ಮೂವತ್ತು ವರುಷದ ನನ್ನ ವೃತ್ತಿ ಜೀವನದಲ್ಲಿ ಬಹಳಷ್ಟು ತಿರುವುಗಳನ್ನು ನೋಡಿರುವೆ. ಮೊದಮೊದಲು ನಾನು ಅಧ್ಯಾಪಕ ವೃತ್ತಿಗೆ ಸೇರಿದಾಗ ಇದ್ದ ವಿದ್ಯಾರ್ಥಿಗಳ ಮನೋಭಾವ ಸ್ವಾಭಾವಿಕವಾಗಿ ಈಗಿಲ್ಲ. ಆಗ ನನ್ನ ವಯಸ್ಸು ಚಿಕ್ಕದಾಗಿದ್ರೂ ಮಕ್ಕಳಿಗೆ ಭಯ,ಭಕ್ತಿ ಇತ್ತು. ಈಗ ಸ್ವಲ್ಪ ಬದಲಾವಣೆಗಳಾಗಿವೆ.
ಪ್ರಾಧ್ಯಾಪಕರೆಂದರೆ ಇದ್ದ ಗೌರವ, ಪ್ರೀತಿ ಈಗಲೂ ಇದೆ ಆದರೆ ಬೇರೆ ರೀತಿಯಲ್ಲಿ. ಮುಂಚೆ ಇಬ್ಬರ ನಡುವೆ ಒಂದು ಅಂತರವಿತ್ತು. ಮಾತನಾಡುವುದಕ್ಕೆ ಮುನ್ನ ಯೋಚಿಸಿ, ವಿವೇಚಿಸಿ ಆಡುತ್ತಿದ್ದರು. ಈಗ ಮನಸ್ಸಿಗೆ ಬಂದ ವಿಷಯಗಳನ್ನು ಅಷ್ಟು ಹಿಂಜರಿಕೆಯಿಲ್ಲದೆ ಹೇಳುವುದು, ಗುರುಗಳನ್ನು ಸ್ನೇಹಿತರಂತೆ ಕಾಣುವುದು ಸಾಮಾನ್ಯವಾಗಿದೆ. ಅಧ್ಯಾಪಕರೂ ಸಹ ಮುಂಚಿನಂತೆ ಕಠಿಣವಾಗಿರದೆ ಸ್ವಲ್ಪ ಮಟ್ಟಿಗೆ ಮೃದುವಾಗಿರುವುದು ಕಾಣಬಹುದು. ಹಿಂದೆ ಇರಲಿಲ್ಲವೆಂದಲ್ಲ, ಈಗ ಅಧ್ಯಾಪಕರ ಮನಸ್ಸು ಬೇರೆ ರೀತಿಯಲ್ಲಿ ಬದಲಾಗಿರುವುದನ್ನು ಕಾಣಬಹುದು. ಚಿಕ್ಕವರು, ಮಕ್ಕಳು ಎಂಬ ಭಾವನೆಗಿಂತ ಸಮಾನರು, ಸ್ವಲ್ಪ ಮಟ್ಟಿಗೆ ಗೆಳೆಯರು ಎಂಬ ಮನೋಭಾವ ಜಾಸ್ತಿಯಾಗುತ್ತಿದೆ.
ಸಾಮಾಜಿಕ ಜಾಲತಾಣಗಳು ಇವರಿಬ್ಬರ ಮಧ್ಯೆ ಅಂತರವನ್ನು ಕಡಿಮೆ ಮಾಡಿದೆ. ಪರಸ್ಪರ ಮೊದಲ ಸಲ ವಿದ್ಯಾರ್ಥಿಗಳಿಂದ ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಾಗ ಸ್ವಲ್ಪ ಗೊಂದಲ ಉಂಟಾಗಿತ್ತು. ಎಷ್ಟೋ ವರುಷಗಳ ಹಿಂದೆ ಉತ್ತೀರ್ಣರಾಗಿ ಈಗ ಬದುಕಲ್ಲಿ ಬಹು ಮುಂದೆ ಸಾಗಿರುವ ಅನೇಕ ವಿದ್ಯಾರ್ಥಿಗಳ ಜತೆ ಸಂಪರ್ಕ ಇಟ್ಟುಕೊಳ್ಳಲು ಇದೊಂದೇ ದಾರಿ, ಅವರು ನನ್ನನ್ನು, ನಾನು ಅವರನ್ನು ಸಂಪರ್ಕಿಸಲು ಸುಲಭವಾದ ಪಥ ಇದು ಎಂದರಿವಾದಾಗ ಖುಷಿಯಾಯಿತು.
ಆಗೆಲ್ಲಾ ಕ್ಲಾಸ್ ಅಲ್ಲಿ ತರ್ಲೆ ತಂಟೆ ಮಾಡುತ್ತಿದ್ದ ಹುಡುಗ ಹುಡುಗಿಯರು ಈಗ ಜವಾಬ್ದಾರಿಯುಳ್ಳ ವ್ಯಕ್ತಿಗಳಾಗಿ ಬದಲಾಗಿದ್ದು ಸಂತಸದ ವಿಷಯ. ನಮ್ಮ ಮನಸ್ಸಿನ ಮಾತುಗಳನ್ನು ನಿಲುಮೆಗಳಲ್ಲಿ, ಪಟಗಳಲ್ಲಿ ಹಂಚಿಕೊಂಡಾಗ ವಿದ್ಯಾರ್ಥಿಗಳಿಂದ ಬಂದ ಪ್ರತಿಕ್ರಿಯೆ, ಅದನ್ನು ಅವರು ಮುಕ್ತವಾಗಿ, ಸ್ಪಷ್ಟವಾಗಿ ಹೇಳುವ ಪರಿ ಬಹಳ ಖುಷಿ ಕೊಟ್ಟಿತು, ಮೊದಲಾದರೆ ತರಗತಿಯಲ್ಲಿ ತಮ್ಮ ವಾದ ಮಂಡಿಸುವುದಕ್ಕೆ ಹಿಂಜರಿಯುತ್ತಿದ್ದ ಮಕ್ಕಳು ಈಗ ಇಷ್ಟರ ಮಟ್ಟಿಗೆ ಮಾತಾಡಬಲ್ಲರು ಎಂಬುದೇ ಸಂತಸ.
ಮೊದಲೆಲ್ಲಾ, ಪತ್ರ ಬರೆಯುವಾಗ, ಮಾತನಾಡುವಾಗ ಒಂದು ಭಯಮಿಶ್ರಿತ ಗೌರವ ಸೂಚಿಸುತ್ತಿದ್ದ ಮಕ್ಕಳು ಈಗ ಎದೆಯೆತ್ತಿ ಧೈರ್ಯವಾಗಿ ಮಾತಾಡುವುದನ್ನು ನೋಡಿದರೆ ಮೊದಮೊದಲು ಸ್ವಲ್ಪ ಕಸಿವಿಸಿ ಆಗುತ್ತಿತ್ತು. ಅವರ ಮನಸ್ಸಲ್ಲಿರುವ ಅನುಮಾನಗಳು, ಯೋಚನೆಗಳು ಮುಕ್ತವಾಗಿ ಹಂಚಿಕೊಳ್ಳುವಾಗ ಕೆಲವೊಮ್ಮೆ ಹೇಗೆ ಪ್ರತಿಕ್ರಿಯಸಬೇಕೆಂದು ಗೊತ್ತಾಗದೆ ಚಡಬಡಿಸಿದ್ದೂ ಉಂಟು. ಈಗ ಅದೆಲ್ಲ ಕ್ರಮೇಣವಾಗಿ ಅಭ್ಯಾಸವಾಗತೊಡಗಿದೆ. ಪಾಠಗಳಿಗೆ ಸಂಬಂಧ ಪಟ್ಟಂತೆ ವಾಟ್ಸಾಪಿನಲ್ಲಿ, FB ಯಲ್ಲಿ ಕೇಳುವುದು ಸಾಮಾನ್ಯವಾಗಿಬಿಟ್ಟಿದೆ.
ಡಿಜಿಟಲ್ ಯುಗದಲ್ಲಿ ಮಾಹಿತಿಗಾಗಿ ಅಧ್ಯಾಪಕರನ್ನು ಅವಲಂಬಿಸುವ ಅಗತ್ಯವಿಲ್ಲ. ನೆಟ್ ಅಲ್ಲಿ ಎಲ್ಲಾ ಮಾಹಿತಿಗಳೂ ಲಭ್ಯವಿದೆ. ಆದ್ದರಿಂದ ತರಗತಿಯಲ್ಲಿ ಬಹಳ ಶ್ರದ್ಧೆಯಿಂದ ಹೊಸ ಆವಿಷ್ಕಾರಗಳ ಬಗ್ಗೆ ಮಾಹಿತಿ ನೀಡಿ ಅವರ ಮನ ಮುಟ್ಟುವಂತೆ ಪಾಠ ಮಾಡುವುದು ಅನಿವಾರ್ಯ. ಎಷ್ಟೊ ಸಲ ನಾ ಹೊಸದೇನಾದರು ವಿವರಿಸುತ್ತಿದ್ದಾಗ ತರಗತಿಯ ಮಕ್ಕಳು ಬೆಂಚಿನ ಕೆಳಗೆ ಮೊಬೈಲ್ ತೆರೆದು ಅದರ ಬಗ್ಗೆ ಮಾಹಿತಿ ಹುಡುಕುವುದು, ಪ್ರಶ್ನಿಸುವುದು ನನ್ನರಿವಿಗೆ ಬಂದಿದೆ. ಆ ಕ್ಷಣದಲ್ಲಿ ತರಗತಿಯಲ್ಲಿ ಸೆಲ್ ಫೋನ್ ಬಳಕೆ ಮಾಡದು ಎಂದರೆ ಅವರಿಗೆ ನಮ್ಮ ಮೇಲೆ ಒಳ್ಳೆಯ ಭಾವನೆ ಉಂಟಾಗುವುದಿಲ್ಲ. ಅವರ ಪ್ರಶ್ನೆಗಳಿಗೆ ಉತ್ತರಿಸಿ, ಸಾಧ್ಯವಾಗದಿದ್ದರೆ ಆಮೇಲೆ ತಿಳಿದುಕೊಂಡು ಹೇಳುವೆ ಎಂದು ಅಲ್ಲಿಗೆ ಪ್ರಕರಣವನ್ನು ಮುಗಿಸಿದ್ದೇನೆ.
ಮೊಬೈಲುಗಳ ಬಳಕೆ ಹೆಚ್ಚಾದಂತೆ ಅಧ್ಯಾಪಕರಿಗೆ ಕಷ್ಟವಾಗುತ್ತಾ ಇದೆ. ಮಧ್ಯೆ ಮಧ್ಯೆ ಸಂದೇಶಗಳನ್ನು ಚೆಕ್ ಮಾಡುವುದು, ಮೊಬೈಲಲ್ಲಿ ಇಣುಕುವುದು, ಅದರಿಂದ ಮನಸ್ಸು ಓದಿನಲ್ಲಿ ನಿಲ್ಲದಿರುವುದು, ಇದೆಲ್ಲಾ ಸರ್ವೇಸಾಮಾನ್ಯವಾಗುತ್ತಿದೆ. ಆದರೂ ತಾಳ್ಮೆ ಕಳೆದುಕೊಳ್ಳದೆ ಅವರ ಜತೆ ವರ್ತಿಸಬೇಕಾದ್ದು ಮುಖ್ಯವಾಗುತ್ತದೆ.
Photo by Timon Studler on Unsplash
ಖಂಡಿತವಾಗಿ ಮೇಡಂ…ಮೊಬೈಲ್ ಪಾಠ ಶಿಕ್ಷಕರ ಜೀವನವನ್ನು ತ್ರಾಸದಾಯಕವಾಗಿಸಿದೆ. ಜೊತೆಗೆ ತರಗತಿಯಲ್ಲಿ ವಿದ್ಯಾರ್ಥಿ ಗಳ ಜೊತೆ ಕಳೆಯುವ ಆಪ್ತ ಕ್ಷಣಗಳು ಮಾಯವಾಗಲಿವೆ. ಮಕ್ಕಳ ಮುಗ್ಧತೆ ಇನ್ನು ಅಪರೂಪವಾಗಲಿದೆಯೇನೋ…
Always enjoy reading your articles ma’am