21.2 C
Karnataka
Sunday, September 22, 2024

    ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ತಂತ್ರವೇ ವ್ಯಾಕ್ಸಿನ್

    Must read

    ಕೋವಿಡ್-19 ಮಹಾಮಾರಿಯನ್ನು ಕಟ್ಟಿಹಾಕಲು ಸಮಾರೋಪಾದಿಯಲ್ಲಿ ಭಾರತವು ಸೇರಿದಂತೆ ಜಗತ್ತಿನಾದ್ಯಂತ ಲಸಿಕೆಯ ಸಂಶೋಧನೆಗಳು ನಡೆಯುತ್ತಿದ್ದು, ಸಕಾರಾತ್ಮಕ ಫಲಿತಾಂಶದೊಂದಿಗೆ ಭರವಸೆಯನ್ನು ಮೂಡಿಸಿದೆ. ಲಸಿಕೆ ಅಭಿವೃದ್ಧಿಯ ಹಿಂದಿರುವ ಸೂತ್ರ, ಕಾರ್ಯವಿಧಾನ, ಪ್ರಾಯೋಗಿಕ ಫಲಿತಾಂಶ, ಕ್ಲಿನಿಕಲ್ ಟ್ರಯಲ್ಸ್ ಮುಂತಾದವುಗಳ ಕುರಿತು ಒಂದು ಅವಲೋಕನ.

    ಆಹಾರವನ್ನು ಜೀರ್ಣಿಸಲು ಜೀರ್ಣಾಂಗವ್ಯೂಹ, ಜೀರ್ಣವಾಗದೆ ಉಳಿದ ಕಲ್ಮಶಗಳನ್ನು ಹೊರಹಾಕಲು ವಿಸರ್ಜನಾಂಗವ್ಯೂಹ, ದೇಹದ ಅಂಗಾಂಗಗಳ ನಡುವೆ ಸಂವಹನಕ್ಕಾಗಿ ನರವ್ಯೂಹ, ಪೀಳಿಗೆಯನ್ನು ಮುಂದುವರಿಸಲು ಸಂತಾನೋತ್ಪತ್ತಿವ್ಯೂಹ, ಹೀಗೆ ಪ್ರಾಣಿಗಳ ಜೀವಂತಿಕೆಗೆ ವಿವಿಧ ವ್ಯೂಹಗಳು, ವ್ಯವಸ್ಥೆಗಳು ಇರುವಂತೆ, ದೇಹವನ್ನು ಪ್ರವೇಶಿಸುವ ರೋಗಾಣುಗಳ ವಿರುದ್ಧ ಹೋರಾಡಿ ರಕ್ಷಿಸಲು ಸುಸಜ್ಜಿತವಾದ ಒಂದು ರಕ್ಷಣಾವ್ಯೂಹವಿದೆ. ಆಕ್ರಮಣಕಾರರಿಂದ ದೇಶವನ್ನು ರಕ್ಷಿಸಲು ಇರುವ ಮಿಲಿಟರಿಯಲ್ಲಿ ಭೂಸೇನೆ, ನೌಕಾಪಡೆ, ವಾಯುಪಡೆ. ಕೋಸ್ಟ್ ಗಾರ್ಡ್, ಮದ್ದುಗುಂಡುಗಳು, ಯುದ್ಧ ವಾಹನಗಳು, ಫಿರಂಗಿ, ಕ್ಷಿಪಣಿ, ವಿಮಾನವಾಹಕ ನೌಕೆ, ಗಸ್ತು ಹಡಗುಗಳು, ಟ್ಯಾಂಕ್‌ಗಳು, ಯುದ್ಧ ವಿಮಾನಗಳು ಮುಂತಾದ ವ್ಯವಸ್ಥೆ, ಶಸ್ತ್ರಾಸ್ತ್ರಗಳಿರುವಂತೆಯೇ ದೇಹವನ್ನು ಆಕ್ರಮಿಸುವ ಬ್ಯಾಕ್ಟೀರಿಯಾ, ವೈರಾಣು, ಪ್ರೊಟೊಜೋವಾ, ಶಿಲೀಂಧ್ರಗಳ ವಿರುದ್ಧ ಹೋರಾಡಲು ರಕ್ಷಣಾವ್ಯೂಹದಲ್ಲಿ ನಿಷ್ಕ್ರಿಯ ರೋಗನಿರೋಧಕ ಶಕ್ತಿ, ಸಕ್ರಿಯ ರೋಗನಿರೋಧಕ ಶಕ್ತಿ, ಬಿಳಿ ರಕ್ತ ಕಣಗಳು, ಪ್ರತಿಕಾಯಗಳು (Antibodies), ಪೂರಕ ವ್ಯವಸ್ಥೆ (Complement system), ದುಗ್ಧರಸ ವ್ಯವಸ್ಥೆ (Lymphatic system), ಗುಲ್ಮ (Spleen), ಮೂಳೆ ಮಜ್ಜೆ (Bone marrow), ಥೈಮಸ್, ಬಿ-ಲಿಂಫೋಸೈಟ್ಸ್, ಟಿ-ಲಿಂಫೋಸೈಟ್ಸ್, ಮ್ಯಾಕ್ರೋಫೇಜಗಳು, ಸೈಟೊಕಿನ್ಸ್ ಹೀಗೆ ಬಗೆಬಗೆಯ ಅಂಗಾಂಶ, ಕೋಶ, ಅಣುಗಳ ರೂಪದಲ್ಲಿ ಶಸ್ತಾಸ್ತ್ರಗಳಿವೆ. ಇವುಗಳೆಲ್ಲವೂ ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸಿ ಸಂಕೀರ್ಣವಾದ ಒಂದು ಸರಪಳಿ ಕ್ರಿಯೆಯ ಮೂಲಕ ದೇಹವನ್ನು ದಾಳಿಮಾಡುವ ಶತ್ರು(ರೋಗಾಣು)ಗಳಿಂದ ನಮ್ಮನ್ನು ಸದಾ ರಕ್ಷಿಸುತ್ತಿರುತ್ತವೆ.

    ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು
    ಜಗತ್ತಿನಾದ್ಯಂತ ಸಮಾರೋಪಾದಿಯಲ್ಲಿ ಒಂದು ಕಡೆ ವಿಜ್ಞಾನಿಗಳು ಕೋವಿಡ್ -19 ಸಾಂಕ್ರಾಮಿಕಕ್ಕೆ ಕಾರಣವಾಗಿರುವ ವೈರಸ್ (SARS-CoV-2) ವಿರುದ್ಧ ಔಷಧಿಯನ್ನು ಕಂಡುಹಿಡಿಯಲು ಸಂಶೋಧನೆ ನಡೆಸುತ್ತಿದ್ದರೆ, ಇನ್ನೊಂದು ಕಡೆ ಸಂಶೋಧಕರು ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಈ ಲಸಿಕೆ ಮತ್ತು ಔಷಧಿಗೆ ಏನು ವ್ಯತ್ಯಾಸ? ಲಸಿಕೆಯು ರೋಗ ಬರದಂತೆ ತಡೆಗಟ್ಟುವ ಕೆಲಸ ಮಾಡಿದರೆ ಔಷಧಿಗಳು ಬಂದನಂತರ ಗುಣಪಡಿಸುತ್ತವೆ. ‘ಯಾವುದೇ ರೋಗರುಜಿನ ಇರಬಹುದು, ‘ಗುಣಪಡಿಸುವುದಕ್ಕಿಂತ ತಡೆಗಟ್ಟುವುದೇ ಉತ್ತಮ’.

    ‘ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು’ ಎಂಬ ಗಾದೆ ರೋಗಾಣು ವಿರುದ್ಧ ವ್ಯಾಕ್ಸಿನ್ ಅಭಿವೃದ್ಧಿಪಡಿಸುವ ತಾಂತ್ರಿಕತೆಗೆ ಪೂರಕವಾಗಿದೆ. ಅಂದರೆ, ಯಾವ ರೋಗಾಣುವಿನ ಸೋಂಕಿನಿಂದ ಕಾಯಿಲೆ ಉಂಟಾಗುವುದೋ ಅದೇ ರೋಗಾಣುವನ್ನು ಬಳಸಿಕೊಂಡು ಅದರ ವಿರುದ್ಧ ಶಸ್ತ್ರವನ್ನು ಸಜ್ಜುಗೊಳಿಸುವುದು, ಅರ್ಥಾತ್ ಲಸಿಕೆಯನ್ನು ಅಭಿವೃದ್ಧಿ ಪಡಿಸುವುದು. ವೈರಿಯ ವಿರುದ್ಧ ಹರಿತವಾದ ಶಸ್ತ್ರಗಳನ್ನು ತಯಾರಿಟ್ಟುಕೊಂಡು ವೈರಿಯು ಆಕ್ರಮಿಸಿದ ತಕ್ಷಣ ಅದನ್ನು ನಾಶಗೊಳಿಸುವುದು, ಅಂದರೆ ಸೋಂಕು ಉಂಟಾದರೂ ಕಾಯಿಲೆ ಬರದಂತೆ ತಡೆಯುವುದೇ ಇಲ್ಲಿರುವ ಸೂತ್ರ. ಇದರ ಹೆಗ್ಗಳಿಕೆ ನಿಸರ್ಗದ ಕಾರ್ಯವಿಧಾನ ಮತ್ತು ಅದನ್ನು ಅರ್ಥಮಾಡಿಕೊಂಡು ವ್ಯಾಕ್ಸಿನ್ ಎಂಬ ಪರಿಕಲ್ಪನೆ ನೀಡಿದ ವಿಜ್ಞಾನಿಗಳಿಗೆ ಸಲ್ಲುತ್ತದೆ.
    ಲಸಿಕೆಗಳ ಉತ್ಪಾದನೆ ಹಿಂದಿರುವ ರಹಸ್ಯ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯವಿಧಾನವೇ ಆಗಿದೆ. ಹಾಗಾಗಿ, ಮೊದಲು ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯವಿಧಾನದ ಬಗ್ಗೆ ಸ್ವಲ್ಪ ಹೊತ್ತು ಗಮನಹರಿಸೋಣ.

    ದೇಹವನ್ನು ಪ್ರವೇಶಿಸುವ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು ಅಂದರೆ ಅವುಗಳನ್ನು ಕೊಲ್ಲಲ್ಲು ಅಥವಾ ನಿಷ್ಕ್ರಿಯಗೊಳಿಸಲು ರಕ್ಷಣಾವ್ಯೂಹವು ಪ್ರತಿಕಾಯ (ಆಂಟಿಬಾಡಿ) ಗಳನ್ನು ಅಸ್ತ್ರವನ್ನಾಗಿ ಬಳಸುತ್ತದೆ. ಇಂಗ್ಲೀಷ್ ವರ್ಣಮಾಲೆಯ ‘ವೈ’ ಆಕಾರದ ಈ ಅಸ್ತ್ರಗಳನ್ನು (ಪ್ರತಿಕಾಯಗಳು) ಉತ್ಪತ್ತಿ ಮಾಡುವ ಕೆಲಸ ಬಿ-ಲಿಂಫೋಸೈಟ್ಸ್ (ಬಿ-ಕೋಶಗಳು) ಎಂಬ ಬಿಳಿ ರಕ್ತ ಕಣಗಳದ್ದು. ರಕ್ತದಲ್ಲಿ ಕೋಟ್ಯಂತರ ಬಗೆಯ ಬಿ-ಕೋಶಗಳಿದ್ದು, ಪ್ರತಿಯೊಂದು ಒಂದು ನಿರ್ದಿಷ್ಟ ರೋಗಾಣುವನ್ನು ಗುರುತಿಸಿ, ಅದರ ವಿರುದ್ಧ ನಿಖರವಾದ ಪ್ರತಿಕಾಯಗಳನ್ನು ಉತ್ಪತ್ತಿ ಮಾಡುತ್ತದೆ. ಒಂದು ನಿರ್ದಿಷ್ಟವಾದ ಕೀಲಿಯಿಂದ ಮಾತ್ರ ಬೀಗವನ್ನು ಹೇಗೆ ತೆರೆಯಬಹುದೋ ಹಾಗೆಯೇ ಒಂದು ನಿರ್ದಿಷ್ಟವಾದ ಬಿ-ಕೋಶವು ದೇಹವನ್ನು ಪ್ರವೇಶಿಸಿದ ಸೂಕ್ಷ್ಮಜೀವಿಯನ್ನು ಗುರುತಿಸುತ್ತದೆ. ಇದಕ್ಕೆ ಬಿ-ಕೋಶಗಳ ಮೇಲ್ಮೈಯಲ್ಲಿರುವ ರಿಸೆಪ್ಟರ್ (ಗ್ರಾಹಕ)ಗಳು ನೆರವಾಗುತ್ತದೆ. ಸೂಕ್ಶ್ಮಜೀವಿಗಳ ಹೊರಕವಚದಲ್ಲಿರುವ ಪ್ರೊಟೀನ್/ಗ್ಲೈಕೋಪ್ರೋಟೀನ್ (ಪ್ರತಿಜನಕ / ಆಂಟಿಜೆನ್) ಆಕಾರಕ್ಕೆ ಯಾವ ಬಿ-ಕೋಶವು ತನ್ನ ರಿಸೆಪ್ಟರ್ ಗಳ ಮೂಲಕ ನಿಖರವಾಗಿ ಅಂಟಿಕೊಳ್ಳುತ್ತದೆಯೋ ಅದು ಆಯ್ಕೆಯಾಗುತ್ತದೆ. ಆಕ್ರಮಣಕಾರಿಯನ್ನು ನಿಖರವಾಗಿ ಗುರುತಿಸಿ ಆಯ್ಕೆಯಾದ ಬಿ-ಕೋಶವು ತಕ್ಷಣಕ್ಕೆ ಸಕ್ರಿಯವಾಗಿ ತನ್ನಂತೆ ಇರುವ ಲಕ್ಷಾಂತರ ಕೋಶಗಳನ್ನು ಉತ್ಪತ್ತಿ ಮಾಡಲು ವಿಭಜನೆಗೊಳ್ಳುತ್ತದೆ (ಕ್ಲೋನಲ್ ಆಯ್ಕೆ).

    ರಕ್ತದ ಪ್ಲಾಸ್ಮಾದಲ್ಲಿರುವ ಈ ಕೋಶಗಳನ್ನು ಪ್ಲಾಸ್ಮಾ ಬಿ-ಕೋಶಗಳು ಎಂದು ಕರೆಯಲಾಗುವುದು. ಅವುಗಳೆಲ್ಲವೂ ರಾಶಿ ರಾಶಿ ನಿರ್ದಿಷ್ಟ ಪ್ರತಿಕಾಯಗಳನ್ನು ಬಿಡುಗಡೆ ಮಾಡುತ್ತವೆ. ಪ್ರತಿಕಾಯಗಳು ಸೂಕ್ಷ್ಮಜೀವಿಯ ಮೇಲೆ ಮುಗಿಬಿದ್ದು ಅವುಗಳನ್ನು ಕೊಲ್ಲುತ್ತವೆ ಅಥವಾ ನಿಷ್ಕ್ರಿಯಗೊಳಿಸುತ್ತವೆ. ಅಂತಿಮವಾಗಿ, ನಾವು ಕಾಯಿಲೆ ಉಂಟಾಗದಂತೆ ಬಚಾವ್ ಆಗುತ್ತೇವೆ ಅಥವಾ ಬೇಗನೆ ಚೇತರಿಸಿಕೊಳ್ಳುತ್ತೇವೆ.

    ಪ್ಲಾಸ್ಮಾ ಚಿಕಿತ್ಸೆಯ ಹಿನ್ನೆಲೆ

    ಕೋವಿಡ್ -19 ಗೆ ಕೇಳಿಬರುತ್ತಿರುವ ಪ್ಲಾಸ್ಮಾ ಚಿಕಿತ್ಸೆಯ ಹಿನ್ನೆಲೆಯು ಇದೇ ಆಗಿದೆ. ಈಗಾಗಲೇ ಕೋವಿಡ್ -19 ನಿಂದ ಗುಣಮುಖರಾದ ವ್ಯಕ್ತಿಗಳ ರಕ್ತದ ಪ್ಲಾಸ್ಮಾದಲ್ಲಿ ಸಾಕಷ್ಟು ಕೊರೊನಾವೈರಸ್ ವಿರುದ್ಧ ಪ್ರತಿಕಾಯಗಳು, ಪ್ಲಾಸ್ಮಾ ಬಿ-ಕೋಶಗಳು ಶೇಖರಣೆಯಾಗಿದ್ದು ಅವರಿಂದ ಪ್ಲಾಸ್ಮಾವನ್ನು ಸಂಗ್ರಹಿಸಿ ಹೊಸ ಕೋವಿಡ್ -19 ರೋಗಿಗಳಿಗೆ ನೀಡುವುದು. ಆದರೆ, ಇದರಲ್ಲಿಯೂ ಕೆಲವು ಪ್ರತಿಕೂಲ ಪರಿಣಾಮಗಳು ಇದ್ದು, ಸರಿಯಾಗಿ ಪರೀಕ್ಷೆಗೆ ಒಳಪಡಿಸಿಯೇ ಪ್ಲಾಸ್ಮಾ ಥೆರಪಿಯನ್ನು ಬಳಸಿಕೊಳ್ಳಬೇಕು.

    ರಕ್ತದಲ್ಲಿ ಬಿ-ಕೋಶಗಳು ಇರುವಂತೆ, ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಆಂಟಿಬಾಡಿ ಉತ್ಪತ್ತಿ ಮಾಡಲು ಟಿ-ಕೋಶಗಳೂ ಇವೆ. ಬಿ-ಕೋಶಗಳು ಬ್ಯಾಕ್ಟೀರಿಯಾ ಮತ್ತು ವೈರಾಣು ಎರಡರ ವಿರುದ್ಧವೂ ಪ್ರತಿಕಾಯಗಳನ್ನು ಸ್ರವಿಸಿದರೆ, ಟಿ-ಕೋಶಗಳು ವೈರಾಣುಗಳ ಮೇಲೆ ಇರುವ ಪ್ರತಿಜನಕಗಳನ್ನು ಮಾತ್ರ ಗುರುತಿಸಿ ಅವುಗಳ ವಿರುದ್ಧ ಪ್ರತಿಕಾಯಗಳನ್ನು ಸ್ರವಿಸುತ್ತವೆ. ಈ ಕಾರ್ಯವಿಧಾನಗಳ ಜೊತೆಗೆ, ಇಂಟರ್ಫೆರಾನ್ಸ್ ಎಂಬ ಸಂದೇಶವಾಹಕ ಪ್ರೋಟೀನ್ ಅಣು ಇದ್ದು, ವೈರಲ್ ಸೋಂಕಿನ ವಿರುದ್ಧ ಹೋರಾಡುವಲ್ಲಿ ಇದು ಕೂಡ ಪ್ರಮುಖ ಪಾತ್ರ ವಹಿಸುತ್ತದೆ.

    ರೋಗನಿರೋಧಕ ಶಕ್ತಿಯ ಹೋರಾಟ ಇಷ್ಟಕ್ಕೇ ಸೀಮಿತವಾಗಿಲ್ಲ. ಒಂದು ಬ್ಯಾಕ್ಟೀರಿಯಾ ಅಥವಾ ವೈರಾಣುವಿನ ವಿರುದ್ಧ ಹೋರಾಡಲು ಆಯ್ಕೆಯಾದ ಬಿ-ಕೋಶ ಮತ್ತು ಟಿ-ಕೋಶಗಳು ಭವಿಷ್ಯದಲ್ಲಿ ಅದೇ ರೋಗಾಣುವನ್ನು ನೆನಪಿಟ್ಟುಕೊಳ್ಳಲು ಮೆಮೊರಿ ಕೋಶಗಳನ್ನೂ ಉತ್ಪತ್ತಿ ಮಾಡುತ್ತದೆ. ರಕ್ತದಲ್ಲಿ ಶೇಖರಣೆಯಾಗಿರುವ ಮೆಮೊರಿ ಕೋಶಗಳು ದೀರ್ಘಕಾಲದವರೆಗೆ ಇರುತ್ತವೆ. ಒಂದೊಮ್ಮೆ ಭವಿಷ್ಯದಲ್ಲಿ ಅದೇ ರೋಗಾಣುವಿನಿಂದ ಮತ್ತೊಮ್ಮೆ ಸೋಂಕು ಉಂಟಾದರೆ, ತಕ್ಷಣಕ್ಕೆ ಈ ಮೆಮೊರಿ ಕೋಶಗಳು ಪ್ರತಿಕಾಯಗಳನ್ನು ಉತ್ಪತ್ತಿ ಮಾಡಿ ತ್ವರಿತಗತಿಯಲ್ಲಿ ಅವುಗಳನ್ನು ಕೊಲ್ಲುತ್ತವೆ. ಎಷ್ಟು ವೇಗವಾಗಿ ಈ ಪ್ರಕ್ರಿಯೆ ನಡೆಯುತ್ತದೆ ಅಂದರೆ, ಸೋಂಕು ಉಂಟಾಗಿದ್ದರೂ ಗಮನಕ್ಕೆ ಬರುವುದಿಲ್ಲ. ಕೊಟ್ಲೆ, ನೀರುಕೊಟ್ಲೆ, ಚಿಕ್ಕಮ್ಮ, ಸೀತಾಳ ಸಿಡುಬು, ಅಮ್ಮ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುವ ಚಿಕನ್ಪಾಕ್ಸ್ ವೆರಿಸೆಲ್ಲಾ ಜೋಸ್ಟರ್ (Varicella zoster) ಎಂಬ ವೈರಾಣುವಿನಿಂದ ಹರಡುವ ಅಂಟುರೋಗವನ್ನು ಒಂದು ಉದಾಹರಣೆಯಾಗಿ ತೆಗೆದುಕೊಳ್ಳಬಹುದು.

    ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡುಬರುವ ಈ ಕಾಯಿಲೆಯು ಹೆಚ್ಚಿನ ಸಂದರ್ಭಗಳಲ್ಲಿ ಒಂದು ಸಲ ಉಂಟಾದರೆ ಮತ್ತೊಮ್ಮೆ ಜೀವನದಲ್ಲಿ ಆ ಕಾಯಿಲೆ ಆವರಿಸುವುದಿಲ್ಲ. ಏಕೆಂದರೆ, ಮೊದಲ ಸಲ ಸೋಂಕು ಉಂಟಾದಾಗಲೇ ಆ ವೈರಾಣುವಿನ ವಿರುದ್ಧ ಪ್ರತಿಕಾಯಗಳು ಮತ್ತು ಮೆಮೊರಿ ಕೋಶಗಳು ರಕ್ತದಲ್ಲಿ ಸದಾ ತಯಾರಾಗಿರುತ್ತವೆ.ಲಸಿಕೆಗಳ ಉತ್ಪಾದನೆ ಮತ್ತು ವ್ಯಾಕ್ಸಿನೇಷನ್ ಮಾಡುವ ಹಿಂದಿನ ತತ್ವ ಇದೇ ಆಗಿರುತ್ತದೆ. ಯಾವ ರೋಗಾಣುವಿನಿಂದ ಕಾಯಿಲೆ ಬರುತ್ತದೋ ಅವುಗಳನ್ನು ಮೊದಲೇ ದೇಹದೊಳಗೆ ಪರಿಚಯಿಸಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಪೂರ್ವ ತಯಾರಿ ಮಾಡಿಟ್ಟಿರುವುದು. ಒಂದೇ ವ್ಯತ್ಯಾಸ ಅಂದರೆ, ಇಲ್ಲಿ ಜೀವಂತ ರೋಗಾಣುಗಳ ಬದಲು ನಿಷ್ಕ್ರಿಯಗೊಳಿಸಿದ ರೋಗಾಣುವನ್ನು ದೇಹದೊಳಗೆ ತೂರಿಸುವುದು. ರೋಗಾಣುವನ್ನು ನಿಷ್ಕ್ರಿಯಗೊಳಿಸಿರುವುದರಿಂದ ಅವುಗಳು ದೇಹದಲ್ಲಿ ದ್ವಿಗುಣಗೊಳ್ಳಲು ಮತ್ತು ಕಾಯಿಲೆಯನ್ನು ಉಂಟುಮಾಡಲು ಸಾಧ್ಯವಿಲ್ಲ.

    ವ್ಯಾಕ್ಸಿನ್ ತಯಾರಿಕೆಗೆ ವಿವಿಧ ವಿಧಾನ

    ಆದರೆ, ರೋಗನಿರೋಧಕ ಶಕ್ತಿಯನ್ನು ಪ್ರಚೋದಿಸುವ ಅಂಶ (ಪ್ರತಿಜನಕ) ನಿಷ್ಕ್ರಿಯಗೊಳಿಸಿದ ರೋಗಾಣುವಿನಲ್ಲಿರುತ್ತದೆ. ಹಾಗಾಗಿ, ಮೇಲೆ ತಿಳಿಸಿರುವ ರೋಗನಿರೋಧಕ ಶಕ್ತಿಯನ್ನು ಪ್ರಚೋದಿಸಲು ಪ್ರಕ್ರಿಯೆಗಳು ನಡೆದು, ಅದರ ವಿರುದ್ಧ ಪ್ರತಿಕಾಯ ಮತ್ತು ಮೆಮೋರಿ ಕೋಶಗಳು ಸನ್ನದ್ಧವಾಗಿರುವಂತೆ ಮಾಡಲಾಗುತ್ತದೆ. ಇದು ಒಂದು ರೀತಿಯಲ್ಲಿ, ‘ಮುಂದೆ ಇತರಹದ ಶತ್ರುಗಳು ದೇಹವನ್ನು ಆಕ್ರಮಿಸಬಹುದು, ಯಾವುದಕ್ಕೂ ನೀನು ತಯಾರಾಗಿರು’ ಎಂದು ನಮ್ಮ ಪ್ರತಿರಕ್ಷಣಾ ಶಕ್ತಿಗೆ ಮನವರಿಕೆ ಮಾಡಿಕೊಟ್ಟಂತೆ. ಕೆಲವು ರಾಸಾಯನಿಕ, ಅತಿಯಾದ ಶಾಖ ಅಥವಾ ವಿಕಿರಣಕ್ಕೆ ತೆರೆದಿಟ್ಟು ರೋಗಾಣುಗಳನ್ನು ನಿಷ್ಕ್ರಿಯ/ ಕ್ಷೀಣಗೊಳಿಸಲಾಗುತ್ತದೆ. ಅಥವಾ ಅದರ ಮೇಲಿರುವ ಪ್ರೊಟೀನ್ / ಗ್ಲೈಕೋಪ್ರೋಟೀನ್ ಗಳನ್ನು ಮಾತ್ರ ಪ್ರತಿಜನಕಗಳಾಗಿ ವ್ಯಾಕ್ಸಿನ್ ಉತ್ಪಾದನೆಗೆ ಬಳಸಿಕೊಳ್ಳಬಹುದು. ರೋಗನಿರೋಧಕ ಶಕ್ತಿಯನ್ನು ಪ್ರಚೋದಿಸಲು ನಿರ್ಜಿವ ಅಥವಾ ನಿಷ್ಕ್ರಿಯಗೊಳಿಸದ ರೋಗಾಣುಗಳು ಅಥವಾ ಅವುಗಳಿಂದ ಪಡೆದ ಪ್ರತಿಜನಕಗಳನ್ನೇ ಲಸಿಕೆಗಳು (ವ್ಯಾಕ್ಸಿನ್) ಎಂದು ಕರೆಯಲಾಗುವುದು.

    ವ್ಯಾಕ್ಸಿನ್ ತಯಾರಿಕೆಗೆ ವಿವಿಧ ವಿಧಾನಗಳಿದ್ದು ಯಾವ ಕಾಯಿಲೆಗೆ ಯಾವ ವಿಧಾನದಲ್ಲಿ ತಯಾರಿಸಿದ ವ್ಯಾಕ್ಸಿನ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುವುದನ್ನು ಪ್ರಾಯೋಗಿಕ ಅಧ್ಯಯನದ ಮೂಲಕ ತಿಳಿಯಲಾಗುತ್ತದೆ. ಭವಿಷ್ಯದಲ್ಲಿ ಬರಬಹುದಾದ ಸಾಂಕ್ರಾಮಿಕ ಕಾಯಿಲೆಗಳಿಂದ ರಕ್ಷಿಸಲು ಲಸಿಕೆಗಳನ್ನು (ವಾಕ್ಸಿನ್ಸ್) ಬಾಯಿಯ ಮೂಲಕ ಅಥವಾ ಚುಚ್ಚುಮದ್ದು ನೀಡಿ ದೇಹಕ್ಕೆ ಪರಿಚಯಿಸುವುದನ್ನು ವ್ಯಾಕ್ಸಿನೇಷನ್ ಅಥವಾ ಇಮ್ಯುನೈಝೇಷನ್ ಎಂದು ಕರೆಯಲಾಗುತ್ತದೆ.

    ಪೋಲಿಯೊ, ಹೆಪಟೈಟಿಸ್ ಬಿ, ಡಿಫ್ತಿರಿಯಾ, ಟೆಟನಸ್, ರೋಟವೈರಸ್ 2, ದಡಾರ, ಮಂಪ್ಸ್ , ರುಬೆಲ್ಲಾ, ಹ್ಯೂಮನ್ ಪ್ಯಾಪಿಲೋಮ ವೈರಸ್ ಮುಂತಾದ ರೋಗಾಣುಗಳ ವಿರುದ್ಧ ಕಾಲಕಾಲಕ್ಕೆ ಬಾಲ್ಯದಲ್ಲಿ ನೀಡುವ ಲಸಿಕೆಗಳನ್ನು ಇವೇ ಸೂತ್ರದ ಆಧಾರದ ಮೇಲೆ ಉತ್ಪಾದಿಸಲಾಗುತ್ತವೆ. ಭವಿಷ್ಯದಲ್ಲಿ ಸೋಂಕು ಉಂಟಾದರೂ ಆ ರೋಗಾಣುಗಳಿಂದ ಕಾಯಿಲೆಗಳು ಉದ್ಭವವಾಗದಂತೆ ಲಸಿಕೆಗಳು ತಡೆಹಿಡಿಯುತ್ತವೆ. ಲಸಿಕೆಯ ಚುಚ್ಚುಮದ್ದನ್ನು ನೀಡಿದಾಗ ಆ ಸ್ಥಳದಲ್ಲಿ ಸ್ವಲ್ಪ ನೋವು, ಊದಿಕೊಳ್ಳುವುದು, ಕೆಂಪಾಗುವುದು, ಕೆಲವು ಬಾರಿ ಜ್ವರ, ಕಿರಿಕಿರಿ, ಅರೆನಿದ್ರಾವಸ್ಥೆ ಮತ್ತು ದದ್ದು ಸೇರಿದಂತೆ ಅಡ್ಡ ಪರಿಣಾಮಗಳು ಆಗಬಹುದು. ಅವುಗಳು ಹೈಪರ್-ಇಮ್ಯೂನ್ ರಿಯಾಕ್ಷನ್ ಅಥವಾ ಅಲರ್ಜಿ ಪ್ರತಿಕ್ರಿಯೆ ಆಗಿದ್ದು ತಾತ್ಕಾಲಿಕವಾಗಿರುತ್ತದೆ. ಆದರೆ ಲಸಿಕೆಗಳು ತುಂಬಾ ಶುದ್ಧವಾಗಿರಬೇಕು; ಯಾವುದೇ ಸೂಕ್ಷ್ಮಜೀವಿ ಅಥವಾ ಕಲ್ಮಶಗಳಿಂದ ಕಲುಷಿತಗೊಂಡಿರಬಾರದು. ಅಶುದ್ಧವಾಗಿದ್ದರೆ ಅದು ಅಪಾಯಕಾರಿಯಾಗುವ ಸಾಧ್ಯತೆ ಇದೆ.

    ವಿಶ್ವಾದ್ಯಂತ ಕೋವಿಡ್-೧೯ನಿಂದ ಆಗುತ್ತಿರುವ ಸಾವು-ನೋವುಗಳನ್ನು ಪರಿಗಣಿಸಿ ವೈದ್ಯಕೀಯ ತುರ್ತು ನೆಲೆಯಲ್ಲಿ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಸಂಶೋಧನೆಯು ತ್ವರಿತಗತಿಯಲ್ಲಿ ನಡೆಯುತ್ತಿದ್ದು 12-18 ತಿಂಗಳುಗಳಲ್ಲಿ ಯಶಸ್ವಿಗೊಳಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದು ಎಂದು ತಜ್ಞರು ಅಂದಾಜಿಸಿದ್ದಾರೆ.

    ಲಸಿಕೆಗಳ ಅಭಿವೃದ್ಧಿ ವೇಗ

    ಕೋವಿಡ್-19 ಗೆ ಔಷಧಿ ಮತ್ತು ಲಸಿಕೆಗಳನ್ನು ವೇಗವಾಗಿ ಅಭಿವೃದ್ಧಿಗೊಳಿಸಲು ಯು. ಎಸ್. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ (NIH) 18 ಕ್ಕೂ ಹೆಚ್ಚು ಔಷಧೀಯ ಕಂಪನಿಗಳೊಂದಿಗೆ ಸಹಭಾಗಿತ್ವವನ್ನು ಪಡೆದುಕೊಂಡಿದೆ. ಅನೇಕ ರಾಷ್ಟ್ರಗಳ ಫಾರ್ಮಸ್ಯುಟಿಕಲ್ ಕಂಪನಿಗಳು, ವಿಶ್ವವಿದ್ಯಾನಿಲಯಗಳು, ಸಂಶೋಧನಾ ಕೇಂದ್ರಗಳು ಕೋವಿಡ್-19 ತಡೆಹಿಡಿಯಲು ಈಗಾಗಲೇ ಸುಮಾರು 200 ಲಸಿಕೆಗಳನ್ನು ಉತ್ಪಾದಿಸಲಾಗಿದ್ದು ಪ್ರಾಯೋಗಿಕ ಹಂತದಲ್ಲಿವೆ.

    ಅವುಗಳಲ್ಲಿ ಕೆಲವು (AZD1222 SARS-CoV-2 Vaccine; Pfizer-BioNTech’s BNT162 SARS-CoV-2 Vaccine; ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದ SARS-CoV-2 Vaccine) ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗಳು ಸಕಾರಾತ್ಮಕ ಫಲಿತಾಂಶ ನೀಡಿದ್ದು, ಕ್ಲಿನಿಕಲ್ (ಹ್ಯೂಮನ್) ಟ್ರಯಲ್ಸ್ ಹಂತದಲ್ಲಿವೆ. ಕೊರೊನಾವೈರಸ್ (SARS-CoV-2 ) ವಿರುದ್ಧ ಲಸಿಕೆ ಅಭಿವೃದ್ಧಿಪಡಿಸುವ ಜಾಗತಿಕ ಓಟಕ್ಕೆ ಸೇರ್ಪಡೆಯಾಗಿರುವ ಭಾರತೀಯ ಸಂಶೋಧಕರು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐ.ಸಿ.ಎಂ.ಆರ್.), ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್.ಐ.ವಿ.) ಸಹಭಾಗಿತ್ವದಲ್ಲಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ಕೋವಾಕ್ಸಿನ್ (COVAXIN) ಎಂಬ ಹೆಸರಿನ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಕೋವಾಕ್ಸಿನ್ ಅನ್ನು ಈಗಾಗಲೇ ಪ್ರಾಣಿಗಳ ಮೇಲೆ ಯಶಸ್ವಿ ಅಧ್ಯಯನ ನಡೆಸಿ, 1,100 ಜನರ ಮೇಲೆ ಎರಡು ಹಂತಗಳಲ್ಲಿ ಪರೀಕ್ಷೆ ನಡೆಸಲು ಪ್ರಾರಂಭಿಸಲಾಗಿದೆ.

    ಅದೇ ರೀತಿ ಅಹಮದಾಬಾದ್ ಮೂಲದ ಝೆಡಸ್ ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್ ಸಂಸ್ಥೆಯು ಕೂಡ SARS-CoV-2 ವಿರುದ್ಧ ಲಸಿಕೆಯೊಂದನ್ನು ಉತ್ಪಾದಿಸಿದ್ದು ಕ್ಲಿನಿಕಲ್ ಟ್ರಯಲ್ ನಡೆಸಲು ಭಾರತ ಸರ್ಕಾರದ ಕೇಂದ್ರೀಯ ಔಷಧಿಗಳ ಪ್ರಮಾಣಿತ ನಿಯಂತ್ರಣ ಸಂಸ್ಥೆ ’ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)’ ಇದರಿಂದ ಒಪ್ಪಿಗೆಯನ್ನು ಪಡೆದುಕೊಂಡಿದೆ. ರಷ್ಯಾದ ಸೆವಿನೋವ್ ವಿಶ್ವವಿದ್ಯಾಲಯವು ಸಂಶೋಧಿಸಿದ ಕೋವಿಡ್ -19 ಲಸಿಕೆಯು ಕ್ಲಿನಿಕಲ್ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಶುಭ ಸುದ್ದಿ ಇದೀಗ ಸಂಚಲನ ಉಂಟುಮಾಡಿದೆ.

    ದೇಸಿ ಅಥವಾ ವಿದೇಶಿ, ಜಗತ್ತಿನಾದ್ಯಂತ ಪೆಡಂಭೂತವಾಗಿ ಕಾಡುತ್ತಿರುವ ಕರೋನವೈರಸ್ ಅನ್ನು ಕಟ್ಟಿಹಾಕಲು ಔಷಧಿ ಮತ್ತು ಲಸಿಕೆಗಳು ಪ್ರಾಯೋಗಿಕ ಪರೀಕ್ಷೆಗಳನ್ನು ಯಶಸ್ವಿಯಾಗಿ ತೇರ್ಗಡೆ ಹೊಂದಿ ಆದಷ್ಟು ಬೇಗನೇ ಜನರ ಸೇರಲಿವೆ ಎಂದು ಆಶಾವಾದಿಯಾಗಿರೋಣ. ಅಲ್ಲಿಯ ತನಕ ಕೋವಿಡ್ -19 ಮಹಾಮಾರಿಯ ವಿರುದ್ಧ ನಾವೆಲ್ಲರೂ ವಿಶೇಷ ಜಾಗೃತಿ ವಹಿಸಲೇಬೇಕು.

    ಇನ್ನು ಹೆಚ್ಚಿನ ಓದು : ಕೊರೋನಾ ವ್ಯಾಕ್ಸಿನ್ ತಯಾರಾಗಲು ಇನ್ನೆಷ್ಟು ಸಮಯ ಬೇಕು

    Photo by Miguel Á. Padriñán from Pexels

    ಡಾ. ಪ್ರಶಾಂತ ನಾಯ್ಕ
    ಡಾ. ಪ್ರಶಾಂತ ನಾಯ್ಕ
    ಅನೇಕರಾಷ್ಟ್ರೀಯಸಮ್ಮೇಳನ, ಕಾರ್ಯಗಾರ, ಪರಿಸರ ಸಂರಕ್ಷಣೆಯ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ. ಸಹ-ಸಂಯೋಜಕರಾಗಿ ಜನತಾ ಜೀವವೈವಿಧ್ಯ ದಾಖಲಾತಿಯನ್ನು ಮಾಡಿರುತ್ತಾರೆ. ಅನೇಕ ಸಂಶೋಧನಾ ಲೇಖನಗಳನ್ನು, ಪುಸ್ತಕಗಳನ್ನು ಪ್ರಕಟಿಸಿರುತ್ತಾರೆ. ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯ ಜೀವವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
    spot_img

    More articles

    25 COMMENTS

    1. ಕನ್ನಡ ಭಾಷೆಯ ಅತ್ಯುತ್ತಮ ಬಳಕೆ. ವ್ಯಾಕ್ಸಿನ್ ವೃತ್ತಾಂತ ಬಹಳ ಸಂಕೀರ್ಣ ವಿಚಾರ. ಆದರೆ ಎಚ್ಚರಿಕೆ ವಹಿಸಬೇಕಾದ್ದು ತೃತೀಯ ಮಾರುಕಟ್ಟೆಗಳ ಬಗ್ಗೆ. ವಂಚನೆಗಳ ಬಗ್ಗೆ! ಲಸಿಕೆ ಬಂದೇ ಬಿಟ್ಟಿದೆ ಎಂದು ಪ್ರತಿದಿನ ಭಿತ್ತರವಾಗುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ! ಉತ್ತಮ ಲೇಖನ.

    2. ಲೇಖಕರು ವ್ಯಾಕ್ಸಿನ್ ಬಗ್ಗೆ ತುಂಬಾ ವಿವರವಾಗಿ ಜನಸಾಮಾನ್ಯರಿಗೆ ಅತೀ ಸುಲಭವಾಗಿ ತಿಳಿಯುವ ಹಾಗೆ ಬರೆದಿದ್ದಾರೆ. ಧನ್ಯವಾದಗಳು ಮತ್ತು ಇನ್ನೂ ಹೆಚ್ಚಿನ ಲೇಖನಗಳು ಪ್ರಕಟಗೊಳ್ಳಲಿ‌.

    3. ಉಪಯುಕ್ತ ಮಾಹಿತಿ, ವಿಚಾರಗಳಿಂದ ಕೂಡಿದ ವಿವರಣಾತ್ಮಕ, ಸರಳವಾಗಿ ಅರ್ಥವಾಗುವಂತಹ ಲೇಖನ. ಧನ್ಯವಾದಗಳು ಪ್ರಶಾಂತ.

    4. ಎಲ್ಲಾ ಓದುಗರಿಗೆ ತಮ್ಮ ಅಮೂಲ್ಯವಾದ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು. ಲೇಖನದ ಎರಡನೇ ಭಾಗ ಶೀಘ್ರದಲ್ಲೇ ಬರಲಿದೆ.

    5. ಜೀವ ವಿಜ್ಞಾನದ ವಿಷಯವನ್ನು ಇಷ್ಟೊಂದು ಸುದೀರ್ಘವಾಗಿ ಕನ್ನಡದಲ್ಲಿ ಓದಿದ ಲೇಖನ ಇದಾಗಿ,ನನ್ನಲ್ಲಿ ದಾಖಲಾಗುತ್ತದೆ.ವಿಜ್ಞಾನವನ್ನು ಕನ್ನಡದಲ್ಲಿ ಬೋಧಿಸಬಹುದು ಅನ್ನುವುದಕ್ಕೆ ಉದಾಹರಣೆ.
      ಜೀವ ನಿರ್ವಹಣೆಗೆ,ಜೀವಿಗಳಲ್ಲಿ ನಿರ್ಮಾಣಗೊಂಡಿರುವ ವ್ಯೂಹಗಳ ರಚನೆಗಳನ್ನು ನೋಡಿ ಮೂಕನಾದೆ. ಪರಿಪೂರ್ಣ ಮಹಿತಿಯೊಂದಿಗೆ ಬಂದ ಜೀವವಿಜ್ಞಾನದ ಕನ್ನಡ ಲೇಖನಕ್ಕೆ ನನ್ನ ಅಭಿನಂದನೆಗಳು.

    6. Great information presented in a comprehensible manner. Approachable for even a high school student. 👌👌👌

    7. A Very Detailed information about Covid 19. Research happenings around the world. Author narration is fantabulous.

    8. ಓದುಗರಿಗೆ ಅರ್ಥವಾಗುವಂತೆ ಸರಳ ಕನ್ನಡ ಭಾಷೆಯಲ್ಲಿ ಲಸಿಕೆಯ ಬಗ್ಗೆ ವಿವರವಾಗಿ ಬರೆಯಲಾಗಿದೆ. ಅಭಿನಂದನೆಗಳು

    9. ತುಂಬಆ ಉಪಯುಕ್ತ ಮಾಹಿತಿ ಧನ್ಯವಾದಗಳು ಲೇಖಕರಿಗೆ

    10. The article gives insight into the development of vaccine to COVID-19. More than that, it gives a hope to general public about the developmants…

    11. ಲೇಖನ ಬಹಳ ವಿಸ್ತಾರವಾಗಿ ಮೂಡಿಬಂದಿದೆ ಹಾಗೂ ಓದಿದವರಿಗೆ ಎಲ್ಲವಿಷಯಗಳನ್ನು ಚೆನ್ನಾಗಿತಿಳಿಸಿ ಕೊಟ್ಟಿದ್ದಾರೆ. ಲೇಖಕರಿಗೆ ನನ್ನ ಧನ್ಯವಾದಗಳು.

    12. ಅಭಿನಂದನೆಗಳು… ಲೇಖಕರಿಗೆ.. ಸಾಹಿತಿ ಗಳಿಂದ ಹಿಡಿದು ಸಣ್ಣ ಮಕ್ಕಳ ವರೆಗೆ ಓದಲು ಸ್ಪಷ್ಟವಾಗಿ… ಬಲು ಸುಂದರವಾಗಿ.. ಅಚ್ಚುಕಟ್ಟಾಗಿ ಬರೆದಿದ್ದೀರಿ ಸರ್….. ನಿಮ್ಮ ಉತ್ತಮ ಜ್ಞಾನ ಭಂಡಾರಕ್ಕೆ ಅಭಿನಂದನೆಗಳು… ಇನ್ನಷ್ಟು.. ಮತ್ತಷ್ಟು ಲೇಖನಗಳು ಮೂಡಿ ಬರಲಿ ಎಂದು ಹೃದಯ ಪೂರ್ವಕ ವಾಗಿ ಅಭಿನಂದಿಸುತ್ತೇನೆ…..

    13. The topic covered here is much essential in this challenging period of pandemic Covid 19 , as many of us are just scared without having a proper knowledge about how human body is well equipped to fight against the bacteria.Your article does give us the courage & hope in this difficult time. Glad that science topic could also be covered in layman’s language.Many thanks for sharing your inputs with us.

    14. ಸಮಯೋಚಿತ ಬರಹ. ಸಂಕೀರ್ಣವೆನಿಸುವ ಜೀವವಿಜ್ಞಾನದ ವಿಷಯವೊಂದರ ಬಗ್ಗೆ ಸಾಮಾನ್ಯ ಓದುಗನಿಗೂ ತಿಳಿಯುವಂತೆ ಸರಳ ಮತ್ತು ಸ್ವಾರಸ್ಯಕರ ನಿರೂಪಣೆಯೊಂದಿಗೆ ಬರೆದಿದ್ದೀರಿ. ಈ ವಿಶಿಷ್ಟ ಲೇಖನವನ್ನು ಪ್ರಕಟಿಸಿದ ಜಾಲತಾಣದ ಸಂಪಾದಕರಿಗೆ ವಂದನೆಗಳು. ಲೇಖಕರಾದ ಡಾ. ಪ್ರಶಾಂತ್ ರವರಿಗೆ ಅಭಿನಂದನೆಗಳು.

      ಮುಂದಿನ ಕಂತಿನ ನಿರೀಕ್ಷೆಯಲ್ಲಿ,
      ಪ್ರಸಾದ್ ನಾಯ್ಕ್, ಗುರುಗ್ರಾಮ, ಹರಿಯಾಣ

    15. Nice article Dear Dr.Prashanth, you have written this article simple and interesting such that any common public can understand. My best wishes to you.

    16. ತುಂಬಾ ಮಾಹಿತಿ ಸಿಕ್ಕಿತು sir , ನಿಮ್ಮ ಅಪಾರ ಜ್ನಾನ ಎಲ್ಲೆಡೆಯೂ ಪಸರಿಸಲಿ

    17. ಕೋವಿಡ್-19 ಮಹಾ ಮಾರಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ವ್ಯಾಕ್ಸೀನ್ ಹಾಗೂ ಔಷಧಿಗಳನ್ನು ಕಂಡುಹಿಡಿಯಲು ಯಾವ ದಿಸೆಯಲ್ಲಿ ಪ್ರಯತ್ನಗಳು ಜಾಗತಿಕ ಮಟ್ಟದಲ್ಲಿ ನಡೆಯುತ್ತಿದೆ ಎಂಬುದರ ಬಗ್ಗೆ ಮಾಹಿತಿಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಕನ್ನಡದಲ್ಲಿ ಸಮಯೋಚಿತವಾಗಿ ವಿವರಿಸಿದ ಡಾ|| ಪ್ರಶಾಂತ ನಾಯ್ಕ್ ರಿಗೆ ಧನ್ಯವಾದಗಳು.

    18. ದೇಹದ ರಕ್ಷಣಾ ವ್ಯವಸ್ಥೆಯ ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ. ವ್ಯಾಕ್ಸೀನ್ ಗಳು ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ ಎಂಬುದರ ಬಗ್ಗೆಯೂ ಚೆನ್ನಾಗಿ ತಿಳಿಸಿಕೊಟ್ಟಿದ್ದಿರಿ. ಉತ್ತಮ ಸಮಯೋಚಿತ ಲೇಖನ

    LEAVE A REPLY

    Please enter your comment!
    Please enter your name here

    Latest article

    error: Content is protected !!