21.2 C
Karnataka
Sunday, September 22, 2024

    ಉಳಿಸಿದ ಹಣ-ಗಳಿಸಿದ ಹಣ; ಹೂಡುವ ಮುನ್ನ ಬುದ್ಧಿ ನಿಮ್ಮ ಕೈಯಲ್ಲಿರಲಿ

    Must read

    ಉಳಿತಾಯವೇ ಆಪದ್ಧನ, ಇಂದು ಉಳಿಸಿದ ಮೊಬಲಗು ನಾಳಿನ ಜೀವನಕ್ಕೆ ಮೆರಗು, ಮುಂತಾದ ಉಳಿತಾಯದ ನುಡಿಗಳು ಈಗ ಮರೆಯಾಗಿ ಕೇವಲ ಕೆಲವರೇ ಅಳವಡಿಸಿಕೊಳ್ಳುವ ಹಂತದಲ್ಲಿದ್ದೇವೆ. ಈಗಿನ ಯುವ ಪೀಳಿಗೆಯ ಹೆಚ್ಚಿನವರಿಗೆ ಉಳಿತಾಯ ಎಂಬ ಪದದ ಅರ್ಥವೇ ತಿಳಿದಿರಲಾರದು. ಆದರೆ ಕೋವಿಡ್‌ 19 ನ ಈ ಸಂದರ್ಭದಲ್ಲಿ, ಎಲ್ಲಾ ವಲಯದ ಚಟುವಟಿಕೆಗಳು ಸ್ಥಬ್ಧವಾಗಿರುವಾಗ ಸ್ವಲ್ಪಮಟ್ಟಿನ ನೆಮ್ಮದಿ, ಸಮಾಧಾನ ಕಂಡಿರುವವರೆಂದರೆ ಜೀವನದಲ್ಲಿ ಉಳಿತಾಯ ಹವ್ಯಾಸ ಅಳವಡಿಸಿಕೊಂಡಿರುವವರು ಮಾತ್ರ. ಈಗಿನ ವೆಚ್ಚಬಾಕತನದಿಂದ ಹೊರಬಂದು ಉಳಿತಾಯ ಆಧಾರಿತ ಜೀವನಕ್ಕೆ ಪರಿವರ್ತಿತರಾದಲ್ಲಿ ತಕ್ಕಮಟ್ಟಿನ ಸಮಾಧಾನಕ್ಕೆ ಅವಕಾಶವಾಗುದು.

    ಕೋವಿಡ್‌ 19 ಕಾರಣದಿಂದ ವ್ಯವಹಾರಗಳು ಹೆಚ್ಚಿನ ಮಟ್ಟದಲ್ಲಿ ಸ್ಥಗಿತವಾಗಿವೆ, ಇಲ್ಲವೇ ಭಾರಿ ಪ್ರಮಾಣದ ಕುಸಿತಕ್ಕೊಳಗಾಗಿವೆ. ವೃತ್ತಿಗಳಲ್ಲೂ ಬದಲಾವಣೆಗಳಾಗಿವೆ. ನಿವೃತ್ತರು ತಮ್ಮ ಪಿಂಚಣಿಯೊಂದಿಗೆ, ತಮ್ಮ ಖರ್ಚು ವೆಚ್ಚಗಳನ್ನು ತೂಗಿಸಲು ಕೈಲಿರುವ ಹಣವನ್ನು ಹೂಡಿಕೆ ಮಾಡಲು ವಿವಿಧ ರೀತಿಯ ಯೋಜನೆಗಳ ಆನ್ವೇ಼ಷಣೆಯಲ್ಲಿ ತೊಡಗಿರುತ್ತಾರೆ.

    ಇದಕ್ಕೆ ಕಾರಣ ಮುಖ್ಯವಾಗಿ ಬ್ಯಾಂಕ್‌ ಬಡ್ಡಿದರದಲ್ಲಾಗುತ್ತಿರುವ ಭಾರಿ ಇಳಿಕೆ. ಈಗಿನ ವ್ಯವಸ್ಥೆಯಲ್ಲಿ ಸುರಕ್ಷಿತ, ಸುಭದ್ರ ಎಂಬುದು ಕಾಣದಾಗಿದೆ. ಎಲ್ಲವೂ ಅನಿಶ್ಚಿತ ಎಂಬಂತಾಗಿದೆ. ಕೆಲವರು ಸ್ವಲ್ಪಮಟ್ಟಿನ ಹೆಚ್ಚು ಆದಾಯ ಬರಬಹುದೆಂಬ ನಿರೀಕ್ಷೆಯಿಂದ ಕೆಲವು ಸಹಕಾರಿ ಬ್ಯಾಂಕ್‌, ಸಂಘಗಳಲ್ಲಿ ಹೂಡಿಕೆಮಾಡಿರಲೂಬಹುದು. ಇಂತಹ ಹೂಡಿಕೆಯು ಕೆಲವು ಸಂದರ್ಭದಲ್ಲಿ ಹೆಚ್ಚಿನ ಅಪಾಯ ತಂದೊಡ್ಡಿರುವ ಉದಾಹರಣೆಗಳುಂಟು. ವ್ಯವಹಾರ, ವೃತ್ತಿಗಳು ನಿರಾಶಾದಾಯಕವಾಗಿರುವ ಈ ಸಂದರ್ಭದಲ್ಲಿ ನಿಯಂತ್ರಿತವಾಗಿ, ಬುದ್ಧಿ- ಆಲೋಚನೆಗಳ ಮಿಶ್ರಣದೊಂದಿಗೆ ಚಟುವಟಿಕೆ ನಡೆಸಿ ಆದಾಯಗಳಿಸಲು ಷೇರುಪೇಟೆಯೂ ಒಂದು ಸಾಧನ.

    ಸಾಮಾನ್ಯವಾಗಿ ಷೇರುಪೇಟೆ ಎಂದರೆ ಅದು ಜೂಜಾಟ ಎಂಬ ತಪ್ಪು ಕಲ್ಪನೆ ಹೆಚ್ಚಿನವರಲ್ಲಿದೆ. ಷೇರುಪೇಟೆಯು ಶುದ್ಧ ನೀರಿನಂತೆ. ನಾವು ಅದರೊಂದಿಗೆ ಮಿಶ್ರಮಾಡುವ ಶೈಲಿಯನ್ನವಲಂಭಿಸಿದ ಫಲಿತಾಂಶ ಲಭಿಸುತ್ತದೆ. ಷೇರುಪೇಟೆಯಲ್ಲಿ ದೀರ್ಘಕಾಲೀನ, ಅಲ್ಪಕಾಲೀನ ಹೂಡಿಕೆ, ಡೇ ಟ್ರೇಡಿಂಗ್‌, ಡೆರಿವೆಟೀವ್‌ ಟ್ರೇಡಿಂಗ್‌, ಮಾರ್ಜಿನ್‌ ಟ್ರೇಡಿಂಗ್‌, ಫಂಡಮೆಂಟಲ್ಸ್‌ , ಟೆಕ್ನಿಕಲ್ಸ್‌ ಆಧಾರಿತ ಚಟುವಟಿಕೆ ಮುಂತಾದವುಗಳಿವೆ.

    ಸಾಮಾನ್ಯವಾಗಿ ಅಂತರ್ಗತವಾಗಿ ಅಡಕವಾಗಿರುವ ಅಂಶಗಳನ್ನಾಧರಿಸಿ ಹೂಡಿಕೆಮಾಡಿದಲ್ಲಿ ಅದು ಫಂಡಮೆಂಟಲ್ಸ್‌ ವಿಧ, ಧೀರ್ಘಕಾಲೀನ ಹೂಡಿಕೆಗೂ ಸೇರಿ ಅನುಕೂಲಕರವಾಗಿರುತ್ತದೆ. ಟೆಕ್ನಿಕಲ್ಸ್‌ ಆಧಾರಿತವೆಂದರೆ ಅದು ವ್ಯವಹಾರಿಕತೆಯಿಂದ ಕೂಡಿರುತ್ತದೆ. ಪೇಟೆಯಲ್ಲಿ ಷೇರಿನ ದರಗಳು ಕುಸಿತದಲ್ಲಿದ್ದಾಗ, ಫಂಡಮೆಂಟಲ್ಸ್‌ ಅಂಶಗಳಾಧಾರಿತ ಧೀರ್ಘಕಾಲೀನ ಹೂಡಿಕೆಗೆ ಯೋಗ್ಯವಾದ ಸಮಯವಾಗಿರುತ್ತದೆ.

    ಕೆಲವೊಮ್ಮೆ ಕಂಪನಿಗಳು ಘೋಷಿಸುವ ಕಾರ್ಪೊರೇಟ್‌ ಫಲಗಳಾದ ಲಾಭಾಂಶ (Dividend), ಬೋನಸ್‌, ಹಕ್ಕಿನ ಷೇರು ಮುಂತಾದವುಗಳ ಸಂದರ್ಭದಲ್ಲಿ ಅವು ಪ್ರದರ್ಶಿಸುವ ಏರಿಳಿತಗಳ ಅವಕಾಶವನ್ನು ಉಪಯೋಗಿಸಿಕೊಂಡು ಲಾಭ ಮಾಡಿಕೊಳ್ಳಬಹುದು. ಇದು ಅಲ್ಪಕಾಲೀನವೂ ಆಗಿರಬಹುದು.

    ಡೇ ಟ್ರೇಡಿಂಗ್‌ ಅಂದರೆ ಒಂದು ರೀತಿಯ ಜೂಜಾಟವೇ ಸರಿ. ಕಾರಣ ಖರೀದಿಸಿದ ಷೇರುಗಳ ದರ ಹೆಚ್ಚಾಗಲಿ ಅಥವಾ ಕಡಿಮೆಯಾಗಲಿ ಅಂದೇ ಚುಕ್ತಾ ಮಾಡಿ ಲಾಭ ನಷ್ಟಗಳ ಲೆಕ್ಕ ಹಾಕುವ ವಿಧವಿದಾಗಿರುತ್ತದೆ. ಇನ್ನು ಡೆರಿವೆಟಿವ್‌, ಮಾರ್ಜಿನ್‌ ಟ್ರೇಡಿಂಗ್‌ ಗಳು ಸ್ವಲ್ಪ ಹೆಚ್ಚು ಕಡಿಮೆ ಇದೇ ಗುಂಪಿಗೆ ಸೇರಿದವಾಗಿವೆ.

    ಷೇರುಪೇಟೆಯಲ್ಲಿ ಸುರಕ್ಷಿತವಾದ ರೀತಿಯಲ್ಲಿ (ಅಂದರೆ ಎಲ್ಲಾ ವಲಯದಲ್ಲಿದ್ದಂತೆ ಇಲ್ಲಿಯೂ ಅಪಾಯವಿರುತ್ತದೆ) ಸ್ವಂತ ಆಲೋಚನಯಿಂದ ವ್ಯವಹಾರ ಮಾಡಬೇಕು. ಷೇರುಪೇಟೆಯ ಚಟುವಟಿಕೆಗೆ ಮುನ್ನ ಈ ಕೆಳಗಿನ ಅಂಶಗಳನ್ನು ಗಮನದಲ್ಲಿರಿಸುವುದು ಅಗತ್ಯ.

    • ಭವಿಷ್ಯದ ಘಟನೆಗಳನ್ನು ವರ್ತಮಾನಕ್ಕೆ ಭಟ್ಟಿ ಇಳಿಸಿ ಅದಕ್ಕೆ ಮೌಲೀಕರಣ ಮಾಡುವುದೇ ಷೇರುಪೇಟೆಯ ವೈಶಿಷ್ಟ.
      ಉದಾಹರಣೆಗೆ: ಇತ್ತೀಚೆಗೆ ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿಯು ತನ್ನ ಅಂಗ ಸಂಸ್ಥೆ ಜಿಯೋ ಪ್ಲಾಟ್‌ ಫಾರಂ ನ ಸ್ಟೇಕ್‌ ನ್ನು ಹಲವಾರು ವಿದೇಶಿ ಹೂಡಿಕೆ ಸಂಸ್ಥೆಗಳಿಗೆ ಮಾರಾಟ ಮಾಡಿದ ಒಪ್ಪಂದ ಮಾಡಿಕೊಂಡಿದೆ. ಈ ಸಂಸ್ಥೆಗಳಿಂದ ಇನ್ನೂ ಹಣ ಹರಿದುಬಂದಿರುವುದಿಲ್ಲ. ಆದರೂ ಈಗಾಗಲೇ ಈ ಕಾರ್ಯ ನೆರವೇರಿದೆ ಎಂಬಂತೆ ಷೇರಿನ ಬೆಲೆ ಗಗನಕ್ಕೇರಿದೆ.
    • ಕ್ಲಾರಿಯಂಟ್‌ ಕೆಮಿಕಲ್ಸ್‌ ಕಂಪನಿಯು ಪ್ರತಿ ಷೇರಿಗೆ ರೂ.140 ರಂತೆ ಡಿವಿಡೆಂಡ್‌ ಘೋಷಿಸಿದ ನಂತರ ಷೇರಿನ ಬೆಲೆ ರೂ.460 ರ ಸಮೀಪದಿಂದ ರೂ.608 ರ ವರೆಗೂ ಏರಿಕೆಯನ್ನು ಕೇವಲ ಎರಡೇ ದಿನಗಳಲ್ಲಿ ದಾಖಲಿಸಿತು. ಆದರೆ ಡಿವಿಡೆಂಡ್‌ ನಂತರ ಷೇರಿನ ಬೆಲೆ ರೂ.401 ರವರೆಗೂ ಇಳಿಕೆ ಕಂಡಿತು.
    • ಸ್ಮಾಲ್‌ ಕ್ಯಾಪ್‌ ಗಳಲ್ಲಿನ ಹೂಡಿಕೆ ಹೂವಿನಂತೆ ಅಲ್ಪಾಯು, ಲಾರ್ಜ್‌ ಕ್ಯಾಪ್‌ ಕಂಪನಿಗಳಲ್ಲಿ ಹೂಡಿಕೆಯು ಡ್ರೈ ಫ್ರೂಟ್‌ ರೀತಿ ದೀರ್ಘಾಯುವಾಗಿರುತ್ತವೆ. ಸ್ಮಾಲ್‌ ಕ್ಯಾಪ್‌ ಷೇರುಗಳು ಅತಿ ಸೂಕ್ಷ್ಮತೆಯಿಂದ ಕೂಡಿರುತ್ತವೆ. ಹಾಗಾಗಿ ಅಪಾಯದ ಮಟ್ಟವೂ ಹೆಚ್ಚಿರುತ್ತದೆ.
    • ಉದಾಹರಣೆಗೆ ಓಮ್ಯಾಕ್ಸ್‌ ಲಿಮಿಟೆಡ್‌, ಷೇರಿನ ಬೆಲೆ ರೂ.222 ರ ವಾರ್ಷಿಕ ಗರಿಷ್ಠ ದಾಖಲೆ ನಿರ್ಮಿಸಿತು. ಆ ಸಂದರ್ಭದಲ್ಲಿ ಕಂಪನಿಯು ತನ್ನ ಬೋರ್ಡ್‌ ಮೀಟಿಂಗ್‌ ನ್ನು 29ನೇ ಜುಲೈಗೆ ಮುಂದೂಡಿದೆ ಎಂಬ ಸುದ್ಧಿಯು ಷೇರಿನ ಬೆಲೆಯನ್ನು ಗರಿಷ್ಠದ ಹಂತದಿಂದ ಜಾರುವಂತೆ ಮಾಡಿ 17 ರಂದು ರೂ.61.85 ರವರೆಗೂ ಕುಸಿದು ವಾರ್ಷಿಕ ಕನಿಷ್ಠ ದಾಖಲಿಸಿ, ದಿನದ ಮಧ್ಯೆಯೇ ಪುಟಿದೆದ್ದು ರೂ.68.35 ರ ದಿನದ ಗರಿಷ್ಠ ತಲುಪಿತು.
    • ಅಲೋಕ್‌ ಇಂಡಸ್ಟ್ರೀಸ್‌ ಷೇರಿನ ಬೆಲೆಯು ಈ ವರ್ಷದ ಜನವರಿಯಲ್ಲಿ ರೂ.3 ರಲ್ಲಿದ್ದು ನಂತರದ ಬೆಳವಣಿಗೆಗಳ ಕಾರಣ ಜುಲೈನಲ್ಲಿ ರೂ.61 ರ ಗರಿಷ್ಠತಲುಪಿ ವಾರ್ಷಿಕ ದಾಖಲಿಸಿತು. ಅದರೆ ಅದಕ್ಕಿಂತ ಮುಖ್ಯವಾಗಿ ಈ ತಿಂಗಳ 10 ರಂದು ಈ ಕಂಪನಿ ಪ್ರದರ್ಶಿಸಿದ ರಭಸದ ಏರಿಳಿತಗಳು ಅಪಾಯದ ಮಟ್ಟವನ್ನು ತಿಳಿಸುತ್ತದೆ. ಅಂದು ದಿನದ ಆರಂಭಿಕ ಕ್ಷಣಗಳಲ್ಲಿ ರೂ.41.10 ರ ದಿನದ ಕನಿಷ್ಠ ಆವರಣಮಿತಿಯಲ್ಲಿತ್ತು. ಕೋಟಿಗಟ್ಟಲೆ ಷೇರುಗಳ ಮಾರಾಟದ ಒತ್ತಡವಿತ್ತು. ಆದರೆ ಸ್ವಲ್ಪ ಸಮಯದ ನಂತರ ಮಾರಾಟದಲ್ಲಿದ್ದ ಎಲ್ಲಾ ಷೇರುಗಳು ಕರಗಿ ಕ್ರಮೇಣ ಖರೀದಿಯ ಒತ್ತಡದಿಂದ ಏರಿಕೆ ಕಂಡು ರೂ.45 ರ ಸಮೀಪದ ಗರಿಷ್ಠ ಆವರಣಮಿತಿ ತಲುಪಿತು. ಅತ್ಯಲ್ಪ ಸಮಯದಲ್ಲಿ ಅದೆಲ್ಲಾ ಕರಗಿ ಮತ್ತೊಮ್ಮೆ ದಿನದ ಕನಿಷ್ಠಕ್ಕೆ ಕುಸಿಯಿತು. ಈ ಷೇರಿನ ದಿನದ ನಡೆಯು ಸಾಮಾನ್ಯ ಹೂಡಿಕೆದಾರರ ಕಲ್ಪನೆ ಮೀರಿದ್ದು.
    • ಆದ್ದರಿಂದ ಇಂತಹ ಕಂಪನಿಗಳಿಂದ ದೂರವಿದ್ದರೆ ಕ್ಷೇಮ.

    ಲಾರ್ಜ್‌ ಕ್ಯಾಪ್‌ ಕಂಪನಿಗಳಲ್ಲಿಅವಕಾಶಗಳು ಹೇಗೆ ಸೃಷ್ಠಿಯಾಗುತ್ತವೆ ಎಂಬುದಕ್ಕೆ ಈ ವಾರ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಪ್ರದರ್ಶಿಸಿದ ರೀತಿ ಗಮನಿಸಿದಲ್ಲಿ ಅರಿವಾಗುವುದು. ಗುರುವಾರದಂದು ಷೇರಿನ ಬೆಲೆ ರೂ.360 ರ ಸಮೀಪವಿದ್ದು ನಂತರದ ದಿನ ರೂ.447 ರವರೆಗೂ ಏರಿಕೆ ಕಂಡಿದೆ. ಇದಕ್ಕೆ ಕಾರಣವೇನೇ ಇರಲಿ ಇಂತಹ ಏರಿಕೆಯನ್ನು ನಗದೀಕರಿಸಿಕೊಳ್ಳುವುದು ಸೂಕ್ತ. ಇತ್ತೀಚಿನ ದಿನಗಳಲ್ಲಿ ಪ್ರಮುಖ ಕಂಪನಿಗಳಾದ ಬಯೋಕಾನ್, ಟೈಟಾನ್‌, ಎಂ ಅಂಡ್‌ ಎಂ, ಟಾಟಾ ಸ್ಟೀಲ್‌, ಹೆಚ್‌ ಸಿ ಎಲ್‌ ಟೆಕ್ನಾಲಜೀಸ್‌, ಭಾರತ್‌ ಫೋರ್ಜ್‌, ಆಕ್ಸಿಸ್‌ ಬ್ಯಾಂಕ್‌, ಗ್ಲೆನ್‌ ಮಾರ್ಕ್‌ ಫಾರ್ಮ, ಎಲ್‌ ಐ ಸಿ ಹೌಸಿಂಗ್ ನಂತಹ ಅನೇಕ ಕಂಪನಿಗಳು ಅವಕಾಶಗಳನ್ನು ಕಲ್ಪಿಸಿಕೊಟ್ಟಿವೆ.

    ಈಗಿನ ಕೋವಿಡ್19‌ ರ ಸಂದರ್ಭದಲ್ಲಿ ಷೇರುಪೇಟೆಯತ್ತ ಹರಿದುಬರುತ್ತಿರುವ ಹಣದ ಪ್ರಭಾವದ ಕಾರಣ ಷೇರಿನ ಬೆಲೆಗಳು ಸಾಧನೆಯಾಧಾರಿತದ ಹೊರಗಿನ ಕಾರಣಗಳಿಂದ ಏರಿಳಿತಗಳು ಪ್ರದರ್ಶಿಸುತ್ತಿರುವ ಕಾರಣ ದೊರೆತಂತಹ ಅವಕಾಶಗಳನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹುದಾಗಿದೆ.

    ಗಮನಿಸಿರಿ: ಷೇರುಗಳು ಡಿಮ್ಯಾಟ್‌ ರೂಪದಲ್ಲಿರುವುದರಿಂದ ಕೇವಲ ಒಂದು ಷೇರನ್ನು ಸಹ ಖರೀದಿಸಬಹುದು. ಆದರೆ ಮಾರಾಟ ಮಾಡುವಾಗ ಒಂದು ಷೇರಾಗಲಿ ಅಥವಾ ಹೆಚ್ಚಾಗಲಿ ಅದಕ್ಕೆ ತಕ್ಕಂತೆ ಚಾರ್ಜನ್ನು ತೆರಬೇಕಾಗುತ್ತದೆ. ಹೊಸದಾಗಿ ಪ್ರವೇಶಿಸುವವರು ಒಂದೇ ಸಲ ಹೆಚ್ಚಿನ ಸಂಖ್ಯೆಯ ಷೇರುಗಳನ್ನು ಖರೀದಿಸುವುದಕ್ಕಿಂತ ಪೇಟೆಯ ಬಗ್ಗೆ ಅರಿವು ಮೂಡಿಸಿಕೊಳ್ಳುವವರೆಗೂ ಮಿತವಾದ ಸಂಖ್ಯೆಯ ಷೇರುಗಳಲ್ಲಿ ವಹಿವಾಟಿನಿಂದ ಚಟುವಟಿಕೆ ನಡೆಸುವುದು ಉತ್ತಮ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!