ದಿನೇ ದಿನೆ ಕಾಡುತ್ತಿರುವ ಕೊರೋನಾ ಕೆಲವರ ಬದುಕಿಗೆ ಪಾಠ ಕಲಿಸಿದ್ದರೆ, ಮತ್ತೆ ಕೆಲವರಿಗೆ ಬದುಕೇ ಬೇಡ ಅನ್ನುವಷ್ಟರ ಮಟ್ಟಿಗೆ ಸಂಕಷ್ಟ ತಂದೊಡ್ಡಿದೆ.ಕಾಯಿಲೆ ನಡುವೆ ಕಾಡುವ ಮನಸ್ಸಿನ ತೊಳಲಾಟ ಕೂಡಾ ನಿದ್ದೆಗೆಡಿಸಿದೆ.ಇದರಿಂದ ಮಾನಸಿಕ ನೆಮ್ಮದಿ ಕಳೆದುಕೊಂಡ ವರು, ಖಿನ್ನತೆಯಿಂದ ಬಳಲುವವರ ಸಂಖ್ಯೆ ಹೆಚ್ಚಿದೆ.
ಮನುಷ್ಯ ಜೀವನ ಸಿಕ್ಕಿದ್ದು ಬದುಕಿ ಬಾಳಲು. ಅದನ್ನು ಹೇಗೆ ನಿರ್ವಹಿಸುತ್ತೇವೆ ಎನ್ನುವುದು ನಮ್ಮ ಮನಸ್ಸಿಗೆ ಸಂಬಂಧಿಸಿದ್ದು. ಮನಸ್ಸನ್ನು ನಿಯಂತ್ರಿಸುವ ಕಲೆ ಗೊತ್ತಿದ್ದರೆ ಎಂತಹದ್ದೇ ಸಂದರ್ಭ ಬರಲಿ ಬದುಕಿನ ಬಗೆಗೆನ ಭರವಸೆ ಕಳೆದುಕೊಳ್ಳುವುದಿಲ್ಲ.
ಎಲ್ಲ ಸಂದರ್ಭಗಳಲ್ಲೂ ಆ ಕ್ಷಣದಿಂದ ಬಚಾವಾಗುವುದೊಂದೇ ಜೀವನದ ಗುರಿಯಾಗಿರುತ್ತದೆ. ಕಷ್ಟದ ಸಂದರ್ಭಗಳಲ್ಲಿ ಕಷ್ಟದಿಂದ ಪಾರಾದರೆ ಸಾಕು ಎಂದುಕೊಂಡಿರುತ್ತೇವೆ. ಆದರೆ ಜೀವನ ಅಂದರೆ ಅಷ್ಟೇ ಅಲ್ಲ. ಒಂದು ಕ್ಷಣ ಆ ಘಟನೆಯಿಂದ ತಪ್ಪಿಸಿಕೊಳ್ಳುವುದು ಮಾತ್ರವಲ್ಲ, ಅದರೊಂದಿಗೆ ಆಂತರಿಕ ನೆಮ್ಮದಿಯ ಶೋಧವೂ ಇರಬೇಕು. ಆಂತರಿಕ ನೆಮ್ಮದಿ ಕಂಡುಕೊಂಡಾಗಲೇ ಶಾಶ್ವತ ಸುಖ ಅನುಭವಿಸುವುದಕ್ಕೆ ಸಾಧ್ಯ. ಆಂತರಿಕ ನೆಮ್ಮದಿ ಬೇರೆಲ್ಲೋ ಕಂಡುಕೊಳ್ಳುವುದಕ್ಕೆ ಸಾಧ್ಯ ಇಲ್ಲ. ನಮ್ಮ ಮನಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಂಡು, ಸಂದರ್ಭಗಳಿಗೆ ಪ್ರತಿಕ್ರಿಯಿಸುವ ಜಾಣ್ಮೆಯಿದ್ದರೆ ಮಾತ್ರ ಆಂತರಿಕ ಶಾಶ್ವತ ಶಾಂತಿಯನ್ನು ಕಂಡುಕೊಳ್ಳಬಹುದು.
ಯಾವಾಗ ನಮ್ಮನ್ನು ನಾವು ಇತರರೊಂದಿಗೆ ಹೋಲಿಸಿ ನೋಡಿಕೊಳ್ಳುತ್ತೇವೆಯೋ ಅದರಿಂದ ಬೇಸರ ಕಾಡುವುದು.ಇನ್ನು ಕೆಲವೊಮ್ಮೆ ನಮ್ಮ ವೈಫಲ್ಯತೆಗೆ ಸದ್ಯದ ಪರಿಸ್ಥಿತಿ ಕಾರಣ ಎಂದುಕೊಳ್ಳುತ್ತೇವೆ. ಆದರೆ ಪರಿಸ್ಥಿತಿಗಳು ಸೋಲಿಗೆ ಕಾರಣವಲ್ಲ. ನಮ್ಮ ಮನಸ್ಸು. ಯಾಕೆಂದರೆ ಯಾವುದೇ ಒಂದು ಸಂದರ್ಭದಲ್ಲಿ ನಾವು ಪರಿಸ್ಥಿತಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತೇವೆ ಎಂಬುದು ಮುಖ್ಯ.
ಗೆಲುವು ಅಥವಾ ಸೋಲು ಯಾವುದೇ ಆಗಿರಲಿ, ನಮ್ಮ ನಡೆವಳಿಕೆಗಳಿಂದಲೇ ಬದುಕು ನಿರ್ಧರಿತವಾಗಿರುತ್ತವೆ.ಜೀವನದಲ್ಲಿ ಎಲ್ಲವೂ ಇದೆ ಅಂದುಕೊಂಡಾಗ ಅಥವಾ ಕೊರತೆಗಳು ಇಲ್ಲದೇ ಹೋದಾಗ ಅವರಿಗೆ ಸೋಲು ಎಂಬುದು ಕಾಡುವುದಿಲ್ಲ. ಯಾವಾಗ ತಮ್ಮನ್ನು ತಾವು ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಾರೋ ಆಗ ತಾನು ಸೋಲಿನ ಟ್ರ್ಯಾಕ್‍ನಲ್ಲಿದ್ದೇನೇನೋ ಎಂದೆಣಿಸುವುದು. ಹೋಲಿಕೆ ಮಾಡಿಕೊಳ್ಳುವುದರ ಮೂಲಕ ತಮ್ಮನ್ನು ತಾವು ಅಭಿವೃದ್ಧಿಪಡಿಸಿಕೊಳ್ಳುವುದಕ್ಕೋಸ್ಕರ ಮಾಡಿಕೊಳ್ಳಬೇಕೇ ವಿನಾಃ ಅದು ತಮ್ಮ ಶಕ್ತಿಯನ್ನು ಕುಗ್ಗಿಸುವಂತಿರಬಾರದು.
ನಮ್ಮ ಮನಸ್ಥಿತಿಯೇ ಎಲ್ಲದಕ್ಕೂ ಕಾರಣ. ನಾವು ಸಕಾರಾತ್ಮಕವಾಗಿದ್ದರೆ ಸಕಾರಾತ್ಮಕ ಫಲಿತಾಂಶ ದೊರೆಯುತ್ತದೆ. ಇಲ್ಲವಾದರೆ ನಕಾರಾತ್ಮತೆಯ ಗೂಡಾಗುತ್ತದೆ. ಮನಸ್ಸೇ ಆಂತರಿಕ ಸ್ವರ್ಗವನ್ನು ಅಥವಾ ನಮ್ಮೊಳಗಿನ ನರಕವನ್ನು ಸೃಷ್ಟಿಸುವುದು.
ಕೆಲವೊಂದು ಸಂದರ್ಭಗಳಲ್ಲಿ ಪ್ರಪಂಚವೇ ತಲೆಯ ಮೇಲೆ ಬಿದ್ದಂಥ ಘಟನೆಗಳು ನಡೆಯುವುದು ಸಹಜ. ಅದು ಜಗತ್ತಿನ ನಿಯಮ. ನಕಾರಾತ್ಮಕವಾಗಿ ಸ್ವೀಕರಿಸಿದರೆ ಇಲ್ಲದ ನೋವು ಹತಾಶೆಗಳು ಕಾಣಿಸಿಕೊಳ್ಳುವುದು. ಇದು ದೈಹಿಕವಾಗಿ ಘಾಸಿಗೊಳಿಸದೇ ಇದ್ದರೂ ಮನಸ್ಸಿಗೆ ನೋವನ್ನುಂಟು ಮಾಡುವುದು ಸಹಜ. ಅಂದರೆ ಒಂದು ಸಂದರ್ಭವನ್ನು ಮನಸ್ಸು ಯಾವ ರೀತಿ ಸ್ವೀಕರಿಸುತ್ತದೆ ಎಂಬುದರ ಮೇಲೆ ಫಲಿತಾಂಶ ನಿರ್ಣಯವಾಗುತ್ತದೆ.ಬದುಕಿನೊಂದಿಗೆ ಹೋರಾಟ ನಿರಂತರ. ಅದನ್ನು ಎದುರಿಸಬೇಕೇ ವಿನಃ ಅದರಿಂದ ತಪ್ಪಿಸಿ ಕೊಳ್ಳುವ ಪ್ರಯತ್ನ ಮಾಡಬಾರದು.”ಮಾನವ ಜನ್ಮ ದೊಡ್ಡದು ಅದನ್ನು ಹಾಳು ಮಾಡಿ ಕೊಳ್ಳದಿರಿ ಹುಚ್ಚಪ್ಪಗಳಿರಾ” ಎಂದಿದ್ದಾರೆ ಪುರಂದರ ದಾಸರು. ಮತ್ತೆ ಮನುಷ್ಯ ಜನ್ಮ ದಕ್ಕುವುದೋ ಇಲ್ಲವೋ ಗೊತ್ತಿಲ್ಲ. ಸಿಕ್ಕಿದ ಬದುಕನ್ನು ಸಾರ್ಥಕ ಗೊಳಿಸುವುದೇ ಜೀವನದ ಗುರಿ ಆಗ ಬಾರದೇಕೆ?
Photo by Luca Upper on Unsplash
ಲೇಖನವು ಮನಸ್ಸಿನ ಮೇಲೆ ಹಿತವಾದ ಪರಿಣಾಮವನ್ನು ಬೀರುತ್ತದೆ. ಡಾ.
ಡಾ. ಎ . ಪಿ. ಜೆ. ಅಬ್ದುಲ್ ಕಲಾಂ ಅವರು ಹೇಳಿರುವ “ಎಂತಹುದೇ ಪರಿಸ್ಥಿತಿ ಎದುರಿಸಲು ಶಾಂತವಾಗಿರುವಂತೆ ಮನಸ್ಸಿಗೆ ತರಬೇತಿ ನೀಡಿ’ ಎಂಬ ಮಾತು ಇಂದಿನ ಪರಿಸ್ಥಿತಿಯಲ್ಲಿ ಪ್ರಸ್ತುತ .
Thank u sir
ಒಂದು ಬಾರಿ ಅರ್ಜುನ ಶ್ರೀ ಕೃಷ್ಣನನ್ನು ಕೇಳಿದನಂತೆ
ಈ ಗೋಡೆಯ ಮೇಲೆ ಒಂದು ಸಂದೇಶ ಬರಿ ಅದು
ಹೇಗಿರಬೇಕೆಂದರೆ
ಖುಷಿಯಲ್ಲಿ ಇದ್ದಾಗ ಓದಿದರೆ ದುಃಖವಾಗಬೇಕು
ದುಃಖವಾಗಿದ್ದಾಗ ಓದಿದರೆ ಖುಷಿಯಾಗಬೇಕು
ಕೃಷ್ಣ ಬರೆದ
“ಈ ಸಮಯ ಕಳೆದು ಹೋಗುತ್ತದೆ ”
ಹಾಗೆ,ಯಾವುದೂ ಶಾಶ್ವತವಲ್ಲ ಬದುಕಿನೊಂದಿಗೆ ಹೋರಾಟ ನಿರಂತರ. ಒಳ್ಳೆಯ ಲೇಖನ.
Thank u mam
ಸಿಕ್ಕಿದ ಬದುಕನ್ನು ಸಾರ್ಥಕ ಗೊಳಿಸುವುದೇ ಜೀವನದ ಗುರಿ ಆಗ ಬಾರದೇಕೆ?
ಇವತ್ತಿನ ಪರಿಸ್ಥಿತಿಗೆ ತುಂಬಾ ಒಳೆಯ ಲೇಖನ…
Thank you
ಇರುವುದೆಲ್ಲವ ಬಿಟು ಇರದುದರೆಡೆಗೆ ತುಡಿವುದೇ ಜೀವನವಾಗಿದೆ ಬಹುತೇಕರದು. ಇರೋದರಲಿ ಖುಷಿ ಇದ್ದರೆ ಎಂತಾ ಕಾಲವನು ನಿಭಾಯಿಸಬಹುದು.