21.4 C
Karnataka
Thursday, November 21, 2024

    ಐಸ್ ನ ಜೊತೆ ಒಂದು ಬಾಂಧವ್ಯ ಇತ್ತು, ಬೆಸುಗೆ ಇತ್ತು, ಜೊತೆಗೆ ಬೇಸಿಗೆ ಇತ್ತು

    Must read

    ಬೀದಿಯಲ್ಲಿ ಐಸ್ ಐಸ್ ‌….. ಎಂಬ ಕೂಗೋ , ಗಂಟೆಯ ಶಬ್ದವೋ , ರಬ್ಬರ್ ಹಾರನ್ನೋ…. ಕಿವಿಗೆ ಬಿದ್ದರೆ ಸಾಕು ಮನೆಯಿಂದ ಹೊರಗೆ ಓಡಿ ಬರುತ್ತಿದ್ದೆವು. ಮೂರು ಗಾಲಿಯ ಮರದ ಗಾಡಿ ಅದರ ಮೇಲೆ ಮಗುವು ಐಸ್ ಕ್ಯಾಂಡಿ ತಿನ್ನುತ್ತಿರುವ ಚಿತ್ರ . ಮನೆಯವರ ಹತ್ತಿರ ಹಠ ಮಾಡಿ ಬೈಸಿಕೊಂಡು ಕಾಸು ಪಡೆದು ಗಾಡಿಯವನ ಹತ್ತಿರ ಹೋಗಿ ನಿಲ್ಲುತ್ತಿದ್ದೆವು. ಯಾವುದು ಅನ್ನೋ ಮಾತಿಲ್ಲ.ಎಷ್ಟರದ್ದು ಅಂತ ಕೇಳೋವ್ನು . ನಮಗೆ ಆ ಗಾಡಿಯ ಒಳಗಡೆ ನೋಡುವ ಆಸೆ ಆದರೆ ಎಟುಕುತ್ತಿರಲಿಲ್ಲ ಹತ್ತಿ ನೋಡುವಂತೆಯೂ ಇರಲಿಲ್ಲ.

    ಹಳದಿ ಕೆಂಪು ಬಿಳಿ ಹೀಗೆ ಬಣ್ಣ ಹೇಳಿದರೆ ಕೊಡುತ್ತಿದ್ದನು. ನಮ್ ಟೈಂ ಚೆನ್ನಾಗಿದ್ದು ಯಾರಾದ್ರು ದೊಡ್ಡವರು ನಮ್ಮನ್ನ ಎತ್ತಿಕೊಂಡು ಆ ಗಾಡಿಯ ಮರದ ಮುಚ್ಚಳ ಎತ್ತಿ ತೋರಿಸಿದರೆ ಪುಣ್ಯ. ಮ್ಯಾಂಗೊ , ಗ್ರೇಪು , ಶಾವಿಗೆ ಅದನ್ನೇ ನಾವು ಕೊಬ್ಬರಿ ಐಸ್ ಅಂತಿದ್ವಿ.ಒಟ್ನಲ್ಲಿ ಸ್ವರ್ಗವನ್ನೇ ಕಂಡ ಅನುಭವ. ಅದನ್ನ ತಗೊಂಡಿದ್ರೆ ಚೆನ್ನಾಗಿರೋದು ಅನ್ನೊ ಗೊಂದಲದಲ್ಲೇ ತಗೊಂಡಿರೋ ಐಸ್ ಕ್ಯಾಂಡಿಯನ್ನ ತಿಂತಿದ್ವಿ . ಬಾಯಿ ತುಟಿ ಎಲ್ಲಾ ಬಣ್ಣ ಆಗೋಗಿರೋದು .ತಿಂದಾದ್ಮೇಲೂ ಆ ಸಣ್ಣ ಬಿದರಿನ ಕಡ್ಡಿಯನ್ನ ಕಡ್ಕೊಂಡ್ ಇರ್ತಿದ್ವಿ .

    ತಿಂದಿದ್ದೇ ತಡ ಅದೆಲ್ಲಿರೋದೋ ನೆಗಡಿ ! ಮೂಗಿನ ತುದೀಲೇ ಕಾಯ್ತಿತ್ತೇನೋ ಅನ್ನೋ ಥರ ಬಂದ್ಬಿಡೋದು , ಮನೆಯಲ್ಲಿ ಸೊರಕ್ ಸೊರಕ್ ಅಂತ ಶಬ್ದ ಕೇಳಿದ್ ಕೂಡ್ಲೇ ಶುರುವಾಗೋದು ಬೈಗುಳ ‘ ಇನ್ನೊಂದ್ ಸಲ ಐಸ್ ಕ್ಯಾಂಡಿ ಅಂತ ಕೇಳು…ನಿನಗಿದೆ ‘ ಅಂತ ಧಮ್ಕಿ ಹಾಕೋವ್ರು .

    ಒಂದೆರಡು ದಿನಗಳ ನಂತರ ಬರೋದು ‘ ಐಸ್ ಕ್ರೀಂ ‘ ಗಾಡಿ ಅರ್ಧ ಸೈಕಲ್ಲು ಅದಕ್ಕೊಂದಿಕೊಂಡಂತೆಯೇ ಒಂದು ಸ್ಟ್ಯಾಂಡು, ಬಾಕ್ಸು ಎಲ್ಲಾ ಇರೋದು , ಆ ಸ್ಟ್ಯಾಂಡಿನಲ್ಲಿ ಕನಕಾಮ್ರ ಕಲರಿನ ವಿವಿಧ ಸೈಝಿನ ಬಿಸ್ಕತ್ತಿನಿಂದ ತಯಾರಿಸಿದ ಕೋನ್ ಗಳು , ಪಕ್ಕದಲ್ಲಿಯೇ ಬಿಳಿಯ ಕಾಗದದ ಕಪ್ಪುಗಳು . ಆ ಗಾಡಿಯವನ ಕೈಯಲ್ಲಿ ಯಕ್ಹಶ್ಚಿತ್ ಅನ್ನದ ಸೌಟೇ ಇರೋದು.ಅವನು ಬಗ್ಗಿ ಕೆರೆದು ಕೆರೆದು ಬಿಸ್ಕತ್ತಿನ ಕೋನಕ್ಕೆ ಐಸ್ ಕ್ರೀಂ ತುಂಬಿ ಅದರ ಮೇಲೆ ಪಪ್ಪಾಯಿನ ಕೆಂಪು ಕಣಗಳನ್ನು ಇಟ್ಟು ಅದಕ್ಕೊಂದು ಚಿಕ್ಕ ಬಿದಿರಿನ ಚಮಚ ಸಿಕ್ಕಿಸಿ ಕೊಡುತ್ತಿದ್ದ .

    ಅದನ್ನ ಕೈಯಲ್ಲಿ ಹಿಡಿಯುತ್ತಲೇ ನಮ್ಮ ಮನದಲ್ಲೊಂದು ಪ್ರೆಶ್ನೆ ಉದ್ಭವ. ಇದನ್ನ ಯಾವ ರೀತಿ ತಿನ್ನೋಣ ಅಂತ .ಕೋನ್ ಅನ್ನು ಕೆಳಗೆ ತೂತ ಮಾಡಿ ಅಲ್ಲಿಂದ ತಿನ್ನುವುದು , ಬಿಸ್ಕತ್ತನ್ನು ಸ್ವಲ್ಪ ಸ್ವಲ್ಪವೇ ಕಚ್ಚಿ ತಿನ್ನುವುದು . ಹೀಗೆ ಏನೇನೋ ಅವತಾರ ಮಾಡ್ಕೊಂಡು ಮನಸ್ಸಿನಿಂದ ಅನುಭವಿಸಿ ತಿಂದು ಮುಗುಸ್ತಾ ಇದ್ವಿ .

    ಇದರ ಮಧ್ಯೆ ಇನ್ನೊಂದು ಗಾಡಿ ಬರೋದು ಅದರಲ್ಲಿ ಐಸ್ ನೀರಿನ ಮಧ್ಯೆ ಚೌಕಾಕಾರದ ಉದ್ದನೆಯ ಅಲ್ಯೂಮಿನಿಯಂ ಅಚ್ಚುಗಳು ಅದರ ಮದ್ಯೆ ಕಡ್ಡಿ .ತೆಗೆದರೆ ಅದರಲ್ಲಿ ಕುಲ್ಫಿ, ಎಲ್ಲಾ ಒಂದೇ ಬಣ್ಣದ್ದಾಗಿದ್ರೂ , ಇದರಲ್ಲಿ ಕೋವ ಇರ್ತಿದಿದ್ದು ವಿಶೇಷ , ದುಡ್ಡು ಜಾಸ್ತಿ ಕೊಟ್ಟಂಗೆ ಕೋವಾ ಜಾಸ್ತಿ ಇರೋ ಐಸು ಕೊಡೋವ್ನು .

    ಮತ್ತೊಂದು ಆಕರ್ಷಕವಾದ ಗಾಡಿ ಬರೋದು ಬಣ್ಣ ಬಣ್ಣದ ಶರಬತ್ತು ಬಾಟಲಿಗಳನ್ನು ಸುತ್ತಲೂ ಜೋಡಿಸಿಕೊಂಡು ಮದ್ಯೆ ಐಸ್ ಗಡ್ಡೆಯನ್ನೇ ಕೊಬ್ಬರಿಯಂತೆ ತುರಿದು ಅಲ್ಯೂಮಿನಿಯಂ ಅಚ್ಚಿಗೆ ಸುರಿದು ಕಡ್ಡಿ ಸಿಕ್ಕಿಸಿ ಅದಕ್ಕೆ ಮೂರು ಫ್ಲೇವರಿನ ಬಣ್ಣಗಳನ್ನು ಹಾಕಿ ಕೊಡುತ್ತಿದ್ದ. ತಿನ್ನೋದಕ್ಕಿಂತಲೂ ನೋಡೋದಕ್ಕೇ ಸಕ್ಕತ್ತಾಗಿರೋದು .

    ಮನೆಯಲ್ಲಿ ಐಸ್ ಗಂತಲೇ ಹಠ ಉಪವಾಸ ಮಾಡುತ್ತಿದ್ದೆವು , ಬೈಸಿಕೊಳ್ಳುತ್ತಿದ್ದೆವು .ಐಸ್ ತಿಂದಿದ್ದಕ್ಕಿಂತಲೂ ಒದೆ ತಿಂದಿದ್ದೇ ಹೆಚ್ಚು .
    ಮನೆಗೆ ನೆಂಟರು ಬಂದಾಗ ಬೇಕಂತ್ಲೇ ಕೇಳುತ್ತಿದ್ದೆವು. ಅವರ ಮುಂದೆ ನಮ್ಮನೆಯವರು ಒಳಗೆ ಅಗಾಧವಾದ ಸಿಟ್ಟಿದ್ದರೂ ಮೇಲೆ ನಗುತ್ತಲೇ ತಗೋಳೋ ತಗೋ ಹೋಗು ಅಂತ ಕಾಸು ಕೊಡೋವ್ರು. ನೆಂಟರು ಹೊರಟ ಮೇಲೆ ಆ ಸಿಟ್ಟನ್ನ ಸೇಡು ಥರ ತೀರಿಸ್ಕೊಳೋವ್ರು .

    ಯಾವಾಗಲಾದರೂ ಮನೆಯವರೂ ನಮ್ಮ ಜೊತೆ ಐಸ್ ಕ್ರೀಂ ತಿನ್ನಲು ಗಾಡಿ ಬಳಿ ಬಂದ್ರೆ , ಸ್ಕೂಲಿನ ಹತ್ತಿರ ಟೀಚರ್ಗಳು ಅಪರುಪಕ್ಕೊಮ್ಮೆ ಸ್ಟ್ಯಾಫ್ ರೂಂಗೆ ಐಸ್ ಕ್ಯಾಂಡಿ ತರಿಸಿ ತಿಂದರೆ ನಮಗದೇನೋ ಆನಂದ . ನಮ್ಮ ರೋಲ್ ಮಾಡಲ್ಗಳು ಸಹ ಐಸ್ ಕ್ಯಾಂಡಿ ತಿಂತಾರೆ ಅನ್ನೋ ಫೀಲಿಂಗ್ ಆಗೋದು .

    ‘ಐಸು’…….ತಣ್ಣಗಿನ ಸಿಹಿಸ್ವರ್ಗ. ತಂಪಾದ ನವೊಲ್ಲಾಸ . ಸುಲಭಕ್ಕೆ ಸಿಗದ ಹಿಮಾಮೃತ.ಕನಸಲ್ಲೂ ಕಾಡುತ್ತಿದ್ದ ರಂಗಿನಗಡ್ಡೆ ….ಚಿಲ್ಲರೆ ಹಣ ಕೂಡಿಟ್ಟಿಕೊಂಡು ಕಾದಿದೀವಿ , ಓಡಿದೀವಿ , ಬಿದ್ದಿದೀವಿ , ಕಡಿಮೆ ಬೆಲೆಗೆ ಸಿಗುತ್ತೆ ಅಂತ ಐಸ್ಕ್ಯಾಂಡಿ ಫ್ಯಾಕ್ಟರಿ ಬಳಿ ಅಲೆದಿದೀವಿ . ತಿಂದ್ರೆ ಬೇಗ ಮುಗಿದೋಗುತ್ತೆ ಅಂತ ಸ್ಟೀಲ್ ಗ್ಲಾಸಿನಲ್ಲಿ ಹಾಕಿ ಅಲುಗಾಡಿಸುತ್ತಾ ಆ ಕರಗುವ ನೀರನ್ನು ನಾಲಿಗೆಗೆ ಸುರಿದುಕೊಂಡಿದ್ದೀವಿ .ರಚ್ಚೆ ಹಿಡಿದಿದೀವಿ ಹಾಸಿಗೆ ಹಿಡಿದಿದೀವಿ. ಗಂಟಲು ಕಟ್ಟಿಸಿಕೊಂಡಿದೀವಿ ಸೂಜಿ ಚುಚ್ಚಿಸಿಕೊಂಡಿದೀವಿ. ಬೈಸಿಕೊಂಡು, ಹೊಡೆಸಿಕೊಂಡು , ಕೊಡಿಸಿಕೊಂಡು , ಅದೆಷ್ಟೋ ಬಾರಿ ಕಣ್ಣೀರಿನಜೊತೆಯಲ್ಲೇ ಐಸ್ ಕ್ಯಾಂಡಿ ಮೆಕ್ಕಿದ್ದೇವೆ.

    ಏನೇ ಆದರೂ ಈಗ ಇದು ಬಹುದೊಡ್ಡ ಉದ್ಯಮವಾಗಿ ಬೆಳೆದಿದೆ , ನಮ್ಮಲ್ಲಿಗೆ ಅಂತರಾಷ್ಟ್ರೀಯ ಬ್ರಾಂಡ್ಗಳು ಲಗ್ಗೆ ಇಟ್ಟಿವೆ , ಐಷಾರಾಮಿ ಹವಾನಿಯಂತ್ರಿತ ಮಳಿಗೆಗಳು , ಪಾರ್ಲರ್ಗಳು ತಲೆಎತ್ತಿವೆ , ಎಲ್ಲಾ ರೀತಿಯ ತರಹೇವಾರಿ ಸ್ವಾದದ ಐಸ್ ಕ್ರೀಂಗಳು ದಿನದ ಯಾವುದೇ ಸಮಯದಲ್ಲೂ ಋತುವಿನ ಎಲ್ಲಾ ಕಾಲಗಳಲ್ಲೂ ಸಿಗುತ್ತಿವೆ .ಆರ್ಡರ್ ಮಾಡಿದರೆ ಮನೆಬಾಗಿಲಿಗೇ ತಲುಪಿಸುತ್ತಾರೆ . ಈಗಿನ ಮಕ್ಕಳಿಗೆ ಅದರ ಮೇಲೆ ಅಂತಹ ಆಸೆಯಾಗಲೀ ಪ್ರೀತಿಯಾಗಲಿ ಅಷ್ಟಾಗಿ ಕಾಣುವುದಿಲ್ಲ , ಅವರಿಗದು…..ದುಡ್ಡು ಕೊಟ್ರೆ ಸಿಗುತ್ತೆ ಅನ್ನೋ ತಿನಿಸು ಅಷ್ಟೇ !ಏನೇ ಆಗಲಿ ನಮ್ಮ ಬದುಕಲ್ಲಿ ತಣ್ಣಗೆ ಕರಗಿಹೋಗಿದ್ದು ಎರಡೇ ಒಂದು ಐಸ್ ಕ್ಯಾಂಡಿ ಮತ್ತೊಂದು ಬಾಲ್ಯ .

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ.ಹಲವಾರು ಕವಿತೆಗಳಿಗೆ ಇಲಸ್ಟ್ರೇಷನ್ ಮಾಡಿದ್ದಾರೆ. ಇಂಟಿರೀಯರ್ ಡಿಸೈನ್ ಮತ್ತು ಇದರ ಬಗ್ಗೆ ಕೆಲವು ಲೇಖನಗಳನ್ನು ಪತ್ರಿಕೆಗೆ ಬರೆದಿದ್ದಾರೆ. ಜೊತೆಗೆ ಕವಿತೆಗಳನ್ನು ಕೂಡ ಬರೆಯುತ್ತಾರೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಮಾಸ್ತಿ
    ಮಾಸ್ತಿhttps://kannadapress.com
    ಕನ್ನಡ ಚಿತ್ರರಂಗದಲ್ಲಿ ಪ್ರಸ್ತುತ ಬೇಡಿಕೆ ಇರುವ ಸಂಭಾಷಣೆಕಾರ ಮಾಸ್ತಿ ಮೂಲತಃ ಕೋಲಾರ ಜಿಲ್ಲೆಯವರು. ಸುಂಟರಗಾಳಿ ಚಿತ್ರದಿಂದ ಆರಂಭವಾದ ಇವರ ಸಿನಿಮಾ ಜರ್ನಿ ನಟ, ಸಹ ನಿರ್ದೇಶಕ, ಈಗ ಕಥೆಗಾರ, ಸಂಭಾಷಣೆಕಾರ ಮತ್ತು ಚಿತ್ರಕಥೆಗಾರರಾಗಿ ಮುಂದುವರೆದಿದೆ. ಟಗರು ಇವರ ವೃತ್ತಿ ಜೀವನದ ಮೈಲಿಗಲ್ಲು.
    spot_img

    More articles

    9 COMMENTS

    1. Mr.Masti takes ace after ace in the series of articles in this platform like a champion lawn tennis player Fedrer. It takes us back to our childhood and imagine that we are tasting ice cream now!. Hats off. Ms.Kirana matches Mr.Masti article depicting our memories and fond images. Fine article and art work by great author and artist.

    2. ಮಾಸ್ತಿಯವರ ಐಸ್ಕ್ರಿಂ ಬಗೆಗಿನ ಲೇಖನ ಓದಿ ನಾವು ಬಾಲ್ಯದಲ್ಲಿ ಅದಕ್ಕಾಗಿ ಹಂಬಲಿಸುತ್ತಿದ್ದ ದಿನಗಳ ನೆನಪಾಯಿತು . ಹಾಗೆಯೇ ಇಂದಿನ ಮಕ್ಕಳಿಗೆ ಅದರಲ್ಲೂ ಪೇಟೆಯ ಮಕ್ಕಳಿಗೆ ಅದರ ಅನುಭವವೆ ಇಲ್ಲ . ಕಿರಣ ಅವರ ಕಲಾಕ್ರುತಿ ಅಧ್ಭುತವಾಗಿದೆ.

    3. ಬಾಲ್ಯದ ಬೇಸಿಗೆ ದಿನದ ಐಸ್ ಕ್ರೀಮ್ ನೆನಪು ಮನಃಪಟಲದಲ್ಲಿ ಮತ್ತೆ ಸುಳಿದವು
      ಚೆಂದದ ಲೇಖನ

    4. ಬಾಲ್ಯದ ಆ ಸವಿನೆನಪುಗಳನ್ನು ಕಣ್ಣಿಗೆ ಕಟ್ಟುವ ಹಾಗೆ ಮೂಡಿಸಿರುವ ಈ ಬರಹಗಾರರಿಗೆ ಧನ್ಯವಾದಗಳು

    5. ಬಾಂಧವ್ಯ, ಬೆಸುಗೆ, ಮತ್ತು ಬೇಸಿಗೆಗಳ ಸಂಗಮ ಈ ಲೇಖನ.

    LEAVE A REPLY

    Please enter your comment!
    Please enter your name here

    Latest article

    error: Content is protected !!