ಹಬ್ಬಕ್ಕೆ ಹುಟ್ಟಿದಬ್ಬಕ್ಕೆ , ಫ್ರೆಂಡ್ ನಿಶ್ಚಿತಾರ್ಥಕ್ಕೆ , ಕಸಿನ್ ಮದುವೆಗೆ , ಚೆನ್ನಾಗಿ ಕಾಣಿಸುತ್ತೆ ಅಂತ , ತಗೋಳಕ್ಕೆ ಆಫರ್ ಇದೆ ಅಂತ , ನೋಡಕ್ಕೆ ಸೂಪರ್ ಇದೆ ಅಂತ ಒಂದಲ್ಲ ಒಂದು ಕಾರಣವಲ್ಲದ ಕಾರಣಕ್ಕೆ ವರ್ಷವಿಡೀ ಬಟ್ಟೆ ಖರೀದಿ ಮಾಡ್ತಾನೇ ಇರ್ತೀವಿ.
ಕವರ್ ತಗೊಂಡು ಮನೇಗ್ ಹೋದ್ರೆ ಸಾಕು. ಮೊನ್ನೆಯೆಲ್ಲಾ ತಗೊಂಡಿದ್ದಲ್ಲೋ ಅಂತ ಬಯ್ತಾನೇ ಇರ್ತಾರೆ .ಮನೆಯಲ್ಲಂತು ವಾಷಿಂಗ್ ಮಿಷಿನ್ ಒಳಗೆ ಮೇಲೆ , ಸ್ನಾನದ ಮನೆಯಲ್ಲಿ , ರೂಮಿನ ಹ್ಯಾಂಗರ್ರಲ್ಲಿ , ಕಬೋರ್ಡಿನಲ್ಲಿ , ಒಣಗಾಕೋ ಕಂಬಿಯ ಮೇಲೆ , ಐರನ್ ಟೇಬಲ್ ಮುಂದೆ ಹೀಗೆ ಎಲ್ಲೆಲ್ಲೂ ಬಟ್ಟೆಗಳ ರಾಶಿ ಕಾಣಸಿಗುತ್ತದೆ .
ಒಮ್ಮೆ ಹಿಂದಿನ ದಿನಗಳನ್ನು ನೆನಪಿಸಿಕೊಂಡಾಗ ಆಶ್ಚರ್ಯ ಆಗುತ್ತೆ.
ಬಾಲ್ಯಾನೆಲ್ಲಾ ಖಾಕಿ ನಿಕ್ಕರ್ರು ಬಿಳಿ ಅಂಗೀಲೇ ಕಳಿದಿದ್ವಲ್ಲ ಅಂತ. ಎಲ್ಲಂದ್ರಲ್ಲಿ ಕೆಟ್ಟ ಜಾರಾಬಂಡಿ ಆಡುವ ಖಯಾಲಿ ಯಾವಾಗಲೂ ಕುಂಡಿಯತ್ತಿರ ಹರಿದಿರುತಿತ್ತು , ಜೊತೆಹುಡುಗರು ಪೋಸ್ಟ್ ಆಫೀಸು ಅಂತ ರೇಗಿಸುತ್ತಿದ್ದರು.
ಅಡಿಯಲ್ಲಿ ನೀರು ತಾಗಿ ಕಿಲುಬಿಡಿಯುತ್ತದೆ ಎಂದು ಹಲಗೆ ಪೀಸು ಒತ್ತಿಗೆ ಕೊಟ್ಟಿದ್ದ…ಸೌಂಡು ಬರುವ ಹಳೆಯ ಬೀರುವಿನಲ್ಲಿ ನಮ್ಮದು ಅಂತ ಮೂರರಿಂದ ನಾಲ್ಕು ಷರ್ಟು ಎರಡು ಚೆಡ್ಡಿ ಇದ್ದರೆ ಅದೇ ಹೆಚ್ಚು. ಅದರಲ್ಲಿ ಒಂದಕ್ಕೂ ನೆಟ್ಟಗೆ ಗುಂಡಿಗಳಿರುತ್ತಿರಲಿಲ್ಲ . ಪ್ರತಿ ಸಲ ಷರ್ಟ್ ಹಾಕಿಕೊಳ್ಳುವಾಗಲೂ ಅಮ್ಮನನ್ನು ಪಿನ್ನು ಕೇಳುತ್ತಿದ್ದೆವು.
ಹಾಕಿರೋ ಷರಟನ್ನೇ ಹಾಕಿ ಹಾಕೀ ಏರಿಯಾದ ಜನ ನಮ್ಮನ್ನ ಯಾವ ಮಟ್ಟದಲ್ಲಿ ಗುರುತು ಹಿಡೀತಿದ್ರು ಅಂದ್ರೆ ‘ ಅದೇ ಆ ಹಳದೀ ಕಲರ್ ಷರ್ಟ್ ಹಾಕ್ಕೊಂಡ್ ಬರ್ತಾನಲ್ವಾ ಆ ಹುಡುಗ ಅನ್ನೋವ್ರು.
ನಿಜವಾಗ್ಲೂ ಬಟ್ಟೆಗೆ ಈಗ ಗೌರವ ಇರಬಹುದು ಆಗ ಬೆಲೆ ಇತ್ತು .
ಆಗ ರೆಡಿಮೇಡ್ ಬಟ್ಟೆ ಅನ್ನೋದು ತೀರಾ ಅಪರೂಪ , ಆ ಬಟ್ಟೆಗಳು ಚೆನ್ನಾಗ್ ಇರಲ್ಲ , ಮತ್ತೆ ಹೊಲಿಸಿದಷ್ಟು ಲಕ್ಷಣವಾಗಿ ಕಾಣಲ್ಲ , ಎಲ್ಲಕ್ಕಿಂತ ಹೆಚ್ಚಾಗಿ ಬಾಳಿಕೆ ಬರಲ್ಲ ಅನ್ನೋ ಧೋರಣೆ ನಮ್ಮ ಮನೆಯವರಲ್ಲಿತ್ತು . ನಮಗೂ ಆಗ ಬಟ್ಟೆಗಳ ಬಗ್ಗೆ ಅಂತಹ ಮೋಜು ಇರಲಿಲ್ಲ , ರಜೆ ಆಟ ತಿಂಡಿಗಳ ಬಗ್ಗೆ ವಿಪರೀತ ಆಸಕ್ತಿ ಇರುತ್ತಿತ್ತು , ಬಟ್ಟೆ ಅಂದ್ರೆ ಹಾಕ್ಕೋಬೇಕು ಹಾಕ್ಕೋತಿದ್ವಿ.
ತಂದೆ ಕೆ ಇ ಬಿ ಯಲ್ಲಿ ಕೆಲಸ ಮಾಡ್ತಿದ್ರೆ ಮಕ್ಕಳಿಗೆ ಗಾಢ ಹಸಿರಿನ ಅವರದೇ ಯೂನಿಫಾರಂ ಬಟ್ಟೇಲಿ ಪ್ಯಾಂಟು , ಅಪ್ಪ ಪೋಲಿಸ್ ಆಗಿದ್ರೆ ಮಕ್ಕಳಿಗೆ ಖಾಕಿ ಬಟ್ಟೆಯಲ್ಲೇ ಪ್ಯಾಂಟು , ಎಚ್ ಎಂ ಟಿ ಎಂಪ್ಲಾಯಿ ಆಗಿದ್ರೆ ಮಕ್ಕಳಿಗೆ ತೆಳು ನೀಲಿ ಷರಟು . ಮಕ್ಕಳು ಹಾಕೋ ಬಟ್ಟೆ ನೋಡಿ ಅವರಪ್ಪನ ವೃತ್ತಿ ಕಂಡುಹಿಡೀತಿದ್ರು ಅಂದ್ರೆ ಲೆಕ್ಕ ಹಾಕಿ ಇನ್ಯಾವ ಮಟ್ಟಕ್ಕೆ ಬಟ್ಟೆ ಹಾಕ್ತಿದ್ವಿ ಅಂತ . ಆಗ ಹೊಸ ಬಟ್ಟೆ ಅಂದ್ರೆ ಮನೆಯಲ್ಲಿ ತೀರಾ ಸ್ವಂತದವರ ಮದುವೆಯೋ ಮುಂಜಿಯೋ ಇರಬೇಕು . ಇಲ್ಲ ಯುಗಾದಿ ರೀತಿಯ ದೊಡ್ಡ ಹಬ್ಬವಾಗಿರಬೇಕು . ಅದೂ ಸ್ಟೈಲು ಡಿಸೈನು ಎಂತದ್ದೂ ಇಲ್ಲ ಮನೆಯಲ್ಲಿ ಮೂವರು ಮಕ್ಕಳು ಅಂದ್ರೆ ಮೂವರಿಗೂ ಒಂದೇ ಥರದ ಷರ್ಟು ಒಂದೇ ಥರದ ನಿಕ್ಕರ್ರು .ಪ್ರತಿ ಸಲ ಹಾಕ್ಕೋಳೋವಾಗ್ಲೂ ದೊಡ್ಡದಾ ಚಿಕ್ಕದಾ ಅನ್ನೋ ಗೊಂದಲ ಗೋಜಲ್ಲೇ ಹಾಕ್ಕೋತಾ ಇದ್ವಿ .
ಈ ಮನೆಯವ್ರಾ ಯುಗಾದಿಗೆ ಅಂತ ಬಟ್ಟೆ ಹೊಲಿಸಿ ಹಬ್ಬದ ದಿನ ಹಾಕ್ಕೋಳಕ್ಕೆ ಕೊಡದೇ ಅರ್ಧ ದಿನ ಬನೀನಲ್ಲೇ ಬಿಟ್ಟಿರೋವ್ರು ಕೊಳೆ ಮಾಡ್ಕೊಂತಾನೆ ಅಂತ .ಇದರ ಮಧ್ಯೆ ತಂದೆದೀರು ಹಾಕ್ಕೋಳ್ದೇ ಇರೋ ಪ್ಯಾಂಟನ್ನ ನಾವು ಆಲ್ಟ್ರೇಷನ್ ಬೇರೆ ಮಾಡ್ಸಿ ಹಾಕ್ಕೋಳೋ ಯುಗ ಬೇರೆ ಇತ್ತು ಅದಕ್ಕೇ ಅಂತಲೇ ಸ್ಪೆಷಲಿಸ್ಟ್ ದರ್ಜಿಗಳಿರುತ್ತಿದ್ರು .
ಸ್ವಲ್ಪ ಬುದ್ಧಿ ಬಂದಾಗ ಮನೆಯಲ್ಲಿ ನಮ್ಮನ್ನೂ ಬಟ್ಟೆ ತರಕ್ಕೆ ಅಂತ ಕರ್ಕೊಂಡು ಹೋಗೋವ್ರು ಅದೂ ಯಾವುದೇ ಕಾರಣಕ್ಕೂ ರೆಡಿಮೇಡ್ ತಗೋಳಂಗಿಲ್ಲ ಅನ್ನೋ ಕಂಡಿಷನ್ ಮೇಲೆ. ಇಲ್ಲಿ ಪ್ಯಾಂಟ್ಗೆ ಟೈಲರ್ರು ಒನ್ ಪಾಯಿಂಟ್ ತ್ರೀ ಬೇಕು ಅಂತ ಹೇಳಿರೋವ್ನು. ಅಲ್ಲಿ ಅಂಗಡಿಯವನು ಒನ್ ಪಾಯಿಂಟ್ ಟು ಸಾಕು ಅನ್ನೋವ್ನು. ಜಾಸ್ತಿ ಮಾತಾಡಿದ್ರೆ ದೊಡ್ ಪನ್ನಾ ಅನ್ನೋವ್ನು ಒಂದೂ ಅರ್ಥ ಆಗ್ತಿರ್ಲಿಲ್ಲ. ಸರಿ ಕಟ್ ಮಾಡ್ಸಿ ತಗೊಂಡೋಗ್ ದರ್ಜಿ ಹತ್ರ ಕೊಟ್ಟು ಅವನಿಗೆ ನಮ್ ವಿನ್ಯಾಸ ವಿವರಿಸಿ , ಯಾವಾಗ್ ಕೊಡ್ತೀರ ಅಂತ ಕೇಳ್ತಿದ್ವಿ ಅವನು ಕ್ಯಾಲೆಂಡರ್ ನೋಡಿ ನಿನಗ್ ಯಾವಾಗ್ ಬೇಕು ಅಂತ ಕೇಳೋವ್ನು . ಸುಮ್ನೆ ಕೇಳೋವ್ನ್ ಅಷ್ಟೇ ಬಟ್ ಅವನು ಕೊಡ್ತಿದ್ದಿದ್ದು ಅವನ ಡೇಟ್ ಗೇನೆ .
ಏನೇ ಹೇಳಿ ಟೈಲರ್ಗೆ ಕಾದು ಅವನು ಹೊಲಿದು ಕೊಟ್ಟ ಆ ಹೊಸಾ ಬಟ್ಟೆ ಹಾಕ್ಕೋಳ್ಲೋವಾಗ ಒಂದು ತರಹದ ಆಹ್ಲಾದಕರವಾದ ವಾಸನೆ ಬರೋದು ಒಂದು ಫ್ರೆಷ್ ಫೀಲಿಂಗ್ ಇರೋದು .
ಬೆಲ್ ಬಾಟಮ್ , ನ್ಯಾರೋ ಫಿಟ್ಟಿಂಗ್ , ಬ್ಯಾಗಿ , ಪ್ಯಾರಲಲ್ ಬ್ಯಾಗಿ , ಬೂಟ್ ಕಟ್ , ರೆಗ್ಯುಲರ್ ಫಿಟ್ ಹೀಗೆ ಪ್ಯಾಂಟುಗಳಲ್ಲಿ ……ಬಾಬ್ಜಿ ಕಾಲರ್ , ಚೈನಾ ಕಾಲರ್ , ಬಟನ್ ಕಾಲರ್ , ಸಿಂಗಲ್ ಸ್ಟಿಚ್ , ಡಬಲ್ ಸ್ಟಿಚ್ ಹೀಗೇ ಷರ್ಟ್ಗಳಲ್ಲಿ ವಿನ್ಯಾಸ ಬದಲಾಗುತ್ತಲೇ ಬಂದಿದೆ .
ಕಿರಣ್ ಮಾಡಾಳು
ಈ ಅಂಕಣದೊಂದಿಗೆ ಪ್ರಕಟವಾಗಿರುವ animated illustration ರಚಿಸಿದವರು ಕಿರಣ್ ಮಾಡಾಳು. ಸಾಂಪ್ರದಾಯಿಕ ಚಿತ್ರಕಲೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಷ ನೀಡಿ ಅದು ಮತ್ತಷ್ಟು ಪರಿಣಾಮಕಾರಿಯಾಗುವಂತೆ ಮಾಡಬಲ್ಲ ನಾಡಿನ ಕೆಲವೇ ಕಲಾವಿದರಲ್ಲಿ ಇವರೂ ಕೂಡ ಒಬ್ಬರು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ. 3D ಚಿತ್ರ ರಚನೆಯಲ್ಲಿ ವಿಶೇಷ ಪ್ರಾವೀಣ್ಯ. ಆಧ್ಯಾತ್ಮಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156
Nice article
ಲೇಖಕರು ಹೇಳಿದ ಹಾಗೆ ಟೈಲರ್ ಹೊಲೆದು ಕೊಟ್ಟ ಮೇಲೆ ಹಾಕಿಕೊಂಡು ಖುಷಿ ಪಡುವ ದಿನ ಈಗ ಇಲ್ಲ. ಈಗ ಎಲ್ಲವೂ jasti ಇದೆ. ಅದಕೆ ಬೆಲೆ ಇಲ್ಲ. ಹಳೆ ನೆನಪು ಬೇಡವೆಂದರೂ ಕಾಡುತೆ
Good one