ಖಾಸಗಿ ಬಸ್ ಗಳು ಕಳೆದ ಹಲವು ದಶಕಗಳಿಂದ ಕರ್ನಾಟಕದ ಸಂಪರ್ಕ ಕೊಂಡಿಗಳು.ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಜನ ಜೀವನಕ್ಕೆ ಇವುಗಳೇ ಆಧಾರ. ರೈತರ, ಕೂಲಿ ಕಾರ್ಮಿಕರ,ಮಧ್ಯಮವರ್ಗದವರ ದೈನಂದಿನ ಬದುಕು ಇವುಗಳೊಂದಿಗೆ ಅನ್ಯೋನ್ಯತೆಯಲ್ಲಿ ಸಾಗಿತ್ತು. ಮಧ್ಯ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಇವುಗಳದ್ದೆ ಸಾಮ್ರಾಜ್ಯ. ಗ್ರಾಮಗಳ ನಾಡಿನಲ್ಲಿ ಖಾಸಗಿ ಬಸ್ ಗಳ ಹೆಸರೇ ಜನಜನಿತ. ತಮ್ಮ ಮನೆಯ ಮಗನಂತೆಯೇ ನಾಮಧೇಯಗಳ ಪಠಣ.
ಅರ್ಧ ಶತಮಾನಕ್ಕಿಂತ ಹೆಚ್ಚು ಕಾಲ ರಸ್ತೆಯಲ್ಲಿ ರಾರಾಜಿಸಿದ ಖಾಸಗಿ ಬಸ್ ಗಳು ಕೊವಿಡ್ ರಣಕೇಕೆಯಲ್ಲಿ ತಣ್ಣಗೆ ಅವಿತಿವೆ. ಮತ್ತೊಮ್ಮೆ ಖಾಸಗಿ ಬಸ್ ಗಳು ರಸ್ತೆಯಲ್ಲಿ ತನ್ನ ಹಳೆಯ ವೈಭವ ಪಡೆಯುವವೇ ಎಂಬುದು ಆತಂಕದ ಅಸಹಾಯಕ ನಿಟ್ಟಸಿರು ಬಿಡುವಂತೆ ಮಾಡಿದೆ. ಖಾಸಗಿ ಬಸ್ ನೌಕರರ ಬದುಕು ಡೋಲಾಯಮಾನ ಸ್ಥಿತಿಯಲ್ಲಿದೆ. ಸಾವಿರಾರು ನೌಕರರ ಬದುಕು ಬೀದಿಗೆ ಬಿದ್ದಿವೆ. ಕೌಶಲ್ಯಪಡೆಯದ ವೃತ್ತಿ ತೊಡಗಿಕೊಂಡ ಅರೆಕಾಸಿಗೆ ಅವಮಾನ ಸಹಿಸಿ ಬದುಕುವ ಅಸಹನೀಯತೆ ಮಡುಗಟ್ಟಿದೆ.
ಖಾಸಗಿ ಬಸ್ ಚಾಲಕರು ಮಕ್ಕಳ ಕುತೂಹಲಕಾರಿ ವ್ಯಕ್ತಿ. ಮುಂದೆ ಕುಳಿತು ಚಾಲನೆಯನ್ನೆ ಎವೆಯಿಕ್ಕದೆ ಗಮನಿಸುತ್ತಿದ್ದವರೆಷ್ಟೋ. ಕಾಗದ ಪತ್ರಗಳಿಂದ ಹಿಡಿದು ಸಾಮಾನು ಸರಂಜಾಮು ಹಾಗೂ ಹಣವನ್ನು ಒಂದೂರಿಂದ ಮತ್ತೊಂದರಿಗೆ ತಲುಪಿಸುವ ನಂಬಿಕಸ್ಥ.ಏಜೆಂಟರು ಸಿಟ್ಟು ಸೆಡವುಗಳಿಂದಲೆ ಚಾರ್ಜು ವಸೂಲಿ ಮಾಡುತ್ತ ಮಾನವೀಯತೆ ತೋರುವ ಜೀವ. ಕಡಿಮೆ ಇದ್ದರೂ ಬೈದು ಪ್ರಯಾಣಕ್ಕೆ ಅನುವು ಮಾಡುವ ಅದೆಷ್ಟೋ ಉದಾಹರಣೆಗಳು. ಕಂಡಕ್ಟರ್ ಗಳು ಬಾಗಿಲಲ್ಲಿಯೇ ಜೋತು ಬಿದ್ದು ಜನರನ್ನು
ಮುಂದೆ ಬನ್ನಿ.. ಒಳಗೆ ಹೋಗಿ..ಎಂದು ಗದುರುತ್ತ ಕಲೆಕ್ಷನ್ ಹೆಚ್ಚಿಸುವ ನೆಚ್ಚಿನ ಭಂಟ. ಇನ್ನೂ ಬಸ್ ಮಾಲೀಕರೆಂದರೆ ಆಗ ಮಂತ್ರಿಗಳಂತೆ ನೋಡುತ್ತಿದ್ದ ಕಾಲ. ಆನಂತರ ಬಿಡಿ ಬಸ್ ಏಜೆಂಟರೆಲ್ಲಾ ಬಸ್ ಮಾಲೀಕರಾಗಿ ಕೈ ಸುಟ್ಟುಕೊಂಡವರಿದ್ದಾರೆ. ನಿತ್ಯ ಸಾವಿರಾರು ರೂಪಾಯಿ ವಹಿವಾಟು ನಡೆಸಿ ಪ್ರಯಾಣಿಕರ ಮನ್ನಣೆಗೆ ಪಾತ್ರವಾಗಿದ್ದ ಖಾಸಗಿ ಬಸ್ ಉದ್ಯಮ ತೆರಿಗೆ,
ಬ್ಯಾಂಕ್ ಸಾಲ, ಹೆಚ್ಚಿದ ಡೀಸಲ್ ಬೆಲೆ, ಪರಿಕರಗಳ ಕೈಗೆಟುಕದ ಬೆಲೆಯಲ್ಲಿ ಸಾವರಿಸಿಕೊಂಡು ನಡೆಯುತ್ತಿತ್ತು. ಕೋವಿಡ್ ಸೋಂಕಿನಲ್ಲಿ ಸಂಪೂರ್ಣ ನೆಲಕಚ್ಚಿ ಚೇತರಿಸಿಕೊಳ್ಳುವ ಭರವಸೆ ಕಳೆದುಕೊಳ್ಳುವ ಸ್ಥಿತಿ ತಲುಪಿದೆ.
ಸತತ ನಾಲ್ಕು ತಿಂಗಳಿಂದ ನಿಂತಲ್ಲೆ ನಿಂತ ಖಾಸಗಿ ಬಸ್ ಗಳು ತುಕ್ಕು ಹಿಡಿಯುತ್ತಿವೆ. ಚಾಲಕರು, ಏಜೆಂಟರು ಹಾಗೂ ಕಂಡಕ್ಟರ್ ಗಳು ಉದ್ಯೋಗ ಬದಲಾಯಿಸಿದ್ದಾರೆ. ಕೌಶಲ್ಯರಹಿತ ಕೆಲಸದಲ್ಲಿ ಕೊಟ್ಟಷ್ಟು ಕೂಲಿ ಪಡೆದು ಜೀವಹಿಡಿದುಕೊಂಡಿದ್ದಾರೆ. ಸಾಲಗಾರರಿಗೆ ಬಡ್ಡಿಯೂ ಕಟ್ಟಲಾಗದೆ ಭರವಸೆ ರಹಿತ ಜೀವನ ನಡೆಸುತ್ತಿದ್ದಾರೆ.ಸರ್ಕಾರ ಖಾಸಗಿ ಬಸ್ ಓಡಿಸಲು 14 ನಿಬಂಧನೆಗಳನ್ನು ಸೂಚಿಸಿದೆ. ಅವುಗಳಲ್ಲಿ ಪ್ರಮುಖವಾಗಿ 30 ಜನರು
ಪ್ರಯಾಣಿಸಬೇಕು. ತೆರಿಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಬೇಕು. ಕೋವಿಡ್ ಸೋಂಕಿತರಿದ್ದರೆ ಮಾಲೀಕರೇ ಪೂರ್ಣ ವಾಬ್ದಾರಿ ಹೊರಬೇಕು. ಸೋಂಕು ಹರಡದಂತೆ ಸ್ಯಾನಿಟೈಸರ್, ಮಾಸ್ಕ್, ಥರ್ಮಲ್ ಸ್ಕ್ಯಾನರ್ ಪರಿಕರಗಳನ್ನು
ಹೊಂದಿರಬೇಕು. ಬಸ್ ಫೇರ್ ಹೆಚ್ಚಿಸುವಂತಿಲ್ಲ. ಇದರಿಂದ ಇನ್ನಷ್ಟು ನಷ್ಟ ಸ್ಪಷ್ಟ.
ಖಾಸಗಿ ಬಸ್ ಮಾಲೀಕರ ಬೇಡಿಕೆಗಳು: ಬಸ್ ಓಡಾಟ ಆರಂಭವಾದ ನಂತರ ಕನಿಷ್ಟ ಆರು ತಿಂಗಳು ತೆರಿಗೆ ವಿನಾಯಿತಿ ನೀಡಬೇಕು. ಆನಂತರ ಮೂರು ತಿಂಗಳು ತೆರಿಗೆ ಕಟ್ಟಲು ಕಾಲಾವಕಾಶ ನೀಡಬೇಕು. 48 ಸೀಟು ಬದಲು 30 ಸೀಟಿಗೆ ಮಾತ್ರ ತೆರಿಗೆ ವಿಧಿಸಬೇಕು. ಡೀಸಲ್ ಬೆಲೆ ಏರುತ್ತಿರುವ ಹಿನ್ನೆಲ್ಲೆಯಲ್ಲಿ ಬಸ್ ಫೇರ್ ಹೆಚ್ಚಿಸಲು ಅವಕಾಶ ನೀಡಬೇಕು.
ಉದಾಹರಣೆಗೆ ದಾವಣಗೆರೆ ಜಿಲ್ಲೆಯಲ್ಲಿ 330 ಖಾಸಗಿ ಬಸ್ ಗಳಿವೆ. ಇದರಿಂದ ಸಾವಿರಾರು ಕುಟುಂಬದ ಜೀವನ ನೆಲೆ ಕಳೆದುಕೊಂಡಿದೆ. ನಮ್ಮ ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಇದುವರೆಗೂ ಸ್ಪಂದಿಸಿಲ್ಲ. ಹಾಗಾಗಿ ಖಾಸಗ ಬಸ್ ಸಂಚಾರ ಅನಿಶ್ಚಿತವಾಗಿದೆ ಎಂದು ದಾವಣಗೆರೆ ಜಿಲ್ಲೆಯ ಗೀತಾಂಜನೇಯ ಬಸ್ ಕಂಪನಿ ಮಾಲೀಕರಾದ ಸುದೀಪ್ ಸಮಸ್ಯೆಯನ್ನು ಬಿಚ್ಚಿಡುತ್ತಾರೆ.
ನಮ್ಮ ಬಸ್ ಗಳು ಪೆಟ್ರೋಲ್ ಬಂಕ್ ಬಳಿ ನಿಂತಿವೆ. ಬ್ಯಾಂಕ್ ಸಾಲ ಮರು ಪಾವತಿಗೆ ಒತ್ತಾಯಿಸುತ್ತಿವೆ. ಬಸ್ ಮಾರಾಟ ಮಾಡಲು ಹೊರಟರೆ ಖರೀದಿಸುವವರಿಲ್ಲ. ರೂ.10 ಲಕ್ಷ ಬೆಲೆ ಬಾಳುವ ಬಸ್ ರು.1.50 ಲಕ್ಷಕ್ಕೆ ಕೇಳುತ್ತಿದ್ದಾರೆ. ಹಾಗಾಗಿ ಕಿರಾಣಿ ಅಂಗಡಿ ವ್ಯಾಪಾರಕ್ಕೆ ತೊಡಗಿಸಿಕೊಂಡಿದ್ದೇನೆ. ಮತ್ತೊಮ್ಮೆ ಬಸ್ ಓಡಿಸುವ ಇರಾದೆ ಇಲ್ಲ ಎಂದು . ಶ್ರೀ ಶೈಲ ಬಸ್ ಮಾಲೀಕ ಸಂತೋಷ್ ಉದ್ಗಾರ.
ನಿತ್ಯ ರೂ.600 ರಿಂದ 800 ಗಳ ಸಂಪಾದನೆ ಇತ್ತು. ಗಾರೆ ಸಹಾಯಕ ಕೆಲಸಕ್ಕೆ ಹೋದರೆ ದಿನಕ್ಕೆ ರೂ.400 ಕೊಟ್ಟರೆ ಹೆಚ್ಚು. ಕೆಲವರು ಕೆಲಸ ಗೊತ್ತಲ್ಲವೆಂದು ಬಿಡಿಸಿ ಕಳಿಸಿದ್ದಾರೆ.ಸಾಲ ಮರುಪಾವತಿ ಮಾಡಲಾಗುತ್ತಿಲ್ಲ. ಬಡ್ಡಿ ಕಟ್ಟಲಾಗುತ್ತಿಲ್ಲ. ಮಕ್ಕಳ ಓದು ಬರಹಕ್ಕೆ ದುಡ್ಡಿಲ್ಲ ಎಂದು ಖಾಸಗಿ ಬಸ್ ಚಾಲಕರಾದ ಇರ್ಫಾನ್ ಮತ್ತು ನಾಯಕ ದುಃಖಿಸುತ್ತಾರೆ.
ಕಳೆದ 25 ವರ್ಷದಿಂದ ಖಾಸಗಿ ಬಸ್ ಏಜೆಂಟ್ ಆಗಿ ದುಡಿದೆ. ನಾಲ್ಕು ತಿಂಗಳಿಂದ ಕೆಲಸವಿಲ್ಲ. ಆರಂಭದಲ್ಲಿ ಕೇಟರಿಂಗ್ ವೃತ್ತಿ
ಆರಂಭಿಸಿದೆ. ಹೋಟೆಲ್ ಆರಂಭವಾದ ನಂತರ ಆ ಕೆಲಸವೂ ನಿಂತಿತು. ಹೊಸ ಉದ್ಯೋಗಾರಂಭಕ್ಕೆ ಯೋಚಿಸುತ್ತಿದ್ದೇನೆ.ಬಸ್ ಮಾಲೀಕರು ಇಲ್ಲಿವರೆಗೆ ನಮ್ಮ ಜೀವನದ ಬಗ್ಗೆ ಒಂದು ಮಾತನ್ನು ಕೇಳಿಲ್ಲ ಎಂದು ನೋವಿನಿಂದ ನುಡಿಯುತ್ತಾರೆ ಚಿತ್ರದುರ್ಗದ ಖಾಸಗಿ ಬಸ್ ಏಜೆಂಟ್ ಎಸ್.ಜೆ.ಶಿವಕುಮಾರ್.ಬಸ್ ಕಂಡಕ್ಟರ್ ಕೆಲಸ ಕಳೆದುಕೊಂಡ ಮೇಲೆ ತರಕಾರಿ ಮಾರುತ್ತಿದ್ದೇನೆ. ಕೆಲವರು ಪಂಚರ್ ಅಂಗಡಿ ನಡೆಸುತ್ತಿದ್ದಾರೆ. ಬಸ್ ಕೆಲಸವೇ ಚೆನ್ನಾಗಿತ್ತು ಎಂಬ ಅಭಿಪ್ರಾಯ ಕಂಡಕ್ಟರ್ ಪ್ರಕಾಶ್ ಅವರಿಂದ.
ಖಾಸಗಿ ಬಸ್ ನೌಕರರ ಮೇಲಿನ ಕೆಲವು ಉದಾಹರಣೆಗಳಷ್ಟೆ. ಸಾವಿರಾರು ಕುಟುಂಬಗಳು, ತರಕಾರಿ, ಕೂಲಿ, ಪಂಕ್ಚರ್ ಅಂಗಡಿ, ಕಟ್ಟಡ ಕೂಲಿ ಕೆಲಸಗಳಿಗೆ ಪರಿವರ್ತನೆಗೊಂಡಿದ್ದಾರೆ. ಮತ್ತೊಮ್ಮೆ ಬಸ್ ಗಳು ರಸ್ತೆಗಿಳಿಯಲಿ ನಮ್ಮ ಜೀವನ ಸಲೀಸಾಗಿ ಸಾಗಲಿ ಎಂಬ ಭರವಸೆಯೊಂದಿಗೆ ಜೀವನ ತಳ್ಳುತ್ತಿದ್ದಾರೆ.
ಸರ್ಕಾರ ಖಾಸಗಿ ಬಸ್ ಮಾಲೀಕರ ಬೇಡಿಕೆಗಳನ್ನು ಗಮನಿಸಿ. ನಷ್ಟವನ್ನು ತಪ್ಪಿಸುವಲ್ಲಿ ಸೂಕ್ತ ಕ್ರಮಗಳನ್ನು ರೂಪಿಸಬೇಕು. ಪ್ರಯಾಣಿಕ ಸ್ನೇಹಿ ಖಾಸಗಿ ಬಸ್ ಗಳು ಮತ್ತೊಮ್ಮೆ ರಸ್ತೆಯಲ್ಲಿ ರಾರಾಜಿಸಬೇಕು. ಮಾಲೀಕರು ನಿಂತಲ್ಲೆ ತುಕ್ಕು ಹಿಡಿಯುವ ನಷ್ಟದಿಂದ ಹೊರಬರಲು ಶೀಘ್ರ ನಿಯಮ ಬದಲಾಯಿಸಿ ನೆರವಿಗೆ ಬರಬೇಕು ಎಂದು ಖಾಸಗಿ ಬಸ್ ಉದ್ಯಮ ಒತ್ತಾಯಿಸುತ್ತಿದೆ.
ಖಾಸಗಿ ಬಸ್ ಉದ್ಯಮದ ಒಳ ಹೊರಗುಗಳನ್ನು ಕರೊನಾ ಬಯಲು ಮಾಡಿದ್ದನ್ನು ಮನಮಿಡಿಯುವಂತೆ ಲೇಖನ ಪ್ರಸ್ತುತ ಪಡಿಸಿದೆ. ಕರೊನಾದಿಂದ ಮುಂದೆ ಆಗಬಹುದಾದ ಸಾಮಾಜಿಕ ಸಮಸ್ಯೆ ತಲ್ಲಣಗೊಳಿಸಿತು.
ಖಾಸಗಿ ಬಸ್ ಸಿಬ್ಬಂದಿಗಳ ಪ್ರಸ್ತುತ ಜೀವನ ಶೈಲಿ.. ಕೊರೊನ ದಿಂದ ಬದಲಾದ ಆರ್ಥಿಕ ಸಂಕಷ್ಟ.. ಎಲ್ಲವನ್ನು ನೈಜವಾಗಿ, ಓದುಗರ ಮನಮಿಡಿಯುವಂತೆ.. ಓದುಗರನ್ನ ಓದಿಸುವಂತೆ ಬರೆದಿರುವ ನಿಮ್ಮ ಬರವಣಿಗೆಗೆ ಹೃದಯಪೂರ್ವಕ ಅಭಿನಂದನೆಗಳು ಸರ್….
ಕರೋನ ವೈರಸ್ ಎಷ್ಟು ಬಡ ಜನಗಳ ಜೀವನನೆ ನಾಶ ಮಾಡಿದೆ ಸರ್
ಸಕಾ೯ರ ಸೂಕ್ತ ಪರಿಹಾರ ಕ್ರಮ ಕೈಗೋಳಬೇಕು
” ಖಾಸಗಿ ಬಸ್ಸುಗಳ ಸಮಸ್ಯೆಯನ್ನು ಬಹಳ ಸೂಕ್ಷ್ಮವಾಗಿ ವಿವರಿಸಿದ್ದೀರಿ. ಆದಾಗ್ಯೂ ಸಕಾ೯ರವೊಂದೇ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದು. ಏಕೆಂದರೆ, ಕೊರೋನಾ ಎಂಬ ಅಕಾಲಿಕ ಪರಿಸ್ಥಿತಿ ನಮ್ಮ ರಾಜ್ಯವೊಂದೇ ಅಲ್ಲ, ಇಡೀ ಪ್ರಪಂಚವನ್ನೇ ನಿಶ್ಚಲಮಯವಾಗಿಸಿದೆ.”
ಉದಾಹರಣೆ ನೋಡಿ! Ksrtc ಸಿಬ್ಬಂದಿ ಹಾಗೂ ಇಲಾಖೆ, ಸಕಾ೯ರದ ಮೇಲೆ ಒತ್ತಡ ಹಾಕಿ, ಅನುಮತಿ ಪಡೆದು ಬಸ್ಸುಗಳನ್ನು ರಸ್ತೆಗೆ ಇಳಿಸಿದ್ರು, ಆದರೆ ಅವರಿಗೂ ಕೂಡ, ಕಲೆಕ್ಷನ್ ಬಾರದೇ, ಟ್ರಿಪ್-ಗಳನ್ನೇ ಮಾಡಲಾಗುತ್ತಿಲ್ಲ.
ಸಕಾ೯ರಗಳು ನಾವು ತೆರಿಗೆ ರೂಪದಲ್ಲಿ ಕೊಟ್ಟ ಹಣವನ್ನು ವಿವೇಚನೆಯಿಂದ ಹಂಚಿಕೆ ಮಾಡಬಹುದೇ ವಿನಹ ಬೇರೆ ದಾರಿ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕೆಳಹಂತದ ಸಮುದಾಯ ಗಳ ಜೀವನ ನಿವ೯ಹಣೆಯನ್ನೇ ತಹಬಂದಿಗೆ ತರಲಾಗುತ್ತಿಲ್ಲ. ಎಲ್ಲರೂ ಸದ್ಯಕ್ಕೆ ಸಕಾ೯ರದಿಂದ ಬೇಡುವವರೆಗೂ ವಿನಹ , ಸಕಾ೯ರದ ಖಜಾನೆಯ ಆದಾಯ ಮೂಲಗಳೆಲ್ಲಾ , ಬಂದ್ ಆಗಿವೆ, ಇಲ್ಲಾ ಸದ್ಯದ ಮಟ್ಟಿಗಂತೂ ಖಜಾನೆ ತುಂಬುವುದು ಅಸಾಧ್ಯವಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಖಾಸಗಿ ಬಸ್ಸಿನವರಿಗೆ ಸಕಾ೯ರವನ್ನು ಮಣಿಸಿ, ಬೇಡಿಕೆ ಈಡೇರಿಸಿಕೊಳ್ಳಲು ತಂತ್ರಗಳಿಲ್ಲ. ‘ಸಮಸ್ಯೆ’ಗಳು ಎಲ್ಲಾ ರಂಗವನ್ನು ಈ ಕೊರೋನಾ ನುಂಗಿ ಹಾಕಿದೆ.
” ಕಾಲಾಯಾ ತಸ್ಮೈ ನಮಃ ”
ನನಗನಿಸಿದ ಮಟ್ಟಿಗೆ ಕಾಲವೇ ಎಲ್ಲವನ್ನು ನಿಧ೯ರಿಸಲಿದೆ.
ಆದಷ್ಟು ಬೇಗ ‘ಖಾಸಗಿ ಬಸ್ಸಿನವರ’ ಸಮಸ್ಯೆ ಗಳಿಗೆ ಒಂದು ನಿರ್ದಿಷ್ಟ ಪರಿಹಾರವನ್ನು , ಸಕಾ೯ರಾದಿಯಾಗಿ ಎಲ್ಲರೂ ಹುಡುಕಬೇಕಾಗಿದೆ.
ಕೊರೊನ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ಆದೇಶಿರುವ ಕ್ರಮಗಳಲ್ಲೊಂದಾದ ಖಾಸಗಿ ಬಸ್ ಸಂಚಾರ ನಿರ್ಬಂಧನೆಯಿಂದ ಆ ಉದ್ಯಮಕ್ಕೆ ಹಾಗೂ ಅದರ ಮೇಲೆ ಅವಲಂಬಿತವಾಗಿದ್ದ ಕುಟುಂಬಗಳ ಮೇಲಾಗಿರುವ ಪರಿಣಾಮದ ಕುರಿತು ಲೇಖನವು ಉತ್ತಮವಾಗಿ ಮೂಡಿಬಂದಿದೆ. ಈ ಬಗ್ಗೆ ಘನಸರ್ಕಾರವು ಗಮನ ಹರಿಸಿ ಸೂಕ್ತ ಕ್ರಮ ಜರುಗಿಸಿದರೆ ಲೇಖನವು ಅರ್ಥಪೂರ್ಣವಾಗುತ್ತದೆ. 👍
Well explained sir….
ಒಂದೊಂದು ಕಸುಬಿನವರದು ಒಂದೊಂದು ಮನಮಿಡಿಯುವ ಕಥೆ . ಜೀವನವೆಂಬ ನದಿಯ ಹರಿವಿನ ಪಾತ್ರದಲ್ಲಿ ಇದೊಂದು ತಿರುವು.💫
ಖಾಸಗಿ ಬಸ್ಸಿನ ಮಾಲೀಕರು ಹಾಗೂ ಡ್ರೈವರ್ ಮತ್ತು ಕಂಡಕ್ಟರುಗಳು ಜೀವನ ಅತ್ಯಂತ ದುಸ್ತರವಾಗಿದೆ. ತಿಂಗಳ ಸಂಬಳವಿಲ್ಲದೆ ಅನೇಕ ಕುಟುಂಬಗಳು ಬೀದಿ ಪಾಲಾಗಿವೆ. ಕೆಲವರಿಗೆ ಮಾತ್ರ ಕೌಶಲ್ಯಗಳಿಂದ ಬೇರೆ ಬೇರೆ ವೃತ್ತಿಗಳನ್ನು ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ . 70 ಭಾಗ ಜನರ ಜೀವನ ಕಷ್ಟವಾಗಿದೆ .ಕಾರಣ ಅವರಿಗೆ ಯಾವುದೇ ಕೆಲಸಗಳನ್ನು ನಿರ್ವಹಿಸಲು ಆಗುತ್ತಿಲ್ಲ. ಕಷ್ಬದಲ್ಲಿರುವ ಮಾಲೀಕರುಗಳು, ಡ್ರೈವರ್, ಕಂಡಕ್ಟರ್, ಏಜೆಂಟರುಗಳ ಬದುಕಿಗೆ ಆಸರೆ ನೀಡಲು ಎಚ್ಚರಿಸಿರುವ ವರದಿ ಅತ್ಯಂತ ಉತ್ತಮವಾಗಿದೆ. ನಿಮ್ಮ ಕಳಕಳಿಯು ಅವರ ಭವಿಷ್ಯಕ್ಕೆ ಅವರ ಜೀವನಕ್ಕೆ ಒಂದಿಷ್ಟಾದರೂ ಸಹಾಯವಾಗಲಿ ಎಂಬುದು ನನ್ನ ಆಶಯ.
ಸ್ನೇಹಿತ ವಿರೇಶ್ ಪ್ರಸಾದ್ ಬರೆದ ಓಡದ ಖಾಸಗಿ ಬಸ್ ಗಳು ವರದಿ ತುಂಬಾ ಚೆನ್ನಾಗಿದೆ, ಇದೇ ರಿತಿ ಕರೋನ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬೇರೆ ಉದ್ಯಮ, ಮಾನವೀಯತೆ, ಸ್ನೇಹ, ಸಂಬಧಗಳು,ಬಗ್ಗೆ ಬರೆದರೆ ತುಂಬಾ ಚನ್ನಾಗಿರುತ್ತೆ. ಅಭಿನಂದನೆಗಳು ವಿರೇಶ್ ಪ್ರಸಾದ್ ರವರಿಗೆ.
ವೀರೇಶ್ ಪ್ರಸಾದ್ ರವರು ತಮ್ಮ ವರದಿಯಲ್ಲಿ ಮುಂದೆ ಓಡಲಾರದೆ ನಿಂತಲ್ಲೇ ನಿಂತ ಖಾಸಗಿ ಬಸ್ ಗಳ ಒಡಲಾಳದಲ್ಲಿ ಕಟ್ಟಿಕೊಂಡಿರುವ ಮಡುಗಟ್ಟಿರುವ ವ್ಯಥೆ ಯನ್ನು ಎಳೆ ಎಳೆಯಾಗಿ ಚಿತ್ರಿಸಿದ್ದಾರೆ.ಖಾಸಗಿ ಬಸ್ ಗಳು ಬರೀ ಪ್ರಯಾಣಿಕರನ್ನು ಒತ್ತೊಯ್ಯುತ್ತಿರಲಿಲ್ಲ ಬದಲಿಗೆ ಮಾಲೀಕರು,ಏಜೆಂಟರು,ಚಾಲಕರು, ಕಂಡಕ್ಟರ್ ,ಕ್ಲೀನರ್ ಹೀಗೆ ಹತ್ತಾರು ಜನರ ಜೀವನ ಬಂಡಿಯೂ ಅದಾಗಿತ್ತು ಎಂಬುದನ್ನು ಬಿಡಿಸಿ ತೋರಿಸಿದ್ದಾರೆ.ಕಣ್ಣಿಗೆ ಕಾಣದ ಕರೋನ ವೈರಸ್ ಕಣ್ಣಿಗೆ ರಾಚುವಂತೆ
ಅನೇಕ ಪರಿವರ್ತನೆ ತಂದದ್ದಂತು ಸತ್ಯಸ್ಯ ಸತ್ಯ.
ಖಾಸಗಿ ಬಸ್ ಗಳ ಅಂದಿನ ಸೇವೆ ಮತ್ತು ಇಂದಿನ ಸಂಕಷ್ಟಗಳ ಬಗ್ಗೆ ಎಳೆ ಎಳೆಯಾಗಿ ನಮ್ಮ ಮುಂದೆ ಬಿಚ್ಚಿಟ್ಟಿರುವ ಶಿಕ್ಷಕರು,ಪತ್ರಕರ್ತರು ಅದ ಕೆ ಎಸ್ ವಿರೇಶ್ ಪ್ರಸಾದ್ ಸರ್ ಗೆ ಅಭಿನಂದನೆಗಳು. ಪ್ರಸ್ತುತ ಸಮಾಜದಲ್ಲಿ ಕರೋನ ಸಮಸ್ಸೆ ಹೆಚ್ಚುತ್ತಲೇ ಇದೆ . ಭಾರತದ ಆರ್ಥಿಕ ಪರಿಸ್ಥಿತಿಗೆ ತೊಂದರೆ ಆಗುತ್ತಲೇ ಇದೆ. ಸುಮಾರು ಉದ್ಯಮಿಗಳು ಕೂತಲ್ಲೆ ಕುಳಿತ್ತಿದ್ದಾರೆ. ಅದರಲ್ಲಿ ಒಂದು ಪ್ರಮುಖ ಖಾಸಗಿ ಬಸ್ ಮಾಲೀಕರು.. ಕರ್ನಾಟಕದ ಸುಮಾರು ಭಾಗಗಳ ಹಳ್ಳಿಗಳ ಜನರಿಗೆ ಈ ಖಾಸಗಿ ಬಸ್ ಗಳೇ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿವೆ. ದಾವಣಗೆರೆ, ಚಿತ್ರದುರ್ಗದಂತ ಜಿಲ್ಲೆ ಗಳಲ್ಲಿ ನೋಡಿದಂತೆ ಹಲವಾರು ಪ್ರದೇಶದ ಜನರ ಓಡಾಟಕ್ಕೆ ನೆರವು ಈ ಖಾಸಗಿ ಬಸ್ ಗಳೇ. ರೋಗಿಗಳು ಪಟ್ಟಣದ ಆಸ್ಪತ್ರೆಗೆ, ಹೋಗಲು ವಿದ್ಯಾರ್ಥಿಗಳು ದೂರದ ಶಾಲೆಗೆ ಹೋಗುತ್ತಿದ್ದದ್ದು, ಜನ ವಾರದ ಸಂತೆಗೆ ಹೋಗುತ್ತಿದ್ದದ್ದು, ರೈತರ ಬಿತ್ತನೆ ಬೀಜ ಗೊಬ್ಬರ ಕೃಷಿ ಸಾಮಾನು ಸಾಗಿಸಲು ಬಳಸುತ್ತಿವುದು ಇವನ್ನೇ. ಕೆಲವು ಉಪ ಅಂಚೆ ಕೇಂದ್ರಗಳಿಗೆ ಅಂಚೆ ರವಾನೆ ಗೂ ಖಾಸಗಿ ಬಸ್ ಗಳೇ ಆಧಾರ.ಇದೆ ರೀತಿ ಹಲವಾರು ಸೇವೆಗಳು ಬಸ್ ನಿಂದ ಚಾಲಕರಿಂದ ನಿರ್ವಾಹಕರಿಂದ ನಡೆಯುತ್ತಿತ್ತು .ಇದೆಲ್ಲ ಇದೀಗ ಕರೋನ ಲಾಕ್ ಡೌನ್ ನಲ್ಲಿ ಲಾಕ್ ಆದ ಬಸ್ ಗಳು ಇನ್ನು ಅನ್ಲಾಕ್ ಆಗಿಲ್ಲ .ಸoಚಾರವು ಇಲ್ಲ. ಇದರಿಂದ ಮಾಲೀಕರಷ್ಛೇ ಅಲ್ಲ ಅದಕ್ಕಿಂತ ಹೆಚ್ಚಾಗಿ ಚಾಲಕ ಮತ್ತು ನಿರ್ವಾಹಕರ ಜೇವನ ಮತ್ತೆ ಅವರ ಕುಂಟುಂಬಗಳು ಬಹಳಷ್ಟು ಸಮಸ್ಸೆ ಯಲ್ಲಿ ಸಿಲುಕಿರುವುದು ಸತ್ಯ. ಇದರ ನಡುವೆ ಪೆಟ್ರೋಲ್ ಡೀಸೆಲ್ ಗಳ ಬೆಲೆಯೂ ಹೆಚ್ಚು, ತೆರಿಗೆ ಹಣ ಈ ವಿಷಯಗಳ ಬಗ್ಗೆ ಸರಕಾರ ಇನ್ನಷ್ಟು ಗಮನ ನೀಡಲಿ. ಈ ಹಿಂದಿನ ಖಾಸಗಿ ಬಸ್ ಸೇವೆ ಸರಕಾರ ದ ಮುನ್ನೆಚ್ಚರಿಕೆ ಮತ್ತು ನಿಯಮಗಳ ನಡುವೆಯೇ ಆರಂಭವಾಗುವಂತೆ ಆಗಲಿ. ವಿರೇಶ್ ಪ್ರಸಾದ್ ಸರ್ ನ ಈ ವಿಷಯ ಮಂಡನೆ ಸರಕಾರದ ಮನ ಮುಟ್ಟಲಿ.