26 C
Karnataka
Thursday, November 21, 2024

    ಕೋವಿಡ್-19 : ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ?

    Must read

    ಈ ಹಿಂದಿನ ‘ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ತಂತ್ರವೇ ವ್ಯಾಕ್ಸಿನ್..!’ ಲೇಖನದಲ್ಲಿ ಕೋವಿಡ್-19 ವಿರುದ್ಧ ಅಭಿವೃದ್ಧಿ ಪಡಿಸುತ್ತಿರುವ ಲಸಿಕೆಗಳು ಹಾಗೂ ಅದರ ಹಿಂದಿರುವ ಸೂತ್ರ, ಕಾರ್ಯವಿಧಾನ, ಪ್ರಾಯೋಗಿಕ ಫಲಿತಾಂಶಗಳ ಕುರಿತು ಒಂದು ಅವಲೋಕನ ಮಾಡಿದ್ದೆವು. ಅದರ ಮುಂದಿನ ಭಾಗವಾಗಿ ರೋಗನಿರೋಧಕ ಶಕ್ತಿಯ ಮಹತ್ವ, ಅದನ್ನು ಹೆಚ್ಚಿಸುವ ವಿಧಾನಗಳು, ಲಸಿಕೆಯ ಹಿನ್ನೆಲೆ,ಹೊಸ ಉತ್ಪನ್ನಗಳ ಕ್ಲಿನಿಕಲ್ ಟ್ರಯಲ್ಸ್ ನಡೆಸುವ ಕುರಿತು ಒಂದು ಕಿರುಚಿತ್ರಣ.

    ಹೊಸ ತಳಿಯ ಕೊರೊನಾವೈರಸ್ ವಕ್ಕರಿಸಿದ ನಂತರ ಪತ್ರಿಕೆ, ರೇಡಿಯೋ, ಜಾಲತಾಣ, ದೃಶ್ಯ ಮಾಧ್ಯಮ, ಸಾಮಾಜಿಕ ಮಾಧ್ಯಮಗಳಲ್ಲಿ ಇಮ್ಮ್ಯೂನಿಟಿ (ರೋಗನಿರೋಧಕ ಶಕ್ತಿ) ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ಹರಿದುಬರುತ್ತಿವೆ. ಪ್ರಬಲವಾದ ಇಮ್ಯುನಿಟಿ ಇದ್ದರೆ ಕೋವಿಡ್-19 ಅನ್ನು ಹಿಮ್ಮೆಟಿಸಬಹುದು ಎಂದು ಜನರಲ್ಲಿ ನಂಬಿಕೆ ಮೂಡಿಸಿದೆ. ನಮ್ಮ ರೋಗನಿರೋಧಕ ಶಕ್ತಿಯ ಮಹತ್ವದ ಬಗ್ಗೆ ಸರಳವಾಗಿ ಅರ್ಥ ಮಾಡಿಕೊಳ್ಳಲು ಏಡ್ಸ್ ಮೇಲೆ ಒಂದು ಪಕ್ಷಿ ನೋಟವನ್ನು ಬೀರಬೇಕು.

    ಏಡ್ಸ್ ಕೂಡ ಕೋವಿಡ್-19 ತರಹ ಆರ್.ಎನ್.ಎ. ವೈರಸ್‌ ಸೋಂಕಿನಿಂದ ಉಂಟಾಗುವ ಕಾಯಿಲೆ. ಏಡ್ಸ್ (AIDS) ಇದರ ವಿಸ್ತೃತ ರೂಪ ಅಕ್ವೈರ್ಡ್ ಇಮ್ಯುನೊ-ಡಿಫಿಷಿಯನ್ಸಿ ಸಿಂಡ್ರೋಮ್ (Acquired Immunodeficiency Syndrome). ಏಡ್ಸ್ ಪೀಡಿತ ವ್ಯಕ್ತಿಯನ್ನು ಹಿಂಡಿ ಹಿಪ್ಪಿ ಮಾಡುವ ರೋಗಾಣುವಿನ ಹೆಸರು, ಹ್ಯುಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ ; ಸಂಕ್ಷಿಪ್ತವಾಗಿ, ಎಚ್ಐವಿ (HIV). ಈ ವೈರಸ್ ವಿಶೇಷತೆಯೇನೆಂದರೆ ದೇಹದ ರೋಗನಿರೋಧಕ ಶಕ್ತಿಯನ್ನು ನಾಶಪಡಿಸುತ್ತದೆ. ಕೊರೊನಾವೈರಸ್ ಮುಖ್ಯವಾಗಿ ಶ್ವಾಸಕೋಶದ ಅಲ್ವಿಯೋಲಾರ್ ಕೋಶಗಳಿಗೆ ಸೋಂಕು ತಗುಲಿದರೆ, ಎಚ್ಐವಿ ರೋಗಾಣುಗಳನ್ನು ಹೊಡೆದೋಡಿಸುವಲ್ಲಿ ಬಹುಮುಖ್ಯ ಕಾರ್ಯ ನಿರ್ವಹಿಸುವ ‘ಸಿಡಿ4 ಟಿ-ಲಿಂಫೋಸೈಟ್ಸ್’ ಎಂಬ ಕೋಶಗಳನ್ನು ಆಕ್ರಮಿಸಿ ರೋಗನಿರೋಧಕ ಶಕ್ತಿಯನ್ನೇ ಹಾನಿಗೊಳಿಸುತ್ತದೆ.

    ಪ್ರತಿರಕ್ಷಣಾ ವ್ಯವಸ್ಥೆಯೇ ಕುಸಿದು ಬಿದ್ದಾಗ ಏನಾಗುತ್ತದೆ..?

    ರೋಗಾಣುಗಳಿಂದ ದೇಹವನ್ನು ಕಾಪಾಡುವ ಪ್ರತಿರಕ್ಷಣಾ ವ್ಯವಸ್ಥೆಯೇ ಕುಸಿದು ಬಿದ್ದಾಗ ಏನಾಗುತ್ತದೆ..? ಸಿಕ್ಕಿದ್ದೆ ಅವಕಾಶವೆಂದು ದೇಹವನ್ನು ಆಕ್ರಮಿಸುವ ಎಲ್ಲಾ ರೋಗಾಣುಗಳು ತಾಮುಂದು ನಾಮುಂದು ಎಂದು ಕಾಯಿಲೆಗಳು ಏಡ್ಸ್ ರೋಗಿಯನ್ನು ಆವರಿಸುತ್ತವೆ. ಎಷ್ಟೇ ಪ್ರಭಾವಶಾಲಿ ಔಷಧಿಗಳಿದ್ದರೂ ಕಾಯಿಲೆಗಳನ್ನು ಗುಣಪಡಿಸುವಲ್ಲಿ ರಕ್ಷಣಾವ್ಯೂಹದ ಪಾತ್ರವೇ ಪ್ರಾಥಮಿಕವಾದದ್ದು. ದೇಹವನ್ನು ಆಕ್ರಮಿಸುವ ರೋಗಾಣುಗಳೆಂಬ ಶತ್ರುಗಳ ವಿರುದ್ಧ ಚಕ್ರವ್ಯೂಹದಂತೆ ಭದ್ರಕೋಟೆಯಾಗಿ ಈ ರಕ್ಷಣಾವ್ಯೂಹ ನಮ್ಮನ್ನು ಸದಾ ರಕ್ಷಿಸುತ್ತದೆ. ಇಷ್ಟು ಪ್ರಬಲವಾದ ಭದ್ರಕೋಟೆ ಇರುವಾಗಲೂ ಮತ್ತೇಕೆ ಆಗೊಮ್ಮೆ ಈಗೊಮ್ಮೆ ಶೀತ, ನೆಗಡಿ, ಚಿಕುನ್‌ಗುನ್ಯಾ, ಡೆಂಗ್ಯೂ, ಡಿಫ್ತಿರಿಯಾ, ಕಾಲರ ಮುಂತಾದ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವುದು? ಏಕೆಂದರೆ, ಎಲ್ಲದಕ್ಕೂ ಒಂದು ಮಿತಿ ಎಂಬುದಿದೆ.

    ಇದನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ನೀವೊಬ್ಬ ಪೈಲ್ವಾನ್ ದಿಟ್ಟುಕೊಳ್ಳಿ; ನಿಮ್ಮ ಸಾಮರ್ಥ್ಯಕ್ಕೆ ಒಮ್ಮೆಲೆ ಐದು ಜನರಿಗೆ ಹೊಡೆದು ಸೋಲಿಸಬಹುದು. ಆದರೆ ಒಟ್ಟಿಗೆ ಐವತ್ತು ಜನರು ಕುಸ್ತಿಗೆ ಬಂದರೆ ಹೊಡೆದುರುಳಿಸಲು ಸಾಧ್ಯವಿದೆಯೇ..? ಸಿನಿಮಾದಲ್ಲಿ ಒಟ್ಟಿಗೆ ಐವತ್ತಲ್ಲ, ನೂರು ದಾಂಡಿಗರು ಧುಮುಕಿದರು, ‘ಹೀರೋಗಳು’ ಗುರುತ್ವಾಕರ್ಷಣೆ ನಿಯಮಕ್ಕೆ ವಿರುದ್ಧವಾಗಿ ಗಾಳಿಯಲ್ಲಿ ಸೆಣಸಾಡಿ ಒಬ್ಬಂಟಿಯಾಗಿ ಸದೆಬಡಿಯುತ್ತಾರೆ; ಅದೆಲ್ಲ ಫ್ಯಾಂಟಸಿಗೆ ಮಾತ್ರ ಸೀಮಿತ.

    ರೋಗಾಣು ಮತ್ತು ಪ್ರತಿರಕ್ಷಣಾ ಶಕ್ತಿಯ ನಡುವಿನ ಹೋರಾಟ

    ಮಾನವನ ದೇಹದಲ್ಲಿ ಲಕ್ಷಾಂತರ ಸೂಕ್ಷ್ಮಜೀವಿಗಳು ವಾಸವಾಗಿರುತ್ತವೆ ಎಂಬುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ..! ಆದರೆ ಅವುಗಳೆಲ್ಲವೂ ರೋಗಗಳನ್ನು ಉಂಟುಮಾಡುವುದಿಲ್ಲ. ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ, ಸ್ಪರ್ಶಿಸುವ ವಸ್ತುಗಳಲ್ಲಿ ಸ್ವಲ್ಪಮಟ್ಟಿನ ಕಣ್ಣಿಗೆ ಕಾಣದ ರೋಗಾಣುಗಳು ಇದ್ದೇ ಇರುತ್ತವೆ. ಪ್ರತಿ ದಿನ ಪ್ರತಿ ಕ್ಷಣವೂ, ಕಲುಷಿತಗೊಂಡಿರುವ ಗಾಳಿ,ನೀರು, ಆಹಾರ, ಸ್ಪರ್ಶಿಸುವ ವಸ್ತು ಅಥವಾ ನಮ್ಮ ಕೈಗಳಿಂದಲೇ ಸೂಕ್ಷ್ಮಜೀವಿಗಳು ದೇಹವನ್ನು ಪ್ರವೇಶಿಸುತ್ತಿದ್ದಂತೆ, ನಮ್ಮಲ್ಲಿರುವ ರಕ್ಷಣಾವ್ಯೂಹ ಅವುಗಳಿಂದ ಯಾವುದೇ ರೋಗ ತಟ್ಟದಂತೆ ನಿರಂತರವಾಗಿ ಕಾಪಾಡುತ್ತಿರುತ್ತದೆ. ಆದ್ದರಿಂದಲೇ ಈ ರಕ್ಷಣಾವ್ಯೂಹವನ್ನು
    ರೋಗನಿರೋಧಕ ಶಕ್ತಿ ಅಥವಾ ಪ್ರತಿರಕ್ಷಣಾ ವ್ಯವಸ್ಥೆ ಅಂತಲೂ ಹೆಸರಿಸಲಾಗಿದೆ.

    ಕುಡಿಯುವ ನೀರಿನಲ್ಲಿ ಹತ್ತರಷ್ಟು, ಬೇಡ ಇಪ್ಪತ್ತರಷ್ಟು ಸೂಕ್ಷ್ಮಜೀವಿಗಳು ಇವೆ ಅಂತಿಟ್ಟುಕೊಳ್ಳೋಣ. ರೋಗನಿರೋಧಕ ಶಕ್ತಿ ಆ ಇಪ್ಪತ್ತರಷ್ಟು ಸೂಕ್ಷ್ಮಜೀವಿಗಳನ್ನು ಕೊಲ್ಲುವ ಸಾಮರ್ಥ್ಯ ಹೊಂದಿರುತ್ತದೆ. ಒಂದೊಮ್ಮೆ ತುಂಬಾ ಕಲುಷಿತಗೊಂಡಿರುವ ನೀರನ್ನು ಕುಡಿದರೆ, ಅಂದರೆ ಅದರಲ್ಲಿ 20ಕ್ಕಿಂತಲೂ ಜಾಸ್ತಿ ಪ್ರಮಾಣದಲ್ಲಿ ರೋಗಾಣುಗಳು ಇದ್ದರೆ, ನಮ್ಮ ರಕ್ಷಣಾವ್ಯೂಹ ಅವುಗಳಿಗೆ ಶರಣಾಗಬಹುದು, ಶರಣಾಗಿ ಕಾಯಿಲೆಗೆ ನಾಂದಿ ಹಾಡಬಹುದು. ಸೂಕ್ಷ್ಮಜೀವಿಗಳು ವೇಗವಾಗಿ ವಂಶಾಭಿವೃದ್ಧಿ ಮಾಡುವುದರಿಂದ, ಅವುಗಳ ಸಂಖ್ಯೆಯನ್ನು ಹತೋಟಿಗೆ ತರಲು ಪ್ರತಿರಕ್ಷಣಾ ವ್ಯವಸ್ಥೆಯ ಸಾಮರ್ಥ್ಯವು ಸಾಕಾಗದೆ ಇರಬಹುದು. ಒಂದು ಕಡೆಯಲ್ಲಿ, ಪ್ರತಿರಕ್ಷಣಾ ವ್ಯವಸ್ಥೆಯು ನೂರಾರು ರೋಗಾಣುಗಳನ್ನು ನಾಶಪಡಿಸುತ್ತಿದ್ದರೆ, ಇನ್ನೊಂದು ಕಡೆಯಿಂದ ಅವುಗಳ ಪುನರುತ್ಪಾದನೆ ವೇಗವಾಗಿ ಆಗುತ್ತಿರುತ್ತದೆ. ರೋಗನಿರೋಧಕ ಶಕ್ತಿ ಮತ್ತು ರೋಗಾಣುಗಳ ನಡುವಿನ ಹೋರಾಟದಲ್ಲಿ, ಪ್ರತಿರಕ್ಷಣಾ ವ್ಯವಸ್ಥೆಯು ಕೆಲವು ಬಾರಿ ವಿಫಲವಾಗಬಹುದು. ಕ್ರಮೇಣ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ.

    ಇಂತಹ ಸಮಯದಲ್ಲೇ ನಾವು ವೈದ್ಯರನ್ನು ಭೇಟಿಯಾಗಿ ಆಂಟಿಬಯೋಟಿಕ್ (ಬ್ಯಾಕ್ಟೀರಿಯಾಗಳನ್ನು ಕೊಲ್ಲಲು), ಆಂಟಿವೈರಲ್ (ವೈರಾಣುಗಳನ್ನು ಕೊಲ್ಲಲು) ಔಷಧಿಗಳಿಗೆ ಮೊರೆ ಹೋಗುವುದು. ಈ ಔಷಧಗಳು ರೋಗಕಾರಕ ಸೂಕ್ಷ್ಮಾಜೀವಿಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಕೊಲ್ಲುತ್ತವೆ. ಆ ಮೂಲಕ ನಾವು ರೋಗಲಕ್ಷಣಗಳಿಂದ ಬಚಾವ್ ಆಗುತ್ತೇವೆ. ಆದರೆ ರೋಗಲಕ್ಷಣಗಳು ನಿಂತಿದ್ದರೂ ಕೆಲವು ರೋಗಾಣುಗಳು ದೇಹದಲ್ಲಿ ಅಡಗಿರುತ್ತವೆ.ವೈದ್ಯರು ಬರೆದುಕೊಟ್ಟ ಕೋರ್ಸನ್ನು ಸಂಪೂರ್ಣಗೊಳಿಸದೆ ಔಷಧಿ ತೆಗೆದುಕೊಳ್ಳುವುದನ್ನು ಅರ್ಧಕ್ಕೆ ನಿಲ್ಲಿಸಿದರೆ ಉಳಿದಿರುವ
    ರೋಗಾಣುಗಳು ಅವೇ ಔಷಧಿಗಳ ವಿರುದ್ಧ ಪ್ರತಿರೋಧವನ್ನು ಬೆಳೆಸಿ ಮುಂದೆ ಇನ್ನೂ ಮಾರಕವಾಗಬಹುದು; ಹಾಗೂ ಚಿಕಿತ್ಸೆಯ ಅವಧಿಯಲ್ಲಿ ಅದೇ ರೋಗಾಣುವಿನಿಂದ ಮರು-ಸೋಂಕು ಆಗಬಹುದು; ಈ ಎರಡು ಕಾರಣಕ್ಕಾಗಿ ಸೋಂಕು ಉಂಟಾದಾಗ ಔಷಧಿಗಳನ್ನು ಕೆಲವು ದಿನಗಳ ಅವಧಿಗೆ ಒಂದು ಕೋರ್ಸ್ ಆಗಿ ನೀಡಲಾಗುತ್ತದೆ.

    ಅಂದಹಾಗೆ, ರೋಗನಿರೋಧಕ ಶಕ್ತಿಯ ಸಾಮರ್ಥ್ಯ ಎಲ್ಲರಲ್ಲಿಯೂ ಒಂದೇ ತೆರನಾಗಿರುವುದಿಲ್ಲ; ಕೆಲವರಲ್ಲಿ ಪ್ರಬಲವಾಗಿರಬಹುದು, ಇನ್ನು ಕೆಲವರಲ್ಲಿ ಸ್ವಲ್ಪ ದುರ್ಬಲ ಇರಬಹುದು, ಮತ್ತೆ ಕೆಲವರಲ್ಲಿ ತುಂಬಾ ದುರ್ಬಲವಾಗಿರಬಹುದು. ಅದು ಅವರವರ ದೇಹಪ್ರಕೃತಿ, ಆಹಾರ ಪದ್ಧತಿ, ವಯಸ್ಸು, ಶೈಶವಾವಸ್ಥೆಯಲ್ಲಿ ಪಡೆದ ತಾಯಿ ಎದೆ ಹಾಲಿನ ಪ್ರಮಾಣ, ಒಳ್ಳೆಯ ಅಭ್ಯಾಸಗಳು (ವ್ಯಾಯಾಮ, ಯೋಗಾಭ್ಯಾಸ), ದುಶ್ಚಟಗಳು (ಧೂಮಪಾನ, ಮಧ್ಯಪಾನ, ಗುಟ್ಕಾ ತಂಬಾಕು, ಮಾದಕ ವಸ್ತುಗಳ ಸೇವನೆ) ಇನ್ನಿತರ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.

    ಉತ್ತಮ ಅಭ್ಯಾಸಗಳು ಆರೋಗ್ಯಕ್ಕೆ ಪೂರಕವಾಗಿದ್ದರೆ ದುರಾಭ್ಯಾಸಗಳು ಪ್ರತಿರಕ್ಷಣಾ ವ್ಯವಸ್ಥೆಯ ಶಕ್ತಿಯನ್ನೂ ಕುಂದಿಸುವುದರಿಂದ ಅನಾರೋಗ್ಯಕ್ಕೆ ದಾರಿಯಾಗಿವೆ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ. ಇತ್ತೀಚಿನ
    ಸಂಶೋಧನೆಯ ಪ್ರಕಾರ, ನಿದ್ರಾಹೀನತೆ, ಮಾನಸಿಕ ಒತ್ತಡ, ಆತಂಕ, ಸಹ ರಕ್ಷಣಾವ್ಯೂಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂಬುದು
    ತಿಳಿದುಬಂದಿದೆ.

    ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಮಾರ್ಗಗಳು:

    ಧೂಮಪಾನ, ಮದ್ಯಪಾನ ಮುಂತಾದ ದುಶ್ಚಟಗಳನ್ನು ತ್ಯಜಿಸುವುದು ಅಥವಾ ಮಿತಗೊಳಿಸುವುದು, ನಿಯಮಿತವಾಗಿ ವ್ಯಾಯಾಮ/ಯೋಗಾಸನ/ಧ್ಯಾನ ಮಾಡುವುದು, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು, ಸಾಕಷ್ಟು ನಿದ್ರೆ ಮಾಡುವುದು (7-8 ಗಂಟೆ), ಒತ್ತಡವನ್ನು ಕಡಿಮೆಗೊಳಿಸುವುದು, ಮೈ, ಕೈ, ಬಾಯಿಯನ್ನು ಸದಾ ಸ್ವಚ್ಛವಾಗಿ ಇಟ್ಟುಕೊಳ್ಳುವುದು, ಇಂತಹ ಸರಳ ಜೀವನಶೈಲಿಯ ಶಿಸ್ತನ್ನು ಪಾಲಿಸಿದರೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ವರ್ಧಿಸಬಹುದು.

    ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲವು ಆಹಾರ ಪದಾರ್ಥಗಳು ಹೀಗಿವೆ: ಕಪ್ಪುದ್ರಾಕ್ಷಿ (ಆಂಥೋಸಯಾನಿನ್ ಎಂಬ ಫ್ಲೇವನಾಯ್ಡ್‌ನ ಸಮೃದ್ಧವಾಗಿದೆ; ಸಂಶೋಧನೆಯ ಪ್ರಕಾರ ಫ್ಲೇವನಾಯ್ಡ್‌ ಗಳು ಶ್ವಾಸಕೋಶಗಳ ಪ್ರತಿರಕ್ಷಣಾ ರಕ್ಷಣಾ ವ್ಯವಸ್ಥೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ). ಅರಿಶಿನ (ಕರ್ಕ್ಯುಮಿನ್ ಅಂಶ ಇದ್ದು, ಇದು ಉತ್ತಮ
    ಆಂಟಿಆಕ್ಸಿಡೆಂಡ್ ಮತ್ತು ಉರಿಯೂತ- ನಿರೋಧಕ ಗುಣಗಳನ್ನು ಹೊಂದಿದೆ), ಗೆಣಸು ( ವಿಟಮಿನ್ ಎ ಯ ಮೂಲವಾಗಿರುವ ಬೀಟಾ ಕ್ಯಾರೋಟಿನ್ ಸಮೃದ್ಧವಾಗಿದೆ), ಪಾಲಕ್ (ಫ್ಲೇವನಾಯ್ಡ್ ಗಳು ಕ್ಯಾರೊಟಿನಾಯ್ಡ್ ಗಳು, ವಿಟಮಿನ್ ಸಿ, ವಿಟಮಿನ್ ಇ ಹೇರಳವಾಗಿದೆ). ಶುಂಠಿ (ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ), ಬೆಳ್ಳುಳ್ಳಿ (ಆಲಿಸಿನ್ ಅಂಶ ಹೊಂದಿದ್ದು ಶೀತ ಬರುವ ಅಪಾಯವನ್ನು ಕಡಿಮೆ ಮಾಡುತ್ತದೆ). ಗ್ರೀನ್ ಟೀ (ಅಲ್ಪ ಪ್ರಮಾಣದ ಕೆಫೀನ್ ಇದ್ದು ಚಹಾ ಅಥವಾ ಕಾಫಿಗೆ ಪರ್ಯಾಯವಾಗಿ ಕುಡಿಯಬಹುದು), ಸೂರ್ಯಕಾಂತಿ ಬೀಜಗಳು (ವಿಟಮಿನ್ ಇ ಜೊತೆಗೆ ಮ್ಯಾಂಗನೀಸ್, ಮೆಗ್ನೀಸಿಯಮ್
    ಮತ್ತು ಫೈಬರ್ ಕೂಡ ಸಾಕಷ್ಟು ಇವೆ). ಕಿತ್ತಳೆ, ಕಿವಿಫ್ರೂಟ್ (ವಿಟಮಿನ್ ಸಿ ಸಮೃದ್ಧವಾಗಿದೆ). ಎಣ್ಣೆಯುಕ್ತ ಮೀನುಗಳು (ಸಾಲ್ಮನ್/ಭೂತಾಯಿ, ಟ್ಯೂನ, ಪಿಲ್‌ಚಾರ್ಡ್ಸ್ ಮತ್ತು ಇತರ ಒಮೆಗಾ -3 ಕೊಬ್ಬಿನಾಮ್ಲಗಳ ಸಮೃದ್ಧ ಮೂಲವಾಗಿದೆ.) ಪೇರಳೆ,ನೆಲ್ಲಿಕಾಯಿ, ದಾಳಿಂಬೆ, ಹರಿವೆ ಇತರ ಹಸಿರು ತರಕಾರಿಗಳು, ಹಣ್ಣು ಹಂಪಲುಗಳು (ವಿಟಮಿನ್, ಫ್ಲವನೋಯ್ಡ್ಸ್ ಮುಂತಾದ ಪೋಷಕಾಶಗಳಿಂದ ಹೇರಳವಾಗಿವೆ. ಇಂತಹ ಆಹಾರಗಳನ್ನು ನಮ್ಮ ದೈನಂದಿನ ಆಹಾರದಲ್ಲಿ ನಿಯಮಿತವಾಗಿ ಬಳಸಿಕೊಂಡರೆ
    ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಬಹುದು.

    ರೋಗನಿರೋಧಕ ಶಾಸ್ತ್ರದ ಪಿತಾಮಹರು

    ಇದೀಗ ವಿಶ್ವಾದ್ಯಂತ ಹೆಮ್ಮಾರಿಯಂತೆ ಕಾಡುತ್ತಿರುವ ಕೋವಿಡ್-19 ತರಹವೇ, 19-20 ಶತಮಾನದಲ್ಲಿ ಲಕ್ಷಾಂತರ ಜನರ ಬಲಿತೆಗೆದುಕೊಂಡ ಒಂದು ಮಾರಣಾಂತಿಕ ಸಾಂಕ್ರಾಮಿಕ ಕಾಯಿಲೆ ಸಿಡುಬು. ಇದು ಕೂಡ ಕೋವಿಡ್-೧೯ ಅಂತೆ ಒಂದು ವೈರಸ್ (ವೇರಿಯೊಲಾ ಮೇಜರ್ ಮತ್ತು ವೇರಿಯೊಲಾ ಮೈನರ್) ಸೋಂಕಿನಿಂದ ಉಂಟಾಗುವ ಕಾಯಿಲೆ. ಸೋಂಕಿತ ವಯಸ್ಕರಲ್ಲಿ 20-60% ಮತ್ತು ಸೋಂಕಿತ ಮಕ್ಕಳಲ್ಲಿ 80% ಕ್ಕಿಂತ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ ಈ ವೈರಸ್ ವಿರುದ್ಧ ಕೊನೆಗೂ ಒಂದು ಅಸ್ತ್ರವನ್ನು ಅಭಿವೃದ್ಧಿಪಡಿಸಿ, ಅಂತಿಮವಾಗಿ 1977 ರಲ್ಲಿ ಸಿಡುಬು ನಿರ್ಮೂಲನೆಗೊಳಿಸಲಾಯಿತು.

    ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು.ಎಚ್.‌ಒ) 1980 ರಲ್ಲಿ ರೋಗವನ್ನು ಜಾಗತಿಕವಾಗಿ ನಿರ್ಮೂಲನೆ ಮಾಡಲಾಗಿದೆ ಎಂದು ಘೋಷಿಸಿತು. ಸಿಡುಬು ಎಂಬ ಮಹಾಮಾರಿಯನ್ನು ನಿರ್ಮೂಲನೆ ಮಾಡಿದ ಆ ಅಸ್ತ್ರವೇ ವ್ಯಾಕ್ಸಿನ್. ದೇಹದ ರೋಗ ನಿರೋಧಕ ಶಕ್ತಿಯ ಬಗ್ಗೆ ಬಹಳ ಹಿಂದಿನಿಂದಲೂ ಜನರಿಗೆ ಸ್ವಲ್ಪ ತಿಳಿವು ಇದ್ದಿದ್ದರೂ, 1798 ರಲ್ಲಿ ಅದಕ್ಕೆ ಒಂದು ವೈಜ್ಜಾನಿಕ ರೂಪು ನೀಡಿ ಲಸಿಕೆ ಎಂಬ ಪರಿಕಲ್ಪನೆ ಜಗತ್ತಿಗೆ ನೀಡಿದ ಅನೇಕ ವಿಜ್ಞಾನಿಗಳಲ್ಲಿ ಪ್ರಮುಖರು ಎಡ್ವರ್ಡ್ ಜೆನ್ನರ್ (1749 –1823). ಮುಂದೆ, ಸಂಶೋಧನೆಯ ಮೂಲಕ ಅದಕ್ಕೆ ಇನ್ನಷ್ಟು ಹೊಳಪು ನೀಡಿದ್ದು ಲೂಯಿಸ್ ಪಾಶ್ಚರ್ (1822 –1895).

    ಆದ್ದರಿಂದ ಎಡ್ವರ್ಡ್ ಜೆನ್ನರ್ ಅವರನ್ನು ರೋಗನಿರೋಧಕ ಶಾಸ್ತ್ರದ ಪಿತಾಮಹ (Father of Immunology) ಎಂದು ಮತ್ತು ಲೂಯಿಸ್
    ಪಾಶ್ಚರ್ ಅವರನ್ನು ಆಧುನಿಕ ರೋಗನಿರೋಧಕ ಶಾಸ್ತ್ರದ ಪಿತಾಮಹ (Father of Modern Immunology) ಎಂಬ ಮನ್ನಣೆ
    ನೀಡಲಾಗಿದೆ. ಈ ಇಬ್ಬರು ಮಹಾನ್ ವಿಜ್ಞಾನಿಗಳ ಸಾಧನೆ, ಸಂಶೋಧನೆಗಳ ಸಾಕ್ಷ್ಯಚಿತ್ರವನ್ನು ವೀಕ್ಷಿಸಲು, ಆಸಕ್ತರು ಇಲ್ಲಿ ನೀಡಿರುವ
    ಯು-ಟ್ಯೂಬ್ ಚಾನೆಲ್‌ಗಳಿಗೆ ಕ್ಲಿಕ್ ಮಾಡಬಹುದು.

    ಹೊಸ ಉತ್ಪನ್ನಗಳಿಗೆ ಅನುಮತಿಯ ರೂಪುರೇಷೆ
    ಹೊಸ ಔಷಧಿ ಮತ್ತು ಲಸಿಕೆಗಳ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯನ್ನು ಪ್ರಯೋಗಶಾಲೆಯಲ್ಲಿ ಜೀವಕೋಶಗಳ (ಇನ್ ವಿಟ್ರೊ) ಮತ್ತು ಇಲಿ, ಹೆಗ್ಗಣ, ಗಿನಿಯಿಲಿ, ಮೊಲ ಇನ್ನಿತರ ಪ್ರಾಯೋಗಿಕ ಪ್ರಾಣಿಗಳ ಮೇಲೆ (ಇನ್ ವಿವೊ) ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಜೊತೆಗೆ,ಕಂಪ್ಯೂಟರ್ ಪ್ರೋಗ್ರಾಮ್ ಗಳನ್ನು ಬಳಸಿ ‘ಡ್ರಗ್-ಟಾರ್ಗೆಟ್ ಇಂಟರ್ಯಾಕ್ಷನ್’ ಅಧ್ಯಯನವನ್ನೂ (ಇನ್ ಸಿಲಿಕೊ ಪ್ರಯೋಗ) ಮಾಡಲಾಗುತ್ತದೆ.

    ಈ ಎಲ್ಲಾ ಪೂರ್ವ-ಕ್ಲಿನಿಕಲ್ ಪ್ರಯೋಗಗಳು ಸಕಾರಾತ್ಮಕ ಫಲಿತಾಂಶದೊಂದಿಗೆ ಪೂರ್ಣಗೊಂಡರೆ ಅವುಗಳನ್ನು ಮಾನವನ
    ಮೇಲೆ ಪ್ರಯೋಗಗಳಿಗೆ ಒಳಪಡಿಸಲಾಗುತ್ತದೆ. ಇದನ್ನೇ ಕ್ಲಿನಿಕಲ್ (ಹ್ಯೂಮನ್ ) ಟ್ರಯಲ್ಸ್ ಅನ್ನುವುದು. ನಾಲ್ಕು ಹಂತದ ಕ್ಲಿನಿಕಲ್ ಟ್ರಯಲ್ಸ್ ನಲ್ಲಿ ಹೊಸ ಉತ್ಪನ್ನವು ಯಾವುದೇ (ಗಂಭೀರ) ಅಡ್ಡಪರಿಣಾಗಳಿಲ್ಲದೆ ಕಾಯಿಲೆಯನ್ನು ಗುಣಪಡಿಸುವಲ್ಲಿ ಅಥವಾ ತಡೆಹಿಡಿಯುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಕಂಡುಬಂದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಪರವಾನಿಗೆ / ಅನುಮೋದನೆ ನೀಡಲಾಗುತ್ತದೆ.

    ಹೊಸ ಔಷಧಿಗಳನ್ನು ಪರೀಕ್ಷಿಸಲು ಮತ್ತು ಅನುಮೋದಿಸಲು ಒಂದು ನಿರ್ದಿಷ್ಟ ಸಮಯದ ಮಿತಿ ಇರುವುದಿಲ್ಲ. ಕ್ಲಿನಿಕಲ್ ಪ್ರಯೋಗಗಳ ಎಲ್ಲಾ 3 ಹಂತಗಳನ್ನು ಪೂರ್ಣಗೊಳಿಸಲು ಸುಮಾರು 10 ರಿಂದ 15 ವರ್ಷಗಳು ಅಥವಾ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು.ಅಂತಾರಾಷ್ಟ್ರೀಯ ಮಟ್ಟದಲ್ಲಿ, ಮಾನವ ಮತ್ತು ಪಶುವೈದ್ಯಕೀಯ ಹೊಸ ಉತ್ಪನ್ನಗಳ ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಸುರಕ್ಷತೆಯನ್ನು ಖಾತರಿಪಡಿಸುವ ಮೂಲಕ ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವ ಜವಾಬ್ದಾರಿಯನ್ನು ‘ಯು. ಎಸ್. – ಫುಡ್ ಎಂಡ್ ಡ್ರಗ್ ಎಡ್ಮಿನಿಸ್ಟ್ರೇಷನ್’ ಸಂಸ್ಥೆಯು ಹೊತ್ತಿದೆ.

    ಕ್ಲಿನಿಕಲ್ ಪ್ರಯೋಗಗಳ ನಾಲ್ಕು ಹಂತಗಳು:

    ಒಂದನೇ ಹಂತ: ಔಷಧದ ಸರಿಯಾದ ಪ್ರಮಾಣ (ಡೋಸ್) ಕಂಡುಹಿಡಿಯಲು , ಸುರಕ್ಷತೆ ಮತ್ತು ಅಡ್ಡಪರಿಣಾಮಗಳನ್ನು ನಿರ್ಣಯಿಸಲು
    ಆರೋಗ್ಯವಂತ 20 ರಿಂದ 80 ಜನರ ಸಣ್ಣ ಗುಂಪಿನ ಮೇಲೆ ಪ್ರಾಯೋಗಿಕ ಚಿಕಿತ್ಸೆಯನ್ನು ನಡೆಸಲಾಗುತ್ತದೆ.

    ಎರಡನೇ ಹಂತ: 100 ರಿಂದ 300 ಜನರ ಮೇಲೆ ನಡೆಸುವ ಪ್ರಯೋಗದ ಈ ಹಂತವು ಒಂದು ನಿರ್ದಿಷ್ಟ ರೋಗ ಅಥವಾ ಸ್ಥಿತಿಯನ್ನು ಹೊಂದಿರುವ ಜನರಲ್ಲಿ ಔಷಧವು ಕಾರ್ಯನಿರ್ವಹಿಸುತ್ತದೆಯೇ ಎಂಬ ಬಗ್ಗೆ ಪ್ರಾಥಮಿಕ ಡೇಟಾವನ್ನು ಪಡೆಯಲಾಗುತ್ತದೆ. ಈ ಪ್ರಯೋಗಗಳು ಅಲ್ಪಾವಧಿಯ ಅಡ್ಡಪರಿಣಾಮಗಳನ್ನು ಒಳಗೊಂಡಂತೆ ಸುರಕ್ಷತೆಯನ್ನು ಅಧ್ಯಯನ ಮಾಡುವುದನ್ನು ಮುಂದುವರಿಸುತ್ತವೆ ಮತ್ತು ಇದು ಹಲವಾರು ವರ್ಷಗಳನ್ನು ತೆಗೆದುಕೊಳ್ಳಬಹುದು.
    ಮೂರನೇ ಹಂತ: ಸುಮಾರು 3,000 ವಿಭಿನ್ನ ಜನರ ಮೇಲೆ ಅಧ್ಯಯನ ನಡೆಸಿ ಹೊಸ ಉತ್ಪನ್ನದ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಈ ಹಂತದಲ್ಲಿ ಇತರ ಷಧಿಗಳೊಂದಿಗೆ ಸಂಯೋಜನೆ ಮಾಡಿಯೂ ಪರೀಕ್ಷಿಸಲಾಗುತ್ತದೆ.ಫಲಿತಾಂಶಗಳು ಸಕಾರಾತ್ಮಕವಾಗಿದ್ದಾರೆ ಸಾರ್ವಜನಿಕರ ಬಳಕೆಗೆ ಪ್ರಾಯೋಗಿಕ ಔಷಧಿ/ಲಸಿಕೆಯಾಗಿ ಬಿಡುಗಡೆಗೊಳಿಸಲು ಅನುಮತಿಯನ್ನು ನೀಡಲಾಗುತ್ತದೆ.
    ನಾಲ್ಕನೇ ಹಂತ: ಅನುಮೋದನೆಗೊಂಡ ಹೊಸ ಉತ್ಪನ್ನದ ರಿಣಾಮಕಾರಿತ್ವ ಮತ್ತು ಸುರಕ್ಷತೆಯ ಮೇಲ್ವಿಚಾರಣೆಯನ್ನು ದೊಡ್ಡ,ವೈವಿಧ್ಯಮಯ ಜನಸಂಖ್ಯೆಯಲ್ಲಿ ಮಾಡಲಾಗುತ್ತದೆ. ಮುಖ್ಯವಾಗಿ ಔಷಧದ ದೀರ್ಘಕಾಲದ ಅಡ್ಡಪರಿಣಾಮಗಳ ಮೇಲೆ ಗಮನ ಇರಿಸಲಾಗುತ್ತದೆ. ಅಡ್ಡಪರಿಣಾಮಗಳೇನಾದರೂ ಕಂಡುಬಂದಲ್ಲಿ ಆ ಹೊಸ ಉತ್ಪನ್ನಗಳ ಬಳಕೆಯನ್ನು ನಿಷೇಧಿಸಲಾಗುತ್ತದೆ.

    ವೈದ್ಯಕೀಯ ತುರ್ತುಸ್ಥಿತಿ ಇದ್ದರೆ, ಫಾಸ್ಟ್ ಟ್ರ್ಯಾಕ್ನಲ್ಲಿ ಕ್ಲಿನಿಕಲ್ ಪ್ರಯೋಗಗಳಿಗೆ ಅವಕಾಶವಿದೆ. ವಿಶ್ವಾದ್ಯಂತ, ಹೊಸ ತಳಿಯ ಕೊರೊನಾವೈರಸ್ (SARS-CoV-2) ಆರೋಗ್ಯ, ಆರ್ಥಿಕತೆ ಮತ್ತು ಸಮಾಜದ ಮೇಲೆ ಉಂಟುಮಾಡುತ್ತಿರುವ ಪರಿಣಾಮಗಳು ಅಂತಹ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ
    ನಡೆಯುತ್ತಿರುವ ಎಲ್ಲಾ ಪ್ರಯೋಗಗಳು ಮತ್ತು ಕ್ಲಿನಿಕಲ್ ಟ್ರಯಲ್ಸ್ ಗಳು ಯಶಸ್ವಿಯಾಗಲಿ ಮತ್ತು ಕೋವಿಡ್-19 ಸಾಂಕ್ರಾಮಿಕವನ್ನು ನಿಯಂತ್ರಿಸಲು ಶೀಘ್ರವಾಗಿ ಜನರನ್ನು ತಲುಪಲಿ ಎಂದು ಆಶಿಸೋಣ.

    ಹಿತ್ತಲ ಗಿಡ ಮದ್ದಲ್ಲವೆ?

    ಆಯುರ್ವೇದ ಔಷಧಿಗಳು, ಗಿಡಮೂಲಿಕೆಗಳ ಚಿಕಿತ್ಸೆ, ಮನೆಮದ್ದುಗಳು ಮತ್ತು ಇತರ ಅನೇಕ ಪೂರಕ ಚಿಕಿತ್ಸಾ ವಿಧಾನಗಳು ಕೋವಿಡ್ -19 ಅನ್ನು ತಡೆಗಟ್ಟುವ ಮತ್ತು ಗುಣಪಡಿಸುವ ನಿಟ್ಟಿನಲ್ಲಿ ಜಗತ್ತಿನಾದ್ಯಂತ, ಮುಖ್ಯವಾಗಿ
    ಭಾರತದಲ್ಲಿ ಸಂವೇದನೆ ಮತ್ತು ಸಾರ್ವಜನಿಕರಲ್ಲಿ ಒಂದು ಹೊಸ ಆಶಾಕಿರಣವನ್ನು ಮೂಡಿಸಿರುವುದಂತೂ ಸತ್ಯ. ಹಾಗೆಯೇ,’ಹಿತ್ತಲ ಗಿಡ ಮದ್ದಲ್ಲ’ ಎಂಬ ಧೋರಣೆಯ ವಿರುದ್ಧ ಟೀಕೆಗಳೂ ಕೇಳಿಬರುತ್ತಿರುವುದೂ ಅಷ್ಟೇ ದಿಟ.

    Photo by CDC from Pexels

    ಹಿಂದಿನ ಓದು : ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ತಂತ್ರವೇ ವ್ಯಾಕ್ಸಿನ್..!

    ಡಾ. ಪ್ರಶಾಂತ ನಾಯ್ಕ
    ಡಾ. ಪ್ರಶಾಂತ ನಾಯ್ಕ
    ಅನೇಕರಾಷ್ಟ್ರೀಯಸಮ್ಮೇಳನ, ಕಾರ್ಯಗಾರ, ಪರಿಸರ ಸಂರಕ್ಷಣೆಯ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ. ಸಹ-ಸಂಯೋಜಕರಾಗಿ ಜನತಾ ಜೀವವೈವಿಧ್ಯ ದಾಖಲಾತಿಯನ್ನು ಮಾಡಿರುತ್ತಾರೆ. ಅನೇಕ ಸಂಶೋಧನಾ ಲೇಖನಗಳನ್ನು, ಪುಸ್ತಕಗಳನ್ನು ಪ್ರಕಟಿಸಿರುತ್ತಾರೆ. ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯ ಜೀವವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
    spot_img

    More articles

    12 COMMENTS

    1. ಸಮಯೋಚಿತ ಲೇಖನ. ಜಗತ್ತಿನಾದ್ಯಾಂತ ಕೋವಿಡ್-19 ಮಹಾಮಾರಿಯು ಹಬ್ಬುತ್ತಿದೆ ಎಂದು ವಾಸ್ತವಿಕ ಪರಿಸ್ಥಿತಿಗಿಂತ ಭಿನ್ನವಾಗಿ ಪ್ರಚುರ ಪಡಿಸುತ್ತಿರುವ ವಿವಿಧ ಮಾದ್ಯಮಗಳ ಸತ್ಯಾಸತ್ಯತೆಯ ಬಗ್ಗೆ ಗೊಂದಲದಲ್ಲಿರುವ ಜನತೆಗೆ ಕೊಂಚಿತ್ತಾದರೂ ಸಮಾಧಾನ ಹುಟ್ಟಿಸುವ ನಿಟ್ಟಿನಲ್ಲಿ ಲೇಖನವು ಅತ್ಯುತ್ತಮ ಮಾಹಿತಿಯನ್ನೊಳಗೊಂಡಿದೆ. 👍

    2. ಅದ್ಭುತವಾದ ಮಾಹಿತಿ ಸರ್… ಅಭಿನಂದನೆಗಳು, ನಿಜವಾಗಿಯೂ ರೋಗ ನಿರೋಧಕ ಶಕ್ತಿಯ ಪಿತಾಮಹ ಯಾರೆಂಬುದನ್ನು ಇವಾಗ ನಾನು ಅರಿತುಕೊಂಡೆ… ಎಲ್ಲರಿಗೂ ಅರ್ಥ ವಾಗುವ ರೀತಿಯಲ್ಲಿ ತಾವುಗಳು ಬರೆದಿರುವಿರಿ… ಮಾತ್ರವಲ್ಲದೆ ಅರೋಗ್ಯ ಪೂರ್ಣ ಜೀವನಕ್ಕೆ ಸೂತ್ರಗಳನ್ನು ಕೂಡ ನೀಡಿರುವಿರಿ… ನಿಜವಾಗಿಯೂ ಪ್ರತಿಯೊಬ್ಬರೂ ಕೂಡ ಓದಲೇ ಬೇಕಾದ ಲೇಖನ… ಧನ್ಯವಾದಗಳು..

    3. Dr.Prasanth Naika back to back articles are very informative. In the first article where he dealt extensively about vaccines in the second article he has given to common people the preventive and effective food and lifestyle to be implemented to protect ourselves from this epidemic. Swami Vivekananda has prescribed simple personal hygiene for keeping epidemic away from oneself. Dr.Prasanth Naika also who by profession research scholar has given light to common people to follow simple ways from food to exercise and then to keep the mind relaxed. Good article Sir.

    4. ಅತ್ಯುತ್ತಮ ಬರಹದ ಮೂಲಕ ಉತ್ತಮ ಮಾಹಿತಿ ನೀಡಿರುತ್ತೀರಿ.ಧನ್ಯವಾದಗಳು ಪ್ರಶಾಂತ

    5. ಸರಳ, ಸುಂದರ, ಸಾಮಾನ್ಯರೂ ಅರ್ಥೈಸಿಕೊಳ್ಳಬಹುದಾದ ಸಮಯೋಚಿತ ಲೇಖನ.
      ಧನ್ಯವಾದಗಳು ಡಾ. ಪ್ರಶಾಂತ್ ಅವರಿಗೆ .

    6. ಕೋವಿಡ್-19 ,ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ? ಡಾ. ಪ್ರಶಾಂತ ನಾಯ್ಕ , ಇವರ ಲೇಖನ ಸಮಯೋಚಿತವಾಗಿದೆ. ಡಾಕ್ಟರ್ ಪ್ರಶಾಂತ ನಾಯಕ್ ಕೋವಿಡ್-19 ಬಗ್ಗೆ ಸಂಪೂರ್ಣ ಜ್ಞಾನವನ್ನು ನೀಡಿದ್ದಾರೆ. ಸಾಮಾನ್ಯರೂ ಕೂಡ ಈ ಬಗ್ಗೆ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಸದರಿ ಪ್ರಬುದ್ಧ ಲೇಖನವನ್ನು ಮಂಡಿಸಿದ ಡಾಕ್ಟರ್ ಪ್ರಶಾಂತ್ ನಾಯಕ್ ರವರಿಗೆ ಹೃತ್ಪೂರ್ವಕ ಧನ್ಯವಾದಗಳು ಹಾಗೂ ಇಂಥ ಹತ್ತು ಹಲವು ಉಪಯುಕ್ತ ಲೇಖನ ಗಳನ್ನು ನೀಡುತ್ತಿರುವ ನಿಮಗೂ ಕೂಡ ಹೃತ್ಪೂರ್ವಕ ಧನ್ಯವಾದಗಳು ನಿಮ್ಮ ಕನ್ನಡ ಪ್ರೆಸ್.ಕಮ್ ಕನ್ನಡಿಗರ ಮನೆ ಮಾತಾಗಲಿ ಎಂದು ಆಶಿಸುತ್ತೇವೆ.

    7. ಲೇಖನದ ಬಗ್ಗೆ ತಮ್ಮ ಅಮೂಲ್ಯವಾದ ಅಭಿಪ್ರಾಯಗಳನ್ನು ನೀಡಿದ ಎಲ್ಲಾ ಓದುಗ ಬಂಧುಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು

    8. Dear Prof. Prashanth,
      This and previous article in Kannada related to antigen, antibody and preventive actions in our body for microbial infections are very informative and excellent. Only few people can write like this. Thank you so much for sharing these articles to me.

    LEAVE A REPLY

    Please enter your comment!
    Please enter your name here

    Latest article

    error: Content is protected !!