ಇಪ್ಪತ್ತೈದು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿರುವ ಲೇಖಕಿ ಅಲ್ಲಿ ಹ್ಯಾಂಡ್ ಮೇಡ್ ಸಾಬೂನು ತಯಾರಿಕೆ ಆರಂಭಿಸಿ ಯಶಸ್ವಿ ಉದ್ಯಮಿಯಾಗುವ ನಿಟ್ಟಿನಲ್ಲಿ ಮುಂದುವರೆದಿದ್ದಾರೆ. ಕನ್ನಡಪ್ರೆಸ್. ಕಾಮ್ ಓದುಗರಿಗೆ ಇದು ಸ್ಪೂರ್ತಿ ತುಂಬಲಿ. ಆ ಮೂಲಕ ಮತ್ತಷ್ಟು ಉದ್ಯಮಿಗಳು ಉದಯವಾಗಲಿ ಎಂಬ ಆಶಯ ನಮ್ಮದು.
ನಾನು ಸುಮಾರು ಇಪ್ಪತ್ತೈದು ವರ್ಷಗಳಾಯ್ತು ಮುಂಬೈ ವಾಸಿಯಾಗಿ. ಸಂಸಾರ, ಮಕ್ಕಳ ಬೆಳವಣಿಗೆ ಒಂದು ಹಂತಕ್ಕೆ ಬಂದಿದೆ ಇನ್ನು ನನ್ನನ್ನು ನಾನು ಗಮನಿಸಿಕೊಳ್ಳುವ ಸಮಯ ಎನ್ನುವಂತಾದಾಗ ಒಂದಷ್ಟು ಸಂಸಾರದಾಚೆಯ ಪ್ರಪಂಚ ನೋಡಲು ಶುರುಮಾಡಿದ್ದೆ. ಗೆಳತಿಯರೊಡನೆ ಓಡಾಟ ಆಗಷ್ಟೇ ಶುರುವಾಗಿದ್ದ ಫೇಸ್ಬುಕ್ ಅನ್ನುವ ವರ್ಚುಯಲ್ ಪ್ರಪಂಚ ಒಳಗಿನ ಜಗತ್ತು ಶುರುವಾಗಿತ್ತು.
ಆಗೀಗ ಗಂಡನೊಂದಿಗೆ ಕೈಗಾರಿಕಾ ಮೇಳ ಕರಕುಶಲ ಮೇಳ ಅಂತೆಲ್ಲಾ ಸುತ್ತುವಾಗ ಬಿಡದಂತೆ ಗಮನ ಸೆಳೆಯುತ್ತಿದ್ದದ್ದು ಬಣ್ಣ ಬಣ್ಣದ ಗಾಜಿನಂತ ಸೋಪುಗಳು. ಕೈಯಲ್ಲೊಮ್ಮೆ ಹಿಡಿದು ನಿಂತುಬಿಟ್ಟರೆ ಅವರು ವಿವರಿಸುತ್ತಿದ್ಧದ್ದು ಕಿವಿಯಿಂದಾಚೆ ಎಲ್ಲೋ ಸೇರುತ್ತಿತ್ತು. ಬಣ್ಣಗಳು ಚಿಕ್ಕಂದಿನಿಂದ ನನಗೆ ಸೋಜಿಗ ಸಂಭ್ರಮ ಹುಟ್ಟಿಸುತ್ತಿತ್ತು. ಅದರಲ್ಲೂ ಬಣ್ಣದ ಗಾಜುಗಳು ಹರಳುಗಳು ಕೈಗೆ ಸಿಕ್ಕರೆ ದಿಟ್ಟಿಸುತ್ತಾ ಪ್ರಪಂಚವನ್ನೇ ಮರೆತು ಅದರೊಳಗೇ ಮುಳುಗುತ್ತಿದ್ದೆ. ಆ ಬಣ್ಣಗಳ ಆಕರ್ಷಣೆಯಿಂದಾಗಿಯೇ ಮಧ್ಯದಲ್ಲಿ ಒಮ್ಮೆ ಒಂದು ವರ್ಷಗಳ ಕಾಲ ಕಲಾ ಮಾಧ್ಯಮದಲ್ಲಿ ಕಲಿಯಲು ಅವಕಾಶ ಸಿಕ್ಕಿತ್ತು. ನಂತರ ಮದುವೆ. ಎಲ್ಲಾ ಮರೆತಂತೆ ಜೀವನ ಸಾಗಿದ್ದಾಗ ಮತ್ತೆ ನನ್ನನ್ನು ಸೆಳೆದದ್ದು ಹ್ಯಾಂಡ್ ಮೇಡ್ ಸೋಪುಗಳು.
ಹಾಗೆ ನೋಡಿದರೆ ನಾನು ಅಷ್ಟೇನು ಅಲಂಕಾರ ಪ್ರಿಯಳಲ್ಲ. ಆದರೂ ಈ ಸೋಪಿನ ಆಕರ್ಷಣೆ ಎಷ್ಟಾಯಿತೆಂದರೆ ಹೇಗಾದರೂ ಕಲಿಯಬೇಕು ಎಂದು ಹಠ ಮೂಡುವಷ್ಟು. ಅದಕ್ಕೆ ಪೂರಕವೆಂಬಂತೆ ಅಂಧೇರಿಯಲ್ಲಿ ಅದಕ್ಕೆ ಸಂಬಂಧಿಸಿದ ತರಗತಿಗಳು ನೆಡೆಯುತ್ತಿರುವುದು ಆನ್ ಲೈನ್ ಅಲ್ಲಿ ತಿಳಿದುಬಂತು. ಸೇರಿಕೊಂಡೆ. ಅಲ್ಲಿ ಸೋಪು ತಯಾರಿಕೆ ಹೇಳಿಕೊಟ್ಟರಾದರೂ ಅದರಲ್ಲಿ ಕಲೆ ಅರಳಿಸುವುದು ನಮ್ಮ ಅಭ್ಯಾಸದ ಬಲದಿಂದಷ್ಟೇ ಸಾಧ್ಯವಿತ್ತು. ಅಲ್ಲದೆ ಜೊತೆಗೆ ಕೇವಲ ಆಕರ್ಷಣೆಯ ವಸ್ತುವಾಗಷ್ಟೇ ಉಳಿದರೆ ಪ್ರಯೋಜನ ಸಾಲದು, ಅವುಗಳಲ್ಲಿ ಬಳಕೆ ಆಗುವ ಗಿಡಮೂಲಿಕೆ, ವಿವಿಧ ಎಣ್ಣೆಗಳ ಸುಗಂಧ ದ್ರವ್ಯಗಳ ಉಪಯೋಗ ಅವುಗಳ ಗುಣ, ಕ್ರಿಯೆಗಳ ಬಗ್ಗೆ ತಿಳಿವಳಿಕೆ ಅತ್ಯಗತ್ಯವಾಗಿತ್ತು. ಪ್ರತಿಯೊಂದನ್ನೂ ಯಾವ ಹಂತದಲ್ಲಿ ಯಾವ ರೀತಿಯಲ್ಲಿ ಯಾವ ರೂಪದಲ್ಲಿ ಬಳಕೆ ಮಾಡಬೇಕು ಎಂಬುದರ ಜ್ಞಾನ ಅತೀ ಮುಖ್ಯ ಎಂದು ಅರಿವಾಗಿ ನಂತರದ ದಿನಗಳಲ್ಲಿ ದೊಡ್ಡ ದೊಡ್ಡ ಅನುಭವಿಗಳು ಕಾಸ್ಮೆಟಿಕ್ ವಲಯದ ದಿಗ್ಗಜರೆನಿಸಿಕೊಂಡವರು ನೆಡೆಸುವ ವರ್ಕ್ ಶಾಪ್ ಗಳಿಗೆ ಸೇರಿಕೊಂಡೆ. ಕಲೆಯ ಜೊತೆ ವಿಜ್ಞಾನ ಅತ್ಯವಶ್ಯಕ ಎಂಬುದು ತಿಳಿಯಿತು.
ಅವರು ಕೊಡುತ್ತಿದ್ದ ಮಾಹಿತಿಗಳೊಡನೆ ಅವರು ಹೇಳುತ್ತಿದ್ದ ಎಲ್ಲಾ ಸೋಪ್ ಸಂಬಂಧಿ ಬ್ಲಾಗ್ ಬರಹಗಳನ್ನು ಓದಲು ಶುರುಮಾಡಿದೆ. ಮಾಹಿತಿ ಸಿಗಬಹುದಾದ ಎಲ್ಲಾ ಮಾಧ್ಯಮಗಳನ್ನೂ ಸಿಕ್ಕಷ್ಟೂ ಜಾಲಾಡಿ ಕಲಿಯುತ್ತಾ ಹೋದೆ ಜೊತೆ ಜೊತೆಗೆ ತಯಾರಿಕೆ ಮಾಡುತ್ತಾ ನಡು ನಡುವೆ ಎದುರಾಗುತ್ತಿದ್ದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಕಾಸ್ಮೆಟಾಲಜಿ ಮಾಡಿದ್ದವರ ಬಳಿ ಸತತವಾಗಿ ಸಂಪರ್ಕದಲ್ಲಿದ್ದು ಸಲಹೆ ಕೇಳುತ್ತಿದ್ದೆ. ದುಡ್ಡು ಕೊಟ್ಟು ಅವರ ವರ್ಕ್ ಶಾಪ್ ಮಾಡಿದವರಿಗೆ ಮಾತ್ರ ಹಂಚಿಕೆಯಾಗುವ ಮಾಹಿತಿಗಳವು. ಕಲಿಯಲೇ ಬೇಕೆಂಬ ಹಠ ಇದ್ದ ಕಾರಣ ದುಡ್ಡು ಕೊಟ್ಟು ಮತ್ತೆ ಮತ್ತೆ ಹೋಗುತ್ತಿದ್ದೆ.
ದುಬಾರಿ ಕಲಿಕೆ
ಹಾಗೆ ನೋಡಿದರೆ ಇದು ದುಬಾರಿ ಕಲಿಕೆಯೇ. ಅದಕ್ಕಿಂತಾ ದುಬಾರಿ ಅವುಗಳ ತಯಾರಿಕೆಗೆ ಬೇಕಾಗುವ ಸಾಮಾನುಗಳು. ಒಟ್ಟಿನಲ್ಲಿ ಒಂದೂವರೆ ವರ್ಷದ ಸತತ ಪ್ರಯೋಗ ಮುಗಿಸಿ ಒಂದು ವರ್ಷದಿಂದೀಚೆಗೆ ನಾನು ತಯಾರಿಸುವ ಸಾಬೂನುಗಳು ಈಗಾಗಲೆ ಮಾರಾಟವಾಗುತ್ತಿರುವ ಬ್ರಾಂಡ್ ಸೋಪುಗಳ ಸಾಲಿನಲ್ಲಿ ನಿಲ್ಲಬಹುದು ಎನ್ನುವ ಭರವಸೆ ಕಲಿಸಿದವರಿಂದ ಸಿಕ್ಕಿತು. ಮೊದ ಮೊದಲು ಮನೆಯವರಿಗೆ,ಸಂಬಂಧಿಕರಿಗೆ ಬಳಸಲು ಕೊಟ್ಟು ಅವರಿಂದ ಜೈ ಅನ್ನಿಸಿಕೊಂಡು ನಂತರ ನನ್ನ ಗೆಳತಿಯರಿಗೆ ಮೊದ ಮೊದಲು ಮಾರಾಟ ಮಾಡಲು ಆರಂಭಿಸಿದೆ.
ಅದೃಷ್ಟವಶಾತ್ ಪ್ರತಿಯೊಬ್ಬ ಗೆಳತಿಯೂ ಆ ವಿಷಯಕ್ಕೆ ಪ್ರೋತ್ಸಾಹಿಸಿ ಕೊಂಡುಕೊಂಡರು. ಪ್ರತಿಯೊಬ್ಬರ ಚರ್ಮದ ಮೇಲೂ ಅವರವರ ಚರ್ಮದ ಗುಣಕ್ಕೆ ಅನುಗುಣವಾಗಿ ಬೇರೆ ಬೇರೆ ಪರಿಣಾಮ ಬೀರುತ್ತಿದ್ದರಿಂದ ಅವರಿಗಾಗುತ್ತಿದ್ದ ಅನುಭವಗಳನ್ಬು ಹಂಚಿಕೊಳ್ಳುತ್ತಿದ್ದರು. ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳಲು ಮಾರ್ಗದರ್ಶನ ಮಾಡುತ್ತಿದ್ದರು. ಆರೇಳು ತಿಂಗಳಲ್ಲಿ ಸಾಕಷ್ಟು ಅನುಭವ ಆಗಿ ಕೈ ಕೂಡ ಪಳಗಿ ಹೊಸ ಹೊಸ ಡಿಸೈನ್ ಸೋಪುಗಳನ್ನು ಮಾಡಲು ಕಲಿಯುತ್ತಾ ಬಂದಿದ್ದೇನೆ. ಅದನ್ನು ಇಷ್ಟ ಪಟ್ಟು ಕೊಂಡುಕೊಳ್ಳುವ ಒಂದು ಗುಂಪಿನ ಜನರೂ ಸಹ ಸಿಕ್ಕಿದ್ದಾರೆ. ಈ ಕಲಿಕೆಗೆ ಕೊನೆ ಎನ್ನುವುದೇ ಇಲ್ಲ. ಈ ಸೋಪ್ ಪ್ರಪಂಚ ಕೂಡ ಪ್ರಕೃತಿಯಷ್ಟೇ ವಿಶಾಲವಾದುದು.. ಕಲಿಕೆ ನಿರಂತರವಾಗಿದೆ. ಜೊತೆಗೆ ಗಳಿಕೆಯೂ ಆಗುತ್ತಿದೆ.
ತಯಾರಿಕೆಯಲ್ಲಿ ಒಂದು ಮಟ್ಟಕ್ಕೆ ಬಂದ ನಂತರ ನಮ್ಮನ್ನು ನಾವು ವ್ಯಾಪಾರದ ಜಗತ್ತಿಗೆ ತೆರೆದುಕೊಳ್ಳಲು ಇನ್ನೂ ಸಾಕಷ್ಟು ಪಳಗಬೇಕಿದೆ. ಕಾಯಿದೆ, ಕಾನೂನು ರೆಜಿಸ್ಟ್ರೇಷನ್ ಪ್ರಕ್ರಿಯೆಗಳಲ್ಲಿ ತೊಡಗಬೇಕಿದೆ. ಮನೆ ಮಟ್ಟಿಗೆ ಗೆಳೆಯರು ಸಂಬಂಧಿಕರಿಗೆ ಕೊಡಲು ಮಾಡುವಾಗ ಇವುಗಳ ಅಗತ್ಯ ಇಲ್ಲದಿದ್ದರೂ ಮಾರುಕಟ್ಟೆಯಲ್ಲಿ ನಿಲ್ಲಲು ಅವೆಲ್ಲಾ ಅನಿವಾರ್ಯ. ಕುಶಲತೆ ತಯಾರಿಕೆಯಲ್ಲಿ ಇದ್ದರೆ ಮಾತ್ರ ಸಾಲದು. ವ್ಯವಹಾರದಲ್ಲೂ ಬೇಕು.
ಉತ್ತರ ಭಾರತೀಯರು ಮತ್ತು ದಕ್ಷಿಣ ಭಾರತೀಯರು
ನನ್ನ ಇಷ್ಟು ವರ್ಷದ ಅನುಭವದಲ್ಲಿ ಇಲ್ಲಿಯ ಜನರ ನಡವಳಿಕೆ ಹಾಗೂ ದಕ್ಷಿಣ ಭಾರತದವರ ನಡವಳಿಕೆ ತಕ್ಕಮಟ್ಟಿಗೆ ಅರ್ಥ ಮಾಡಿಕೊಂಡಿದ್ದೀನಿ. ಈ ಉತ್ತರ ಭಾರತದ ಮಹಿಳೆಯರಿಗೆ ಹಿಂದಿನಿಂದಲೂ ಕಟ್ಟು ಪಾಡುಗಳು ಹೆಚ್ಚು. ಪುರುಷ ಪ್ರಾಧಾನ್ಯತೆ ಅನ್ನುವುದು ಅವರಲ್ಲಿ ಇವತ್ತಿಗೂ ಅಂಟಿಕೊಂಡಿರುವ ವಿಷಯ. ಅವರವರ ಪರಿಸ್ಥಿತಿಗೆ ತಕ್ಕಂತೆ ಅಪವಾದಗಳು ಇರಬಹುದಾದರೂ ಶೇಕಡವಾರು ಲೆಕ್ಕ ತೆಗೆದುಕೊಂಡರೆ ಪುರುಷ ಪ್ರಾಧಾನ್ಯತೆ ಇವರ ಕುಟುಂಬಗಳಲ್ಲಿ ಹೆಚ್ಚು. ಈ ವಿಷಯದಲ್ಲಿ ಮುಂಬೈಯ ಮಾರಾಠಿ ಮಹಿಳೆಯರನ್ನು ಬೆಂಗಾಲಿ ಮಹಿಳೆಯರನ್ನು ಹೊರತು ಪಡಿಸಿ ಹೇಳಬೇಕಾಗುತ್ತದೆ. (ಅದಕ್ಕೆ ಹಲವಾರು ಕಾರಣಗಳಿವೆ)
ಮಾರ್ವಾಡಿ ಗುಜರಾತಿ ಬಿಹಾರಿ ರಾಜಸ್ಥಾನಿ.. ಇವರಲ್ಲಿನ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ವೃತ್ತಿ ಆಯ್ಕೆ ಸ್ವಾತಂತ್ರ್ಯ ಕಡಿಮೆ. ಅದರಲ್ಲೂ ಓದಿದ್ದರೂ ವೃತ್ತಿಯ ಕಾರಣಕ್ಕೆ ಹೊರಗೆ ಒಬ್ಬಂಟಿಯಾಗಿ ಹೋಗುವ ಅವಕಾಶಗಳಂತೂ ತೀರಾ ಕಡಿಮೆ.ಇವರಲ್ಲಿ ಹೆಚ್ಚಿನಂಶ ವ್ಯಾಪಾರಸ್ಥ ಕುಟುಂಬದವರೇ ಆದ್ದರಿಂದ ಸಾಕಷ್ಟು ಮನೆಗಳಲ್ಲಿ ಆರ್ಥಿಕ ತೊಂದರೆ ಅಷ್ಟಾಗೇನೂ ಕಾಡುವುದಿಲ್ಲ. ಹಾಗೆ ನೋಡಿದರೆ ತುಂಬಾ ಅನುಕೂಲಸ್ಥರು ಸಾಕಷ್ಟು ಜನರಿದ್ದಾರೆ.
ಇವರ ಮನೆಯ ಹೆಣ್ಣು ಮಕ್ಕಳಿಗೆ ಐಶಾರಾಮಕ್ಕೇನೂ ಕೊರತೆ ಇರುವುದಿಲ್ಲ. ಆದರೂ ಇತ್ತೀಚೆಗೆ ಅಂಥ ಕುಟುಂಬದ ಹೆಣ್ಣುಮಕ್ಕಳಿಗೂ ಸ್ವತಃ ದುಡಿಯುವ ತಮ್ಮ ಅಸ್ತಿತ್ವ ಕಂಡುಕೊಳ್ಳುವ ತುಡಿತ ಹೆಚ್ಚಾಗಿದೆ.ಮನೆಯಲ್ಲಿ ವ್ಯಾಪಾರಸ್ಥರೇ ಹೆಚ್ಚಾಗಿ ಇರುವ ಕಾರಣ ಸಹಜವಾಗಿಯೇ ವ್ಯಾಪಾರದ ಗುಟ್ಟುಗಳು ಚಿಕ್ಕ ವಯಸ್ಸಿನಿಂದಲೇ ಕರತಲಾಮಲಕವಾಗಿರುತ್ತದೆ.
ಈ ಅನುಕೂಲಗಳಿಂದಾಗಿ ಇಂದಿನ ಹೆಚ್ಚು ಉತ್ತರ ಭಾರತೀಯ ಮಹಿಳೆಯರು ಹೆಚ್ಚು ಪ್ರಚಾರಕ್ಕೆ ಬರದೆಯೂ ಮನೆಯಿಂದಲೇ ವ್ಯಾಪಾರ ವಹಿವಾಟುಗಳನ್ನು ಮಾಡುತ್ತಾ ಸಬಲೀಕರಣ ಹೊಂದುತ್ತಿದ್ದಾರೆ. ಅವರಿಗೆ ತಾವು ವ್ಯಾಪಾರ ಮಾಡುತ್ತಿರುವುದರ ಬಗ್ಗೆ ಯಾವುದೇ ಕೀಳರಿಮೆ ಇಲ್ಲ. ಕೆಲವು ಮಹಿಳೆಯರಂತೂ ವ್ಯಾಪಾರದಲ್ಲಿ ಪುರುಷರನ್ನೂ ಮೀರಿಸುವ ಚಾಕಚಕ್ಯತೆ ತೋರಿಸಿ ಕಡೆಗೆ ಅವರ ಮನೆಯ ಪುರುಷರೇ ಅವರ ವ್ಯವಹಾರಗಳಿಗೆ ಒತ್ತಾಸೆಯಾಗಿ ನಿಲ್ಲುತ್ತಿದ್ದಾರೆ.
ಹೀಗೆ ಮನೆಯಿಂದಲೇ ವ್ಯಾಪಾರ ಮಾಡಿ ಅಂತರಾಷ್ಟ್ರೀಯ ಮಟ್ಟದ ವರೆಗೆ ಹೆಸರು ಮಾಡಿದವರ ಬಗ್ಗೆ ನಾನೇನು ಹೇಳಬೇಕಿಲ್ಲ. ಎಲ್ಲವೂ ಮಾಧ್ಯಮದ ಮೂಲಕ ತಿಳಿಯುವಂತದ್ದೆ. ಇವರಿಂದ ಇಡೀ ಭಾರತದ ಮಹಿಳೆಯರು ಕಲಿಯುವಂತದ್ದು ಸಾಕಷ್ಟಿದೆ. ಇವರ ವ್ಯಾಪಾರ ಕೌಶಲ್ಯಗಳು ಅನುಕರಣೀಯ. ಇಂಥವರಲ್ಲಿ ದುಡಿಮೆ ಅನ್ನುವುದು ಅವಶ್ಯಕತೆಗಿಂತ ಅಭ್ಯಾಸ ಆಗಿ ಹೋಗಿದೆ.
ಅದೇ ನಮ್ಮ ದಕ್ಷಿಣದ ಕಡೆಯ ಹೆಣ್ಣು ಮಕ್ಕಳನ್ನು ತೆಗೆದುಕೊಂಡರೆ ಬಹಳ ಬೇಗ ಸಾಕ್ಷರತೆಗೆ ತೆರೆದುಕೊಂಡವರು ಹಾಗೂ ಶೇಕಡವಾರು ಲೆಕ್ಕದಲ್ಲಿ ವಿದ್ಯಾಭ್ಯಾಸ ಹಾಗು ವೃತ್ತಿಯ ಆಯ್ಕೆ ವಿಷಯದಲ್ಲಿ ಉತ್ತರ ಭಾರತೀಯ ಮಹಿಳೆಯರಿಗಿಂತ ಹೆಚ್ಚು ಸ್ವತಂತ್ರರು. ಇವರ ತಲೆಗಳಲ್ಲಿ ಚಿಕ್ಕಂದಿನಿಂದಲೂ ವಿದ್ಯಾಭ್ಯಾಸದ ಪ್ರಾಮುಖ್ಯತೆ ಬಗ್ಗೆ ಮನೆ ಮನೆಗಳಲ್ಲಿ ತುಂಬಿರುತ್ತಾರಾಗಲೀ, ವ್ಯಾಪಾರ ವ್ಯವಹಾರದ ಬಗ್ಗೆ ಅಲ್ಲ. ವ್ಯಾಪಾರ ಮಾಡುವವರ ಬಗ್ಗೆ ಇವರಲ್ಲಿ ಒಂದು ರೀತಿಯ ಉದಾಸೀನತೆ ಅಥವಾ ಅದು ಅನವಶ್ಯಕ ಕೆಲಸ ಎನ್ನುವ ಭಾವವೇ ಹೆಚ್ಚು. ಇಲ್ಲೂ ಕೂಡ ಕೆಲವರು ಅಪವಾದವಾಗಿ ಇರಬಹುದು.
ಇವತ್ತಿಗೂ ಮನೆಯಿಂದ ವ್ಯಾಪಾರ ವ್ಯವಹಾರ ಮಾಡುತ್ತಿರುವ ಮಹಿಳೆಯರನ್ನು ಕಂಡರೆ ಹೆಚ್ಚಿನವರಿಗೆ ಪಾಪ ಹೆಚ್ಚು ಕಲಿಯದವರೇನೋ ಅನ್ನುವ ಅನಿಸಿಕೆ ಹುಟ್ಟಿಬಿಡುತ್ತದೆ. ಹಾಗಾಗಿ ವ್ಯಾಪಾರದ ವಿಷಯದಲ್ಲಿ ನಮ್ಮ ದಕ್ಷಿಣ ಭಾರತದ ಮಹಿಳೆಯರು ಉತ್ತರ ಭಾರತೀಯ ಮಹಿಳೆಗಿಂತ ಹಿಂದೆ ಎಂದೇ ಹೇಳಬೇಕು. ನಾವಿನ್ನು ಎಂಜಿನಿಯರ್ ಡಾಕ್ಟರ್ ಸರ್ಕಾರಿ ಅಧಿಕಾರಿಗಳು ಇಂಥವರು ಮಾತ್ರ ಸಮಾಜದಲ್ಲಿ ಮಾನ್ಯರು ಅನ್ನುವ ದೃಷ್ಟಿಕೋನದಿಂದ ಹೊರ ಬರಬೇಕಾದ ಅವಶ್ಯಕತೆ ಹಿಂದೆಂದಿಗಿಂತ ಇಂದು ಅತ್ಯಗತ್ಯವಾಗಿದೆ.
ಮನೆಯಿಂದ ಸಣ್ಣ ಪುಟ್ಟ ವ್ಯವಹಾರ- ವ್ಯಾಪಾರ ಮಾಡುವುದು ನಾಲ್ಕು ಜನರಿಗೆ ತಿಳಿದರೆ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತದೆ ಎಂಬ ಹುಂಬತನದಿಂದ ಇಲ್ಲಿಯ ಮಹಿಳೆಯರು ಮೊದಲು ಹೊರಬರಬೇಕಿದೆ. ಹಾಗೆಯೇ ಮನೆಯ ಇತರ ಸದಸ್ಯರೂ ಕೂಡ ತಮ್ಮ ಮನೆಯ ಹೆಂಗಸರಲ್ಲಿ ಸೂಕ್ತವಾದ ಯಾವುದೇ ಕೌಶಲ್ಯ ವಿದ್ದರೆ ಅವರನ್ನು ಪ್ರೋತ್ಸಾಹಿಸಿ ಆ ಮೂಲಕ ಆರ್ಥಿಕ ಭದ್ರತೆ ಕಂಡುಕೊಳ್ಳಲು ಸಹಾಯ ಮಾಡಬೇಕಿದೆ. ಈಗಂತೂ ಸೋಶಿಯಲ್ ಮೀಡಿಯಾಗಳು ಬೆರಳ ತುದಿಯಲ್ಲೇ ಲಭ್ಯವಿರುವಾಗ ಅವುಗಳ ಸದುಪಯೋಗ ಮಾಡಿಕೊಂಡು ದೇಶದ ಆರ್ಥಿಕ ಬೆಳವಣಿಗೆಗೆ ಸಣ್ಣ ಮಟ್ಟದಲ್ಲೇ ಸರಿ, ಕೊಡುಗೆ ನೀಡಬಹುದಾಗಿದೆ.
ಟಿಫಿನ್ ಲಂಚ್ ಚಾಟ್ ಸರ್ವಿಸ್
ಇದಕ್ಕೆ ಪೂರಕವಾದ ಒಂದು ಸಂಗತಿಯನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ. ನಾನು ನಮ್ಮ ಬೆಂಗಳೂರಿನ ಫ್ಲಾಟ್ ಒಂದನ್ನು ಬಾಡಿಗೆದಾರರಿಂದ ಬಿಡಿಸಿಕೊಂಡು ನಾವು ಮುಂಬೈಯಿಂದ ಬೆಂಗಳೂರಿಗೆ ಆಗಾಗ ಹೋದಾಗ ಉಳಿದುಕೊಳ್ಳುವುದಕ್ಕೆ ಬೇಕಾಗುತ್ತದೆ ಎಂದು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು. ಆ ಸಮಯದಲ್ಲಿ ಅಲ್ಲಿಯ ವಸತಿ ಸಮುಚ್ಚಯದಲ್ಲಿಯೇ ಸುಮಾರು ವಾಟ್ಸಾಪ್ ಗ್ರೂಪ್ಗಳು ಇರುವುದು ಪರಿಚಿತರಿಂದ ತಿಳಿದು ಬಂತು. ಹಲವಾರು ವ್ಯಾಪಾರಗಳು ಆ ಮೂಲಕ ನಡೆಯುತ್ತದೆ. ಅದರಲ್ಲಿ ಸ್ಥಳೀಯ ಮಹಿಳೆಯರೇ ಟಿಫಿನ್ ಲಂಚ್ ಚಾಟ್ ಸರ್ವಿಸ್ ನೆಡೆಸುವ ವ್ಯವಸ್ಥೆ ಕೂಡ ಮಾಡಿಕೊಂಡಿದ್ದಾರೆ. ಅಲ್ಲಿರುವ ಹೆಚ್ಚಿನಂಶ ಎಲ್ಲರೂ ಆರ್ಥಿಕವಾಗಿ ಅನುಕೂಲಸ್ಥರೆ. ಹೆಚ್ಚಿನವರು ಉತ್ತರ ಭಾರತೀಯರು. ಅವರು ತಮ್ಮ ಮನೆಗಳಿಂದಲೇ ಖಾದ್ಯಗಳನ್ನು ತಯಾರಿಸಿ ಗ್ರೂಪ್ ಅಲ್ಲಿ ಪ್ರಾಚಾರ ಕೊಟ್ಟು ಮಾರಾಟ ಮಾಡುತ್ತಾ ಬಂದಿದ್ದಾರೆ. ಆ ಇಡೀ ಗುಂಪಿನಲ್ಲಿ ಸರಿಯಾದ ದಕ್ಷಿಣ ಭಾರತದ ತಿನಿಸು ಮಾತ್ರ ಸಿಗುವುದಿಲ್ಲ. ಸಿಕ್ಕರೂ ಹೇಳಿಕೊಳ್ಳುವಂಥದ್ದಲ್ಲ. ಕಾರಣ ಮತ್ತೆ ಹೇಳಬೇಕಿಲ್ಲ.
ಒಮ್ಮೆ ನಾನು ನಾಲ್ಕು ಪಾನಿಪುರಿ ಆರ್ಡರ್ ಕೊಟ್ಟಿದ್ದೆ. ತಯಾರಿಸಿ ಮಾರುವ ಮಹಿಳೆ ಇಪ್ಪತ್ತು ರುಪಾಯಿಗೆ ಒಂದು ಪ್ಲೇಟ್ ಮನೆಗೇ ತಲುಪಿಸುವವರಿದ್ದರು. ನನಗೆ ಇಲ್ಲಿಯ ಪಾನಿಪುರಿ ಮಾರುವವರನ್ನು ಹೆಚ್ಚಾಗಿ ನೋಡಿದ್ದ ಕಾರಣ.. ತಂದು ಕೊಡುವವರ ಬಗ್ಗೆ ಹೆಚ್ಚೇನೂ ನಿರೀಕ್ಷೆ ಇರಲಿಲ್ಲ. ಮನೆಯ ಸಾಮಾನುಗಳನ್ನು ಜೋಡಿಸುವುದರಲ್ಲಿ ನಾವು ನಿರತರಾಗಿದ್ದೆವು. ಬಟ್ಟೆಗಳು ಗಲೀಜಾಗಿ ನಾವೇ ಸ್ವತಃ ಏನಾದರು ಮನೆಯಲ್ಲೇ ಮಾಡಿಕೊಂಡು ತಿನ್ನಲು ಸಮಾಯಾಭಾವವೂ ಇತ್ತು. ಹಾಗಾಗಿ ಹೊರಗಿಂದ ತರಿಸುವುದು ಅನಿವಾರ್ಯವೂ ಆಗಿತ್ತು.
ಕೆಲ ಸಮಯದ ನಂತರ ಆರ್ಡರ್ ಕೊಟ್ಟ ಪಾನಿಪುರಿ ಮನೆಗೆ ಬಂತು. ತಂದವರು ಎಷ್ಟು ಶಿಸ್ತಾಗಿ ಶುಭ್ರವಾಗಿ ಸುಂದರವಾಗಿ ತಾಯಾರಾಗಿ ಬಂದಿದ್ದರೆಂದರೆ ನಮಗೆ ನಮ್ಮ ಆ ಸ್ಥಿತಿಯಲ್ಲಿ ಅವರನ್ನು ಸ್ವಾಗತಿಸಬೇಕಾಗಿ ಬಂದದ್ದು ಬಹಳ ಮುಜುಗರವನ್ನುಂಟು ಮಾಡಿತ್ತು.
ಬಂದವರು ಪಾನಿಪುರಿ ತಯಾರಿಸುವ ಮಹಿಳೆಯ ಪತಿ. ಅವರು ಒಳ್ಳೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ನಮ್ಮ ಕಮಿಟಿಯ ಸದಸ್ಯರು ಹೌದು ಎಂಬುದು ನಂತರ ತಿಳಿದುಬಂತು. ಕೊಡುವ ಒಂದು ಇಪ್ಪತ್ತು ರುಪಾಯಿ ಪಾನಿ ಪುರಿಯ ಬಗ್ಗೆ ಅದೆಂತಾ ಹೆಮ್ಮೆ ಇತ್ತು ಎನ್ನುವುದು ಅವರ ಮಾತು ಹಾವ ಭಾವವನ್ನು ನೋಡಿಯೇ ತಿಳಿಯಬೇಕು. ಅವರ ಪತ್ನಿ ತಯಾರಿಸುವ ಪಾನಿಪುರಿ ಉತ್ಕೃಷ್ಟ ಮಟ್ಟದ್ದೆಂದು, ಅದನ್ನು ತಿಂದ ಮೇಲೆ ಅದರ ಬಗ್ಗೆ ನಮ್ಮ ಅನಿಸಿಕೆ ಹೇಳುವುದು ಬಹಳ ಮುಖ್ಯವೆಂದು ದೊಡ್ಡ ಕಾರ್ಪೋರೇಟ್ ಡೀಲ್ ಎನ್ನುವ ರೀತಿಯಲ್ಲಿ ತಾಳ್ಮೆಯಿಂದ ವಿವರಿಸಿ ಹೋದರು. ಅವರು ಹೇಳಿದ ರೀತಿಯಲ್ಲೇ ಪಾನಿಪುರಿ ಚೆನ್ನಾಗಿತ್ತು ಸಹ. ಅದನ್ನು ಅವರಿಗೆ ಮೆಸೇಜ್ ಮಾಡಿ ತಿಳಿಸಿದೆವು ಅವರಿಗೂ ಸಿಕ್ಕ ಪ್ರೋತ್ಸಾಹಕ್ಕೆ ಖುಶಿ ಆಯಿತು. ಅವತ್ತಿನಿಂದ ನಾವು ಅವರು ಪರಿಚಿತರಾದೆವು.ಎರಡು ಸಾವಿರ ಮನೆಗಳನ್ನು ಹೊಂದಿರುವ ಕಾಂಪ್ಲೆಕ್ಸ್ ಅಲ್ಲಿ ಯಾವುದೇ ಸಂಭ್ರಮಾಚರಣೆಗಳು ನೆಡೆಯುತ್ತಿದ್ದರೂ ಆತ ಮುಂದೆ ನಿಂತು ಎಲ್ಲರನ್ನು ಪಾಲ್ಗೊಳ್ಳುವಂತೆ ಹುರಿದುಂಬಿಸುವ ರೀತಿಯನ್ನು ನಾವು ಇವತ್ತಿಗೂ ಅಚ್ಚರಿ ಹಾಗು ಮೆಚ್ಚುಗೆಯಿಂದ ನೋಡುತ್ತೇವೆ. ನಾವು ಮಾಡುವ ಯಾವುದೇ ಕೆಲಸದಲ್ಲಿ ಘನತೆ ಹೇಗಿರಬೇಕೆಂದು ಅರ್ಥವಾಗಿದೆ.
ನನಗೀಗ ಸ್ವತಃ ನಾನು ಮಾಡುತ್ತಿರುವ ಹ್ಯಾಂಡ್ ಮೇಡ್ ಸೋಪುಗಳ ಬಗ್ಗೆ ಅದರ ಮಾರಾಟದ ಬಗ್ಗೆ ಮತ್ತಷ್ಟು ಗೌರವ ಆಸಕ್ತಿ ಹೆಚ್ಚಾಗಿದೆ. ನಿಮಗೂ ಈ ಬರಹ ಆ ನಿಟ್ಟಿನಲ್ಲಿ ಪ್ರೋತ್ಸಾಹಿಸಲಿ ಎಂಬುದು ನನ್ನ ಆಶಯ.
ತುಂಬ ಚಂದದ ನಿರೂಪಣೆ. ಮೆಟ್ಟಿಲುಗಳನ್ನ ಒಂದೊಂದೇ ಏರಿ
ಯಶದ ಘಟ್ಟದಲ್ಲಿದ್ದಾರೆ. ಗೌರವಾನ್ವಿತ ಅಪರ್ಣಾರಾವ್ ಅವರಿಗೆ ಉದ್ಯಮ
ಫಲಪ್ರದವಾಗಿ ವಿಸ್ತಾರಗೊಳ್ಳಲಿ ಎಂದು ಹಾರೈಸುವೆ
🙂🙏
Inspiring story madam… Where there is a will there is a way….
🙂👍. thank you
Smt. ಅಪರ್ಣರಾವ್ ರವರ ಯಶೋಗಾಥೆ ಅವರ ಬರಹ ರೊಪದಲ್ಲಿ ಪರಿಪೂರ್ಣ ವಾಗಿ ಮೂಡಿಬಂದಿದೆ. ಪ್ರಪಂಚ ಕೊಡಾ ಪ್ರಕೃತಿಯಷ್ಟೇ ವಿಶಾಲವಾದುದು ಎಂಬ ಅವರ ಮಾತು ಮಾರ್ಮಿಕ ವಾದದ್ದು. ಅಂತೆಯೇ ಕಲಿಯಲು ವಯಸ್ಸಿನ ಮಿತಿ ಇರುವುದಿಲ್ಲ. ಇದು ಕಲಿಯುಗ ಜೀವನ ಪರ್ಯಂತ ಕಲಿತರೂ ಮುಗಿಯದಷ್ಟು ವಿಷಯಗಳು ಇವೆ. ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಹಠ ವಿರುವ ವ್ಯಕಿಗೆ ಭಗವಂತ ದಾರಿ ತೋರಿಸುತ್ತಾನೆ. ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡಲ್ಲಿ ಪ್ರಗತಿಯನ್ನು ಕಾಣಬಹುದು. ಶಿಸ್ತುಳ್ಳ ಮನುಜಗೆ ಶಿವನು ತಲೆ ಬಾಗುತ್ತಾನೆ. ಎಂಬ ದಿವ್ಯ ಸಂದೇಶ ನೀಡಿದ ಅವರ ಬರಹ ಮುದ ನೀಡಿತು. ಅವರು ತಮ್ಮ ಕಾರ್ಯದಲ್ಲಿ ಇನ್ನೂ ಹೆಚ್ಚೆಚ್ ಜಯಶೀಲರಾಗಲಿ ಎಂದು ಹಾರೈಸುವೆ 🙏🙏
🙂🙏
ನಿಮ್ಮ ಶ್ರಮ, ನಿಮ್ಮ ಸಫಲತೆ ಎಲ್ಲರಿಗೂ ದಾರಿ ದೀಪವಾಗಲಿ. ಸೋಪು ಚೆನಾಗಿದೆ. ನಾನು ನನ್ನ ತಂಗಿ ಮನೇಲಿ ಬಳಸಿರುವೆ. ಸೂಪರ್ ಅಪರ್ಣ
🙂❤
ನೀವು ಆರಂಭಿಸಿರುವ ಮಹಿಳಾ ಮಾರುಕಟ್ಟೆಯ ಫೇಸ್ ಬುಕ್ ಪೇಜಿನ ಬಗ್ಗೆಯೂ ಕೇಳಿ ತಿಳಿದಿದ್ದೇನೆ. ಅದರ ಬಗ್ಗೆಯೂ ವಿವರ ನೀಡಿ.
ಅಪರ್ಣ ಅವರ ಸ್ವಂತ ಪರಿಶ್ರಮ ಹಾಗೂ ಅನುಭವ ವನ್ನು ಓದಿ ಬಹಳ ಸಂತೋಷವಾಯಿತು . ಯಾವುದೇ ವಿಷಯದಲ್ಲೂ ಮನಸ್ಸಿದ್ದರೆ ಮಾರ್ಗ ವಿರುತ್ತದೆ ಎಂಬ ಮಾತಿಗೆ ಅನ್ವರ್ಥವಾಗಿದೆ.
🙂 👍
ಯಾವುದೇ ಉದ್ಯಮವಾಗಲೀ ಅದು ಕೀಳಲ್ಲ. Dignity of labour ಬಗ್ಗೆ ನಾವಿನ್ನೂ ಕಲಿಯಬೇಕು. ತುಂಬಾ ಒಳ್ಳೆ ಲೇಖನ
ಸ್ವಾನುಭವದ ತಮ್ಮ ಲೇಖನ ಮತ್ತು ಬರಹ ಶೈಲಿ ಇಷ್ಟವಾಯ್ತು.
ಸೃಜನಶೀಲೆ ಹೆಣ್ಣು , ಆರ್ಥಿಕವಾಗಿ ಸಬಲೆಯಾಗಿ ಸಮಾಜಕ್ಕೆ ಮಾದರಿ ಆದವರ ಪಟ್ಟಿ ದೊಡ್ಡದಿದ್ದರೂ, ಮದುವೆ ಆದ್ರೆ ಎಲ್ಲ ಮುಗಿತು ಎನ್ನುವಂತಹ ಹೆಣ್ಣಿಗೆ ನಿಮ್ಮ ಈ ಅನುಭವ,ಬರಹ ಸ್ಫೂರ್ತಿ ಮತ್ತು ಮಾದರಿ.
ಧನ್ಯವಾದಗಳು ನಿಮ್ಮ ಅಭಿರುಚಿಯ ಯಶಸ್ಸಿಗೆ.
ಸ್ಪೂರ್ತಿದಾಯಕ
ಜೀವನಗಾಥೆ
ಚೆಂದದ ನಿರೂಪಣೆ
ಈ ಲೇಖನ ಸಣ್ಣ ಪ್ರಮಾಣದ ಉದ್ದಿಮೆ ಮಾಡ ಬಯಸುವವರಿಗೆ ದಾರಿದೀಪದಂತೆ ಸಹಾಯಕ. ನಿಮ್ಮ ಪರಿಶ್ರಮದಿಂದ ಮೂಡಿದ ಸಾಬೂನು ನೋಡಲೇ ನಮಗೆ ಹೆಮ್ಮೆ. ಖುಷಿಯಾಯಿತು.
ಎಲ್ಲರಿಗೂ ಮನಃಪೂರ್ವಕವಾಗಿ ಧನ್ಯವಾದ. 😊🙏