಲಿಯೇ ತೆರೆ ಕಂಡಿದ್ದು ಮತ್ತೆ ಆ ಸಿನಿಮಾ ಇಲ್ಲಿ ನೋಡಿದ್ದು ನನ್ನ ಅತ್ಯಂತ ಹಳೆಯ ನೆನಪು. ಶಾಂತಲಾ ಚಿತ್ರಮಂದಿರದ ಆಕರ್ಷಣೆ ಎಂದರೆ ಅದರ ಮ್ಯಾನೇಜರ್.. ಗಿರಿಜಾ ಮೀಸೆಯ ಆ ವ್ಯಕ್ತಿ ಪೊಲೀಸ್ ಅಲ್ಲದಿದ್ದರೂ ಪೊಲೀಸರಿಗಿಂತ ಕಟ್ಟುನಿಟ್ಟು.. ಶಾಂತಲ ಚಿತ್ರಮಂದಿರದಲ್ಲಿ ಎಂದಿಗೂ ಬ್ಲಾಕ್ ನಲ್ಲಿ ಟಿಕೆಟ್ ಮಾರಾಟ ಆಗುತ್ತಿರಲಿಲ್ಲ. ಒಬ್ಬರಿಗೆ ಒಂದೇ ಟಿಕೆಟ್ ನೀಡುವ ಪರಿಪಾಠವಿತ್ತು. ಡಾ. ರಾಜಕುಮಾರ್ ಅಭಿನಯದ ಹಲವಾರು ಸಿನಿಮಾಗಳನ್ನು ನಾನು ಅಲ್ಲಿಯೇ ನೋಡಿದ್ದು ಅವುಗಳಲ್ಲಿ ಪ್ರಮುಖವಾದದ್ದು ಹೊಸಬೆಳಕು, ಕೆರಳಿದಸಿಂಹ ಇತ್ಯಾದಿ. ದಿನವಹಿ ಮೂರು ಆಟ ಕೆರಳಿದ ಸಿಂಹ ಇದ್ದಾಗ ಬೆಳಗಿನ ಆಟ ಸಾಹಸಸಿಂಹ. ಡಾ. ರಾಜಕುಮಾರ್ ಮತ್ತು ವಿಷ್ಣುವರ್ಧನ್ ರ ಈ ಚಿತ್ರಗಳಿಗೆ ಸ್ಟಾರ್ ಕಟ್ಟಿದವರು, ಮೆರವಣಿಗೆ ತಂದವರು, ಟಿಕೆಟ್ ಗಾಗಿ ಒದೆ ತಿಂದವರು.. ಇವರನ್ನೆಲ್ಲ ಕಂಡಾಗ ಕಣ್ಣಿಗೆ ಹಬ್ಬ. ರಾಜಕುಮಾರ್ ಚಿತ್ರಕ್ಕೆ ನಗರದ ಬೇರೆ ಬೇರೆ ಕಾರಣಗಳು ಅಭಿಮಾನಿ ಸಂಘದವರು ಸ್ಟಾರ್ ಮೆರವಣಿಗೆ, ಪಟಾಕಿ ಸದ್ದು, ಬ್ಯಾಂಡ್ ಸೆಟ್, ಕುಣಿತಗಳ ಸಮೇತ ಬರುತ್ತಿದ್ದುದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು.
ದಸರಾ ಚಲನಚಿತ್ರೋತ್ಸವದಲ್ಲಿ ಒಂದು ರೂಪಾಯಿ, ಎರಡು ರೂಪಾಯಿಗೆ ದಿನಕ್ಕೊಂದು ಪ್ರಖ್ಯಾತ ಚಿತ್ರಗಳ ಪ್ರದರ್ಶನ ನಡೆಯುತ್ತಿದ್ದಾಗ ಮುಗಿಬಿದ್ದು ನೋಡುತ್ತಿದ್ದೆವು. ಶಿವರಾತ್ರಿಯ ತಡರಾತ್ರಿ ಶೋ ಕೂಡಾ ಇಲ್ಲಿ ನಡೆಯುತ್ತಿತ್ತು. ಇವೆಲ್ಲಾ ನೆನಪುಗಳು ವಿಶಿಷ್ಠ.
ಯಾವುದೇ ಚಿತ್ರಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಮಾಡುವ ವ್ಯವಸ್ಥೆ ಬೇರೆಲ್ಲಾ ಕಡೆ ಇದ್ದಾಗಲೂ ಶಾಂತಲಾದಲ್ಲಿ ಇರಲಿಲ್ಲ. ಪ್ರತಿ ಪ್ರದರ್ಶನಕ್ಕೂ ಒಂದರ್ಧ ಗಂಟೆ ಮೊದಲು ಗೇಟನ್ನು ತೆಗೆದು ಒಳಗೆ ಬಿಡುತ್ತಿದ್ದರು ಅದು ಕೂಡ ಒಂದೇ ಸಾಲಿನಲ್ಲಿ ನಿಲ್ಲಬೇಕೆಂಬ ಕಟ್ಟಳೆ. ಎರಡನೇ ಸಾಲು ರೂಪುಗೊಂಡರೆ ಹೊರಗೆ ಎಳೆದು ಹಾಕುತ್ತಿದ್ದರು. ಚಿತ್ರಮಂದಿರದ ಹೊರಗಿನ ಗದ್ದಲ ಹೇಗೆ ಇದ್ದರೂ ಒಳಗೆ ಮಾತ್ರ ಶಿಸ್ತು ತುಂಬಿತ್ತು. ಇದಕ್ಕೆ ಮುಖ್ಯ ಕಾರಣವೇ ಅಲ್ಲಿನ ಪೊದೆ ಮೀಸೆ ಮ್ಯಾನೇಜರ್.
ಶಾಂತಲಾ ಚಿತ್ರಮಂದಿರದಲ್ಲಿ ಯಾವುದೇ ಚಿತ್ರ ಪ್ರದರ್ಶನವಾಗುವ ಮೊದಲು ತೆರೆಮೇಲೆ ಏಳುವಾಗ ಘಂಟಸಾಲ ಅವರು ಹಾಡಿದ್ದ ತೆಲುಗಿನ ನಮೋ ವೆಂಕಟೇಶ ಹಾಡು ಹಾಕುವುದು ವಾಡಿಕೆ. ಸಿನಿಮಾ ಆರಂಭವಾಯಿತು ಎಂಬುದಕ್ಕೆ ನಾವೆಲ್ಲ ಬಳಸುತ್ತಿದ್ದುದ್ದೇ ನಮೋ ವೆಂಕಟೇಶ ಶುರುವಾಯಿತು ಎಂಬ ಮಾತನ್ನು.
ಇಲ್ಲಿ ಅಂಬರೀಷ್ ಅಭಿನಯದ ಅಂತ ಚಿತ್ರ ಬಿಡುಗಡೆಯಾಗಿದ್ದು ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. ಮೊದಲ ಮೂರು ದಿನ ಬಹುತೇಕ ಖಾಲಿ ಇದ್ದ ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡಿದ್ದೆ. ಆಗಿನ್ನೂ ಹಲವು ದೃಶ್ಯಗಳು ಕತ್ತರಿ ಪ್ರಯೋಗಕ್ಕೆ ಒಳಗಾಗಿರಲಿಲ್ಲ. ಮೂರನೆಯ ದಿನದಿಂದ ತನ್ನ ಹಸಿಹಸಿ ದೃಶ್ಯಗಳಿಂದ ಇದ್ದಕ್ಕಿದ್ದಂತೆ ಜನಪ್ರಿಯತೆ ಗಳಿಸಿದ ಚಿತ್ರದ ಕೆಲವು ದೃಶ್ಯಗಳಿಗೆಗಳಿಗೆ ಕತ್ತರಿ ಪ್ರಯೋಗವಾಗಿದ್ದು ಜನರಲ್ಲಿ ಕುತೂಹಲ ಹೆಚ್ಚಿಸಿ ಹಿಂದೆಂದೂ ಕಾಣದಷ್ಟು ಜನಸಂದಣಿ ಉಂಟಾಗಿತ್ತು.. ಜನರ ಸರತಿ ಸಾಲು ಚಿತ್ರಮಂದಿರದ ಹಿಂದಿನ ರಸ್ತೆಯನ್ನು ದಾಟಿ ಎಣ್ಣೆ ಗಾಣದವರೆಗೂ ಇರುತ್ತಿದ್ದುದನ್ನು ನೋಡಿ ನಮಗೆ ಒಳಗೊಳಗೆ ಪುಳಕ. ಇಷ್ಟು ಜನ ನೋಡಬೇಕೆಂದು ಒದ್ದಾಡುತ್ತಿರುವ ಚಿತ್ರವನ್ನು ಎಲ್ಲರಿಗಿಂತ ಮೊದಲು ಆರಾಮಾಗಿ ನೋಡಿದ್ದೇವೆ ಅಂತ ಜಂಬ ಪಡುತ್ತಿದ್ದೆವು.ವಿಷ್ಣುವರ್ಧನ್ ಅಭಿನಯದ ಅಡಿಮೈ ಚಂಗಲ್ ಎಂಬ ಪರಭಾಷಾ ಚಿತ್ರವನ್ನು ಕೂಡ ಇಲ್ಲಿ ಬೆಳಗಿನ ಆಟದಲ್ಲಿ ನೋಡಿದ ನೆನಪಿದೆ.
ಚಿತ್ರಮಂದಿರ ಮನಸ್ಸಿಗೆ ಎಷ್ಟು ಹತ್ತಿರವಾಗಿತ್ತೋ ಅಷ್ಟೇ ಅದನ್ನು ಸಿಹಿ ಮಾಡಿದ್ದು ಎದುರಿನ ಪಾನಿಪುರಿ ಗಾಡಿ, ಪಕ್ಕದ ಸಣ್ಣ ಹೋಟೆಲ್, ಸಮೀಪದ ಜ್ಯೂಸ್ ಅಂಗಡಿಗಳು..
ಒಟ್ಟಿನಲ್ಲಿ, ನನ್ನ ಬಾಲ್ಯದ ಹಲವು ವರ್ಷಗಳ ಕಾಲದ ಅವಧಿಯಲ್ಲಿ ಮರೆಯಲಾಗದ ನೆನಪುಗಳನ್ನು ಮನದಲ್ಲಿ ಅಚ್ಚು ಹಾಕಿದ ಶಾಂತಲ ಚಿತ್ರಮಂದಿರ ಇದೀಗ ಶಾಶ್ವತವಾಗಿ ಮುಚ್ಚುತ್ತಿರುವುದು ನೋವಿನ ಸಂಗತಿ. ಶಾಂತಲ ಚಿತ್ರಮಂದಿರ ಮೈಸೂರಿಗರ ಮನಗಳಲ್ಲಿ ಸದಾ ಉಳಿಯುತ್ತದೆ. ಮತ್ತೊಮ್ಮೆ ಅಲ್ಲಿನ ತೆರೆ ಮೇಲೆ ಏಳಬಹುದು, ಮತ್ತೊಮ್ಮೆ ನಮೋ ವೆಂಕಟೇಶ ಕೇಳಿಬರಬಹುದು ಎಂಬ ದೂರದ ಆಸೆ ನಮ್ಮೆಲ್ಲರ ಮನದಲ್ಲಿ ಸದಾ ಹಸಿರು.
ಬೆಂಗಳೂರು ಮೈಸೂರು ಸೇರಿದಂತೆ ಅನೇಕ ನಗರಗಳಲ್ಲಿ ಅನೇಕ ಥಿಯೇಟರ್ ಗಳು ಬಂದ್ ಆಗಿವೆ.ಅಲ್ಲದೆ ಕರೋನಾ ಕಾರಣದಿಂದ ಚಿತ್ರಮಂದಿರಗಳು ಇನ್ನೂ ತೆರೆದಿಲ್ಲ. ಚಿಂತೆ ಬೇಡ. ಅಮೆಜಾನ್ ಪ್ರೈಮ್ ಸದಸ್ಯರಾದರೆ ಕನ್ನಡ ಸೇರಿದಂತೆ ವಿಶ್ವದ ಸಿನಿಮಾ ಲೋಕವೇ ನಿಮ್ಮ ಮನೆಯಲ್ಲಿ ತೆರೆದುಕೊಳ್ಳುತ್ತದೆ ಈ ಕೆಳಗಿನ ಲಿಂಕ್ ಒತ್ತಿ ಅಮೆಜಾನ್ ಪ್ರೈಮ್ ವಿಡಿಯೋ ಬಳಗ ಸೇರಿ.
ನಮ್ಮೂರಿನ ಥಿಯೇಟರ್ ನಲ್ಲಿಯೂ ಸಿನಿಮಾ ಪ್ರದರ್ಶನ ಆರಂಭದ ಸೂಚಕ ನಮೋ ವೆಂಕಡೇಶ. ಅದು ಘಂಟಸಾಲ ಹಾಡಿದ ತೆಲುಗು ವರ್ಷನ್.
ಈ ನಿಮ್ಮ ಲೇಖನ ಓದಿ ನನಗೆ ಶಾಂತಲಾ ದಲ್ಲಿ ನೋಡಿದ ಚಿತ್ರಗಳ ನೆನಪಾಯಿತು. ಮತ್ತು ನೀವು ಹೇಳಿದಂತೆ ಆ ಗಿರಿಜಾ ಮೀಸೆ ಯ ವೆಕ್ತಿ ಯ ಪರಿಶ್ರಮ ದಿಂದಲೇ ಈ ಟಾಕೀಸ್ ಅಷ್ಟು ಬೆಳೆಯಲು ಸಾಧ್ಯ ವಾಯಿತು. ಆದ್ರೆ ಇನ್ನು ಮುಂದೆ ಅದು ಬರಿ ನೆನಪು ಮನಸ್ಸಿಗೆ ನೋವಾಗುತ್ತೆ.
The article is very informative and nostalgic. Mysorians will miss a landmark for ever.
Nammurina talkies bandh agterodu keli Behari ondu kade adre mattondu alli nodeda filmgala nenapagi … Innu shantala memory. …
I still have fresh memories in my mind I’ve seen many movies. It’s difficult to believe that this theatre is going to close. Really feeling sad. One of the land mark for Kannada movie. I remember seeing tutta mutts of Ramesh. Khal nayak and many more.