26.3 C
Karnataka
Saturday, November 23, 2024

    ನಂಬಿಕೆಯೇ ದೈವ ಕಣೋ

    Must read

    ಮರದ ಕೊಂಬೆ ಮೇಲೆ ಕುಳಿತ ಪಕ್ಷಿ ಕೊಂಬೆ ಮುರಿದರೂ ಹೆದರುವುದಿಲ್ಲ. ಏಕೆಂದರೆ ಪಕ್ಷಿ ನಂಬಿರುವುದು ತನ್ನ ರೆಕ್ಕೆಯನ್ನು. ಹಾಗೆಯೇ ನಮ್ಮನ್ನು ನಾವು ನಂಬಬೇಕು, ಬೇರೆಯವರನ್ನಲ್ಲ.

    ಹಾಗೆಯೇ ದೈವ ಶಕ್ತಿಯ ಬಗ್ಗೆ ಒಂದು ಮಾತಿದೆ.
    ನಂಬಿ ಕೆಟ್ಟವರಿಲ್ಲವೊ ರಾಯರ ಪಾದ ನಂಬಿ ಕೆಟ್ಟವರಿಲ್ಲವೊ…
    ನಂಬಿದ ಜನರಿಗೆ ಬೆಂಬಲ ತಾನಾಗಿ
    ಹಂಬಲಿಸಿದ ಫಲ ತುಂಬಿ ಕೊಡುವರ.

    ಅಂದರೆ ಭಗವಂತನನ್ನು ನಂಬಿದವರಿಗೆ ಅವನು ಯಾವತ್ತೂ ಮೋಸ ಮಾಡುವುದಿಲ್ಲ ಎಂದು. ನಂಬಿದ ಭಕ್ತರಿಗೆ ಬೆಂಬಲಿಗನಾಗಿ ನಿಲ್ಲುತ್ತಾನವನು. ಬದುಕಿನಲ್ಲಿ ಅವನೇ ಪ್ರತ್ಯಕ್ಷನಾಗದಿದ್ದರೂ ಮತ್ತಾವುದೋ ರೀತಿಯಲ್ಲಿ ದರ್ಶನ ನೀಡುತ್ತಾನೆ. ದೇವರನ್ನು ನಂಬಿದರೆ ದೇವರು ಪ್ರತ್ಯಕ್ಷನಾಗುತ್ತಾನೋ ಇಲ್ಲವೋ ಗೊತ್ತಿಲ್ಲ. ಆದರೆ ಆ ನಂಬಿಕೆಯೇ ನಮ್ಮನ್ನು ಜೀವನಪೂರ್ತಿ ಕೈ ಹಿಡಿದು ಮುನ್ನಡೆಸುತ್ತದೆ ಎಂಬ ಅಚಲವಾದ ನಂಬಿಕೆ.

    ಕೇವಲ ದೇವರನ್ನಷ್ಟೇ ಅಲ್ಲ, ಬದುಕಿನ ಬಗ್ಗೆ, ಇತರ ವ್ಯಕ್ತಿಗಳ ಬಗ್ಗೆ, ನಾವು ಹೊಂದಿರುವ ಗುರಿಗಳ ಬಗ್ಗೆ ನಂಬಿಕೆ ಇರಲೇಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸುವುದಕ್ಕೆ ಸಾಧ್ಯ. ಸಾಗರದಷ್ಟು ಸಂಕಷ್ಟಗಳ ನಡುವೆ ನಮ್ಮನ್ನು ನೆಮ್ಮದಿಯಿಂದ ಬದುಕುವಂತೆ ಮಾಡುವುದು ನಂಬಿಕೆಯೊಂದೇ.

    ನಂಬಿಕೆ ಎನ್ನುವುದು ಕೇವಲ ಪ್ರಜ್ಞಾಶೂನ್ಯತೆಯನ್ನು ಮೂಡಿಸುವುದಿಲ್ಲ, ಅದು ಪವಾಡವನ್ನೇ ಸೃಷ್ಟಿಸಬಲ್ಲುದು ಎಂದೆಲ್ಲಾ ಹೇಳುತ್ತಾರೆ. ಅದು ಕೂಡಾ ಒಂದು ನಂಬಿಕೆ. ನಂಬಿಕೆ ಅಂದರೆ ವಿಶ್ವಾಸ. ಭರವಸೆ. ಅದು ಇದ್ದಾಗ ಮಾತ್ರ ಗುರಿ ತಲುಪುವುದಕ್ಕೆ ಸಾಧ್ಯ. ನಂಬಿಕೆ ಇರಿಸಿಕೊಂಡಾಗಲೇ ಮಾಡಬೇಕಾದ ಕೆಲಸಕ್ಕೆ ಶ್ರಮ ಹಾಕುತ್ತೇವೆ. ಪ್ರಯತ್ನ ಪಡುತ್ತೇವೆ. ಇಂದಲ್ಲ ನಾಳೆ ಸುಖ ಸಿಗುತ್ತದೆ ಎಂಬ ನಂಬಿಕೆಯನ್ನಿರಿಸಿಕೊಳ್ಳುತ್ತೇವೆ. ನಂಬಿಕೆ ಇಲ್ಲದೆ ಹೋದರೆ ಹಿಡಿದ ಕೆಲಸವನ್ನು ಪೂರ್ಣಗೊಳಿಸುವುದೇ ಇಲ್ಲ. ಆಗುತ್ತೋ ಇಲ್ಲವೋ ಎನ್ನುವ ಸಂಶಯಯವೇ ಮನೆ ಮಾಡಿದರೆ ಕೆಲಸ ಅಪೂರ್ಣವಾಗುತ್ತದೆ.

    ಮಾಡೋ ಕೆಲಸದಲ್ಲಾಗಲಿ ಅಥವಾ ಒಬ್ಬ ವ್ಯಕ್ತಿಯ ಬಗ್ಗೆಯೇ ಆಗಲಿ ನಮಗಿರುವ ನಂಬಿಕೆಯೇ ಪರಸ್ಪರ ಬಂಧವನ್ನು, ಬಾಂಧವ್ಯವನ್ನು ಬೆಳೆಸುತ್ತದೆ. ಸಂಬಂಧದಲ್ಲಿ ಅದಿಲ್ಲದೇ ಹೋದರೆ ಬಂಧ ಬಂಧನವಾಗುವುದು.. ಇಂದು ನಾಳೆಗಳ ಬಗೆಗಿನ ನಂಬಿಕೆಯೇ ನಮ್ಮನ್ನು ಜೀವನ ಪರ್ಯಂತ ಕೈಹಿಡಿದು ಮುನ್ನಡೆಸುವುದು. ಈ ನಂಬಿಕೆ ಅನ್ನುವುದು ಬರಿಯ ಭಾವನೆಯಷ್ಟೇ ಅಲ್ಲ, ಅದು ಬದುಕಿನ ಆಶಾವಾದವನ್ನು ಮೂಡಿಸುವ ಟಾನಿಕ್ ಇದ್ದಂತೆ.

    ಉದಾಹರಣೆಗೆ ಒಳ್ಳೆಯ ಶಿಕ್ಷಣ ಪಡೆದರೆ ಒಳ್ಳೆಯ ಉದ್ಯೋಗ, ಒಳ್ಳೆಯ ಸಂಬಳ, ದೊರೆಯುತ್ತದೆ ಎಂದು ದೊಡ್ಡವರು ಹೇಳುತ್ತಿರುತ್ತಾರೆ. ಇದನ್ನು ಕೇಳಿಸಿಕೊಂಡ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಲು ಶ್ರಮ ಪಡುತ್ತಾರೆ. ಹಣ ಸಿಗುತ್ತದೆ ಎಂಬ ನಂಬಿಕೆಯಿಂದಾಗಿ ಕಷ್ಟಪಟ್ಟು ಓದಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಒಳ್ಳೆಯ ಗೌರವ ಪಡೆದುಕೊಳ್ಳಲು ಪ್ರಯತ್ನ ಮುಂದುವರೆಯುತ್ತಲೇ ಇರುತ್ತದೆ. ಯಾಕೆಂದರೆ ನಾಳೆ ಸಿಕ್ಕೇ ಸಿಗುತ್ತದೆ ಎನ್ನುವ ನಂಬಿಕೆ ಅವರನ್ನು ಹೆಚ್ಚು ಹೆಚ್ಚು ಕಾರ್ಯಪ್ರವೃತ್ತರನ್ನಾಗಿ ಮಾಡುತ್ತದೆ.

    ಹಾಗೆಯೇ ಕಾಯಿಲೆ ಬಂದಾಗ ವೈದ್ಯರ ಬಳಿ ಹೋಗಿ ಅವರು ಬರೆದುಕೊಟ್ಟ ಪ್ರಿಸ್ಕ್ರಿಪ್ಷನ್‍ನ ಮೇಲೆ ನಂಬಿಕೆ ಇರಿಸಿ ಅದನ್ನು ತೋರಿಸಿ ಔಷಧ ತೆಗೆದುಕೊಂಡು ಹೋಗಿ ಸೇವಿಸುತ್ತೇವೆ. ಅದೇ ನಂಬಿಕೆಯಲ್ಲಿ ಕಾಯಿಲೆ ವಾಸಿಯಾಗಿರುತ್ತದೆ.ಹೀಗೆ ಮನುಷ್ಯಕುಲದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದಾದರೆ ಅದು ನಂಬಿಕೆಯಿಂದಲೇ.

    ಅನಿಶ್ಚಿತತೆಗೆ ಭರವಸೆ

    ನಮ್ಮ ಬದುಕಿನ ಅನಿಶ್ಚಿತತೆಗೆ ಯಾರು ಭರವಸೆಯನ್ನು ನೀಡುವುದಕ್ಕೆ ಸಾಧ್ಯ? ನಾಳೆ ಇರುತ್ತದೋ ಇಲ್ಲವೋ ಗೊತ್ತಿಲ್ಲ, ರಾತ್ರಿ ಮಲಗಿದರೆ ಬೆಳಗ್ಗೆ ಏಳುತ್ತೇವೆಯೋ ಅನ್ನುವುದೂ ಗೊತ್ತಿಲ್ಲ, ಆದರೂ ನಾಳೆಯ ಬಗ್ಗೆ ಚಿಂತಿತರಾಗಿ ನಾಳೆಗೆ ಬೇಕಾದ್ದನ್ನೂ ಇವತ್ತೇ ಮಾಡಿ, ಭವಿಷ್ಯದ ಬಗ್ಗೆ ನಂಬಿಕೆ ಇರಿಸಿಕೊಂಡಿರುತ್ತೇವೆ. ಆ ವರ್ತನೆಯೇ ನಮ್ಮನ್ನು ನಾಳೆಗಳ ಪರಿಸ್ಥಿತಿಗಳನ್ನು ಎದುರಿಸುವುದಕ್ಕೆ ಸಿದ್ಧರಾಗುವಂತೆ ಮಾಡುತ್ತದೆ. ಅದು ನಮ್ಮಲ್ಲಿರುವ ನಂಬಿಕೆಗಳಿಂದ ಮಾತ್ರ ಸಾಧ್ಯ.

    ವ್ಯಾಯಾಮ ದೇಹವನ್ನು ಸುಸ್ಥಿತಿಯಲ್ಲಿಡುವಂತೆ ನಂಬಿಕೆ ಕೂಡಾ ನಮ್ಮನ್ನು ಮಾನಸಿಕವಾಗಿ ಸದೃಢರಾಗುವಂತೆ ಮಾಡುತ್ತದೆ. ನಂಬಿಕೆಯಿಂದ ಇಚ್ಛಾಶಕ್ತಿಯೂ ವೃದ್ಧಿಸುತ್ತದೆ. ಅದರಿಂದಲೇ ಮನಸ್ಸಿಗೆ ಶಾಂತಿ, ಸಂತೋಷ, ಸುಖ ಹಾಗೂ ಜೀವನದ ಉದ್ದೇಶವನ್ನು ಕಂಡುಕೊಳ್ಳುತ್ತೇವೆ. ದೇವರ ಮೇಲಿನ ನಂಬಿಕೆಗೆ ಜೀವವನ್ನು ರಕ್ಷಿಸುವ ಶಕ್ತಿ ಇರುತ್ತದೆ. ಅದು ಕೇವಲ ಭಾವನೆಯಷ್ಟೇ ಅಲ್ಲ, ಅದೊಂದು ಸೂಪರ್ ಪವರ್. ನಂಬಿಕೆಯ ಶಕ್ತಿಯೇ ಅಂಥದ್ದು. ಅದರಿಂದಲೇ ಜೀವನ ಬದಲಾಗುವುದನ್ನೂ ಗಮನಿಸಿರಬಹುದು.

    ನಂಬಿಕೆಯೇ ದೈವ

    ದೇವರಲ್ಲಿ ನಂಬಿಕೆಯನ್ನಿಡುವುದರಿಂದ ಆಗುವ ಲಾಭಗಳು ಅನೇಕ. ಆಚಾರಗಳಲ್ಲಿ, ವಿಚಾರಗಳಲ್ಲಿ, ಪದ್ಧತಿಗಳಲ್ಲಿ, ಆಚರಣೆಯಲ್ಲಿನ ನಂಬಿಕೆಗಳು ವ್ಯಕ್ತಿಯ ಬದುಕಿಗೆ ದಾರಿದೀಪವಿದ್ದಂತೆ. ದೇವರ ಮೇಲೆ ಭಕ್ತಿಯಿಂದ ಪೂಜೆ ಸಲ್ಲಿಸಿ, ಸಂಕಷ್ಟಗಳನ್ನು ಹೇಳಿಕೊಂಡು, ಅವನೇ ನಮ್ಮನ್ನೆಲ್ಲ ಕಾಪಾಡುತ್ತಾನೆ ಎನ್ನುವ ನಂಬಿಕೆ ಆ ಕ್ಷಣಕ್ಕೆ ಶಕ್ತಿ ನೀಡುತ್ತದೆ. ಏನೇ ಬರಲಿ ದೇವರಿದ್ದಾನೆ ಬಿಡು ಎಂಬ ನಂಬಿಕೆ ಇಟ್ಟಿರು ವ ವ ಭವಿಷ್ಯದ ಬಗ್ಗೆ ಚಿಂತಿತನಾಗುವುದಿಲ್ಲ, ಒತ್ತಡವನ್ನು ಕಳೆದುಕೊಳ್ಳುವುದಿಲ್ಲ. ನಂಬಿಕೆಯನ್ನೇ ಬಂಡವಾಳವನ್ನಾಗಿಸಿಕೊಂಡರೆ ಚಿಂತೆಗಳೇ ಇಲ್ಲವಾಗುತ್ತದೆ. ಅನಾರೋಗ್ಯಪೀಡಿತರಾಗಿದ್ದರೂ ನಾನು ಬದುಕುತ್ತೇನೆ ಎಂಬ ಸಕಾರಾತ್ಮಕ ನಂಬಿಕೆ ಬೆಳೆಸಿಕೊಂಡರೆ, ಆ ನಂಬಿಕೆಯಿಂದಲೇ ವ್ಯಕ್ತಿ ಕಾಯಿಲೆ ಮುಕ್ತನಾಗುತ್ತಾನೆ. ಹೀಗೆ ನಂಬಿ ಕೆಟ್ಟವರು ಯಾರೂ ಇಲ್ಲ. ನಂಬಿಕೆ ಬೆಳೆಸಿಕೊಳ್ಳುವುದರಿಂದ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂಬುದು ಇತ್ತೀಚಿನ ಸಂಶೋಧನೆಗಳಿಂದಲೂ ತಿಳಿದುಬಂದಿದೆ.

    Photo by Alex Radelich on Unsplash

    ಶ್ರೀದೇವಿ ಅಂಬೆಕಲ್ಲು
    ಶ್ರೀದೇವಿ ಅಂಬೆಕಲ್ಲು
    ಶ್ರೀದೇವಿ ಅಂಬೆಕಲ್ಲು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ. ಪದವಿ ಪಡೆದಿದ್ದು ಉಜಿರೆಯ ಶ್ರೀ ಧರ್ಮಸ್ಥಳ ಮಂಜನಾಥೇಶ್ವರ ಕಾಲೇಜಿನಲ್ಲಿ. ಪತ್ರಿಕೋದ್ಯಮ ಪದವಿ ಮಂಗಳೂರು ವಿವಿ. ಆಸಕ್ತಿದಾಯಕ ಓದು ಇವರ ಬರವಣಿಗೆಯ ವಿಶೇಷ.
    spot_img

    More articles

    14 COMMENTS

    1. Hope is eternal. Human race for hundreds of years has been living on better conditions and facing any situation through new thoughts and hope. Ms.Sridevi Ambegallu has brought out the concept of hope very well . It is rightly mentioned we go to sleep after good day in the hope of better tomorrow. Good article by Ms.Sridevi Ambegallu.

    2. ನಮ್ಮನ್ನುನಾವು ನಂಬಿದರೆ ನಾವು ಮಾನಸಿಕವಾಗಿ ಅತ್ಯಂತ ಸಮರ್ಥರಾಗುತ್ತೇವೆ. ಭವಿಷ್ಯದ ಬಗ್ಗೆ ಹಲವರು ಚಿಂತಿತರಾಗಿ ನಂಬಿಕೆ ಕಳೆದುಕೊಳ್ಳುತ್ತಿರುವ ಈ ಸಮಯದಲ್ಲಿ ಲೇಖನ ಅತ್ಯಂತ ಪ್ರಸ್ತುತ.

    3. ನಂಬಿ ಕೆಟ್ಟವರಿಲ್ಲವೂ ರಂಗಯ್ಯನ, ನಂಬದೆ ಕೆಟ್ಟರೆ ಕೆಡಲಿ ಎಂಬ ದಾಸವಾಣಿ ಸಾರ್ವಕಾಲಿಕ ವಾದದ್ದು. ಅಂತೆಯೇ ಈ ನಂಬಿಕೆ ಎನ್ನುವುದು ಎಲ್ಲಾ ರಂಗದಲ್ಲೂ ಹಾಸುಹೊಕ್ಕಿದೆ. ಒಬ್ಬ ವ್ಯಕ್ತಿ ಸಿನಿಮಾ ಮಂದಿರದಲ್ಲಿ ಸಿನಿಮಾ ನೋಡುತಿದ್ದಾಗ ಆತನಿಗೆ ತಲೆ ನೋವು ಕಾಣಿಸಿಕೊಂಡಿತು. ಸಿನಿಮಾ ನೋಡಲು ಆಗುತ್ತಿರಲಿಲ್ಲ ಹಾಗಂತ ಸಿನಿಮಾ ಮಂದಿರ ಬಿಟ್ಟು ಹೊರ ಬರಲು ಮನಸು ಒಪ್ಪುತ್ತಿಲ್ಲ. ಈಗ ಸಿನಮಾ ಮದ್ಯದಲ್ಲಿ ವಿರಾಮ ಬಂದಾಗ ನೋಡುತ್ತಾನೆ ಈತನ ಪಕ್ಕದಲ್ಲಿ ಈತನ ಮನೆ ವೈದ್ಯನೂ ಇದ್ದ. ಆ ವ್ಯಕ್ತಿಗೆ ಸಂತೋಷ ಆಗಿ ವೈದ್ಯರ ಬಳಿ ತನ್ನ ಸಮಸ್ಯೆ ತಿಳಿಸಿ ಅವರಿಂದ ಒಂದು ಮಾತ್ರೆ ಪಡೆದ. ಆಗ ವೈದ್ಯರು ಈ ಮಾತ್ರೆ ನುಂಗುವುದಲ್ಲ ಸುಮ್ಮನೆ ಬಾಯಲ್ಲಿ ಇಟ್ಟುಕೊಳ್ಳಿ ಎಂದು ಹೇಳಿ ಸಿನಿಮಾ ನೋಡಲು ಕುಳಿತರು. ಸಿನಿಮಾ ಮುಗಿಯುವ ಹೊತ್ತಿಗೆ ಆತನಿಗೆ ತಲೆನೋವು ಮಾಯವಾಯಿತು. ಆತ ವೈದ್ಯರನ್ನು ಕೇಳಿದ ಎಂಥ ಮಾತ್ರೆ ಇದು ಎಷ್ಟು ಬೇಗ ಗುಣವಾಯಿತು ಎಂದು ಕೇಳಿದ. ಆಗ ವೈದ್ಯರು ತಾವು ಕೊಟ್ಟ ಮಾತ್ರೆ ವಾಪಸ್ ಕೊಡಿ ಎಂದು ಕೇಳಿ ದರು. ಆ ವ್ಯಕ್ತಿ ತನ್ನ ಬಾಯಲ್ಲಿ ಇಟ್ಟುಕೊಂಡ ಮಾತ್ರೆ ತೆಗೆದು ನೋಡಿದಾಗ ಅದು ಆ ವೈದ್ಯನ ಶರ್ಟ್ ನ ಗುಂಡಿ ಆಗಿತ್ತು. ಇಲ್ಲಿ ವೈದ್ಯರು ಕೊಟ್ಟ ಮಾತ್ರೆ ತನಗೆ ಗುಣವಾಗುತ್ತೆ ಎಂಬ ಆತನ ನಂಬಿಕೆಯೇ ಕೆಲಸಮಾಡಿತ್ತು. ನಂಬಿದರೆ ಶಿವ, ನಂಬದರೆ ಶವ. ಎನ್ನುವಂತೆ ನಂಬಿಕೆ ಬಗ್ಗೆ ಬರೆದ ಲೇಖನ ಸಮಯೋಚಿತ ವಾಗಿತ್ತು. ಈ ಲೇಖನ ಬರೆದ ಶ್ರೀದೇವಿ ಅಂಬೆಕಲ್ ರವರಿಗೆ ಅಭಿನಂದನೆಗಳು 🙏

    4. ನಿಜ. ನಂಬಿಕೆ ಎನ್ನುವುದು ಸೂಪರ್ ಪವರ್.
      ಇದನ್ನು ಲೇಖಕಿ ಶ್ರೀದೇವಿ ಅಂಬೇಕಲ್ಲು ಅವರು ನಾನಾ ಆಯಾಮಗಳಿಂದ ವಿಶ್ಲೇಷಿಸಿದ್ದಾರೆ.
      ತಮ್ಮ ಬರಹ ಇತರರಿಗೆ ಇಷ್ಟವಾಗಬಲ್ಲದು ಎಂಬ ನಂಬಿಕೆಯೇ ಲೇಖಕರಿಗೆ ಪ್ರೇರಣೆಯೂ ಹೌದು. ಅದು ಪ್ರಕಟವಾಗುತ್ತದೆ ಎಂಬ ವಿಶ್ವಾಸದಿಂದಲೇ ಪತ್ರಿಕೆಗಳಿಗೆ ಕಳಿಸುತ್ತಾರೆ.
      ಇನ್ನು ಓದುಗರೂ ಅಷ್ಟೇ. ತಮ್ಮ ಪ್ರತಿಕ್ರಿಯೆ ( ಕೆಲವರಿಗೆ ತಮ್ಮ ಹೆಸರು) ಪ್ರಕಟವಾಗುತ್ತದೆ ಎಂಬ ನಂಬಿಕೆಯಿಂದಲೇ ಬರೆದು ಕಳಿಸುತ್ತಾರೆ.
      ನಂಬಿ ಕೆಟ್ಟವರಿಲ್ಲ..!?

    5. ಉತ್ತಮ ಲೇಖನ ಮೇಡಂ. ಲೇಖನ ಓದಿಸುತ್ತಾ ಹೋಯಿತು. ಈ ಸಂದರ್ಭಕ್ಕೆ ಸೂಕ್ತ ಲೇಖನ

    LEAVE A REPLY

    Please enter your comment!
    Please enter your name here

    Latest article

    error: Content is protected !!