ಜಗತ್ತು ಊಹಿಸದ ಒಂದು ಖಾಯಿಲೆ ಎಲ್ಲರನ್ನು ಮನೆಯೊಳಗೆ ಸೇರಿಸಿದೆ, ಎಲ್ಲ ಉದ್ಯಮಗಳನ್ನು ಮುಚ್ಚಿ ಮನೆಯಲ್ಲಿಯೇ ಇರುವಂತೆ ಸರ್ಕಾರವೇ ಸೂಚಿಸುತ್ತಿದೆ.
ಕೊರೊನಾ ಎಂಬ ಮೂರಕ್ಷರದ ಖಾಯಿಲೆಯಿಂದ ನಷ್ಟಕ್ಕೆ ಒಳಗಾದ ಉದ್ಯಮಗಳಲ್ಲಿ ಸಿನಿಮಾ ಕೂಡಾ ಒಂದು. ಬರೀ ಕನ್ನಡ ಚಿತ್ರೋದ್ಯಮವೇ ವರ್ಷಕ್ಕೆ ಸಾವಿರಾರು ಕೋಟಿ ಟರ್ನ್ ಓವರ್ ಮಾಡಿದ್ದಿದೆ. ಅಂತಹ ಉದ್ಯಮಕ್ಕೆ ಕೊರೊನಾ ಕೊಟ್ಟ ಹೊಡೆತ ಇದೆಯಲ್ಲ ಅದನ್ನು ಯಾರಿಂದಲೂ ಊಹಿಸಲಾಗಲಿಲ್ಲ. ಯಾವಾಗಲೂ ಜನರಿಂದ ಗಿಜಿಗುಡುತ್ತಿದ್ದ ರಾಜ್ಯದ ನೂರಾರು ಥಿಯೇಟರ್‌ಗಳು ಕಳೆದ ಮೂರು ತಿಂಗಳಿನಿಂದ ಒಂದು ನರಪಿಳ್ಳೆಯು ಇಲ್ಲದೆ ಬಣಗುಡುತ್ತಿವೆ. ಜನ ಚಿತ್ರಮಂದಿರಕ್ಕೆ ಯಾವಾಗ ಬರುತ್ತಾರೆ ಎಂದು ಚಿತ್ರಮಂದಿರದ ಮಾಲೀಕರು ಕಾಯುವಂತಾಗಿದೆ.
ಜನ ಮನೆಯಲ್ಲಿ ಸೀರಿಯಲ್ ನೋಡಣ ಎಂದರೆ ಚಿತ್ರೀಕರಣವಿಲ್ಲದೇ ಎಲ್ಲ ಚಾನೆಲ್‌ಗಳಲ್ಲೂ ವರ್ಷಗಳ ಹಿಂದೆ ಪ್ರಸಾರವಾದ ಎಪಿಸೋಡ್‌ಗಳೇ ಬರುತ್ತಿವೆ. ಇಂತಹ ಸಮಯದಲ್ಲಿ ಜನರನ್ನು ರಂಜಿಸಿದ್ದು ಮತ್ತು ಅವರ ಜತೆಯಾಗಿದ್ದು ಒಟಿಟಿ ಪ್ಲಾಟ್‌ಫಾರ್ಮ್‌ಗಳು ಎಂದರೆ ತಪ್ಪಾಗುವುದಿಲ್ಲ.
ಈ ಲಾಕ್‌ಡೌನ್ ಸಮಯವನ್ನು ಬಹಳ ಅದ್ಭುತವಾಗಿ ಸದುಪಯೋಗ ಪಡಿಸಿಕೊಂಡ ಬೇರೆ ಬೇರೆ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಚಿತ್ರಮಂದಿರಕ್ಕಿಂತಲೂ ಮುನ್ನವೇ ಕೆಲ ಸಿನಿಮಾಗಳನ್ನು ಜನರಿಗೆ ತೋರಿಸಿದವು. ತಮಿಳಿನ ‘ಪೊಣ್ ಮಗಳ್ ವಂದಾಳ್’ ಹಿಂದಿಯ ‘ಗುಲಾಬೋ ಸಿತಾಬೋ’ ಹೀಗೆ ಎಲ್ಲ ಭಾಷೆಗಳಲ್ಲಿಯೂ ಅಮೇಜಾನ್ ಸೇರಿದಂತೆ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾಗಳನ್ನು ರಿಲೀಸ್ ಮಾಡಲಾಯಿತು. ಈ ವಾರ ಅಂದರೆ ಶುಕ್ರವಾರ ಆ ಸಾಲಿಗೆ ಕನ್ನಡ ಸಿನಿಮಾ ‘ಲಾ’ ಕೂಡಾ ಸೇರಿದೆ.
70 ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸ ಇರುವ ಕನ್ನಡ ಚಿತ್ರರಂಗದಲ್ಲಿ ಸಿನಿಮಾವೊಂದು ಚಿತ್ರಮಂದಿರದಲ್ಲಿ ರಿಲೀಸ್ ಆಗದೇ ಇದೇ ಮೊದಲ ಬಾರಿಗೆ ಒಟಿಟಿಯಂತಹ ಪ್ಲಾಟ್ ಫಾರ್ಮ್‌ನಲ್ಲಿ ಚಿತ್ರ ರಿಲೀಸ್ ಆಗಿದೆ. ಈ ಬಗ್ಗೆ ಏನೇ ಅಭಿಪ್ರಾಯಗಳಿದ್ದರೂ, ‘ಲಾ’ ಚಿತ್ರ ನೋಡಿದಾಗ ಈ ಚಿತ್ರ ಇದು ಚಿತ್ರಮಂದಿರಕ್ಕಿಂತಲೂ ಒಟಿಟಿಗೆ ಸೂಕ್ತ ಎಂಬ ಅಭಿಪ್ರಾಯ ಬರುತ್ತದೆ.
ನಂದಿನಿ ಎಂಬ ಲಾ ಓದಿದ ಹುಡುಗಿ ತನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದು ಹೋರಾಡುವ ಕಥೆ ಇದರಲ್ಲಿದೆ. ವಿಶೇಷ ಎಂದರೆ ಗ್ಯಾಂಗ್ ರೇಪ್ ಬಗ್ಗೆ ಸಾಕಷ್ಟು ಸಿನಿಮಾಗಳು ತೆರೆ ಮೇಲೆ ಬಂದಿವೆ. ಅಂತಹ ಸಬ್ಜೆಕ್ಟ್ ತೆಗೆದುಕೊಂಡಾಗ ಬಹಳ ಸೂಕ್ಷ್ಮವಾಗಿ ಸಿನಿಮಾಗಳನ್ನು ಮಾಡಬೇಕು. ನಿರ್ದೇಶಕ ರಘು ಸಮರ್ಥ್ ಕೂಡಾ ಕೊಂಚ ಸೂಕ್ಷ್ಮವಾಗಿಯೇ ಸಿನಿಮಾವನ್ನು ಕಟ್ಟಿಕೊಟ್ಟಿದ್ದರಾದರೂ, ನಿಧಾನಗತಿಯ ಚಿತ್ರಕಥೆಯಿಂದ ಅಲ್ಲಲ್ಲಿ ಬೋರ್ ಎನಿಸುತ್ತದೆ. ಈ ಸಿನಿಮಾವನ್ನು ನೋಡುತ್ತಿದ್ದರೆ ತೆಲುಗಿನ ‘ಎವರು’ ಚಿತ್ರದ ರೀತಿಯೇ ಇದೆ ಎನಿಸುತ್ತದೆ. ವಿಶೇಷ ಎಂದರೆ ಈ ಸಿನಿಮಾ ಆರಂಭವಾಗಿದ್ದು ಎವರು ಚಿತ್ರಕ್ಕಿಂತಲೂ ಮುನ್ನ ಹಾಗಾಗಿ ಇದನ್ನು ಅದರ ರಿಮೇಕ್ ಅಥವಾ ಕಾಪಿ ಎನ್ನಲಾಗುವುದಿಲ್ಲ.
ಆದರೆ ಎವರು ನೋಡಿದವರಿಗೆ ಆಗಾಗ್ಗೆ ಅದೇ ಸಿನಿಮಾ ನೆನಪಿಗೆ ಬಂದರೆ ಅದು ಅವರ ತಪ್ಪಲ್ಲ. ರಾಗಿಣಿ ಚಂದ್ರನ್ ಇದು ತಮ್ಮ ಚೊಚ್ಚಲ ಸಿನಿಮಾ ಎಂಬುದು ನೆನಪಿಗೆ ಬರದಂತೆ ನಟಿಸಿದ್ದಾರೆ. ಇಡೀ ಚಿತ್ರ ಆವರಸಿರುವುದು ಅವರೇ.
ವರ್ಷದ ಸಬ್‌ಸ್ಕ್ರಿಪ್ಷನ್ ತೆಗೆದುಕೊಂಡು ಮನೆಯಲ್ಲಿಯೇ ಕುಳಿತು ಸಿನಿಮಾ ನೋಡಬಯಸುವವರಿಗೆ ಈ ರೀತಿಯ ಸಣ್ಣ ಸಣ್ಣ ಸಿನಿಮಾಗಳು ಇಷ್ಟವಾಗುತ್ತದೆ. ಇದೇ ರೀತಿ ಮುಂದಿನ ವಾರ ಪುನೀತ್ ರಾಜ್‌ಕುಮಾರ್ ಬ್ಯಾನರ್‌ನದ್ದೇ ಮತ್ತೊಂದು ಚಿತ್ರ ‘ಫ್ರೆಂಚ್ ಬಿರಿಯಾನಿ’ ಕೂಡಾ ರಿಲೀಸ್ ಆಗಲಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಜನರಿಗೆ ಜತೆಯಾಗಿದ್ದು ಮಾತ್ರ ಮನರಂಜನೆ ಮತ್ತು ಸಿನಿಮಾಗಳು ಮಾತ್ರ ಎಂಬುದು ಒಟಿಟಿಯಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾಗಳನ್ನು ನೋಡಿದರೆ ತಿಳಿಯುತ್ತದೆ. ಇಂತಹ ಪರಿಸ್ಥಿತಿಯನ್ನು ಸರಿಯಾಗಿ ಬಳಸಿಕೊಂಡ ಒಟಿಟಿ ಪ್ಲಾಟ್‌ಫಾರ್ಮ್‌ಗಳ ನಡೆಯನ್ನು ನಮ್ಮ ಕಡೆ ‘ಗಾಳಿ ಯಾವ ಕಡೆ ಬರುತ್ತದೋ ಆ ಕಡೆ ತೂರಿಕೊಳ್ಳಬೇಕು’ ಎಂದು ಕರೆಯುತ್ತಾರೆ.
ಈ ಕೆಳಗಿನ ಲಿಂಕ್ ಮೂಲಕ ಅಮೆಜಾನ್ ಪ್ರೈಮ್ ಸದಸ್ಯರಾಗಬಹುದು.
Chitra vimarshe istavaayitu.
Innastu vivara irabekittu…
Thank you, I will watch the movie.