ಷೇರುಪೇಟೆಯ ಚಲನೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚು ರಭಸದಿಂದ ಕೂಡಿದೆ. ಇಳಿಕೆಯಾಗಲಿ ಅಥವಾ ಏರಿಕೆಯಾಗಲಿ ಅತಿ ವೇಗವಾಗಿರುತ್ತದೆ. ಹಿಂದಿನ ದಿನಗಳಲ್ಲಿ ಎರಡು ದಿನ ಕ್ರೂರಿ ಮೂರುದಿನ ಕ್ರೂರಿ ಎಂಬತೆ ಕಂಡರೂ ಇಂದಿನ ದಿನಗಳಿಗೆ ಹೋಲಿಸಿದಲ್ಲಿ ಅದೇ ಉತ್ತಮವೆನಿಸುವಷ್ಟರ ಮಟ್ಟಿಗೆ ಬದಲಾವಣೆ ಕಾಣುತ್ತಿದೆ. ಕೇವಲ ಹಣ ಸಂಪಾದನೆಯೊಂದೇ ಇಂದಿನ ವಹಿವಾಟುದಾರರ ಗುರಿ ಎನಿಸುತ್ತದೆ. ಇದಕ್ಕೆ ಇಂದಿನ (ಶುಕ್ರವಾರ) ಚಟುವಟಿಕೆಯಲ್ಲಿ ಅಲೋಕ್ ಇಂಡಸ್ಟ್ರೀಸ್ ಲಿಮಿಟೆಡ್ ಪ್ರದರ್ಶಿಸಿದ ಏರಿಳಿತಗಳೇ ಸಾಕ್ಷಿ.
ದಿನದ ಆರಂಭಿಕ ಸಮಯದಿಂದಲೂ ಕನಿಷ್ಠ ಆವರಣಮಿತಿಯಲ್ಲಿದ್ದ ಈ ಕಂಪನಿ ಷೇರಿನ ಬೆಲೆ ರೂ..41.10 ರಲ್ಲಿ ಸುಮಾರು 2.8 ಕೋಟಿ ಷೇರುಗಳು ಮಾರಾಟಕ್ಕಿದ್ದವು. ಸುಮಾರು ಒಂದು ಗಂಟೆಯ ಸಮಯದ ನಂತರ ಹೆಚ್ಚಿನ ಬೇಡಿಕೆಯ ಕಾರಣ ಆವರಣ ಮಿತಿಯಿಂದ ಹೊರಬಂದ ಷೇರು ಸುಮಾರು ಶೇ.10 ರಷ್ಟು ಏರಿಕೆಯಿಂದ ರೂ.45.40 ರ ವರೆಗೂ ತಲುಪಿ ಗರಿಷ್ಠ ಆವರಣ ಮಿತಿ ತಲುಪಿ ವಿಜೃಂಭಿಸಿತು. ಆದರೆ ಈ ವಿಜೃಂಭಣೆ ಹೆಚ್ಚು ಸಮಯವಿರದೆ ಕೇವಲ ಕೆಲವೇ ನಿಮಿಷಗಳಲ್ಲಿ ಮಾಯವಾಗಿ ಷೇರಿನ ಬೆಲೆ ಜಾರತೊಡಗಿತು. ಸುಮಾರು ಅರ್ಧ ಗಂಟೆಯ ಸಮಯದಲ್ಲಿ ಮತ್ತೆ ಕನಿಷ್ಠಆವರಣಮಿತಿಗೆ ತಲುಪಿ ದಿನದ ಅಂತ್ಯದವರೆಗೂ ಮುಂದುವರೆಯಿತು.
ಈ ಮಿಂಚಿನ ಏರಿಕೆ – ಸಿಡಿಲಿನ ಇಳಿಕೆಯ ಪ್ರಕ್ರಿಯೆಯಲ್ಲಿ NSE ಲ್ಲಿ ಸುಮಾರು12 ಕೋಟಿ ಷೇರುಗಳು ವಹಿವಾಟಾಗಿವೆ. ಅಂದರೆ ಸುಮಾರು ಒಂದು ಗಂಟೆಯ ಅವಧಿಯಲ್ಲಿ ಪ್ರದರ್ಶಿತವಾದ ಈ ಹಾವು ಏಣಿ ಆಟವು ಅನೇಕರನ್ನು ಆಕರ್ಷಿಸಿ ಹಾನಿಗೊಳಪಡಿಸಿರಬಹುದು. ಅನೇಕರನ್ನು ಅವಕಾಶ ವಂಚಿತರನ್ನಾಗಿಸಿಯೂ ಇರಬಹದು. ಕೇವಲ ಪ್ರಚಲಿತದ ಅಂಶಗಳನ್ನಾಧರಿಸಿಯಾಗಲಿ, ಮಾಧ್ಯಮಗಳ ವಿಶ್ಲೇಷಣೆಗಳಿಗಾಗಲಿ ಆದ್ಯತೆ ನೀಡದೆ ವಾಸ್ತವದ ಪೇಟೆಯ ಚಟುವಟಿಕೆಯ ನಡೆಯನ್ನಾಧರಿಸಿ ನಿರ್ಧರಿಸುವುದು ಈಗಿನ ಪೇಟೆಗಳಲ್ಲಿ ಉತ್ತಮ ಫಲಿತಾಂಶ ಕಾಣಲು ಸಾಧ್ಯ.
ಅಲೋಕ್ ಇಂಡಸ್ಟ್ರೀಸ್ ಲಿಮಿಟೆಡ್, ಒಂದು ರೋಗ ಗ್ರಸ್ತ ಕಂಪನಿಯಾಗಿತ್ತು. ಕಳೆದ ಅಕ್ಟೋಬರ್ ತಿಂಗಳಲ್ಲಿ ಈ ಷೇರಿನ ಬೆಲೆ ರೂ.1.40 ರ ಸಮೀಪವಿತ್ತು. ಆ ಸಂದರ್ಭದಲ್ಲಿ ಸಾಲಗಾರರು NCLT ಮೆಟ್ಟಲೇರಿದರು. ಅಲ್ಲಿ ಈ ಕಂಪನಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯು ಈ ಕಂಪನಿಯ ಶೇ.37.7 ರಷ್ಟನ್ನು ರೂ.250 ಕೋಟಿಗೆ ಈ ವರ್ಷದ ಫೆಬ್ರವರಿಯಲ್ಲಿ ಖರೀದಿಸಿ ತನ್ನ ಸಮೂಹಕ್ಕೆ ಸೇರಿಸಿಕೊಂಡಿತು. ಏಪ್ರಿಲ್ ತಿಂಗಳಲ್ಲಿ ರೂ.5 ರ ಸಮೀಪವಿದ್ದ ಈ ಕಂಪನಿ ಷೇರು ಮೇ ತಿಂಗಳಲ್ಲಿ ರೂ.14 ರ ಸಮೀಪವಿತ್ತು. ಅಲ್ಲಿಂದ ನಿರಂತರವಾಗಿ ಕನಿಷ್ಠ ಆವರಣಮಿತಿಯ ಮೂಲಕ ಖರೀದಿಗೆ ಅವಕಾಶ ಕೊಡದೆ, ರೂ.61 ರ ವರೆಗೂ ಏರಿಕೆ ಕಂಡಿತು. ನಂತರ ಮಾರಾಟಕ್ಕೆ ಅವಕಾಶ ನೀಡದ ರೀತಿಯಲ್ಲಿ ಇಂದು ರೂ.41.10 ರ ವರೆಗೂ ಕುಸಿದು ಈ ನಾಟಕೀಯ ರೀತಿ ಏರಿಳಿತಗಳನ್ನ ಪ್ರದರ್ಶಿಸಿದೆ.
ಇಂದಿನ ದಿನಗಳಲ್ಲಿ ಷೇರು ವಹಿವಾಟು ಚಿಟಿಕೆ ಹೊಡೆಯುವಷ್ಟರಲ್ಲಿ ಸಾಹುಕಾರರನ್ನಾಗಿಸುತ್ತದೆ ಎಂದೆನಿಸಿದರೂ, ಇಂತಹ ವಾತಾವರಣದಲ್ಲಿ ವ್ಯಾಮೋಹಕ್ಕೆ ಬಲಿಯಾಗಿ ಹಾನಿಗೊಳಗಾಗುವವರೇ ಹೆಚ್ಚು. ಎಚ್ಚರದ ವಹಿವಾಟು, ಸಮಯ ಪ್ರಜ್ಣೆಯಾಧಾರಿತ ಹಿಡಿತದ ನಿರ್ಧಾರ ಮಾಡುವುದು ಸಂತಸದ ಸರದಾರ
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.