ಹೊರಗೆ ಹದವಾದ ಬಿಸಿಲು.
ತೀರ ವೇಗವೂ ಅಲ್ಲದ ಮಂದವೂ ಅಲ್ಲದ ಹಾಗೇ ಚಲಿಸುತ್ತಿರುವ ಬಸ್ಸು.ಸಹಪಯಣಿಗರ ಸದುದ್ದೇಶ ಭರಿತ ಮೌನ.ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತು ಓಡುವ ಗಿರಿ, ಮರ ಕೆರೆಗಳನ್ನು ಕಣ್ತುಂಬಿಕೊಳ್ಳುತ್ತಾ,ಫೋರ್ಲೇನ್ ರಸ್ತೆಯ ನಡುಮಧ್ಯದ ಗ್ರೀನ್ ಸ್ಪೇಸಿನಲ್ಲಿ ನಿಚ್ಛಂಪೊಸತು ಎಂಬಂತೆ ಗಂಟೆಗಂಟೆಗೂ ಹೊಸ ಹೂವು ಅರಳಿಸಿಕೊಂಡು ನಗುವ ಕಣಗಿಲ ಹೂವ ರಾಶಿಯನ್ನು ಸವಿಯುತ್ತಾ ,ಹೊಳೆದ ಯಾವುದೋ ಸಾಲಿಗೆ ಮುದಗೊಂಡು ಮನಸಲ್ಲೇ ಮುಂದುವರೆಸುತ್ತಾ ಮುಗುಳ್ನಗುವೊಂದನ್ನು ಹೊದ್ದು ಸಾಗುತ್ತಿರುವ ಸಮಯ. ಹಾಸನದಿಂದ ಬೆಂಗಳೂರು ಮಹಾನಗರಿಗೆ ನನ್ನ ಪಯಣ.ಬಸ್ಸಿನ ಎಂಜಿನ್ ಸದ್ದೂ ಮೃದುವಾದ ಮುದವಾದ ಸಂಗೀತದಂತೆ ಅನಿಸುತ್ತಿರುವ ದಿವ್ಯ ಘಳಿಗೆಯದು.
ಇಂತಹದೊಂದು ಸುದಿನ ಸುಮೂಹರ್ತದಲ್ಲಿ ಮುಂದಿನ ಸೀಟಿನಿಂದ
“ಕ್ಯಾ…ವ್ಯಾ..ಕ್್ಕ್್್ಕ್್್್ಕ್್” ಎನ್ನುವ ಈ ಹಿಂದೆ ಎಂದೂ ಕೇಳಿರದಂತಹ ,ಕಂಡಿರದಂತಹ ಕ್ಯಾಕರಿಸಿದ ಸದ್ದಿಗೆ ಬಾಂಬು ಬಿದ್ದವಳಂತೆ ಭಯಭೀತಳಾಗಿ ಮುಂದಿನ ನೇರ ಪರಿಣಾಮದ ಗಾಬರಿಯಲ್ಲಿ ಕಿಟಿಕಿ ಗ್ಲಾಸು ಮುಚ್ಚಬೇಕೆಂದು ನನ್ನ ಬಲಗೈ ಗ್ಲಾಸಿನ ಮೇಲಿಡುವುದಕ್ಕೂ ,ಮುಂದಿದ್ದ ವ್ಯಕ್ತಿ ಕತ್ತುಹೊರಚಾಚಿ ‘ಕ್ಯಾಕ್್್್್್’ ಅಂತ ತುಪ್ಪುವುದಕ್ಕೂ ಸರಿಯಾಗಿಹೋಯ್ತು.
ಥಿಯೇಟರ್ ಗೆ ಹೋದರೆ ಮನೆಯಿಂದ ಒಂದು ದುಪ್ಪಟ್ಟಾ ಒಯ್ದು ಸೀಟಿನ ಮೇಲೆ ಹಾಕಿಕೊಳ್ಳುವ,ಹೋಟೆಲಿಗೆ ಹೋಗಲೇ ಬೇಕಾದಾಗ ಮಾತ್ರ ಹೋಗಿ ,
ಹೋದರೂ ತಟ್ಟೆ ಲೋಟ ಎಲ್ಲವನ್ನೂ ಹತ್ತು ಸರ್ತಿ ಟಿಷ್ಯುವಿನಲ್ಲಿ ಸ್ವಚ್ಛ ಗೊಳಿಸಿಕೊಳ್ಳುವ,ಮನೆಯಲ್ಲಿ ಮಕ್ಜಳಿಗೂ ಗಂಡನಿಗೂ ಕೆಮ್ಮುವುದಕ್ಕೂ ಸೀನುವುದಕ್ಕೂ ಬಿಗಿ ಕಾನೂನು ಕಟ್ಟಳೆ ರೂಪಿಸಿರುವ ಘನ ಮಹಿಮೆಯ ಮಹತ್ತುಳ್ಳ ನನ್ನ ಕೈ ಬೆರಳಿನ ಕಡೆಗೆ ಮುಂದಿದ್ದ ವ್ಯಕ್ತಿಯ ಶಿರದಿಂದ ಕಿರುಬೆರಳಿನವರೆಗಿನ ನರನಾಡಿಗಳಲ್ಲಿಸಂಚಯಿತವಾಗಿದ್ದ ಕಫದ ತೊಪ್ಪೆಯ ಒಂದು ತುಣುಕು ಹಾರಿ ಬಂದು ಕುಳಿತೇ ಬಿಟ್ಟಿತು.
ನನ್ನ ಬಿಳಿಹರಳಿನ ಉಂಗುರ ನೀಟಾಗಿ ಕತ್ತರಿಸಿಕೊಂಡಿದ್ದ ಉಗುರು
ಪದೇಪದೇ ಸ್ಯಾನಿಟೈಸ್ ಮಾಡಿಕೊಂಡಿದ್ದ ಬೆರಳುಗಳ ಮಹತ್ತನ್ನೂ ಗಮನಿಸದೆ ಕುಳಿತ ಆ ತೊಪ್ಪೆಯನ್ನು ಕ್ಷಣ ಗಾಬರಿಯಿಂದ ನೋಡಿದೆ.
ಹೃದಯ ಶ್ವಾಸಕೋಶ, ಅನ್ನನಾಳದ ಸಮಸ್ತ ಪದಾರ್ಥವೂ ಕುಳಿತ ಆ ತೊಪ್ಪೆಯ ತುಣುಕಿನಿಂದ ಹೇವರಿಕೆಗೊಂಡು ಹೊರ ಬರಲು ಬಯಸಿ ವಾಕರಿಕೆ ಶುರುವಾಗುವ ಹೊತ್ತಿನಲ್ಲೇ ಇನ್ನೂ ಮುಚ್ಚದೇ ಇದ್ದ ನನ್ನ ಕಿಟಿಕಿಯ ಮುಂಬಾಗದ ಬದಿಯಿಂದ ಎರಡೇ ಸೆಕೆಂಡಿನೊಳಗೆ ಮತ್ತದೇ ಕತ್ತು ಹೊರಬಂದು ಮತ್ತೊಮ್ಮೆ ಕರ್ಣಕಠೋರ ಸದ್ದಿನೊಡನೆ ತುಪ್ಪಿದ್ದು ನನ್ನ ಗೋಲ್ಡ್ ರೇಡಿಯೆನ್ಸ್ ಕ್ರೀಮು ಲೇಪಿಸಿ ಸಣ್ಣಗೆ ಹೊಳೆಯುತ್ತಿದ್ದ ಕೆನ್ನೆಯ ಮೇಲೆ ತುಂತುರು ಸೋನೆ ಮಳೆಯಂತೆ ಸಿಡಿದು ಬಿಟ್ಟಿತು.
ನಖಶಿಖಾಂತ ಕೊಳಕಿನ ಕೊಳದಲ್ಲಿ ಅದ್ದಿದಂತಾಗಿ ಕೈ ಬೆರಳ ಮೇಲಿದ್ದ ತೊಪ್ಪೆ ತುಣುಕನ್ನು ಒರೆಸಿಕೊಳ್ಳಲು ಟಿಷ್ಯೂ ಹುಡುಕುವುದಕ್ಕೆ ಮತ್ತದೇ ಕೈಯ ನೆರವು ಪಡೆಯಲು ಮನಸ್ಸು ಒಪ್ಪದೆ, ಮುಖದ ಮೇಲಿನ ಕಫದ ಸೋನೆಗೆ ವ್ಯಾಕರಿಕೆ,ಕ್ಯಾಕರಿಕೆ,ಹುಃಕರಿಕೆ ,ಶೋಕ ಎಲ್ಲವೂ ಒಟ್ಟಿಗೆ ಆರಂಭವಾಗಿ ಎದುರು ಸೀಟಿನ ವ್ಯಕ್ತಿಗೆ ನಾನೂ ತುಪ್ಪೆ ಬಿಡುವ ಭರದಲ್ಲಿ ಎದ್ದುನಿಂತೆ.
ಮುಖದ ಸೋನೆ ,ಬೆರಳ ತುಣುಕನ್ನು ಹತ್ತಾರು ಟಿಷ್ಯೂಗಳನ್ನು ಖರ್ಚು ಮಾಡಿ ಒರೆಸಿ ಹಾಕಿದರೂ ಮಹಾಹೇಸಿಗೆಯೊಂದರಲ್ಲಿ ಬಿದ್ದು ಎದ್ದಂಥ ಒದ್ದಾಟದಲ್ಲಿ
ಕ್ರೋಧಾನ್ವಿತಳಾಗಿ ಗಂಟಲು ಸರಿಪಡಿಸಿಕೊಂಡೆ.
“ಏನಯ್ಯಾ..ಮನುಷ್ಯತ್ವವೇ ಇಲ್ಲವೆ ನಿಮಗೆ.
ಉಗುಳ ಬೇಕೆಂದ್ರೆ ಹಿಂದೆಮುಂದೆ ಕುಳಿತವರ ಪರಿಜ್ಞಾನ ಇಲ್ಲವೇ.?
ನಿಮಿಷಕ್ಕೊಮ್ಮೆಉಗಿವ ಚಟವಿದ್ರೆ ಸರ್ಕಾರಿ ಬಸ್ ಯಾಕ್ರೀ ಹತ್ತಿದ್ರಿ.?
ಹೋಗಬೇಕಿತ್ತು ದಾರಿಯುದ್ದಕ್ಕೂ ತುಪ್ಪಿಕೊಂಡು ನಿಮ್ಮ ಸ್ವಂತ ಗಾಡಿಯಲ್ಲಿ..
ಯಾರು ಬೇಡಾಂದಿದ್ರು..?”
ಮೈಮನಸ್ಸಿನ ಕೋಪವನ್ನು ಧ್ವನಿಯ ಮೂಲಕ ಹೊರಹಾಕಲು ಅಶಕ್ಯವೆನಿಸಿದರೂ ಶಕ್ತಿಮೀರಿ ಯತ್ನಿಸುತ್ತಿರುವಾಗಲೇ ಆ ಉಗುಳು ವೀರ ಮಾತ್ರ ಏನೂ ಕೇಳಲೇ ಇಲ್ಲವೆಂಬಂತೆ,ತನಗದು ಸಂಬಂಧಿಸಿಯೂ ಇಲ್ಲವೆಂಬಂತೆ ಶ್ವಾಸಕೋಶ ಖಾಲಿಯಾದ ಸುಖದ ನಿರಾಳತೆಯಲ್ಲಿ ನನ್ನೊಮ್ಮೆ ಕಡೆಗಣ್ಣಿನಲ್ಲಿ ನೋಡಿ ಮತ್ತೆ ಅರ್ದನಿಮೀಲಿತನಾದ.
ಈ ಘನಘೋರ ಹೇಸಿಗಿ ಕೆಲಸ ಮಾಡಿದ್ದನ್ನು ವಿರೋಧಿಸಲು ಸಹಪಯಣಿಗರ ನೆರವು ಸಿಗಬಹುದೇ ಅಂತ ಸುತ್ತಾ ನೋಡಿದೆ. ಮುಕ್ಕಾಲು ಮಂದಿ ಸುಖನಿದ್ರೆಯಲಿದ್ದರೆ ಉಳಿದವರು ಅಚಾನಕ್ಕುಆರಂಭವಾದ ಗಲಾಟೆಗೆ ಎಚ್ಚರಾಗಿ ಮಂಪರು ಮೆತ್ತಿದ ನೋಟದಲ್ಲಿ ನನ್ನೊಮ್ಮೆ ನೋಡಿ ಯಥಾ ಸ್ವಲೋಕಕ್ಕೆ ತೆರಳಿ ತಣ್ಣಗಾದರು.ಈ ನಡುವೆ ಬಸ್ಸು ಹತ್ತಿದಾಗಿಂದ ನನ್ನನ್ನೇ ನೋಡುತ್ತಿದ್ದ ಆ ಚಲುವ ಮಾತ್ರ ನಿಂತಿರುವ ನನ್ನ ಪೋಸು ನೋಡಲೆಂದೇ ಇಷ್ಟು ಹೊತ್ತು ಕಾದಿದ್ದವನಂತೆ ನೆಟ್ಟಗೆ ಕುಳಿತ.ಅಸಡ್ಡೆಯಲ್ಲಿ ಬಿಗಿದ ತುರುಬಿನಿಂದ ಅವನಿಗೆ ಕಾಣುವ ನನ್ನ ನಡುವಿನವರೆಗೂ ನೋಡಿ ಸ್ಟೈಲಾಗಿ ಕಣ್ಣು ಮಿಟುಕಿಸಿಯೂಬಿಟ್ಟ.
ಅರೆ..ತುಪ್ಪಿದವನನ್ನು ಮಾತಿನಲ್ಲಿ ತದುಕಲು ಎದ್ದು ನಿಂತವಳಿಗೆ ಮತ್ತೊಂದು ಬಾಣ ಚುಚ್ಚಿದಂತಾಗಿ ಕುಕ್ಕರಿಸಿದರೂ ಮನುಷ್ಯ ಸಹಜ ಬಯಕೆ. ಮತ್ತೊಮ್ಮೆ ನೋಡಿದೆ..ನನ್ನ ರಾಣಿ ಚೆನ್ನಮ್ಮ ಪೋಸನ್ನು ಬಹಳ ಮೆಚ್ಚಿಕೊಂಡವನಂತೆ ಸಣ್ಣಗೆ ನಕ್ಕ.ನನ್ನ ಸೋನೆ ಸಿಡಿದ ಮುಖದಲ್ಲಿ ಸಣ್ಣಗೆ ಬೆವರೊಡೆಯಿತು.
ಅದೆಲ್ಲಾ ಅಂತಿರಲಿ.
ನನ್ನ ಬೆರಳು ಮತ್ತು ಮುಖದ ಸೋನೆ ತೊಪ್ಪೆಗಳು ಇನ್ನೂ ಅಲ್ಲೇ ಇವೆಯೇನೋ ಅನಿಸುವಂತಾಗಿಬಿಟ್ಟಿದೆ ಮನಸ್ಸಿಗೆ.ಮನೆಗೆ ಹೋದವಳೇ ನನ್ನ ಚರ್ಮದ ಒಂದು ಲೇಯರನ್ನೇ ಕಿತ್ತುಹಾಕುವವಳಂತೆ ಸೀಗೆಪುಡಿ ತಿಕ್ಕಿ ,ಡೆಟಾಲ್ ಸುರಿದು,ಕುದಿ ಕುರಿ ನೀರನ್ನು ಸುರಿಸುರಿದುಕೊಂಡು ಮಿಂದರೂ
ಮನಸ್ಸಿಗೆ ಸಮಾಧಾನ ಆಗಲಿಲ್ಲ ಎನ್ನಿ.
ಈ ಘಟನೆಯ ನಂತರ ಈ ಉಗುಳುವೀರರ ಕುರಿತು ಆರಂಭವಾದ ಅಸಹನೆ ಬಸ್ಸಿನಲ್ಲಿ ಸೀಟು ಹಿಡಿಯುವಾಗ ಮುಂದಿನವರ,ಹಿಂದಿನವರ,ಪಕ್ಕದವರ ಮೈಯಿ ಬಾಯಿ ಕೈಯಿ,ಆರೋಗ್ಯ, ಅನಾರೋಗ್ಯಗಳ ವರದಿಯನ್ನು ಕಣ್ಣಲ್ಲೇ ಒಮ್ಮೆ ತಯಾರು ಮಾಡಿ ಯೋಗ್ಯವೆನಿಸಿದರೆ ಮಾತ್ರ’ಪವಡಿಸು ಪರಮಾತ್ಮ’
ಹಂತಕ್ಕೆ ನನ್ನನ್ನು ತಂದಿಟ್ಟಿದೆ.
ನನ್ನ ವಕ್ರ ಅದೃಷ್ಟಕೆಂಬಂತೆ ನಮ್ಮದೇ ಕಾರಿನಲ್ಲಿ ಹೋಗುವಾಗಲೂ ಎದುರು ಸಿಗುವ ಪಾದಾಚಾರಿಗಳು,ಬೈಕಿಗರು,ಸ್ಟೀರಿಂಗ್ ತಿರುಗಿಸುವವರಿಗೂ ನನ್ನ ನೋಟ ದಕ್ಕಿದೊಡನೆ ಗಂಟಲಲ್ಲಿ ಕಿಚ್ ಕಿಚ್ ಶುರುವಾಗಿ ತುಪ್ಪುವ ಅವಸರವಾಗ್ತದೆ.
ಜೊತೆಯಲ್ಲಿದ್ದವರಿಗೆ ಕಾಣದ ಈ ಪೀಕುವ ದೃಶ್ಯ ನನ್ನ ಕಣ್ಣಿಗೆ ಮಾತ್ರ ಬಿದ್ದು ನನ್ನ ಸುಖಪಯಣವೂ ಪೀಕುಶೋಕದಲ್ಲಿ ಮುಳುಗಿಹೋಗುತ್ತದೆ.
ಇನ್ನು ಕೆಲವರಂತೂ ತಾವು ಈ ಮನುಷ್ಯ ಲೋಕದವರೇ ಅಲ್ಲವೇನೋ ಎಂಬಂತೆ ದೊಡ್ಡ ದೊಡ್ಡ ಬಿಳಿ ಹಳದಿ ತೊಪ್ಪೆ ಗುಪ್ಪೆಗಳನ್ನು ನಿಂತಲ್ಲಿಂದ ಅಲುಗಾಡದೇ ಸುತ್ತಲೂ ತುಪ್ಪಿಕೊಳ್ಳುತ್ತಾರೆ.
ಜೊತೆಗೆ ಅದೇನು ಅಂತಹ ಘನಂದಾರಿ ಗಲೀಜಲ್ಲವೇನೋ ಎಂಬಂತೆ ಅಕ್ಕಪಕ್ಕ ಹಾದುಹೋಗುವವರಿಗೆ ದಾರಿ ಬಿಡದೆ,ತಾವು ತುಪ್ಪಿದ್ದರ ಮೇಲೆ ನಡೆದುಹೋದರೆ ಅವರ ಜನ್ಮ ಪರಮ ಪಾವನವಾಗುವುದೇನೋ ಎಂಬಂತ ಕೃತಕೃತ್ಯ ಭಾವದಲ್ಲಿ ಮತ್ತಷ್ಟು ಅದೇ ಜಾಗದಲ್ಲಿ ಮೊಳೆಕೆಯೊಡೆದಂತೋ, ಮೊಳೆ ಹೊಡೆದಂತೋ ನಿಂತು ಬಿಡುತ್ತಾರೆ.ಇದನ್ನೆಲ್ಲಾ ನೋಡಿಯೇ ಸಂಭ್ರಮಿಸಬೇಕು.(?)
ಹೋಟೆಲುಗಳಲ್ಲಿ ಈ ಉಗುಳುವೀರರ ದರ್ಬಾರಿಗೆ ಹೊಸ ಕಳೆ.ಓಪನ್ ದರ್ಶಿನಿಗಳಲ್ಲಂತೂ ಕೈ ತೊಳೆಯುವ ಸಿಂಕೂ ಅಲ್ಲೇ ಇದ್ದುದರ ಪರಿಣಾಮ ಊಟಕ್ಕೂ ಮೊದಲು ಮತ್ತು ನಂತರ ತಮ್ಮ ಬಾಯಿ ಗಂಟಲು ಅನ್ನನಾಳ ಕ್ಕೂ ಕೆಳಗಿಳಿದು ಸಂಚಯಿತ ಪದಾರ್ಥಗಳನ್ನು ಚಿತ್ರ ವಿಚಿತ್ರ ಸದ್ದಿನೊಂದಿಗೆ ಹೊರಹಾಕಿ ಕೊನೆಯ ದಾಗಿ ಮೂಗಿನ ಶುದ್ದತೆಗೂ ಗಮನ ಹರಿಸುವ ಅವರನ್ನು ಕಂಡಾಗ ಸ್ವಚ್ಛ ಭಾರತದ ಕಲ್ಪನೆ ಎಷ್ಟೊಂದು ಯಶಸ್ವಿಯಾಗಿ ಕಾರ್ಯಗತವಾಗಿದೆ ಎನಿಸ್ತದೆ.ಅಲ್ಲಿ ನಿಂತುಕುಂತು ತಿನ್ನುತ್ತಿರುವವರ ಕುರಿತು ಮರುಕವೂ ಆಗ್ತದೆ ಅನ್ನಿ.
ಗಲ್ಲಿಗಳಲ್ಲಿ,ತಿರುವುಗಳಲ್ಲಿ, ಸರ್ಕಲ್ಲುಗಳಲ್ಲಿ,ರಸ್ತೆಗಳಲ್ಲಿ ಉಗುಳು ವೀರರ ದಾಳಿಗೆ ಬಲಿಯಾಗುವುದು ನಗರವಾಸಿಗಳಿಗೆ ತೀರಾ ಸಹಜವಾಗಿರುವಾಗ ನನ್ನ ‘ಛೀಈಈ..ವ್ಯಾಕ್..’ಎನ್ನುವ ಸಶಬ್ದ ಹೇಸಿಕೊಳ್ಳುವ ಬಗೆ ನಗರಿಗರಿಗೆ ಅಷ್ಟೇನೂ ಸಮಂಜಸವಾಗಲಾರದೇನೊ.
ಇನ್ನು ಈ ಪೀಕುಗಾರರಿಗಾಗಿಯೇ ಇರುವ ಬರಹಗಳು , ಫಲಕಗಳು ಇನ್ನೂ ಪುಲಕ ಕೊಡುತ್ತವೆ. ಅಪರೂಪಕ್ಕೆ ಟ್ರೈನು ಹತ್ತುವ ನಾನು ಒಮ್ಮೆ ಅಲ್ಲಿ ಕಂಡ “ಟ್ರೈ ನಿನ ಒಳಗೆ ಉಗಿಯುವಂತಿಲ್ಲ’ ಬರಹ ನೋಡಿ ಗಾಬರಿಯಾಗಿ ಎಲ್ಲಿ ಕೂರುವುದು,ಎಲ್ಲಿ ನಿಲ್ಲುವುದು,ಎಲ್ಲಿ ಹಿಡಿಯುವುದು ,ಎಲ್ಲಿ ಮಡಿಯುವುದು (ಛೆ..ಪ್ರಾಸಕ್ಕೆ ಬಂದ್ ಬಿಡ್ತು)ತಿಳಿಯದೆ ಪರದಾಡಿದ್ದೆ.
ಈಗಲೂ ರೈಲು ಪ್ರಯಾಣದಲ್ಲಿ ಈ ಬರಹದ ನೆನಪಾಗಿ ಗ್ಲಿಟರ್ ಕ್ರಿಮು ಲೇಪಿಸಿಕೊಂಡು ಹೊಳೆಯುವ ನನ್ನ ಮುಖ ಹುಳ್ಳಗಾಗುತ್ತದೆ.
ಒಮ್ಮೆ ಬೆಂಗಳೂರೆಂಬ ಮಹಾನಗರದಲ್ಲಿ ಶಾಪಿಂಗಿನ ಸಲುವಾಗಿ ಬೀದಿ ಪಾಲಾದ ಸಮಯ. ನನ್ನ ಹಾದುಹೋದ ಸ್ಕೂಟರಿನವನೊಬ್ಬ ಕ್ಯಾಕರಿಸಿ’ಕತ್ರಿಗುಪ್ಪೆ’ ಎನ್ನುವ ಬೋರ್ಡುಗಲ್ಲಿಗೆ ತುಪ್ಪಿದಾಗ ಆ ತೊಪ್ಪೆ ನೇರ ‘ಕತ್ರಿ’ಯಮೇಲೆ ಆಸೀನವಾಗಿ ‘ಗುಪ್ಪೆ’ಯನ್ನು ಮಾತ್ರ ಕಾಣಗೊಟ್ಟಿತು ಎಂದರೆ ಆ ಉಗುಳು ವೀರನ ಪರಾಕ್ರಮ ವನ್ನು ಊಹಿಸಿಕೊಳ್ಳಬಹುದು.
ನನ್ನೆದುರೇ ನಡೆದ ಈ ದಾಳಿಗೆ ನನ್ನೊಳಗಿಂದಲೂ ದ್ರವವೊಂದು ಉಕ್ಕಿಬಂದು ಅಲ್ಲೇ ಬದಿಯಲ್ಲಿ ಕಂಡ ಡ್ರೈನೇಜಿಗೆ ತುಪ್ಪುವ ತೀವ್ರ ತುಡಿತವನ್ನು ಪೂರೈಸಿಕೊಳ್ಳುವ ಮೊದಲು ಯಾರಾದರೂ ನೋಡ್ತಿದ್ದಾರಾ ಅಂತ ಸುತ್ತ ನೋಡಿ ಪರೀಕ್ಷಿಸಿಕೊಂಡಾಗ ಡ್ರೈನೇಜಿನ ಪಕ್ಕದ ಗೋಡೆ ಮೇಲೆ ಕಂಡಿದ್ದು
” ಇಲ್ಲಿ ಉಗುಳುವವರು ಮಲ ತಿಂದಂತೆ” ಎಂಬ ಬರಹ.!!
ಮತ್ತೆಂದೂ ನನ್ನ ಬಾಯಿ ದ್ವಾರದಿಂದ ಹೊರಬರುವುದಿಲ್ಲವೆಂಬಂತೆ ಒಳಹೋದ ದ್ರವ ಹುಟ್ಟಿಸಿದ ತಳಮಳವನ್ನು ಯಾವ ಪದ ಬಳಸಿ ಇಲ್ಲಿ ಬರೆದರೂ ನಿಮಗೂ ತುಪ್ಪುವ ತೀವ್ರ ತುಡಿತವುಂಟಾಗಿ..ಆಮೇಲೆ…
…
ಸದಾ ಹಚ್ಚ ಹಸುರು, ಶುಭ್ರ ಗಾಳಿ,ಮಂಜುಹೊತ್ತ ಗರಿಕೆ,ಪುಟಾಣಿ ಇರುವೆ ಗೂಡು, ಕಲರವಿಸುವ ಹಕ್ಕಿ,ಅಳಿಲು ನವಿಲುಗಳೇ ಯೋಗಕ್ಷೇಮ ವಿಚಾರಿಸಿಕೊಳ್ಳುವ ಪುಟ್ಟ ಹಳ್ಳಿಯಲ್ಲಿ ನನ್ನ ವಾಸ.
ಇಂತಹ ಚಂದದೂರಿನಲ್ಲಿ ನನ್ನ ಇರಿಸಿದ್ದಕ್ಕಾಗಿ ದೇವರಿಗೆ ಆಗಾಗ ಕೈಮುಗಿದರೂ ಅವನೇನು ಅಷ್ಟೊಂದು ಕರುಣಾಮಯಿಯಾಗಲಿಲ್ಲ ನನ್ನ ಪಾಲಿಗೆ.
ಕಾರಣ..
ದೊಡ್ಡದಾದ ಒಡಮನೆಯ ಎಡಬಾಗದಲ್ಲಿ ನಮ್ಮ ವಾಸ್ತವ್ಯ.
ಈಗೈದು ವರ್ಷಗಳ ಹಿಂದೆ ನನ್ನ ಮಲಗು ಕೋಣೆಯ ನೇರ ಎದುರಿಗಿದ್ದ ಸಣ್ಣ ತೋಟವನ್ನು ನೆಲಸಮ ಮಾಡಿ ಮನೆಯೊಂದು ತಲೆಯೆತ್ತಿದೆ.
ಅಚೀಚೆ ಮನೆಯ ಈ ಇಬ್ಬರು ಗಂಡಸರೂ ಆಗಾಗ ಕ್ಯಾಕರಿಸುವ ವ್ಯಾಕರಿಸುವ ಘನಘೋರ ಸದ್ದು ವಾಚಮಗೋಚರ ನನ್ನ ಕಿವಿಗೆ ಬಿದ್ದು
‘ದೂರ ಬಯಲಿನಲ್ಲಿ ಒಂದು ಮನೆಯಿರಬೇಕು’ ಎನ್ನುವ ಅಸೆ ದಿನೇದಿನೇ ಗಟ್ಟಿಯಾಗುತ್ತಿದೆ.. ಇದಕ್ಕಿಂತಲೂ ದೊಡ್ಡ ಸಂಗತಿಯೆಂದರೆ ಈ ಆಚೀಚೆ ಮನೆಯ ಗಂಡಸರಿಗೆ ನನ್ನ ಊಟತಿಂಡಿಯ ಕರಾರುವಾಕ್ಕು ಸಮಯ ಗೊತ್ತಾಗಿ ಅದೇ ಹೊತ್ತಿನಲ್ಲಿ ಕ್ಯಾಕರಿಸಲು ಮೊದಲಿಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಊಟಕ್ಕೂ ಮೊದಲು ಆಚೆ ಬಗ್ಗಿನೋಡಿ ಅವರವರ ಶೆಡ್ಡಿನಲ್ಲಿ ಕಾರುಗಳು ಇಲ್ಲದಿದ್ದರೆ ನಿರಾಳವಾಗಿ ಊಟ ಮಾಡುವ ಪದ್ದತಿ ಆರಂಭವಾಗಿಬಿಟ್ಟಿದೆ.
ನಮ್ಮದು ಕಾಫಿ ತೋಟವಾದ್ದರಿಂದ ಹಣ್ಣುಕುಯ್ಲಿನ ನಂತರ ‘ಹನಕಲು’ಅಥವಾ ‘ಬೇಳೆ ಆಯುವ’ಕೆಲಸ ಕಾಯಮ್ಮಾಗಿ ಮಾಡಲೇಬೇಕು.
ಹಣ್ಣು ಕೊಯ್ಲಿನಲ್ಲಿ ಉದುರಿದ್ದ,ಪ್ರಾಣಿ ಪಕ್ಷಿಗಳು ತಿನ್ನುವಾಗ ಉದುರಿಸಿದ ಕಾಫಿ ಬೆಳೆಗಳನ್ನು ಆಯುವ ಕೆಲಸ. ಈ ಕೆಲಸದ ಸಂದರ್ಭದಲ್ಲಿ ತೋಟಕ್ಕೆ ಹೋಗುತ್ತಿದ್ದ ನಾನೂ ನಮ್ಮ ಹೆಣ್ಣಾಳುಗಳ ಜೊತೆಗೆ ಬೇಳೆ ಆಯಲಿಕ್ಕೆ ಕೈ ಜೋಡಿಸ್ತಿದ್ದೆ.
ಹೇಳಿಕೇಳಿ ನಮ್ಮ ಕಡೆ ಕೂಲಿ ಕಾರ್ಮಿಕರಿಗೆ ತಂಬಾಕಿನ ಖಯಾಲಿ.
ಅದ್ರಲ್ಲೂ ಹೆಣ್ಣಾಳಿಗೆ ಎಲೆಅಡಿಕೆ ಜೊತೆಗೆ ಕಡ್ಡಿಪುಡಿ ತಮ್ಮ ಕೆನ್ನೆ ಬದಿಯಲ್ಲಿ ದೊಡ್ಡ ನಿಂಬೆಕಾಯಿ ಗಾತ್ರದಲ್ಲಿ ಇರಲೇಬೇಕು. ಕರಸೋಟೆಯಲ್ಲಿ ಸದಾ ರಸ ಒಸರುತ್ತಲೇ ಮಾತಾಡ್ತಾ ಅಲ್ಲಲ್ಲಿ ಹೆಚ್ಚಿದ್ದ ರಸವನ್ನು ಕಡ್ಡಿಪುಡಿ ರಾಶಿ ಸಮೇತ ತುಪ್ಪುತ್ತಾ ಕೆಲಸ ಮಾಡುವುದು ಅನೂಚಾನ. ಈ ಅಭ್ಯಾಸ ಇರದವರೂ ಕೂಡ ಕೆಲಸಕ್ಕೆ ಬಂದ ನಂತರದ ದಿನಗಳಲ್ಲಿ ತಂಬಾಕು ಜಗಿಯುವುದನ್ನು ಕಲಿತುಬಿಡುತ್ತಾರೆ.ಇದಕ್ಕೆ ಮಹತ್ತರವಾದ ಕಾರಣವೂ ಇದೆ.
ಐದು ಗಂಟೆಯ ಕೆಲಸದ ಅವಧಿಯಲ್ಲಿ ಆರು ಬಾರಿಯದರೂ ‘ಎಲೆ ಹಕ್ಕಾ ಬಾರದಾ ಕಾಣಿ’ ಅಂತ ಓನರಮ್ಮನನ್ನು ಗದರಿಸಿ ಅಲ್ಲಲ್ಲಿ ಮೊಳಕೆ ಬಿಡುವುದು ತಂಬಾಕಿನ ಮೂಲ ಉದ್ದೇಶ.
ಹೋಗಲಿ.ಅದು ಪರಂಪರಾಗತವಾದ್ದರಿಂದ ಅದಕ್ಕೆ ಹೆಚ್ಚಿನ ಮಹತ್ವ ಬೇಡ.
ಇಂತದ್ದೇ ಹೊತ್ತಿನಲ್ಲಿ ನಾನು ತೋಟದಲ್ಲಿ ಬೇಳೆ ಆಯುತ್ತಿದ್ದೆ.ಕಾಟಾಚಾರಕ್ಕೆ ಆಯ್ದುಕೊಂಡು ಮುಂದೆ ಮುಂದೆ ಹೋಗ್ತಿದ್ದ ಹೆಣ್ಣಮಗಳೊಬ್ಬಳ ಸಾಲಿನಲ್ಲಿ ಹಿಂದಿನಿಂದ ನಾನು ಒಂದೂ ಕಾಳುಳಿಯದಂತೆ ಆಯ್ದುಕೊಂಡು ಬರುತ್ತಿದ್ದೆ.
ಒಂದು ವಿಶಾಲ ಕಾಫಿ ಗಿಡದ ಕೆಳಗೆ ಆಯುವ ಬರಸಿನಲ್ಲಿದ್ದ ನಾನು ಮುಂದೆ ಹೋದವರು ತುಪ್ಪಿದ್ದ ಕಡ್ಡಿಪುಡಿಯ ಕೆಂಪು ಬೆಟ್ಟಕ್ಕೆ ನೇರ ಕೈಹಾಕಿಬಿಟ್ಟೆ.
ಅಂದಿನ ನನ್ನ ಮನಸ್ಥಿತಿಯನ್ನು, ಬೆರಳ ಸ್ಥಿತಿಯನ್ನು ಹೇಳುವುದು ಹೇಗೂ ತ್ರಾಸವೇ.ಹೋಗಲಿ ಬಿಡಿ.
ಇನ್ನೊಂದು ಮಾತು.
ಹಳೆಯ ಕಂಚಿನ ಪಾತ್ರೆಗಳು ಹಿತ್ತಾಳೆ ಬಟ್ಟಲುಗಳೆಲ್ಲಾ ಈಗ ಪಾಲೀಷ್ ಹಾಕಿಸಿಕೊಂಡು ಡ್ರಾಯಿಂಗ್ ರೂಮಿನಲ್ಲಿ ಆರಾಮು ಪಡೆಯುವುದು ಅವುಗಳ ಪುನರ್ಜನ್ಮ ದ ಕಥೆ.ಇಂಥದ್ದೇ ಒಂದು ಚಂದದ ತಳ ಎತ್ತರವಿದ್ದ ಸುಂದರ ಬಟ್ಟಲೊಂದನ್ನು ನನ್ನ ಬೆಡ್ ರೂಮ್ ನಲ್ಲಿ ಇಟ್ಟು ನಾನು ಆಗಾಗ ಬಾಯಿಗೆ ಹಾಕಿಕೊಳ್ಳುವ ಚಿಕ್ಕಿಸ್ ಹಾಕಿಟ್ಟೆ. ಬಹಳ ದಿನಗಳಾದ ಮೇಲೆ ತಿಳಿಯಿತು ಅದು ‘ಪೀಕುದಾನಿ’ ಯೆಂದು.!ಚಿಕ್ಕಿಯೂ ಆ ಬಟ್ಟಲೂ ನಂತರದ ದಿನಗಳಲ್ಲಿ ವಿನಾ ನನ್ನ ಅಸಹನೆಗೆ ಗುರಿಯಾದವು.
ಸ್ನೇಹಿತರನ್ನು ಆರಿಸಿಕೊಳ್ಳುವುದು,ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಅವರವರ ವೈಯಕ್ತಿಕ ಆಯ್ಕೆ.ಹನ್ಸ್ ,ಜರ್ದಾ,ತಂಬಾಕು ,ಧೂಮಪಾನಗಳ ಸುಸ್ನೇಹದಲ್ಲಿರುವವರಿಗೆ ಅಡಿಗಡಿಗೆ ತುಪ್ಪುವುದು ಅಗತ್ಯವೇ ಇದ್ದರೂ ಅವರಿಗದೇನು ಪಾತಕ ಅಂತ ಅನಿಸದೇ ಹೋಗುವುದು ಮಾತ್ರ ನನಗೆ ಕೌತುಕ.
ಕಾಯ್ದೆ ಕಾನೂನು ಮಸೂದೆಗಳಂತವು ಈ ಉಗುಳವೀರರಿಗಾಗಿಯೇ ಮಂಡನೆಯಾಗಿದ್ರೂ,ಮೋದಿಜಿಯವರ ಮನ್ ಕೀ ಬಾತ್ ಲ್ಲೂ ಇಂಥ ಉಗುಳು ವೀರರ ಪ್ರಸ್ತಾಪ ವಾದರೂ,ಸ್ಮಾರಕ ಶಿಲ್ಪ ದೇವಾಲಯ ಸೇತುವೆ ರಸ್ತೆ ಕಟ್ಟೆ ಕೈಮರ ಪಾರ್ಕುಗಳೆಲ್ಲವೂ ಈ ಉಗುಳುವೀರರ ಕೃಪೆಗೆ ಪಾತ್ರರಾಗಿ ಅಚ್ಚಗೆಂಪುನ ಚಿತ್ತಾರ ಹೊದ್ದುಕೊಂಡಾದ ಮೇಲೂ ಈ ಪೀಕುದಾರರ ಲೋಕ ಮಾತ್ರ ತಮ್ಮ ಪಾಡಿಗೆ ತಾವು ಪೀಕುವುದನ್ನು ರಣವೇಗದಲ್ಲಿ ಮುಂದುವರೆಸುತ್ತಲೇ ಇದೆ. ರಾಜ್ಯಸರ್ಕಾರವೂ ೨೦೧೩ರ ಪೌರ ಕಾಯ್ದೆಯನ್ವಯ ಸಾರ್ವಜನಿಕವಾಗಿ ತುಪ್ಪುವುದು ಅಪರಾಧ ಅಂತ ಕಾನೂನು ಮಾಡಿದರೂ ಅದಕ್ಕೆಲ್ಲಾ ಗೋಲಿ ಮಾರೋ ಎಂಬಂತೆ ಜನಗಳಲ್ಲಿ ಜನಜನಿತವಾದ ಉಗುಳುಕಾರ್ಯ ರಣ ವೇಗದಲ್ಲಿ ಮುಂದುವರೆದಿದೆ.
ಇದು ಕರೋನಾ ಯೆರಾ.ಉಗುಳುವ,ಸೀನುವ,ಸಿಡಿಯುವ ಹಲವು ಬಗೆಗಳಿಂದಲೇ ವೈರಾಣು ನೆರೆಮನುಜರ ಮೊಗದ ದ್ವಾರಗಳಲ್ಲಿ ದಾರಿ ಗಿಟ್ಟಿಸಿ ಸವಾರಿ ಮಾಡುತ್ತದೆ ಎನ್ನುವುದೂ , ಕೆಲವರಿಗೆ ವೈಕುಂಠವನ್ನೂ ತೋರಿಸಿದೆ ಎನ್ನುವುದೂ ತಿಳಿದ ವಿಚಾರವೇ.ಕ್ಷಯದಂತಹ ಮಾರಣಾಂತಿಕ ರೋಗದಲ್ಲೂ ಉಗುಳುವೀರರ ಕೊಡುಗೆಯೇ ಘನವಾದದ್ದು.
ಮೂಢನಂಬಿಕೆ ಎನ್ನುವ ಅಸ್ಟ್ರಾಲಜಿಯ ಪ್ರಕಾರವೂ ನಮ್ಮ ಬದುಕಿನಲ್ಲಿ ಕೆಡುಕುಂಟು ಮಾಡುವ ಹತ್ತು ಕೆಲಸಗಳಲ್ಲಿ ಪದೇಪದೇ ತುಪ್ಪುವ ಕಾರ್ಯವೂ ಒಂದು.ಇನ್ನು ನಮ್ಮ ಪೌರಾತ್ಯ ರಾಷ್ಟ್ರಗಳಲ್ಲಿ ಸಾರ್ವಜನಿಕವಾಗಿ ಉಗುಳುವುದು ಸ್ವಚ್ಚತೆಯ ದೃಷ್ಟಿಯಿಂದ ಮಾತ್ರವಲ್ಲ ನಂಬಿಕೆಯಿಂದಲೂ ತಪ್ಪು.ಉಗುಳಿದ ಕೊಪ್ಪೆಯಡಿ ಸಿಲುಕಿದ ಅಸಂಖ್ಯ ಜೀವಿಗಳು ಉಸಿರುಕಟ್ಟಿ ಸಾಯುತ್ತವಂತೆ.ಕೊಂದ ಪಾಪದ ಹೊರೆ ಬರಬಾರದೆಂದರೆ ತಮ್ಮ ತಮ್ಮ ಬಚ್ಚಲುಮನೆಯಲ್ಲಿ ಮಾತ್ರ ತುಪ್ಪಿಕೊಳ್ಳುವುದು ಅಲ್ಲಿನ ವಾಡಿಕೆಯಂತೆ.
ಎಂತೆಂತದನ್ನೋ ನಂಬುವ,ಎರವಲು ಪಡೆಯುವ,ಅನುಸರಿಸುವ ನಾವು ಇದನ್ನು ಮಾತ್ರ ಕಡೆಗಣಿಸಿ ತುಪ್ಪು ಕಾರ್ಯದಲ್ಲೇ ಮಗ್ನರಾಗಿದ್ದೇವೆ.
ಆದರೆ…
ಈ ರಣರೋಗಗಳ ಸಂದರ್ಭದಲ್ಲಾದರೂ ಸರ್ಕಾರಗಳು ಸಾರ್ವಜನಿಕವಾಗಿ ಉಗುಳುವುದು ಶಿಕ್ಷಾರ್ಹ ಅಪರಾಧ ಎನ್ನುವ ಕಾನೂನನ್ನು ಬಿಗಿಯಾಗಿ ಜಾರಿಗೆ ತರಬಾರದೇ ಅನಿಸ್ತದೆ.ದಂಡ ಶಿಕ್ಷೆ ಗಳಿಗೆ ನಮ್ ಜನರೆಲ್ಲಿ ಹೆದರುತ್ತಾರೆ ಅನಿಸಬಹುದು.ದಿನದಲ್ಲಿ ಸಾವಿರದ ಲೆಕ್ಕದಲ್ಲಿ ಕೇವಲ ತುಪ್ಪಿದ್ದಕ್ಕೇ ಖಾಲಿಯಾದರೆ ಭಾರತ ದೇಶ ಪೀಕುಮುಕ್ತವಾಗಲಾರದೇ?
ತೊಳೆವ ಜಲಗಾರರೂ ನಮ್ಮಂತೆ ಹೇಸಿಗೆ ಅಸಹ್ಯಗಳ ಪರಿಧಿಗೇ ಬರುವ ಜೀವವಲ್ಲವೇ.?ಈ ತರಹದ ಯಾವ ಮೌಲ್ಯಗಳೂ ತಾಕದೇ ಹೋದವರಿಗೆ ವ್ಯವಸ್ಥೆಯ ಕಡುಬಿಗಿಯ ನಿಯಮಗಳಲ್ಲಿ ಬಾಯಿ ಹೊಲೆಸಬೇಕಿದೆ..
ಶಿಕ್ಷೆಯಿಂದಾದರೂ ಉಗುಳು ವೀರರಿಂದ ಸಾಮಾನ್ಯ ಜನತೆಗೆ ಮುಕ್ತಿ ಕೊಡಿಸಬಹುದೇ? ಉಗುಳು ವೀರರ ದಾಳಿಗೆ ಪದೇಪದೇ ಬಲಿಯಾದ ಅಸಹಾಯಕ ಜೀವವೊಂದರ ಬೇಡಿಕೆ ಇದು.
ಸಂತೋಷ ಸಸಿಹಿತ್ಲು
ಈ ಪ್ರಬಂಧದೊಂದಿಗೆ ಪ್ರಕಟವಾಗಿರುವ ವ್ಯಂಗ್ಯ ಚಿತ್ರ ಬರೆದವರು ನಾಡಿನ ಪ್ರತಿಭಾವಂತ ಕಲಾವಿದ ಸಂತೋಷ್ ಸಸಿಹಿತ್ಲು.ಉಡುಪಿ ಜಿಲ್ಲೆಯ ಕುಂದಾಪುರದವರಾದ ಸಸಿಹಿತ್ಲು ಓದಿದ್ದು ಭಂಡಾರ್ಸ್ ಕರ್ ಸೈನ್ಸ್ ಮತ್ತು ಆರ್ಟ್ಸ್ ಕಾಲೇಜಿನಲ್ಲಿ. ಯಾವುದೇ ಕಲಾ ಶಿಕ್ಷಣದ ಹಿನ್ನೆಲೆ ಇಲ್ಲದೆ ಸ್ವಂತ ಆಸಕ್ತಿಯಿಂದ ಚಿತ್ರ ಬರೆಯುವುದನ್ನು ರೂಢಿಸಿಕೊಂಡವರು. ಮುಂಬೈನಲ್ಲಿ ಕೆಲ ಕಾಲವಿದ್ದಾಗ ಅಲ್ಲಿ ಅದಕ್ಕೊಂದು ಶಾಸ್ತ್ರೀಯ ಆಯಾಮ ದೊರೆಯಿತು. ವ್ಯಂಗ್ಯಚಿತ್ರ, ಇಲ್ಸ್ ಸ್ಟ್ರೇಷನ್ , ಭಾವ ವ್ಯಂಗ್ಯಚಿತ್ರ ..ಇತ್ಯಾದಿಗಳನ್ನು ಸೊಗಸಾಗಿ ಬಿಡಿಸಬಲ್ಲರು. ನಾಡಿನ ಹಲವು ಮುಂಚೂಣಿ ಪತ್ರಿಕೆಯಲ್ಲಿ ದುಡಿದ ಅನುಭವ.
good article….nice cartoon
ಶತ – ಶತಮಾನದಿಂದ ಯಾವುದಕ್ಕೂ ಹೆದರದ ಉಗುಳು ವೀರರು
ಈ ಕರೋನಕ್ಕೆ ಹೆದರುವವರೇ
ಉತ್ತಮವಾದ ಲೇಖನ
ಈಗ ಐದಾರು ವರ್ಷಗಳ ಹಿಂದಿನ ಮಾತು ನಮ್ಮ ಅಕ್ಕನ ಮಗನ ಮದುವೆಯಾಗಿ next day ಸತ್ಯನಾರಾಯಣ ಪೂಜೆ ಇಟ್ಟುಕೊಂಡಿದ್ದರು.ಪೂಜೆ ಮಾಡಿಸಲು ಆಚಾರೊಬ್ಬರು ಬಂದಿದ್ದರು. ಸರಿ ಪೂಜೆ ಶುರುಮಾಡಿದರು. ಬರೋಬ್ಬರಿ ಮೂರು ಗಂಟೆ ಪೂಜೆ ಮಾಡಿಸಿದ್ದರು. ಗಂಡು ಹೆಣ್ಣು ತಮ್ಮ ಮುಖ ಒರೆಸಿ ಒರೆಸಿ ಸಾಕಾದರು ಕಾರಣ ಆಚಾರ್ಯ ರ ಬಾಯಿಂದ ಮಂತ್ರಕ್ಕಿಂತ ಉಗುಳೇ ಜಾಸ್ತಿ ಬರುತ್ತಿತ್ತು. ಈಗಲೂ ಎಲ್ಲರೂ ಸೇರಿದಾಗ ನೆನಪಿಸಿಕೊಳ್ಳುತ್ತೇವೆ. ಲೇಖನ ಚೆನ್ನಾಗಿದೆ. ವ್ಯಂಗ್ಯ ಚಿತ್ರ ಸಹ ನಗುತರಿಸುತ್ತದೆ.
ಸಾರ್ವಜನಿಕ ಸ್ಥಳಗಳಲ್ಲಿ ಉಗುಳೋ ‘ವೀರ’ರಿಗೆ ಧಿಕ್ಕಾರವಿರಲಿ. ಅಂತಹವರನ್ನು ವೀರರು ಅನ್ನುವ ಬದಲು ಹೇಡಿಗಳು ಅನ್ನಬೇಕು. ಲೇಖನವು ಹಾಸ್ಯಮಯ ಸ್ಪರ್ಶದಿಂದ ತುಂಬಾ ಚೆನ್ನಾಗಿ ಹೊರಬಂದಿದೆ. ಸಂತೋಷ್ ಸಸಿಹಿತ್ಲು ಕಾರ್ಟೂನ್ ಅತ್ಯುತ್ತಮವಾಗಿದೆ