ಚಿರಾಗ್ ಆರ್.ಎಚ್.
ಪ್ರಧಾನಿ ನರೇಂದ್ರ ಮೋದಿ ಅವರು ಲಡಾಖ್‌ನ ನಿಮು ಸೇನಾ ನೆಲೆಗೆ ಭೇಟಿ ಯೋಧರಲ್ಲಿ ನೈತಿಕ ಸ್ಥೈರ್ಯ ತುಂಬಿದ್ದಾರೆ. ಪ್ರಧಾನಿ ಭೇಟಿಯನ್ನು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ, ಚೀನಾ ಆಕ್ಷೇಪಿಸಿದೆ. ಈ ಅನಿರೀಕ್ಷಿತ ಭೇಟಿ ನೆರೆರಾಷ್ಟ್ರಕ್ಕೆ ನೀಡಿರುವ ಸಂದೇಶ ಸ್ಪಷ್ಟ- ನಮ್ಮ ತಂಟೆಗೆ ಬಂದರೆ ಸುಮ್ಮನೆ ಬಿಡಲ್ಲ!
ತಾಂತ್ರಿಕವಾಗಿ ನಿಮು ಭಾರತದ ವ್ಯೂಹಾತ್ಮಕ ಸೇನಾ ನೆಲೆ. ಪಾಕಿಸ್ತಾನ, ಚೀನಾ ಎರಡೂ ಏಕಕಾಲದಲ್ಲಿ ನಮ್ಮ ಮೇಲೆ ಎರಗಿದರೂ ನಿಮು ನೆಲೆಯಿಂದ ದಾಳಿ ನಡೆಸಬಹುದು. ಸಮುದ್ರ ಮಟ್ಟದಿಂದ ೧೧,೦೦೦ ಅಡಿ ಎತ್ತರದಲ್ಲಿದ್ದರೂ ಏಕಕಾಲದಲ್ಲಿ ನಾಲ್ಕು ಯುದ್ಧ ವಿಮಾನಗಳನ್ನು ಇಲ್ಲಿ ನಿಲುಗಡೆ ಮಾಡಬಹುದು. ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟುಕೊಳ್ಳಬಹುದು. ಹೀಗಾಗಿ ಒಂದು ರೀತಿಯಲ್ಲಿ ಪಾಕಿಸ್ತಾನಕ್ಕೂ ಮೋದಿ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ.
ಆಗಾಗ ಕಾಲು ಕೆರೆದು ಜಗಳ ಮಾಡುತ್ತ, ತಂಟೆ ಮಾಡುತ್ತ, ಅವಕಾಶ ಸಿಕ್ಕರೆ ಗಡಿ ಆಕ್ರಮಿಸಿಕೊಂಡೇಬಿಡುವ ಮನೋಭಾವವನ್ನು ಬಹಳ ವರ್ಷಗಳಿಂದಲೂ ಚೀನಾ ಪ್ರದರ್ಶಸುತ್ತ ಬಂದಿದೆ. ಆದರೆ ಚೀನಾ ಈ ಬಾರಿ ಎಡವಿರುವುದು ಕೇಂದ್ರ ಸರಕಾರದ ಇಚ್ಛಾಶಕ್ತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ. ಈಗಿರುವ ಸರಕಾರ ಯಾವುದಕ್ಕೂ ಮಣಿಯುವುದಿಲ್ಲ, ಇನ್ನು ಇಲ್ಲಿನ ಪ್ರತಿಪಕ್ಷಗಳಂತೂ ಸೋತು ಸೊರಗಿವೆ ಎಂಬುದನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅರಿತುಕೊಳ್ಳಲೇ ಇಲ್ಲ. ಹೀಗಾಗಿ ಗಲ್ವಾನ್ ವ್ಯಾಲಿಯಲ್ಲಿ ಭಾರತೀಯ ಯೋಧರನ್ನು ಕೆಣಕಿ ಪೆಟ್ಟು ತಿಂದಿದೆ, ಒಳಗೊಳಗೇ ಭುಸುಗುಡುತ್ತಿದೆ.
ನಿಮು ಸೇನಾನೆಲೆಯಲ್ಲಿ ಭಾಷಣ ಮಾಡಿದ ಸಂದರ್ಭದಲ್ಲಿ ಪ್ರಧಾನಿಯವರು ಚೀನಾದ ಹೆಸರು ಎತ್ತಲಿಲ್ಲ, ಆದರೆ ವಿಸ್ತರಣಾವಾದದ ಕಾಲ ಮುಗಿಯಿತು ಎನ್ನುವ ಮೂಲಕ ಆ ದೇಶಕ್ಕೇ ಗುರಿ ಇಟ್ಟು ಬಾಣ ಬಿಟ್ಟಿದ್ದಾರೆ. ಅರುಣಾಚಲ, ಜಮ್ಮು-ಕಾಶ್ಮೀರ, ಅಕ್ಸಾಯ್ ಚಿನ್‌ಗಳ ಪರೋಕ್ಷ ಪ್ರಸ್ತಾವ ಅಲ್ಲಿದ್ದು, ಇನ್ನು ನಮ್ಮ ನೆಲಕ್ಕೆ ಕಾಲಿಟ್ಟರೆ ಸಹಿಸುವುದಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ. ಶ್ರೀಕೃಷ್ಣನ ಸುದರ್ಶನ ಚಕ್ರದ ಉದಾಹರಣೆ ನೀಡುವ ಮೂಲಕ ಗಲ್ವಾನ್‌ನಲ್ಲಿ ಭಾರತೀಯ ಯೋಧರಿಂದ ಚೀನಾ ಸೇನೆಯಲ್ಲಿ ಆಗಿರುವ ಸಾವು-ನೋವನ್ನು ನೆನಪಿಸಿದ್ದಾರೆ, ಜತೆಗೆ ನಮ್ಮ ಸೇನಾ ಸಾಮರ್ಥ್ಯವನ್ನು ನೆನಪು ಮಾಡಿಕೊಟ್ಟಿದ್ದಾರೆ.
ಇನ್ನೂ ಒಂದು ಸಂಗತಿಯನ್ನು ಗಮನಿಸಬೇಕು. 1962ರ ಯುದ್ಧದಲ್ಲಿ ಭಾರತ ಮನವಿ ಮಾಡಿದ ಬಳಿಕ ಅಮೆರಿಕ ನಮ್ಮ ನೆರವಿಗೆ ಆಗಮಿಸಿತು. ಈ ಬಾರಿ ಹಾಗಲ್ಲ. ನಾವು ಯಾರ ಸಹಾಯವನ್ನೂ ಕೇಳಿಲ್ಲ. ಅಷ್ಟರಲ್ಲಾಗಲೇ ಫ್ರಾನ್ಸ್ ಸೇನಾ ನೆರವು ನೀಡುವ ಭರವಸೆ ನೀಡಿದೆ. ಚೀನಾ ಜತೆ ವಾಣಿಜ್ಯ ಸಮರಕ್ಕಿಳಿದಿರುವ ಅಮೆರಿಕವು ದಕ್ಷಿಣ ಚೀನಾ ಸಮುದ್ರದಲ್ಲಿ ಸಮರ ನೌಕೆಗಳನ್ನೇ ನಿಯೋಜಿಸಿದೆ. ಸಾಗರ ಗಡಿಯಲ್ಲಿ ಚೀನಾದಿಂದ ಕಿರಿಕಿರಿ ಅನುಭವಿಸುತ್ತ ಬಂದಿರುವ ಜಪಾನ್ ಸಹ ತನ್ನ ಬೆಂಬಲ ಭಾರತಕ್ಕೆ ಎಂದು ಸ್ಪಷ್ಟವಾಗಿ ಘೋಷಿಸಿದೆ. ಹಳೆಯ ಮಿತ್ರ ರಷ್ಯಾ ತ್ವರಿತವಾಗಿ ಶಸ್ತ್ರಾಸ್ತ್ರ ಪೂರೈಸುವ ಆಶ್ವಾಸನೆ ನೀಡಿದೆ. ಈಗ ಏಕಾಂಗಿಯಾಗಿರುವುದು ಚೀನಾವೇ ಹೊರತು ಭಾರತ ಅಲ್ಲ.
ಕೊರೊನಾ ವಿಷಯದಲ್ಲಿ ಚೀನಾ ಮಾಡಿದ ಮೋಸದ ಬಗ್ಗೆ ಹಲವು ದೇಶಗಳಿಗೆ ಅಸಮಾಧಾನವಿದೆ. ಅವಕಾಶ ಸಿಕ್ಕರೆ ಮತ್ತಷ್ಟು ದೇಶಗಳು ಚೀನಾ ವಿರುದ್ಧ ಮುಗಿಬೀಳಲು ಸಿದ್ಧವಾಗಿ ನಿಂತಿವೆ. ಇದನ್ನೆಲ್ಲ ಅರ್ಥ ಮಾಡಿಕೊಂಡ ಬಳಿಕ ಚೀನಾ ತೋರ‍್ಗಾಣಿಕೆಗೆ ಸಂಧಾನದ ಮಾತನಾಡುತ್ತಿದೆ. ಆದರೆ ಚೀನಾವನ್ನು ನಂಬಲು ಯಾರೂ ತಯಾರಿಲ್ಲ.
ನೇಪಾಳದ ಪಾಠ
ಚೀನಾವು ನೇಪಾಳವನ್ನು ಭಾರತದ ವಿರುದ್ಧ ಎತ್ತಿಕಟ್ಟಿ ಮತ್ತೊಂದು ಛಾಯಾ ಸಮರಕ್ಕೆ ಯತ್ನಿಸಿತು. ಭಾರತದಿಂದಾಗಿ ಕೊರೊನಾ ಹೆಚ್ಚಿದೆ ಎಂದು ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಆರೋಪ ಮಾಡಿದಾಗಲೂ ಸರಕಾರ ಕಟುವಾಗಿ ಪ್ರತಿಕ್ರಿಯಿಸಲಿಲ್ಲ. ಉತ್ತರಾಖಂಡದ ಮೂರು ಭೂಪ್ರದೇಶಗಳನ್ನು ತನ್ನ ನಕ್ಷೆಗೆ ಸೇರಿಸಿಕೊಂಡಾಗ, ಬಿಹಾರದಲ್ಲಿ ನದಿ ದಂಡೆ ದುರಸ್ತಿಗೆ ಅಡ್ಡಿಪಡಿಸಿದಾಗ, ಅಷ್ಟೇ ಏಕೆ ಗಡಿಯಲ್ಲಿ ಭಾರತೀಯರ ಮೇಲೆ ಹಲ್ಲೆ ನಡೆಸಿದಾಗಲೂ ತುಟಿ ಬಿಚ್ಚಲಿಲ್ಲ. ಬದಲಿಗೆ ನೆರವಿನ ಮಹಾಪೂರವನ್ನೇ ಪುಟ್ಟ ರಾಷ್ಟ್ರಕ್ಕೆ ಹರಿಸಿತು. ‘ಚೀನಾ ಕುಮ್ಮಕ್ಕು ಇರುವುದರಿಂದಲೇ ಭಾರತ ಸುಮ್ಮನಿದೆ’ ಎಂದೇ ಎಲ್ಲರೂ ಭಾವಿಸಿದ್ದರು. ಚೀನಾ ತಾಳಕ್ಕೆ ತಕ್ಕಂತೆ ಕುಣಿದು ಭಾರತದ ವಿರುದ್ಧ ಮುಗಿಬಿದ್ದ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಈಗ ಹುದ್ದೆ ತೊರೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅದು ಭಾರತದ ಚಾಣಕ್ಷ ನಡೆ.
ಭಾರತ ಈಗ ಮೊದಲಿನಂತಿಲ್ಲ. ಇದು ಸದೃಢ, ಸಶಕ್ತ ಭಾರತ. ಇನ್ನೊಮ್ಮೆ ತಂಟೆ ತೆಗೆಯುವ ಮುನ್ನ ಚೀನಾ ಅದನ್ನು ಅರ್ಥ ಮಾಡಿಕೊಳ್ಳಬೇಕು.
Mr.Chirag article in this gloomy period will boost the morale of Indians.
Jai Bharat Mata