26.3 C
Karnataka
Saturday, November 23, 2024

    ಬಿಡುವುನೆಂದರೂ ಬಿಡದ Modern Physics ಎಂಬ ಮಾಯೆ

    Must read

    ಒಮ್ಮೆ ತತ್ವಜ್ಞಾನಿಯಂತೆ ,ಮತ್ತೊಮ್ಮೆ ವಿಜ್ಞಾನಿಯಂತೆ, ಮಗದೊಮ್ಮೆ ರಾಜಕೀಯ ವಿಶ್ಲೇಷಕರಂತೆ ತಾವು ಕಂಡ ಸಂಗತಿಗಳನ್ನು ಸರಳ ಕನ್ನಡದಲ್ಲಿ ಮಂಡಿಸುವ ಮಂಜುನಾಥ ಬೊಮ್ಮಘಟ್ಟ ಕನ್ನಡಪ್ರೆಸ್ .ಕಾಮ್ ನ ಜನಪ್ರಿಯ ಲೇಖಕರಲ್ಲಿ ಒಬ್ಬರು. . ಎಲ್ಲರನ್ನೂ ಆವರಿಸಿರುವ ಭೌತಶಾಸ್ತ್ರದ ಕೌತುಕಗಳನ್ನು ಬೆಡಗಿನಿಂದ ನೋಡಿದ ಸಂದರ್ಭಗಳನ್ನು ಈ ಬರಹದಲ್ಲಿ ದಾಖಲಿಸಿದ್ದರೆ. ಓದಿ ಪ್ರತಿಕ್ರಿಯಿಸಿ

    ಸೈಕಲ್ ಮತ್ತು ರೇಡಿಯೋ ಗಳು ಶ್ರೀಮಂತ ಜೀವನದ ಸಾಧನಗಳಾಗಿದ್ದ ಕಾಲದಲ್ಲಿ ನನ್ನ ಬಾಲ್ಯ ಕಳೆದಿತ್ತು. ಎಲ್ಲರ ಮನೆ ರೇಡಿಯೋ ಗಳಲ್ಲಿ ಒಬ್ಬಳೇ ಹೆಂಗಸು ಮಾತಾಡ್ತಾಳಲ್ಲ ಎನ್ನುವಂತಹ ಅನುಮಾನ ಬಹಳ ದಿನಗಳವರೆಗೆ ನನ್ನಲ್ಲಿ ಇತ್ತು. ಅಂಚೆ ಇಲಾಖೆ ಹೇಗೆ ಕೆಲಸ ಮಾಡುತ್ತೆ ಅನ್ನುವ ಬಗ್ಗೆ ಪಠ್ಯದಲ್ಲಿ ಹೇಳಿದ್ದರೇ ವಿನಾ ರೇಡಿಯೋ ಬಗ್ಗೆ ಹೇಳಿರಲಿಲ್ಲ. ಅಂದರೆ ಅದು ಆಗ್ಗೆ ಭಯಂಕರ ತಾಂತ್ರಿಕತೆಯನ್ನು ಒಳಗೊಂಡ ಸಾಧನ!

    ನನ್ನ ಅನುಮಾನ ಪರಿಹಾರ ಆದದ್ದು ನಾನು ಎಂಜಿನಿಯರಿಂಗ್ ಸೇರಿದ ಮೇಲೆಯೇ. ಹೌದು ಅಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಟೆಲೆ ಕಮ್ಯುನಿಕೇಶನ್ ಎನ್ನುವ ಭಾಗದ ನನ್ನ ಹಿರಿಯ ಸ್ನೇಹಿತರಲ್ಲಿ ಚರ್ಚಿಸಿ ನನ್ನ ಅನುಮಾನ ಪರಿಹಾರ ಮಾಡಿಕೊಂಡಿದ್ದೆ. ಅಷ್ಟರಲ್ಲಾಗಲೇ ಟೀವಿ ಬಂದಿತ್ತು. ಆದರೆ ಅದರ ವೀಕ್ಷಣೆ ಎಲ್ಲರಿಗೂ ಸಾಧ್ಯ ಇರಲಿಲ್ಲ,ಟವರ್ ಬೇಕಿತ್ತು. ರಾಗಿಂಗ್ ನೆಪದಲ್ಲಿ ಪರಿಚಯವಾಗಿದ್ದ ಧಾರವಾಡದ,ಆಗ 3ನೇ ವರ್ಷದಲ್ಲಿದ್ದ(ಹೆಸರು ನೆನಪಾಗುತ್ತಿಲ್ಲ) ಹಿರಿಯನಲ್ಲಿ ಒಂದು ಸಾಯಂಕಾಲ ಕಾಲೇಜ್ ಬೀಚ್ ನಲ್ಲಿ ‘ಸಾರ್ ಎಲ್ಲೋ ಡೆಲ್ಲಿ,ಶ್ರೀಲಂಕಾ ದಲ್ಲಿ ಮಾತಾಡುವ ಹೆಂಗಸು ರೇಡಿಯೋದಲ್ಲಿ ನಮಗೆ ಎಲ್ಲಿ ಬೇಕಾದ್ರೂ ಕೇಳಿಸ್ತಾಳೆ,ಈ ಟೀವಿ ಜನ ಏಕೆ ನಮ್ಮೂರಲ್ಲಿ ಕಾಣಿಸಲ್ಲ’ ಅಂತ ಕೇಳಿದ್ದೆ. ಶಬ್ದ ತರಂಗಗಳು ಸುರಳಿಯಾಗಿ ಚಲಿಸುತ್ತವೆ,ಬೆಳಕಿನ ಕಿರಣ ನೇರವಾಗಿ ಚಲಿಸುತ್ತೆ ಅಂತ ಓದಿದ್ದೀಯ? ಅಂತ ಕೇಳಿದಾಗ,ಎಲ್ಲ ಒಮ್ಮೆಗೇ ಅರ್ಥವಾದಂತೆ ಭಾಸವಾಗಿತ್ತು.

    ಈ ಅಂಶಗಳನ್ನು 5ನೇ ತರಗತಿಯಲ್ಲಿ UNECEF science ಅಂತ ನಮಗಿದ್ದ ವಿಜ್ಞಾನ ಪಠ್ಯದಲ್ಲಿ ಇದ್ದದ್ದು,ಮೂರು ರಟ್ಟಿನ ಪ್ರಯೋಗ ಮಾಡಿ ಬೆಳಕು ನೇರ ಚಲನೆ ಹೊಂದಿದೆ ಅಂತ ಹೇಳಿದ್ದು ,ನಿಂತ ನೀರಲ್ಲಿ ಕಲ್ಲು ಹಾಕಿದಾಗ ಮೂಡುವ ನೀರಿನ ಸುರಳಿ ನೋಡಿದ್ದೀರಾ ಅಂತ ಕೇಳಿದ್ದ ನನ್ನ ಪ್ರಾಥಮಿಕ ಶಾಲೆಯ ವಿಜ್ಞಾನದ ಶರಣಪ್ಪ ಮೇಸ್ಟ್ರು ಎಲ್ಲ ನೆನಪಾಗಿತ್ತು. 5ನೇ ತರಗತಿಯಲ್ಲಿ ಓದಿದ್ದು ಏನು ಅಂತ ತಿಳಿಯಲು ನಾನು ಪಿಯುಸಿ ಯಲ್ಲಿ ಶೇಕಡ 98 ಅಂಕ ಪಡೆದು,ಸುರತ್ಕಲ್ ಎಂಜಿನಿಯರಿಂಗ್ ಕಾಲೇಜ್ ಸೇರಬೇಕಾಯ್ತು! ಇದನ್ನು ವಿಪರ್ಯಾಸ ಅನ್ನದೆ ಬೇರೆ ಏನು ಹೇಳಲಿ?

    ಇನ್ನು ಸೈಕಲ್…..ಇದರಷ್ಟು ಹುಚ್ಚು ನನಗೆ ಬಾಲ್ಯದಲ್ಲಿ ಬೇರೆ ಯಾವುದೂ ಹುಟ್ಟಿಸಿದ್ದಿಲ್ಲ. ಅದರ ಗಾಲಿಗಳು, ಕಡ್ಡಿಗಳು, ಭಯಂಕರ ಚೂಪಾದ ಹಲ್ಲುಗಳನ್ನು ಹೊಂದಿದ್ದ ಎರಡು ವಿವಿಧ ಗಾತ್ರದ ಸ್ಟೀಲ್ ಚಕ್ರಗಳು,ಅವುಗಳನ್ನ ಸೇರಿಸಿದೆಯೇನೋ ಎನ್ನುವಂತಹ ವಿಚಿತ್ರ ತೂತುಗಳಿರುವ ಚೈನ್, ತ್ರಿಕೋಣದಲ್ಲಿದ್ದ ಒಂದು ಇಂಚು ಗಾತ್ರದ ಕಬ್ಬಿಣದ ಪೈಪಿನಿಂದ ಮಾಡಿದ್ದ ಅದರ ಅಸ್ಥಿಪಂಜರ,ಚಿಕ್ಕ ಆಸನ, ಸ್ಟ್ಯಾಂಡ್ ಜೊತೆ ಸೇರಿಕೊಂಡಿದ್ದ ಹಿಂದಿನ ಆಸನ, ಆತ್ಮೀಯರನ್ನು ಮುಂದಿನ ಕಂಬಿನ ಮೇಲೆ ಕೂರಿಸಿಕೊಂಡು ಮಾಡುವ ಪಯಣ….ಓಹ್…ಒಂದಾ ಎರಡಾ …ನನ್ನನ್ನು ಮೂಕನನ್ನಾಗಿ ಮಾಡಿದ್ದು?!

    ಸೀಟಲ್ಲಿ ಕೂತರೆ ಪೆಡಲಿಗೆ ನನ್ನ ಕಾಲು ತಾಕುತ್ತಿರಲಿಲ್ಲ,ಹಾಗಾಗಿ ಕಂಬಿಯ ನಡುವೆ ಅಡ್ಡ ಕಾಲಿಂದ ಸೈಕಲ್ ಓಡಿಸುವಾಗ,ಅದು ಹೇಗೆ ಇದು ಬೀಳದೆ ಓಡುತ್ತಿದೆ ಎನ್ನುವ ಅಂಶ ತಲೆ ತಿನ್ನುತ್ತಿತ್ತು. ಚಲನೆಯೇ ಅದನ್ನು ಬೀಳದ ಹಾಗೆ ಹಿಡಿದಿಟ್ಟಿರುತ್ತದೆ ಅಂತ ತಿಳಿಯುವಾಗ ತುಟಿಯ ಮೇಲೆ ಸಣ್ಣಗೆ ಕೂದಲು ಬರಲು ಪ್ರಾರಂಭಿಸಿತ್ತು.

    ವಿಚಿತ್ರ ಕುತೂಹಲಗಳು

    ಆ ವಯಸ್ಸಲ್ಲಿ ಮೂಡುತ್ತಿದ್ದ ವಿಚಿತ್ರ ಕುತೂಹಲಗಳೇ ಮುದ ಕೊಡುತ್ತಿವೆ ಈಗ. ಹಾಗೆ ಮೂಡಿದ್ದ ಕುತೂಹಲಗಳಲ್ಲಿ ಈ ವಿದ್ಯುತ್ ಶಕ್ತಿಯದು ಮತ್ತೊಂದು ಅಧ್ಯಾಯ. ಶಿವನ ಸಮುದ್ರದಲ್ಲಿ ಮೇಲಿನಿಂದ ಬೀಳುವ ನೀರಿಗೆ,ಕೆಳಗೆ ಚಕ್ರಗಳು ತಿರುಗುವ ವ್ಯವಸ್ಥೆಯಿಂದ ಈ ವಿದ್ಯುತ್ ತಯಾರಾಗುತ್ತದೆ ಅಂತ ಹೇಳುವುದನ್ನು ಇನ್ನಿಲ್ಲದ ಕುತೂಹಲದಿಂದ ಕೇಳಿದ ದಿನಗಳು ನನ್ನಿಂದ ಇನ್ನೂ ಮರೆಯಾಗಿಲ್ಲ. ಶಾಲೆಯ ದಾರಿಯಲ್ಲಿ ಊರಲ್ಲಿದ್ದ ಒಂದೇ ಟ್ರಾನ್ಸ್ ಫಾರ್ಮರ್ ಲ್ಲಿ ಈ ವಿದ್ಯುತ್ ನ್ನು ಸಂಗ್ರಹಿಸಿ ಇಟ್ಟಿದ್ದಾರೆನೋ ಅನ್ನುವ ಕುತೂಹಲ ಬೇರೆ. ಅಸಲಿಗೆ ಈ ವಿದ್ಯುತ್ ಸಂಗ್ರಹ,ಉಳಿತಾಯ ಎನ್ನುವುದೂ ತುಂಬಾ ದಿನಗಳವರೆಗೆ ನನಗೆ ತಿಳಿಯದ ವಿಷಯದಲ್ಲಿ ಒಂದಾಗಿತ್ತು. ಕಾರಣ ಪ್ರಪಂಚದ ಎಲ್ಲ ವಸ್ತುಗಳು ಘನ, ದ್ರವ, ಗಾಳಿ ರೂಪದಲ್ಲಿವೆ ಎಂದು ಓದಿದ್ದು. ಹಾಗಾದರೆ ಈ ವಿದ್ಯುತ್ ಯಾವ ರೂಪದಲ್ಲಿ ಶೇಖರಣೆ ಆಗಿದೆ?…..ಇವು ಆಗ ತರಲೆ ಪ್ರೆಶ್ನೆಗಳಾಗಿ ಬಿಂಬಿಸಿಕೊಂಡಿದ್ದೂ ಇದೆ. ಇದನ್ನು ಹಿಡಿದಿಡುವ ಯಾವ ಸಾಧನೆಯೂ ಇಲ್ಲ,ಕಾರಣ ಇದಕ್ಕೆ ಆಕಾರ ಇಲ್ಲ,ಇದೊಂದು ಶಕ್ತಿ,ಉತ್ಪಾದಿಸಿದ ಹಾಗೆ ಇದರ ಬಳಕೆ ಆಗಬೇಕು ಅಂತ ನಾನು ತಿಳಿದದ್ದು ಸಿವಿಲ್ ಎಂಜಿನೀರಿಂಗ್ 3ನೇ ವರ್ಷದಲ್ಲಿ ಇದ್ದ ನೀರನ್ನು ಸಂಗ್ರಹಿಸುವ ಡ್ಯಾಮ್ , ನೀರಿಂದ ವಿದ್ಯುತ್ ಉತ್ಪಾದಿಸುವ ಪರಿಕರಗಳನ್ನು ನಿರ್ಮಿಸುವ ವಿಷಯ ಹೇಳುತ್ತಿದ್ದ ಹೈಡ್ರಾಲಿಕ್ಸ್ ಎನ್ನುವ ವಿಷಯ ಕಲಿಯುವಾಗ!

    ಇನ್ನು ಫೋನ್…ಇದನ್ನು ನಾನು ನೋಡಿದ್ದೇ ಸುರತ್ಕಲ್ ಕ್ಯಾಂಪಸ್ ನಲ್ಲಿ ಮತ್ತು ಆಗಿನ ಕೆಲವು ಸಿನೆಮಾಗಳಲ್ಲಿ. ಪ್ರಾಥಮಿಕ ಶಾಲೆಯ ದಿನಗಳಲ್ಲಿಯೇ ಖಾಲಿ ಬೆಂಕಿ ಪೊಟ್ಟಣಗಳಿಗೆ ದಾರ ಕಟ್ಟಿ ಹಲೋ,ಹಲೋ ಅಂತ ಆಟ ಆಡಿದ್ದರಿಂದಲೋ ಏನೋ ಮತ್ತು ಧ್ವನಿ ಸಂವಹನೆಗೆ ಒಂದು ಮಾಧ್ಯಮ ಬೇಕು ಅಂತ ಓದಿದ್ದರಿಂದಲೋ ವಿವರಿಸಲಾಗದ ಅರ್ಥದೊಂದಿಗೆ ಇದರ ಮರ್ಮ ಅರ್ಥ ಆಗಿತ್ತು. ಇದರ ಮುಂದುವರೆದ ಭಾಗಗಳಾಗಿ ಬಂದಿರುವ ಸೆಲ್ ಫೋನ್,ಸ್ಮಾರ್ಟ್ ಫೋನ್ ಈಗ ವಿಸ್ಮಯಗೊಳಿಸುತ್ತಿವೆ. ಇವುಗಳಿಗೆಲ್ಲ ಬುನಾದಿ ಎಂಬಂತಿದ್ದ ನಾನು ಕಲಿತ ಪಿಯುಸಿ ಯಲ್ಲಿನ ಭೌತಶಾಸ್ತ್ರ ವನ್ನು ಯಾಕೋ ಅವಲೋಕಿಸುವ ಮನಸ್ಸಾಗುತ್ತಿದೆ. ಬರೀ ಅಂಕಗಳನ್ನು ಪಡೆದು ಎಂಜಿನಿಯರ್ರೋ,ಡಾಕ್ಟ್ರೋ ಆಗುವ ಭರದಲ್ಲಿ ಆಗ ಅವಲೋಕಿಸುವ ವ್ಯವಧಾನ ಇರಲಿಲ್ಲವೇನೋ….

    ನಮಗೆ ಭೌತಶಾಸ್ತ್ರ 4 ಭಾಗಗಳ ವಿಷಯವಾಗಿ ಹೇಳಲ್ಪಟ್ಟಿತ್ತು. 1.ಬೆಳಕು(Light)2.ಧ್ವನಿ(sound)3.ಬಿಸಿ(Heat) 4, ಆಧುನಿಕ ಭೌತಶಾಸ್ತ್ರ (Modern Physics)

    ಈ Modern Physics.ಏನೆಂದರೆ ಏನೂ ಅರ್ಥ ಆಗದಿದ್ದ ಆ ದಿನಗಳಲ್ಲಿ,ಅರ್ಥ ಆಗಿದ್ದೆಂದರೆ definition, formulas, problem solving ಅಷ್ಟೇ.(ನನಗೆ ಮಾತ್ರ ಅನ್ವಯಿಸಿ ಹೇಳುತ್ತಿದ್ದೇನೆ. ಬೇರೆಯವರಿಗೆ ಎಲ್ಲ ಅರ್ಥ ಆಗಿರಲಿಕ್ಕೂ ಸಾಕು) ಮಾಡರ್ನ್ ಫಿಸಿಕ್ಸ್ ನಲ್ಲಿದ್ದ ನ್ಯೂಟ್ರಾನ್, ಪ್ರೋಟ್ರಾನ್,ಎಲೆಕ್ಟ್ರಾನ್, ಅಲ್ಫಾ ಕಣ, ಗ್ಯಾಮ ಕಣ, ಬೀಟಾ ಕಣ ದೇವರಾಣೆಗೂ ನನಗೆ ಅರ್ಥ ಆಗಿದ್ದಿಲ್ಲ. ಕಾರಣ ತಲೆ,ಬುಡ ಪರಿಚಯಿಸದೆ ಒಮ್ಮೆಲೇ ವಿಷಯಗಳನ್ನು ಹೇಳುವ ನಮ್ಮ ಪಠ್ಯಕ್ರಮ! ವಿಷಯಗಳಿಗೆ ಅಲ್ಪ,ಸ್ವಲ್ಪ ಪೀಠಿಕೆ ತುಂಬಾ ಸಹಾಯ ಆಗುತ್ತೆ ಅನ್ನುವುದು ನನ್ನ ವೈಯಕ್ತಿಕ ಅನಿಸಿಕೆ…ಇರಲಿ.

    Light ಮತ್ತು Sound ನ ಎಲ್ಲ ಪ್ರಯೋಜನಗಳನ್ನು Modern Physics ಸಹಾಯದೊಂದಿಗೆ ನಮ್ಮ ಜೀವಿತ ಅವಧಿಯಲ್ಲಿ ನೋಡಿ ಅನುಭವಿಸುತ್ತಿರುವುದು ನಮ್ಮ ಪೀಳಿಗೆಯ ಹೆಮ್ಮೆಯೇ ಸರಿ. ನಮ್ಮ ಕಾಲದಲ್ಲಿ ಮಾಡರ್ನ್ ಫಿಸಿಕ್ಲ್ ಅಂತ ಅನ್ನಿಸಿಕೊಂಡು ಶೈವಾವಸ್ಥೆಯಲ್ಲಿದ್ದ ವಿಷಯವು ಇಂದು ಎಲೆಕ್ಟ್ರಾನಿಕ್ಸ್, ಕಮ್ಯುನಿಕೇಶನ್ಸ್ , ಕಂಪ್ಯೂಟರ್ಸ್ ಅಂತ ಅನ್ನಿಸಿಕೊಂಡು ಅಕ್ಷರಶಃ ಪ್ರಪಂಚವನ್ನು ಆವರಿಸಿದೆ. ಎಲೆಕ್ಟ್ರಾನಿಕ್ಸ್ , ಡಿಜಿಟಲ್ ಆದಮೇಲೆ,ಇದರ ಓಟ ಊಹೆಗೂ ನಿಲುಕಲು ಅಸಾಧ್ಯ.

    ಯಾರ ನಿಯಂತ್ರಣ ಇಲ್ಲದೆ ಕೊಚ್ಚಿಹೋಗುತ್ತಿರುವ ಅನುಭವ

    ರೇಡಿಯೋ,ಸೈಕಲ್,ವಿದ್ಯುತ್,ಫೋನ್ ಇಲ್ಲದೇ ಬದುಕಿದ್ದ ನಾವು ಇಂದು ಈ ಡಿಜಿಟಲ್ ಎಲೆಕ್ಟ್ರಾನಿಕ್ಸ್ ನ ಸಾಧನೆ ಆದಂತಹ ಕಂಪ್ಯೂಟರ್,ಸೆಲ್ ಫೋನ್ ಇರದೇ ಘಂಟೆಗಳ ಕಾಲ ಇರಲಾಗುತ್ತಿಲ್ಲ. ಏನಿದು? ಯಾಕಿದು? ಹೀಗೆ ಅಂತ ಆಲೋಚಿಸುವ ವ್ಯವಧಾನ ಯಾರಿಗೂ ಇಲ್ಲ. ಪ್ರವಾಹದ ಅಲೆಯಲ್ಲಿ ಎಲ್ಲವೂ ಎಲ್ಲರೂ ಯಾರ ನಿಯಂತ್ರಣ ಇಲ್ಲದೆ ಕೊಚ್ಚಿಹೋಗುತ್ತಿರುವ ಅನುಭವ ಅಂತೂ ನನಗೆ ಆಗುತ್ತಿದೆ. ಊರು, ದೇಶ ಬಿಡಿ, ಗದ್ದಲದ ಮಕ್ಕಳು ಮನೆಯಿಂದ ಕಾಣೆಯಾಗಿದ್ದಾರೆ, ಗೊಣಗುಡುತ್ತಿದ್ದ ವೃದ್ಧಾರೂ ಕಾಣುತ್ತಿಲ್ಲ. ಯಾವಾಗಲೂ ಯಾವುದಾದ್ರು ವಿಷಯದಲ್ಲಿ ಕಾಣೆಯಾಗುವ ನಡು ವಯಸ್ಕರೂ ಇಂದು ಇದರಲ್ಲೇ ಬಿದ್ದಿದ್ದಾರೆ. ಇಡೀ ಮಾನವ ಪ್ರಪಂಚವನ್ನು ಇಂಥಹ ಮಾಯೆ ಆವರಿಸಿದ್ದು ಯಾವ ಇತಿಹಾಸದಲ್ಲಿ,ಯಾವ ಊಹೆಯ ಪುರಾಣದಲ್ಲಿಯೂ ಇಲ್ಲ! ಈಗ ಏನಾದ್ರು ನಮ್ಮ ವಿಷ್ಣು ಅಕಸ್ಮಾತ್ ಅವತಾರ ತಾಳಿದ್ರೆ,ಕೈಯಲ್ಲಿ ಸುದರ್ಶನ ಚಕ್ರದ ಬದಲಿಗೆ ಸೇಲ್ ಫೋನ್, ಗದೆಯ ಬದಲಿಗೆ lap top ಹಿಡಿಯುವುದು ಗ್ಯಾರಂಟಿ.

    ನಾವು ಪುರಾಣಗಳಲ್ಲಿ ಓದಿದ ಎಲ್ಲ ಅಂಶಗಳೂ ರೂಪ,ವೇಷ ಮರೆಸಿಕೊಂಡು ಈಗ ಪ್ರತ್ಯಕ್ಷವಾಗಿ,ಜನ ಸಾಮಾನ್ಯನೂ ಅನುಭವಿಸಿ,ಪ್ರಯೋಜನ ಪಡೆಯುತ್ತಿರುವುದು ಸಾಮಾನ್ಯವಾಗಿದೆ. ಇಡೀ ಪ್ರಪಂಚ Global Village ಅಂತ ಕರೆಯಿಸಿಕೊಂಡ ಹಳ್ಳಿಯಾಗಿದೆ! ಸೂರ್ಯ,ಚಂದ್ರ,ಗ್ರಹಗಳು,ನಿಲುಕದ ದೂರದಲ್ಲಿದ್ದ ತಾರೆಗಳು ಪಕ್ಕದ ಬೀದಿಯ ಮನೆಗಳಂತೆ ಆಗಿವೆ! ಇನ್ನು ಅದೊಂದು ಇದೆ, Nano Bio Technology ಅಂತ. ಅದನ್ನು ಬೇಕಾಗಿಯೇ ಮನುಷ್ಯ ತಡೆ ಹಿಡಿದಿದ್ದಾನೆ. ಇಲ್ಲವಾದ್ರೆ ಅಕ್ಷರಶಃ ರಕ್ತ ಬಿಜಾಸುರರು ನಮ್ಮ ಮಧ್ಯೆದಲ್ಲಿ ಇಷ್ಟೊತ್ತಿಗೆ ಓಡಾಡುತ್ತಿದ್ದರು!

    ಸೈಕಲ್ ನಿಂದ ಮೋಟಾರ್ ಸೈಕಲ್ಲಿಗೆ ಜಗತ್ತು ಬಂದು ತಲುಪಲು ಹಲವು ದಶಕಗಳ ಕಾಲ ಕಾದಿದ್ದ ಜಗತ್ತು ಇಂದು ಯಾವ ವೇಗದಲ್ಲಿ ಓಡುತ್ತಿದೆಯೆಂದ್ರೆ ಮಾನವನ ಊಹೆಗೆ ನಿಲುಕದ ಸಂಗತಿಯಾಗಿದೆ. ಈಗ ಅವಿಷ್ಕಾರಗೊಂಡ ಒಂದು ತಾಂತ್ರಿಕತೆ,ಹೊರಗೆ ಬಂದು ಕಣ್ಣು ಬಿಡುವಷ್ಟರಲ್ಲಿ ಅದರ ಮುಂದುವರೆದ ತಾಂತ್ರಿಕತೆ ರಾರಾಜಿಸುತ್ತಿರುತ್ತದೆ!ಭೂಮಿಯ ವೇಗವನ್ನು ಕಂಡು ಬೆಚ್ಚಿಬಿದ್ದಿದ್ದ ಮನುಷ್ಯ ಮತ್ತೆ ಬೆಚ್ಚಿರುವುದು ಈಗಲೇ….. ಇವೆಲ್ಲವನ್ನು ಕಂಡು ಅನುಭವಿಸಿದ ನಮ್ಮ ಪೀಳಿಗೆ ನಿಜಕ್ಕೂ ಅದ್ಭುತ ಕಾಲಘಟ್ಟಕ್ಕೆ ಸಾಕ್ಷಿಯಾಗಿದೆ ಅಂತ ಅನ್ನಿಸದೇ ಇರಲಾಗದು. Generations are born for future ಎನ್ನುವಂತೆ ಈಗಿನ ಹುಡುಗರು ಯಾವುದೇ ರೀತಿಯ ವಿಸ್ಮಯಗಳಿಲ್ಲದೆ,ಸಾಮಾನ್ಯದಲ್ಲಿ ಸಾಮಾನ್ಯ ಎನ್ನುವಂತೆ ಸಾಗುತ್ತಿರುವುದು ನೋಡಿಯೂ ಒಮ್ಮೊಮ್ಮೆ ನಾನು ವಿಸ್ಮಯಗೊಂಡಿದ್ದೇನೆ.

    ನಾನು ಓದಿದ್ದ ಭೌತಶಾಸ್ತ್ರದ 3ನೇ ಭಾಗವಾದ HEAT ಹಾಗೆಯೇ ಉಳಿದಿದೆ. ಅದರ ಆವಿಷ್ಕಾರ,ವಿರಾಟ ರೂಪದ ಅಂಶಗಳು ಇನ್ನು ಬರಬೇಕಾಷ್ಠೆ! LIGHT & SOUND ಗಳ ಆರ್ಭಟವೇ ಇಷ್ಟಿರಬೇಕಾದ್ರೆ, ಇನ್ನು HEAT ನ ಆರ್ಭಟ ಊಹಿಸಿಕೊಂಡರೇನೇ ವಿಸ್ಮಯವಾಗುತ್ತೆ ನನಗೆ….ನಿಮಗೆ?
    ವಿಸ್ಮಯ ಎನ್ನುವುದು ಮನುಷ್ಯನನ್ನು ಜೀವಂತವಾಗಿಸಿ ತನ್ನನ್ನು ತಾನು ಪ್ರಕಟಗೊಳ್ಳಲು ಪ್ರಕೃತಿ ನೀಡಿದ ಕಾಣಿಕೆಯಂತೆ ಅಪ್ಪ ಆಗಾಗ ಹೇಳ್ತಿದ್ದರು.

    Photo by Karlis Reimanis on Unsplash

    ಮಂಜುನಾಥ ಬೊಮ್ಮಘಟ್ಟ
    ಮಂಜುನಾಥ ಬೊಮ್ಮಘಟ್ಟ
    ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಬರಹಗಾರ. ಸಧ್ಯ ಬಳ್ಳಾರಿಯಲ್ಲಿ ವಾಸ.
    spot_img

    More articles

    11 COMMENTS

    1. ಶ್ರೀ ಮಂಜುನಾಥ್ ಬೊಮ್ಮಘಟ್ಟ ರವರು ನವಿರಾದ ಬರಹದಲ್ಲಿ modren physics ಬಗ್ಗೆ ಬರೆದಿರುವರು. ಈ ವಿಚಾರಗಳು ಒಮ್ಮೆಲೇ ತಲೆಗೆ ಹೋಗುವುದಿಲ್ಲ. ಅಂತೆಯೇ ಬೆಟ್ಟ -ಗುಡ್ಡಗಳ ಮೇಲೆ ಪಾವನ ಯಂತ್ರ ಗಳನ್ನು ಚಿತ್ರದುರ್ಗ ಕ್ಕೆ ಹೋಗುವ ಮಾರ್ಗದಲ್ಲಿ ನೋಡುತಿದ್ದ ಸಮಯದಲ್ಲಿ ನಾನು ಕೊಡಾ ಮನಸಿನಲಿ ಚಿಂತಿಸುತಿದ್ದೆ ಏನಂದರೆ ಈ ಗುಡ್ಡ -ಬೆಟ್ಟ ಗಳಿಗೂ ಬೇಸಿಗೆಯಲ್ಲಿ ಸೆಖೆ ಆಗುತ್ತದೆ ಹಾಗಾಗಿ ಇಲ್ಲಿ ದೊಡ್ಡ -ದೊಡ್ಡ fan ಗಳನ್ನು ಸ್ಥಾಪಿಸಿದ್ದಾರೆ. ಈಗ ಅವೆಲ್ಲವನ್ನು ನೆನಿಸಿಕೊಂಡರೆ ಮುಖದಲ್ಲಿ ನಗು ಮಿಂಚಿ ಮಾಯವಾಗುತ್ತದೆ. ಸುಂದರ ನೆನುಪುಗಳನ್ನು ಹಂಚಿಕೊಂಡ ಶ್ರೀಯುತರಿಗೆ ಧನ್ಯವಾದಗಳು 🙏🙏

    2. Mr.Manjunath Bommagatta has come out with very interesting article recalling people who studied and struggled to know the basics of physics and other scientific subjects. We hardly had exposure to practical knowledge unlike present generation and we imagined the concept more than understanding. Well articulated information blending radio, cycle , transformer with mythological concept and back to present reality. Hats off to Mr.Manjunath Bommagatta.

    3. ಭೌತಶಾಸ್ತ್ರ ಶಾಸ್ತ್ರ ಕೌತುಕ ಆಗರ ಮೊಗೆದಷ್ಟು ಬಯಲು, ಸೀಮಿತ ಅಂದರೆ ಅಷ್ಟೆ ಆಳಕ್ಖಿದರೆ ಅಗಾಧ, ತಮ್ಮದೆ ವಿಚಾರವಂತಿಕೆಯಲ್ಲಿ ಪಸ್ತುತ ಪಡಿಸಿರುವುದಯ ಅವರ್ಣೀಯ

    4. IT’S INSIGHTFUL AND THOUGHTFULL. SCIENCE IS ALWAYS A END PRODUCT OF HUMAN CURIOSITY. YOUR WRITINGS HAS REMINISCEND MY CHILDHOOD ALSO. HAT’S OFF.

    5. ತುಂಬಾ ಚೆನ್ನಾಗಿದೆ, ತುಂಟತನದಿಂದ ಕೂಡಿರುವ ಲೇಖನ. ಈಗಿನ ಮಕ್ಕಳಿಗೆ ಉತ್ತಮ ಪರಿಕರಗಳಿರುವುದರಿಂದ ನಮ್ಮ ಕಾಲದಲ್ಲಿ ಆದ ಅಧ್ಭುತ ಕುತೂಹಲಗಳು ಈಗ ಉಳಿದಿಲ್ಲ. Modern schools are now marks generating factories. ಕುತೂಹಲ ಆಸಕ್ತಿಗಳೇ ವಿದ್ಯಾರ್ಜನೆಗೆ ಪ್ರೇರಣಿಗಳು. ನಮಗೆ ಕಂಡದ್ದು ಕೇಳಿದ್ದೆಲ್ಲವೂ ಕೂತೂಹಲಗಳೇ ಆಗಿದ್ದವು. ಅಂಥಾ ವಿಶೇಷ ನೆನಪುಗಳನ್ನು ಅಕ್ಷರ ರೂಪದಲ್ಲಿ ಚೆನ್ನಾಗಿ ಬರೆದಿದ್ದೀಯ. ಅಭಿನಂದನೆಗಳು. ಬರಹ ಮುಂದುವರೆಯಲಿ ಬಬ್ರುವಾಹನ.

    6. Very neatly presented, yes during those days we just by hearted with out understanding the principles. Now a days basics can be understood by visiting YouTube. Lucky generation.

    7. ನಿಜ ಮಂಜುನಾಥವರೆ ನನಗೂ ಈ ಲೌಕಿಕ ಜಗತ್ತಿನ ಕೆಲವು ವಿಷಯಗಳ ಬಗ್ಗೆ ನಿಮ್ಮ ಹಾಗೆಯೆ ಬಾಲ್ಯದಿಂದಲು ಕುತೂಹಲವಿದೆ ಅದಕ್ಕೆ ಪರಿಹಾರ ಮತ್ತು ಜ್ಞಾನ ನಾವೇ ಸಂಪಾದಿಸಿಕೊಂಡಾಗ ಅದು ನಮ್ಮ ಹೆಮ್ಮೆಯ ವಿಷಯ ಇಲ್ಲಾಂದ್ರೆ *ಎಷ್ಟು ಸಿಂಪಲ್ ಮಾರಾಯ ನಿಮಗೆ ತಿಳಿದಿಲ್ವ* ಅನ್ನುವ ಮಾತು ಕೇಳುವ ಮುಜಗರ ನಮಗೆ ಬರುತ್ತದೆ..!!! ಉದಾಹರಣೆಗೆ ಇವತ್ತಿಗೂ ನನಗೆ ಇರುವ ಇಂಗ್ಲೀಷ್ ಪದ ನಾಲ್ಡೆಜ್ i.e. *Knowledge* ಇದರಲ್ಲಿ K ಯಾಕೆ silent ಆಗಿರಬೇಕು ಪಾಪ ಅದುವೇ ಪದ ಶುರುವಿನ ಮೊದಲಿಗೆ ಬರುವ ಪದ ಆದರೆ ನಾವು *ಕ್ಲೋನೈಡ್ಜ* ಅನ್ನುವುದು ನಿಜವಾದ ಪದುಚ್ಛಾರಣೆ ಆದರೆ ಬಾಲ್ಯದಿಂದಲೂ ಇಲ್ಲಿಯವರೆಗು ನನಗೆ ಇರುವ ಕುತೂಹಲವೆಂದರೆ *K* knowledge ನಲ್ಲಿ ಮೊದಲಪದವಾದರು silent🤔 ಆಗಿ ಇರಬೇಕು ನೀವೇಹೇಳಿ⁉️

      ಒಂದೊದು ಸಾರಿ ನನಗೂ ಅನ್ನಿಸ್ತಾಯಿತ್ತು ಈ ಇಂಗ್ಲಿಷ್ ಭಾಷೆ ಪ್ರಪಂಚದ ತುಂಬಾ ವ್ಯಾಪಿಸಿದೆ ಅದರ ಮೇಲೆ ಗಾದೆ ಮಾತೆ ಇದೆ *English was born in England that was abused by Americans!! but grammaticaly developed by the great INDIANS🇮🇳* ಎನ್ನುವ ಮಾತು ನನಗೆ ನಿಜವೆನ್ನಿಸುತ್ತದೆ ಈ ಸಮಯದಲ್ಲಿ ನಿಮ್ಮ ಆದಿನಗಳ ಕೌತುಕ ಬರಹ ಬಹಳ ಚೆನ್ನಾಗಿದೆ ಧನ್ಯವಾದಗಳು👌👍🙏

    LEAVE A REPLY

    Please enter your comment!
    Please enter your name here

    Latest article

    error: Content is protected !!