ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿರುವುದು ಎಲ್ಲರ ಗಮನಸೆಳೆಯುತ್ತಿದೆ. ಇದಕ್ಕೆ ಪೂರಕವಾಗಿ ಮಾಧ್ಯಮಗಳಲ್ಲಿಯೂ ಸಹ ಚಿನ್ನದ ಬೆಲೆ ಇನ್ನಷ್ಟು ಏರಿಕೆ ಕಾಣುವುದು ಎಂದು ಬಿಂಬಿಸಲಾಗುತ್ತಿದ್ದು ಹೂಡಿಕೆದಾರರ ಆಸಕ್ತಿಯನ್ನು ಕೆರಳಿಸುತ್ತಿದೆ. ಇದು ಷೇರುಪೇಟೆಯಲ್ಲಿ ಚಿನ್ನಾಭರಣ ವಲಯದ ಕಂಪನಿಗಳು ಹೆಚ್ಚು ಆಕರ್ಷಣೀಯವೆಂದು ಸಹ ಬಿಂಬಿಸಲಾಗುತ್ತಿದೆ. ಈ ಕಾರಣದಿಂದಾಗಿ ಚಿನ್ನದ ಮೇಲೆ ಸಾಲ ನೀಡುವ ಕಂಪನಿಗಳೂ ಸಹ ಹೆಚ್ಚು ಲಾಭದಾಯಕವೆಂಬುದು ಕೆಲವರ ಕಲ್ಪನೆ.
ಈಗಿನ ಚಿನ್ನದ ಬೆಲೆ ಏರಿಕೆಯು ಅದರ ಮೇಲೆ ಸಾಲ ನೀಡುವ ಕಂಪನಿಗಳಿಗೆ ಅನುಕೂಲಕರವೇನಲ್ಲ. ಈ ಕಂಪನಿಗಳು ನೀಡುವ ಸಾಲ ಹೆಚ್ಚು ಒತ್ತಡಕ್ಕೊಳಗಾಗುವ ಸಾಧ್ಯತೆಯಿದೆ. ಚಿನ್ನದ ಬೆಲೆ ಗರಿಷ್ಠದಲ್ಲಿರುವ ಈ ಸಂದರ್ಭದಲ್ಲಿ ನೀಡಿದ ಸಾಲ ವಸೂಲಾತಿಯು, ಚಿನ್ನದ ಬೆಲೆ ಕುಸಿತಕ್ಕೊಳಗಾದಾಗ ಸುಲಭವಲ್ಲ. ಚಿನ್ನವಾಗಲಿ, ಬೆಳ್ಳಿಯಾಗಲಿ, ತಮ್ಮ ಬೆಲೆಗಳನ್ನು ಸ್ಥಿರವಾಗಿರಿಸಿಕೊಳ್ಳಲು ಸಾಧ್ಯವಿಲ್ಲ.ಕಮಾಡಿಟೀಸ್ ಮಾರ್ಕೆಟ್ ಚಟುವಟಿಕೆ ಆರಂಭವಾದ ಮೇಲೆ ಇವು ಸಹ ಸರಕು ಪೇಟೆಯ ವಹಿವಾಟಿನ ಸರಕಾಗಿದೆ. ಅಂದರೆ ಇಲ್ಲಿಯೂ ಏರಿಳಿತಗಳ ಒತ್ತಡವಿರುತ್ತದೆ. ಇದಕ್ಕೆ ಪೂರಕವಾಗಿ ಹಿಂದಿನ ಘಟನೆಯನ್ನು ತಿಳಿಯಿರಿ.
2008 ರ ಡಿಸೆಂಬರ್ ತಿಂಗಳಲ್ಲಿ ಬೆಳ್ಳಿಯ ಬೆಲೆ ರೂ.18,500 ರಲ್ಲಿತ್ತು. ಅಲ್ಲಿಂದ ಕ್ರಮೇಣವಾಗಿ ಏರಿಕೆಯ ಪಥದಲ್ಲಿ ಚಲಿಸುತ್ತಾ 2011 ರ ಏಪ್ರಿಲ್ ನಲ್ಲಿ ರೂ.75 ಸಾವಿರ ರೂಪಾಯಿಗಳನ್ನು ತಲುಪಿತು. ಆ ಸಂದರ್ಭದ ವಿಶ್ಲೇಷಣೆಗಳು ಬೆಳ್ಳಿಯ ದರ ರೂ.1,00,000 ಕ್ಕೆ ತಲುಪುವುದೆಂಬ ಮುನ್ನುಡಿದವು. ಅದಕ್ಕೆ ಪೂರಕವಾಗಿ, ರೂ.75 ಸಾವಿರಕ್ಕೂ ಬೆಳ್ಳಿ ಲಭ್ಯವಿಲ್ಲ ಎಂದು ಕಂದು ಬಣ್ಣದ ದಿನಪತ್ರಿಕೆಗಳು ಸುದ್ಧಿ ಪ್ರಕಟಿಸಿದ್ದವು. ಇದು ಇನ್ನಷ್ಟು ಬೇಡಿಕೆ ಹೆಚ್ಚಿಸಿದವು. ಈ ಎಲ್ಲಾ ಬೆಳವಣಿಗೆಗಳ ಹಿಂದೆ ಅಡಕವಾಗಿರುವ ಅಂಶವೆಂದರೆ ಆ ಸಂದರ್ಭವು ಅಕ್ಷಯ ತೃತೀಯ ಆಚರಣೆಯ ಸಮೀಪದ ದಿನವಾಗಿತ್ತು. ವಿಸ್ಮಯವೆಂದರೆ ಮೇ6 ರಂದು ಅಕ್ಷಯ ತೃತೀಯದ ದಿನ ಬೆಳ್ಳಿಯ ಬೆಲೆ ರೂ.53 ಸಾವಿರ ರೂಪಾಯಿಗಳಿಗೆ ಕುಸಿದಿತ್ತು. ನಂತರದ ವರ್ಷಗಳಲ್ಲಿ ಬೆಳ್ಳಿಯ ಬೆಲೆ ರೂ.30 ಸಾವಿರದವರೆಗೂ ಜಾರಿ ಪುನ: ಚೇತರಿಕೆ ಕಂಡಿತು. ಬೆಳ್ಳಿ, ಚಿನ್ನ ಗಳು ಆಂತರಿಕವಾಗಿ ಸುಭದ್ರವಾದ ಹೂಡಿಕೆ ಎಂದೆನಿಸಿದರೂ, ಖರೀದಿಸುವ ಬೆಲೆಯೂ ಮುಖ್ಯ.
ಸುಮಾರು 11 ವರ್ಷಗಳಿಂದಲೂ ಬೆಳ್ಳಿಯ ಮೇಲಿನ ಹೂಡಿಕೆಗೆ ಅಸಲು ಹಣವೂ ಲಭ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿ ಚಿನ್ನದ ಬೆಲೆ ಗರಿಷ್ಠ ಮಟ್ಟದಲ್ಲಿದ್ದಾಗ ಖರೀದಿಸಿದಲ್ಲಿ ಹೂಡಿಕೆಯ ಹಣ ಸುಭದ್ರವೆನಿಸದಲ್ಲವೇ?
ಚಿನ್ನದ ಮೇಲೆ ಸಾಲ ನೀಡುವ ಕಂಪನಿಗಳು ಇತ್ತೀಚೆಗೆ ಹೆಚ್ಚುತ್ತಿವೆ. ಅಂದರೆ ಲೀಸ್ಟೆಡ್ ಕಂಪನಿಳಿಗೆ ಸ್ಪರ್ಧಿಯಾಗಿವೆ. ಚಿನ್ನದ ಬೆಲೆ ಇಷ್ಟು ಹೆಚ್ಚಿದ್ದರೂ ಸಹ, ಹಿಂದೆ ತೆಗೆದುಕೊಂಡ ಸಾಲ ಮರುಪಾವತಿಮಾಡಲಾಗದೆ, ವಸೂಲಾಗದ ಸಾಲ ಪ್ರಮಾಣ ಹೆಚ್ಚಾಗಿದ್ದು ಇತ್ತೀಚಿನ ದಿನಪತ್ರಿಕೆಗಳಲ್ಲಿ ಕೆಲವು ಕಂಪನಿಗಳು ಚಿನ್ನದ ಹರಾಜಿನ ಪ್ರಕಟಣೆಗಳನ್ನೂ ಸಹ ನೀಡಿವೆ. ಹಾಗಾಗಿ, ಪೇಟೆಯಲ್ಲಿ ಷೇರಿನಬೆಲೆ ಹೆಚ್ಚಾದಾಗ ಮಾರಾಟ ಮಾಡಿ ಹಣ ಶೇಖರಿಸಿಕೊಳ್ಳುವುದೇ ಒಳಿತು. ಇಂದಿನ ಅಸಹಜ ವಾತಾವರಣದಲ್ಲಿ ಶರ ವೇಗದಲ್ಲಿ ಏರಿಕೆಯಾಗಿರುವುದು ಸ್ಥಿರತೆ ಕಾಣುವುದು ಅತಿ ವಿರಳವೆನಿಸುತ್ತದೆ.
ನೆನಪಿರಲಿ : ಕಳ್ಳ ಮತ್ತು ಲಾಭ ಸಿಕ್ಕಾಗ ಹಿಡಿಬೇಕು, ಬಿಟ್ಟರೆ ಸಿಗದು.
ಇವೆಲ್ಲ ತಿಳಿದೇ ಇರಲ್ಲ. ಆದರೆ ಜನ ಸಾಮಾನ್ಯ ತೊಂದರೆಯಾದಾಗ ಅನುಕೂಲವಾಗಲಿ ಅಂತ ಬಂಗಾರ ಖರೀದಿ ಮಾಡುವ. ಈ ಲೇಖನದಿಂದ ತುಂಬಾ ವಿಚಾರ ತಿಳಿದೆ. ಹಲವು ಮಿತ್ರರಿಗೂ ತಿಳಿಸಿದೆ. ವಂದನೆಗಳು ಲೇಖಕರಿಗೆ.