26.8 C
Karnataka
Sunday, September 22, 2024

    ನಮ್ಮ ಸೋಲಿಗೆ ನಮ್ಮ ಮನಸ್ಥಿತಿಯೇ ಕಾರಣ

    Must read

    ಎಲ್ಲ ಸಂದರ್ಭಗಳಲ್ಲೂ ಆ ಕ್ಷಣದಿಂದ ಬಚಾವಾಗುವುದೊಂದೇ ಜೀವನದ ಗುರಿಯಾಗಿರುತ್ತದೆ. ಕಷ್ಟದ ಸಂದರ್ಭಗಳಲ್ಲಿ ಕಷ್ಟದಿಂದ ಪಾರಾದರೆ ಸಾಕು ಎಂದುಕೊಂಡಿರುತ್ತೇವೆ. ಆದರೆ ಜೀವನ ಅಂದರೆ ಅಷ್ಟೇ ಅಲ್ಲ. ಒಂದು ಕ್ಷಣ ಆ ಘಟನೆಯಿಂದ ತಪ್ಪಿಸಿಕೊಳ್ಳುವುದು ಮಾತ್ರವಲ್ಲ, ಅದರೊಂದಿಗೆ ಆಂತರಿಕ ನೆಮ್ಮದಿಯ ಶೋಧವೂ ಇರಬೇಕು. ಆಂತರಿಕ ನೆಮ್ಮದಿ ಕಂಡುಕೊಂಡಾಗಲೇ ಶಾಶ್ವತ ಸುಖ ಅನುಭವಿಸುವುದಕ್ಕೆ ಸಾಧ್ಯ. ಆಂತರಿಕ ನೆಮ್ಮದಿ ಬೇರೆಲ್ಲೋ ಕಂಡುಕೊಳ್ಳುವುದಕ್ಕೆ ಸಾಧ್ಯ ಇಲ್ಲ. ನಮ್ಮ ಮನಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಂಡು, ಸಂದರ್ಭಗಳಿಗೆ ಪ್ರತಿಕ್ರಿಯಿಸುವ ಜಾಣ್ಮೆಯಿದ್ದರೆ ಮಾತ್ರ ಆಂತರಿಕ ಶಾಶ್ವತ ಶಾಂತಿಯನ್ನು ಕಂಡುಕೊಳ್ಳಬಹುದು.

    ಯಾವಾಗ ನಮ್ಮನ್ನು ನಾವು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತೇವೆಯೋ ಆಗ ನಾವು ವೈಫಲ್ಯತೆಯ ಹಾದಿಯಲ್ಲಿಯೇ ಸಾಗುತ್ತಿದ್ದೇವೆಯೇನೋ ಅಥವಾ ನಮಗಿಂತ ಮತ್ಯಾರೋ ಉತ್ತಮರಿದ್ದಾರೆ ಅನ್ನುವ ಬೇಸರ ಕಾಡುತ್ತದೆ. ಆಗ ನಮ್ಮ ವೈಫಲ್ಯತೆಗೆ ಪರಿಸ್ಥಿತಿಗಳು ಕಾರಣ ಎಂದುಕೊಳ್ಳುತ್ತೇವೆ. ಆದರೆ ಪರಿಸ್ಥಿತಿಗಳು ಸೋಲಿನ ಮೂಲವಲ್ಲ. ಅವು ನಮ್ಮ ಸೋಲಿಗೆ ಕಾರಣವಲ್ಲ, ನಮ್ಮ ಮನಸ್ಸು. ಯಾವುದೇ ಒಂದು ಸಂದರ್ಭದಲ್ಲಿ ನಾವು ಘಟನೆಗೆ ಯಾವ ರೀತಿ ಪ್ರತಿಕ್ರಿಯಿಸುತ್ತೇವೆ ಎಂಬುದು ಮುಖ್ಯ.

    ನಡವಳಿಕೆಗಳಿಂದಲೇ ನಿರ್ಧರಿತ

    ಗೆಲುವು ಅಥವಾ ಸೋಲು ಯಾವುದೇ ಆಗಿರಲಿ, ನಮ್ಮ ನಡವಳಿಕೆಗಳಿಂದಲೇ ಅದು ನಿರ್ಧರಿತವಾಗಿರುತ್ತವೆ. ಉದಾಹರಣೆಗೆ ಕ್ರೀಡಾ ಕ್ಷೇತ್ರದಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಲೇ ಇರುವ ಕ್ರೀಡಾ ಸಾಧಕರನ್ನು ಕಾಣಬಹುದು. ಕೆಲವೊಮ್ಮೆ ಅವರದೇ ಸಾಧನೆಯನ್ನು ಸ್ವತಃ ಅವರೇ ಮುರಿದು ಮುನ್ನುಗ್ಗುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ಅವರು ತಮ್ಮ ಹಿಂದಿನ ದಾಖಲೆಯನ್ನು ಸೋಲು ಎಂದುಕೊಳ್ಳುವುದಿಲ್ಲ. ಅದು ಅಭಿವೃದ್ಧಿ ಎಂದುಕೊಳ್ಳುತ್ತಾರೆ.

    ಜೀವನದಲ್ಲಿ ಎಲ್ಲವೂ ಇದೆ ಅಂದುಕೊಂಡಾಗ ಅಥವಾ ಕೊರತೆಗಳು ಇಲ್ಲದೇ ಹೋದಾಗ ಅವರಿಗೆ ಸೋಲು ಎಂಬುದು ಕಾಡುವುದಿಲ್ಲ. ಯಾವಾಗ ತಮ್ಮನ್ನು ತಾವು ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಾರೋ ಆಗ ತಾನು ಸೋಲಿನ ಟ್ರ್ಯಾಕ್‍ನಲ್ಲಿದ್ದೇನೇನೋ ಎಂದೆಣಿಸುವುದು. ಹೋಲಿಕೆ ಮಾಡಿಕೊಳ್ಳುವುದರ ಮೂಲಕ ತಮ್ಮನ್ನು ತಾವು ಅಭಿವೃದ್ಧಿಪಡಿಸಿಕೊಳ್ಳುವುದಕ್ಕೋಸ್ಕರ ಮಾಡಿಕೊಳ್ಳಬೇಕೇ ವಿನಾ ಅದು ತಮ್ಮ ಶಕ್ತಿಯನ್ನು ಕುಗ್ಗಿಸುವಂತಿರಬಾರದು. ತನ್ನನ್ನು ತಾನು ಬೆಳೆಸಿಕೊಳ್ಳುವುದು ಅಂದರೆ ಆಂತರಿಕ ಪರಿಪೂರ್ಣತೆಯನ್ನು ಕಂಡುಕೊಳ್ಳುವುದು. ಕೆಲವೊಮ್ಮೆ ನಮ್ಮ ಸೋಲಿಗೆ ಸಂದರ್ಭಗಳೇ ಕಾರಣ ಎಂದು ಗೊಣಗಿಕೊಳ್ಳುತ್ತೇವೆ.

    ನಿಜ ಹೇಳಬೇಕೆಂದರೆ ನಮ್ಮ ಸೋಲಿಗೆ ನಮ್ಮ ಮನಸ್ಥಿತಿಯೇ ಕಾರಣವಾಗಿರುತ್ತದೆ. ಸೋಲು ಎಂದುಕೊಂಡರೆ ಅದು ಸೋಲು, ಗೆಲುವು ಅಂದುಕೊಂಡರೆ ಅದು ಗೆಲುವು. ನಮ್ಮ ಮನಸ್ಥಿತಿಯೇ ಎಲ್ಲದಕ್ಕೂ ಕಾರಣ. ನಾವು ಸಕಾರಾತ್ಮಕವಾಗಿದ್ದರೆ ಸಕಾರಾತ್ಮಕ ಫಲಿತಾಂಶ ದೊರೆಯುತ್ತದೆ. ಇಲ್ಲವಾದರೆ ನಕಾರಾತ್ಮಕತೆಯ ಗೂಡಾಗುತ್ತದೆ. ಮನಸ್ಸೇ ಆಂತರಿಕ ಸ್ವರ್ಗವನ್ನು ಅಥವಾ ನಮ್ಮೊಳಗಿನ ನರಕವನ್ನು ಸೃಷ್ಟಿಸುವುದು.

    ಒಂದು ವಸ್ತುವನ್ನು ಹೇಗೆ ಬಳಸಿಕೊಳ್ಳಬಹುದು ಅಥವಾ ಬಳಸಿಕೊಳ್ಳುತ್ತೇವೆ ಅಥವಾ ಅದರಿಂದಾಗುವ ಫಲಿತಾಂಶ ಏನು ಎಂಬುದಕ್ಕೆ ಒಂದು ಉದಾಹರಣೆಯನ್ನೇ ಗಮನಿಸುವುದಾದರೆ, ಒಂದು ಹರಿತವಾದ ಕತ್ತಿಯನ್ನು ಯಾವ ರೀತಿ ಉಪಯೋಗಿಸಿಕೊಳ್ಳುತ್ತೇವೆ ಎಂಬುದು ನಮ್ಮ ಮನಸ್ಸಿನ ಆಲೋಚನಾ ಕ್ರಮದಲ್ಲಿದೆ. ಸರಿಯಾದ ಕ್ರಮದಲ್ಲಿ ಬಳಸಿದ್ದೇ ಆದಲ್ಲಿ ಅದರಿಂದ ಸದುಪಯೋಗವಾಗುವುದು, ಇಲ್ಲವೇ ತಪ್ಪಾಗಿ ಬಳಸಿಕೊಂಡರೆ ಅದರಿಂದ ದುಃಖ ದುಮ್ಮಾನ, ಪಶ್ಚಾತ್ತಾಪಗಳೇ ನಮ್ಮನ್ನಾವರಿಸಿಕೊಳ್ಳಬಹುದು. ಹಾಗಾಗಿ ಮನಸ್ಸನ್ನು ಸರಿಯಾದ ಕ್ರಮದಲ್ಲಿಯೇ ಬಳಸಿಕೊಳ್ಳಬೇಕು. ಸಂದರ್ಭವನ್ನು ಬಳಸಿಕೊಳ್ಳಬಹುದಾದ, ನಿರ್ಣಯಗಳನ್ನು ತೆಗೆದುಕೊಳ್ಳುವ ಆಯ್ಕೆಯೂ ನಮ್ಮ ಆಲೋಚನಾ ಕ್ರಮದಲ್ಲಿರುತ್ತದೆ.

    ಕೆಲವೊಂದು ಸಂದರ್ಭಗಳಲ್ಲಿ ಪ್ರಪಂಚವೇ ತಲೆಯ ಮೇಲೆ ಬಿದ್ದಂಥ ಘಟನೆಗಳು ನಡೆಯುವುದು ಸಹಜ. ಅದು ಜಗತ್ತಿನ ನಿಯಮ. ಆಗ ಅದನ್ನು ಮನಸ್ಸು ನೋವು, ಹತಾಶೆ, ಸಿಟ್ಟಿನಿಂದ ಸ್ವೀಕರಿಸಿದರೆ ಮನಸ್ಸು ಅಪವಿತ್ರಗೊಳ್ಳುವುದು. ಇಲ್ಲದ ನೋವು ಹತಾಶೆಗಳು ಕಾಣಿಸಿಕೊಳ್ಳುವುದು. ಇದು ದೈಹಿಕವಾಗಿ ಘಾಸಿಗೊಳಿಸದೇ ಇದ್ದರೂ ಮನಸ್ಸಿಗೆ ನೋವನ್ನುಂಟು ಮಾಡುವುದು ಸಹಜ. ಅಂದರೆ ಒಂದು ಸಂದರ್ಭವನ್ನು ಮನಸ್ಸು ಯಾವ ರೀತಿ ಸ್ವೀಕರಿಸುತ್ತದೆ ಎಂಬುದರ ಮೇಲೆ ಫಲಿತಾಂಶ ನಿರ್ಣಯವಾಗುತ್ತದೆ.

    ಕಲಿಕೆಯ ಜಾಣ್ಮೆ

    ಉದಾಹರಣೆಗೆ ಕಚೇರಿಯಲ್ಲಿ ಕೆಲಸ ಮಾಡುವಿರಾದರೆ ಬಾಸ್ ಬೈಯ್ದಾಗ ಅದನ್ನವರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದು ಬಹಳ ಮುಖ್ಯ. ಬಹಳ ಪಶ್ಚಾತ್ತಾಪದಿಂದ, ಹತಾಶೆಯಿಂದ ಸ್ವೀಕರಿಸಿದ್ದೇ ಆದರೆ ಅದರಿಂದ ಆಂತರಿಕ ಖುಷಿ ಇಲ್ಲವಾಗುವುದು. ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು. ಅದನ್ನು ಪ್ರೀತಿಯಿಂದ, ಖುಷಿಯಿಂದ ಸ್ವೀಕರಿಸಿದ್ದೇ ಆದರೆ, ಅದರಿಂದ ಕಲಿಯಬೇಕಾದ ಪಾಠವೂ ಇರುತ್ತದೆ. ಅಂತಹ ಮನಸ್ಥಿತಿಯನ್ನು ಕಲಿತುಕೊಳ್ಳದೇ ಹೋದರೆ ಬದುಕಿನಲ್ಲಿ ಕಲಿಕೆಯ ಜಾಣ್ಮೆಯನ್ನು ಕಲಿತುಕೊಳ್ಳುವುದಕ್ಕೆ ಸಾಧ್ಯ ಇಲ್ಲ. ಇಂತಹ ಘಟನೆಗಳು ಜೀವನದಲ್ಲಿ ಸಾಕಷ್ಟು ಬರುತ್ತವೆ. ಅವುಗಳನ್ನು ಸ್ವೀಕರಿಸುವ ಮನೋಭಾವದಲ್ಲಡಗಿದೆ ಆಂತರಿಕ ನೆಮ್ಮದಿ,

    ಚಿತ್ರ ಸೌಜನ್ಯ :Pexels

    ಶ್ರೀದೇವಿ ಅಂಬೆಕಲ್ಲು
    ಶ್ರೀದೇವಿ ಅಂಬೆಕಲ್ಲು
    ಶ್ರೀದೇವಿ ಅಂಬೆಕಲ್ಲು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ. ಪದವಿ ಪಡೆದಿದ್ದು ಉಜಿರೆಯ ಶ್ರೀ ಧರ್ಮಸ್ಥಳ ಮಂಜನಾಥೇಶ್ವರ ಕಾಲೇಜಿನಲ್ಲಿ. ಪತ್ರಿಕೋದ್ಯಮ ಪದವಿ ಮಂಗಳೂರು ವಿವಿ. ಆಸಕ್ತಿದಾಯಕ ಓದು ಇವರ ಬರವಣಿಗೆಯ ವಿಶೇಷ.
    spot_img

    More articles

    5 COMMENTS

    1. ನಮ್ಮದೇ ದಾಖಲೆಯನ್ನು ನಾವೇ ಮುರಿಯುವುದನು ಸೋಲು ಅಂದುಕೊಳ್ಳುವುದಿಲ್ಲ. ಉತ್ತಮ ಬರಹ

    2. ಈ ನಿಮ್ಮ ಲೇಖನ. ಪ್ರತಿಯೊಬ್ಬರ ಬಾಳಿನಲ್ಲಿ ಬಂದಿರುವ. ಮತ್ತೆ ಯಾವಾಗ ಬೇಕಾದರೂ ಬರಬಹುದು. ನೀವು ಹೇಳಿದ ಹಾಗೆ. ನಾವು ಯಾವತ್ತೂ. ನಮ್ಮನ್ನು ಬೇರೆಯವರಿಗೆ ಹೋಲಿಸಲೇ ಬಾರದು. ನಮ್ಮ ಜೀವನ ನಮ್ಮದು.ಅವರ ಜೀವನ ಅವರದ್ದು. ನಾವು ಬಯಸಿದ್ದು ಸಿಗದೇ ಹೋದಾಗ ಬರುವ ಕೋಪ ನಿರಾಸೆ. ನಮ್ಮನ್ನು. ಕಾಡಿ. ಅದು ಕಾಲ ಕ್ರಮೇಣ. ಮನೋರೋಗದ ಸುಳಿಗೆ ಸಿಗಿಸುತ್ತದೆ. ಅದರಿಂದ ಹೊರ ಬರಲು ತುಂಬಾ ಶ್ರಮ ಪಡಬೇಕು. ಅದರಿಂದ ನಮ್ಮ ಮನಸಿನ ಮಾಲೀಕರು ನಾವು. ಆಲೋಚಿಸಿ ನಿರ್ಣಯ ತೆಗೆದುಕೊಂಡರೆ. ಉತ್ತಮ. ಧನ್ಯವಾದಗಳು. ಮೇಡಂ.

    3. ದೃಷ್ಟಿಯಂತೆ ಸೃಷ್ಟಿ –
      ಒಬ್ಬ ವ್ಯಕ್ತಿಇದ್ದ. ಆತನಿಗೆ ಇಬ್ಬರು ಮಕ್ಕಳು. ಒಬ್ಬ ಸಾದು ಮತ್ತೊಬ್ಬ ಮಹಾ ಕುಡುಕ. ಇಬ್ಬರು ಮಕ್ಕಳಲ್ಲಿನ ಈ ಗುಣ ನೋಡಿ ಬೇರೆ ವ್ಯಕ್ತಿ ಆ ಮಕ್ಕಳನ್ನು ಮಾಡನಾಡಿಸಿದ. ಅದಕ್ಕೆ ಕುಡುಕ ಮಗ ಉತ್ತರಿಸಿದ ಏನಂದರೆ, ನನ್ನ ಅಪ್ಪ ಕುಡುಕ ಹಾಗಾಗಿ ನಾನು ಕುಡಿಯುತ್ತೇನೆ ಎಂದ. ಇದೆ ಪ್ರಶ್ನೆ ಯನ್ನು ಇನ್ನೊಬ್ಬ ಮಗನಿಗೆ ಕೇಳಿದಾಗ, ಹೌದು ನನ್ನ ಅಪ್ಪ ಕುಡುಕ ಆದರೆ ನಾನು ಅಪ್ಪನಂತೆ ಕುಡುಕನಾಗಬಾರದೆಂದು ಚಿಂತಿಸಿ ನಾನು ಧಾರ್ಮಿಕ ನಾಗಿ ಸಾದು ಆದೆ ಎಂದು ಉತ್ತರ ಕೊಟ್ಟ. ಹಾಗೆಯೆ ನಾವು ಏನನ್ನು ಚಿಂತಿಸುತ್ತೇವೆ ಅದರಂತೆ ನಮ್ಮ ಕಾರ್ಯ ಇರುತ್ತದೆ. ಶ್ರೀದೇವಿ ಅಂಬೆಕಲ್ ಲೇಖನ ಖುಷಿ ಕೊಟ್ಟಿತು

    LEAVE A REPLY

    Please enter your comment!
    Please enter your name here

    Latest article

    error: Content is protected !!