ಸಣ್ಣ ವಯಸ್ಸಲ್ಲಿ ಸೈಕಲ್ ಅನ್ನುವುದು ನಮ್ಮ ಪಾಲಿಗೆ ಬೆಲೆ ಕಟ್ಟಲಾಗದ ಸಂಪತ್ತು . ಮನೆಯ ಅಂಗಳವೆಂಬ ಲಾಯದಲ್ಲಿ ಸವಾರಿಗೆ ಸಜ್ಜಾಗಿ ನಿಂತಿರುತ್ತಿದ್ದ ಲೋಹದ ಕುದುರೆ, ಕನಸುಗಣ್ಣುಗಳಿಗೆ ಕಾಣ ಸಿಗುತ್ತಿದ್ದ ವಿಶೇಷ ವಾಹನ. ಅಪ್ಪ ಅನ್ನೋ ನಮ್ಮ ಹೀರೋವನ್ನು ಹೊತ್ತು ತಿರುಗುತ್ತಿದ್ದ ಪುಷ್ಪಕ ವಿಮಾನ.
ನಮ್ಮೊಳಗೆ ಒಂದುಕಡೆ ಹೇಗಾದ್ರು ಮಾಡಿ ಇದನ್ನು ಕಲಿಯಬೇಕೆಂಬ ಮನದಾಸೆ, ಮತ್ತೊಂದು ಕಡೆ ಕಲಿತುಬಿಟ್ಟರೆ ಜಗತ್ತನ್ನು ಸುತ್ತಬಹುದು ಅನ್ನೋ ಮಹದಾಸೆ.ನಮ್ಮ ಜೀವನದ ಮೊಟ್ಟಮೊದಲ ಕುತೂಹಲಭರಿತ ಕಲಿಕೆ ಮತ್ತು ಮರೆಯಲಾರದ ಮನರಂಜನಾ ಚಟುವಟಿಕೆ ಇದಾಗಿತ್ತು.
ಆಗೆಲ್ಲಾ ವಾರಕ್ಕೆರಡು ಬಾರಿ ಮಾತ್ರ ನೀರು ಬಿಡೋರು, ನೀರು ಬರೋ ದಿನ ಮನೆ ಮುಂದೆ ಸೈಕಲ್ಲನ್ನು ಸ್ಟ್ಯಾಂಡ್ ಹಾಕಿ ನಿಲ್ಲಿಸಿ ಬಕೀಟು ತುಂಬಾ ನೀರು ತುಂಬಿಸಿ ಸ್ವಲ್ಪ ಸರ್ಫ್ ಪೌಡರ್ ಬೆರಸಿ ಅದನ್ನ ನೊರೆ ಬರಂಗ್ ಮಾಡಿ ಆ ನೀರಲ್ಲಿ ಹ್ಯಾಂಡಲ್ಲು ಬಾರು ಬ್ರೇಕು ಬೆಲ್ಲು ಡೂಮು ಡೈನಮೋ ಚೈನ್ ಬಾಕ್ಸು ಹೀಗೆ ಬಿಡಿಬಾಗಗಳನ್ನೆಲ್ಲಾ ತೆಂಗಿನ ನಾರಿನಿಂದ ಉಜ್ಜುತ್ತಿದ್ದೆವು. ಚಕ್ರದ ರಿಮ್ಮು ಮತ್ತದರ ಫೋಕ್ಸುಗಳ ನಡುವಿನ ಕೊಳೆ ಹೋಗಲ್ಲ ಅಂತ ಹಳೆಯ ಟೂತ್ ಬ್ರಷ್ ಉಪಯೋಗಿಸಿ ಚೆನ್ನಾಗಿ ಉಜ್ಜಿ ತೊಳೆಯುತ್ತಿದ್ದೆವು. ಇಡೀ ಸೈಕಲ್ಲು ಪಳಪಳ ಅಂತ ಹೊಳೆಯುತ್ತಾ ಹೊಸ ಸೈಕಲ್ ಥರ ಕಾಣೋವರೆಗು ಬಿಡುತ್ತಿರಲಿಲ್ಲ .
ಅಪ್ಪನೂ ಅಷ್ಟೇ ಸೈಕಲ್ಲನ್ನು ಎಲ್ಲಂದರಲ್ಲಿ ನಿಲ್ಲಿಸುತ್ತಿರಲಿಲ್ಲ . ಎಲ್ಲೇ ನಿಲ್ಲಿಸಿದ್ರೂ ಬೀಗ ಹಾಕಿ ಭದ್ರಿಸುತ್ತಿದ್ದರು. ರಾತ್ರಿ ಮಲಗುವಾಗ ಮನೆಯ ವರಾಂಡದಲ್ಲೋ ಹಾಲ್ ನಲ್ಲೋ ತಂದು ನಿಲ್ಲಿಸುತ್ತಿದ್ದರು. ಅವರ ಸೀಟಿನ ಮುಂಭಾಗ ಮಕ್ಕಳಿಗಾಗಿಯೇ ಒಂದು ಪುಟ್ಟ ಸೀಟು ಹಾಗೂ ಕಾಲು ಇಡಲು ಸ್ಟ್ಯಾಂಡನ್ನು ಫಿಟ್ ಮಾಡಿಸುತ್ತಿದ್ದರು. ಬಾರಿಗೊಂದು ರೆಕ್ಸಿನ್ನಿನ ಬಣ್ಣದ ಕವರು ಬರೋದು ಆ ಕವರಿನ ಮೇಲೆ ಹೊಸ ಸಿನಿಮಾ ಹೆಸರೋ ಇಲ್ಲ ತುಂಬಾ ಚೆನ್ನಾಗಿ ಓಡಿರೋ ಸಿನಿಮಾ ಹೆಸರೋ ಪ್ರಿಂಟ್ ಆಗಿರೋದು . ಕೆಲವರು ತಮ್ಮ ನೆಚ್ಚಿನ ಸಿನಿಮಾ ಹೀರೋ ಹೆಸರನ್ನು ಸೈಕಲ್ಲಿನ ಚೈನ್ ಬಾಕ್ಸಿನ ಮೇಲೆ ಬರೆಸಿಕೊಳ್ಳುತ್ತಿದ್ದರು .
ಆಗೆಲ್ಲಾ ಸೈಕಲ್ಲಿನ ಅಲಂಕಾರಕ್ಕೆ ತುಂಬಾ ತಲೆಕೆಡಸ್ಕೋಳ್ಳೋದರ ಜೊತೆಗೆ ಖರ್ಚು ಮಾಡೋವ್ರು .ನಾವು ಮಲಗುವಾಗ ಅಪ್ಪನ ಸೈಕಲ್ಲನ್ನೇ ನೋಡಿ ಕಣ್ತುಂಬಿಕೊಂಡು ಮಲಗುತ್ತಿದ್ದೆವು ನಮ್ಮ ಕನಸಿನಲ್ಲಿ ಸೈಕಲ್ ಕಲಿತಂತೆ…….ರಸ್ತೆಯಲ್ಲಿ ಬೆಲ್ಲು ಹೊಡೆಯುತ್ತಾ ರುಂಯ್ಯನೆ ಓಡಿಸುತ್ತಿದ್ದಂತೆ ಕನಸುಗಳು ಬೀಳೋವು.
ಬೆಳಿಗ್ಗೆ ಎದ್ದೊಡನೇ ಶತಾಯಗತಾಯ ಕನಸು ನನಸು ಮಾಡ್ಕೋಬೇಕು.ಸೈಕಲ್ ಕಲಿಯಲೇಬೇಕೆಂದು ಮನೆಯಲ್ಲಿ ಹಠ ಮಾಡಿ ಬೈಸಿಕೊಂಡು ಕಾಸು ಪಡೆದು ಬಾಡಿಗೆ ಸೈಕಲ್ ಪಡೆಯಲು ಓಡುತ್ತಿದ್ದೆವು .
ಆವಾಗ ಬಾಡಿಗೆಗೆ ಚಿಕ್ಕ ದೊಡ್ಡ ಸೈಕಲ್ಗಳು ಗಂಟೆಗಿಷ್ಟು ಅರ್ಧಗಂಟೆಗಿಷ್ಟು ಅನ್ನೋ ಲೆಕ್ಕಾಚಾರದಲ್ಲಿ ಸಿಗುತ್ತಿತ್ತು. ‘ಸ್ವಾಮಿ ಸೈಕಲ್ ಮಾರ್ಟ್ ‘ ಅಂತ ಅಂಗಡಿ ಇದ್ರೆ ‘SCM’ ಅಂತ ಸೈಕಲ್ ಮೇಲೆ ಬರೆದಿರುತ್ತಿದ್ದರು ಪ್ರತೀ ಸೈಕಲ್ಲುಗಳಿಗೂ ಬಿಳೀ ಪೈಂಟಿಂದ 1, 2 ,3 ಅಂತ ನಂಬರ್ ಕೊಟ್ಟಿರೋವ್ರು.
ಚಿಕ್ಕ ಸೈಕಲ್ಗಳಿಗೆ ನಂಬರ್ ಇರುತ್ತಿರಲಿಲ್ಲ ಎರಡೋ ಮೂರೋ ಸೈಕಲ್ಲುಗಳಿರೋದು ಅದನ್ನ ಗಾತ್ರ ಮತ್ತು ಬಣ್ಣದ ಆಧಾರದ ಮೇಲೆ ಗುರುತಿಸುತ್ತಿದ್ದೆವು. ಅಂಗಡಿಯ ಟೇಬಲ್ಲಿನ ಮೇಲೆ ಒಂದು ಉದ್ದದ ನೋಟ್ಬುಕ್ಕು ಅದರ ಮಧ್ಯೆ ಕ್ಯಾಪಿಲ್ಲದ ಪೆನ್ನು , ಗ್ರೀಸು ಆಯಿಲಿನಿಂದಾಗಿ ಆ ಪುಸ್ತಕ ಯಾವಾಗಲೂ ಕೊಳಕಾಗಿಯೇ ಕಾಣುತ್ತಿತ್ತು .
ಜೇಬಿನಲ್ಲಿ ಇರುವ ಕಾಸನ್ನು ಎಲ್ಲಿ ಕಳೆದಾಕ್ಕೊಂಡುಬಿಡ್ತೀವೋ ಅನ್ನೋ ಭಯದಲ್ಲಿ ಮೊದಲೇ ಅಂಗಡಿಯವನ ಕೈಗೆ ಕೊಟ್ಟು ಅರ್ಧ ತಾಸು ಬಾಡಿಗೆಗೆ ಸೈಕಲ್ಲನ್ನು ಪಡೆಯುತ್ತಿದ್ದೆವು. ಅಂಗಡಿಯವನಿಗೆ ನಮ್ಮ ಪೂರ್ವಪರ ಎಲ್ಲಾ ಗೊತ್ತಿದ್ರೂನೂ…ಬೇಕಂತಲೇ …. ಎಲ್ಲಿರೋದು ? ಹೆಸರೇನು ? ಯಾರ ಮಗ ? ಅಂತೆಲ್ಲಾ ಪುರಾಣ ಕೇಳ್ಕೊಂಡು, ಆ ಕೊಳಕು ಬುಕ್ಕಲ್ಲಿ ತಗೊಂಡ ಟೈಂ ಮಾತ್ರ ಎಂಟ್ರಿ ಮಾಡೋವ್ನು . ಈ ಪ್ರೋಸಸ್ಸೇ ಐದು ನಿಮಿಷ ಆಗೋದು .
ಸೈಕಲ್ ಹೇಳಿಕೊಡಕ್ಕೆ ಅಂತ ಅರ್ಧಂಬರ್ದ ಕಲಿತ ಸ್ನೇಹಿತನೊಬ್ಬ ಜೊತೆಗೆ ಬರೋವ್ನು ಅವನಿಗೆ ಬೇರೆ ಒಂದು ರೌಂಡ್ ಕೊಡಬೇಕಿತ್ತು . ಇದರ ಮದ್ಯೆ ಆಗಾಗ ಅಂಗಡಿಯವನ ಹತ್ರ ಹೋಗಿ ಟೈಂ ಆಯ್ತಾ ಟೈಮ್ ಆಯ್ತಾ ಅಂತ ಕೇಳ್ತಿದ್ವಿ ಇದರಲ್ಲಿ ಒಂದು ಐದತ್ತು ನಿಮಿಷ ವೇಸ್ಟಾಗೋದು .
ಹೀಗೆ ಕಲಿಯಕ್ಕೆ ಬೀಳುವ ಪರಿಪಾಟಲುಗಳು ಒಂದೊಂದಲ್ಲ. ಆವಾಗಾವಾಗ ಬೀಳುವ ಚೈನು , ಟೈರಿನ ಗಾಳಿ ಸಮಸ್ಯೆ …..ಉಫ್ …. ಸಾಮಾನ್ಯವಾಗಿ ಕಲಿಕೆ ಮೂರು ಹಂತದಲ್ಲಿ ನಡೆಯುತ್ತಿತ್ತು ಕತ್ತರಿ , ಬಾರು , ಸೀಟು ಅಂತ .
ಹೆಂಗೋ ಎದ್ದು ಬಿದ್ದು ಉಗಿಸ್ಕೊಂಡು ಬೈಸ್ಕೊಂಡು ಬೈಸಿಕಲ್ ಕಲಿಯುತ್ತಿದ್ದೆವು.ಕಲಿತು ಅದರ ಮೇಲೆ ಸವಾರಿ ಮಾಡುತ್ತಿದ್ದರೆ ನಿಜಕ್ಕೂ ಜಗತ್ತು ಗೆದ್ದ ಸಂಭ್ರಮ ನಮ್ಮಲ್ಲಿರುತ್ತಿತ್ತು . ಈಗ ರಾಕೆಟ್ ಕಲಿತ್ರೂ ಆ ಮಜಾ ಬರಲ್ಲ .
ಕ್ರಮೇಣ ಆಟೋಮೊಬೈಲ್ ಕ್ರಾಂತಿಯಿಂದ ರಸ್ತೆಗಿಳಿದ ಸಾವಿರಾರು ಇಂಧನ ಚಾಲಿತ ಮೋಟಾರು ಸೈಕಲ್ಗಳು ಕಾಲಿನಿಂದ ತುಳಿಯುವ ಸೈಕಲ್ಲನ್ನೇ ತುಳಿದು ಬದಿಗೆ ಸರಿಸಿದವು.
ಏನೇ ಆಗಲಿ….. ಸೈಕಲ್ ನಮ್ಮ ಬದುಕಿಗೆ ತೀರಾ ಹತ್ತಿರವಾಗಲು ಒಂದು ಕಾರಣವಿದೆ. ಅದೇನೆಂದರೆ ಇದನ್ನ ಕಲಿಯಲಿಕ್ಕೆ ಮುಖ್ಯವಾಗಿ ಬೇಕಾದದ್ದು ಬ್ಯಾಲೆನ್ಸಿಂಗ್.ಅದೇ ರೀತಿ ಬದುಕು ಕಲಿಯಕ್ಕೂ ಬಹು ಮುಖ್ಯವಾಗಿ ಬೇಕಾದದ್ದು ಇದೇ ಬ್ಯಾಲೆನ್ಸಿಂಗ್ .
ಕಿರಣ ಆರ್
ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.
ಮಾಸ್ತಿಯವರ ಬರಹ ನಮ್ಮ ನೆನಪನ್ನು ಮರುಕಳಿಸುವಂತೆ ಮಾಡಿತು.ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನನಗೆ ಬೇಸಿಗೆ ರಜದ ದೊಡ್ಡ ಆಕರ್ಷಣೆ ಸೈಕಲ್ ಕಲಿಯುವುದು.ಬಾಡಿಗೆ ಸೈಕಲ್ ೫೦ ಪೈಸೆ ಕೊಟ್ಟು ತಂದು ಕಲಿತು ಅದನ್ನು ಓಡಿಸಿ ಮನೆಯವರಿಗೆ ತೋರಿಸಿ…ಭೇಷ್ ಅನ್ನಿಸಿಕೊಂಡ ನಂತರ ಸ್ವಂತ ಸೈಕಲ್ ಕೊಳ್ಳುವುದು ಒಂದು ಜಂಭ ಪಡುವಂತ ಕಾಲ.ಸೈಕಲ್ ಓಡಿಸುವುದು ಸೈಕಲ್ ರೇಸ್ ಮಾಡುವುದು ಡಬ್ಬಲ್ ಓಡಿಸುವುದು ಸ್ಲೋ ಆಗಿ ಓಡಿಸುವುದು ಕೊನೆಗೆ ಸೈಕಲೇನಿಂದ ಬೀಳುವುದು ಎಲ್ಲ ರಜಾ ದಿನದ ನಿಯಮದಂತೆ ನಡೆದು ಹೋಗುತ್ತಿತ್ತು.ಇವೆಲ್ಲ ನೆನಪಾಯಿತು..ಧನ್ಯವಾದಗಳು ಉತ್ತಮ ಬರಹ
Super article.
Daily I’m cycling for 45 minutes to one hour even today in prestigious Mysuru street. Last year my son Sudhanva gifted me a cycle.
👌👌👌
ಆಗಿನ್ನೂ 5ಅಥವಾ 6ನೇ ತರಗತಿ ಓದುತಿದ್ದೆ. ಎಲ್ಲಾ ಸ್ನೇಹಿತರಂತೆ ನನಗೂ ಸೈಕಲ್ ಕಲಿಯುವ ಆಸೆ. ಆದರೆ ನನ್ನ ತಂದೆಗೆ ಏಕಮಾತ್ರ ಪುತ್ರನಾನು ಸೈಕಲ್ ತುಳೀತಾ ಬಿದ್ದುಬಿಟ್ರೆ ಎಂಬ ಭಯದಿಂದ ನನಗೆ ಸೈಕಲ್ ಕಲಿಯಲು ಅವಕಾಶವನ್ನು ಕೊಡುತ್ತಿರಲಿಲ್ಲ. ಹೇಗಾದರೂ ಮಾಡಿ ಸೈಕಲ್ ಕಲಿಬೇಕು ಎಂಬ ಹಂಬಲದಿಂದ kaddu-ಮುಚ್ಚಿ ಸೈಕಲ್ ಶಾಪ್ ಗೆ ಹೋದರೆ, ಅವರು ನೀನು ಸಣ್ಣವನು ಕಲೀಲಿಕ್ಕೆ ಹೊಸ ಸೈಕಲ್ ನೀಡುವುದಿಲ್ಲ ಎಂದು ಹೇಳಿ ಪೆಡಲ್ ಇಲ್ಲದ ಹಳೆ ಸೈಕಲ್ ಕೊಡುತಿದ್ದರು ಹೇಗೋ ಸೈಕಲ್ ಸಿಕ್ಕಿತು ಎಂಬ ಖುಷಿಯಲ್ಲಿ ಸೈಕಲ್ ಹೊಡೆಯಲು ಆರಂಭಿಸಿದೆ ದುರದೃಷ್ಟ ವಶಾತ್ ಬ್ಯಾಲೆನ್ಸ್ ತಪ್ಪಿ ನೆಲಕ್ಕೆ ಬಿದ್ದೆ ಆಗ ಪೆಡಲ್ ಇಲ್ಲದ ಸೈಕಲ್ ಆದ್ದರಿಂದ ನನ್ನ ಅಂಗಾಲು ಗೀಚಿಕೊಂಡು ಗಾಯ ಆಯಿತು. ಇದನ್ನು ಮನೆಯಲ್ಲಿ ನೋಡಿ ಅಲ್ಲಿಯೂ ತಂದೆಯವರಿಂದ ಮಂತ್ರ -ಪುಷ್ಪಗಳ ಸುರಿಮಳೆ ಆಯಿತು. ಅಂತು -ಇಂತು ಸೈಕಲ್ ಕಲಿತೆ. ಒಮ್ಮೆ ಸಂಜೆ ಸೈಕಲ್ ಹೊಂದಿಬೇಕಾದರೆ ನನ್ನ ಸೈಕಲನ್ನು ಪೊಲೀಸ್ ಹಿಡಿದು ನಿನ್ನ ಸೈಕಲ್ಲಿಗೆ ಡೈನೋಮೋ ಇಲ್ಲಾ ದಂಡ ಕಟ್ಟಬೇಕು ಎಂದಾಗ, ನನ್ನ ಕಣ್ಣುಗಳಲ್ಲಿ ಗಂಗಾ -ಕಾವೇರಿ ಯಾರು ಧಾರಾಕಾರವಾಗಿ ಸುರಿಯಯಲು ಆರಂಭಿಸಿದರು. ಇದ ಕಂಡ ಪೊಲೀಸ್ ನೀನು ಜೋಯ್ಸ್ರ್ ಮಗ ಅಲ್ವೇನೋ ಎಂದು ಹೇಳಿ ಚಾಕ್ಲೇಟ್ ಕೊಟ್ಟು ಕಲಿಸಿದ್ದನ್ನು ನಾನೆಂದು ಮರೆಯುವಂತಿಲ್ಲ ಆಗೆಲ್ಲಾ ಹೆಣ್ಣು ಮಕ್ಕಳು ಸೈಕಲ್ ಹೊಡಿತ್ತಿದ್ದರೆ ಎಲ್ಲರೂ ಅವರನ್ನೇ ನೋಡುತಿದ್ದರು ಮತ್ತು ಗಂಡುಬೀರಿ ಹೇಗೆ ಸೈಕಲ್ ಹೊಡಿತಾಳೆ ಎಂದು ಹೇಳುತ್ತಿದ್ದರು. ಅಂತಹ ಸಂದರ್ಭದಲ್ಲಿ ನನ್ನ ಅತ್ತೆ ಮಗಳು ಅಂಜಲಿ ಶಿವಮೊಗ್ಗ ದಲ್ಲಿ ಸೈಕಲ್ ಹೊಡಿತಿದ್ದಳು. ಆಗಲೇ ಅವಳನ್ನು ಕಂಡು ನಾನೇಕೆ ಕಲಿಬಾರದು ಎಂದು ಹಠಕ್ಕೆ ಬಿದ್ದು ಸೈಕಲ್ ಕಲಿತಿದ್ದಾಯಿತು. ಬಾಲ್ಯದ ನೆನುಪುಗಳನ್ನು ಮೆಲುಕುಹಾಕುವಂತೆ ಮಾಡಿದ smt. ಕಿರಣ ಅವರಿಗೆ ವಂದನೆಗಳು 🙏🙏
ಈ ಲೇಖನ ಶ್ರೀ ಮಾಸ್ತಿ ಯವರದ್ದು. ಚಿತ್ರ ಕಿರಣ ಆರ್. ರವರದು ಇಬ್ಬರಿಗೂ ಅಭಿನಂದನೆಗಳು 🙏🙏🙏
ನಮ್ಮ ಗುರುಜೀ ನಮ್ಮ ಬಾಲ್ಯತನ ಕಣ್ಣುಮುಂದೆ ತರಿಸಿದರು. ಅದೆಷ್ಟು ಸಾರಿ ಬಿದ್ದು ಮೊಣಕಾಲು ಕೆತ್ತಿಕೊಂಡಿದ್ದೇವೋ ಅರಿವಿಲ್ಲ. ತುಂಬಾ ಸುಂದರವಾಗಿ ಬರೆದ ನಮ್ಮ ಮಾಸ್ತಿ ಗುರುಜಿ ಗೆ ದನ್ಯವಾದಗಳು.