ಕೋವಿಡ್ 19 ರ ಈ ದಿನಗಳಲ್ಲಿ ಎಲ್ಲಾ ವ್ಯವಹಾರಗಳು ಸೊರಗಿ ಹೋಗುತ್ತಿವೆ. ವೃತ್ತಿಗಳಾಗಲಿ, ವೃತ್ತಿಪರರಾಗಲಿ, ದಿನನಿತ್ಯದ ಕಾರ್ಯಸ್ಥರಾಗಲಿ ಎಲ್ಲರೂ ತೊಂದರಗೊಳಪಟ್ಟಿರುವುದು ಜಗಜ್ಜಾಹಿರವಾದ ಅಂಶ. ಈ ಸಂದರ್ಭದಲ್ಲಿ ಎಲ್ಲಾ ವರ್ಗದ ಜನರಿಗೂ ಸುಲಭವಾಗಿ ಲಭ್ಯವಿರುವ ವಲಯ ಎಂದರೆ ʼ ಷೇರುಪೇಟೆ.
ಷೇರುಪೇಟೆಯ ಬಗ್ಗೆ ಜನಸಾಮಾನ್ಯರಲ್ಲಿ ಒಂದು ರೀತಿಯ ಅಸ್ಪರ್ಷತಾ ಭಾವನೆ ಹಾಗೂ ಭಯ. ಇದಕ್ಕೆ ಮುಖ್ಯ ಕಾರಣ ಷೇರುಪೇಟೆಯ ಪ್ರಮುಖ ಗುಣ ಊಹೆಗೂ, ಕಲ್ಪನೆಗೂ ಸಿಗದಿರುವುದಾಗಿದೆ. ಷೇರುಪೇಟೆ ಚಟುವಟಿಕೆಯಲ್ಲಿ ಯಶಸ್ಸು ಕಾಣಬೇಕಾದರೆ ಕಲ್ಪನಾ ಲೋಕದ ವಿಶ್ಲೇಷಣೆಗಳಿಂದ ಹೊರಬಂದು ಗುಣಮಟ್ಟದ ಕಂಪನಿಗಳ ಬೆಲೆ ಕುಸಿತದಲ್ಲಿದ್ದಾಗ ಅವುಗಳ ಅರ್ಹತೆಯಾಧಾರಿತಗಳನ್ನು ಮಾಪನ ಮಾಡಿ ಹೂಡಿಕೆಗೆ ಆಯ್ಕೆ ಮಾಡಿಕೊಂಡಲ್ಲಿ ಅಪಾಯದ ಮಟ್ಟವನ್ನು ಮಿತಗೊಳಿಸುತ್ತದೆ.
ಈ ವಲಯದ ಮತ್ತೊಂದು ವಿಶಿಷ್ಟತೆ ಎಂದರೆ ಇಲ್ಲಿ ಬಿದ್ದವರಿಗೊಂದು ಕಲ್ಲು- ಗೆದ್ದವರಿಗೊಂದು ಹಾರ ಎಂಬಂತೆ ಒಂದು ಉತ್ತಮ ಕಂಪನಿ ಷೇರಿನ ಬೆಲೆ ಕುಸಿತದಲ್ಲಿದ್ದಾಗ ವಿವಿಧ ರೀತಿಯ ನಕಾರಾತ್ಮಕ ಚಿಂತನೆಗಳು ವಿಜೃಂಭಿಸುತ್ತವೆ. ಅದೇ ಪೇಟೆ ಏರಿಕೆಯಲ್ಲಿದ್ದಾಗ ಕೊಳ್ಳುವ ಕಾತುರ ಹೆಚ್ಚು. ಇದಕ್ಕೆ ಹಲವಾರು ವಿಶ್ಲೇಷಣೆಗಳು ಪೂರಕ ಪಾತ್ರ ವಹಿಸುತ್ತವೆ. ಈ ರೀತಿಯ ಚಿಂತನೆಗಳಿಂದ ಹೊರಬಂದು ವಿಶ್ಲೇಷಣೆಗಳನ್ನು ಅರ್ಹತೆಯಾಧಾರದ ಮೇಲೆ ನಿರ್ಧರಿಸುವ ಗುಣ ಬೆಳೆಸಿಕೊಂಡಲ್ಲಿ ಷೇರುಪೇಟೆ ಒದಗಿಸುತ್ತದೆ ಸಂಪತ್ತಿನ ಮೂಟೆ.
ಇತ್ತೀಚೆಗೆ ಕೆಳಮಧ್ಯಮ ಷೇರುಗಳು ಗರಿಷ್ಟಮಟ್ಟದ ಅವರಣ ಮಿತಿ ತಲುಪಿ ಹೂಡಿಕೆದಾರರನ್ನು ಆಕರ್ಷಿಸಿ, ಪ್ರೇರೇಪಿಸುವ ಕಾರ್ಯ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ ಎಂಬ ಭಾವನೆ ಮೂಡಿಸುತ್ತದೆ. ಇಂತಹ ಬೆಳವಣಿಗೆಗಳಿಗೆ ಒಲವು ತೋರದೆ ಮಾನಸಿಕ ಚಿಂತನೆಗಳಿಗೆ ಅವಕಾಶ ನೀಡಿ, ಅರ್ಹತೆಯಾಧಾರಿತ, ಸರಿ-ತಪ್ಪುಗಳನ್ನು ನಿರ್ಧರಿಸುವ ಗುಣ ಬೆಳೆಸಿಕೊಳ್ಳುವುದು ಯಶಸ್ಸಿನ ಸಮೀಪಕ್ಕೆ ತಲುಪಿಸುತ್ತದೆ.
ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್ ಕಂಪನಿ ಷೇರುಗಳಲ್ಲಿ ವಹಿವಾಟು ನಡೆಸುವಾಗ ಕಂಪನಿಗಳ ಘನತೆ, ಗುಣ ಮಟ್ಟಕ್ಕೆ ಹೆಚ್ಚಿನ ಆದ್ಯತೆ ಅಗತ್ಯ. ವಿವಿಧ ಕಾರಣಗಳಿಂದ ಪ್ರೇರಣೆಪಡೆದು ಗರಿಷ್ಠ ಆವರಣ ಮಿತಿ ತಲುಪಿದ ರಿಲಯನ್ಸ್ ಇನ್ ಫ್ರಾ, ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಹೋಂ , ಸಿಂಟೆಕ್ಸ್, ಬಾಂಬೆ ರೆಯಾನ್ ನಂತಹ ಕಂಪನಿಗಳ ಬಗ್ಗೆ ಗಮನಿಸುವುದರ ಜೊತೆಗೆ ಸಾಧನೆ ಮಾಡುತ್ತಿರುವ ಸ್ಮಾಲ್ ಕ್ಯಾಪ್ ಕಂಪೆನಿಗಳ ಬಗ್ಗೆಯೂ ಗಮನಿಸಬಹುದು.
ಉದಾಹರಣೆಗೆ ಕ್ಲಾರಿಯಂಟ್ ಕೆಮಿಕಲ್ಸ್ ಲಿಮಿಟೆಡ್ ಕಂಪನಿ. ಇದು 1958 ರಿಂದ ಲೀಸ್ಟಿಂಗ್ ಆಗಿರುವ ಕಂಪನಿ. ಸ್ಪೆಷಾಲಿಟಿ ಕೆಮಿಕಲ್ಸ್ ವಲಯದಲ್ಲಿದೆ. ಇದು ಆಕರ್ಷಕ ಡಿವಿಡೆಂಡ್ ಜೊತೆಗೆ ಆಂತರಿಕವಾಗಿಯೂ ಉತ್ತಮ ಸಾಧನೆ ಪ್ರದರ್ಶಿಸುತ್ತಿದೆ. ಇದು ಮಾರ್ಚ್ ಅಂತ್ಯದ ವರ್ಷದಲ್ಲಿ ರೂ.11 ರ ಡಿವಿಡೆಂಡ್ ಪ್ರಕಟಿಸಿದೆ. ಇದಕ್ಕೆ ಆಗಸ್ಟ್ 10 ನಿಗದಿತ ದಿನವಾಗಿದೆ. ಈ ಮಧ್ಯೆ ಈ ಕಂಪನಿ ಷೇರು ಬುಧವಾರದಂದು ಒಂದೇ ದಿನ 65 ರಷ್ಟು ಏರಿಕೆ ಕಂಡಿದೆ. ಒಂದು ವಾರದಲ್ಲಿ ರೂ.107 ಕ್ಕೂ ಹೆಚ್ಚಿನ ಏರಿಕೆ ಪಡೆರುವ ಈ ಷೇರು ಒಂದು ತಿಂಗಳಲ್ಲಿ ರೂ.136 ರಷ್ಟು ಏರಿಕೆ ಕಂಡಿದೆ.
ಮಾರ್ಚ್ ನ ಕುಸಿತದ ಸಮಯದಲ್ಲಿ ರೂ.192 ರ ಸಮೀಪಕ್ಕೆ ಕುಸಿದಿದ್ದ ಈ ಷೇರಿನ ಬೆಲೆ ನಿನ್ನೆ ರೂ.477 ಕ್ಕೆ ಜಿಗಿತ ಕಂಡಿತ್ತು. ಆ ಜಿಗಿತ ಇಂದೂ ಮುಂದುವರೆದು 495 ತಲುಪಿ ಮತ್ತೆ 477 ರ ಆಸು ಪಾಸಿಗೆ ಇಳಿದಿದೆ. ಇದು ಕಂಪನಿಯ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ. ಇದೇ 4 ರಂದು ಸ್ಪೆಷಲ್ ಡಿವಿಡೆಂಡ್ ಘೋಷಿಸಲು ಆಡಳಿತ ಮಂಡಳಿ ಸಭೆಯು ಪರಿಶೀಲಿಸಲಿದೆ ಎಂಬ ಸುದ್ದಿ ಈ ದಿಢೀರ್ ಏರಿಕೆಗೆ ಕಾರಣವಾಯಿತು.
Value pick – profit book ಸೂತ್ರದಿಂದ ಘನತೆಯುಳ್ಳ ಕಂಪನಿಗಳನ್ನೇ ಹೂಡಿಕೆಗೆ ಆಯ್ಕೆ ಮಾಡಿಕೊಂಡಲ್ಲಿ ಮಾತ್ರ ಹೂಡಿಕೆ ಮಾಡಿದ ಬಂಡವಾಳ ಸ್ವಲ್ಪ ಮಟ್ಟಿನ ಸುರಕ್ಷತೆ ಕಾಣಲು ಸಾಧ್ಯ.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.
Mr. K G Krupal advice is to the point. For value pick it is as difficult as finding Needle in a Haystack. Two to three stocks mentioned are worth looking into. In this uncertain time it is better to postpone the investment decision. Good article from seasoned expert.