ಪ್ರತಿದಿನ ಮನೆಯಲ್ಲಿ ಯಾರಾದರೊಬ್ಬರು ಮನೆಯ ಎಲ್ಲಾ ಕಡೆ ಹುಡುಕುತ್ತಲೇ ಇರುತ್ತಾರೆ , ತಂದು ಒಂದು ಕಡೆ ಇಡಲ್ಲ ಅದೆಲ್ಲಿ ಹಾಕ್ಬಿಡ್ತಿರೋ ? ನಿನ್ ರೂಮಲ್ಲಿ ನೋಡ್ದಾ ? ಪ್ಯಾಂಟ್ ಜೇಬಲ್ಲೇ ಇರುತ್ತೆ ನೋಡು , ಹೀಗೆ ಅಮ್ಮ ಹೇಳ್ತಿರ್ತಾರೆ ..
‘ಕೀ ‘ ಗಾಗಿ ಹುಡುಕಾಟ , ಅನ್ವೇಷಣೆ ….ಕೊನೆಗೆ ಸಿಕ್ತು ….ಅನ್ನೋ ಸಮಾಧಾನ ಇದು ನಿತ್ಯ ನಮ್ಮಲ್ಲಿ ನಡೆಯುವ ಚಟುವಟಿಕೆ .
ಸಣ್ಣವಯಸ್ಸಿನಲ್ಲಿ ಬೊಂಬೆಗಳಿಗೆ ಕೀ ಕೊಟ್ಟು ತಿರುಗಿಸಿ ಅದು ಆಡುತಿದ್ದರೆ ನೋಡೋಕೆ ಅದೇನೋ ಖುಷಿ. ಬೊಂಬೆ ಮೇಲಿನ ಪ್ರೀತಿಗಿಂತ ಆ ಸಣ್ಣ ಕೀ ಮೇಲಿನ ಪ್ರೀತಿಯೇ ಜಾಸ್ತಿ ಇರೋದು. ಸ್ಕೂಲು ಮುಗಿಸಿ ಬಂದಾಗ ಮನೆಬೀಗ ಹಾಕಿದ್ರೆ ಅಕ್ಕಪಕ್ಕದ ಮನೆಗಳಲ್ಲೆಲ್ಲಾ ಬೀಗದ ಕೈ ಕೊಟ್ಟವ್ರ ಬೀಗದ ಕೈ ಕೊಟ್ಟವ್ರ ಅಂತ ಕೇಳ್ತಿದ್ವಿ . ಗಡುಸಾದ ಕಬ್ಬಿಣದ ಅಲ್ಲಲ್ಲಿ ತಾಮ್ರದ ಟಚ್ ಹೊಂದಿದ್ದ ಬೀಗ ಮನೆಯ ಪ್ರಮುಖ ಸದಸ್ಯನಂತೆ ಕಾಣುತ್ತಿತ್ತು . ಅಮ್ಮ ಹೊರಗೆ ಹೋಗ್ಬೇಕಾದ್ರೆ ನಾವು ಬೀಗ ಹಾಕಿ ಇನ್ನೆಲ್ಲಿ ಕೀ ಕಳದಾಕ್ ಬಿಡ್ತೀವೋ ಅಂತ ‘ಬರೀ ಚಿಲಕ ಹಾಕ್ಕೊಂಡ್ ಹೋಗೋ ಬೀಗ ಹಾಕ್ಬೇಡ ‘ ಅಂತ ಹೇಳಿ ಹೋಗೋವ್ರು .
ಊರುಗಳಲ್ಲಿ ಅಜ್ಜಿದೀರು ಕೀಯನ್ನು ತಮ್ಮ ಕತ್ತಲ್ಲಿರುವ ಕರಿಮಣಿ ದಾರದಲ್ಲಿ , ಕಡ್ಡಿಪುಡೀ ಚೀಲದಲ್ಲಿ , ತಾತಂದಿರು ತಮ್ಮ ಉಡುದಾರದಲ್ಲಿ ಸುರಕ್ಷಿತವಾಗಿ ಇಟ್ಟಿರುತ್ತಿದ್ದರು.
ನಾವುಗಳು ಮನೆ ಬೀಗ ಹಾಕಿ ಕೀನ ಮರೆತು ಜೇಬಲ್ಲಿ ಹಾಕ್ಕೊಂಡು ಹೋಗೋವಾಗ್ಲೋ ಆಟಾಡೋವಾಗ್ಲೋ ಕಳೆದಾಕಿದ್ರೆ ಮುಗುದೋಯ್ತು…ಮನೆಬೀಗ ಕಳೆದವ್ನೆ ಅನ್ನೋದಕ್ಕಿಂತಾ ಹೆಚ್ಚಾಗಿ ಮನೆಬೀಗ ಮುರಿದು ಕಳ್ತನಾನೇ ಮಾಡವ್ನೇನೋ ಅನ್ನೋ ಥರ ಬಾಸುಂಡೆ ಬರಂಗ್ ಬಾರಿಸೋವ್ರು .
ಧರ್ಮ ಕ್ಷೇತ್ರಗಳಿಗೆ ಹೋದಾಗ ಲಾಡ್ಜ್ ನವರು ಬೀಗ ಕಳೆದಾಕಿದ್ರೆ ದಂಡ ಬೇರೆ ಕಟ್ಟಿಸ್ಕೊಳ್ಳೋವ್ರು . ಮದುವೆ ಚೌಟ್ರಿಗಳಲ್ಲೂ ಅಷ್ಟೇ ಗಂಡು ಕಡೆಯವರಿಗೆ ಐದೋ ಹತ್ತೋ ರೂಮು ಕೊಟ್ಟು ಅವರಲ್ಲಿ ಯಾರಾದ್ರೂ ಮರೆತು ಕೀ ತಗೊಂಡೋಗಿದ್ರೆ ಮುಗೀತು ಪಾಪ ಹೆಣ್ಣುಕಡೆಯವರೇ ಚೌಟ್ರಿ ಅವನ ಹತ್ರ ಪೇಮೆಂಟ್ ಸೆಟಲ್ ಮಾಡ್ಬೇಕಿತ್ತು . ಸಿನಿಮಾಗಳಲ್ಲಿ ಐನೂರೊಂದು ಬಾರ್ ಸೋಪ್ ಮೇಲೆ ಕೀ ಇಟ್ಟು ಅಚ್ಚು ಪಡೆದು ನಕಲಿ ಕೀ ಮಾಡಿಸ್ಕೊಳ್ಳೋ ಸೀನು ತುಂಬಾನೇ ರೋಮಾಂಚಕವಾಗಿರ್ತಿತ್ತು . ಸೀರಿಯಲ್ನಲ್ಲೂ ಅಷ್ಟೇ… ಮಗನ ಕೈ ಹಿಡಿದ ಸೊಸೆ ಮನೆಗೆ ಬಂದೊಡನೆ ಆಕೆಯ ನೋಟವನ್ನು ಅತ್ತೆಯ ಸೊಂಟದಲ್ಲಿರ್ತಿದ್ದ ಬೆಳ್ಳೀ ಕೀ ಗೊಂಚಲಿನ ಕಡೆ ತಿರುಗಿಸುತ್ತಿದ್ದರು. ಈ ದೃಶ್ಯದಲ್ಲೇ ಇಡಿ ಕತೆ ಅಡಗಿರೋದು.
ಸ್ಕೂಲಿನ ಪ್ರಾರ್ಥನೆ ಮುಗಿದ ನಂತರ ಮಾಸ್ತರು ಇದ್ಯಾರ್ದೋ ಕೀ ಸಿಕ್ಕಿದೆ ಬಂದು ತಗೋಳೀ ಅನ್ನೋವ್ರು . ಆಟ ಆಡ್ತಿದ್ದಾಗ ನಮಗೆ ಸಿಕ್ಕಿದ್ರೂ ಅಷ್ಟೇ ಅದನ್ನ ಪಿ ಟಿ ಮಾಸ್ಟರ್ ಹತ್ರ ಕೊಡ್ತಿದ್ವಿ . ನಮ್ಮ ಜೊತೆಗೇ ಇದ್ದ ಸ್ನೇಹಿತನೊಬ್ಬನಿಗೆ ಮೂರ್ಚೇ ಖಾಯಿಲೆ ಬಂದೆರಗಿದಾಗ ಹಿರಿಯರು ಅವನ ಕೈಗೆ ಕೀ ಗೊಂಚಲ್ಲನಿರಿಸಿ ಶುಶ್ರೂಷೆ ಮಾಡಿದಾಗ ಕೀ ನಮಗೆ ಚಿಕಿತ್ಸೆಯಂತೆ ಕಂಡಿತ್ತು .ಕಾರಾಗೃಹ ಪೋಲೀಸರ ಮುದ್ರೆಯಲ್ಲಿ ಕೀ ಚಿತ್ರ ಇರುತ್ತದೆ , ಪ್ರತಿಷ್ಠಿತ ಬ್ಯಾಂಕಾದ ಎಸ್ ಬಿ ಐ ನ ಲಾಂಛನ ಈ ಕೀನ ಕಿಂಡಿ .
ಮೊದಲೆಲ್ಲಾ ಮನೆಗೊಂದೇ ಬೀಗ ಆ ಬೀಗಕ್ಕೊಂದೇ ಕೀ ಇರೋದು. ಬೀಗ ರಿಪೇರಿ ಮಾಡುವವರಿಗೆ ಭಾರೀ ಬೇಡಿಕೆಯಿರೋದು . ಈಗ ಬೀಗಗಳ ಜೊತೆಗೇ ಎರಡು ಕೀ ಬರುತ್ತೆ , ಅದಲ್ಲದೇ ಎಲ್ಲಂದರಲ್ಲಿ ಕಂಪ್ಯೂಟರಯಸ್ಡ್ ಕೀ ಮೇಕಿಂಗ್ ಮಳಿಗೆಗಳು ತಲೆಎತ್ತಿವೆ.ಕೀ ಗಳು ಒರಿಜಿನಾಲಿಟಿ ಕಳ್ಕೊಂಡಿದಾವೆ .
ಡೋರ್ಲಾಕು, ಹ್ಯಾಂಡ್ ಲಾಕು , ವಾರ್ಡ್ ರೋಬ್ ಲಾಕು , ಸೀಕ್ರೆಟ್ ಲಾಕು , ಸೆನ್ಸಾರ್ ಲಾಕು , ಥಂಬ್ ಲಾಕು, ಆಟೋಮ್ಯಾಟಿಕ್ ಲಾಕು ಹೀಗೆ ನೂರಾರು ಲಾಕುಗಳು ಆಧೂನಿಕತೆಯ ಪ್ರವಾಹದಲ್ಲಿ ಬಂದು ಬಾಲ್ಯದಿಂದ ರಕ್ಷಣಾಮಂತ್ರಿಯಂತಿದ್ದ ಬೀಗ ಮತ್ತು ಬೀಗದ ಕೈಯನ್ನು ಮೂಲೆಗೆ ಸೇರಿಸಿದೆ .
ಮನೆಯಲ್ಲಿ ಕೀ ಆಕಾರದ ಸ್ಟ್ಯಾಂಡು ಬಂದಿದೆ ಅದರಲ್ಲಿ ಒಂದಷ್ಟು ನೇತಾಡುತ್ತಿರುತ್ತದೆ . ಫ್ರಿಡ್ಜ್ ನ ಮೇಲೊಂದಷ್ಟು ಬಿದ್ದಿರುತ್ತದೆ .ಟೇಬಲ್ಲಿನ ಡ್ರಾನಲ್ಲೊಂದಷ್ಟು ಶೇಖರವಾಗಿರುತ್ತದೆ . ಇಷ್ಟೆಲ್ಲಾ ಇದ್ರೂ ಬೇಕಾಗಿರೋ ಕೀ ಟೈಮ್ಗೆ ಸಿಗಲಿಲ್ಲ ಅಂದಾಗ ಆ ದಿನದ ಅಷ್ಟೂ ಕೆಲಸ ವ್ಯತ್ಯಯವಾಗುತ್ತದೆ .
ಏನೇ ಹೇಳಿ ‘ಬಾಗಿಲು ಚಿಲಕ ಬೀಗ ಕೀಲಿ ‘ ಈ ಗುಂಪು ಎಂಥಾ ಒಂಟಿಯನ್ನು ಸಹ ಧೈರ್ಯವಾಗಿ ಇರಿಸುತ್ತಿದ್ದಂತವು , ಅಂದಿನಿಂದಲೂ ನಮ್ಮನ್ನು ಕಾಪಾಡಿಕೊಂಡು ಬಂದಂತವು , ನಮಗೆ ಇವೆಂದರೆ ಧೈರ್ಯ, ಇವಿದ್ದರೆ ನಂಬಿಕೆ .
ಕಿರಣ ಆರ್
ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ.ಹಲವಾರು ಕವಿತೆಗಳಿಗೆ ಇಲಸ್ಟ್ರೇಷನ್ ಮಾಡಿದ್ದಾರೆ. ಇಂಟಿರೀಯರ್ ಡಿಸೈನ್ ಮತ್ತು ಇದರ ಬಗ್ಗೆ ಕೆಲವು ಲೇಖನಗಳನ್ನು ಪತ್ರಿಕೆಗೆ ಬರೆದಿದ್ದಾರೆ. ಅಅಜೊತೆಗೆ ಕವಿತೆಗಳನ್ನು ಕೂಡ ಬರೆಯುತ್ತಾರೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.
ಚಿತ್ರ ಲೇಖನ ಮನ ಮುಟ್ಟಿತು
ಹಳೆಯ ನೆನಪುಗಳನ್ನು ತಾಜಾಗೊಳಿಸಿತು.
ಹೊಸದನ್ನು ಸೇರಿಸಿತು
ಶೀರ್ಷಿಕೆ ಓದಲು ಆಕರ್ಷಿಸುತು
ನಮಗೆ ಮಾಸ್ತಿಯವರ ಲೇಖನ , ಕಿರಣರವರ ಕಲಾಕೃತಿ ಜೊತೆಯಲ್ಲಿ ಬಂದರೆ ಹಬ್ಬದೂಟದಂತೆ.ಮನೆಗೊಂದೇ ಕೀಲಿ ಕೈ ಬಗ್ಗೆ ಬರೆದ ಲೇಖನ ಮಾಸಿದ ನೆನಪುಗಳನ್ನು ತಾಜಾಗೊಳಿಸಿತು.
ಲೇಖಕರ ಲೇಖನ ಓದಿದ ಮೇಲೆ ಬಾಲ್ಯದ ದಿನಗಳು ನೆನಪಾಯಿತು. ನಿಜ ಈಗ ಒಂದು ಬೀಗಕೆ 3 ಕೀ ಕೊಡುವರು. ಆಗಿನ ತರ ಅಲ್ಲ.
ಮಾಸ್ತಿ ಅವರು ಬರೆದ ‘ಕೀ ‘ವಿಚಾರವು ನನ್ನಲ್ಲೂ ಹಲವು ಭಾವನೆಗಳನ್ನು ಮೂಡಿಸುವಲ್ಲಿ ಸಫಲವಾಯಿತು.
ಸಮಾಜದಲ್ಲಿ ಶ್ರೇಷ್ಠತೆಯನ್ನು ಹೊಂದಿ, ನಾನೇ ಹೆಚ್ಚು ಎಂದು ಬೀಗುವ ಬೆಳ್ಳಿ, ಬಂಗಾರ ದ ರಕ್ಷಣೆ ಮಾಡುವುದೇ ಈ ಕಬ್ಬಿಣದ ಕೀಲಿ ಕೈ. ಎಲ್ಲರ ಸಂಪತ್ತು ರಕ್ಷಿಸುತ್ತಾ ಎಲ್ಲರ ಪ್ರೀತಿಗೆ ಪಾತ್ರವಾಗಿ ಎಲ್ಲರ ಕೈಲೂ ಭದ್ರ ವಾಗಿರುವ ಕೀಲಿ ಕೈ ಸ್ವಲ್ಪ ಆಚೆ -ಈಚೆ ಮರೆಯಾದರೂ ಆಕಾಶವೇ ತಲೆ ಮೇಲೆ ಬಿದ್ದಂತೆ ಮನುಜ ಮಂಕಾಗುತ್ತಾನೆ.
ಪ್ರಾಚೀನ ಕರ್ಮವು ಬೀಗ ವಾದರೆ, ಆ ಕರ್ಮದಿಂದ ಬಿಡುಗಡೆ ಹೊಂದಲು ಧರ್ಮಾಚರಣೆ ಎಂಬ ‘ಕೀ ‘ಸಹಾಯ ಮಾಡುತ್ತದೆ
ಮಾಸ್ತಿ ಯುವರ ಲೇಖನದ ಕೀಲಿ ಕೈ ಯಿಂದ, ನೆನಪಿನ ಕಿರಣ ಚಿತ್ರಗಳ ಬೀಗವನ್ನು ಮುಕ್ತಿಗೊಳಿಸಿ, ಜಿಙ್ನಾಸೆಯ ಚಿಲಕವ ತೆಗೆದು, ಜೀವನದ ಪರಿ ಪರಿಯ ಹುಡುಕಾಟದ ಅನನ್ಯತೆಯ ಅನುಭವ ಆನಂದ ನೀಡಿತು.
ರಾಜೇಶ್ವರಿ ಎಂ ವಿ
ಲೇಖನ ಬೀಗದ ಕೀ ಬಗ್ಗೆ ಬಹುತೇಕರ ಅನುಭವ ವಾಸ್ತವವಾಗಿ ವರ್ಣಿಸಲಾಗಿದೆ