21.7 C
Karnataka
Tuesday, December 3, 2024

    ಈ ಸಲ ಶ್ರಾವಣಕ ಹಿಂದಿನ ಬಣ್ಣವಿಲ್ಲ, ಆದರೂ ಭರವಸೆ ಒಂಚೂರೂ ಮಾಸಿಲ್ಲ

    Must read

    ರವಿ-ಇಳೆಯರ ಪುರಾತನ ಪ್ರೇಮವ, ಸರಸವ ಕಂಡು ಹೊಟ್ಟೆಕಿಚ್ಚಾಗುವ ಮಳೆರಾಯ ಪ್ರೇಮಿಗಳಿಬ್ಬರನ್ನು ವಿರಹದ ಬೇಗುದಿಯಲ್ಲಿ ಬೇಯುವಂತೆ ಮಾಡಿ ಕೊನೆಗೂ ತಾನೇ ಸುಸ್ತಾಗಿ ತನ್ನಬ್ಬರವ ತಗ್ಗಿಸುವಾಗ ಆಷಾಢ ಮುಗಿಯಲು ಬಂತೆಂದೇ ಅರ್ಥ. ಸಿಡಿಲು ಮಿಂಚಿನಾರ್ಭಟಕೆ ತತ್ತರಿಸಿದ ರವಿಯೂ ಅಳುಕುತ್ತಲೇ ಕಾರ್ಮೋಡದ ಬೆನ್ನಮರೆಯಿಂದ ಇಣುಕಿ ಇಳೆಗೆ ಕಣ್ಮಿಟಕಿಸುವಾಗ ಅವಳಲ್ಲೂ ನಾಚಿಕೆಯ ಹೂಮೊಗ್ಗು. ಶ್ರಾವಣದಲಿ ತನ್ನ ಸೇರಲು ಬರುವ ಇನಿಯನಿಗಾಗಿ ಇಳೆಯ ಅಲಂಕಾರವೇನು ಕಮ್ಮಿಯೇ?

    ತಿಳಿನೀರ ಕೊಳದಲಿ ಮಿಂದು, ಪಾರಿಜಾತದ ಘಮಲಿನ ಅತ್ತರು ಪೂಸಿಕೊಂಡು, ಪಚ್ಚೆ ಹಸಿರಿನ ಸೀರೆ ಕುಪ್ಪಸವ ತೊಟ್ಟು, ಬಣ್ಣಬಣ್ಣದ ಹೂವಿನ ಕಂಠಿಹಾರ, ಮಲ್ಲಿಗೆ-ಸೇವಂತಿಯ ಬೆಂಡೋಲೆ ಧರಿಸಿ, ಚಿಗುರೆಲೆಯ ಡಾಬು, ಕಾಲ್ಗೆಜ್ಜೆ ಧರಿಸಿದ ಅವಳು ಅಬ್ಬಾ! ಭುವನ ಮನಮೋಹಿನಿಯೇ. ಪ್ರಖರ ಬೆಳಕಿಂದ ಛಾಯೆಯನ್ನು ಮಂಕಾಗಿಸಿದ ರವಿಯೂ ಕೂಡ ಇಳೆಯಂತಹ ಪ್ರೇಮಿಕೆ ಮುಂದೆ ತಂಪನೆಯ ಶಿಶಿರ. ಸುದೀರ್ಘ ವಿರಹದಿಂದ ಬಳಲಿದ ಪ್ರೇಮಿಗಳ ಮಿಲನದ ಪ್ರತೀಕವೆಂಬಂತೆ ಮನೆಮನೆಯಲ್ಲೂ, ಮನದಲ್ಲೂ ಹಬ್ಬವೇ ಹಬ್ಬ.

    ಶ್ರಾವಣ ಎಂದೊಡನೇ ನನಗೆ ಮೊದಲು ನೆನಪಾಗುವುದು ನಾ ಕಳೆದ ಬಾಲ್ಯ, ತವರು, ಅಲ್ಲಿನ ಆಚರಣೆ ಹಬ್ಬ ಹರಿದಿನ ಇವೇ. ಶ್ರಾವಣದ ಶುರುವಿನಲ್ಲಿಯೇ ಅಮ್ಮ ‘ಮಂಗಳಗೌರಿ’ ವೃತವನ್ನು ಅದೇಷ್ಟು ಶೃದ್ಧಾಭಕ್ತಿಯಿಂದ ಮಾಡುತ್ತಿದ್ದಳು ಅಂದರೆ, ದೇವಿಯೇ ನಮ್ಮನೆ ಬಾಗಿಲಿಗೆ ಬಂದು ಬಾಗಿನ ತೆಗೆದುಕೊಂಡು ಹೋಗುಬಿಡುವಳೇನೋ ಎಂಬಷ್ಟು ತೀವ್ರವಾಗಿ.

    ಶ್ರಾವಣದ ಮೊದಲ ಮಂಗಳವಾರ ಕಳಶವಿಟ್ಟು, ಅದಕ್ಕೆ ಹಸಿರು ಕುಪ್ಪಸದಿಂದ ಸೀರೆಯುಡಿಸಿ, ತನ್ನ ಆಭರಣಗಳನ್ನು ಹಾಕಿ, ಅರಶಿನ ಲೇಪದ ಮೇಲೆ ಕುಂಕುಮದ ಬೊಟ್ಟಿಟ್ಟು, ಕೊನೆಗೆ ಕಪ್ಪನೆಯ ಬೊಟ್ಟು ಕಾಡಿಗೆಯಿಟ್ಟು ಲಟಕ್ಕೆಂದು ನೆಟಿಕೆ ಮುರಿದಾಗ ದೇವಲೋಕದಲ್ಲಿ ದೇವಿ ಮುದದಿಂದ ನಕ್ಕಿರಲೂಬಹುದು. ಅಮ್ನೋರಿಗೆ ಹೆಸರುಬೇಳೆ ಪಾಯಸವಿಷ್ಟ, ನೆನೆಸಿಟ್ಟ ಕಡಲೆಯಿಷ್ಟ, ಅಂಬೋಡೆ ಇಷ್ಟ ಅಂತೆಲ್ಲ ಅಡುಗೆ ಮಾಡುವಾಗ ಅಮ್ಮನ ಮಮತೆ ಕಾಣಿಸುತ್ತಿತ್ತು ಅವಳಲ್ಲಿ. ನನ್ನ ಕಷ್ಟಕ್ಕೆಲ್ಲಾ ನೀನೇ ಮಡಿಲು ಎಂಬಂತ ಹಾಡನ್ನು ಗುನುಗುತ್ತಾ ತುಪ್ಪದಾರತಿಯೆತ್ತುತ್ತಾ ಕಣ್ತುಂಬಿಕೊಳ್ಳುವಾಗ ಅಲ್ಲೊಬ್ಬ ಅಮಾಯಕ ಮಗಳಿರುತ್ತಿದ್ದಳು. ಕುಂಕುಮದ ದಿನ ಅಚಾನಕ್ ಹಿರಿಮುತ್ತೈದೆ ಬಂದರಂತೂ ಮೊಗವೆಲ್ಲಾ ಹೂವಾಗಿ ಅವರಿಗೆ ಉಡಿ ತುಂಬಿ ಕಾಲಿಗೆ ಬೀಳುವಾಗ ಅಲ್ಲೊಬ್ಬ ಮುಗುದ ಹೆಣ್ಣಿನ ಪ್ರತಿರೂಪವಿರುತ್ತಿತ್ತು. ಹೀಗೇ ಅಮ್ಮನಿಗೆ ಶ್ರಾವಣವೆಂದರೆ ಮಂಗಳಗೌರಿ. ನನಗೋ ಶ್ರಾವಣವೆಂದರೆ ಇವೆಲ್ಲಕ್ಕಿಂತ ಮಿಗಿಲಾದ ಒಂದು ಪುಳಕವಿತ್ತು. ಅದಕ್ಕೆ ಕಾರಣ ಕೃಷ್ಣಾಷ್ಟಮಿ.

    ಅಜ್ಜಿ ಹೇಳುತ್ತಿದ್ದ ಕಥೆ ಕೇಳಿಯೇ ಕೃಷ್ಣನೆಡೆಗೆ ಅವ್ಯಕ್ತ ಭಾವಬಂಧನವೊಂದು ಶುರುವಾಗಿದ್ದು. ಕೃಷ್ಣನೆಂದರೆ ಬಾಲ್ಯಸಖ, ಹರೆಯದ ಬಿಸುಪಿಗೆ ರಂಗು ತುಂಬುದವ, ಹೊಕ್ಕಳಿಗೆ ನವಿಲುಗರಿಯಿಂದ ಕಚಗುಳಿಯಿಟ್ಟು ನವಿರುಕಂಪನವ ತಂದ ಪೋರ. ಕೃಷ್ಣನೆಡೆಗಿನ ಮೋಹವ ಬಣ್ಣಿಸಲು ಪುಟವೇ ಸಾಲದು ನನಗೆ. ಹೀಗೆ ಮನಸಾರೆ ಮೋಹಿಸಿದ, ಪ್ರೇಮಿಸಿದ ಕೃಷ್ಣನೇ ಮಡಿಲಿಗಿಳಿದ ಮೇಲೆ ಕಣ್ಮಿಂಚಲಿ ಕೊಲ್ಲುವವನ ಕಣ್ಣಲ್ಲೀಗ ಮಾದಕತೆಯೆಲ್ಲಾ ಕರಗಿ ಮಮತೆಯೆ ಸೆಲೆ ತುಂಬಿದೆ. ನಡುಬಳಸಿ ಕಚಗುಳಿಯಿಟ್ಟು ನಿಂತಲ್ಲೇ ನೀರಾಗಿಸುವವನ ಬೆರಳುಗಳೀಗ ಮಡಿಲಲ್ಲಿ ಮಲಗಲು ಸೆರಗೆಳೆಯುತ್ತದೆ. ಕೆಂದುಟಿಗಳ ಮಧುವ ಹೀರಿ ಸೊಕ್ಕುವ ಹವಳ್ದುಟಿಗೀಗ ಎದೆಗಡಿಗೆಯ ಹಾಲನ್ನು ಖಾಲಿಯಾಗಿಸುವ ತವಕ. ಕಾಲಕ್ಕೆ ತಕ್ಕಂತೆ ನನ್ನೊಡನೆ ತನ್ನ ಪಾತ್ರವನ್ನೇ ಬದಲಿಸಿ ನನ್ನೊಡನೆ ನೆರಳಾಗಿರುವ ನನ್ನ ಮಗ ಕೃಷ್ಣನ ಜನುಮದಿನ ಅಮ್ಮನಿಗೆ ಹಬ್ಬವಲ್ಲದೇ ಮತ್ತೇನು?

    ನಾಗರಪಂಚಮಿ ಸಮೀಪಿಸುವಾಗಲೋ, ಜಟುಕನ ಪೂಜೆಯ ಸಮಯದಲ್ಲೋ ಹಿರಿ ನಾಗರವೊಂದು ಊರಿನ ಮನೆಯಂಗಳದಲ್ಲೋ, ತುಳಸೀಕಟ್ಟೆಯ ಸುತ್ತಲೋ, ಬಾವಿಯ ಸಮೀಪವೋ ಕಾಣಿಸಿಕೊಂಡು ಮಾಯವಾಗುತ್ತಿದ್ದ. ನನ್ನಮ್ಮ ಅಜ್ಜಿಯರಂತೂ ಅಪರೂಪಕ್ಕೆ ಮನೆಗೆ ಬಂದ ನೆಂಟರಂತೆ ನಾಗರಹಾವನ್ನು ಮಾತನಾಡಿಸುವ ಪರಿ ನನಗೀಗಲೂ ಅಚ್ಚರಿಯೇ.

    ಹಾವಿನ ಬಳಿಯೇ ನಿಂತು ‘ನೋಡು ಮಗಾ, ನೀ ಮಕ್ಳು ಮರಿ ಇಪ್ಪು ಜಾಗ್ದಲ್ಲೆಲ್ಲಾ ಸುಮ್ಸುಮ್ನೆ ತಿರುಗುಲಾಗ. ನಡೆ ನಡೆ ನಿಮ್ಮನೇಗ್ ಹೋಗು ನಡೆ ಈ ಜಾಗೆಲ್ಲಾ ಶುದ್ಧಿಲ್ಲೆ ಮಾರಾಯಾ’ ಎಂದೆಲ್ಲಾ ಹಲಬುತ್ತಿದ್ದರು. ಅವನೂ ಅಮ್ಮನ ಮಾತು ಕೇಳುವ ವಿಧೇಯ ಮಗನಂತೆ ಪಕ್ಕದ ಮನೆಗೆ ತೆರಳುತ್ತಿದ್ದ. ಅಲ್ಲಿಯೂ ಬಾಳೆಗೊನೆ, ಹಣ್ಕಾಯಿ, ಹಾಲಾಭಿಷೇಕದ ಲಂಚ ಪಡೆದು ಮುಂದೆ ತೆರಳುತ್ತಿದ್ದ. ಇದ್ಯಾವುದೂ ಸಾಲದಂತೇ ಹಾವಿನ ಹುತ್ತವಿರುವ ಗುತ್ತಿನ ಜಾಗದ ತನಕ ದೂರ್ವೆ, ಕರ್ಪೂರ ಬೆರೆಸಿದ ಗೋಮಯದ ನೀರು ಸಂಪ್ರೋಕ್ಷಿಸಿ ನಾಗರು ತೆರಳುವ ಜಾಗದಲ್ಲಿ ಮೈಲಿಗೆಯಾಗದಂತೆ ಎ‍‍ಚ್ಚರವಹಿಸುತ್ತಿದ್ದರು. ಇದೇ ಸಮಯದ ಲಾಭ ಪಡೆಯುತ್ತಿದ್ದ ಶತಮಡಿಯ ನನ್ನಜ್ಜಿಯಂತೂ ‘ನಿಂಗಾ ಸಮಾ ಮಡಿ-ಮೈಲಿಗೆ ಮಾಡ್ತ್ರಿಲ್ಲೆ, ಅದ್ಕೆ ಎಚ್ರಿಕೆ ಕೊಡುಲ್ ಬಂದಿದ್ದಾ ನೆನ್ಪ್ಟಕಳಿ’ ಅಂತೆಲ್ಲಾ ಬೆದರಿಸಿ ಮುಂದೆರಡು ವಾರ ಮಡಿಮಡಿಯೆಂದು ತನ್ನ ಬೇಳೆಕಾಳು ಬೇಯಿಸಿಕೊಳ್ಳುತ್ತಿದ್ದಳು.

    ಹೀಗೆ ಹಾವಿನ ಕುರಿತು ಭಯಕ್ಕಿಂತ ಹೆಚ್ಚು ಒಲವಿನಿಂದಲೇ ಬೆಳೆದ ನಮಗೆ ನಾಗರಪಂಚಮಿಯೆಂದರೆ ಸಡಗರವೇ. ಆಷಾಢದ ಮಳೆಗೆ ಸೊಂಪಾಗಿ ಬೆಳೆದ ಮದರಂಗಿಯನ್ನು ಕೊಯ್ದು ತಂದು ಆರಿಸಿ, ನುಣ್ಣಗೆ ರುಬ್ಬಿ, ಅದಕ್ಕೆ ಲಿಂಬೆರಸ, ಚಾಕಣ್ಣಿನ ರಸ ಬೆರೆಸಿಡುತ್ತಿದ್ದಳು ಅಮ್ಮ. ಮರುದಿನ ಬೆಳಿಗ್ಗೆ ಮನೆಯವರೆಲ್ಲಾ ಅದನ್ನು ಹಚ್ಚಿಕೊಂಡು, ಕೊನೆಗೆ ಅಪ್ಪನನ್ನೂ ಕಾಡಿಸಿ ಅವರ ಹೆಬ್ಬೆರಳಿಗೆ ಹಚ್ಚಿ ಸಂಭ್ರಮಿಸುವ ಖುಶಿಯೇ ಬೇರೆ. ಎಣ್ಣೆಸ್ನಾನದ ನಂತರ, ಸಣ್ಣಜ್ಜನೊಡನೆ ನಾಗರಕಲ್ಲಿಗೆ ತೆರಳಿ ಹಾಲೆರೆದು, ಹಣ್ಕಾಯಿ ಮಾಡಿಸಿ, ಅಮ್ಮ ಮಾಡಿದ ವಿಶೇಷ ಭೋಜನವುಂಡು ಮಲಗಿದರೆ ಜೊಂಪು ಜೊಂಪು ನಿದ್ರೆಯಲ್ಲೆಲ್ಲಾ ಮದರಂಗಿಯದ್ದೇ ರಂಗು.

    ಇನ್ನು ರಕ್ಷಾಬಂಧನ ಬಂದರಂತೂ ನನಗೂ, ತಂಗಿಗೂ ಒಳಗೊಳಗೇ ಅಳುಕು, ಕಸಿವಿಸಿ, ಸಂಕಟ. ಸ್ವಂತಕ್ಕೆ ಸೋದರರಿಲ್ಲದೇ ಮರುದಿನ ಶಾಲೆಯಲ್ಲಿ ತಮ್ಮ ಸೋದರರು ಕೊಟ್ಟ ಉಡುಗೊರೆಯನ್ನು ತೋರಿಸಿ ತೋರಿಸಿ ಉರಿಸುವ ಹುಳುಕು ಗೆಳತಿಯರ ಮುಂದೆ ನಾವಿಬ್ಬರೂ ಸಪ್ಪೆ ಸಪ್ಪೆ. ಕೊನೆಗೆ ಅಜ್ಜಿಯ ಉಪಾಯದಿಂದ ಚಿಕ್ಕಪ್ಪಂದರಿಗೆ ರಾಖೀ ಕಟ್ಟಿ, ಅವರು ದೊಡ್ಡ ಮನಸು ಮಾಡಿ ಕೊಡುವ ಹತ್ತು ರೂಪಾಯಿಯನ್ನೇ ನೂರು ಎಂಬಷ್ಟು ವೈಭವೀಕರಿಸಿ ಸಂಭ್ರಮಿಸುವುದು ಶುರುವಾದ ಮೇಲೆ ಮನಸು ಸ್ವಲ್ಪ ತಂಪಾಯ್ತು.

    ಈಗಲೂ ನನ್ನ ಒಡನಾಟಕ್ಕೆ ಸಿಗುವ ಪುರುಷರಲ್ಲಿ ನಾನು ಹುಡುಕುವುದು ಶುದ್ಧ ಅಂತಃಕರಣದಿಂದ ನನ್ನನ್ನು ಹಚ್ಚಿಕೊಳ್ಳುವ ಸೋದರ ಮನಸುಗಳನ್ನು. ಇಂದು ಬೆಂಗಳೂರಿನಿಂದ ಹಿಡಿದು ಮಂಗಳೂರಿನ ತನಕ, ಕುಮಟಾದಿಂದ ಶೃಂಗೇರಿಯ ತನಕ ನನ್ನನ್ನು ಮನಸಾ ಗೌರವಿಸುವ, ಅಕ್ಕರೆಯಿಂದ ಕಾಣುವ ಅನೇಕ ಅಣ್ಣ ತಮ್ಮಂದಿರು ನನಗಿದ್ದಾರೆ. ಅವರಲ್ಲಿ ಯಾರು ಬಳಿಯಿರುತ್ತಾರೋ ಅವರಿಗೆ ಆರತಿಯೆತ್ತಿ, ಸಿಹಿ ತಿನಿಸಿ, ರಾಖಿ ಕಟ್ಟುತ್ತೇನೆ. ಅವರು ಕೊಡುವ ಸಣ್ಣಪುಟ್ಟ ಉಡುಗೊರೆಯಿಂದ ಸಿಗುವ ಸುಭದ್ರತೆಯ ಭಾವವನ್ನು ಎದೆಯ ಕಪಾಟಿನಲ್ಲಿ ಕಾಪಿಡುತ್ತೇನೆ. ನನಗೀಗ ಮುಂಚಿನೆಂತೆ ರಕ್ಷಾಬಂಧನವೆಂದರೆ ಬೇಸರವಿಲ್ಲ, ದುಗುಡವೂ ಇಲ್ಲ. ಈಗದೊಂದು ಮುಗುದ್ ಮನಸುಗಳ ಬೆಸೆವ ಭಾವದ ಹಬ್ಬ.

    ಹೀಗೆ ಶ್ರಾವಣವೆಂದರೆ ಶುದ್ಧತೆಯ, ಪ್ರೀತಿಯ, ಮಿಲನದ, ಬೆಸುಗೆಯ, ನಂಬಿಕೆಯ, ವಿವಿಧ ಭಾವಗಳ ಮೇಳೈಸುವಿಕೆಯ ಹಬ್ಬ. ಎಲ್ಲಕ್ಕಿಂತ ಮಿಗಿಲಾಗಿ ಶ್ರಾವಣವೆಂದರೆ ತವರು. ತವರಿಗೆ ತೆರಳಿ ಅಮ್ಮನ ಮಡಿಲಿನ ಬಿಸುಪಲಿ ಮಿಂದೆದ್ದು, ಅವಳ ಮಂಗಳಗೌರಿಯನ್ನು ಕಂಡು ಮಾತಾಡಿಸಿ, ಅವಳ ಪ್ರಸಾದದ ಉಡಿ ತುಂಬಿಸಿಕೊಂಡು, ಅಮ್ಮ ಯಾವ ತರಹದ ಸೀರೆ ಕೊಟ್ಟಿರಬಹುದೆಂಬ ಕಾತುರತೆಯಿಂದ ತೆರೆದು ನೋಡುವ ಬೆರಗಿಲ್ಲ. ಅಪ್ಪ ತಂಗಿಯ ಜೊತೆ ಕೂತು ಪಟ್ಟಾಂಗದ ಲೊಟ್ಟೆ ಹೊಡೆವ ಗಮ್ಮತ್ತಿಲ್ಲ. ಹೀಗಾಗಿ ಈ ಸಲ ಶ್ರಾವಣಕ ಹಿಂದಿನ ಬಣ್ಣವಿಲ್ಲ. ಆದರೂ ಭರವಸೆಯೊಂಚೂರೂ ಮಾಸಿಲ್ಲ. ಈ ಸಲದ ಶ್ರಾವಣಕ್ಕೆ ಜಗದಿರುಳು ಕಳೆವ ಶಕ್ತಿಯಿರಲಿ, ನೆಮ್ಮದಿಯ ಬೆಳಕು ಹರಿಯಲಿ, ಎಲ್ಲವೂ ಮುಂಚಿನಂತಾಗಲಿ ಎಂದು ತವರಿನ ಸೆಳೆತದ ಮಗಳೊಬ್ಬಳು ಆಶಿಸುವುದು.

    ಶುಭಶ್ರೀ ಭಟ್
    ಶುಭಶ್ರೀ ಭಟ್
    ಶುಭಶ್ರೀ ಜನ್ಮಭೂಮಿ ಕುಮಟಾ ತಾಲೂಕಿನ ಒಂದು ಹಳ್ಳಿ, ಗುಡಬಳ್ಳಿ. ಕರಾವಳಿಯ 'ಚಹಾ' ಪ್ರೀತಿಯ ಶುಭಶ್ರೀ ಮದುವೆಯಾದದ್ದು ಮಲೆನಾಡಿನ (ಶೃಂಗೇರಿ) 'ಕಾಫಿ' ಪ್ರೇಮದ ಹುಡುಗನ ಜೊತೆ. ಕರ್ಮಭೂಮಿ ಬೆಂಗಳೂರು. ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್. ಹಲವಾರು ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟ.
    spot_img

    More articles

    3 COMMENTS

    1. ಈ ಬಾರಿ ಶ್ರಾವಣ ಪ್ರತಿ ಬಾರಿಯಂತೆ ಇಲ್ಲ. ಕೋವಿಡ್ ಭಯದಿಂದ ಸಂಭ್ರಮ ಕಾಣದಾಗಿದೆ. ಶ್ರಾವಣಕ ಹಿಂದಿನ ಬಣ್ಣವಿಲ್ಲ, ಆದರೂ ಭರವಸೆ ಒಂಚೂರೂ ಮಾಸಿಲ್ಲ .ಈ ಸಾಲು ಇಷ್ಟವಾಯಿತು. ಲೇಖಕರಿಗೆ ಅಭಿನಂದನೆ

    2. ನಿಜ ಭರವಸೆಯೇ ಬದುಕು.ಹಾವು ಬಂದಾಗ ಜನರ ಜೊತೆ ಮಾತನಾಡುವ ಹಾಗೆ ಮಾತಾಡೋದನು ನಾನು ಮಂಗಳೂರಿನ kadri ಪರಿಸರದಲಿ ನೋಡಿರುವೆ. ಅವು ಮೀನು ಮಾಂಸ ತಿನುವ ಮನೆ ಮುಂದೆ ಬಂದಾಗ. ನೀ ಯಾಕೆ ಬಂದೆ ಬರಬಾರದು ಹೀಗೆ ಅಂದಾಗ ತಿರುಗಿ ಬೇರೆ ಕಡೆ ಹೋಗೋದನ್ನ ನಾನೇ ಕಂಡಿರುವೆ. ಲೇಖಕಿ ತುಂಬಾ ಸೊಗಸಾಗಿ ಹೇಳಿದಾರೆ

    LEAVE A REPLY

    Please enter your comment!
    Please enter your name here

    Latest article

    error: Content is protected !!