ಹಣ ಇದ್ದವರಿಗೆ ಹಣ ಸೇರುವ ಹಾಗೆ ಅವಕಾಶ ಸಿಕ್ಕವರನ್ನೇ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಆದರೆ ಅವಕಾಶ ವಂಚಿತರು ಮಾತ್ರ ಅವಕಾಶಗಳೇ ಇಲ್ಲದೆ ಮುರುಟಿ ಹೋಗುತ್ತಾರೆ. ಬೆಂಗಳೂರಿನಲ್ಲಿರುವ ಸಂಸ್ಥೆಯೊಂದು ಅವಕಾಶ ವಂಚಿತರಿಗಾಗಿಯೇ ಕೆಲಸಮಾಡುತ್ತಿದೆ. ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸುತ್ತಿದೆ. ಈ ಸಂಸ್ಥೆಯ ಹೆಸರು ಅಭ್ಯುದಯ.
ಪ್ರತಿಯೊಂದು ಸಂಸ್ಥೆ ಹುಟ್ಟುವುದರ ಹಿಂದೆ ಕ್ರಿಯಾಶೀಲ ಹಾಗೂ ಸೇವಾ ಮನೋಭಾವನೆಯ ಮನಸ್ಸೊಂದು ಇರುತ್ತದೆ. ಯಾವುದೋ ಘಳಿಗೆಯಲ್ಲಿ ಇಂಥ ಮನಸ್ಸುಗಳಿಗೆ ಆಗುವ ಪ್ರೇರಣೆ ಸಮಾಜಮುಖಿ ಕೆಲಸಗಳಿಗೆ ಕೈ ಹಾಕುವಂತೆ ಮಾಡುತ್ತದೆ. ಅಭ್ಯುದಯದ ವಿಚಾರದಲ್ಲಿ ಇಂಥ ಪ್ರೇರಣೆ ಆಗಿದ್ದು ಡಿ. ಲಕ್ಷ್ಮಿನಾರಾಯಣ ಅವರಿಗೆ. ಕೆಪಿಟಿಸಿಎಲ್ ಉದ್ಯೋಗಿ ಲಕ್ಷ್ಮಿನಾರಾಯಣ 2004 ರಲ್ಲಿ ಆನಂದರಾವ್ ಸರ್ಕಲ್ ನಲ್ಲಿರವ ಕಚೇರಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಎಲ್ಲರಂತೆ ಹತ್ತರಿಂದ ಐದರ ತನಕ ಕೆಲಸ ಮಾಡುವ ಜಾಯಮಾನ ಇವರದ್ದಲ್ಲ. ಊರ ಉಸಾಬರಿ ನಮಗೇಕೆ ಎನ್ನುವ ವ್ಯಕ್ತಿತ್ವವೂ ಇವರದ್ದಲ್ಲ. ಹೀಗಾಗಿಯೇ ಸಂದರ್ಭವೊಂದರಲ್ಲಿ ಬಾಲಾಪರಾಧಿಗಳ ಬಗ್ಗೆ ಇವರಿಗೆ ಕುತೂಹಲ ಹುಟ್ಟುತ್ತದೆ. ಬಾಲ್ಯದಲ್ಲೇ ಮಕ್ಕಳು ಅಪರಾಧ ಮಾಡುತ್ತಾರೆ ಅಂದರೆ ಅದು ಅವರ ತಪ್ಪಲ್ಲ . ಅದು ಸಮಾಜದ ತಪ್ಪಲ್ಲವೆ ಎಂಬ ಪ್ರಶ್ನೆ ಅವರ ಮನಸ್ಸಿನಲ್ಲಿ ಏಳುತ್ತದೆ.
ಈ ವೇಳೆಗಾಗಲೇ ಕೇಶವ ಕೃಪಾ ಸಂವರ್ಧನಾ ಸಮಿತಿಯ ಅರಕಲಿ ನಾರಾಯಣರಾವ್ ಮತ್ತು ಕೃ. ನರಹರಿ ಅವರುಗಳ ಸಂಪರ್ಕಕ್ಕೆ ಬಂದು ಅದರ ಸದಸ್ಯರಲ್ಲಿ ಒಬ್ಬರಾಗಿದ್ದ ಲಕ್ಷ್ಮಿನಾರಾಯಣ ವೈಯಕ್ತಿಕ ನೆಲೆಯಲ್ಲಿ ಇಂಥ ಅವಕಾಶ ವಂಚಿತ ಮಕ್ಕಳಿಗಾಗಿ ಕೆಲಸ ಮಾಡಲು ಮುಂದಾಗುತ್ತಾರೆ.
ಈ ದಿಸೆಯಲ್ಲಿ ಮುಂದುವರೆದಾಗ ಹಾದಿ ತಪ್ಪಿದ ಹನ್ನೆರಡು ಹುಡುಗರ ಬಗ್ಗೆ ಇವರಿಗೆ ಗೊತ್ತಾಗುತ್ತದೆ. ಈ ಹುಡುಗರ ಪೂರ್ವಪರ ಹುಡುಕುತ್ತಾರೆ. ಇವರಲ್ಲಿ ಏನಾದರು ಬದಲಾವಣೆ ತರಬೇಕೆಂದು ಬಯಸುತ್ತಾರೆ. ಅಧಿಕಾರಿಗಳ ಮನ ಒಲಿಸಿ ಈ ಹುಡುಗರ ಪಾಲಕರನ್ನು ಭೇಟಿ ಮಾಡಿ ವಾಪಸ್ಸು ಅವರವರ ಮನೆಗಳಿಗೆ ಸೇರಿಸುತ್ತಾರೆ. ಈ ಮಕ್ಕಳು ಮನೆಗೆ ವಾಪಸ್ಸು ಬಂದಾಗ ಪಾಲಕರಿಂದ ಮಿಶ್ರ ಪ್ರತಿಕ್ರಿಯೆ. ಕೆಲವರಿಗೆ ಮಕ್ಕಳು ಮತ್ತೆ ಮನಗೆ ಬಂದರೆಂಬ ಸಂತಸ. ಇನ್ನು ಕೆಲವರಿಗೆ ಯಾಕಾದರೂ ಇವರನ್ನು ವಾಪಸ್ ಕರೆದುಕೊಂಡು ಬಂದರೆಂಬ ಭಾವನೆ.
ಸುಲಭದ ಕೆಲಸವಲ್ಲ
ಹುಡುಗರನ್ನು ಸರಿ ಮಾಡುತ್ತೇನೆ ಎಂಬ ನಿರ್ಧಾರವನ್ನೇನೋ ಲಕ್ಷ್ಮಿನಾರಾಯಣ ಅವರು ಮಾಡಿದ್ದೂ ಆಗಿದೆ. ಮುಂದೆ ಸರಿ ದಾರಿಗೆ ತರಬೇಕಲ್ಲ.ಅದೇನು ಸುಲಭದ ಕೆಲಸವೇ..? ಎಲ್ಲಾ 7 ರಿಂದ 10 ನೇ ತರಗತಿ ಓದುತ್ತಿರುವ ಮಕ್ಕಳು. ಶಾಲೆಗೆ ಮತ್ತೆ ಸೇರಿಸಲು ಹೋದರೆ ಅಲ್ಲಿ ಪ್ರತಿರೋಧ. ಉಳಿದ ಮಕ್ಕಳು ಇವರಂತೆ ಆಗಿಬಿಟ್ಟರೆ ಎಂಬ ಭಯ. ಆದರೆ ಲಕ್ಷ್ಮಿನಾರಾಯಣರ ಸಂಕಲ್ಪಕ್ಕೆ ಇದು ಯಾವುದೂ ಅಡ್ಡಿ ಆಗಲೇ ಇಲ್ಲ. ಶಿಕ್ಷಣ ಇಲಾಖೆಯ ಮನ ಒಲಿಸಿ ಮಕ್ಕಳನ್ನು ಸ್ಕೂಲಿಗೆ ಸೇರಿಸುತ್ತಾರೆ.ಏನಾದರು ಆದರೆ ತಾವೇ ಜವಾಬ್ದಾರಿ ಎಂದು ಅಭಯ ನೀಡುತ್ತಾರೆ. ಮೂರು ತಿಂಗಳ ಅವಧಿ ಸಿಗುತ್ತದೆ.
ಈ ಸಮಯದಲ್ಲಿ ಒಂದಿಬ್ಬರು ಗೆಳೆಯರು ಲಕ್ಷ್ಮಿನಾರಾಯಣರ ಜೊತೆ ಸೇರುತ್ತಾರೆ. ಸುಧಾರಣೆ ಮುಂದುವರಿಯುತ್ತದೆ. ಮೊದಲಿಗೆ ಹುಡುಗರನ್ನು ತಪ್ಪದೆ ಸ್ಕೂಲಿಗೆ ಕಳಿಸುವ ಕೆಲಸ. ಹೋಮ್ ವರ್ಕ್ ಮಾಡದಿದ್ದರೂ ಪರವಾಗಿಲ್ಲ .ಸ್ಕೂಲಿಗೆ ತಪ್ಪದೆ ಹೋಗಿ ಬನ್ನಿ ಸಾಕು ಎಂದು ಮನವೊಲಿಸುತ್ತಾರೆ. ಸಂಜೆ ನಿತ್ಯ ಅವರಿಗೆ ಕಥೆ ಹೇಳುತ್ತಾರೆ. ಆಟ ಜೊತಗೆ ಪಾಠವನ್ನೂ ಮಾಡುತ್ತಾರೆ.
ಮಾಡುವ ಕೆಲಸದಲ್ಲಿ ನಂಬಿಕೆ ಇದ್ದರೆ ಯಶಸ್ಸು ಸಿಗಲೇ ಬೇಕು. ಇಲ್ಲೂ ಹಾಗೆ ಆಯಿತು. ಲಕ್ಷ್ಮಿನಾರಾಯಣರ ನಿರೀಕ್ಷೆ ಹುಸಿಯಗಲಿಲ್ಲ. ಮಿಡ್ ಟರ್ಮ್ ಪರೀಕ್ಷೆಯಲ್ಲಿ ಮಕ್ಕಳು ಶೇಕಡ 25 ರಿಂದ 30ರಷ್ಟು ಅಂಕ ಪಡೆಯುವ ಮಟ್ಟಕ್ಕೆ ಸುಧಾರಿಸುತ್ತಾರೆ. ವಾರ್ಷಿಕ ಪರೀಕ್ಷೆ ವೇಳೆಗೆ ಪರಿಸ್ಥಿತಿ ಮತ್ತಷ್ಟು ಸುಧಾರಿಸಿ ಮಕ್ಕಳು ಪಾಸ್ ಆಗುವ ಅಂಕ ಪಡೆಯುವಲ್ಲಿ ಸಫಲರಾಗುತ್ತಾರೆ. ಓದಿನ ಕಡೆ ಗಮನ ಹೋಗಿದ್ದರಿಂದ ಸಹಜವಾಗಿಯೇ ಈ ಮಕ್ಕಳಿದ್ದ ಪ್ರದೇಶದಲ್ಲಿ ಅಪರಾಧಗಳು ಕಡಿಮೆ ಆಗುತ್ತವೆ.
ಈ ಪ್ರಯೋಗ ಅವಕಾಶ ವಂಚಿತರಿಗೆ ಅವಕಾಶ ದೊರಕಿಸಿಕೊಟ್ಟರೆ ಎಂಥ ಪವಾಡ ಮಾಡಬಲ್ಲದು ಎಂಬುದನ್ನು ತೋರಿಸಿಕೊಡುತ್ತದೆ. ಈ ಯಶಸ್ಸು ಲಕ್ಷ್ಮಿನಾರಾಯಣ ಮತ್ತು ಅವರ ಗೆಳೆಯರ ತಂಡವನ್ನು ಮತ್ತೆ ಹಿಂತಿರುಗಿ ನೋಡುವಂತೆ ಮಾಡಲಿಲ್ಲ. ವೈಯಕ್ತಿಕ ಪ್ರಯತ್ನವೊಂದು ಸಾಂಸ್ಥಿಕ ಸ್ವರೂಪ ಪಡೆದು ಅಭ್ಯುದಯವಾಯಿತು.
ಯೋಗಾಯೋಗ
ಇಂಥದೇ ಒಂದು ಸಂದರ್ಭದಲ್ಲಿ ಅಮೆರಿಕದಿಂದ ಆಗತಾನೆ ವಾಪಸ್ಸಾಗಿದ್ದ ಟಿ ಆರ್ ವಿದ್ಯಾಶಂಕರ ಎಂಬ ಉತ್ಸಾಹಿ ಯೊಬ್ಬರ ಪರಿಚಯ ಲಕ್ಷ್ಮಿನಾರಾಯಣ ಅವರಿಗೆ ಆಗುತ್ತದೆ. ಇಪ್ಪತ್ತೆರಡು ವರುಷ ಅಮೆರಿಕದಲ್ಲಿ ಕಂಪೆನಿಯೊಂದರ ಮುಖ್ಯಸ್ಥರಾಗಿ ದುಡಿದಿದ್ದ ವಿದ್ಯಾಶಂಕರ, ಅಭ್ಯುದಯದ ಕತೆ ಕೇಳಿ ಎಷ್ಟರ ಮಟ್ಟಿಗೆ ಪ್ರಭಾವಿತರಾದರು ಎಂದರೆ ತಮ್ಮನ್ನು ತಾವೆ ಅಭುದ್ಯಯಕ್ಕೆ ಒಪ್ಪಿಸಿಕೊಂಡು ಬಿಡುತ್ತಾರೆ.ಈಗ ಅಭ್ಯುದಯದ ಸಲಹೆಗಾರರು ಆಗಿರುವ ವಿದ್ಯಾಶಂಕರ ಅದನ್ನು ಮತ್ತಷ್ಟು ಎತ್ತರಕ್ಕೆ ಒಯ್ಯಲು ಕಾರಣಕರ್ತರಾದರು. ವಿದ್ಯಾಶಂಕರ ತಮಗೆ ಸಿಕ್ಕಿದ್ದು ಯೋಗಾಯೋಗ ಎನ್ನುತ್ತಾರೆ ಲಕ್ಷ್ಮಿನಾರಾಯಣ. ವಿದ್ಯಾಶಂಕರ ಅವರ ಪಾಂಡಿತ್ಯ ಅಭ್ಯುದಯಕ್ಕೆ ಒಂದು ವರದಾನವಾಗಿದೆ.
ಆ ಹನ್ನೆರಡು ಮಕ್ಕಳ ಅಭ್ಯುದಯದಿಂದ ಆರಂಭವಾದ ಈ ಸಂಸ್ಥೆ 15 ವರ್ಷಗಳಲ್ಲಿ ಸಾಧಿಸಿದ್ದು ಅಪಾರ. ತನ್ನ ನೆಲೆಯನ್ನು ವಿಸ್ತರಿಸುತ್ತಾ ಸಾಮಾಜಿಕವಾಗಿ ಆರ್ಥಿಕವಾಗಿ ಅವಕಾಶ ವಂಚಿತರ ಬಾಳಿನ ಬೆಳಕಾಗುತ್ತಾ ಮುನ್ನಡೆದಿದೆ.
ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಾಲಾನಂತರದಲ್ಲಿ ಶಿಕ್ಷಣ ನೀಡುವ ಕಲಿಕಾ ಕೇಂದ್ರಗಳು (25000 ವಿದ್ಯಾರ್ಥಿಗಳು) ಎಸ್‌ಎಸ್‌ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಜ್ಞಾನಗಿರಿ(1600 ವಿದ್ಯಾರ್ಥಿಗಳು), ಆರ್ಥಿಕ ನೆರವು ನೀಡುವ ವಿದ್ಯಾನಿಧಿ(5000 ಫಲಾನುಭವಿಗಳು), ವೃತ್ತಿಪರ ಹಾಗೂ ಮನೋವೈಜ್ಞಾನಿಕ ಸಲಹೆ ನೀಡುವ ಉನ್ನತಿ, ವಾರ್ಷಿಕ ಸ್ಪರ್ಧೆಗಳ ಆರೋಹಣ, ಆವಶ್ಯಕತೆ ಇರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಚೇತನ (125 ಫಲಾನುಭವಿಗಳು), ಮದ್ಯ ಮಾದಕ ವ್ಯಸನಿಗಳ ಹಾಗೂ ಅಪರಾಧಿಗಳ ಪರಿವರ್ತನೆ ಮಾಡುವ ಪರಿವರ್ತನಾ(510 ಕುಟುಂಬ), ಕಾಲೇಜು ವಿದ್ಯಾರ್ಥಿಗಳಿಗಾಗಿ ಸ್ವಯಂ ಸೇವಕ ಸೇವಾವೃತ್ತಿ ನೀಡುವ ಸೇವಾ ಹಾಗೂ ಆಯ್ದ ಗ್ರಾಮೀಣ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವ ನಮ್ಮ ಶಾಲೆ (43 ಶಾಲೆಗಳು) ಹೀಗೆ ಹಲವಾರು ಚಟುವಟಿಕೆಗಳು ನಿರಂತರ ನಡೆಯುತ್ತಿವೆ.
ಅಭ್ಯುದಯದಿಂದ ಉನ್ನತಿ ಹೊಂದಿದ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಅತ್ಯಂತ ಗಣ್ಯ ಸ್ಥಾನ ಪಡೆದಿದ್ದು ಅದರಲ್ಲಿ ಅನೇಕರು ಇಂದು ಕೆರೆಯ ನೀರನು ಕೆರೆಗೆ ಚೆಲ್ಲುಎಂಬಂತೆ ಈ ಸಂಸ್ಥೆಯ ಉನ್ನತಿಗಾಗಿ ಬೆಂಬಲವಾಗಿ ನಿಂತಿದ್ದಾರೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಅಭ್ಯುದಯದ ನೂರಾರು ಸ್ವಯಂ ಸೇವಕರು ಹಗಲಿರಳು ಸ್ವಯಂಸೇವಕರಾಗಿ ಕೆಲಸ ಮಾಡಿದ್ದಾರೆ.ಮಾಸ್ಕ್ ಗಳನ್ನು ಹಂಚಿದ್ದಾರೆ . ಪಡಿತರ ಕಿಟ್ ಗಳನ್ನು ನೀಡಿದ್ದಾರೆ. ಸ್ಯಾನಿಟೈಜರ್ ವಿತರಿಸಿದ್ದಾರೆ.
They alone live, who live for others-ಪರರಿಗಾಗಿ ಜೀವಿಸುವವರೆ ಜೀವಿತರು ಎನ್ನುವ ವಿವೇಕವಾಣಿಯಂತೆ ಕೆಲಸ ಮಾಡುತ್ತಿರುವ ಅಭ್ಯುದಯದ ನೂರಾರು ಕುಟುಂಬಗಳ ನೆಮ್ಮದಿಯ ಜೀವನಕ್ಕೆ ಕಾರಣವಾಗಿದೆ. ಬಿಡುವಾದಾಗ ಒಮ್ಮೆ ಅಭ್ಯುದಯಕ್ಕೆ ಹೋಗಿ ಬನ್ನಿ . ವಿಳಾಸ : ಜ್ಞಾನಗಿರಿ, #75 / 76, 4ನೇ ಅಡ್ಡ ರಸ್ತೆ , ಸೌದಾಮಿನಿ ಬಡಾವಣೆ, ಕೋಣನಕುಂಟೆ, ಬೆಂಗಳೂರು. ಮತ್ತಷ್ಟು ತಿಳಿಯಲು https://abhyudayakkss.org ಇಲ್ಲಿಗೆ ಭೇಟಿ ನೀಡಿ.
ಲೇಖನ ಬಹಳ ಚೆನ್ನಾಗಿದೆ. ಅಭ್ಯುದಯದ ಬೆಳವಣಿಗೆ ಓದಿ ಬಹಳ ಆಶ್ಚರ್ಯವಾಯಿತು. ಮನಸಿದ್ದರೆ ಮಾರ್ಗ ಎಂಬ ನುಡಿ ಅನ್ವಯವಾಗುತ್ತದೆ . ಲೇಖಕರಿಗೆ ನಮ್ಮ ಅಭಿನಂದನೆಗಳು.
Excellent write up and enlightening of Our Abhyudaya
Proud to be associated with such Team 🙏🙏🙏
ಅಭ್ಯುದಯದ ಸೇವಾ ಕಾರ್ಯ ಆದರ್ಶ ಪ್ರಾಯ.
ಜೀವಪರ ಕಾಳಜಿಯ ಅಭ್ಯುದಯದ ಕಾರ್ಯ ಸ್ತುತ್ಯಾರ್ಹ
ಲೇಖಕರಿಗೆ ಹಾಗೂ ಪತ್ರಿಕಾ ಬಳಗಕ್ಕೆ
ಅಭಿನಂದನೆಗಳು
ನಿಸ್ವಾರ್ಥ ಸೇವೆ ಮಾಡುತ್ತಿರುವ ಅಭ್ಯುದಯ ಸಂಸ್ಥೆ ಅಭ್ಯುದಯದ ಉನ್ನತ ಶಿಖರಕ್ಕೇರಲಿ 🙏🏻