ಮಾರ್ಚ್ 11 ರಂದು ಕೋವಿಡ್ -19 ಎನ್ನುವ ಈ ವಿಶ್ವವ್ಯಾಪಿ ಹೊಸವ್ಯಾಧಿ ( ಪ್ಯಾಂಡಮಿಕ್) ಪ್ರಪಂಚಕ್ಕೆಲ್ಲ ಹರಡುತ್ತಿರುವುದರ ಆಪತ್ತಿನ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಧೃಡಪಡಿಸಿತು.ಇದು ಸಂತೋಷದ ಸುದ್ದಿಯಾಗಿರಲಿಲ್ಲ. ಅಂತೆಯೇ ದುಃಖದ ಹರವನ್ನೂ ದೃಢಪಡಿಸಿರಲಿಲ್ಲ.ಆದರೆ,ಆ ದಿನ ವಿಶ್ವದ ಜನರಿಗೆ ತಮ್ಮ ಜೀವಿತಾವಧಿಯಲ್ಲೇ ಕಂಡು ಕೇಳಿಲ್ಲದ ಒಂದು ಮಹಾ ವಿಪತ್ತಿನ ಮುನ್ಸೂಚನೆಯಂತೂ ದೊರೆಕಿತು.
ಜಗತ್ತಿನ ಜನರು ಅದಕ್ಕೆ ಎಂದಿನಂತೆ ಸ್ಪಂದಿಸಿದರು. ಮೊದಲಿಗೆ ಆಶ್ಚರ್ಯ, ಉದ್ರೇಕ ಮತ್ತು ನಂಬಲಸಾಧ್ಯವಾದ ಒಂದು ಭಾವ ಅವರಲ್ಲಿ ಹರಿದುಹೋಯ್ತು. ಜೊತೆಗೆ ಕಂಡರಿಯದ ವಿಪತ್ತಿನ ಬಗ್ಗೆ ಅವರಿಗೆ ಭಯವೂ ಆಯ್ತು. ಕಳವಳವೂ ಆಯ್ತು.ಮತ್ತೆ ಕೆಲವರು ಇದನ್ನು ನಂಬಲಿಲ್ಲ.ಅಥವಾ ಸಧ್ಯಕ್ಕೆ ಇದನ್ನು ನಂಬುವ ಅವಶ್ಯಕತೆ ತಮಗಿಲ್ಲ ಎಂದು ತಲೆಕೊಡವಿಕೊಂಡರು.ಭಯವನ್ನು ದೂರವಿಡುವ ತಂತ್ರವನ್ನು ಅನುಸರಿಸಿದರು.
ಚೈನಾ ಮತ್ತು ಸರಹದ್ದಿನ ದೇಶಗಳನ್ನು ಬಿಟ್ಟರೆ ಈ ಸೋಂಕು ತ್ವರಿತವಾಗಿ ಹರಡಿದ್ದು ಪಾಶ್ಚಿಮಾತ್ಯ ದೇಶಗಳಲ್ಲಿ. ಹೀಗಾಗಿ ಮೊದ ಮೊದಲಲ್ಲಿ “ಕರೋನಾ ಎನ್ನುವ ಖಾಯಿಲೆ ವಿದೇಶಗಳಲ್ಲಿ ಮಾತ್ರ ಇರುವ ರೋಗ,ತಮ್ಮೂರಿನವರೆಗೆ ಈ ರೋಗ ಬರಲು ಸಾಧ್ಯವಿಲ್ಲ” ಎಂಬ ಧೃಡ ನಂಬಿಕೆಯೇ ಭಾರತದ ಮುಕ್ಕಾಲು ಮೂರು ಜನರಲ್ಲಿ ಹೆಚ್ಚು ಪ್ರಧಾನವಾಗಿತ್ತು.ಕೋವಿಡ್ ಸೋಂಕು ಹರಡುವುದನ್ನು ಮತ್ತು ಸುತ್ತ ಮುತ್ತಲಿನ ಜನ ಸಾಯುತ್ತಿದ್ದುದನ್ನು ನೋಡಿದ್ದ ಜನರನ್ನು ಬಿಟ್ಟರೆ ಪ್ರಪಂಚದ ಮಿಕ್ಕೆಲ್ಲ ಜನರು ಕೂಡ ಹೀಗೆಯೇ ನಂಬಿದ್ದರು.ಪಾಶ್ಚಾತ್ಯ, ಮತ್ತು ಪೌರ್ವಾತ್ಯ ವಿದೇಶಗಳಿಂದ ಈ ಸೋಂಕು ಇಷ್ಟೊಂದು ಕ್ಷಿಪ್ರಗತಿಯಲ್ಲಿ ಹರಡಬಲ್ಲದು ಎನ್ನುವ ಕಲ್ಪನೆ ಜನರಲ್ಲಿ ಖಂಡಿತ ಇರಲಿಲ್ಲ. ಪ್ರಪಂಚವೆಲ್ಲ ಇಷ್ಟೊಂದು ಸಂಕೀರ್ಣವಾಗಿ ಹೆಣೆದುಕೊಂಡಿರುವ ಬಗ್ಗೆ ಅರಿವಿಲ್ಲದ ಅವರ ಈ ಪ್ರತಿಕ್ರಿಯೆ ಅತ್ಯಂತ ಸಹಜವಾಗಿತ್ತು ಕೂಡ.
ಪ್ಯಾಂಡೆಮಿಕ್ ನ ವಿರಾಟ್ ದರ್ಶನ ಅಥವಾ ಅದರ ವಿರಾಟ್ ಸ್ವರೂಪದ ಅರಿವಾದ ಕ್ಷಣದಿಂದ ಮೊದಲ ಎರಡು ವಾರಗಳವರೆಗೆ ಶೇಕಡ 80 ಜನರ ಮಾನಸಿಕ ಸ್ವಾಸ್ಥ್ಯದ ಮೇಲೆ ಈ ವಿಚಾರ ಒಂದಿಲ್ಲೊಂದು ರೀತಿಯ ಪರಿಣಾಮ ಬೀರುತ್ತದೆ ಎನ್ನುವುದುಈಗಾಗಲೇ ಧೃಡಗೊಂಡಿರುವ ವಿಚಾರ.
ಯಾವುದೇ ತುರ್ತು ಸಂದರ್ಭ ನಮಗೆ ಎದುರಾದಾಗ ಕಳವಳ ಪಡುವುದು, ಕೈ ಕಾಲು ಆಡದ ಸ್ಥಿತಿಯಲ್ಲಿ ಸ್ಥಂಭೀಭೂತರಾಗುವುದು, ಸ್ವಾರ್ಥದಿಂದ ನಡೆದುಕೊಳ್ಳುವುದು, ಇತರರಿಗೆ ಸಹಾಯ ಮಾಡಲು ಮುಂದಾಗುವುದು, ಮತ್ತು ಏನೂ ತಿಳಿಯದ ಎಡಬಿಡಂಗಿಗಳಂತೆ ಎರ್ರಾ ಬಿರ್ರಿ ನಡೆದುಕೊಳ್ಳುವುದು,ಕಾರಣಯುಕ್ತವಾಗಿ ವರ್ತಿಸುವುದು, ಮನುಷ್ಯ ತೋರುವ ಅತ್ಯಂತ ಸಹಜ ಸ್ಪಂದನೆಗಳು.ಇವೇ ವೈವಿಧ್ಯತೆಗಳನ್ನು ಒಳಗೊಂಡ ವರ್ತನೆಯನ್ನು ಎಲ್ಲ ಸಮುದಾಯಗಳ ಸಮಾಜಗಳು ಪ್ರದರ್ಶಿಸಿದವು.ಈ ವೈಜ್ಞಾನಿಕ ಪ್ರಕ್ರಿಯೆ ಇನ್ನಿತರ ಪ್ಯಾಂಡೆಮಿಕ್ ಅಥವಾ ಯುದ್ಧಗಳಂತಹ ತುರ್ತು ಪರಿಸ್ಥಿತಿಯಲ್ಲೂ ಕಂಡುಬಂದಿರುವ ವಿಚಾರಗಳಾಗಿವೆ.
ಒಂದು ಪ್ಯಾಂಡೆಮಿಕ್ ನಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯ ಮಾನಸಿಕ ಘಾಸಿಗಳಿಗೆ ತುತ್ತಾಗುತ್ತಾರೆ. ಮಕ್ಕಳು, ವಯಸ್ಕರರು, ವಯಸ್ಸಾದವರು, ಗಂಡಸರು, ಹೆಂಗಸರು,ಉದ್ಯೋಗಸ್ಥರು, ನಿರುದ್ಯೋಗಿಗಳು, ಉದ್ಯಮಗಳು ಎಲ್ಲರೂ ಕಷ್ಟಗಳಿಗೆ ಸಿಲುಕುತ್ತಾರೆ. ಆತಂಕದಲ್ಲಿ ಬದುಕುತ್ತಾರೆ. ಅದು ಎಲ್ಲರಿಗೂ ಕಾಣುವಂತಿರಬಹುದು ಅಥವಾ ಸುಪ್ತವಾಗಿರಬಹುದು. ಕೆಲವರದು ಹೆಚ್ಚಿರಬಹುದು ಮತ್ತೆ ಕೆಲವರದು ಕಡಿಮೆಯಿರಬಹುದು.ಕೆಲವರು ಅದನ್ನು ದೊಡ್ಡದು ಮಾಡಬಹುದು ಮತ್ತೆ ಕೆಲವರು ಸುಮ್ಮನಿರಬಹುದು.
ಶೇಕಡ 80 ವಯಸ್ಕ ಜನರ ಮಾನಸಿಕ ಸ್ವಾಸ್ಥ್ಯ ಇಂತಹ ತುರ್ತು ಸಂದರ್ಭಗಳಲ್ಲಿ ಅಲ್ಪ -ಸ್ವಲ್ಪ ಮಟ್ಟದ ಬಳಲಿಕೆಗೆ ಒಳಗಾಗುತ್ತವೆ.ಆದರೆ ಇವರು ಬಹುಬೇಗ ಚೇತರಿಸಿಕೊಳ್ಳುತ್ತಾರೆ. ಇನ್ನುಳಿದ ಶೇಕಡ 20 ಜನರಲ್ಲಿ ಇಂತಹ ಸಮಯಗಳು ಆರದ ಗಾಯಗಳನ್ನು ಸೃಷ್ಟಿಸಬಲ್ಲವು.
ಸಂತ್ರಸ್ತರು
ಉದಾಹರಣೆಗೆ ಕೋವಿಡ್ ನಲ್ಲಿ ಪ್ರಾಣ ಕಳೆದುಕೊಂಡ ಸಂಸಾರಗಳು ಎಲ್ಲರಿಗಿಂತಲೂ ಹೆಚ್ಚು ಘಾಸಿಕೊಂಡಿದ್ದಾರೆ. ಪ್ರಾಣ,ಪ್ರೀತಿ, ಸಂಬಂಧ, ದುಡಿಮೆ, ಭದ್ರತೆ, ಎಲ್ಲವನ್ನು ಕಳೆದುಕೊಂಡು ಬರಿಗೈಯಾಗಿರುವ ಈ ಸಂಸಾರಗಳು ದುಃಖದ ಜೊತೆ ಜೊತೆಗೆ ತಮ್ಮ ಆರೋಗ್ಯ, ತಮ್ಮನ್ನು ನಂಬಿದ ಇತರರ ಆರೋಗ್ಯದ ಕಡೆ ಒತ್ತಟ್ಟಿಗೆ ಗಮನಕೊಡಬೇಕಾದ ಸಂಕಷ್ಟಕರ ಕರ್ತವ್ಯಗಳಲ್ಲಿ ಸಿಲುಕಿ ದಿಗ್ಭ್ರಾಂತರಾಗಿದ್ದಾರೆ.ಜೊತೆಗೆ ಆರ್ಥಿಕ ಜಂಜಾಟಗಳಿಗೆ ಮತ್ತು ಅದಕ್ಕೆ ಸಂಬಂಧಿಸಿದ ಯುದ್ದ ಭೂಮಿಗೂ ತಟ್ಟನೆ ಜಾರಿದ್ದಾರೆ. ಹತ್ತಿರವೇ ಇದ್ದು ಸಾಯುತ್ತಿರುವವರ ಬಳಿ ನಿಂತು ಸಾಂತ್ವನ ಹೇಳಲಾಗದ, ಸತ್ತವರ ಮುಂದೆ ನಿಂತು ಅಳಲಾಗದ ಈ ವಿಚಿತ್ರ ಸಂದರ್ಭ ಮನುಷ್ಯನ ಸಾಮಾನ್ಯ ಮಾನಸಿಕ ಧರ್ಮವನ್ನು ಮೀರಿರುವ ವಿಚಾರವಾಗಿದೆ. ಈ ಕಾರಣ ಹಲವು ತಲೆಮಾರುಗಳು ಈ ಗಾಯಗಳನ್ನು ಭವಿಷ್ಯದಲ್ಲೂ ಬಹುಕಾಲ ಹೊತ್ತೇ ಬದುಕುತ್ತಾರೆ.
ಒತ್ತಡದಲ್ಲಿ ಕೆಲಸಮಾಡುತ್ತಿರುವ ಜನರು
ಸಾವಿನ ಭಯದಲ್ಲಿ ಕೆಲಸ ಮಾಡಲೇ ಬೇಕಾದ ಜನರು ಒತ್ತಡಕ್ಕೊಳಗಾಗಿದ್ದಾರೆ.ಅವರ ಅಯ್ಕೆಗಳು ಈ ಸಂದರ್ಭದಲ್ಲಿ ’ಪ್ರಾಣಕ್ಕೆ ಕಂಟಕ V/S ಮೇಲೇರಲಾಗದ ಆರ್ಥಿಕ ಕಂದಕ’ಗಳ ನಡುವಿನದಾದ್ದರಿಂದ ವಿಧಿಯಿಲ್ಲದೆ ದೇವರ ಮೇಲೆ ಭಾರ ಹಾಕಿ ಕೆಲಸಗಳಿಗೆ ತೆರಳಬೇಕಿದೆ.ಆದರೆ ಈ ದ್ವಂದ್ವ ಅವರ ಮನಸ್ಸನ್ನು ಅರಿವೇ ಇಲ್ಲದ ಮಾನಸಿಕ ಬೇಗುದಿಗಳಿಗೆ, ಒತ್ತಡಗಳಿಗೆ ಸಿಲುಕಿಸಿರುವುದು ನಿಜ.
ಬದುಕಲು ಸೆಣೆಸುತ್ತಿರುವ ವರ್ಗ
ಮಾಡಲು ಏನೂ ಇಲ್ಲದೆ ಕೆಲಸ ಕಳೆದುಕೊಂಡು ಆರ್ಥಿಕ ನಷ್ಟದಲ್ಲಿರುವ ಜನರು ಸಂಕಷ್ಟದಲ್ಲಿದ್ದಾರೆ.ಇವರು ಹೊರಗಿನಿಂದ ದೊರೆಯಬಹುದಾದ ನೆರವಿಲ್ಲದೆ ಬದುಕಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದ್ದಾರೆ. ಇವರಿಗೆ ’ ಸಾವು ’ V/S ’ಸಾವಿನ ಸಂಭವನೀಯತೆ ’ ಗಳ ನಡುವಿನ ಆಯ್ಕೆಯೇ ಎದುರಾಗಿರುವ ಕಾರಣ ಒಂದು ಬಗಯ ಜಡತ್ವವನ್ನು ಮೈ ಗೂಡಿಸಿಕೊಂಡರೆ ಮಾತ್ರ ಬದುಕಬಲ್ಲ ಸಾಧ್ಯತೆಯನ್ನು ಕಾಣಬಲ್ಲರು.ಇಲ್ಲವೇ ಹಸಿವು, ಖಿನ್ನತೆ, ಆತ್ಮಹತ್ಯೆಗಳ ಸರಣಿಯನ್ನು ಎದುರಿಸುತ್ತಿರುವ ಜನರಿವರು.
ಸರಳವಾಗಿ ಗುರುತಿಸಿ,ವಿಂಗಡಿಸಬಲ್ಲ ಮೇಲಿನ ಈ ವರ್ಗಗಳನ್ನು ಬಿಟ್ಟು ಬೇರೆ ವರ್ಗದ ಜನಗಳೂ ಇದ್ದಾರೆ.ಇವರಲ್ಲಿ ಕೆಲವರು ಅತ್ಯಂತ ಕಳವಳಕ್ಕೊಳಗಾದರೂ ಅತ್ಯಂತ ಬೇಗನೆ ಚೇತರಿಸಿಕೊಳ್ಳಬಲ್ಲವರಾಗಿದ್ದಾರೆ. ಇನ್ನು ಕೆಲವರು ನಿಧಾನಕ್ಕೆ ಸಹಜ ಮಾನಸಿಕ ಸ್ಥಿತಿಗೆ ಹಿಂತಿರುಗಬಲ್ಲರು. ಒಂದಿಷ್ಟು ಸಮಯ ಮತ್ತು ಸಮುದಾಯಗಳ ಸಹಾಯ ಸಿಕ್ಕರೆ ಬಹುತೇಕರು ಪೂರ್ತಿ ಗುಣಮುಖರಾಗುತ್ತಾರೆ. ಕೋವಿಡ್ ನಂತಹ ಪ್ಯಾಂಡೆಮಿಕ್ ಗಳನ್ನುಅನುಭವಿಸಿದ ಕೆಲವರಿಗೆ ಮಾತ್ರ ವೃತ್ತಿಪರರ ಸಹಾಯವಿಲ್ಲದೆ ಈ ಸಾವು-ನೋವುಗಳ ಮಹಾಪೂರದಿಂದ ಹೊರಬರಲು ಸಾಧ್ಯವಾಗುವುದಿಲ್ಲ.ಇಂತವರು ಆತಂಕ (anxiety disorders )ಅಥವಾ ಖಿನ್ನತೆ(depression) ಗಳಿಂದ ನರಳಬಲ್ಲರು. ಮದ್ಯದ ವ್ಯಸನಿ ( Alcohol addiction) ಗಳಾಗಬಹುದು. ಆದೃಷ್ಟಕ್ಕೆಪ್ಯಾಂಡೆಮಿಕ್ ಒಂದರ ನಂತರpost-traumatic stress disorder (PTSD)ಅತ್ಯಂತ ವಿರಳವಾಗಿ ದಾಖಲಾಗಿರುವ ವಿಚಾರ.
ಒಂಟಿತನ, ವೃದ್ದಾಪ್ಯ, ಮಾನಸಿಕ ರೋಗಿಗಳು.
ಒಬ್ಬರಿಂದ ಒಬ್ಬರು ದೂರವಿರಬೇಕಾದ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕಾದ ಈ ಕಾಲದಲ್ಲಿ ಮಾನಸಿಕ ಸ್ವಾಸ್ಥ್ಯ ಸದ್ದೇ ಇಲ್ಲದಂತೆ ನಲುಗಿಸುವುದು ಒಂಟಿಯಾಗಿ ಬದುಕುವವರನ್ನು, ಪ್ರೀತಿಸಲು ಮತ್ತೊಂದು ಜೀವ ಇಲ್ಲದವರನ್ನು, ಪ್ರೀತಿಗೆ ಸ್ಥಾನವೇ ಇಲ್ಲದೆ ಹೊಟ್ಟೆಯ ಪಾಡಿಗೆ ಪರದಾಡುವವರನ್ನು, ಈಗಾಗಲೇ ಹಲವು ಮಾನಸಿಕ ಮತ್ತು ದೈಹಿಕ ಖಾಯಿಲೆಗಳಿಂದ ಬಳಲುತ್ತಿರುವವರನ್ನು, ಬೇರೆ ಭಾಷೆ ಮಾತಾಡುವ ವಲಸಿಗರನ್ನು, ಈಗಾಗಲೇ ವ್ಯಸನಗಳಿಂದಲೋ ಅಥವಾ ಖಿನ್ನತೆಯಿಂದಲೋ ಬಳಲುತ್ತಿರುವವರನ್ನು. ನೆಲೆ, ಭದ್ರತೆ ಇಲ್ಲದೆ ಬದುಕಿನಲ್ಲಿ ನಿರೀಕ್ಷೆಗಳನ್ನು ಕಳೆದುಕೊಂಡಿರುವವರನ್ನು, ಹುಟ್ಟಿನಿಂದಲೇ ಕಲಿಕೆಯ ಪೂರ್ಣ ಬೆಳವಣಿಗೆ ಇರದ ಜನರನ್ನು. ಇವರಲ್ಲಿ ಈಗಾಗಲೇ ಒತ್ತಡಗಳಿರುವ ಕಾರಣ ಪ್ಯಾಂಡೆಮಿಕ್ ಸುಲಭವಾಗಿ ಎರಡನೇ ಒತ್ತಡವಾಗುತ್ತದೆ. ತಮ್ಮ ಒತ್ತಡಗಳನ್ನು ಹೇಗೆ ಹೇಳಿಕೊಳ್ಳಬೇಕೆಂದು ತಿಳಿಯದ, ಸಮಾಜದಲ್ಲಿ ಧ್ವನಿಯಿಲ್ಲದ ಇಂತಹವರಿಗೆ ಎಲ್ಲರಿಗಿಂತ ಹೆಚ್ಚಿನ ಸಹಾಯಗಳು ಬೇಕಾಗುತ್ತವೆ.
ಮುಂದುವರೆದ ದೇಶಗಳಲ್ಲಿ ಇಂತಹ ಜನರ ಆರೋಗ್ಯದ ಬಗ್ಗೆ ತುರ್ತು ಸಂದರ್ಭಗಳಲ್ಲಿ ಪ್ರಾಮುಖ್ಯತೆಯನ್ನು ನೀಡುವ ಯತ್ನ ನಡೆಯುತ್ತದೆ. ಒಂಟಿತನ ಹೆಚ್ಚಿರುವ ಪಾಶ್ಚಿಮಾತ್ಯ ದೇಶಗಳಲ್ಲಿ ಒಂಟಿಯಾಗಿ ಬದುಕುತ್ತಿರುವ ವೃದ್ಧರಿಗೆ ಖಿನ್ನತೆ ತಗುಲದಂತೆ ಸಮುದಾಯಗಳು ಶ್ರಮಿಸುತ್ತವೆ. ಒಂಟಿತನದ ಅಸಹಾಯಕತೆಯಲ್ಲಿ ಬದುಕುವ ಇತರರ ಮಾನಸಿಕ ಆರೋಗ್ಯದ ಬಗ್ಗೆ ಸಾಧ್ಯವಿದ್ದಷ್ಟೂ ಗಮನಹರಿಸಲಾಗಿದೆ.
ಮನೆಯಲ್ಲೇಇದ್ದು ಜನರ ಮಧ್ಯೆ ಒಂಟಿಯಾಗಿರುವ ವೃದ್ಧರೂ ಇದ್ದಾರೆ. ಅವರೆಲ್ಲ ಈ ಕಾಲದಲ್ಲಿ ಬೇಜಾರಿನ ಬವಣೆಯಲ್ಲಿ ಬೇಯುತ್ತಿದ್ದಾರೆ. ಸ್ನೇಹಿತರು, ವಾಕಿಂಗ್, ದೇವಸ್ಥಾನ, ಸಂಬಂಧಿಕರ ಮನೆ, ವ್ಯಾಪಾರ ಎನ್ನುವ ನೆಪದಲ್ಲಿ ದಿನಕ್ಕೆ ಒಂದು ಸಾರಿಯಾದರೂ ಓಡಾಡುತ್ತ ತಮ್ಮ ದೇಹದ ಆರೋಗ್ಯಕ್ಕೆ ಗಮನ ನೀಡಬೇಕಿದ್ದ ಈ ಹಿರಿಯರು ಮೂರು ತಿಂಗಳಿಂದ ಆತಂಕ, ಒಂಟಿತನ ಮತ್ತು ಬೇಜಾರಿನಲ್ಲಿ ಕಳೆಯುತ್ತಿದ್ದಾರೆ. ಇಂತವರು ಖಿನ್ನತೆಗೆ ಜಾರದಂತೆ ಮನೆಯವರು, ನೆರೆ ಹೊರೆಯವರು, ಸ್ನೇಹಿತರು, ಹಿತೈಷಿಗಳು, ಸಂಬಂಧಿಕರು ನೋಡಿಕೊಳ್ಳಬೇಕಾದ ಆಅವಶ್ಯಕತೆಯಿದೆ. ದೂರವಾಣಿ ಕರೆಗಳ ಮೂಲಕ ಅವರ ಆಗು-ಹೋಗುಗಳನ್ನು ಪ್ರತಿ-ದಿನ ಕೇಳುವುದು ಲಾಕ್ ಡೌನ್ ಕಾಲದಲ್ಲಿ ಇನ್ನೂ ಅತ್ಯಗತ್ಯವಾಗಿದೆ.
ಆತಂಕದಲ್ಲಿ ಬದುಕುತ್ತಿರುವ ಜನ
ಆತಂಕದಲ್ಲಿರುವ ಜನರು ತಾವು ಆತಂಕದಲ್ಲಿದ್ದೇವೆ ಎಂದು ಹೇಳಲಾರರು. ಬಹುಬಾರಿ ಇದು ಅವರ ಅರಿವಿನಲ್ಲಿರುವುದೂ ಇಲ್ಲ. ಆದರೆ ಅವರ ಮಾತಿನಲ್ಲಿ ಭಯ, ಅಸಹಾಯಕತೆ, ತಪ್ಪಿತಸ್ಥ ಭಾವನೆ, ಆತಂಕ,”ಸೋಂಕು ತಗುಲಿಬಿಟ್ಟರೆ “ ಎಂಬ ಅತ್ಯಪಾರ ಕಳವಳ, ಬದುಕಿನ ಬಗ್ಗೆ ಇಲ್ಲದ ಭರವಸೆ, ವಿಶಾದ ತುಂಬಿರುತ್ತದೆ. ಅವರಲ್ಲಿ ತಮ್ಮ ಬಗ್ಗೆ ಗಮನ ಇಲ್ಲದಿರುವುದು, ಗಲಿಬಿಲಿ, ಕುಂದಿದ ಆತ್ಮ ವಿಶ್ವಾಸ, ಕಿರಿ-ಕಿರಿ, ಪ್ಯಾಂಡೆಮಿಕ್ ವಿಚಾರದಲ್ಲಿ ಸಿಕ್ಕಾ ಪಟ್ಟೆ ನಿಗಾ ವಹಿಸುವುದು ಇತ್ಯಾದಿ ಲಕ್ಷಣಗಳು ಕಂಡು ಬರುತ್ತದೆ. ಇಂಥವರು ನಿದ್ರಾಹೀನತೆ, ಕೈ ಬೆವರುವುದು, ಹಸಿವಿಲ್ಲದಿರುವುದು ಇತ್ಯಾದಿ ದೂರುಗಳನ್ನು ಹೇಳುತ್ತಾರೆ.ಇವೆಲ್ಲ ಅವರ ಮಾನಸಿಕ ಲೋಕದಲ್ಲಿ ಆಗುವ ಏರು-ಪೇರನ್ನು ಹೇಳುತ್ತವೆ.ಭಾರತದ ಹಳ್ಳಿಗಳಲ್ಲಿ ಕೋವಿಡ್ ಕಡಿಮೆಯಿರುವುದು ವರದಾನವೇ ಸರಿ. ಇಲ್ಲದಿದ್ದಲ್ಲಿ ಮಾನಸಿಕ ಪ್ರಪಂಚದ ಸಮಸ್ಯೆಗಳು ಇನ್ನೂ ಹೆಚ್ಚಾಗಿರುತ್ತಿದ್ದವು.
ದೇವರು, ಆಧ್ಯಾತ್ಮ, ಪಾರಮಾರ್ಥಿಕ ಚಿಂತನೆಗಳು ಕೂಡ ಒಂಟಿತನದ ಅಸದಳ ಹಿಂಸೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆಮಾಡಿವೆಯೆನ್ನಬಹುದು.ಆದರೆ ಬೇರೊಬ್ಬ ಮನುಷ್ಯನ ಪ್ರೀತಿ, ಸಂಪರ್ಕ ಮತ್ತು ಸ್ಪರ್ಶಗಳು ಮಾನವರಾದ ನಮಗೆ ಅತ್ಯಗತ್ಯ. ಸ್ಪರ್ಶದಿಂದ ದೂರ ಉಳಿಯಬೇಕಿರುವ ಈ ಕಾಲದಲ್ಲಿ ಸಂಪರ್ಕ ಸೇತುಗಳಾಗಿ ಫೋನ್ ಮತ್ತು ವೀಡಿಯೋ ಕಾಲ್ ಗಳು ವರದಾನವಾಗಿವೆ. ಮನುಷ್ಯನ ವಯಸ್ಸು ಎಷ್ಟೇ ಇರಲಿ ಅವನ ಚಲನ ವಲನಕ್ಕೆ ಕಡಿವಾಣ ಬಿದ್ದರೆ ಆತ ಬೇಗುದಿಗೆ ಬೀಳುತ್ತಾನೆ. ಸಹನೆಯನ್ನು ಕಳೆದುಕೊಂಡು ಪ್ರಾಣವನ್ನೂ ಲೆಕ್ಕಿಸದೆ ಹೊರಬರುತ್ತಾನೆ. ಅವನ ಸ್ವಾತಂತ್ರ್ಯ ಅವನ ಸ್ವತ್ತು. ಇದೇ ಕಾರಣಕ್ಕೆ ಪ್ರಜೆಗಳ ಒಳಿತಿಗೇ ಆದರೂ ಸರಕಾರಗಳು ಅವರನ್ನು ಮನೆಯಲ್ಲೇ ಇರಿಸಲು ಹೆಣಗಬೇಕಾಗಿದೆ.
ಮನಸ್ಸಾಮಾಜಿಕ ಸಂಭಾವಣೆ
ಅರ್ಥಮಾಡಿಕೊಳ್ಳುವ, ಹೊಂದಾಣಿಕೊಂಡು ನಿಭಾಯಿಸುವ ಮನಸ್ಸಾಮಾಜಿಕ(Psycho social) ಸಂಭಾವಣೆಯ ಶಕ್ತಿ ಎಲ್ಲರಿಗೂ ಸಮನಾಗಿರುವುದಿಲ್ಲ. ಕಷ್ಟಗಳಿಂದ ಸಂಪೂರ್ಣ ಬಿಡುಗಡೆ ಹೊಂದಲು ಕೆಲವರು ಹೆಣಗುತ್ತಾರೆ. ಇವರ ಮೇಲೆ ಮಾನಸಿಕ ವೈಪರೀತ್ಯಗಳ ಪರಿಣಾಮ ಆಳವಾಗಿ ಆಗುತ್ತದೆ. ಮಿಕ್ಕವರು ಬದುಕಿನಲ್ಲಿ ಬರುವ ಅಡಚಣೆಯನ್ನೇ ಹಾರುಮಣೆಯನ್ನಾಗಿ ಮಾಡಿಕೊಂಡು ಒಂದಷ್ಟು ಗಟ್ಟಿಯಾಗುತ್ತಾರೆ. ಮುಂದಿನ ಸಂದರ್ಭಗಳಿಗೆ ತಯಾರಾಗುತ್ತಾರೆ.
ವಲಸಿಗರು
ಅವರವರ ಊರು,ರಾಜ್ಯ, ದೇಶದ ಜನರು ತಮ್ಮದೇ ಸ್ಥಳಗಳಲ್ಲಿದ್ದರೆ, ನಿವಾಸ ಹೊಂದಿದ್ದರೆ ಅದು ಅ ವರಿಗೆ ವರದಾನ.ಆದರೆ ಈ ಜಾಗತಿಕ ಯುಗದಲ್ಲಿ ವಿಶ್ವದ ಜನರು ಒಂದೆಡೆಯಿಂದ ಮತ್ತೊಂದು ಕಡೆ ಹೋಗಿ ಬದುಕುವುದು ಅತ್ಯಂತ ಸಾಮಾನ್ಯವಾದ ವಿಚಾರ. ಈ ವಲಸಿಗರ ಮತ್ತು ಅವೇ ದೇಶಗಳಲ್ಲಿರುವ ಅಲ್ಪಸಂಖ್ಯಾತರ ಮಾನಸ ಪ್ರಪಂಚ ಅತ್ಯಂತ ಸೂಕ್ಷ್ಮವೂ, ಶಿಥಿಲವೂ ಆಗಿರುತ್ತದೆ. ಅಧೀರತೆಯೂ ಮನೆ ಮಾಡಿರುತ್ತದೆ. ಪ್ಯಾಂಡೆಮಿಕ್ ನಂತಹ ವಿಶ್ವವ್ಯಾಪೀ ಸಮಸ್ಯೆಗಳು ಎದುರಾದಾಗ ತಮ್ಮನ್ನು ಮಿಕ್ಕ, ಸ್ಥಳೀಯರು, ಬಹುಸಂಖ್ಯಾತರು ಅವರನ್ನು ದೌರ್ಜನ್ಯಕ್ಕೆ ಒಳಪಡಿಸಿ ಮೂಲೆಗುಂಪಾಗಿಸುತ್ತಾರೆಂಬ ಅಳುಕು ಅವರಲ್ಲಿ ತುಂಬಿರುತ್ತದೆ. ಪರ ರಾಜ್ಯಗಳಲ್ಲಿ ಅಥವಾ ಪರ ಊರುಗಳಲ್ಲಿ ನೆಲೆಸಿದವರಿಗೂ ಇವೇ ಆತಂಕಗಳಿರುತ್ತವೆ. ಎಲ್ಲ ಬಗೆಯ ಸಂಚಾರ ವ್ಯವಸ್ಥೆಗಳು ನಿಂತೇ ಹೋದಾಗ ಈ ಆತಂಕ ಮತ್ತೂ ಹೆಚ್ಚಾಗುತ್ತದೆ. ಗೊತ್ತಿರುವ ಜಾಗ, ಜನರು, ತಮ್ಮದೇ ಮನೆಗಳಿಗೆ ತಲುಪಿದರೆ ಸಾಕು ಎನ್ನುವ ಅವರ ಮನಸ್ಥಿತಿ ಇತ್ತೀಚೆಗೆ ಎಲ್ಲ ವೈರುದ್ಯಗಳ ನಡುವೆಯೂ ಸಂಭವಿಸಿದ ಭಾರತದ ಮಹಾ ವಲಸೆಯಂತಹ ಘಟನೆಗಳಿಗೆ ಕಾರಣವಾಗುತ್ತದೆ.ಇಂತಹ ಸಮಯದಲ್ಲಿ ಅವರಿಗೆ ಇತರರಿಗಿಂತ ಒಂದು ಪಟ್ಟು ಹೆಚ್ಚೇ ಭರವಸೆಯನ್ನು ನೀಡಬೇಕಾಗುತ್ತದೆ.
ಅವರಿಗೆ ಅತ್ಯಗತ್ಯವಾಗಿ ಬೇಕಾದ ಊಟ, ತಿಂಡಿ, ವಸತಿ, ಶೌಚ ಇತ್ಯಾದಿಗಳನ್ನು ಕಲ್ಪಿಸುವ ಅವಶ್ಯಕತೆಗಳ ಜೊತೆಗೆ ಅವರ ಮೂಲಭೂತ ಸ್ವಾತಂತ್ರ್ಯಗಳೇ ತುಂಡರಿಸಿದ ಭಾವನೆಗಳನ್ನು ನಿವಾರಿಸಿ ವಿಶ್ವಾಸ ತುಂಬಬೇಕಾಗುತ್ತದೆ. ಅವರ ಬುದ್ದಿವಂತಿಕೆಯನ್ನು ಪ್ರಶ್ನಿಸದೆ, ಟೀಕಿಸದೆ ಅವರದೇ ಆದ ನಂಬಿಕೆ, ಧರ್ಮ ಆಚರಣೆಗಳಿಗೂ ನಮ್ಮದೇ ಆಚರಣೆ ಮತ್ತು ನಂಬಿಕೆಗಳಿಗೆ ನೀಡುವಷ್ಟೇ ಗೌರವವನ್ನು ತೋರಿಸುವುದು ಅತ್ಯಗತ್ಯವಾಗುತ್ತದೆ.
ನಾಗರಿಕ ಪ್ರಪಂಚದಲ್ಲಿ ಈ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಲಾಗುತ್ತದೆ. ಉದಾಹರಣೆಗೆ ಯಹೂದಿಯೊಬ್ಬ ಇಂಗ್ಲೆಂಡಿನ ಆಸ್ಪತ್ರೆಯ ವಾರ್ಡಿನಲ್ಲಿ ಕೋವಿಡ್ ನಿಂದ ಸಾಯುತ್ತಿದ್ದು, ತನ್ನ ಧರ್ಮದ ಪ್ರಕಾರ ಬದುಕಿನ ಕೊನೆಯ ಪ್ರಾರ್ಥನೆ ಸಲ್ಲಿಸಬೇಕೆಂದು ಇಚ್ಚಿಸಿದಲ್ಲಿ ಆಸ್ಪತ್ರೆಯವರು ಸಾಯುವವನ ಜೀವದ ಘನತೆಗೆ ಬೆಲೆ ಕೊಡುತ್ತಾರೆ. ಆತ ಸಾಯುವ ಮುನ್ನ ತನ್ನ ನಂಬಿಕೆ, ಧರ್ಮದ ಪ್ರಕಾರ ಕೊನೆಯ ಪ್ರಾರ್ಥನೆಯನ್ನು ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ. ಹಿಂದೂ, ಮುಸ್ಲಿಂ, ಯಹೂದಿ, ಸಿಕ್ಕರು, ಕ್ರಿಶ್ಚಿಯನ್ನರ ಪ್ರಕಾರವೇ ಅವರ ಅಂತಿಮ ಪ್ರಾರ್ಥನೆ ಮತ್ತು ಯಾತ್ರೆಗಳು ನಡೆದಿದೆ. ಇದರಿಂದ ಬದುಕುಳಿದ ಅವರ ಕುಟುಂಬಗಳಿಗೆ ಸಾವನ್ನು ನೆಮ್ಮದಿಯಾಗಿ ಒಪ್ಪಿಕೊಳ್ಳಲು ನೆರವಾಗಿದೆ.ಮಾನಸಿಕ ಆಘಾತಗಳು, ಬರೆಗಳು, ಘರ್ಷಣೆಗಳು ಕಡಿಮೆಯಾಗಿವೆ.
ಒಬ್ಬ ವಲಸಿಗ, ಅಲ್ಪ ಸಂಖ್ಯಾತ, ಹಿಂದೂ ಧರ್ಮದವಳಾಗಿ ವಿದೇಶದ ಈ ಪ್ರಪಂಚದಲ್ಲಿ ಬದುಕುವ ನನ್ನಂತವರಿಗೆ ಇದು ಅತ್ಯಂತ ಮಾನವೀಯ ವಿಚಾರವಾಗಿ ಕಂಡರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ.ಇಲ್ಲಿ ಕುಳಿತು ನೋಡುವ ನನ್ನ ಕಣ್ಣುಗಳಿಗೆ ಈ ಪ್ಯಾಂಡೆಮಿಕ್ ನ ಸಮಯದಲ್ಲಿಯೂ ಧಾರ್ಮಿಕ ನಂಬಿಕೆಗಳ ಹೆಸರಲ್ಲಿ ಭಾರತದಲ್ಲಿ ನಡೆದ ಕೆಲವುಅನಗತ್ಯ ದಾಳಿಗಳು ಅಮಾನವೀಯವೆನಿಸುತ್ತದೆ. ಅವುಗಳು ಮುರಿದಿರುವ ಹಲವು ನಂಬಿಕೆಯ ಸೇತುವೆಗಳುಮಾನಸಿಕವಾಗಿ ಆಳ ಅಂತರವನ್ನು ಸೃಷ್ಟಿಸುವ ಬಗ್ಗೆ ಖೇದವೆನಿಸುತ್ತದೆ. ಆದರೆ ಜಾತಿ,ಧರ್ಮ, ಇನ್ನಿತರ ಭೇದಗಳನ್ನು ನೋಡದೆ ಎಲ್ಲರ ಹಿತಕ್ಕಾಗಿ ದುಡಿದ, ದಾನಮಾಡಿದ, ಶ್ರಮಪಟ್ಟ ಅಸಂಖ್ಯಾತ ದೊಡ್ಡ ಮನಸ್ಸಿನ ನಾಗರಿಕರನ್ನು ಭಾರತವೂ ಸೇರಿದಂತೆ ಎಲ್ಲ ದೇಶಗಳಲ್ಲಿ ನೋಡುವಾಗ ಮನುಷ್ಯನ ಮಾನಸಿಕ ಪ್ರಪಂಚದ ಸ್ವಾಸ್ಥ್ಯ ರಾಜಕೀಯವನ್ನು,ಧಾರ್ಮಿಕತೆಯನ್ನು ಮೀರಿದ ಉದಾತ್ತ ಗುಣದಿಂದ ತುಂಬಿರುವುದರ ಅರಿವಾಗಿ ಹಿತವೆನ್ನಿಸುತ್ತದೆ.
ಮಾನಸಿಕ ಸಹಾಯ ಬೇಕಿರುವುದು ಬರೇ ಸಂತ್ರಸ್ತರಿಗೆ ಮಾತ್ರವಲ್ಲ. ಖಿನ್ನತೆ, ಬುದ್ದಿ ಮಾಂದ್ಯತೆ, ಅಂಗವಿಕಲತೆ, ವೃದ್ಧಪ್ಯ, ಅನಾಥರು, ಒಬ್ಬಂಟಿ ಪೋಷಕರಿಗೆ ಎಲ್ಲರಿಗೂ ಬೇಕು. ಜೊತೆಗೆ ಕೋವಿಡ್ ಸಮಸ್ಯೆಯನ್ನು ಮಿತಗೊಳಿಸಲು ಶ್ರಮಿಸುತ್ತಿರುವ ವೈದ್ಯರಿಗೆ, ದಾದಿಯರಿಗೆ, ಪೊಲೀಸರಿಗೆ,ಅಸಂಖ್ಯಾತ ಶವಗಳನ್ನು ಹೂಳುತ್ತಿರುವವರಿಗೆ, ಮೂಲಭೂತ ಅಗತ್ಯಗಳನ್ನು ಪೂರೈಸುತ್ತಿರುವವರಿಗೂಬೇಕು.
ಈ ಕಂಟಕದ ಸಮಯದಲ್ಲಿ ಬದುಕುಳಿಯುವ ತಲೆಮಾರುಗಳಲ್ಲಿ ಹಲವು ಬಗೆಯ ಮಾನಸಿಕ ಕಲೆಗಳು ಸಾಯುವವರೆಗೆ ಉಳಿಯುತ್ತವೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಪ್ರತಿಯೊಬ್ಬರೂ ಇನ್ನೊಬ್ಬರ ಒಂಟಿತನಕ್ಕೋ, ಸಂಕಟಗಳಿಗೋ, ಮಾನಸಿಕವಾಗಿ ಸಹಾಯಮಾಡುತ್ತ ಬೆಂಬಲವಾಗಿ ನಿಲ್ಲುವ ಅವಕಾಶವನ್ನಂತೂ ಕಾಣುತ್ತಿದ್ದೇವೆ. ಅವನ್ನು ಉಪಯೋಗಿಸಿಕೊಂಡು ಕೋವಿಡ್ ನಿಂದಷ್ಟೇ ಅಲ್ಲದೆ ಅದರಿಂದ ಉಂಟಾಗುವ ಹಲವು ಮಾನಸಿಕ ಹೊಡೆತಗಳಿಂದ ಬಳಲುವ ದುರ್ಬಲ ಜೀವಗಳನ್ನು ರಕ್ಷಿಸುವ ಹೊಣೆ ಎಲ್ಲ ದೇಶದ ಸರ್ಕಾರಗಳು, ಆರೋಗ್ಯ ಸಂಸ್ಥೆಗಳು ಮತ್ತು ಜನಸಾಮಾನ್ಯರಾದ ನಮ್ಮ ಮೇಲಿದೆ. ಕೋವಿಡ್ ನಿಧಾನಗೊಂಡ ನಂತರವೂ ಆ ಹೊಣೆಭಿನ್ನ ರೂಪಗಳಲ್ಲಿ ಇನ್ನೂ ಬಹುಕಾಲ ಮುಂದುವರೆಯಬೇಕಿದೆ.
ಚಿತ್ರ ಕೃಪೆ : Lisa Fotios from Pexels
ಪ್ರೇಮಲತಾ ಅವರ ಅಂಕಣ ಬರಹಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ.
ಕೊರೊನಾ ಕಾಲದ ಸಂಕಟ ಮತ್ತು ವಾಸ್ತವಕ್ಕೆ ಕನ್ನಡಿ ಹಿಡಿದಿದ್ದೀರಿ
ಧನ್ಯವಾದಗಳು.
ಬರಹ ಓದಿದಾಗ ಹಲವಾರು ವಿಚಾರ ತಿಳಿಯುತ್ತದೆ. ಏನೇ ಸಮಾಧಾನ ಮಾಡಿಕೊಂಡರು ಹೊಣೆಗಾರಿಕೆ ಇರುವಾಗ ಇಂತಾದು ಉಂಟಾಗುತ್ತದೆ
ಹೌದು ಕನಕ ಅವರೇ. ಇದು ಯಾರೂ ಕಂಡರಿಯದ ಪರಿಸ್ಥಿತಿ. ನಮ್ಮ ಕಳವಳ, ಸ್ಪಂದನೆಗಳು ಸಹಜವೇ ಅಲ್ಲವೇ ಎನ್ನುವ ನಮಗೆ ವಿಶ್ವಾಸ ಬೇಕು. ಅದರಂತೆಯೇ ಇನ್ನೊಬ್ಬರ ಆತಂಕ , ಒಂಟಿತನಗಳು ಹೇಗೆ ವ್ಯಕ್ತ ಮಾಡುತ್ತಾರೆ ಎಂದು ತಿಳಿದಿರಬೇಕು. ಯಾಕೆಂದರೆ ತಮಗೆ ಈ ರೀತಿಯ ಮಾನಸಿಕತೆ ಕಾಡುತ್ತಿರಬಹುದು ಎಂಬುದು ಅವರಿಗೇ ತಿಳಿದಿರುವುದಿಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ನಾವೆಲ್ಲ ಒಟ್ಟಾರೆ ಈ ಸಮಸ್ಯೆಯಿಂದ ಹೊರಬರಬೇಕು ಎನ್ನುವ ಸಮುದಾಯ ಭಾವ ಬೇಕು. ಆ ಭರವಸೆ ಮಾತ್ರವೇ ನಮ್ಮನ್ನು ಕಾಪಾಡಬಲ್ಲದು.
ಹೌದು ನೀವು ಹೇಳೋದು ನಿಜ. ನಮ್ಮಲಿ ಬಹುತೇಕರಿಗೆ ಮಾನಸಿಕತೆ ಇರೋದು ತಿಳಿಯೋದೇ ಇಲ್ಲ ಕಾರಣ ಈ ಖಿನ್ನತೆ ಬಗೆ ಭಾರತ ದೇಶದಲಿ ಬೇರೇನೆ ಭಾವನೆ ಇದೆ. ಅದರ ವಿಚಾರವಾಗಿ ಜನರಿಗೆ ತಿಳುವಳಿಕೆ ಬೇಕು.
ಅರ್ಥೈಸಿ ಮನಮುಟ್ಟುವಂತೆ ಬರೆವ ಶಕ್ತಿ ಒದಗಿಬಂದಿದೆ. ಬರವಣಿಗೆ ಮುಂದುವರೆಸಿ.