ರಸ್ತೆಯ ಆ ಪಕ್ಕ ದಟ್ಟ ಕಾಡು, ಈ ಕಡೆ ಅಡಿಕೆ ಮತ್ತು ಕಾಫಿ ತೋಟ, ಅದರಾಚೆಗೆ ಗದ್ದೆ, ಬಾಳೆ ತೋಟ, ಇವೆಲ್ಲದರ ನಡುವೆ ಇರುವ ಮನೆ. ಕಲ್ಮಶದ ಹೆಸರರಿಯದ ಬಾವಿನೀರು, ಮಾಲಿನ್ಯದುಸಿರೂ ಸೋಕಿಸಿಕೊಳ್ಳದ ಶುದ್ದ ಗಾಳಿಯ ಜೊತೆಗೇ ಬೆಳಗು ಕಂಡವರಿಗೆ ಮೊದಮೊದಲು ಹಾದಿಗೊಂದು, ಬೀದಿಗೊಂದಿರುವ ಕಾಣುವ ಪಾರ್ಕುಗಳು ತುಂಬಾ ಆಕರ್ಷಕವಾಗಿಯೇ ಕಂಡಿದ್ದವು. ಯಕ್ಷಗಾನದಲ್ಲಿ ಬಣ್ಣಗೊಂಡು ಮೆರೆವ ರಾಜ, ಬಣ್ಣ ಕಳೆದ ಮೇಲೆ ಮುಪ್ಪಿನ ಮುದುಕ ಎಂಬುದನ್ನು ಏಕ್ ದಮ್ ಒಪ್ಪಿಕೊಳ್ಳಲು ಮನಸು ಹೇಗೆ ತಯಾರಿರಲಿಲ್ಲವೋ ಹಾಗೇ ಈ ಪಾರ್ಕಿನ ಗೀಳು ಬಹಳ ಕಾಲವುಳಿಯಲಿಲ್ಲ.
ಶಾಲೆ, ಕಾಲೇಜಿನ ಯುಗದಲ್ಲಿಯೂ ಪ್ರವಾಸ, ಕಾಡುಮೇಡೆಂದು ಅಲೆದಾಡುತ್ತಾ ನಿರಾಳವಾಗಿದ್ದವರಿಗೆ, ಆಫೀಸಿನ ಏಕತಾನತೆ ತಲೆಚಿಟ್ಟು ತರಿಸುತ್ತಿತ್ತು. ಮೀಟಿಂಗ್, ಜೀರಾ ಅಪ್ಡೇಟ್, ಬಿಲ್ಡ್, ಡಿಫೆಕ್ಟ್ ಲೈಫ್ ಸೈಕಲ್ಲುಗಳ ಚಕ್ರದ ನಡುವೆ ಸಿಕ್ಕಿಬಿದ್ದು ದೇಹವೂ, ಮನಸೂ ಭಾರವಾಗುತ್ತಿತ್ತು. ಇಂತಹ ಜಂಜಾಟದಿಂದ ಕ್ಷಣಕ್ಕಾದರೂ ಮುಕ್ತಿ ಪಡೆಯಲು ನಮ್ಮಂತಹ ಬಹುತೇಕ ಟೆಕ್ಕಿಗಳು ಕಂಡುಕೊಂಡ ಸುಲಭ ಪರಿಹಾರವೇ ಈ ವೀಕೆಂಡ್ ಟ್ರಿಪ್ ಅಂದ್ರೆ ವಾರಾಂತ್ಯದ ಸಣ್ಣ ಪ್ರವಾಸ.
ಒಂದು ದಿನದ ಅಥವಾ ಎರಡು ದಿನಗಳ ಪ್ರವಾಸದ ಸಡಗರ ಗುರುವಾರದಿಂದಲೇ ಶುರುವಾಗುತ್ತಿತ್ತು. ಶುಕ್ರವಾರವಂತೂ ಬೆಟ್ಟದಷ್ಟಿದ್ದ ಕೆಲಸವನ್ನೂ ಕಲ್ಲು ಸಕ್ಕರೆಯಂತೇ ಕರಗಿಸಿಕೊಂಡು ಮುಗಿಸಿ ಮನೆಗೋಡುವ ತರಾತುರಿ. ಬೆಂಗಳೂರಿನ ಸುತ್ತಲಿನ ನಂದಿಬೆಟ್ಟ, ಅವಳ ಬೆಟ್ಟ, ಮಲೆಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟ, ಸಾವನದುರ್ಗ, ತುರಹಳ್ಳಿ ಮತ್ತು ಕನಕಪುರದ ಕಾಡು, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಮುಂತಾದ ಬೆಟ್ಟಗುಡ್ಡಗಳಿಗೆ ನಸುಕಿನಲ್ಲೇ ಟ್ರೆಕ್ಕಿಂಗ್ ಹೊರಡುವುದು, ಅಲ್ಲಿನ ಕಾಡಲ್ಲಿ ತಿರುಗುವುದು, ಅಲ್ಲಿಯ ಹಳ್ಳಿ ಜನರನ್ನು ಮಾತನಾಡಿಸಿ ಅವರು ಬೆಳೆದ ಸೊಪ್ಪು-ತರಕಾರಿ ಕೊಂಡು ಅವರ ಮುಗ್ಧ ನಗು ತರುವ ಸಂತಸವನ್ನು ವಾರಗಟ್ಟಲೇ ಕಾಪಿಟ್ಟುಕೊಳ್ಳುವುದು ನೆಚ್ಚಿನ ಸಂಗಾತಿಯಾಗಿತ್ತು.
ಪೂರ್ವ ತಯಾರಿಯೇ ಇಲ್ಲದಾಗ ಜನಪದಲೋಕದಲ್ಲಿ ಚೂರು ವಿಹರಿಸಿ, ಕಾಮತ್ ಹೋಟೆಲಿನಲ್ಲಿ ಊರಕಡೆ ತಿಂಡಿಯನ್ನು ಮೆದ್ದು, ಸೂಕ್ಷ್ಮವಾದ ಕುಸುರಿ ಕಲೆಯಿಂದ ಮಾಡಿದ ಚೆನ್ನಪಟ್ಟಣದ ಗೊಂಬೆಗಳನ್ನು ಪ್ರವಾಸದ ನೆನಪಿಗೆಂದು ಮುಂದಿಟ್ಟುಕೊಳ್ಳುವುದು ಸಹಜ ಪ್ರಕ್ರಿಯೆಯೇ ಆಗಿಹೋಗಿತ್ತು. ವಾರಾಂತ್ಯದಲ್ಲಿ ಬೇರೆ ಬೇರೆ ಕೆಲಸದಿಂದ ಎಲ್ಲಿಗೂ ಹೋಗಲಿಕ್ಕೆ ಆಗದಿರುವಾಗ ಪಕ್ಕದ ರಾಗಿಗುಡ್ಡ, ಬಸವನಗುಡಿ, ಓಂಕಾರೇಶ್ವರ, ಜಯನಗರದ ಕಾಂಪ್ಲೆಕ್ಸ್, ಬನ್ನೆರುಘಟ್ಟದ ಲಕ್ಷ್ಮೀ ನರಸಿಂಹ ದೇವಸ್ಥಾನದ ಗುಡ್ಡಕ್ಕೊ ವಿನಾಕಾರಣ ಸುತ್ತಿ ಬರುವ ಸಂಗತಿಗಳೆಲ್ಲ ಅದೆಷ್ಟು ನೈಜವಾಗಿ ದಿನಚರಿಯಲ್ಲಿ ಭಾಗವೇ ಆಗಿತ್ತಲ್ಲಾ ಎಂದು ಈಗ ಅನಿಸುತ್ತಿದೆ.
ಮೊದಲೆಲ್ಲಾ ಪ್ರಕೃತಿಯ ಮಡಿಲಲ್ಲಿರುವ ನನ್ನವನೂರಿಗೆ ಬರಲು ಜೀವ ಜೀಕುತ್ತಿತ್ತು. ಅಕ್ಕಪಕ್ಕದ ಊರಿನ ರಾಣಿಝರಿ, ಕ್ಯಾತನಮಕ್ಕಿ, ಕುಂದಾದ್ರಿ, ಜೋಗಿ ಗುಂಡಿ, ಸಿರಿಮನೆ, ಮಘೇಬೈಲು, ನರಸಿಂಹ ಪರ್ವತ, ಕವಲೇದುರ್ಗ, ಕುಪ್ಪಳ್ಳಿ, ಆಗುಂಬೆ ಹೀಗೆ ಅನೇಕಾನೇಕ ನೈಸರ್ಗಿಕ ತಾಣಗಳ ಮಡಿಲಲ್ಲಿ ಶಿಶುವಾಗಿ ನಲಿವ ಸುಮಧುರ ಘಳಿಗೆಗಳನ್ನು ನಮ್ಮದಾಗಿಸಿಕೊಳ್ಳುವ ತವಕದಲ್ಲೇ ಇರುತ್ತಿದ್ದೆವು. ಹಾಗೆ ಕಳೆವ ಕ್ಷಣಗಳು ದಿನಕ್ಕಿಂತಲೂ ಕಮ್ಮಿ ಸಮಯವೇ ಆದರೂ ಪ್ರವಾಸ ತಂದುಕೊಡುವ ಸವಿನೆನಪಿಗೆ ಆಯಸ್ಸು ಜಾಸ್ತಿ.
ಹೀಗಾಗಿ ಕೊರೊನ ಕಾಲದಲ್ಲಿ ಒಂದು ತಿಂಗಳು ಊರಲ್ಲಿದ್ದು, ವಾರಾಂತ್ಯದಲ್ಲಿ ಇಷ್ಟುದಿನ ನೋಡಲಿಕ್ಕಾಗದ ಸ್ಥಳಗಳನ್ನೆಲ್ಲಾ ನೋಡಿಬಿಡಬೇಕೆಂಬ ಲಿಸ್ಟ್ ತಯಾರಸಿಯೇ ಊರಿಗೆ ಹೊರಟೆವು. ‘ಲಾಕ್ಡೌನ್’ ಎಂಬ ಬಂಗಾರದ ಶರಪಂಜರದೊಳಗಿರುವ ಮುನ್ನವೇ ಮನೆಗೆ ಸಮೀಪವಿದ್ದ ಜಲಪಾತವೆರಡನ್ನು ಕಣ್ತುಂಬಿಸಿಕೊಂಡು ತಂಪಾಗಿದ್ದೆವು. ನಂತರ ವಾರಾಂತ್ಯ ಕಳೆಯಲು ಮನೆಯ ಹಿಂದಿನ ಗುಡ್ಡವನ್ನೇರಿ ಉದುರಿದ್ದ ನವಿಲುಗರಿಯನ್ನೆಲ್ಲಾ ಹೆಕ್ಕಿಕೊಂಡು ನಲಿದಿದ್ದೂ ಆಯ್ತು. ತಿಂಡಿ ಕಟ್ಟಿಕೊಂಡು ಮನೆಯವರೆಲ್ಲಾ ಒಣಗಿದ ಗದ್ದೆಬೈಲಿನಲ್ಲಿ ಕುಳಿತು ತಿಂದು ತೇಗಿದ್ದಕ್ಕೆ ಪಿಕ್ನಿಕ್ ಎಂದು ಕರೆದಿದ್ದಾಯ್ತು. ಆದರೂ ಮನಕ್ಕೆ ಎನೋ ಕಳೆದುಕೊಂಡು ಅನುಭವ.
ಅಂತೂ ಲಾಕ್ಡೌನ್ ಮುಗೀತು, ನಾವಿದ್ದುದು ‘ಹಸಿರು ವಲಯ’ ಬೇರೆ, ಅದಕ್ಕೆ ಮನೆಯಿಂದ ತುಂಬಾ ಹತ್ತಿರದ ಬೆಟ್ಟಕ್ಕೆ ಹೊರಡುವ ಸಿದ್ಧತೆಯಾಯ್ತು. ಎರಡು ವರ್ಷದ ಮರಿಗುಬ್ಬಿಯನ್ನು ಮನೆಯಲ್ಲಿಯೇ ಅವನಜ್ಜಿ ಬಳಿ ಬಿಟ್ಟು ಹೊರಡಲು ನಾನೂ ತಯಾರಾದೆ. ತೊರೆ, ಹಳ್ಳ, ಸೇತುವೆಯ ಕಂಡೊಡನೆ ಬೈಕು ನಿಲ್ಲಿಸಿ ಕ್ಲಿಕ್ಕಿಸುವ ಕ್ಯಾಮೆರಾದ ಬೆಳಕಿಗೆ ಅಕ್ಕಪಕ್ಕದಲ್ಲಿರುತ್ತಿದ್ದ ಊರತಲೆಗಳು ಎಂತದೋ ಸಂಶಯದಿಂದ ನೋಡತೊಡಗಿದ್ದವು. ನಸುಕಿನಲ್ಲೇ ಮನೆಯಿಂದ ಹೊರಟವರು ಕ್ಷಣಕ್ಕೆ ಮೈಮುರಿ ತೆಗೆದು, ಬೆನ್ನು ನೆಟ್ಟಗಾಗಿಸಲು ಒಂದು ಎಸ್ಟೇಟ್ ಬಳಿ ನಿಲ್ಲಿಸಿದಾಗ, ಮುಂದೆ ಸಾಗುತ್ತಿದ್ದ ಗೂಡುರಿಕ್ಷಾದವ ರಿವರ್ಸ್ ಗೇರಿನಲ್ಲಿ ಬಂದಾಗ ಚೂರು ಕಸಿವಿಸಿಯಾಯ್ತು. ನಾವು ಬೆಟ್ಟಕ್ಕೆ ಹೋಗುವವರೆಂದು ತಿಳಿದು ‘ಆ ಬೆಟ್ಟದಲ್ಲಿ ಜೀಪುರುಳಿ ಬಿದ್ದಿದೆ, ಡಿವೈಎಸ್ಪಿ ಎಲ್ಲಾ ಬರ್ತಾರೆ, ಸ್ಥಳೀಯ ಜೀಪಿನಲ್ಲಿ ಹೋದರೆ ಒಳ್ಳೇದು’ ಎಂದೆಲ್ಲಾ ಪುಕ್ಕಟೆ ಸಲಹೆಯಿತ್ತು ಹೊರಟ. ಇಂತಹ ಲಾಬಿಯೆಲ್ಲಾ ಇದ್ದದ್ದೇ ಅಂದುಕೊಂಡು ಹೊರಟರೂ ಅವ್ಯಕ್ತ ಭಯವೊಂದು ಸಣ್ಣಗೆ ಭುಸುಗುಡುತ್ತಲೇ ಇತ್ತು. ನಂತರ ಅಲ್ಲಿನ ಸ್ಥಳೀಯರೊಬ್ಬರ ಮಾರ್ಗದರ್ಶನದಿಂದ ಅಲ್ಲಿನ ಬೆಟ್ಟವನ್ನೂ, ಆ ಹಳ್ಳಿಕೊಂಪೆಯ ತುದಿಗಿದ್ದ ಜೈನ ದೇಗುಲದ ವೈಭೋಗವನ್ನೂ, ಆ ಬೆಟ್ಟದ ಬುಡದಲ್ಲಿನ ಮಹಾವೀರನ ಗುಹೆಯ ಅಮೋಘ ಪ್ರಶಾಂತತೆಯನ್ನೂ ಸೋಜಿಗದಿಂದಲೇ ಸವಿದು ಹಿಂದಿರುಗಿದೆವು.
ಮತ್ತೊಂದು ವಾರ ಮೂಲಮನೆಯ ಹತ್ತಿರದ ಜಲಪಾತವನ್ನು ನೋಡಲು ಹೊರಟಿದ್ದೆವು. ಊರ ಕಡೆಯವರಾದರೂ ಊರು ಬಿಟ್ಟವರೆನಿಸಿಕೊಂಡ ನಮ್ಮನ್ನು ಅಲ್ಲಿನ ಜನ ಧಿಕ್ಕರಿಸಬಹುದೆಂಬ ಕಲ್ಪನೆಯೂ ಇರಲಿಲ್ಲ. ಜಲಪಾತದ ಜಾಗ ಕೇಳಲು ಅಲ್ಲಿದ್ದ ಏಕೈಕ ಮನೆಯ ಬಳಿ ಬೈಕ್ ನಿಲ್ಲಿಸಿದೆವು. ಮುಂಚೆ ನಕ್ಸಲರ ಚಟುವಟಿಕೆ ಹೆಚ್ಚಾಗಿದ್ದ ಜಾಗ ಬೇರೆ, ಮೊದಲು ಅಲ್ಲಿನ ಜನ ನೋಡಿ ತುಸು ನಡುಕವೇ ಉಂಟಾಯ್ತು. ನಂತರ ಅವರು ಆತಿಥ್ಯ, ಅವರ ಔಚಿತ್ಯಪೂರ್ಣ ಮಾತು ನಮ್ಮನ್ನು ತಟ್ಟಿದವು. ನಾವು ಅಲ್ಲಿಗೆ ಹೋಗುವ ಎರಡು ದಿನಗಳ ಹಿಂದೆ ಬೆಂಗಳೂರಿನ ಕಡೆಯಿಂದ ಬಂದ ಉತ್ತರಭಾರತದ ಜನರ ಗುಂಪೊಂದು ಆ ಜಲಪಾತದ ನೀರಲ್ಲೇ ಸ್ನಾನ ಮಾಡಿ, ಅಲ್ಲಿಯ ಕುಡಿದು ಕುಣಿದು ಮಸ್ತಿ ಮಾಡಿ ತೆರಳಿದರು. ಆ ನೀರನ್ನೇ ಊರಲ್ಲಿನ ನಾಕೈದು ಮನೆಗಳು ಕುಡಿಯಲು ಬಳಸುವುದರಿಂದ ಅವರ ಕಾಳಜಿ, ಕಳಕಳಿ ಸಹಜವೇ ಆಗಿತ್ತು. ಅದೊಂದು ಪಾಠವಾಗಿ ತೆಗೆದುಕೊಂಡು ಮರಳಿದೆವು.
ನಮ್ಮ ಪ್ರವಾಸದ ಖುಶಿ ಮತ್ತೊಬ್ಬರಿಗೆ ಪ್ರಯಾಸ ತರುವಂತಾಗಬಾರದೆಂದು ಮನೆಬಿಟ್ಟು ತೆರಳದೇ ತಿಂಗಳೆರಡಾಯ್ತು. ವಾರಕ್ಕೂ, ವಾರಾಂತ್ಯಕ್ಕೂ ಹೆಚ್ಚಿನ ಪರಕ್ಕೇನೂ ಇಲ್ಲ ಈಗ. ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದವರಿಗೆ ಕಾಲಿಗೆ ಬೇಡಿ ಹಾಕಿದಂತಾಗಿದ್ದು ಸುಳ್ಳಲ್ಲ. ಆದರೆ ಮನೆಯೆಂದೂ ಜೈಲು ಅನಿಸಿದಂತೆ ಕಾದಿದ್ದು ಮಾತ್ರ ನಮ್ಮ ಹವ್ಯಾಸಗಳು. ಪ್ರವಾಸವಿಲ್ಲದೇ ಮನ ಭಣಗುಡುತ್ತಿದೆ, ಪ್ರಕೃತಿಯ ಮಡಿಲಲ್ಲಿ ಪದ್ಮಾಸನದಲ್ಲಿ ಕುಳಿತು ನಿಡುಸುಯ್ಯುವ ಸುಖವಿಲ್ಲ ಎಂಬುದೂ ನಿಜವೇ. ಆದರೂ ನಮ್ಮ ಪ್ರವಾಸದ ಹುಚ್ಚಿನಿಂದ ಮನೆಯವರಿಗೂ, ಉಳಿದವರಿಗೂ ಯಾವುದೇ ಸಮಸ್ಯೆಯಂತೂ ಆಗುತ್ತಿಲ್ಲ ಎಂಬ ಭಾವವೇ ಸಾಕು ನೆಮ್ಮದಿಯ ಮುಗುಳು ತರಲು. ಇಷ್ಟಕ್ಕೂ ಇದೇ ಜೀವನದ ಕೊನೆಯಲ್ಲವಲ್ಲ, ನಾಳೆಯೆಂಬ ತುಂಬು ಬೆಳಕೂ ನಮ್ಮ ಮುಂದಿದೆ. ಹಳಿ ತಪ್ಪಿದ ರೈಲಿನಿಂದಾಗಿ ಮುಂದಿನ ನಿಲ್ದಾಣಕ್ಕೆ ತೆರಳಲು ಚೂರು ತಡವಾಗಬಹುದು, ಅಲ್ಲಿಯ ತನಕ ಮನೆಯೆಂಬ ಪ್ಲಾಟ್ಫಾರ್ಮಿನಲ್ಲಿ ನಿಂತು ಕಾಯುವ ಅಲ್ಲವಾ?
sundaravaagide anubhava
👌👌
ಶನಿವಾರ ಮತು ಭಾನುವಾರ ಆವಲಬೆಟ್ಟ ಮತು ಗುಡಿಬಂಡೆ ಬೆಟ್ಟಕೆ ಗುಂಪು ಗುಂಪಾಗಿ ಬರುತ್ತಿದ್ದ ಕೆಲವರು ಅಂಕಣದಲೇ ತಿಂದು, ಕುಡಿದು ಆ ಖಾಲಿ ಬಾಟಲಿ, ಎಲಾ ಅಲಿಯೇ ಬಿಸಾಕಿ ಹೋಗುತ್ತಿದ್ದರು. ಈಗ ಆ ಗುಂಪು ಮಾಯಾವಾಗಿದೆ.
Very nice Shubha, very much true.. Nangantu kalige sarapali haaki Katrina hange aaju
ಪ್ರವಾಸ, ಚಾರಣ, ಮನಸ್ಸಿಗೆ ಮುದ ನೀಡುವ ಹವ್ಯಾಸ. ಬಂಧುಗಳೊಂದಿಗೆ ಅಥವಾ ಗೆಳೆಯರೊಂದಿಗೆ ಹರುಷದಿಂದ ಕಳೆಯುವ ಕ್ಷಣಗಳು ಸದಾ ಸವಿ ನೆನಪು. ಕೊರೊನಾ ಎಲ್ಲವನ್ನೂ ಎಲ್ಲರನ್ನೂ ಕಟ್ಟಿಹಾಕಿದಂತೆ, ಪ್ರವಾಸವನ್ನು ಕಟ್ಟಿಹಾಕಿದೆ. ಇಂತಹ ಸಮಯದಲ್ಲೂ ಚಾರಣ ಪ್ರವಾಸ ಮಾಡುವುದು ಒಂದು ದೊಡ್ಡ ಸಾಹಸ ಕೆಲಸವೇ ಸರಿ. ಶುಭಶ್ರೀ ಅವರ ಪ್ರವಾಸ ಕಥನ ಚೆನ್ನಾಗಿ ಮೂಡಿಬಂದಿದೆ. ಅಭಿನಂದನೆಗಳು.