ಶ್ರಾವಣ ಮಾಸದ ಜಿಟಿ,ಜಿಟಿ ಮಳೆ ನನ್ನ ಬಾಲ್ಯವನ್ನು ಎಳೆದು ತಂದು ಲವಲವಿಕೆ ಮೂಡಿಸುತ್ತದೆ.ಆಗ ತಾನೇ ಶಾಲೆಗಳು ಬೇಸಿಗೆಯ ರಜೆ ಕಳೆದು ಮುಂದಿನ ತರಗತಿಗಳ ಕೋಣೆಯೊಳಕ್ಕೆ ಎಂತಹುದೋ ಆಹ್ಲಾದಕರ ಮನಸ್ಸಿನಿಂದ ನಮ್ಮನ್ನು ಬರಮಾಡಿರುತ್ತಿದ್ದವು. ಹೊಸ ಪೆನ್ನು,ಇಂಕಿನ ವಾಸನೆ,ಹೊಸ ಪುಸ್ತಕಗಳ ವಾಸನೆ,ಲೇಖಕ್ ನೋಟ್ ಬುಕ್ಕಗಳ ವಾಸನೆ ,ಮೋಡ ತುಂಬಿದ ನವಿರಾದ ದಿನಗಳ ಸೊಬಗಿನಲ್ಲಿ ತರಗತಿಗಳಲ್ಲಿ ಕುಳಿತುಕೊಳ್ಳುವ ಸೊಬಗೇ ಈಗ ಮುದಕೊಡುತ್ತಿದೆ. ಹಾಗೆ ಸೇರಿದ ಹೊಸತರಗತಿಗಳಿಗೆ ಮೊದಲಾಗಿ ರಜೆ ಅಂತ ಬರ್ತಿದ್ದುದೇ ಈ ನಾಗರ ಪಂಚಮಿಗೆ. ಈ ದಿನ ನಮ್ಮ ಜೊತೆಯ ಹುಡುಗಿಯರು ಕಾಲು ಪೂರ್ತಿ ಮುಚ್ಚುವ ಲಂಗಗಳನ್ನು ಹಾಕಿಕೊಂಡು ಸಂಭ್ರಮಿಸುತ್ತಿದ್ದರು.
ನನ್ನೂರಲ್ಲಿ ಜಾತಿ,ಮತಗಳ ಭೇದಗಳಿಲ್ಲದೆ ಇಂದು ಎಲ್ಲರೂ ದೇವಸ್ಥಾನದ ಹತ್ತಿರ ಇದ್ದ ನಾಗರ ಕಟ್ಟೆಗೆ ಹಾಲೆರೆಯಲು ಬೆಳಿಗ್ಗೆ 10 ಗಂಟೆಯಿಂದ ಪ್ರಾರಂಭಿಸಿ,12 ಗಂಟೆಯವರೆಗೆ ಊರಿಂದ ಗುಂಪುಗಳಲ್ಲಿ ಊರ ಹೆಂಗಳೆಯರೆಲ್ಲ ಹುರುಪಿನೊಂದಿಗೆ ಹೊರಡುವ ದೃಶ್ಯ ಅವಿಸ್ಮರಣೀಯ. ಹೊಸದಾಗಿ ಮದುವೆಯಾಗಿ ಹೋಗಿದ್ದ ಹೆಂಗಳೆಯರ ಸಡಗರವಂತೂ ಕೇಳಲೇ ಬೇಡಿ. ಅವರ ಒನಪು, ವಯ್ಯಾರ,ಸಂಭ್ರಮ ಮುಗಿಲು ಮುಟ್ಟಿ ಅಲ್ಲ, ದಾಟಿ ಮೇಲೆ ಮೂರಿಂಚು!
ಬೇಸಿಗೆ ರಜೆಯ ಮಧ್ಯಾಹ್ನಗಳಲ್ಲಿ ಮನೆಗೆಲಸ ಮಾಡುತ್ತಾ,ಸಿಕ್ಕ ಅಲ್ಪ ಸ್ವಲ್ಪ ಸಮಯದಲ್ಲಿ ಕೈ ಕಸೂತಿ ಹಾಕಿ,ಎರಡು ಮೂರು ಬಣ್ಣಗಳಿಂದ ಹೂ,ಹಣ್ಣು ಕಾಣುವ ರೀತಿ ಹೆಣೆದುಕೊಂಡು, ಬಲೆಯಂತಿದ್ದ ಬಿಳೀ ಬಣ್ಣದ ಬಟ್ಟೆಯನ್ನು ತಟ್ಟೆಯಲ್ಲಿಟ್ಟಿದ್ದ ಹಾಲೆರೆಯುವ ಸಾಮಗ್ರಿಗಳನ್ನು ಮುಚ್ಚಲು ಉಪಯೋಗಿಸಿ ಸಡಗರದಿಂದ ಹೊರಡುತ್ತಿದ್ದ ಅಮ್ಮನ ಹಿಂದೆ ಹೊರಡುವುದೇ ನನಗೆ ಹಬ್ಬ.
ಎದುರಿಗೆ ಬರುತ್ತಿದ್ದವರು ಹಾಲು ಹಾಕಿದಿರಾ ಅಂತ ನಗುಮೊಗದಲ್ಲಿ ಮಾತಾಡಿಸಿ, ನಿಂತು ಅವರ ಸೀರೆ,ಹೆಣೆದ ತಟ್ಟೆಯಮೇಲಿನ ಬಟ್ಟೆಗಳ ವಿಷಯ ವಿನಿಮಯ ಮಾಡಿಕೊಳ್ಳುತ್ತ ಜಿಟಿ,ಜಿಟಿ ಮಳೆಯಲ್ಲಿ,ಸಾಮಾನ್ಯವಾಗಿ ಬರಿದಾಗಿರುತ್ತಿದ್ದ ನಮ್ಮೂರ ಕೆರೆ ಅಂಗಳದ ಮುಖಾಂತರ ದೇವಸ್ಥಾನದ ನಾಗರ ಕಟ್ಟೆಗೆ ಹೋಗುವ ಸಂಭ್ರಮ ಇಂದಿನ ಯಾವ ಮಾಲ್ ಗಳ ಭೇಟಿಗೂ ಸಮ ಇಲ್ಲ ಬಿಡಿ.
ಈ ಸಡಗರದ ನಡಿಗೆಯಲ್ಲಿ ಸಿಗುತ್ತಿದ್ದ ನನ್ನ ಗೆಳೆಯರ ಕೈಯಲ್ಲಿರುತ್ತಿದ್ದ ಕೊಬ್ಬರಿ ಬಟ್ಟಲಿನ ತಿರುಗುಗಳು,ಅದಕ್ಕೆ ಜೋಡಿಸಿದ್ದ ಬಿಳೀ ದಾರ ಎಳೆದೆಳೆದು ಕೊಬ್ಬರಿಬಟ್ಟಲನ್ನು ತಿರುಗಿಸುವ ಖುಷಿ,ಅದಕ್ಕಿಂತ ನನ್ನದು ಹೇಗೆ ಬೇರೆ ಅಂತ ತುಲನೆ ಮಾಡಿ ಆನಂದಿಸುವುದು ಮುಗಿಯುವುದರಲ್ಲಿ ನಾಗರಕಟ್ಟೆಯ ಹತ್ತಿರವಿರುತ್ತಿದ್ದ ಹೆಂಗಳೆಯರ ಗುಂಪಿನಲ್ಲಿ ಸೇರಿ ಆಗಿರುತ್ತಿತ್ತು. ಅಲ್ಲಿ ಅಮ್ಮನೂ ನನ್ನನ್ನು ಮರೆತಂತೆ ತನ್ನ ಸರದಿ ಬರುವವರೆಗೆ ಅಲ್ಲಿಗೆ ಬಂದಿದ್ದ ಎಲ್ಲ ಸಡಗರದ ಹೆಂಗಸರೊಂದಿಗೆ ಮಾತುಗಳು. ….ಯಾವಗಾ ಬಂದಿಯೇ,ಮನೆಕಡೆ ಬರ್ಲಿಲ್ಲ,ನಿನ್ನ ಗಂಡನೂ ಬಂದನಾ,ಅತ್ತೆ ಮನೆ ಹೇಗಿದೆ,ನೋಡಿದರೆ ಗಂಡನ ಮನೆ ನೀರು ಹೊಂದಿಕೊಂಡ ಹಾಗಿದೆ ಬಿಡು….ಅಂತ ಮದುವೆಯಾದ ನನ್ನೂರ ಚೆಲುವೆಯರನ್ನು ವಿಚಾರಿಸುತ್ತಿದ್ದರೆ,ಆ ಹುಡುಗಿಯರ ಮುಖದ ನಾಚಿಕೆಯ ನಗು ಇರುತ್ತಿತ್ತಲ್ಲ, ಅದು ಈಗಿನ ಯಾವ ಮಾಡೆಲ್ ಗಳೂ ಅನುಸರಿಸಲು ಸಾಧ್ಯವಿಲ್ಲ ಬಿಡಿ.
ನೀವು ಹಾಲು ಎರೆಯಿರಿ,ನೀವು ಎರೆಯಿರಿ ಅಂತ ಪ್ರೀತಿಯಿಂದ ಹಾಲು ಹಾಕಲು ಜಾಗ ಮಾಡಿಕೊಡುತ್ತಿದ್ದವರನ್ನು ಮಾತಾಡಿಸುತ್ತಲೇ ನನ್ನನ್ನು ಕೂಗಿ ಕರೆದು ಹುತ್ತದ ಹತ್ತಿರ ನಿಲ್ಲಿಸಿ ಬಲ ಮುಂಗೈಗೆ ಒಂದೇ ಒಂದು ಮಲ್ಲಿಗೆ ಹೂ ಕಟ್ಟಿದ್ದ ಬಿಳೀ ದಾರವನ್ನು ಕಟ್ಟಿ, ತಟ್ಟೆಯಲ್ಲಿ ಮನೆಯಿಂದ ಮಾಡಿಕೊಂಡು,ಹೆಣೆದ ಬಟ್ಟೆ ಮುಚ್ಚಿ ತಂದಿದ್ದ ಚಿಗಳೆ, ತಂಬಿಟ್ಟು (ಅಕ್ಕಿ,ಎಳ್ಳು ಗಳಿಂದ ಮಾಡಿದ ಸಿಹಿ ಉಂಡೆಗಳು) ಉಂಡೆಗಳನ್ನು ವೀಳ್ಯೇದ ಎಲೆಮೇಲೆ,ಅಡಿಕೆ ,ಈ ಉಂಡೆಗಳನ್ನು ಇಟ್ಟು, ನೆನಸಿದ್ದ ಕಡ್ಲೆ ಬೇಳೆ ಜೊತೆಗೆ ಹುತ್ತದ ಮೇಲಿದ್ದ ಹುಣಸೆಮರದಿಂದ ಆಗತಾನೇ ಚಿಗುರಿ,ಸಣ್ಣ ಮರಿ ಹಾವುಗಳ ರೂಪದಲ್ಲಿರುತ್ತಿದ್ದ ಹುಣಸೇ ಕಾಯಿಗಳನ್ನು ಇಟ್ಟು, ಊದಿನಕಡ್ಡಿ ಹಚ್ಚಿ ಪೂಜೆ ಮಾಡಿ, ತಟ್ಟೆಯಲ್ಲಿದ್ದ ಚಿಕ್ಕ ಗಿಂಡಿಯೊಳಗಿನ ಹಾಲನ್ನು ಬಿಳೀ ದಾರ ಸುತ್ತ ಕಟ್ಟಿದ್ದ ಹುತ್ತಕ್ಕೆ ಮೂರು ಸಲ ಹಾಕುವುದು…ಅಲ್ಲಿಗೆ ಅಮ್ಮ ಹಿಂದಕ್ಕೆ ತಿರುಗಿ ಸರದಿಯಲ್ಲಿದ್ದವರಿಗೆ ಚಿಗಳೆ ತಂಬಿಟ್ಟು ಕೊಡುತ್ತಾ,ಬನ್ನಿ ನಮ್ದು ಆಯ್ತು,ನೀವೂ ಎರೆಯಿರಿ ಅಂತ ಹೇಳಿದರೆ,ಅಲ್ಲಿಗೆ ಪಂಚಮಿಯ ನಾಗನಿಗೆ ಹಾಲೆರೆಯುವುದು ಮುಗಿದ ಹಾಗೆ.
ಆಕಾಶದ ಕಡೆ ಬಾಯಿ ತೆರೆದುಕೊಂಡ ದೊಡ್ಡ ಬಿಲಗಳು ನನಗೆ ಹಾವಿನ ಬಾಯಿಗಳು ಏನೋ ಅನ್ನುವ ರೀತಿ ಕಾಣಿಸುತ್ತಿದ್ದವು. ಹಾಲು ಹಾಕಿ ಅವುಗಳ ಒಳಗೆ ಹಾವು ಇದೆಯೇನೋ ಅಂತ ಹತ್ತಿರ ಬಗ್ಗಿ ನೋಡುತ್ತಿದ್ದವನನ್ನು ಎಳೆದು ಕೊಂಡು ಅಮ್ಮ ಹೊರಡುವಾಗ ಎಂತಹದೋ ನಿರಾಶೆ!
ಮನೆಗೆ ಮತ್ತೆ ಜಿಟಿ,ಜಿಟಿ ಮಳೆಯಲ್ಲಿ ಹಿಂತಿರುಗುವ ನಡಿಗೆಯಲ್ಲಿ, ಬರುವಾಗಿನ ಎಲ್ಲ ಸಂಭ್ರಮ ಮರುಕಳಿಸುತ್ತಿತ್ತು. ವ್ಯತ್ಯಾಸ ಅಂದ್ರೆ ಅಮ್ಮ ಈಗ ಎದುರು ಬರುತ್ತಿದ್ದವರನ್ನು ಯಾಕೆ ತಡ ಮಾಡಿಕೊಂಡು ಬಿಟ್ಟಿಯಲ್ಲ ಅಂತ ವಿಚಾರಿಸಿ,ನಗುವಿನ ವಿನಿಮಯ. ಮನೆಗೆ ಬಂದು ಪಾಯಸದ ಜೊತೆ,ಪಂಚಮಿ ಉಂಡೆಗಳನ್ನು ತಿಂದು,ಊಟ ಅಂತ ಮುಗಿಯುವುದನ್ನು ಕಾಯ್ತಿದ್ದ ಹಾಗೆ ಹೊರಗಡೆಗೆ ಜಿಗಿತ. ಇವತ್ತು ಅಪ್ಪನ ರಜೆ ದಿನಗಳ ಲೆಕ್ಕದ ಕ್ಲಾಸ್ ಇರುತ್ತಿರಲಿಲ್ಲ. ಊರಲ್ಲಿ ಬಂದರೆ, ಬಜಾರದಲ್ಲಿ ವಿಧ ವಿಧದ ಸ್ಪರ್ಧೆಗಳು ಗುಂಪು,ಗುಂಪಾಗಿ ಇರುತ್ತಿದ್ದವು. ನಮ್ಮಲ್ಲಿ ಸಜ್ಜೆ ಹುರಿದು,ಪುಡಿಮಾಡಿ ಬೆಲ್ಲದ ಜೊತೆ ಹುರಿದ ಶೇಂಗಾ ಬೀಜ,ಎಳ್ಳು ಹಾಕಿ ಮಾಡಿದ ಉಂಡೆಗೆ ಟಮಟ ಅಂತೀವಿ. ಆರಿದ ನಂತರ ಇವು ಕಲ್ಲಿನ ತರ ಗಟ್ಟಿ ಆಗ್ತಿದ್ದವು. ಇಂತಹ ಉಂಡೆಗಳನ್ನು ಕೈಯಿಂದ ಹೊಡೆದು ಪುಡಿ ಮಾಡುವ ಸ್ಪರ್ಧೆಗಳು ಊರ ತುಂಬಾ ಇರುತ್ತಿದ್ದವು. ಮತ್ತೆ ಕೆಲವು ಕಡೆ ತೆಂಗಿನ ಕಾಯಿಯನ್ನು ಕೈಯಿಂದ ಗುದ್ದಿ ಹೊಡೆಯುವ ಸ್ಪರ್ಧೆಗಳು. ಊರ ಗಟ್ಟಿ ಯುವಕರು ತಲೆಮೇಲಿನ ಟವೆಲ್ ತೆಗೆದು,ಮುಂಗೈ ಪೂರ್ತಿ ಮುಚ್ಚುವ ಹಾಗೆ ಕಟ್ಟಿಕೊಂಡು,ಸಣ್ಣ ಬೆಂಕಿಕಡ್ಡಿಯನ್ನು ತೆಂಗಿನಕಾಯಿಯ ಕೆಳಗೆ ಒಂದು ಕಡೆ ನಿಲ್ಲಿಸಿ, ನೆರೆದವರನ್ನೆಲ್ಲ ಒಮ್ಮೆ ನೋಡಿ, ಅವನ ಬಟ್ಟೆ ಮುಚ್ಚಿದ ಬಲ ಮುಂಗೈ ಯನ್ನು ವಿಶಿಷ್ಟ ರೀತಿಯಲ್ಲಿ ಸಜ್ಜಾಗಿಸಿ, ತನ್ನೆರಡು ಮೊಳಕಾಲ ಮೇಲೆ ಭಾರ ಹಾಕಿ,ಕೈ ಎತ್ತಿ, ಒಂದೇ ಏಟಿಗೆ ಕಾಯಿ ಒಡೆದನೆಂದರೆ,ಅದರ ಚೂರುಗಳೆಲ್ಲ ಚೆಲ್ಲಾ ಪಿಲ್ಲಿ!
ಇವು ದಂತ ಕಥೆಗಳಾಗಿ ತಿಂಗಳುಗಳ ಕಾಲ ಊರವರ ಬಾಯಲ್ಲಿ ಇರುತ್ತಿತ್ತು. ಇವೆಲ್ಲಕ್ಕೆ ಸಾಕ್ಷಿಯಾಗಿ,ಮುಂದಿನ ಸಾಲಲ್ಲೇ ಇದ್ದು ನೋಡುತ್ತಿದ್ದ ನನಗೆ ಎಲ್ಲಿಲ್ಲದ ಸಂಭ್ರಮ! ಯಾರಾದ್ರೂ ಚೂರು ಸಿಡಿಯುತ್ತೆ ಹಿಂದೆ ಬಾ ಅಂತ ಎಳೆದರೆ,ಹೊಡೆದು ಬಿಡುವಷ್ಟು ಸಿಟ್ಟು.
ಚಿಕ್ಕ ಮಕ್ಕಳಾಗಿದ್ದ ನಮ್ಮ ಕೈಗಳಲ್ಲಿ ನಾನಾ ತರಹದ ದಾರಗಳಿಂದ ಮಾಡಿದ ತಿರುಗುಗಳು. ದಾರವನ್ನು ಎರಡೂ ಕೈಗಳ ಹೆಬ್ಬೆರಳು ಮತ್ತು ಕಿರುಬೆರಲುಗಳಿಗೆ ಹಾಕಿಕೊಂಡು,ಹಿಂದೆ,ಮುಂದೆ ಕೈ ಗಳನ್ನು ತಂದರೆ,ಜಿಯ್,ಜಿಯ್ ಅನ್ನುವ ಶಬ್ದದೊಂದಿಗೆ ಮದ್ಯೆ ಇರುತ್ತಿದ್ದ ದುಂಡನೆಯ,ಚಪ್ಪಟೆಯ ವಸ್ತು ತಿರುಗುತ್ತಿತ್ತು. ಬೆಳಿಗ್ಗೆಯಿಂದ,ಸಾಯಂಕಾಲದ ವರೆಗೆ ಇದನ್ನು ಕೈಯಲ್ಲಿ ಭಯಂಕರ ಮೌಲ್ಯವಾದದ್ದು ಅನ್ನುವ ರೀತಿಯಲ್ಲಿ ಹಿಡಿದು,ಹೊಸ ಗೆಳೆಯರು ಕಂಡ ತಕ್ಷಣ ತಿರುಗಿಸಿ ತೋರಿಸುವುದರ ಸಂಭ್ರಮ ಇತ್ತಲ್ಲ, ಇವತ್ತು 30 ಲಕ್ಷ ಕಾರು ಕೊಂಡರೂ ಅನುಭವಿಸಲು ಸಾಧ್ಯ ಇಲ್ಲ ಬಿಡಿ.
ಹಾಗೇ ಇಳಿಸಂಜೆ ಆಗುತ್ತಿದ್ದಂತೆ ಮನೆಗೊಂದರಂತೆ ಕಟ್ಟಿದ್ದ ಹಗ್ಗದ ಜೋಕಾಲಿಗಳಲ್ಲಿ ತೂರಾಟ. ಹೆಚ್ಚಾಗಿ ಹೆಣ್ಣು ಮಕ್ಕಳು ಹಾಡು ಹಾಡುತ್ತಾ ತಮ್ಮನ್ನು ತಾವೇ ಜೀಕಿ ಕೊಳ್ಳುತ್ತ ತುರಾಡುವುದನ್ನು ನೋಡಲು ಸುತ್ತ ಹತ್ತು ಹುಡುಗ ಹುಡುಗಿಯರ ಗುಂಪು. ಜೋಕಾಲಿ,ಮನೆಗಳ ಕಟ್ಟೆಯ ಮೇಲೆ,ಮನೆ ಮುಂದಿನ ಮರಕ್ಕೆ ಕಟ್ಟುತ್ತಿದ್ದರು. ಈ ಜೋಕಾಲಿಗಳು,ಕೆಲವರ ಜಗುಳಿಗಳ ಮೇಲೆ ಮುಂದೆ ಬರ್ತಿದ್ದ ಗೌರಿ ಹುಣ್ಣಿಮೆ ವರೆಗೂ ಇರುತ್ತಿದ್ದವು. ಅಂತಹ ಅಪ್ಪ,ಅಮ್ಮಂದಿರಿಗೆ ನಮ್ಮ ಗುಂಪುಗಳಲ್ಲಿ ಭಾರೀ ಮೆಚ್ಚುಗೆ ಮತ್ತು ಅವರೆಡೆಗೆ ಹೆಮ್ಮೆ. ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಜಿಟಿ ಜಿಟಿ ಮಳೆಯಲ್ಲೇ ಕಳೆಯುತ್ತಿದ್ದ ನಾಗರ ಪಂಚಮಿಯ ಸಡಗರ,ಹಳ್ಳಿಗಳಲ್ಲೂ ಸಹ ಮರೆಯಾಗುತ್ತಿವೆ ಎನ್ನುವುದು ವಿಷಾದಕರ ಸಂಗತಿ.
ಆಧುನಿಕತೆಯ ಮನೆ ಬದಲಾವಣೆಗಳು ಜೋಕಾಲಿ ಕಟ್ಟುವ ವ್ಯವಸ್ಥೆಯನ್ನೇ ಹಾಳು ಮಾಡಿವೆ. ಮನೆ ಮುಂದಿನ ಮರಗಳು ಕಾಣೆಯಾಗಿ ಸಿಮೆಂಟ್ ಅಂಗಳಗಳು,ಸಗಣಿ ನೀರಿನ ಸಿಂಚನದೊಂದಿಗೆ ಮೈತಳೆಯುತ್ತಿದ್ದ ಬೆಳಗಿನ ರಂಗೋಲಿಗಳನ್ನು ತಿಂದು ಹಾಕಿವೆ. ಸ್ಕೂಲು,ಕಾಲೇಜು ಅಂತ ಓದುತ್ತಿರುವ ಹುಡುಗಿಯರಿಗೆ, ನಾಗ ಪಂಚಮಿ,ಗೌರಿ ಹಬ್ಬಗಳ ಜೋಕಾಲಿಗಳು ನಾಚಿಕೆಯ ವಿಷಯಗಳಾಗಿರುವುದು ನನಗಂತೂ ನೋವಿನ ಸಂಗತಿ.
ಶ್ರಾವಣದ ಜಿಟಿ,ಜಿಟಿ ಮಳೆಗೆ ರೈತಾಪಿ ಜನರು ಬೆಳೆಯ ಪ್ರಾರಂಭಿಕ ಕೆಲಸಗಳನ್ನು ಮುಗಿಸಿ,ಮಳೆರಾಯನ ಕರುಣೆಗೆ ಕಾಯುತ್ತ, ಜೀವನ ಪ್ರೀತಿಯನ್ನು ಉಳಿಸಿಕೊಂಡು,ಚೇತನಗಳನ್ನು ಲವಲವಿಕೆಯಿಂದ ಇರಿಸಿಕೊಳ್ಳಲು ಬೇಕಾದ ಹಾಗೆ ಋತುಮಾನಗಳಿಗೆ ತಕ್ಕ ಆಹಾರ,ಹಬ್ಬಗಳನ್ನು ಹೆಣೆದುಕೊಂಡಿದ್ದ ನಮ್ಮ ಪೂರ್ವಿಕರು ನನಗಂತೂ ಮಹಾನ್ ಮಾನವರು ಅಂತಲೇ ಅನ್ನಿಸುವುದು……ನಿಮಗೆ???
ಹಿಂದಿನ ಮತ್ತು ಇಂದಿನ ನಾಗರಪಂಚಮಿಯ ಚಿತ್ರಣ ಸಂತಸದೊಂದಿಗಿನ ವಿಷಾದದ ಛಾಯೆ ಇದೆ.ಕಥನ ಕಣ್ಣಿಗೆ ಕಟ್ಟುವಂತಿದೆ.ಮಂಜುನಾಥ್ ಬೊಮ್ಮಾಘಟ್ಟ ಪ್ರವೃತ್ತಿ ಲೇಖಕರಂತೆ ಕಾಣದೆ ವೃತ್ತಿಪರ ಲೇಖಕರಂತೆ ಕಾಣುತ್ತಾರೆ.
ಧನ್ಯವಾದಗಳು ಸರ್. ಗುರುಗಳಿಂದ ಪಡೆಯುವ ಪ್ರೋತ್ಸಾಹದ ಮಾತುಗಳು ಶಿಷ್ಯರನ್ನು ಪುಳಕಿತ ಗೊಳಿಸುತ್ತವೆ…ತಮ್ಮ ಅನಿಸಿಕೆಗಳು ನನಗೆ ಆಶೀರ್ವಾದ….ಗೋರವಪೂರ್ವಕವಾಗಿ ಸ್ವೀಕರಿಸುತ್ತಿದ್ದೇನೆ….
ಮಂಜುನಾಥ್ ಸರ್ ಲೇಖನ ಅದ್ಭುತವಾಗಿ ಮೂಡಿಬಂದಿದೆ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ ಮತ್ತೊಮ್ಮೆ ಅದೇ ಹಿಂದಿನ ನಾಗರಪಂಚಮಿಯ ಸಡಗರವನ್ನು ಸಂಭ್ರಮಿಸಿ ದಂತಾಗಿದೆ
ಮಂಜುನಾಥ್ ಸರ್ ಲೇಖನ ಅದ್ಭುತವಾಗಿ ಮೂಡಿಬಂದಿದೆ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ ಮತ್ತೊಮ್ಮೆ ಅದೇ ಹಿಂದಿನ ನಾಗರಪಂಚಮಿಯ ಸಡಗರವನ್ನು ಸಂಭ್ರಮಿಸಿ ದಂತಾಗಿದೆ
ಗ್ರಾಮೀಣ ಬದುಕಿನ ನೈಜ ಅನುಭವಗಳೊಂದಿಗೆ ಭಾವನಾತ್ಮಕ ಸಂಬಂಧ ಬೆರೆತ ಲೇಖನ ಬಾಲ್ಯ ನೆನಪಿಸುತ್ತೆ. ಆ ಸಂಭ್ರಮ, ಗ್ರಾಮೀಣ ಆಟಗಳು ಈಗ ಕಣ್ಮರೆ. ಯಾಂತ್ರಿಕ, ವಿದ್ಯುನ್ಮಾನ ಪರಿಕರಗಳ ಭರಾಟೆ ಯಲ್ಲಿ ಒಂದು ಕೊಂಡಿಯೇ ಕಳಚಿದ ವಿಷಾದ ಅಡಗಿದೆ.
ಬರವಣಿಗೆ ಸಾಗಲಿ….
ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಎಲ್ಲಾ ಲೇಖನಗಳು.
ತುಂಬಾ ಸಂತೋಷ ಆಯ್ತು. ಹೀಗೆ ಮುಂದು ವರಿಯಲಿ
Great memory, sweet write up. Liked very much 👌👌🌹🌹
ನಿಮ್ಮ ನಾಗರಪಂಚಮಿ ಹಬ್ಬ ಸಂಭ್ರಮದ ಲೇಖನ ಓದಿದೆ.ನೀವು ನೆನಪಿಸಿಕೊಂಡ ಬಾಲ್ಯದ ಆ ಹಬ್ಬದ ಅನುಭವ ನನಗೂ ಆಗಿದೆ. ಹರಪನಹಳ್ಳಿಯಲ್ಲಿ ನಾನೂ ತೆಂಗಿನಕಾಯಿ ಒಡೆದಿದ್ದೆ.ಜೋಕಾಲಿ, ತೂರೋಬಿಲ್ಲಿ,ಕೂಬ್ಬರಿದಾರದ ಆಟ,ನಿಂಬೆಹಣ್ಣು ಓಡಿಸುವುದು,ಮುಂತಾದವು ಬಾಲ್ಯ ದಲ್ಲಿ ನೋಡುತ್ತಿದ್ದೆ.ಆ ದಿನಗಳು ಬರಲಾರವು.! ನಿಮ್ಮ ಲೇಖನ ಸಾಹಿತ್ಯಿಕ ವಾಗಿ,ಓದಲು ಖುಷಿ ಯಾಗುತ್ತದೆ.
ಹಬ್ಬದ. ಶುಭಾಶಯಗಳು.
ರಾಯಸಂ.
Super writing sir. The script reading visualizes and recalls the actual happy moments we spent in childhood.👌🏻🙏🏻
Really your writing is appreciated as it reminds the childhood days spent which are only memory and will never return. Thanks for good article.
ನೆನಪುಗಳ ಬುತ್ತಿ ಭಂಡಾರದಂತಿದೆ. ಸೊಗಸಾಗಿದೆ. ನಾನೂ ಸಹ ಊರ ಮುಂದಿನ ದೊಡ್ಡ ಮರಕ್ಕೆ ಕಟ್ಟಿದ ಜೋಕಾಲಿ ಆಡುವುದು ಸಾಹಸದ ಆಟದಂತಿತ್ತು. ಸಣ್ಣ ಸಣ್ಣ ಸೂಕ್ಷ್ಮ ವಿಧಿವಿಧಾನಗಳನ್ನು ನಿನ್ನ ನೆನಪಿನ ಭಂಡಾರದಿಂದ ಎಳೆ ಎಳೆಯಾಗಿ ಹೇಳಿದ್ದೀಯ. ಅಲ್ಲೂ ಸಹ ಹೆಂಗಳೆಯರಿಗೇ ಪ್ರಾಧಾನ್ಯ. ಅಪ್ಪಾಜಿ ಇದ್ದಾಗಲೇ ಬರೆಯುತ್ತಿದ್ದರೆ ಅವರೂ ಸಂಭ್ರಮಿಸುತ್ತಿದ್ದರು. ಸ್ವಾರಸ್ಯಕರ ಕೌಶಲ್ಯಭರಿತ ಬರವಣಿಗೆ ಮುಂದುವರೆಯಲಿ.