26.3 C
Karnataka
Saturday, November 23, 2024

    ನಾವೇಕೆ ಎಲ್ಲಾ 64 ವಿದ್ಯೆಗಳನ್ನು ಕಲಿಯಲಿಲ್ಲ

    Must read

    ಅವನನ್ನು ಮನೆ ಒಳಗೆ ಸೇರಿಸಬೇಡ,ಅವರೊಟ್ಟಿಗೇ ಹೋಗಲಿ,ಅವರ ರೀತಿಯೇ ಊರೂರು ಅಲೆಯುತ್ತ,ಅವರಿವರು ಕೊಟ್ಟಿದ್ದು ತಿನ್ನುತ್ತಾ,ಅವರದ್ದೇ ಹುಡುಗಿಯನ್ನು ಅವರು ಮದುವೆ ಮಾಡುತ್ತಾರೆ,ಮಾಡಿಕೊಳ್ಳಲಿ ಅಂತ ಅಪ್ಪ ರೌದ್ರಾವತಾರ ತಾಳಿ,ಬಯ್ಯುತ್ತಿದ್ದರೆ, ಅವರ ಜೊತೆ ಪಕ್ಕದ ಹಳ್ಳಿಗಳನ್ನು ಸುತ್ತಾಡಿ, ಸುಸ್ತಾಗಿದ್ದ ನಾನು ಅಮ್ಮನಿಂದ ಆಗಲೇ ಒದೆ ತಿಂದು ನಮ್ಮ ಮನೆಯ ಕಟ್ಟೆಯಮೇಲೆ ಹಾಗೇ ನಿದ್ರೆ ಮಾಡಿಬಿಟ್ಟಿದ್ದೆ. ನನಗಾಗ 7-8 ವರ್ಷ ವಯಸ್ಸಿರಬಹುದು. ಇಲ್ಲಿ ಅವರು ಅಂದ್ರೆ ಯಾರು ಅಂತ ನಿಮಗೆ ಅರ್ಥ ಆಗಲಿಲ್ಲ ಅಲ್ಲಾ, ಹೇಳ್ತೀನಿ ಕೇಳಿ.

    ಬಯಲು ಸೀಮೆಯ ಹಳ್ಳಿಯಾದ ನನ್ನೂರು ಸುತ್ತಲಿನ ಐದಾರು ಹಳ್ಳಿಗಳಿಗೆ ಪ್ರಮುಖವಾಗಿತ್ತು. ಹೆಚ್ಚಾಗಿ ರೈತರು, ಗಣಿ ಕಾರ್ಮಿಕರಿದ್ದ ಎಲ್ಲ ಹಳ್ಳಿಗಳಿಗೂ ಶಾಲೆ,ಕಿರಾಣಿ ಸಾಮಾನು,ಬಸ್ಸು ಹತ್ತಿ ಕೂಡ್ಲಿಗಿ,ಸಂಡೂರು ಕಡೆಗೆ ಹೋಗಬೇಕೆಂದರೆ,ನಮ್ಮೂರನ್ನೇ ಆಶ್ರಯಿಸಿ ಬರಬೇಕಿತ್ತು. 70ರ ದಶಕದಲ್ಲಿ. ಇದಲ್ಲದೆ ಋತುಮಾನಗಳಿಗೆ ತಕ್ಕಂತೆ ಯಾವ್ಯಾವುದೋ ಊರುಗಳಿಂದ ಜನ ನಮ್ಮೂರಿಗೆ ಬಂದು ಏರಿ ಮೇಲಿನ ಗಾಳೆಮ್ಮನ ಗುಡಿಯಲ್ಲಿ, ಕೋಡಿ ಬಸವಣ್ಣನ ಗುಡಿಯ ಸುತ್ತ ಬಿಡಾರ ಹೊಡೆದು ತಿಂಗಳುಗಳ ಕಾಲ ಇರುತ್ತಿದ್ದರು. ತಮಿಳುನಾಡಿನ, ತಮಿಳು ಮಾತಾಡುವ ಜನ ಬಾತುಕೋಳಿಗಳನ್ನು ಹಿಂಡು ಗಟ್ಟಲೆ ಅಂದರೆ ಸಾವಿರದ ಲೆಕ್ಕದಲ್ಲಿ ತಂದು,ನಮ್ಮೂರ ಕೆರೆಯ ನೀರಿನಲ್ಲಿ,ಗದ್ದೆಗಳಲ್ಲಿ ಅವುಗಳನ್ನು ಮೇಯಿಸುತ್ತ, ಬಿಡಾರ ಹೊಡೆದು ಕೊಂಡು ಇರುತ್ತಿದ್ದರು.

    ಕಪ್ಪನೆಯ ಧಡೂತಿ ಹೆಂಗಸರು,ಅವರ ಮೂಗಿನ,ಕಿವಿಗಳ ಆಭರಣ,ಅವರ ಹತ್ತಿರ ಬರುತ್ತಿದ್ದ ಬಾತುಕೋಳಿ ಮೊಟ್ಟೆಯ ವಾಸನೆ ಆಗ ನನಗೆ ಏನೋ ಹೊಸ ಅನುಭವದ ವಿಷಯಗಳು. ಮತ್ತೆ ಕೆಲವರು ವೃತ್ತಿ ನಾಟಕ ಕಂಪನಿಯವರು, ಹಗಲು ವೇಷಧಾರಿಯರು, ಹಾವಾಡಿಗರು, ಕರಡಿ ಆಡಿಸುವವರು, ಜೊತೆಗೆ ಜೋಗತಿಯರು ಎನ್ನಿಸಿಕೊಂಡವರ ಒಂದು ತಂಡ ರಾತ್ರಿಯೆಲ್ಲ ಪುರಾಣ ಪ್ರಸಂಗಗಳ ನಾಟಕ ಆಡುತ್ತಿದ್ದರು. ಅವುಗಳಲ್ಲಿ ರೇಣುಕ ಯಲ್ಲಮ್ಮ ನ ನಾಟಕ ಬಹು ಪ್ರಸಿದ್ದಿ. ಬಹುತೇಕ ನಮ್ಮ ಮಹಾಕಾವ್ಯಗಳ ಪರಿಚಯ ಇವರುಗಳ ನಾಟಕ,ಬಯಲಾಟಗಳಿಂದಲೇ ಗ್ರಾಮೀಣ, ಅನಕ್ಷರಸ್ಥ ಜನರಿಗೆ ಆಗಿರುವುದು.

    ಅಪ್ಪ ಬೇಸಿಗೆ ರಜೆಯ ಮಧ್ಯಾಹ್ನದಲ್ಲಿ ರಾಮಾಯಣ,ಮಹಾಭಾರತ ಕಾವ್ಯ ವಾಚನ ನನ್ನ ಮನೆಯ ಕಟ್ಟೆಯಮೇಲೆ ಮಾಡುತ್ತಿದ್ದರೆ, ಶಾನುಭೋಗರ ಶ್ರೀನಿವಾಸ ರಾವ್ ಅವರು ಅವರ ಮನೆಯ ಕಟ್ಟೆಯಮೇಲೆ ಇದನ್ನೇ ಮಾಡುತ್ತಿದ್ದರು.(ವಾಲ್ಮೀಕಿ ರಾಮಾಯಣ,ಗದುಗಿನ ನಾರಾಯಣಪ್ಪನವರ ಗದಾಯುದ್ಧ ಈಗಲೂ ಅಪ್ಪನ ನೆನಪಾಗಿ ನನ್ನಲ್ಲಿ ಇವೆ.ಅವುಗಳ ಪದ್ಯದ ಸಾಲು ನೋಡುತ್ತಿದ್ದರೆ,ಅಪ್ಪನ ಕಂಠದ ಪ್ರಾಸ, ಯಾವ್ಯಾವ ಸಾಲುಗಳನ್ನು ಅಪ್ಪ ಹೇಗೆ ಸುಶ್ರಾವ್ಯವಾಗಿ ಹಾಡಿ, ಅರ್ಥೈಸುತ್ತಿದ್ದರೋ,ಅದು ಕಣ್ಮುಂದೆ ಬರುತ್ತೆ.) ಸಾಯಂಕಾಲಗಳಲ್ಲಿ ಆಗಾಗ ಬೇರೆ ಊರಿಂದ ಬರುತ್ತಿದ್ದವರು ಯಾವುದಾದರೂ ಇವೇ ಮಹಾಕಾವ್ಯಗಳ ಪ್ರಸಂಗ ಕುರಿತ ಹರಿ ಕಥೆ ಹೇಳುತ್ತಿದ್ದರು. ಹಾಗೆ ಬರುವವರಲ್ಲಿ ನನ್ನ ಆಕರ್ಷಣೆಯ ಕೇಂದ್ರ ಆಗಿದ್ದವರು ಒಂದು ಅಲೆಮಾರಿ ಜನಾಂಗ. ಅವರನ್ನು ಜೋಗೇರು, ದೊಂಬರು, ಮೋಡಿ ಮಾಡೋರು, ಕಣ್ಕಟ್ ಮಾಡೋರು ಅಂತ ನಾನಾ ವಿಧವಾಗಿ ಕರೆಯುತ್ತಿದ್ದರು,ನಮ್ಮೂರಲ್ಲಿ.

    ಬಜಾರದ ವೆಂಕಟರಮಣ ಶೆಟ್ರ ಮನೆಮುಂದೆ ಸಾಮಾನ್ಯವಾಗಿ ಇವರೆಲ್ಲರ ಪ್ರದರ್ಶನ ನಡೆಯುತ್ತಿದ್ದವು. ಚಿಕ್ಕ ಹುಡುಗಿ 12-15 ಅಡಿ ಎತ್ತರದಲ್ಲಿ ತಂತಿಯ ಮೇಲೆ ಸೈಕಲ್ ಓಡಿಸುವುದು,ಒಂದು ದೊಡ್ಡ ಬಿದಿರಿನ ಕೋಲು ಅಡ್ಡವಾಗಿ ಕೈಯಲ್ಲಿ ಹಿಡಿದು ಅಡ್ಡಾಡುವುದು, ಕೆಳಗೆ ಮಲಗಿ,ಎದೆಯಮೇಲೆ ಚಪ್ಪಡಿಕಲ್ಲನ್ನು ಅವರಪ್ಪ ಸುತ್ತಿಗೆಯಿಂದ ಹೊಡೆಯುವುದು ಒಂದು ಕಡೆ ಆದರೆ, ಆ ಹುಡುಗಿಯ ಅಪ್ಪ ತನ್ನ ಒಂದು ಕಣ್ಣು ತಾನೇ ಕಿತ್ತುಕೊಂಡು ಅಂಗೈಯಲ್ಲಿಟ್ಟು ಎಲ್ಲರಿಗೂ ತೋರಿಸುತ್ತಿದ್ದುದು ನನ್ನನ್ನು ತಲ್ಲಣಗೊಳಿಸಿತ್ತು!

    ಮಾರನೆಯ ದಿನ ಭಯಂಕರ ವೇಷ ಧರಿಸಿ,ಮನೆ ಮನೆಗೆ ಏನಾದ್ರು ಕೇಳಲು ಬರುವಾಗ ನಾನು ಅವನ ಕಿತ್ತ ಕಣ್ಣನ್ನೇ ನೋಡುತ್ತಾ,ಅವನ ಹಿಂದೆಂದೆ ಹೋಗುತ್ತಿದ್ದೆ,ಶಾಲೆಗೆ ಹೋಗುವದನ್ನು ಮರೆತು. ಅವನ ಹತ್ತಿರ ಒಂದು ಚೀಲ ಇರುತ್ತಿತ್ತು. ಅದರಿಂದ ಹಾವು,ಚೇಳು ಹೊರಗೆ ತೆಗೆದು ಬಜಾರದಲ್ಲಿ ಹಾಸಿದ್ದ ಕಂಬಳಿಯ ಮೇಲೆ ಅಡ್ಡಾಡಲು ಬಿಡುತ್ತಿದ್ದ. ಮತ್ತೆ ಒಳಗೆ ಚೀಲದಲ್ಲಿ ಹಾಕಿಬಿಡುತ್ತಿದ್ದ. ನನಗೆ ಆ ಚೀಲ ನೋಡುವುದೇ ಸಂಭ್ರಮ. ಹಾಗೊಂದು ಸಾರಿ ಅವನಿದ್ದ ಕೋಡಿ ಬಸವಣ್ಣನ ಗುಡಿಯತನಕವೂ ಹೋಗಿ,ಅವನ ಚೀಲದಲ್ಲಿದ್ದ ಗಜ್ಜುಗ,ಕವಡೆ ತಂದು, ಅಮ್ಮನಿಂದ ಹೊಡೆಸಿಕೊಂಡಿದ್ದೆ ಮತ್ತು ಅವುಗಳನ್ನು ದೂರ ಎಸೆದು ಬಿಟ್ಟಿದ್ದಳು . ದುಃಖ ತಡೆಯಲು ಆಗಿರಲಿಲ್ಲ ಆಗ.

    ಅಂತಹುದೇ ಒಂದು ಕುತೂಹಲದಿಂದ ಅವರೊಟ್ಟಿಗೆ ನಮ್ಮೂರ ಪಕ್ಕದ ಜಿಗೇನಹಳ್ಳಿ ಗೆ ಹೋಗಿ ಬಂದಿದ್ದೆ. ಅವತ್ತೇ ಮೊದಲಿಗೆ ಆ ಊರು ನಾನು ನೋಡಿದ್ದು!. ಇಲ್ಲಿ ಅಪ್ಪ,ಅಮ್ಮ ದಿನ ಇಡೀ ಹುಡುಕಿ ಭಯಗೊಂಡು ನಾನು ಸಾಯಂಕಾಲ ಮನೆಗೆ ಬರುತ್ತಿದ್ದಂತೆಯೇ ಮಂಗಳಾರತಿ ಮಾಡಿದ್ದರು. ಹಾಗೆ ನೋಡಿದರೆ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ನಾಯಿ ತಿರುಗಿದ ಹಾಗೆ (ಇದು ನನ್ನ ಅಮ್ಮನ ಭಾಷೆ) ತಿರುಗುವುದು ನನಗೂ ಹೊಸದಲ್ಲ,ಬೈಯುವುದು ಅವರಿಗೂ ಹೊಸದಲ್ಲ.

    ಬೆಳಿಗ್ಗೆ 6 ಗಂಟೆಗೆ ಅಪ್ಪನ ಜೊತೆ ದೇವಸ್ಥಾನದ ಹೊಂಡಕ್ಕೆ ಸ್ನಾನಕ್ಕೆಂದು ಹೋಗುತ್ತಿದ್ದವನು,ಈಸಲು ಯಾವಾಗ ಕಲೆತೆನೋ ನನಗೇ ನೆನಪಿಲ್ಲ. ಊರ ಮುಂದಿನ ಕೆರೆ ತುಂಬಿ ಕೋಡಿ ಬಿದ್ದಾಗ, ಬೆಳಿಗ್ಗೆನೇ ನೀರಲ್ಲಿ ಆಟ ಆಡ್ತಾ,ಎದುರು ನೀರಿಗೆ ಬರುತ್ತಿದ್ದ ಚಿಕ್ಕ,ಚಿಕ್ಕ ಮೀನುಗಳನ್ನು ಹಿಡಿಯುತ್ತ,ಯಾವಾಗ ಮನೆಗೆ ಹೋಗಿದ್ದೋ ನೆನಪಿಲ್ಲ. ಗಂಟೆ ಮಕ್ಕಳು ಕಾಣದಿದ್ದರೆ ಈಗಿನ ರೀತಿ ಆಗ ತಡಪಡಿಸುತ್ತಿರಲಿಲ್ಲ. ಊರಲ್ಲಿಯ ಯಾರಾದರೊಬ್ಬರು ನಾವೆಲ್ಲ ಎಲ್ಲಿದ್ದೇವೆ ಅಂತ ನಮ್ಮ ಮನೆಗಳಿಗೆ ಹೇಳುತ್ತಿದ್ದರು. ಮನೆಯವರೂ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ,ಸಮಯಕ್ಕೆ ಸರಿಯಾಗಿ ಬಂದು ಊಟ ಮಾಡಿ ಹೋದರೆ. ಹೀಗಿದ್ದುದರಿಂದ ನಾನೇನು ಮಾಡಬಾರದ್ದು ಮಾಡಿದ್ದೇನೆಂದು ಅಪ್ಪ,ಅಮ್ಮ ನನ್ನನ್ನು ಹೀಗೆ ಬೈದು,ಊಟಕ್ಕೆ ಕೊಡದೆ ಹೊರಗೆ ಮಲಗಿಸಿದ್ದಾರಲ್ಲ ಅಂತ ನನ್ನ ಸ್ವಗತ ವಾದ. ಅಪ್ಪನ ಎದುರಿಗೆ ಜೋರಾಗಿ ಕೆಮ್ಮಲೂ ಭಯ ಆಗ. ದುರ್ವಾಸ ಮುನಿಯ ಅಪರಾವತಾರ. ಇಷ್ಟು ಭಯದ ನಡುವೆ ಅವರ ಹಿಂದೆ ಮತ್ತೆ,ಮತ್ತೆ ಹೋಗುತ್ತಿದ್ದೆ ಅಂದರೆ,ಅವರೆಡೆಗಿನ ನನ್ನ ಕುತೂಹಲ ನಿಮಗೆ ತಿಳಿದಿರಬೇಕಲ್ಲ ಈಗ.

    ಸರಿ,ತಡೆಯಲಾಗದ ಕುತೂಹಲಗಳನ್ನು ತಣಿಸುತ್ತಿದ್ದುದೇ ಅಪ್ಪ. ಬೆಳಿಗ್ಗೆ ಹೊಂಡಕ್ಕೆ ಇಬ್ಬರೇ ನಡೆದು ಹೋಗುವಾಗ ನನಗೆ ಅಪ್ಪನ ಸಾನಿಧ್ಯದ ಸನಿಹ ಬಹು ಅಚ್ಚುಮೆಚ್ಚು. ಪಾಠಗಳ ಹೊರತಾದ ಎಲ್ಲ ವಿಷಯಗಳ ಅರಿವು ನನಗಾಗುತ್ತಿದುದೇ ಇಲ್ಲಿ. ಅಪ್ಪ ತನ್ನ ಜೀವಿತಾವಧಿಯ 84 ವರ್ಷಗಳಲ್ಲಿ ಸುಮಾರು 78 ವರ್ಷದ ವರೆಗೆ ಮನೆಯಿಂದ ಒಂದು ಕಿಲೋಮೀಟರ್ ಇರುವ ದೇವಸ್ಥಾನದ ಹೊಂಡದಲ್ಲಿ ದಿನಾ ಬೆಳಿಗ್ಗೆ ಈಜುವುದರೊಂದಿಗೆ ಸ್ನಾನ ಆಗಲೇಬೇಕು. ಅದು ನನಗೂ ಊರಲ್ಲಿರುವಷ್ಟು ದಿನ ಅಭ್ಯಾಸವಾಗಿತ್ತು. ಹಾಗೆ ಒಂದು ದಿನ ಅವನ ಕಣ್ಣು ಹೇಗೆ ಕಿತ್ತುಕೊಂಡು ಎಲ್ಲರಿಗೂ ತೋರಿಸುತ್ತಾನೆ ಅಂತ ಕೇಳಿದಾಗ, ಅವರು ಅದನ್ನು ಸಮ್ಮೋಹನ ವಿದ್ಯೆ ಅಂತಾರೆ, ಅದು ನಮ್ಮ ಪರಂಪರೆಯ 64 ವಿದ್ಯೆಗಳಲ್ಲಿ ಒಂದು,ಅದನ್ನು ಮಾನಸಿಕ ರೋಗಿಗಳ ಸುಧಾರಣೆಗಾಗಿ ಬಳಸುತ್ತಿದ್ದರು,ನಂತರ ಜನರನ್ನು ಮರಳುಮಾಡಿ ಕಳ್ಳತನ ಮಾಡಲೂ ಬಳಸುತ್ತಾರೆ. ತಂತ್ರ,ತಾಂತ್ರಿಕರು ಎನ್ನಿಸಿಕೊಂಡ ಒಂದು ಭಾಗದ ಜನರಿಗೆ ಇದು ಬಹು ಅನಿವಾರ್ಯ ವಿದ್ಯೆ ಅಂತ ಹೇಳಿದ್ದರು. ನನ್ನ ಹಲವಾರು ಪ್ರೆಶ್ನೆಗಳಿಗೆ ಅಪ್ಪ,ಇನ್ನು ಸ್ವಲ್ಪ ದೊಡ್ಡವನಾಗು,ಆಗ ಹೇಳ್ತೀನಿ,ನಿನಗೆ ಅರ್ಥ ಆಗುತ್ತೆ ಈಗ ಆಗಲ್ಲ ಅಂತ ಹೇಳ್ತಾ ಇದ್ದರು ಆಗ. ನಾನು ಬೆಳೆದಂತೆಲ್ಲ ನನ್ನ ಕುತೂಹಲಗಳಿಗೆ ಸಮಯವಿಲ್ಲದಂತೆ ಆಯ್ತೇನೋ ಗೊತ್ತಿಲ್ಲ.

    ಎಂಜಿನಿಯರಿಂಗ್ ಗೆ ಅಂತ ಸುರತ್ಕಲ್ ಕಾಲೇಜಿಗೆ ಬಂದೆ. ಮೊದಲೆರೆಡು ವರ್ಷ ಬೆಳಿಗ್ಗೆ ಬೀಚ್ ನಲ್ಲಿ ಓಟ,ಯೋಗ,ಪ್ರಾಣಾಯಾಮ. ಸಾಯಂಕಾಲ ನಮ್ಮ ಹಾಸ್ಟೆಲ್ ಹಿಂದಿನ ರಸ್ತೆಯಲ್ಲಿ ಓಟ. ಹಾಸ್ಟೆಲ್ ಪಕ್ಕ ಇದ್ದ ಜಿಮ್ ನಲ್ಲಿ ಸಾಮು. ಮಲ್ಲಾಡಿಹಳ್ಳಿಯ ವಾಸನೆಯನ್ನು ಮೊದಲೆರಡು ವರ್ಷ ಉಳಿಸಿಕೊಂಡಿದ್ದೆ. ಅದೇ ಸಮಯದಲ್ಲಿ ಕೇರಳದಿಂದ ಒಬ್ಬ Hypnotist ಬಂದಿದ್ದ. ಅಲ್ಲಿದ್ದ Student Activity Centre (SAC)ಅದು ಸುಮಾರು ಸಾವಿರ ಜನರನ್ನು ಕೂರಿಸಿಕೊಳ್ಳುವ ಹೊರಾಂಗಣ. ಇಲ್ಲಿ ವಿದ್ಯಾರ್ಥಿಗಳಾದ ನಮ್ಮ ಮೇಲೆ ಸಮೂಹ ಸಮ್ಮೋಹನ ಮಾಡುವುದಾಗಿ ಹೇಳಿ, ಒಪ್ಪಿಗೆ ಇದ್ದವರು ವೇದಿಕೆಗೆ ಬನ್ನಿ ಎಂದ. ನನಗೋ ಕುತೂಹಲದ ಸಡಗರ! 20-30 ಗೆಳೆಯರೊಂದಿಗೆ ತುಂಬಿದ್ದ ವೇದಿಕೆ ಮೇಲೆ ನಾನೂ ಹೋದೆ ಸಮ್ಮೋಹನಕ್ಕೆ ಒಳಗಾಗಲು. ಏನಾದ್ರು ಆಗಲಿ ನಾನು ಒಳಗಾಗಾಲೇ ಬಾರದು ಅಂತ ಮನದಲ್ಲಿ ನಿಶ್ಚಯಿಸಿದ್ದೆ. ಅವನು ಹೇಗೆ ಮಾಡ್ತಾನೋ ನೋಡುವ ಅಂದುಕೊಂಡು.

    …..1,2,3….10….ಈಗ ನೀವೆಲ್ಲ ನಾನು ಹೇಳಿದ ಹಾಗೆ ಕೇಳ್ತೀರಿ, ನೀವು 10 ವರ್ಷದ ವಯಸ್ಸಿಗೆ ಹೋಗಿ,2 ವರ್ಷದ ವಯಸ್ಸಿಗೆ ಹೋಗಿ,ಅಮ್ಮನ ಗರ್ಭಕ್ಕೆ ಹೋಗಿ,ಹಿಂದಿನ ಜನ್ಮಕ್ಕೆ ಹೋಗಿ….. ಅವನ ಸೂಚನೆಗಳು ಹೀಗೆ ಸಾಗುತ್ತಿದ್ದವು. ವೇದಿಕೆಯಲ್ಲಿಯ ಕೆಲವು ಗೆಳೆಯರು ಸಮ್ಮೋಹನಕ್ಕೆ ಒಳಗಾದ್ರು ಅಂತ ಅವ ಹೇಳ್ತಿದ್ದ,ಕೆಲವರನ್ನು ಕೆಳಗಿಳಿಸಿ ಕಳಿಸಿಕೊಟ್ಟ. ಪ್ರತಿ ಬಾರಿಯೂ ನನಗೇನೂ ಆಗಿಲ್ಲ,ನಾನು ಇಲ್ಲೇ ಇದ್ದೇನೆ,SAC ನಲ್ಲಿ ನಿಮ್ಮ ಎದುರಿಗೆ ಅಂತ ಅವ ಏನು ಹೇಳಿದರೂ ಕೇಳದೆ ವಾದ ಮಾಡ್ತ ಇದ್ದೆ. ಹತ್ತಿರಬಂದು ನೀನು ಯೋಗ,ಪ್ರಾಣಾಯಾಮ ಮಾಡ್ತಿದೀಯ ಅಂದ…ಹೌದು ಈಗ ಸಾಯಂಕಾಲ ಮುಗಿಸಿ,ಊಟ ಮಾಡಿ ಇಲ್ಲಿಗೆ ಬಂದಿದ್ದೇನೆ ಅಂದೆ. ನಾನು ಅವನು ಸೂಚನೆ ಕೊಟ್ಟಂತೆಲ್ಲ ನಾನು ಅವತ್ತು ಬೆಳಿಗ್ಗೆಯಿಂದ ಕಾಲೇಜಿನಲ್ಲಿ,ಹಾಸ್ಟೆಲ್ ನಲ್ಲಿ ಏನಾಯ್ತು ಅಂತ ನೆನಪಿಸಿಕೊಳ್ತಾ ವಾಸ್ತವತೆಯನ್ನು ಬಿಟ್ಟು ಅವನು ಸೂಚಿಸುತ್ತಿದ್ದ ಬಾಲ್ಯ ಅಮ್ಮನ ಗರ್ಭ ಯಾವುದರ ಕಡೆ ಗಮನ ಕೊಡುತ್ತಿರಲಿಲ್ಲ. Almost ಎಲ್ಲರೂ ವೇದಿಕೆಯಿಂದ ಕೆಳಗಿಳಿದರು. ನಾನು,ಅವನು ಮಾತ್ರ ವೇದಿಕೆಯಲ್ಲಿ. ನೀನು ಸಮ್ಮೋಹನಕ್ಕೆ ಒಳಗಾಗಿದ್ದಿಯ,ನಿನಗೆ ತಿಳಿಯುತ್ತಿಲ್ಲ ಅಂತ ಅವನ ವಾದ. ಇಲ್ಲವೇ ಇಲ್ಲ ಅಂತ ನನ್ನ ವಾದ. ಸರಿ ಸಭಿಕರನ್ನು ಉದ್ದೇಶಿಸಿ ಅವ ಹೇಳಿದ,ಇವನು ಸಮ್ಮೋಹನಕ್ಕೆ ಒಳಗಾಗಿದ್ದಾನೆಂದು ನಾನು ನಿಮಗೆ ತೋರಿಸುತ್ತೇನೆ ನೋಡಿ ಅಂತ ಹೇಳಿ ನನ್ನನ್ನು ಸಭಿಕರಿಗೆ ಬೆನ್ನುಮಾಡಿ ನಿಲ್ಲುವಂತೆ ಹೇಳಿದ. ನಾನೂ ಒಪ್ಪಿ ನಿಂತೆ. ಎರಡೂ ಕಣ್ಣನ್ನು ಕಟ್ಟಿದ. ಸಭಿಕರದ್ದು ಯಾರದ್ದೋ ರೂಮ್ ಕೀಲಿ ತಂದು ನನ್ನ ಮುಖಕ್ಕೆ ಹಿಡಿದ. ಮತ್ತೆ ಸಭಿಕರನ್ನು ಉದ್ದೇಶಿಸಿ ಇವನಿಗೆ ಕಣ್ಣು ಕಟ್ಟಿ ಈ ಕೀಲಿ ಸಭಿಕರಲ್ಲಿ ಎಲ್ಲಿರುತ್ತೋ ಅಲ್ಲಿಂದ ತರುವಂತೆ ಹೇಳ್ತೇನೆ,ನೋಡಿ ಹೇಗೆ ತರ್ತಾನೆ ಅಂದ. ನನಗೋ ಆಶ್ಚರ್ಯ. ಬೆನ್ನು ತಿರುಗಿಸಿಯೇ ನಿಂತಿದ್ದೇನೆ. ಅವ ಕೆಳಗೆ ಹೋಗಿ ಕತ್ತಲಲ್ಲಿ ಎಲ್ಲೋ ಕೀಲಿ ಸಭಿಕರ ಮಧ್ಯೆ ಇಟ್ಟು ಬಂದ. ನನಗೆ 1,2,3….10 ಹೊರಡು ಕೀಲಿ ತೆಗೆದುಕೊಂಡು ಬಾ ಅಂದ…ನಂಗೆ ಎಲ್ಲ ಜ್ಞಾಪಕ ಇದೆ.ಯಾವುದೇ ಅತಿಮಾನುಷ ಶಕ್ತಿ ನನ್ನಲ್ಲಿ ಪ್ರವೇಶಿಸಿಲ್ಲ. ಅವನು ಎರಡು ಮೂರು ಬಾರಿ ನನ್ನನ್ನು ತಿರುಗಿಸಿ ಹೊರಡು ಎಂದ. ಕಣ್ಣಿಗೆ ಬಟ್ಟೆ ಕಟ್ಟಿದ್ದಾನೆ,ನನಗೆ ಎಲ್ಲವೂ ಸ್ಪಷ್ಟ ಕಾಣಿಸುತ್ತಿದೆ. ಯಾರನ್ನೂ ತಾಕದೆ, ಕತ್ತಲೆ ಇದ್ದರೂ ಕೂತಿರುವವರ ಮಧ್ಯೆ ಇರುವ ಜಾಗದಲ್ಲಿ ಅರಾಂ ಆಗಿ ನಡೆದು ಹೋಗುತ್ತಿದ್ದೇನೆ…ಈಗ ನನಗೆ ಒಂದು ಸುಂದರವಾದ ಸುವಾಸನೆ ಬರ್ತಿದೆ. ಆ ಸುವಾಸನೆ ಅರಸಿ ನಾನು ಹೋಗ್ತಿದ್ದೇನೆ. ಸುವಾಸನೆಯ ಕಂಪು ಹೆಚ್ಚಾಗಿ ಇರುವಕಡೆ ಬಂದು ನಿಲ್ಲುತ್ತಿದ್ದೇನೆ. ಕಂಪು ಒಂದು ರೀತಿ ಒಂದೇ ಕಡೆಯಿಂದ ಬರ್ತಿದೆ ಅನ್ನಿಸ್ತಿದೆ. ಕೀಲಿ ಇರುವ ವ್ಯಕ್ತಿಯ ಸರಿಯಾದ ಜೇಬಿಗೆ ಕೈ ಹಾಕಿ ಕೀಲಿ ತೆಗೆದುಕೊಂಡು ಬರ್ತಿದ್ದೇನೆ… ಎಲ್ಲರೂ ಚಪ್ಪಾಳೆ ಹೊಡೀತಿದ್ದಾರೆ. ವೇದಿಕೆಗೆ ಬಂದವನ ಕಣ್ಣು ಬಿಚ್ಚಿ ಕೇಳುತ್ತಾನೆ…ಇವರೆಲ್ಲ ಒಪ್ಪಿದ್ದಾರೆ,ನೀನು ಸಮ್ಮೋಹನಗೆ ಒಳಗಾಗಿದ್ದಿಯ ಅಂತ,ನೀನೂ ಒಪ್ಪುತ್ತಿಯಾ ಅಂತ. ಏನೇಳಲಿ?!

    ಅಂದು ನನಗೆ ಆಶ್ಚರ್ಯ ಆದದ್ದಂತೂ ನಿಜ. ಅವನೇಳಿದ ಹಾಗೆ ನನ್ನನ್ನು ತಾಯಿಯ ಗರ್ಭಕ್ಕೆ,ಹಿಂದಿನ ಜನ್ಮಕ್ಕೆ ಕಳುಹಿಸಲು ಅವನಿಗೆ ಆಗದಿದ್ದರೂ ನನ್ನಿಂದ ಮುಚ್ಚಿದ ಕಣ್ಣುಗಳಿಂದ,ಕತ್ತಲೆಯಲ್ಲಿ ಕೀಲಿ ತರಿಸಿದ್ದಂತೂ ಸತ್ಯ. ಎಂತಹಾ ಮಹಾನ್ ವಿದ್ಯೆ ಅಲ್ಲವಾ ಅನ್ನಿಸಿತು. ಯಾಕೆ ನಮಗೆಲ್ಲ ಇಂತಹ ವಿದ್ಯೆಗಳನ್ನು ಕಲಿಸದೆ ಅವರು ದಾಳಿ ಮಾಡಿದರು,ಇವರು ಇದನ್ನು ಒಡೆದುಹಾಕಿದರು,ಇವರು ಇವರನ್ನು ಮುಟ್ಟಿಸಿಕೊಳ್ಳಲಿಲ್ಲ ಎನ್ನುವಂತಹ ಕೆಲಸಕ್ಕೆ ಬಾರದ ವಿದ್ಯೆ ಕಲಿಸುತ್ತಿದ್ದಾರೆ ಅಂತ ಅನ್ನಿಸಿತು. ಅವತ್ತು ಎಲ್ಲಾ ಆದಾಗ ಆ ಕೇರಳಿಗ ಹೇಳಿದ… You are very strong ಅಂತ. ಅದು ನನ್ನಲ್ಲಿ ಎಂತಹ ಆತ್ಮವಿಶ್ವಾಸಕ್ಕೆ ಕಾರಣ ಆಯ್ತು ಎಂದ್ರೆ ಅಂತಹ ಖುಷಿ ನಾನು ಡಿಗ್ರಿಯನ್ನು Distinction ನಲ್ಲಿ ಪಾಸಾದಾಗಲೂ ಪಡಲಿಲ್ಲ!

    ನಾನು ಚಿಕ್ಕವನಿದ್ದಾಗ ಗೋಲಿ ಆಟದಲ್ಲಿ ಮುಂದು. ಊರವರ ಗೋಲಿಗಳನ್ನು ಗೆದ್ದು ನಿಕ್ಕರ್ರಿನ ಜೇಬಿಗೆ ಹಾಕುತ್ತಿದ್ದರೆ, ಜೇಬುಗಳು ಹರಿದು ಹೋಗುತ್ತಿದ್ದವು. ಸುಮಾರು ಅಡಿಗಳ ದೂರದಲ್ಲಿ ಇರುತ್ತಿದ್ದ ಒಂದು ಗೋಲಿಯನ್ನು, ಒಂದು ರೀತಿಯ ನೋಟದಲ್ಲಿ ನೋಡಿ,ಕೈ ಹಸನಾಗಿಸಿ,ಬೆರಳುಗಳಿಂದ ಗೋಲಿಯನ್ನು ತಿರುಗಿಸುತ್ತಾ,ಮಧ್ಯದ ಬೆರಳನ್ನು ನೆಟ್ಟಗೆ ಮಾಡಿ,ತುದಿಯಲ್ಲಿ ಗೋಲಿ ಇಟ್ಟು, ರಭಸವಾಗಿ ತಳ್ಳಿದ ಗೋಲಿ,ಸರಿಯಾಗಿ ಗುರಿ ಇಟ್ಟ ಗೋಲಿಗೆ ತಾಕುತ್ತಿದ್ದನ್ನು ಊಹಿಸಿಕೊಂಡೇ ಎಷ್ಟೋ ಬಾರಿ ಆಶ್ಚರ್ಯ ಹೊಂದಿದ್ದೇನೆ. ಆ ಕ್ಷಣ ಕಾಲ ಕೇಂದ್ರಿತವಾಗುವ ನಮ್ಮ ನೋಟ,ನಮ್ಮಲ್ಲಿರುವ ಗೋಲಿಗೂ, ಅಡಿಗಳ ಅಂತರದಲ್ಲಿರುವ ಗೋಲಿಗೂ ಸಂಪರ್ಕ ಕಲ್ಪಿಸಲು ಸಾಧ್ಯವಾಗುವುದಾದರೆ, ನಮ್ಮ ಮನಸ್ಸಿಗೂ ಒಂದು ಶಕ್ತಿ ಅಂತ ಇರುವುದು ಸಾಧ್ಯವಲ್ಲವೇ? ಇದೇ ಬಿಲ್ವಿದ್ದೆಯಲ್ಲೂ ಉಪಯೋಗವಾಗಿತ್ತಾ?? ಗೊತ್ತಿಲ್ಲ. ಇಂತಹ ಮಹಾನ್ ವಿದ್ಯೆಗಳ ಅರಿವನ್ನು ಹೊಂದಿದ್ದ ಒಂದು ಪೀಳಿಗೆ ಇಲ್ಲಿ ಸಾವಿರಾರು ವರ್ಷಗಳ ಹಿಂದೆ ಇತ್ತು ಅಂತ ನೆನೆಸಿ ಕೊಂಡರೆ ಯಾಕೋ ಡಾರ್ವಿನ್ ನ ವಿಕಾಸ ವಾದದ ಬಗ್ಗೆ ಒಂದು ಕಡೆ ಅನುಮಾನ ಬರುತ್ತದೆ. ಯಾಕೆಂದರೆ ಅವನ ಪ್ರಕಾರ ಮನಸ್ಸು,ಬುದ್ಧಿ ಶಕ್ತಿ ಈಗಿನ ಪೀಳಿಗೆಯಲ್ಲಿ ಅವರಿಗಿಂತ ಹಲವು ಪಟ್ಟು ಹೆಚ್ಚಿರಬೇಕಿತ್ತು. ಆದರೆ ಹಾಗಾಗಿಲ್ಲ.

    ಆತ್ಮಹತ್ಯೆ ಎನ್ನುವುದು ನಮ್ಮ ಮಹಾಕಾವ್ಯಗಳಲ್ಲಾಗಲಿ,ಪುರಾಣ ಗಳಲ್ಲಾಗಲೀ ಎಲ್ಲಿಯೂ ಇಲ್ಲ. ಆದರೆ ಈಗ ಪ್ರತಿ ವಯಸ್ಕರಲ್ಲೂ ಸಾಮಾನ್ಯವಾಗಿದೆ. ಇದಕ್ಕೆ ಕಾರಣ ದುರ್ಬಲ ಮನಸ್ಸಲ್ಲವೇ? ಅಥವಾ ವಿರುದ್ಧವಾಗಿ ಆಂಗ್ಲರು ಹಾಕಿಕೊಟ್ಟ ವಿದ್ಯೆಯ ಮಾರ್ಗದಲ್ಲಿ ನಡೆದು, ತಲೆತಲಾಂತರದಿಂದ ನಮ್ಮಲ್ಲಿ ಅಂತರ್ಗತವಾಗಿ ಬಂದಂತಹ ಶಕ್ತಿಯನ್ನು ಉಪಯೋಗಿಸಿಕೊಳ್ಳದೇ ನಶಿಸಿ ಹೋಯ್ತಾ? ಗೊತ್ತಿಲ್ಲ….ಅಂತೂ ಎಲ್ಲೋ ಎಡವಟ್ಟು ಆಗಿದೆ. ಯಾರನ್ನೋ,ಯಾವುದನ್ನೋ ದೂಷಿಸಲು,ದ್ವೇಷಿಸಲು ಹೋಗಿ,ಮೂರ್ಖರಾದೆವಾ?… ಹಿತ್ತಲ ಗಿಡ ಮದ್ದಲ್ಲ ಎನ್ನುವುದನ್ನು ಅಕ್ಷರಶಃ ಪಾಲಿಸಿಬಿಟ್ಟೆವಾ?

    64 ವಿದ್ಯೆಗಳು

    1.ವೇದ 2. ವೇದಾಂಗ 3.ಇತಿಹಾಸ 4.ಆಗಮ 5.ನ್ಯಾಯ 6.ಕಾವ್ಯ 7.ಅಲಂಕಾರ 8.ನಾಟಕ 9. ಗಾನ 10. ಕವಿತ್ವ 11.ಕಾಮಶಾಸ್ತ್ರ 12.ದೂತನೈಪುಣ್ಯ 13.ದೇಶಭಾಷಾಜ್ಞಾನ 14.ಲಿಪಿಕರ್ಮ 15..ವಾಚನ 16.ಸಮಸ್ತಾವಧಾನ 17.ಸ್ವರಪರೀಕ್ಷಾ 18.ಶಾಸ್ತ್ರಪರೀಕ್ಷಾ 19.ಶಕುನಪರೀಕ್ಷಾ 20.ಸಾಮುದ್ರಿಕಪರೀಕ್ಷಾ 21.ರತ್ನಪರೀಕ್ಷಾ 22. ಸ್ವರ್ಣಪರೀಕ್ಷಾ 23. ಗಜಲಕ್ಷಣ 24.ಅಶ್ವಲಕ್ಷಣ 25. ಮಲ್ಲವಿದ್ಯಾ 26. ಪಾಕಕರ್ಮ 27. ದೋಹಳ 28.ಗಂಧವಾದ 29. ಧಾತುವಾದ 30.ಖನಿವಾದ 31. ರಸವಾದ 32.ಅಗ್ನಿಸ್ತಂಭ 33. ಜಲಸ್ತಂಭ 34. ವಾಯುಸ್ತಂಭ 35. ಖಡ್ಗಸ್ತಂಭ 36.ವಶ್ಯಾ 37. ಆಕರ್ಷಣ 38. ಮೋಹನ 39.ವಿದ್ವೇಷಣ 40.ಉಚ್ಛಾಟನ 41. ಮಾರಣ 42. ಕಾಲವಂಚನ 43. ವಾಣಿಜ್ಯ 44.ಪಶುಪಾಲನ 45. ಕೃಷಿ 46.ಸಮ ಶರ್ಮ 47. ಲಾವುಕಯುದ್ಧ 48. ಮೃಗಯಾ 49.ಪುತಿಕೌಶಲ 50. ದೃಶ್ಯಶರಣ 51. ದ್ಯೂತಕರಣಿ 52.ಚಿತ್ರಲೋಹ 53. ಚೌರ್ಯ 54. ಔಷಧಸಿದ್ಧಿ55. ಮಂತ್ರಸಿದ್ಧಿ56. ಸ್ವರವಂಚನಾ 57.ದೃಷ್ಟಿವಂಚನಾ 58. ಅಂಜನ 59. ಜಲಪ್ಲವನ 60. ವಾಕ್ ಸಿದ್ಧಿ 61.ಘಟಿಕಾಸಿದ್ಧಿ62.ಪಾದುಕಾಸಿದ್ಧಿ 63. ಇಂದ್ರಜಾಲ 64. ಮಹೇಂದ್ರಜಾಲ

    Photo by Pablo Heimplatz on Unsplash

    ಮಂಜುನಾಥ ಬೊಮ್ಮಘಟ್ಟ
    ಮಂಜುನಾಥ ಬೊಮ್ಮಘಟ್ಟ
    ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಬರಹಗಾರ. ಸಧ್ಯ ಬಳ್ಳಾರಿಯಲ್ಲಿ ವಾಸ.
    spot_img

    More articles

    13 COMMENTS

    1. ಲೇಖಕರು ತಮ್ಮ ಬಾಲ್ಯದ ನೆನಪಿನೊಂದಿಗೆ ಪುರಾತನ ಭಾರತೀಯ ವಿದ್ಯೆಗಳು ಬಗ್ಗೆ ಸೊಗಸಾಗಿ ವಿವರಿಸಿದ್ದಾರೆ. ಚಿಂತನೆಗೆ ಹಚ್ಚುವ ಬರಹ.

    2. ನಿಮ್ಮ ಬದುಕು ತುಂಬಾ ರೋಚಕವಾಗಿದೆ.

      ಅದೆಲ್ಲವನ್ನು ಲೇಖನ ರೂಪದಲ್ಲಿ ಅದ್ಭುತವಾಗಿ ಮೂಡಿಸಿದ್ದಿರಿ.

      ಬಹು ದೊಡ್ಡ ಪ್ರತಿಭೆ ನಿಮ್ಮಲಿದೆ.

      You are amazing.

      🙏🙏🙏🌹🌸

    3. ನನ್ನ ನೆಚ್ಚಿನ ಬರಹಗಾರರು ನೀವು… 🙏
      ನಿಮ್ಮ ನೆನಪು ನಾವು ಬೆಂಗಳೂರುರಿನಲ್ಲಿ ಬೆಳೆದ್ರೂ ಕೂಡಾ ನೀಮ್ಮ ಬಾಲ್ಯದಷ್ಟೇ ನಮ್ಮ ಬಾಲ್ಯವು ಕೂಡ
      ರೋಮಾಂಚಕವಾಗಿತ್ತು… ನೆನಪುಗಳ ಬುತ್ತಿ ಬಿಚ್ಚಿಟ್ಟಿರಿ.
      ತುಂಬ ಧನ್ಯವಾದಗಳು… 64 ವಿದ್ಯೆ ಪ್ರಕಟಿಸಿರಿವುದು ತುಂಬ ಸೂಕ್ತ.

    4. ಚಿಂತಕ, ಬೊಮ್ಮಗಟ್ಟ ಅವರು, ತಮ್ಮ ಬಾಲ್ಯದ ನೆನೆಪುಗಳ ಕಣ್ಣಿಗೆ ಕಟ್ಟಿದಂತೆ ವಿವರಿಸಿದ ತೀರು ನನ್ನ ಬಾಲ್ಯದ ನೆನಪು ಹಿಂಬಾಲಿಸಿದೆ. ಮಂಜುನಾಥ ಅವರೇ ನಿಮ್ಮ ಬರಹಗಳೆಲ್ಲವೂ ಸೇರಿ ಮಾಲ್ಗುಡಿ ಡೇಸ್ ತರಹ ಮಾಡಬೇಕಾಗಿದೆ

    5. Amazing and gifted writer Mr.Manjunath Bommagatta you have got phonographic memories which will take us to our childhood days. Though I have been born and brought up in Bangalore I have seen snake charmers and other magicians and we were afraid of their looks as they were branded as child lifters. Superb narration can be compiled and produced as serial in one of OTT platform. Good Mr.Manjunath Bommagatta keep it up.

    6. ಟೈಂ ತುಂಬಾ ಇದೆ ಅನ್ನಿಸಿದಾಗ,ಟೈಂ ಪಾಸ್ ಗೆ ಅಂತ ನೆನಪುಗಳ ಸಂತೆಯಲ್ಲಿ,ಬಾಲ್ಯದ ಬುತ್ತಿಯನ್ನು ಬಿಚ್ಚಿ ,ಸ್ವಾದವನ್ನು ಅಕ್ಷರಗಳ ರೂಪದಲ್ಲಿ ನನ್ನ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಹವ್ಯಾಸ ಮಾಡಿಕೊಂಡಿದ್ದೆ. ಸ್ನೇಹಿತ ಶ್ರೀವತ್ಸ ,ವೀರೇಶ ಪ್ರಸಾದ ನಿನ್ನ ಬರವಣಿಗೆ ಚೆನ್ನಾಗಿದೆ,ಬರಿ ಅಂತ ಪ್ರೋತ್ಸಾಹಿಸಿದರು. ಕರೊನಾದಿಂದಾಗಿ ಟೈಂ ಸಹಾ ಸಹಾಯಕ್ಕೆ ನಿಂತಿತು. ಏನೇನೋ ಬರೆದೆ. ಸಹೃದಯಿಗಳಾದ ನೀವೆಲ್ಲರೂ ಬೆನ್ನು ತಟ್ಟಿದಿರಿ.
      ಬರಹಗಾರ,ಚಿಂತಕ,ವಿಶ್ಲೇಷಕ ಅಂತ ಕನ್ನಡಪ್ರೆಸ್.ಕಾಮ್ ನನ್ನನ್ನು ಹೆಸರಿಸಿತು. ನಿಮ್ಮ ಅನಿಸಿಕೆಗಳನ್ನು, ಪ್ರೋತ್ಸಾಹವನ್ನು ವಿನಮ್ರನಾಗಿ ಸ್ವೀಕರಿಸಿ, ವಂದನೆಗಳು ತಿಳಿಸುತ್ತಿದ್ದೇನೆ. ನನ್ನಂತಹ ಹಲವಾರು ಅಕ್ಷರಿಕರಿಗೆ ಕನ್ನಡಪ್ರೆಸ್.ಕಾಮ್ ವೇದಿಕೆಯಾಗಿ, ಸಾರಸ್ವತ ಲೋಕಕ್ಕೆ ಕೈಮರವಾಗಿ ನಿಲ್ಲಲಿ.

    7. ನನ್ನ ಜೀವನದ ಅತೀ ಅಲ್ಪ ಕಾಲ ನಿನ್ನ ಜೊತೆ ಹತ್ತಿರದ ಒಡನಾಟ ಇದ್ದಾಗಲೂ ಸಹ ನಿನ್ನೊಳಗೆ ಇಂತಹ ಒಬ್ಬ ಅದ್ಭುತ ವ್ಯಕ್ತಿ ಇರುವ ಕುರಿತು ನನ್ನ ಅರಿವಿಗೆ ಬಾರದೇ ಹೋಗಿದ್ದು ಮನಸಿಗೆ ಬೇಸರವಾದರೂ, ಇತ್ತೀಚೆಗೆ ಪ್ರಕಟವಾಗುತ್ತಿರುವ ನಿನ್ನ ಬರಹಗಳನ್ನು ಓದುತ್ತಿರುವಾಗ ಕಳೆದು ಹೋಗಿರುವ ದಿನಗಳನ್ನು ಮತ್ತೆ ಪಡೆದುಕೊಂಡಂತಾಗುತ್ತಿದೆ.
      ಇಂತಹ ಒಂದು ವೇದಿಕೆಯನ್ನು ಕಲ್ಪಿಸಿದ ಗೆಳೆಯ ವತ್ಸನಿಗೆ ಅಭಿನಂದಿಸುತ್ತಾ, ನಿನ್ನಿಂದ ಇನ್ನು ಹೆಚ್ಚಿನ ಪ್ರಬುದ್ಧ, ಪ್ರಚಲಿತ ಲೇಖನಗಳು ಬರಲಿ ಎಂದು ಆಶಿಸುತ್ತೇನೆ. 💐💐💐

    8. ಎಲ್ಲಾ ಬಲ್ಲವರಿಲ್ಲ, ಬಲ್ಲವರು ಬಹಳವಿಲ್ಲ. ಅಂತೆಯೇ 64 ವಿದ್ಯೆಗಳನ್ನು ಕಲಿತವರಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಪರಮ ಗುರುಗಳಾದ ಶ್ರೀ ವಿಜಯೇಂದ್ರ ಸ್ವಾಮಿಗಳವರು ಪ್ರಮುಖರು. ಅವರ ಜೇವನ ಚರಿತ್ರೆ ಯಲ್ಲಿ ಈ bagge ಬಹುವಿಸ್ತಾರವಾಗಿ ವರ್ಣಿಸಿರುವರು. 3 ವರ್ಷದ ಬುದ್ದಿ 100 ವರ್ಷದವರೆಗೆ ಎನ್ನುವಂತೆ, ಶ್ರೀಯುತರು ಬಾಲ್ಯದ ಸವಿನೆನುಪುಗಳನ್ನು ಕಣ್ಣಿಗೆ ಕಟ್ಟುವಂತೆ ಬರಹದಲ್ಲಿ ಮೂಡಿಸಿರುವರು.

      ಈ ಲೇಖನ ಓದುತ್ತಿರುವಂತೆ ನನ್ನ ಬಾಲ್ಯದ ದಿನಗಳು ಕಣ್ಣ ಮುಂದೆ ಹಾದು ಮಿಂಚಿ -ಮಾಯವಾಯಿತು. ಆಗಿನ ದಿನಗಳಲ್ಲಿ ನನಗೂ ಇಂದ್ರಜಾಲ -ಮಹೇಂದ್ರಜಾಲದ ಬಗ್ಗೆಬಹು ಕೊತುಹಲ ಇತ್ತು. ಅಂಗಡಿಯಲ್ಲಿ ಸಿಗುವ ಆ ಪುಸ್ತಗಳನ್ನು ಕೊಂಡು ಓದುತ್ತಿದ್ದೆ. ಹಾವಾಡಿಗ ಪುಂಗಿ ಊದುವಾಗ ಹಗ್ಗ ಮೇಲೆ ಹೋಗುವುದ ಕಂಡು ಪುಳುಕಿತ ಗೊಳ್ಳುತ್ತಿದ್ದೆ. ಈ ವಿಚಾರವಾಗಿ ಆ ಪುಸ್ತಕದಲ್ಲಿ ಹುಡುಗರು ಈ ತಂತ್ರ ಹೇಗೆ ಮಾಡಬೇಕು ಎಂದು ಕೊಟ್ಟಿದ್ದರು. ಅದರಂತೆ ಒಂದು ಹಗ್ಗಕ್ಕೆ ಒಂದು ಕಪ್ಪು ಧಾರವನ್ನು ಕಟ್ಟಿ ಸ್ಟೇಜ್ ನ ಹಿಂಬದಿಯಲ್ಲಿ ಅದನ್ನು ಒಬ್ಬ ಹಿಡಿದಿಟ್ಟುಕೊಳ್ಳಬೇಕು. ಸ್ಟೇಜ್ ನ ಮುಂಭಾಗದಲ್ಲಿ ಒಬ್ಬ ಪುಂಗಿ ಊದುವಂತೆ ನಟಿಸಬೇಕು ಹಿಂಬದಿಯಲ್ಲಿ ಇದ್ದವನು ಧಾರವನ್ನು ಎಳೆದಾಗ ಹಗ್ಗ ಮೇಲಕ್ಕೆ ಹೋಗುತ್ತಿತ್ತು. ಅಂತೆಯೇ ಒಂದು ಬಾಳೆಹಣ್ಣಿನ ಒಳಗೆ ಒಂದು ಬ್ಲೇಡ್ ಇಡಬೇಕು. ಇದು ಹೊರಗಿನವರಿಗೆ ಕಾಣುವುದಿಲ್ಲ. ಆಗ ಪ್ರೇಕ್ಷರಿಂದ ಧಾರ ಪಡೆದು ಬಾಳೆಹಣ್ಣಿನ ಎರಡು ತುದಿಯಲ್ಲಿ ಧಾರ ಪೋಣಿಸಿ ಎರಡು ಬದಿಯಿಂದ ಎಳೆದಾಗ ಬಾಳೆಹಣ್ಣು ತುಂಡಾಗುತ್ತಿರಲಿಲ್ಲ. ಹೀಗೆ ಅನೇಕ ನೆನುಪುಗಳನ್ನು ಮೆಲುಕುಹಾಕುವಂತೆ ಮಾಡಿದ ಲೇಖನ ಖುಷಿ ಕೊಟ್ಟಿತು. ಇಂತಹ ಸುಂದರಲೇಖನಗಳು ಮುಂದೆಯೂ ಅವರ ಲೇಖನಿಯಿಂದ ಮೂಡಿಬರಲಿ ಎಂದು ಅಶಿಶುತ್ತಾ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ 🙏

    9. ನೆಲದ ಸೊಗಡನ್ನು ಮಿಶ್ರಣ ಮಾಡಿ ಸಮ್ಮೋಹಕ ವಿದ್ಯೆಯ ವೈಚಾರಿಕ ಅಭಿಪ್ರಾಯಗಳು ಕಣ್ಣಿಗೆ ಕಟ್ಟುತ್ತವೆ. ಬಾಲ್ಯದ ಅನುಭವಗಳ ವರ್ಣನೆ ನಮಗೂ ಆಗಿದೆ ಎಂಬ ಭಾವನೆ ಮೂಡಿಸುವುದು. ಇದೇ ಸಾಹಿತ್ಯ. ಆಸಕ್ತಿ ಮೂಡಿಸುವ ಅದ್ಭುತ ಲೇಖನ.

    10. ನಿನ್ನ ಬಾಲ್ಯದ ಕುತೂಹಲಗಳಿಗಿಂತ ನಿನ್ನ ಕುತೂಹಲ ಸ್ರುಷ್ಟಿಸುವ ಬರಹದ ಶೈಲಿಯೇ ಇಲ್ಲಿ ಮೇಲುಗೈ. ಅಪ್ಪನ ಹೆಗಲ ಮೇಲೆ ಕುಳಿತು ಬರೀ ಜಾತ್ರೆ ನೋಡಿಲ್ಲ ಇಡೀ ಪ್ರಪಂಚವೇ ನೋಡಿದ್ದೀಯ. ಅಧ್ಭುತ ಬರಹ . ಮುಂದುವರೀಲಿ.

    LEAVE A REPLY

    Please enter your comment!
    Please enter your name here

    Latest article

    error: Content is protected !!