ಇಂದಿನ ಕ್ಯಾಂಪಸ್ ಪ್ರೆಸ್ ಅಂಕಣದಲ್ಲಿ ವಿಶ್ವವಿದ್ಯಾನಿಲಯ ಕಾಲೇಜು,ಮಂಗಳೂರು ಇಲ್ಲಿನ ದ್ವಿತೀಯ ಬಿಎ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಪ್ರಮೀಳಾ ನಗುವಿನ ಮಹತ್ವವನ್ನು ವರ್ಣಿಸಿದ್ದಾರೆ.
ನಗುವುದು ಸಹಜ ಧರ್ಮ; ನಗಿಸುವುದು ಪರಧರ್ಮ
ನಗುವ ಕೇಳುತ ನಗುವುದತಿಶಯದ ಧರ್ಮ
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ-ಮಂಕುತಿಮ್ಮ
ಕವಿ ಗುಂಡಪ್ಪನವರು ಹೇಳಿದಂತೆಯೇ, ನಗು ಮನುಷ್ಯನಿಗೆ ಸಿದ್ಧಿಸಿದ ಅಮೂಲ್ಯ ಕಲೆಗಳಲ್ಲಿ ಒಂದು. ನಮ್ಮ ಸೌಂದರ್ಯವನ್ನು ದ್ವಿಗುಣಗೊಳಿಸುವ, ಎಲ್ಲೆಡೆ ಸಂತೋಷ ಪಸರಿಸುವ ನಗು ಯಾರಿಗೆ ಬೇಡ… ನಗುವಿನ ಶಕ್ತಿ ಇಷ್ಟು ಮಾತ್ರವಲ್ಲ. “ನಕ್ಕರೆ ನೂರು ವರುಷ ಆಯುಷ್ಯ” ಎಂಬ ಮಾತಿನಂತೆ ಮುಗುಳ್ನಗೆ ಎಂಬ ಆಸ್ತಿ ನಮ್ಮ, ನಮ್ಮವರ ಜೀವನದಲ್ಲಿ ಎಷ್ಟೋ ಬದಲಾವಣೆ ತರಬಹುದು.
ಪರಿಚಯ, ಆಸಕ್ತಿ, ಲವಲವಿಕೆಗೆ ನಗುವೆಂಬ ಸ್ನೇಹಿತ ಸಹಕರಿಸುತ್ತಾನೆ. ದುಃಖದಲ್ಲಿ ಎಲ್ಲರೂ ದೂರವಾದರೂ ನಗುವೆಂಬ ಗೆಳೆಯ ನಮ್ಮ ಸಹಭಾಗಿಯಾಗುತ್ತಾನೆ. ನಮ್ಮನ್ನು ಸಮಾಧಾನಿಸಲು ಯತ್ನಿಸುತ್ತಾನೆ. ಅದೆಷ್ಟೋ ಬಾರಿ ನಮ್ಮ ಸಂತೋಷ–ದುಃಖ ಎರಡನ್ನೂ ನಗುವೇ ವ್ಯಕ್ತಪಡಿಸುತ್ತದೆ. ಹೀಗೆ ನಗುವಿಗೆ ಅದರದೇ ಆದ ಮಹತ್ವವಿದೆ. ನಾವದನ್ನು ಅರ್ಥಮಾಡಿಕೊಂಡರೆ ಮಾತ್ರ ಮಾಸದ ನಗು ನಮ್ಮ ಮುಖದ ಭೂಷಣವಾಗಬಹುದು.
ನಗುವಲ್ಲಿ ಹಲವು ಬಗೆ. ಕೆಲವರದು ಗಹಗಹಿಸುವ ನಗೆಯಾದರೆ, ಕೆಲವರದು ವ್ಯಂಗ್ಯದ ನಗು. ಮತ್ತೆ ಹಲವರದು ಮುಗುಳುನಗೆಯಾದರೆ, ಕೆಲವರದ್ದು ತುಟಿಯಂಚಿನ ಕಿರುನಗೆ. ನಮ್ಮ ಗಹಗಹಿಸುವಿಕೆ, ವ್ಯಂಗ್ಯದ ನಗು ಇತರರ ದುಃಖಕ್ಕೆ ಕಾರಣವಾಗಬಹುದು ಎಂಬ ಎಚ್ಚರ ಸದಾ ಇರಬೇಕು. ಉಳಿದಂತೆ ನಮ್ಮ ಮುಗುಳು ನಗು ನೋವನ್ನು ಮರೆಸಿ ದೀರ್ಘಾಯಸ್ಸಿಗೆ ಕಾರಣವಾಗುತ್ತದೆ. ನಮ್ಮ ಜೀವನದಲ್ಲಿ ಹೊಸ ಹುರುಪು ಮೂಡಿಸುವುದರ ಜೊತೆಗೆ ನಮ್ಮ ವ್ಯಕ್ತಿತ್ವಕ್ಕೆ ಹೊಸ ಮೆರಗು ನೀಡುತ್ತದೆ.
ಒಂದು ಪುಟ್ಟ ನಗುವಿಗೆ ಮಾತಿನಲ್ಲಿ ಹೇಳಲಾಗದ್ದನ್ನು ಹೇಳಲು ಸಾಧ್ಯವಿದೆ. ನಮ್ಮ ಜೀವನವನ್ನೇ ಬದಲಿಸುವ ಶಕ್ತಿಯಿದೆ. ಇಷ್ಟಾಗಿಯೂ ನಗಲಾಗದವರ ಕುರಿತು ಒಂದು ಮಾತಿದೆ- “ನಗೆ ಬೇಕು, ನಗಿಸಬೇಕು. ಇದೇ ನಿನ್ನ ಧರ್ಮ, ನಗಲಾರೆ ಎಂದರೆ ಅದು ನಿನ್ನ ಕರ್ಮ” ಎಂದು! ಹಾಗಾಗಿ ಬದುಕಿನ ಪಯಣದಲ್ಲಿ ನಗುವೆಂಬ ಸ್ನೇಹಿತ ಸದಾ ನಮ್ಮ ಜೊತೆಗಿರಲಿ.
Photo by chaitanya pillala on Unsplash
ಭಾಷೆ ಚೆನ್ನಾಗಿದೆ, ಹೊಸತು ಏನಿಲ್ಲ.