ಕವಿ ಗೋಪಾಲಕೃಷ್ಣ ಅಡಿಗರ ಕವನದ ಸಾಲೊಂದಿದೆ. ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು ಎಂಬುದು ಅದು. ಇದು ರಾಜಕೀಯಕ್ಕೂ ಅನ್ವಯವಾಗುತ್ತದೆ. ಅನುಭವ ಹೊಂದಿದ ನಾಯಕರು ಮತ್ತು ಹೊಸ ಚಿಂತನೆ ಹೊಂದಿರುವ ಯುವ ಪೀಳಿಗೆ ಎರಡೂ ಕಲೆತರೆ ಮಾತ್ರ ರಾಜಕೀಯ ಪಕ್ಷವೊಂದು ಉನ್ನತಿಯನ್ನು ಉಳಿಸಿಕೊಳ್ಳಲು ಸಾಧ್ಯ ಎಂಬುದು ಇದರ ತಾತ್ಪರ್ಯ. ಆದರೆ ಶತಮಾನಗಳ ಇತಿಹಾಸದ ಹೆಗ್ಗಳಿಕೆ ಹೊಂದಿದ್ದೇವೆ ಎಂದು ಹೆಗಲು ತಟ್ಟಿಕೊಳ್ಳುತ್ತಲೇ ಸಾಗುತ್ತಿರುವ ಕಾಂಗ್ರೆಸ್ ಗೆ ಇದು ಪಥ್ಯವಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಅಲ್ಲಿರುವುದು ಎರಡೇ ವಿಭಾಗ. ಒಂದು ಗಾಂಧಿ ಕುಟುಂಬ, ಇನ್ನೊಂದು ಹಿರಿಯ ನಾಗರಿಕರ ವಿಭಾಗ !
ಸೋನಿಯಾ ಗಾಂಧೀ ಅವರು ಪಕ್ಷದ ಅಧ್ಯಕ್ಷೆಯಾಗಿ ಮತ್ತೆ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಹಾಜರಿದ್ದ ಕಾಂಗ್ರೆಸ್ ನಾಯಕರನ್ನು ಗಮನಿಸಿ. ಮೋತಿಲಾಲ್ ವೋರಾ (91) ರಾಹುಲ್ ಗಾಂಧೀ (49) ಮನಮೋಹನ ಸಿಂಗ್(86) ಎ ಕೆ ಅಂಟೋನಿ (78) ಆನಂದ್ ಶರ್ಮಾ (69) ಕಪಿಲ್ ಸಿಬಲ್ (71) ಭೂಪೇಂದ್ರ ಹೂಡಾ (71) ಮೊಹಿಸಿನ ಕಿದ್ವಾಯಿ (87) ಜಗದೀಶ್ ಟೈಟ್ಲರ್ (75) ಸಲ್ಮಾನ್ ಖುರ್ಷಿದ್ (77) ಗುಲಾಮ್ ನಭೀ ಆಜಾದ್ (70) ಕೆ. ಸಿ ವೇಣುಗೋಪಾಲ್ (56) ರಾಹುಲ್ ಗಾಂಧೀ ಮತ್ತು ವೇಣುಗೋಪಾಲ್ ಹೊರತು ಪಡಿಸಿದರೆ ಉಳಿದವರೆಲ್ಲರೂ ಹಿರಿಯ ನಾಗರಿಕರು.ಈಗಿನ ಕಾಂಗ್ರೆಸ್ ಪಕ್ಷದ ನಾಯಕರ ವಯಸ್ಸು ಸರಾಸರಿ 70.7
ಇದರಲ್ಲಿ ಅನೇಕರಿಗೆ ಅನುಭವದಿಂದ ರಾಜಕೀಯ ಚಾಣಕ್ಯತನ ರೂಢಿಸಿಕೊಂಡಿದ್ದರಿಂದ ಸಿಕ್ಕ ಸ್ಥಾನ ಎನ್ನುವ ಬದಲು ಗಾಂಧಿ ಕುಟುಂಬದ ಆಪ್ತ ವರ್ಗಕ್ಕೆ ಸೇರಿದವರು ಎಂಬ ಮಾನದಂಡ ಮಾತ್ರ ಅನ್ವಯವಾಗುತ್ತದೆ. ಇದರಿಂದ ಬೆರಳೆಣಿಕೆಯಷ್ಟು ಯುವ ನಾಯಕರು ಹುಟ್ಟಿಕೊಂಡರೂ, ಹಳೆ ಹುಲಿಗಳು ಮತ್ತು ಹೊಸಬರ ನಡುವಿನ ತಿಕ್ಕಾಟದಿಂದ ಕಾಂಗ್ರೆಸ್ ಜರ್ಜರಿತವಾಗಿದೆ. ಅತ್ತ ಬಿಜೆಪಿ ಹೊಸ ನಾಯಕರನ್ನು ಹುಟ್ಟು ಹಾಕುತ್ತಲೇ ಇದೆ.
ಹೀಗಾಗಿ ದಶಕದ ಹಿಂದೆಯಷ್ಟು 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಈ ಈಗಿನ ಪರಿಸ್ಥಿತಿ ಇರುವ ರಾಜ್ಯಗಳನ್ನು ಉಳಿಸಿಕೊಂಡರೆ ಸಾಕು ಎನ್ನುವಂತಾಗಿದೆ.
ರಾಜಸ್ತಾನದ ಬೆಳವಣಿಗೆ
ರಾಜಸ್ತಾನವನ್ನೇ ಬೆಳವಣಿಗೆಯನ್ನೇ ನೋಡಿ ಯುವ ನಾಯಕ ಸಚಿನ್ ಪೈಲೆಟ್ ಸಿಡಿದೆದಿದ್ದಾರೆ. ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಹೊರಗೆ ತಳ್ಳಲಾಗಿದೆ.ಇವರಿಬ್ಬರೂ ಹೆಚ್ಚಿನ ಅಧಿಕಾರ ಮತ್ತು ಅಧಿಕ ಪ್ರಾತಿನಿಧಿತ್ವ ಕೇಳಿದ್ದು, ಅದಕ್ಕೆ ಹಳೆ ತಲೆಗಳ ಗಡಣ ನಿರಾಕರಿಸಿದ್ದೇ ಕಾರಣ. ಸಚಿನ್ ಪೈಲಟ್ ರಾಜಸ್ತಾನ ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆ ಹೊಂದಿದ್ದರು. ಅದಕ್ಕಾಗಿ ಕಳೆದ ಚುನಾವಣೆಯಲ್ಲಿ ಹಗಲಿರುಳು ದುಡಿದಿದ್ದರು. ಆದರೆ ಮುಖ್ಯಮಂತ್ರಿ ಪಟ್ಟ ಕೈತಪ್ಪಿ ಅಶೋಕ್ ಗೆಹ್ಲೋಟ್ ಕೈಸೇರಿತು.
ಇದು ಇಬ್ಬರ ಕಥೆ ಮಾತ್ರವಲ್ಲ. ಕಾಂಗ್ರೆಸ್ ನ ಹಳೆ ಹುಲಿಗಳು ಸಾಕಷ್ಟು ಯುವ ನಾಯಕರನ್ನು ವ್ಯವಸ್ಥಿತವಾಗಿ ಬದಿಗೆ ತುಳಿಯುತ್ತಲೇ ಬಂದಿದೆ. ಮಿಲಿಂದ್ ದಿಯೋರಾ, ಜತಿನ್ ಪ್ರಸಾದ್ ಮೊದಲಾದವರು ರಾಜಕೀಯ ಭವಿಷ್ಯವನ್ನೇ ಕಳೆದುಕೊಳ್ಳುವಂತೆ ಮಾಡಿದೆ. ಪಕ್ಷದಲ್ಲಿ ಆಂತರಿಕ ಚುನಾವಣೆ ನಡೆಸಿ ಎಂಬ ಹಿರಿಯ ನಾಯಕ ಶಶಿ ಥರೂರ್ ಮಾತಿಗೆ ಮನ್ನಣೆ ಸಿಗಲಿಲ್ಲ.
ಕನಿಷ್ಠ ನನಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಿ ಎಂಬ ಸಿಂಧಿಯಾ ಮಾತಿಗೆ ಮಣೆ ಹಾಕದ ಕಾಂಗ್ರೆಸ್ ನಾಯಕರು, ಪೈಲಟ್, ಸಿಂಧಿಯಾಗೆ ರಾಜಕೀಯ ಕುಟುಂಬದ ಹಿನ್ನೆಲೆಯಿದ್ದರೂ, ಯುವ ನಾಯಕರಾಗಿದ್ದರು ಎಂಬುದು ಸುಳ್ಳಲ್ಲ.ಈ ಶಕ್ತಿಗಳಿಗೆ ಬ್ಯಾಕ್ ರೂಮ್ ಮ್ಯಾನೇಜರ್ಸ್ ಎಂದು ಕರೆಯುತ್ತಾರೆ. ಅವರು ಎದುರಿಗೆ ಕಾಣುವುದೇ ಇಲ್ಲ. ಬದಲಾಗಿ ಹೈಕಮಾಂಡ್ ಕಿವಿ ಚುಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ.
ಕರ್ನಾಟಕದಲ್ಲಿ
ಇದಕ್ಕೆ ಕರ್ನಾಟಕವೂ ಹೊರತಲ್ಲ. ರಾಜ್ಯ ಸಭೆಗೆ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಹೈಕಮಾಂಡ್ ನಿರ್ಧಾರವಾಗಿತ್ತು ಎಂಬುದರಿಂದ ಆರಂಭಿಸಿದರೂ, ಒಂದಿಷ್ಟು ಹಿಂತಿರುಗಿ ನೋಡಿದರೆ, ರೆಸಾರ್ಟ್ ರಾಜಕೀಯದ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದ ಡಿ. ಕೆ. ಶಿವಕುಮಾರ್ ಅವರು ಸಿದ್ಧರಾಮಯ್ಯ ಸರಕಾರದಲ್ಲಿ ಸಚಿವ ಸ್ಥಾನ ಪಡೆಯಲು ಹರ ಸಾಹಸ ಪಡೆಯಬೇಕಾಯಿತು. ಹಾಗೆಂದು ಭ್ರಷ್ಟಾಚಾರ ಆರೋಪ ಹೊತ್ತ ಇತರರೂ ಸಚಿವರಾಗಿರಲಿಲ್ಲವೇ ?
ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಅಷ್ಟೇ. ಖರ್ಗೆ, ಮುನಿಯಪ್ಪ, ಶ್ಯಾಮನೂರು ಶಿವಶಂಕರಪ್ಪ ಮೊದಲಾದವರೇ ಮುಂಚೂಣಿಯಲ್ಲಿ ಟವಲ್ ಹಾಸಿ ಕುಳಿತಿದ್ದರು. ಕೊನೆಗೆ ಅಳೆದೂ ಸುರಿದೂ ಡಿಕೆಶಿಗೆ ಅಧ್ಯಕ್ಷ ಸ್ಥಾನವೇನೋ ಸಿಕ್ಕಿತು.ಅವರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಹಿರಿಯರು ಬಿಡುವರೆ ಎಂಬುದು ಈಗಿನ ಪ್ರಶ್ನೆ.
ಹೀಗೆ ಕಾಂಗ್ರೆಸ್ ತನ್ನ ಹಳೆಯ ಚಿಂತನೆಗಳಿಗೆ ಈಗಿನ ಸನ್ನಿವೇಶಕ್ಕೆ ಅನುಗುಣವಾಗಿ ಹೊಸ ರೂಪ ನೀಡಿ, ಹೊಸ ಯುವ ನಾಯಕರಿಗೆ ಅವಕಾಶ ನೀಡದಿದ್ದರೆ ಮುಂದಿನ ದಿನಗಳಲ್ಲಿ ಭೀಕರ ಬರಗಾಲವನ್ನೇ ಎದುರಿಸುವುದರಲ್ಲಿ ಸಂದೇಹವಿಲ್ಲ. ಮುಖ್ಯವಾಗಿ ಹೊಸ ಮುಖಗಳ ಪರಿಚಯವಾಗದಿದ್ದರೆ, ಹಳೆ ಮುಖಗಳನ್ನು ನೋಡಿ ನೋಡಿ ರೋಸಿ ಹೋದ ಜನರು ಇನ್ನಷ್ಟು ದೊಡ್ಡ ಪಾಠ ಕಲಿಸುವುದರಲ್ಲಿ ಸಂಶಯವಿಲ್ಲ.
ಇದು ಆ ಪಕ್ಷದಲಿ ಅನಾದಿ ಕಾಲದಿಂದ ನಡೆದು ಬಂದ ರೀತಿ. ಹಾಗಾಗೀ ಏನೂ ಅಂದುಕೊಳೋ ಹಾಗಿಲ್ಲ. ಹಳಬರಿಗೆ ತಾನು ಹಿರಿಯ ಇವರು ಎಳಸು ಅಂತಾ. ಹೊಸಬರಿಗೆ ಹಳೆಯ ಚಿಂತನೆ ಬದಲಾವಣೆ ಬೇಕು ಅಂತಾ. ಇಂತಾದು ಬಿಡಲ್ಲ. ಹಾಗಾಗೀ ಆ ಪಕ್ಷವೂ ……..ಇದನು ಲೇಖಕರು ಲೇಖನದ ಮೂಲಕ ಹೇಳಿದಾರೆ