21.2 C
Karnataka
Sunday, September 22, 2024

    ಕೋವಿಡ್- 19 : ಸುರಕ್ಷತೆಗಾಗಿ ಡಿಜಿಟಲ್ ಕರೆನ್ಸಿ

    Must read

    ಭಾರತವು ಸೇರಿದಂತೆ ಜಗತ್ತಿನಾದ್ಯಂತ, ಕೋವಿಡ್-19 ಸಾಂಕ್ರಮಿಕ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ದಿನಕ್ಕೆ ಭಯಾನಕವಾಗಿ ಏರುತ್ತಿದೆ. ಕಣ್ಣಿಗೆ ಕಾಣಿಸದ ನೋವೆಲ್ ಕೊರೊನಾ ವೈರಸ್ ನಿಶಬ್ದವಾಗಿ ಹೇಗೆಲ್ಲಾ ಹಬ್ಬುತ್ತಿದೆ ಎಂಬ ಚರ್ಚೆಯ ನಡುವೆ,ಕಲುಷಿತ ಕರೆನ್ಸಿ ನೋಟುಗಳ ಮೂಲಕವೂ ಹರಡುವ ಸಾಧ್ಯತೆ ಇದೆಯೆ ಎಂಬುದು ಮತ್ತೊಮ್ಮೆ ಚರ್ಚೆಗೆ ಬಂದಿದೆ. ಕರೆನ್ಸಿ ನೋಟುಗಳನ್ನು ಬಳಸದಂತೆ ತಡೆಯುವುದು ಆಗದ ಕೆಲಸ. ಹಾಗಾದರೆ ಸುರಕ್ಷಿತವಾಗಿ ಹೇಗೆ ಬಳಸಬಹುದು ಅದಕ್ಕೆ ಇರುವ ಪರಿಹಾರವಾಗಿ ಇರುವ ಮಾರ್ಗಗಳ ಕುರಿತು ಒಂದು ಅವಲೋಕನ.


    ವಿಶ್ವಾದ್ಯಂತ, ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ.ವಿಶ್ವ ಅರೋಗ್ಯ ಸಂಸ್ಥೆ ಮತ್ತು ಸರ್ಕಾರಿ ಮಾರ್ಗಸೂಚಿಗಳ ಪ್ರಕಾರ, ಲಾಕ್‌ಡೌನ್, ಫೇಸ್ ಮಾಸ್ಕ್ ಧರಿಸುವುದು,ಸಾಮಾಜಿಕ ಅಂತರ, ಕೈಗವಸುಗಳ ಬಳಕೆ, ಕೈಕಾಲುಗಳನ್ನು ಸೋಪಿನಿಂದ ಶುಚಿಗೊಳಿಸುವುದು, ಸ್ಯಾನಿಟೈಜರ್‌ನಿಂದ ಕೈಗಳನ್ನುಸೋಂಕು ರಹಿತಗೊಳಿಸುವುದು ಸೇರಿದಂತೆ ವಿವಿಧ ಮುನ್ನೆಚ್ಚರಿಕೆ ಕ್ರಮಗಳ ಹೊರತಾಗಿಯೂ, ವೇಗವಾಗಿ ಹಬ್ಬುತ್ತಿರುವ ಕೊರೊನಾ ವೈರಸ್ ಅನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

    ನಿಶಬ್ದವಾಗಿ, ಜನಸಮುದಾಯದ ನಡುವೆ ವೈರಸ್ ಹೇಗೆ ಹರಡುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದ ಚಿತ್ರ ಇನ್ನೂ ಲಭ್ಯವಿಲ್ಲ. ಕಲುಷಿತ ಗಾಳಿಯ ಮೂಲಕ ವೈರಸ್ ಹರಡುವ ಸಾಧ್ಯತೆಯ ಕುರಿತು ಇತ್ತೀಚಿನ ಕೆಲವು ವರದಿಗಳು ಜನರಲ್ಲಿ ಮತ್ತೊಂದು ಭೀತಿಯನ್ನು ಸೃಷ್ಟಿಸಿದೆ . (ಇದರ ಬಗ್ಗೆ ಇನ್ನಷ್ಟೂ ಸಂಶೋಧನೆಗಳು ಅಗತ್ಯ ಇವೆ).

    ಕರೆನ್ಸಿ ನೋಟುಗಳಿಂದ ವೈರಸ್ ಹರಡುವ ಸಾಧ್ಯತೆ ಎಷ್ಟು?

    ಇತ್ತೀಚಿನ ಒಂದು ಗಂಭೀರ ಕಳವಳ ಏನೆಂದರೆ ಕರೆನ್ಸಿ ನೋಟುಗಳ ಮುಖಾಂತರ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ.ಇತ್ತೀಚೆಗೆ ದೆಹಲಿ ವರ್ತಕರ ಸಂಘ ಕೇಂದ್ರ ಆರೋಗ್ಯ ಸಚಿವರಿಗೆ ಮನವಿ ಅರ್ಪಿಸಿ ಕರೆನ್ಸಿ ನೋಟುಗಳಿಂದ ವೈರಾಣು ಹರಡುವ ಸಾಧ್ಯತೆ ಬಗ್ಗೆ ಸ್ಪಷ್ಟನೆ ಕೇಳಿದೆ. ಈ ಕಳವಳಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಮೊದಲನೆಯದಾಗಿ ನಮ್ಮ ಕೈ ಸೇರುವ ಮೊದಲು ಕರೆನ್ಸಿ ನೋಟುಗಳು ಎಷ್ಟೋ ಅಪರಿಚಿತ ವ್ಯಕ್ತಿಗಳ ನಡುವೆ ಒಬ್ಬರಿಂದ ಒಬ್ಬರಿಗೆ ಹಸ್ತಾಂತರವಾಗಿರುತ್ತವೆ.

    ಸೆಂಟ್ರಲ್ ಬ್ಯಾಂಕ್ ನಡೆಸಿದ ಅಂಕಿಅಂಶಗಳ ಪ್ರಕಾರ, ಮಾರ್ಚ್ 31, 2019 ರ ವೇಳೆಗೆ ಭಾರತದಲ್ಲಿ 10,875 ಕೋಟಿ ಕರೆನ್ಸಿ ನೋಟುಗಳು ಮತ್ತು
    12,000 ಕೋಟಿ ನಾಣ್ಯಗಳು ಸಾರ್ವಜನಿಕ ಚಲಾವಣೆಯಲ್ಲಿದ್ದವು. ಒಬ್ಬರಿಂದ ಒಬ್ಬರಿಗೆ ಹಸ್ತಾಂತರವಾಗುವಾಗ ಯಾವುದೇ ಸಮಯದಲ್ಲಿ, ಕರೆನ್ಸಿ ನೋಟುಗಳು ಮತ್ತು ನಾಣ್ಯಗಳು ಸೋಂಕಿತ ವ್ಯಕ್ತಿಯಿಂದ ರೋಗಾಣುವಿನಿಂದ ಕಲುಷಿತವಾಗಬಹುದು. ಕೆಲವು ಜನರು ಕರೆನ್ಸಿ ನೋಟುಗಳನ್ನು ಅನಾರೋಗ್ಯಕರವಾಗಿ ಹ್ಯಾಂಡಲ್ ಮಾಡುವುದರಿಂದ ಪರಿಸ್ಥಿತಿ ಇನ್ನೂ ಹದಗೆಡುತ್ತದೆ. ನೋಟುಗಳಿಗೆ ಎಂಜಲು ಹಚ್ಚುವುದು ನಮ್ಮ ದೇಶದಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿದೆ.

    ಎರಡನೆಯ ಕಾರಣ, ಕೋವಿಡ್-19 (COVID-19) ಗೆ ಕಾರಣವಾಗುವ SARS-CoV-2 ವೈರಸ್ ಕಾಗದ, ರಟ್ಟುಗಳ ಮೇಲೆ 3 ಗಂಟೆಗಳಿಂದ 4 ದಿನಗಳವರೆಗೆ ‘ಜೀವಂತ’ವಾಗಿರುತ್ತದೆ ಎಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿ.ಡಿ.ಸಿ) ಸಂಸ್ಥೆಯು ವಿವಿಧ ವೈಜ್ಞಾನಿಕ ಅಧ್ಯಯನಗಳ ಆಧಾರದ ಮೇಲೆ ವರದಿ ಮಾಡಿದೆ. ಕಾಗದದಿಂದ ಮಾಡಲ್ಪಟ್ಟಿರುವ ಕರೆನ್ಸಿ ನೋಟುಗಳು ಜನರಿಂದ ಜನರಿಗೆ ಹಸ್ತಾಂತರವಾಗುವಾಗ ವೈರಸ್‌ನಿಂದ ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚು ಇದೆ. ಕರೆನ್ಸಿ ನೋಟುಗಳಿಗಿಂತ ನಾಣ್ಯಗಳು ಇನ್ನು ಅಪಾಯಕಾರಿ; ಏಕೆಂದರೆ ಕೊರೊನಾವೈರಸ್ ಲೋಹದ ಮೇಲ್ಮೈಗಳಲ್ಲಿ ಸುಮಾರು 5
    ದಿನಗಳವರೆಗೆ ‘ಜೀವಂತ’ ಇರಬಲ್ಲದು. ‘ಜರ್ನಲ್ ಆಫ್ ಹಾಸ್ಪಿಟಲ್ ಇಂಫೆಕ್ಷನ್ಸ್’ ಇದರಲ್ಲಿ ಪ್ರಕಟವಾಗಿರುವಂತೆ ಈ ಅಂಕಿಅಂಶಗಳು ಹವಾಮಾನ ಪರಿಸ್ಥಿತಿಗಳು ಮತ್ತು ಭೌಗೋಳಿಕ ಪ್ರದೇಶಗಳನ್ನು ಅವಲಂಬಿಸಿ ಬದಲಾಗುತ್ತವೆ; ಹೆಚ್ಚಿನ ತಾಪಮಾನ ಮತ್ತು ಆರ್ದ್ರತೆ ಇರುವ ಸ್ಥಳಗಳಲ್ಲಿ ಕೊರೊನಾವೈರಸ್ ಕಡಿಮೆ ಅವಧಿಯವರೆಗೆ ‘ಜೀವಂತ’ವಿರುತ್ತದೆ.

    ವಾಸ್ತವವಾಗಿ, ನಮ್ಮ ದೇಶದಲ್ಲಿ ಕರೆನ್ಸಿ ನೋಟುಗಳು ರೋಗಾಣುಗಳಿಂದ ಸುಲಭ ಮತ್ತು ವೇಗವಾಗಿ ಕಲುಷಿತಗೊಳ್ಳುವ ಬಗ್ಗೆ ಕೋವಿಡ್ -19 ಮಹಾಮಾರಿ ಪ್ರಾರಂಭವಾಗುವ ಮೊದಲೇ ಕೆಲವು ವೈಜ್ಞಾನಿಕ ಸಂಶೋಧನೆಗಳು ನಿರೂಪಿಸಿವೆ. ನವದೆಹಲಿಯಲ್ಲಿರುವ ‘ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಮತ್ತು ಇಂಟಿಗ್ರೇಟಿವ್ ಬಯಾಲಜಿ’ ವಿಜ್ಞಾನಿಗಳ ತಂಡವೊಂದು 2015ರಲ್ಲಿ ಸಾರ್ವಜನಿಕ ಸ್ಥಳಗಳಿಂದ ಸಂಗ್ರಹಿಸಿದ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳನ್ನು ವಿಶ್ಲೇಷಿಸಿದಾಗ ಅವುಗಳು ವೈರಸ್,
    ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಗೆ ಸೇರಿದ ಒಟ್ಟು 78 ರೋಗಾಣುಗಳಿಂದ ಕಲುಷಿತಗೊಂಡಿರುವುದು ಮತ್ತು ಅವುಗಳಲ್ಲಿ ಕೆಲವು ಮಲ್ಟಿ-ಆಂಟಿಬಯೋಟಿಕ್ (ಬಹು-ಪ್ರತಿಜೀವಕ ಔಷಧಿಗಳು) ನಿರೋಧಕ ಜೀನ್‌ಗಳು (ವಂಶವಾಹಿಗಳು) ಅವುಗಳ ಜೀನೋಮ್‌ಗಳಲ್ಲಿ ಇರುವುದು ಪತ್ತೆಯಾಗಿವೆ. 2016 ರಲ್ಲಿ, ತಮಿಳುನಾಡಿನ ತಿರುನೆಲ್ವೇಲಿ ವೈದ್ಯಕೀಯ ಕಾಲೇಜಿನ ಸಂಶೋಧಕರ ತಂಡವು ಅಧ್ಯಯನವೊಂದನ್ನು ಕೈಗೊಂಡಿತ್ತು; ವೆಲ್ಲೂರ್ ನಗರದಲ್ಲಿ ಬಸ್ ಕಂಡಕ್ಟರ್‌ಗಳು, ವೈದ್ಯರು, ಮೀನು-ಮಾಂಸ ವ್ಯಾಪಾರಿಗಳು, ವಿದ್ಯಾರ್ಥಿಗಳು, ಗೃಹಿಣಿಯರು, ತರಕಾರಿ ಮಾರಾಟಗಾರರು ಸೇರಿದಂತೆ ವಿವಿಧ ಸ್ತರದ ಜನರಿಂದ ಕರೆನ್ಸಿ ನೋಟುಗಳನ್ನು ಸಂಗ್ರಹಿಸಿ ಸೂಕ್ಷ್ಮಜೀವಿಗಳಿಂದ ಕಲುಷಿತಗೊಂಡಿರುವ ಸಾಧ್ಯತೆಯನ್ನು ಪರೀಕ್ಷೆಗೆ ಒಳಪಡಿಸಲಾಯಿತು.ಪರೀಕ್ಷೆಗೊಳಪಡಿಸಿದ ಕರೆನ್ಸಿ ನೋಟುಗಳು ಸಾಮಾನ್ಯ ಮಾತ್ರವಲ್ಲದೆ ಕೆಲವು ರೋಗಕಾರಕ ಪ್ರಭೇದಗಳನ್ನು ಒಳಗೊಂಡ
    ಬ್ಯಾಕ್ಟೀರಿಯಾದಿಂದ ಕಲುಷಿತಗೊಂಡಿರುವುದನ್ನು ವಿಜ್ಞಾನ ಜರ್ನಲ್ ಒಂದರಲ್ಲಿ ಪ್ರಕಟವಾಗಿದೆ.

    2015 ರಲ್ಲಿ ಲಖನೌದಲ್ಲಿರುವ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ನಡೆಸಿದ ಇದೇ ರೀತಿಯ ಸಂಶೋಧನೆಯು ಕರೆನ್ಸಿನೋಟುಗಳು ಮತ್ತು ನಾಣ್ಯಗಳು ವಿವಿಧ ತಳಿಗಳ ವೈರಾಣುಗಳು, ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳಿಂದ
    ಕಲುಷಿತಗೊಂಡಿರುವುದು ತೋರಿಸಿಕೊಟ್ಟಿತು. ಕರೆನ್ಸಿ ನೋಟುಗಳು ಮತ್ತು ನಾಣ್ಯಗಳು ಕೋವಿಡ್ -19 ಉಂಟುಮಾಡುವ SARS- CoV-2 ವೈರಾಣುವಿನಿಂದ ಕಲುಷಿತಗೊಳ್ಳುವ ಸಾಧ್ಯತೆಯ ಬಗ್ಗೆ ಯಾವುದೇ ವೈಜ್ಞಾನಿಕ ಅಧ್ಯಯನಗಳ ವರದಿ ಈವರೆಗೆ ಲಭ್ಯವಿರುವುದಿಲ್ಲ.ಆದರೆ ಈ ಹಿಂದಿನ ಅನೇಕ ಸಂಶೋಧನೆಗಳ ಆಧಾರದ ಮೇಲೆ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳು ಕೊರೊನಾ ವೈರಸ್‌ನಿಂದ ಕಲುಷಿತಗೊಂಡು ಆ ಮೂಲಕ ಜನಸಮುದಾಯದ ನಡುವೆ ಕೋವಿಡ್ -19 ಹರಡುವ ಅಪಾಯವನ್ನು ಅಲ್ಲಗಳೆಯಲಾಗದು.

    ಕರೆನ್ಸಿ ನೋಟುಗಳ ನಿರ್ಮಲೀಕರಣಗೊಳಿಸಲು ತಂತ್ರಗಳು

    ಈ ಹಿನ್ನೆಲೆಯಲ್ಲಿ, ಭಾರತದಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಅಭಿವೃದ್ಧಿಯ ನೋಡಲ್ ಸಂಸ್ಥೆಯಾದ ‘ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್’ (ಸಿ.ಎ.ಐ.ಆರ್.) ಕರೆನ್ಸಿ ನೋಟುಗಳ ಮೂಲಕ ಕೋವಿಡ್-19 ಹರಡುವ ಸಾಧ್ಯತೆಯ ಬಗ್ಗೆಉನ್ನತಮಟ್ಟದ ಸಂಶೋಧನೆಯನ್ನು ನಡೆಸಲು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿಯನ್ನು ಮಾಡಿದೆ. ನೋವೆಲ್ ಕರೋನಾ ಹುಟ್ಟು ಪಡೆದುಕೊಂಡು ಕೋವಿಡ್ -19 ಕಾಯಿಲೆಗೆ ನಾಂದಿ ಹಾಡಿದ ಚೀನಾದಲ್ಲಿ, ಪ್ರಾರಂಭದಲ್ಲಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದ್ದರೂ, ಮುಂದೆ ರೋಗದ ಸಾಮೂಹಿಕ ಹರಡುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾ ಡುವಲ್ಲಿ ಯಶಸ್ವಿಯಾಯಿತು.

    ಅಲ್ಲಿ ಕೈಗೊಂಡ ಮುಖ್ಯವಾದ ಒಂದು ಕ್ರಮ: ಕರೆನ್ಸಿ ನೋಟುಗಳನ್ನು ನೆರಳಾತೀತ (ಅಲ್ಟ್ರಾವೈಲೆಟ್) ಕಿರಣಗಳು ಅಥವಾ ಹೆಚ್ಚಿನ ತಾಪಮಾನಕ್ಕೆ ತೆರೆದಿಟ್ಟು ನಿರ್ಮಲೀಕರಣಗೊಳಿಸುವುದು (Decontamination), 14 ದಿನಗಳವರೆಗೆ ಹಣವನ್ನು ದಿಗ್ಬಂಧನಕ್ಕೆ (ಕ್ವಾರಂಟೈನ್) ಒಳಪಡಿಸುವುದು ಮತ್ತು ವೈರಸ್‌ನಿಂದ ಕಲುಷಿತಗೊಂಡಿರುವ ಕರೆನ್ಸಿ ನೋಟುಗಳನ್ನು ನಾಶಪಡಿಸುವ ಕ್ರಮಗಳನ್ನು ‘ಪೀಪಲ್ಸ್ ಬ್ಯಾಂಕ್ ಆಫ್ ಚೀನಾ’ ಕೈಗೊಂಡಿತು.

    ಅಂತೆಯೇ, ಇತರ ದೇಶಗಳು ತಮ್ಮಲ್ಲಿನ ಕರೆನ್ಸಿ ನೋಟುಗಳನ್ನು ಅಕಲುಷಿತಗೊಳಿಸಲು (Decontamination) ತಮ್ಮದೇ ಆದ 3 ಮಾರ್ಗಗಳನ್ನು ಅಳವಡಿಸಿಕೊಂಡಿವೆ; ‘ಸೆಂಟ್ರಲ್ ಬ್ಯಾಂಕ್ ಆಫ್ ಹಂಗೇರಿ’ ಕರೆನ್ಸಿ ನೋಟುಗಳನ್ನು ಸ್ವಲ್ಪ ಹೊತ್ತು 170 ಡಿಗ್ರಿ ಸೆಲ್ಸಿಯಸ್ ನಲ್ಲಿ ಇಟ್ಟು 14 ದಿನಗಳವರೆಗೆ ದಿಗ್ಬಂಧನಕ್ಕೆ ಒಳಪಡಿಸುವುದು. ಕೊರಿಯಾದಲ್ಲಿ, ಚಲಾವಣೆಯಿಂದ ಹೊರಬರುವ ಕರೆನ್ಸಿ ನೋಟುಗಳನ್ನು ಆರ್ಥಿಕತೆಗೆ ಹಿಂದಿರುಗಿಸುವ ಮೊದಲು 150 ಡಿಗ್ರಿ ಸೆಲ್ಸಿಯಸ್ ನಲ್ಲಿ ಸೂಪರ್ ಹೀಟ್ ಮಾಡಿ ಅಕಲುಷಿತಗೊಳಿಸುವುದು.

    ಆದರೆ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಸುಮಾರು 135+ ಕೋಟಿ ಜನಸಂಖ್ಯೆ ಇರುವ ವಿಶ್ವದ 7 ನೇ ದೊಡ್ಡ ರಾಷ್ಟ್ರ ಭಾರತದಲ್ಲಿ ದೇಶಾದ್ಯಂತ ಕರೆನ್ಸಿ ನೋಟುಗಳನ್ನು ಸಂಗ್ರಹಿಸಿ ಅಕಲುಷಿತಗೊಳಿಸುವ
    ಕಾರ್ಯ ಅಷ್ಟು ಸುಲಭವಲ್ಲ. ಏಕೆಂದರೆ ಅದಕ್ಕೆ ಸಾಕಷ್ಟು ಮೂಲಸೌಕರ್ಯಗಳ ವ್ಯವಸ್ಥೆ ಆಗಬೇಕು ಮತ್ತು ಈಗಿನ
    ಪರಿಸ್ಥಿತಿಯಲ್ಲಿ ಆರ್ಥಿಕವಾಗಿ ಪೂರಕವಾದ ಪರಿಹಾರವಲ್ಲ.

    ಪಾಲಿಮರ್ ಕರೆನ್ಸಿ ಪರಿಹಾರವೇ…?

    ಕರೆನ್ಸಿ ನೋಟುಗಳ ಮೂಲಕ ಜನಸಮುದಾಯದಲ್ಲಿ ವೈರಸ್ ಹರಡುವ ಅಪಾಯವನ್ನು ತಪ್ಪಿಸಲು ಕೆಲವು ದೇಶಗಳು ಪೇಪರ್ ಕರೆನ್ಸಿ ನೋಟುಗಳ ಸ್ಥಾನದಲ್ಲಿ ಪಾಲಿಮರ್ ಕರೆನ್ಸಿಗೆ ಬದಲಾಯಿಸಿಕೊಂಡಿವೆ. ಪಾಲಿಮರ್ ನೋಟುಗಳನ್ನು ಪರಿಚಯಿಸಿ ಆರ್ಥಿಕತೆಗೆ ಅಳವಡಿಸಿಕೊಂಡಿರುವ ಮೊದಲ ರಾಷ್ಟ್ರ ಆಸ್ಟ್ರೇಲಿಯಾ. ಪಾಲಿಪ್ರೊಪಿಲೀನ್ ಎಂಬ ವಸ್ತುವಿನಿಂದ ಮಾಡಲ್ಪಟ್ಟಿರುವ ಪಾಲಿಮರ್ ಕರೆನ್ಸಿಗೆ ಹೋಲಿಸಿದರೆ ಹತ್ತಿ ಮತ್ತು ಹತ್ತಿ ಚಿಂದಿನಿಂದ ಕೂಡಿದ ಕಾಗದದ ಕರೆನ್ಸಿ ನೋಟುಗಳು ಹೆಚ್ಚು ತೇವಾಂಶವನ್ನು
    ಹೀರಿಕೊಳ್ಳುತ್ತದೆ; ಇದರಿಂದಾಗಿ ವೈರಸ್, ಬ್ಯಾಕ್ಟೀರಿಯ ಮತ್ತು ಶಿಲೀಂಧ್ರಗಳಿಂದ ಬೇಗನೆ ಕಲುಷಿತಗೊಳ್ಳುತ್ತವೆ ಎಂದು
    ಸಂಶೋಧನೆಯಿಂದ ತಿಳಿದುಬಂದಿದೆ.

    ಆ ಕಾರಣದಿಂದ, ಕೊರೊನಾವೈರಸ್ ಹರಡುವ ವಿಷಯದಲ್ಲಿ ಕಾಗದದ ಕರೆನ್ಸಿಗೆ ಹೋಲಿಸಿದರೆ, ಪಾಲಿಮರ್ ಕರೆನ್ಸಿಯನ್ನು ಹೆಚ್ಚು ಸುರಕ್ಷಿತವೆಂದು ಪರಿಗಣಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಸಂಶೋಧನಾ ತಂಡವು ಭಾರತದಲ್ಲಿ ಪಾಲಿಮರ್ ಕರೆನ್ಸಿ ನೋಟುಗಳನ್ನು ಚಲಾವಣೆಗೆ ತರುವ ಸಾಧ್ಯತೆಯ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲಹೆಯನ್ನು ನೀಡಿದೆ. ಆದಾಗ್ಯೂ, ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ, ಅಲ್ಪಾವಧಿಯಲ್ಲಿಯೇ ಪಾಲಿಮರ್ ಕರೆನ್ಸಿಗೆ ಬದಲಾವಣೆಗೊಳ್ಳುವುದು ಆರ್ಥಿಕವಾಗಿ, ಅದೂ ಪ್ರಸ್ತುತ ಇರುವ ಸಂಧಿಗ್ಧ ಪರಿಸ್ಥಿಯಲ್ಲಿ ಕಾರ್ಯಸಾಧ್ಯವಲ್ಲ. ಹಾಗಿದ್ದರೆ, ಕರೆನ್ಸಿ ನೋಟುಗಳ ಮೂಲಕ SARS-CoV-2 ಹರಡುವ ಅಪಾಯವನ್ನು ತಪ್ಪಿಸಲು ಪರ್ಯಾಯ ಮಾರ್ಗ ಯಾವುದು?

    ಪರಿಹಾರ ಮಾರ್ಗ

    ಪರಿಹಾರ ಮಾರ್ಗ ಸರಳ! ಅದುವೇ ಡಿಜಿಟಲ್ ವ್ಯವಹಾರ. ಅಂದರೆ ವಿದ್ಯುನ್ಮಾನ (ಇಲೆಕ್ಟ್ರಾನಿಕ್) ಹಣ ವರ್ಗಾವಣೆ ಮತ್ತು ಸ್ವೀಕಾರ; ಇದನ್ನು ಆನ್‌ಲೈನ್ ಪಾವತಿ (Online payment), ಎಲೆಕ್ಟ್ರಾನಿಕ್ ಮನಿ ಟ್ರಾನ್ಸಫರ್ (Electronic Money transfer) ಮತ್ತು ಡಿಜಿಟಲ್ ಕರೆನ್ಸಿ (Digital currency) ಎಂಬ ಇತರ ಹೆಸರುಗಳಿಂದಲೂ ಜನಪ್ರಿಯತೆ ಗಳಿಸಿದೆ.
    ದಿನಸಿ, ತರಕಾರಿ, ಔಷಧಿ, ಇತ್ಯಾದಿ ಖರೀದಿಸಲು, ವಿದ್ಯುತ್, ನೀರು ಸರಬರಾಜು ಮುಂತಾದ ಯುಟಿಲಿಟಿ ಬಿಲ್ ಪಾವತಿ, ಹೋಟೆಲ್
    ರೆಸ್ಟೋರೆಂಟ್‌ನಲ್ಲಿ ಪಾವತಿ, ಶಾಲಾ ಶುಲ್ಕ, ಪಾರ್ಕಿಂಗ್ ಶುಲ್ಕ, ಚಿತ್ರಮಂದಿರ, ರೈಲ್ವೆ ಟಿಕೆಟ್ ಕಾಯ್ದಿರಿಸಲು ಹೀಗೆ ಹತ್ತು ಹಲವಾರು ಹಣಕಾಸಿನ ವ್ಯವಹಾರಗಳನ್ನು ನಡೆಸುವುದು ನಮ್ಮ ದೈನಂದಿನ ಜೀವನದ ಭಾಗವಾಗಿದೆ. ಕಳೆದ ಹತ್ತು ವರ್ಷಗಳಿಂದೀಚೆ, ಭಾರತದಲ್ಲಿ ವಿಶೇಷವಾಗಿ ಪಟ್ಟಣಗಳು ​​ಮತ್ತು ನಗರಗಳಲ್ಲಿ ಈಗಾಗಲೇ ಅನೇಕ ಜನರು ಡಿಜಿಟಲ್ ವ್ಯವಹಾರಕ್ಕೆ
    ಉತ್ತಮವಾಗಿ ಹೊಂದಿಕೊಂಡಿದ್ದಾರೆ.

    ಆದರೆ, ಇನ್ನೂ ಅನೇಕ ಜನರಿಗೆ, ಡಿಜಿಟಲ್ ವ್ಯವಹಾರ ಅಂದರೆ “ಅದು ಏನೋ ದೊಡ್ಡ ತಂತ್ರಜ್ಞಾನ, ನಮ್ಮಂತಹ ಸಾಮಾನ್ಯ ಜನರಿಗೆ ಕಾರ್ಯಸಾಧುವಲ್ಲ” ಎಂಬ ಅನಿಸಿಕೆ ಮನದಲ್ಲಿ ಇರಬಹುದು. ತಾಂತ್ರಿಕವಾಗಿ ಇದು ಮಾಹಿತಿ ತಂತ್ರಜ್ಞಾನದ ಒಂದು ಅಭಿವೃದ್ಧಿ ಹೊಂದಿದ ಆವಿಷ್ಕಾರ; ಆದರೆ ಬಳಕೆದಾರರು ಹಣಕಾಸಿನ ವ್ಯವಹಾರಗಳನ್ನು ಸುಲಭವಾಗಿ ನಿರ್ವಹಿಸುವ ರೀತಿಯಲ್ಲಿ ಡಿಜಿಟಲ್ ಕರೆನ್ಸಿಯನ್ನು ಪ್ರೋಗ್ರಾಮ್ ಮಾಡಲಾಗಿರುತ್ತದೆ.

    ಸ್ಮಾರ್ಟ್‌ಫೋನ್‌ ಮತ್ತು ಇ-ವಾಲೆಟ್

    ಇಂದಿನ ಆಧುನಿಕ ಜೀವನಶೈಲಿಯಲ್ಲಿ, ಮೊಬೈಲ್ ಫೋನ್ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ; ಇಂದು ಹಳೆ
    ಮಾದರಿಯ ಮೊಬೈಲ್ ಫೋನ್ಗಳ ಸ್ಥಾನದಲ್ಲಿ ಬಹುಪಯೋಗಿ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನವರ ಕೈಯಲ್ಲಿವೆ. ಮಾರುಕಟ್ಟೆ
    ಸಂಶೋಧನಾ ಸಂಸ್ಥೆ ಟೆಕ್ಎ.ಆರ್‌.ಸಿ. (techARC) ಪ್ರಕಾರ, ಡಿಸೆಂಬರ್ 2019 ರ ವೇಳೆಗೆ 502.2 ಮಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರು ಭಾರತದಲ್ಲಿ ಇದ್ದಾರೆ. ಅಂದರೆ, ಪ್ರತಿಶತ 77 ಭಾರತೀಯರು ಈಗ ಸ್ಮಾರ್ಟ್‌ಫೋನ್‌ಗಳ ಮೂಲಕ ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ಪಡೆಯುತ್ತಿದ್ದಾರೆ. ಸ್ಮಾರ್ಟ್‌ಫೋನ್‌ಗಳಲ್ಲಿ ಆನ್‌ಲೈನ್ ಹಣ ವರ್ಗಾವಣೆಗಾಗಿ
    ಇನ್ಸ್ಟಾಲ್ ಮಾಡಿರುವ ಅಪ್ಲಿಕೇಶನ್ (ಆಪ್) ಅನ್ನು ಬಳಸಿಕೊಂಡು ಹತ್ತು ರೂಪಾಯಿ ಬೆಲೆಯ ವಸ್ತುವನ್ನು ಖರೀದಿಸಲು ಸಹ ಹಣ ಪಾವತಿ ಮಾಡಬಹುದು.

    ಇಲೆಕ್ಟ್ರಾನಿಕ್ ಹಣ ವರ್ಗಾವಣೆಗಾಗಿ ಇರುವ ಮೊಬೈಲ್ ಅಪ್ಲಿಕೇಶನ್ ಅನ್ನು ಇ-ವಾಲೆಟ್ (e-Wallet) ಎಂದು ಕರೆಯಲಾಗುತ್ತದೆ; ‘ಇ’ ಅಂದರೆ ಇಲೆಕ್ಟ್ರಾನಿಕ್ , ವಾಲೆಟ್ ಅಂದರೆ ಹಣವನ್ನು ಇಟ್ಟುಕೊಳ್ಳಲಿಕ್ಕಿರುವ ವ್ಯವಸ್ಥೆ.ಜೇಬಿನಲ್ಲಿ ಪರ್ಸ್ ಇರುವ ಹಾಗೆ ಮೊಬೈಲ್ ಫೋನಿನಲ್ಲಿ ಇ-ವಾಲೆಟ್; ಒಂದೇ ವ್ಯತ್ಯಾಸ ಅಂದರೆ ಪರ್ಸ್ ನಲ್ಲಿ ಹಣ ನಗದು
    ರೂಪದಲ್ಲಿ ಇದ್ದರೆ, ಇ-ವಾಲೆಟ್ ನಲ್ಲಿ ಡಿಜಿಟಲ್ ರೂಪದಲ್ಲಿ ಇರುತ್ತದೆ.ಇತ್ತೀಚಿನ ವರ್ಷಗಳಲ್ಲಿ ನಗದುರಹಿತ ವ್ಯವಹಾರ ಎಷ್ಟು ಜನಪ್ರಿಯವಾಯಿತು ಎಂದರೆ 2018 ರ ‘ಇ-ಮಾರ್ಕೆಟರ್’
    ನಡೆಸಿದ ಅಂಕಿಅಂಶಗಳ ಪ್ರಕಾರ ಭಾರತದಾದ್ಯಂತ 73.9 ಮಿಲಿಯನ್ ಜನರು ಮೊಬೈಲ್ ಇ-ವ್ಯಾಲೆಟ್ ಗಳನ್ನು ಬಳಸುತ್ತಿದ್ದಾರೆ. ಅನೇಕ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳು ಗ್ರಾಹಕರಿಗೆ ಆನ್‌ಲೈನ್ ಹಣ ವರ್ಗಾವಣೆ ಮತ್ತು ಸ್ವೀಕೃತಿಗೆ ವ್ಯವಸ್ಥೆ ಒದಗಿಸುವ ಮೂಲಕ ತಮ್ಮ ವ್ಯವಹಾರವನ್ನು ನವೀಕರಿಸಿರುವುದು ಮೆಚ್ಚುವಂತದ್ದು,

    ಇನ್ನು, ಅಪಾಯಕಾರಿ ವೈರಸ್ ಸೋಂಕಿಗೆ ಒಳಗಾಗುವ ಮತ್ತು ಇತರರಿಗೆ ಹರಡುವ ಅಪಾಯವನ್ನು ತಪ್ಪಿಸಲು ಡಿಜಿಟಲ್ ಕರೆನ್ಸಿ ಸೌಲಭ್ಯವನ್ನು ಬಳಸಿಕೊಳ್ಳುವುದು ಜನರ ಕೈಯಲ್ಲಿದೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು. ಎಚ್‌. ಒ) ಕಲುಷಿತ ಕರೆನ್ಸಿ ನೋಟುಗಳು ವೈರಸ್ ಹರಡುವ ಅಪಾಯದ ಸಾಧ್ಯತೆಯನ್ನು ಮನಗಂಡು ಜಗತ್ತಿನಾದ್ಯಂತ ಜನರಿಗೆ ಕರೆನ್ಸಿ ನೋಟುಗಳ ಬದಲಾಗಿ ಡಿಜಿಟಲ್ ಕರೆನ್ಸಿಗೆ ಹೆಚ್ಚು ಅವಲಂಬಿತವಾಗುವುದು ಸೂಕ್ತ ಎಂದು ಸಲಹೆ ನೀಡಿದೆ.

    ಆನ್‌ಲೈನ್ ವಹಿವಾಟಿನ ಸುರಕ್ಷತೆ

    ಹಣದ ವ್ಯವಹಾರವನ್ನು ಆನ್‌ಲೈನ್ ಮೂಲಕ ಮಾಡುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಅನೇಕ ಜನರ ಮನದಲ್ಲಿಇರಬಹುದು. ಆನ್‌ಲೈನ್ ವ್ಯವಹಾರ ಸೇವೆಯನ್ನು ಒದಗಿಸುವ ಇ-ಕಾಮರ್ಸ್ ಸಂಸ್ಥೆಗಳಿಗೆ ಮತ್ತು ತಂತ್ರಜ್ಞಾನವನ್ನು
    ಬಳಸುವವರಿಗೆ ಸೈಬರ್‌ ಸುರಕ್ಷತೆ ಒಂದು ದೊಡ್ಡ ಸವಾಲು. ಈ ದೃಷ್ಟಿಕೋನದಿಂದ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
    ಆನ್‌ಲೈನ್ ಹಣಕಾಸು ವ್ಯವಹಾರದ ಸುರಕ್ಷತೆ ಮತ್ತು ಅಪಾಯವನ್ನು ತಗ್ಗಿಸುವ ಕ್ರಮಗಳಾಗಿ ಕೆಲವು ಮಾರ್ಗಸೂಚಿಗಳನ್ನು
    ಹೊರತಂದಿದೆ.

    ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (National Payment Corporation of India;NPCI), ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (Indian Computer Emergency Response Team;CERT-In), ನ್ಯಾಷನಲ್ ಕ್ರಿಟಿಕಲ್ ಇನ್ಫರ್ಮೇಷನ್ ಇನ್ಫ್ರಾಸ್ಟ್ರಕ್ಚರ್ ಪ್ರೊಟೆಕ್ಷನ್ ಸೆಂಟರ್ (National Critical Information Infrastructure Protection Centre; NCIIPC) ಆನ್‌ಲೈನ್ ಪಾವತಿ ಮತ್ತು ಇತರ ಡಿಜಿಟಲ್ ವಹಿವಾಟಿನ ಸೈಬರ್ ಸುರಕ್ಷತೆಗಾಗಿ ಭಾರತದಲ್ಲಿರುವ ಕೇಂದ್ರ ಸರಕಾರದ ಇತರ ಅಂಗ ಸಂಸ್ಥೆಗಳು. ಎಲ್ಲಾ ಡಿಜಿಟಲ್ ಪಾವತಿಗಳು ಪಾಸ್‌ವರ್ಡ್ ರಕ್ಷಿತ ಅಥವಾ ಕ್ಯೂಆರ್ (ಕ್ವಿಕ್ ರೆಸ್ಪಾನ್ಸ್ ಕೋಡ್) ಕೋಡ್ / ಅವಲಂಬಿತವಾಗಿರುತ್ತದೆ.

    ಪ್ರತಿ ಹಣ ವರ್ಗಾವಣೆ ಸಮಯದಲ್ಲಿ ಸೇವಾ ಪೂರೈಕೆದಾರರಿಂದ ಏಕ-ಬಳಕೆಯ ಪಾಸ್‌ವರ್ಡ್ ಸೃಷ್ಟಿಯಾಗಿ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್. ಎಂ.ಎಸ್ ಮೂಲಕ ಬರುವ ಒ.ಟಿ.ಪಿ. (ಒನ್-ಟೈಮ್ ಪಾಸ್ವರ್ಡ್) ಆಧಾರಿತವಾಗಿ ಕಾರ್ಯನಿರ್ವಹಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ, ಅನಧಿಕೃತ ಪ್ರವೇಶವನ್ನು ತಡೆಯಲು ಪಾಸ್‌ವರ್ಡ್ (ಗುಪ್ತಪದ) ಮತ್ತು ಒಟಿಪಿಗಳು ಎರಡನ್ನೂ ಎನ್‌ಕ್ರಿಪ್ಟ್ ಆಗುತ್ತವೆ; ಅಂದರೆ ನಮೂದಿಸಿದ
    ಮಾಹಿತಿಯನ್ನು ಡಿಕೋಡ್ ಮಾಡಲಾಗದ ಕೋಡ್ ಆಗಿ ಪರಿವರ್ತಿಸಲಾಗುತ್ತದೆ. ಮುಖ್ಯವಾಗಿ ಬಳಕೆದಾರರು ಅಥವಾ
    ಪಾವತಿದಾರರು, ಯಾವುದೇ ಕಾರಣಕ್ಕೂ ಮತ್ತು ಯಾವುದೇ ಸಮಯಕ್ಕೂ ತಮ್ಮ ಪಾಸ್‌ವರ್ಡ್ ಮತ್ತು ಒಟಿಪಿಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳದಂತೆ ಜಾಗೃತೆ ವಹಿಸಬೇಕು.

    ಅದಕ್ಕಿಂತ ಮುಖ್ಯವಾಗಿ, ಫೋನ್ ಮಾಡಿ ಯಾರು ಏನೇ ಬಣ್ಣದ ಮಾತುಗಳನ್ನಾಡಿದರೂ ಪಾಸ್‌ವರ್ಡ್, ಪಿನ್ (Personal Identification Number; ವೈಯಕ್ತಿಕ ಗುರುತಿನ ಸಂಖ್ಯೆ) ಅಥವಾ ಒಟಿಪಿಯನ್ನು ಬಹಿರಂಗಪಡಿಸದೆ ಹ್ಯಾಕರ್‌ಗಳ ಬಲೆಗೆ ಬೀಳದ ಹಾಗೆ ಬಹಳ ಜಾಗರೂಕರಾಗಿರಬೇಕು. ಈ ಅರಿವು ಮತ್ತು ಜಾಗರೂಕತೆ
    ಇದ್ದರೆ, ಡಿಜಿಟಲ್ ಪಾವತಿ ಹೆಚ್ಚು ಸುಲಭ, ವಿಶ್ವಾಸಾರ್ಹ, ವೇಗ ಮತ್ತು ಸುರಕ್ಷಿತವಾಗಿದೆ. ಡಿಜಿಟಲ್ ವ್ಯವಹಾರಕ್ಕೆ ಮೊಬೈಲ್ ಅಪ್ಲಿಕೇಶನ್‌ಗಳು
    ವಿಶ್ವಾದ್ಯಂತ, ಸುರಕ್ಷಿತ ಆನ್‌ಲೈನ್ ಹಣ ವರ್ಗಾವಣೆಗಾಗಿ ವಿವಿಧ ಇ-ಕಾಮರ್ಸ್ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ನೂರಾರು ಮೊಬೈಲ್ ಅಪ್ಲಿಕೇಶನ್‌ಗಳು (ಆಪ್ ಗಳು) ಚಾಲ್ತಿಯಲ್ಲಿ ಇವೆ. ಪೇಟಿಎಂ (PayTM), ಮೊಬಿಕ್ವಿಕ್ (MobiKwik),ಭೀಮ್ (BHIM), ಫೋನ್‌ಪೇ (PhonePe), ಫ್ರೀಚಾರ್ಜ್ (FreeCharge), ಏರ್‌ಟೆಲ್ ಮನಿ (Airtel Money), ಓಲಾ ಮನಿ(Ola Money), ಪೇಪಾಲ್ ಇಂಡಿಯಾ (PayPal India), ಇಪೈಸಾ (ePaisa), ಗೂಗಲ್ ಪೇ (Google Pay) ಮತ್ತುಅಮೆಜಾನ್ ಪೇ (Amazon Pay), ವಾಟ್ಸಪ್ಪ್ ಪೇ (WhatsApp Pay) ನಮ್ಮ ದೇಶದಲ್ಲಿ ಈಗಾಗಲೇ ಜನಪ್ರಿಯತೆ ಗಳಿಸಿರುವಯುಪಿಐ (Unified Payments Interface) ಆಧಾರಿತ ಹಣ ಪಾವತಿ ಮತ್ತು ಸ್ವೀಕರಿಸಲು ಅನುವು ಮಾಡಿಕೊಡುವ
    ಮೊಬೈಲ್ ಅಪ್ಲಿಕೇಶನ್‌ಗಳು. ಈ ಎಲ್ಲಾ ಡಿಜಿಟಲ್ ಪಾವತಿ ವ್ಯವಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಪರವಾನಗಿ ಪಡೆದುಕೊಂಡು ಷರತ್ತುಬದ್ಧ ನಿಯಮಗಳು ಮತ್ತು ಮಾರ್ಗಸೂಚಿಗಳಿಗೆ ಅನುಸಾರವಾಗಿ ಡಿಜಿಟಲ್ ವ್ಯವಹಾರದ (ಆನ್‌ಲೈನ್ ನಲ್ಲಿ ಹಣ ಪಾವತಿ ಮತ್ತು ಸ್ವೀಕಾರ) ಸೇವೆಗಳನ್ನು 24×7 ಬಳಕೆದಾರರಿಗೆ ಒದಗಿಸುತ್ತವೆ.

    ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು

    ಅನೇಕ ರಾಷ್ಟ್ರೀಕೃತ ಮತ್ತು ಖಾಸಗಿ ವಲಯದ ಬ್ಯಾಂಕುಗಳು ಗ್ರಾಹಕರಿಗೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಮೊಬೈಲ್ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿವೆ; ಇದನ್ನು ಡಿಜಿಬ್ಯಾಂಕ್ ಎಂದು ಕರೆಯಲಾಗುತ್ತದೆ. ಎಸ್‌ಬಿಐ ‘ಯೊನೊ’(YONO), ಕಾರ್ಪೊರೇಷನ್ ಬ್ಯಾಂಕ್‌ನ ‘ಕಾರ್ಪ್ ಇ-ಪರ್ಸ್’ (Corp e-Purse), ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಪೇಝಾಪ್ (PayZapp) ಮತ್ತು ಐಸಿಐಸಿಐ ಪಾಕೆಟ್ (ICICI Pocket), ಡಿಜಿಬ್ಯಾಂಕ್‌ಗಳಿಗೆ ಕೆಲವು ಉದಾಹರಣೆಗಳು.

    ನೆಟ್-ಬ್ಯಾಂಕಿಂಗ್

    ಡಿಜಿಟಲ್ ವ್ಯವಹಾರಕ್ಕೆ, ನೆಟ್-ಬ್ಯಾಂಕಿಂಗ್ ಸಹ ಒಂದು ಉತ್ತಮ ಆಯ್ಕೆಯಾಗಿದೆ. ನೆಟ್-ಬ್ಯಾಂಕಿಂಗ್‌ನಲ್ಲಿ ವೈ-ಫೈ / ಇಂಟರ್ನೆಟ್ ಸಂಪರ್ಕ ಹೊಂದಿರುವ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್ ಅಥವಾ ಡೆಸ್ಕಟಾಪ್ ಬಳಸಿಕೊಂಡು ಒಬ್ಬ ವ್ಯಕ್ತಿಯು ತನ್ನ ಖಾತೆಯನ್ನು ತಾನೇ ನಿರ್ವಹಿಸಿ ಅನೇಕ ಬ್ಯಾಕಿಂಗ್ ವ್ಯವಹಾರಗಳನ್ನು ನಡೆಸಬಹುದು. ನಗದು ಪಾವತಿ ಅಥವಾ ಸ್ವೀಕೃತಿ ಯಾವುದೇ ಇರಲಿ, ಅದರ ಮೌಲ್ಯವು ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ಸಂಖ್ಯೆ 2,000, ಅದು
    ಕಾಗದದ ಕರೆನ್ಸಿ ನೋಟಿನಲ್ಲಿರಲಿ ಅಥವಾ ಆನ್‌ಲೈನ್ ವರ್ಗಾವಣೆಯ ಸಮಯದಲ್ಲಿ ನಮೂದಿಸುವುದಾಗಿರಲಿ, ಅದರ ಮೌಲ್ಯವು ಅಷ್ಟೇ ಆಗಿರುತ್ತದೆ. ಒಂದೇ ವ್ಯತ್ಯಾಸ ಏನೆಂದರೆ, ಕಾಗದದ ಕರೆನ್ಸಿ ನೋಟುಗಳು ನಮ್ಮ ವಾಲೆಟ್ (ಪರ್ಸ್) ಅಥವಾ ಕಿಸೆಯಲ್ಲಿದ್ದರೆ, ಡಿಜಿಟಲ್ ಕರೆನ್ಸಿ ನಮ್ಮ ಮೊಬೈಲ್ ಫೋನಿನ ಇ-ವಾಲೆಟ್ ಅಥವಾ ಬ್ಯಾಂಕ್ ಖಾತೆಯಲ್ಲಿ ಇರುತ್ತದೆ.ಸುರಕ್ಷತೆಯ ದೃಷ್ಟಿಯಿಂದ, ನೆಟ್-ಬ್ಯಾಂಕಿಂಗ್ ಬಳಕೆದಾರರು ಮತ್ತು ಡೆಬಿಟ್ / ಕ್ರೆಡಿಟ್ ಕಾರ್ಡ್ ಹೊಂದಿರುವವರು ಅವಾಗಾವಾಗ ಪಿನ್ ಮತ್ತು ಪಾಸ್ವರ್ಡ್ ಬದಲಾಯಿಸುವ ಸ್ವಾತಂತ್ರ್ಯವನ್ನು ಬಳಸಿಕೊಳ್ಳಲು ಅವಕಾಶವಿದೆ.

    .ಆಫ್‌ಲೈನ್‌ ಹಣ ಪಾವತಿ
    ಡಿಜಿಟಲ್ ಪಾವತಿ ಅಂದರೆ ಸ್ಮಾರ್ಟ್‌ಫೋನ್‌, ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಮೂಲಕ ಮಾಡುವ ಆನ್‌ಲೈನ್ ಪಾವತಿ. ಸಹಜವಾಗಿ, ಇದಕ್ಕೆ ಅಂತರ್ಜಾಲದ (ಇಂಟರ್ನೆಟ್) ಅವಶ್ಯಕತೆ ಇರುವುದು ಮುಖ್ಯ. ಆಫ್‌ಲೈನ್‌, ಅಂದರೆ ಇಂಟರ್ನೆಟ್ ಸೌಲಭ್ಯ ಇಲ್ಲದೆ ಅಥವಾ ನೆಟ್‌ವರ್ಕ್ ಇಲ್ಲದ ಪ್ರದೇಶ ಹಾಗೂ ಸಮಯದಲ್ಲಿಯೂ ಕ್ಯೂಆರ್ ಕೋಡ್ (QR Code)ಆಧಾರಿತವಾಗಿ ಪಾವತಿ ಮಾಡಲು ಸಹ ಕೆಲವು ಸೇವಾಸಂಸ್ಥೆಗಳು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿರುತ್ತಾರೆ. ಉದಾಹರಣೆಗೆ,PayTM ಟ್ಯಾಪ್ ಕಾರ್ಡ್ ಮೂಲಕ ಅನೇಕ ವ್ಯಾಪಾರಿ ಮಳಿಗೆಗಳಲ್ಲಿ ಹಣ ಪಾವತಿಯನ್ನು ಆಫ್‌ಲೈನ್‌ನಲ್ಲಿ ಮಾಡಬಹುದು.

    ಸ್ವದೇಶಿ ಆಪ್ ಗಳು

    ಸ್ವದೇಶಿ ಉತ್ಪನ್ನಗಳಲ್ಲಿ ಮಾತ್ರ ಆಸಕ್ತಿ ಹೊಂದಿರುವವರು ಭಾರತೀಯ ಇ-ಕಾಮರ್ಸ್ ಪಾವತಿ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಪೇಟಿಎಂ (PayTM), ಭೀಮ್ (BHIM), ಫೋನ್‌ಪೇ (PhonePe) ಮೊಬಿಕ್ವಿಕ್ (MobiKwik) ಅಥವಾ ಏರ್ಟೆಲ್ ಮನಿ (Airtel Money) ಮೊಬೈಲ್ ಆಪ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಎಲ್ಲಾ ಮೊಬೈಲ್ ಆಧಾರಿತ
    ಹಣಕಾಸಿನ ವ್ಯವಹಾರದಲ್ಲಿ, ಪೇ, ಪೇಯೀ, ಪೇಯರ್, ಕ್ರೆಡಿಟ್, ಡೆಬಿಟ್, ಎಕ್ಸಿಟ್, ಎಂಟರ್, ಕನ್ಫರ್ಮ್, ಮುಂತಾದ ಆಂಗ್ಲ ಭಾಷಾ ಪದಗಳು ಮಾತ್ರ ಬಳಕೆಯಾಗುತ್ತವೆ ಎಂಬ ಕಾರಣದಿಂದ ಅನೇಕರು ಡಿಜಿಟಲ್ ವಹಿವಾಟುಗಳನ್ನು ಬಳಸಲು ಹಿಂದೇಟು ಹಾಕಬಹುದು. ಅಂತವರಿಗಾಗಿಯೇ, ಪ್ರಾದೇಶಿಕ ಭಾಷೆಗಳಲ್ಲೂ ಡಿಜಿಟಲ್ ವ್ಯವಹಾರ ನಡೆಸಲು ಮೊಬೈಲ್
    ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಪೇಟಿಎಂ (PayTM) ಮತ್ತು ಫೋನ್ ಪೇ (PhonePe) ಅಪ್ಲಿಕೇಶನ್‌ಗಳು ಕನ್ನಡ ಸೇರಿದಂತೆ ಭಾರತದ 10 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ.

    ಸಮಯದ ಉಳಿತಾಯ

    ಆನ್‌ಲೈನ್ ಪಾವತಿಯು ಇತರ ಹಲವು ಪ್ರಯೋಜನಗಳನ್ನು ಹೊಂದಿದೆ. ಬ್ಯಾಂಕ್, ವಿದ್ಯುತ್ ಬಿಲ್, ಇಎಂಐ ಮತ್ತುನೀರಿನ ಬಿಲ್ ಗಳನ್ನು ಪಾವತಿ ಮಾಡಲು, ಸಿನೆಮಾ ಟಿಕೆಟ್ ಖರೀದಿಸಲು, ರೈಲು ಅಥವಾ ಬಸ್ ಟಿಕೆಟ್ ಮುಂಗಡ ಪಡೆಯಲು,ಮುಂತಾದವುಗಳಿಗಾಗಿ ಕ್ಯೂನಲ್ಲಿ ನಿಂತು ಸರದಿಗಾಗಿ ಕಾಯುವ ಅಗತ್ಯವಿಲ್ಲ. ಮನೆ ಅಥವಾ ಕಚೇರಿಯಲ್ಲೇ ಕುಳಿತು ಎಲ್ಲಾ
    ಪಾವತಿಗಳನ್ನು ಬೆರಳ ತುದಿಯಲ್ಲೇ ಮಾಡಬಹುದು. ಇದು ಆನ್‌ಲೈನ್ ವ್ಯವಸ್ಥೆಯಾಗಿರುವುದರಿಂದ, ಯಾವುದೇ ದೂರದ ಮಿತಿಯಿಲ್ಲ, ಒಂದೆರಡು ನಿಮಿಷಗಳಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಹಣವನ್ನು ಪಾವತಿ ಮಾಡಬಹುದು ಅಥವಾ ಪಡೆಯಬಹುದು. ನೀವು ಇಲ್ಲಿದ್ದೀರಿ, ನಿಮ್ಮ ಗೆಳೆಯ ದೂರದ ದೆಹಲಿಯಲ್ಲಿದ್ದರೆ, ಬೇಕೆಂದಾಗ ಕ್ಷಣ ಮಾತ್ರದಲ್ಲಿ ನೀವು ಆತನಿಗೆ
    ಹಣ ಕಳುಹಿಸಬಹುದು ಅಥವಾ ಆತನಿಂದ ನೀವು ಹಣ ಪಡೆಯಬಹುದು. ಮುಖ್ಯ ಏನೆಂದರೆ, ಹಣ ಕಳುಹಿಸುವವನ ಇ-ವಾಲೆಟ್ ಅಥವಾ ಬ್ಯಾಂಕ್ ಖಾತೆಯಲ್ಲಿ ಹಣ ಇರಬೇಕು. ಡಿಜಿಟಲ್ ವಹಿವಾಟಿನಿಂದ ಶ್ರಮರಹಿತ ವ್ಯವಹಾರ ಮತ್ತು ಸಮಯ ಉಳಿತಾಯದ ಪ್ರಯೋಜನಗಳಂತೂ ಖಾತರಿ.

    ಎಟಿಎಂ ಕಾರ್ಡಗಳು ಸುರಕ್ಷಿತವೇ?

    ಡಿಜಿಟಲ್ ವ್ಯವಹಾರಕ್ಕೆ ಇನ್ನೊಂದು ಮಾಧ್ಯಮವಾಗಿರುವ ಎಟಿಎಂ / ಡೆಬಿಟ್ / ಕ್ರೆಡಿಟ್ ಕಾರ್ಡ್‌ಗಳ ಬಳಕೆ ರೋಗಾಣುಗಳನ್ನು ಹರಡುವಿಕೆಗೆ ಸಂಬಂಧಿಸಿದಂತೆ ಸುರಕ್ಷಿತವೇ ? ನಿಸ್ಸಂಶಯವಾಗಿ, ಕಾರ್ಡ್‌ಗಳು ನಗದು ವಹಿವಾಟುಗಳಿಗಿಂತ ಹೆಚ್ಚು ಸುರಕ್ಷಿತವಾಗಿವೆ. ಏಕೆಂದರೆ, ಕರೆನ್ಸಿ ನೋಟುಗಳಂತೆ ಕಾರ್ಡ್‌ಗಳು ಒಬ್ಬರಿಂದ ಒಬ್ಬರಿಗೆ ಕೈಬದಲಾಗುವುದಿಲ್ಲ. ಆದರೆ ಕೊರೊನಾವೈರಸ್ ವಿಷಯದಲ್ಲಿ ಇದು ಸಂಪೂರ್ಣವಾಗಿ ಅಪಾಯ-ಮುಕ್ತವಾಗಿದೆ ಎಂದು ಹೇಳುವಂತಿಲ್ಲ. ಕೊರೊನಾವೈರಸ್
    ಪ್ಲಾಸ್ಟಿಕ್ ಮೇಲ್ಮೈಯಲ್ಲಿ 2 ರಿಂದ 5 ದಿನಗಳವರೆಗೆ ‘ಜೀವಂತ’ ಇರಬಲ್ಲದು ಎಂಬುದು ಸಾಬೀತಾಗಿದೆ. ಈ ಎಲ್ಲಾ ಕ್ರೆಡಿಟ್ /
    ಡೆಬಿಟ್ ಕಾರ್ಡ್‌ಗಳು ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿವೆ. ಆದ್ದರಿಂದ, ಮಾರುಕಟ್ಟೆಗಳಲ್ಲಿ ಕಾರ್ಡ್‌ಗಳನ್ನು ಬಳಸುವ
    ಸಮಯದಲ್ಲಿ, ಎಟಿಎಂನಿಂದ ಹಣವನ್ನು ಪಡೆಯುವಾಗ ಮತ್ತು ಅಂಗಡಿ, ಮಾಲ್ ಗಳಲ್ಲಿ ಸ್ವೈಪ್ ಮಾಡಲು ನೀಡಿದಾಗ ವೈರಸ್
    ನಿಂದ ಮಲಿನಗೊಂಡು ಅದು ಹೆಚ್ಚು ಸಮಯ ‘ಜೀವಂತ’ ಇರಬಹುದು. ಅದೇನೇ ಇದ್ದರೂ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಸಹಾಯದಿಂದ, ಮನೆಯಲ್ಲೇ ಕುಳಿತು ಆನ್‌ಲೈನ್ ಪಾವತಿ ಮಾಡುವುದರಿಂದ ರೋಗಾಣುಗಳಿಂದ ಸೋಂಕಿತವಾಗುವ ಯಾವುದೇ ಅಪಾಯವಿಲ್ಲ.

    ಕಲಿಯಲು ಮತ್ತು ಕಾರ್ಯನಿರ್ವಹಿಸಲು ಸುಲಭ

    ಇಂದಿನ ದಿನಗಳಲ್ಲಿ ಚಿಕ್ಕ ಮಕ್ಕಳು ಸಹ ಮೊಬೈಲ್ ಫೋನ್‌, ಕಂಪ್ಯೂಟರ್‌ಗಳನ್ನು ಯಾರಿಂದಲೂ ಕಲಿಯದೇ ತಮಗೆ ಬೇಕಾದ ಹಾಗೆ ಬಳಸುವಾಗ, ಡಿಜಿಟಲ್ ಪಾವತಿಯನ್ನು ನಾವು ಏಕೆ ಕಲಿಯಬಾರದು? ಡಿಜಿಟಲ್ ವ್ಯವಹಾರಕ್ಕಾಗಿ ಅಭಿವೃದ್ಧಿಪಡಿಸಿರುವ ಹೆಚ್ಚಿನ ಇ-ವ್ಯಾಲೆಟ್ ಮತ್ತು ಡಿಜಿಬ್ಯಾಂಕುಗಳು ಬಳಕೆದಾರ-ಸ್ನೇಹಿಯಾಗಿವೆ. ಆಯಾಯ ಡಿಜಿಟಲ್ ಕರೆನ್ಸಿ ಸೇವೆ ಒದಗಿಸುವ ಇ-ಕಾಮರ್ಸ್ ಕಂಪೆನಿಗಳು ಪ್ರಕಟಿಸಿರುವ ಬಳಕೆದಾರರ ಕೈಪಿಡಿಯ ಸಹಾಯದಿಂದ ಒಬ್ಬ ವ್ಯಕ್ತಿಯು ಸ್ವಯಂ ಆಗಿಕಲಿಯಬಹುದು ಅಥವಾ ಡಿಜಿಟಲ್ ವ್ಯವಹಾರದ ಬಗ್ಗೆ ಒಳ್ಳೆಯ ಅನುಭವ ಇರುವ ವಿಶ್ವಾಸಾರ್ಹ ಸ್ನೇಹಿತ ಅಥವಾ ಬಂಧುಗಳಿಂದ
    ಕೇಳಿ ತಿಳಿದುಕೊಳ್ಳಬಹುದು. ಗೂಗಲ್‌ನಲ್ಲಿ ಹುಡುಕಿದರೆ ಇ-ವ್ಯಾಲೆಟ್/ ಡಿಜಿಬ್ಯಾಂಕ್ ಹೇಗೆ ನಿರ್ವಹಿಸಬೇಕು ಎಂಬುದನ್ನು ಹಂತ
    ಹಂತವಾಗಿ ಹೇಳಿಕೊಡುವ ಅನೇಕ ಯೂಟ್ಯೂಬ್ ಚಾನೆಲ್‌ಗಳು ಕೂಡ ಇವೆ. ಒಮ್ಮೆ ಕಲಿತ ನಂತರ ಸ್ಮಾರ್ಟ್‌ಫೋನ್‌ / ಕಂಪ್ಯೂಟರ್ ಮೂಲಕ ಮಾಡುವ ಡಿಜಿಟಲ್ ವ್ಯವಹಾರ ಕ್ಯಾಲ್ಕುಲೇಟರ್ ಬಳಸುವಷ್ಟು ಸುಲಭ.

    ಕೊರೊನಾವೈರಸ್ ಸೃಷ್ಟಿಸಿದ ಅನಿವಾರ್ಯತೆ

    ಕಣ್ಣಿಗೆ ಕಾಣಿಸದ ಒಂದು ಅಪಾಯಕಾರಿ ರೋಗಾಣು ಯಾವುದೇ ಕ್ಷಣದಲ್ಲಿ ನಮ್ಮ ಅರಿವಿಗೆ ಬಾರದೆ ಯಾವುದಾದರೂ ಮಾರ್ಗದ ಮೂಲಕ ನಮ್ಮನ್ನು ಸೋಂಕಿತಗೊಳಿಸುವ ಅಪಾಯ ಇರುವುದರಿಂದ ಮುಂಜಾಗ್ರತೆ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವಂತಿಲ್ಲ. ನಮ್ಮ ದಿನ ನಿತ್ಯದ ಜೀವನದ ವ್ಯವಹಾರದಲ್ಲಿ ಪ್ರಮುಖ ಭಾಗವಾಗಿರುವ ಕರೆನ್ಸಿ ನೋಟುಗಳ ಮತ್ತು ನಾಣ್ಯಗಳ
    ಮೂಲಕವೂ ವೈರಸ್ ಸೋಂಕಿಗೆ ಒಳಗಾಗುವ ಸಾಧ್ಯತೆ ಇರುವುದರಿಂದ ಈಗಿನ ಪರಿಸ್ಥಿತಿಯಲ್ಲಿ ಸುರಕ್ಷತೆಯ ದೃಷ್ಟಿಯಿಂದ, ಡಿಜಿಟಲ್ ಕರೆನ್ಸಿಗೆ ಹೊಂದಿಕೊಳ್ಳುವುದು ಉತ್ತಮ.

    ವರದಿಯೊಂದರ ಪ್ರಕಾರ, 2020 ರ ಏಪ್ರಿಲ್ 16 ರಂದು, 3 ವಾರಗಳವರೆಗೆ ಲಾಕ್‌ಡೌನ್ ಅವಧಿಯಲ್ಲಿ, 42% ಕ್ಕೂ ಹೆಚ್ಚು ಭಾರತೀಯರು ಇ-ವ್ಯಾಲೆಟ್‌ಗಳನ್ನು ಬಳಸಿಕೊಂಡು ಆನ್‌ಲೈನ್ ಪಾವತಿಗಳನ್ನು ಮಾಡಿದ್ದಾರೆ ಎಂಬುವುದು ತಿಳಿದುಬಂದಿದೆ. ಇನ್ನು ಮನಸ್ಸು ಮಾಡದವರು, ಸಾಂಪ್ರದಾಯಿಕ ನಗದು ಪಾವತಿ ವಿಧಾನದಿಂದ ಆನಲೈನ್ ಪಾವತಿ ಮತ್ತು ಸ್ವೀಕೃತಿ ವಿಧಾನಕ್ಕೆ ಅಂದರೆ, ಕರೆನ್ಸಿ ನೋಟುಗಳ ಬದಲಾಗಿ ಡಿಜಿಟಲ್ ಕರೆನ್ಸಿಗೆ ಬದಲಾಗಲು ಇದು ಸೂಕ್ತ ಸಮಯ. ಸ್ಮಾರ್ಟ್‌ಫೋನ್‌ಗಳನ್ನು ಡಿಜಿಟಲ್ ವಹಿವಾಟಿಗೆ ಮಾತ್ರವಲ್ಲದೆ ಕರೆನ್ಸಿ ನೋಟುಗಳ ಮೂಲಕ ಕೊರೊನಾವೈರಸ್ ಸೋಂಕಿನಿಂದ ನಮ್ಮನ್ನು ಮತ್ತು ನಮ್ಮವರನ್ನು ರಕ್ಷಿಸಿಕೊಳ್ಳಲು ಉಪಯೋಗಿಸುವುದು ಅನಿವಾರ್ಯವಾಗಿದೆ. ನಗರ, ಪಟ್ಟಣಗಳಲ್ಲಿ ಡಿಜಿಟಲ್ ಕರೆನ್ಸಿ ಬಳಕೆದಾರರು ಸಾಕಷ್ಟಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಇದರ ಬಗ್ಗೆ ಜನರನ್ನು ಸುಶಿಕ್ಷಿತರನ್ನಾಗಿ ಮಾಡುವ ಅವಶ್ಯಕತೆ ಇದೆ.

    ಒಂದು ಕಾಲ ಇತ್ತು, ಓದಲು ಅಥವಾ ಬರೆಯಲು ಬಾರದ ವ್ಯಕ್ತಿಗಳನ್ನು ಅನಕ್ಷರಸ್ಥರೆಂದು ನಿರ್ಧರಿಸಲಾಗುತಿತ್ತು. ಇಂದಿನ  ತಂತ್ರಜ್ಞಾನದ ಯುಗದಲ್ಲಿ ಮಾಹಿತಿ ತಂತ್ರಜ್ಞಾನದ ಪ್ರಯೋಜನಗಳನ್ನು ಬಳಸಿಕೊಳ್ಳಲು
    ಅವಶ್ಯವಿರುವ ಪೂರಕ ಅಂಶಗಳನ್ನು  ಕಲಿತಿರದವರನ್ನು  ‘ಅನಕ್ಷರಸ್ಥ’ರೆಂದು  ಪರಿಗಣಿಸಲಾಗುತ್ತದೆ.

     
    ಸಂಕ್ಷಿಪ್ತವಾಗಿ ಹೇಳುವುದಾದರೆ, ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್, ಕಂಪ್ಯೂಟರ್ ಮೂಲಕ ನಡೆಸುವ ಡಿಜಿಟಲ್ ವಹಿವಾಟು, ಕಾಗದದ ಕರೆನ್ಸಿ ನೋಟುಗಳಿಗಿಂತ ಹೆಚ್ಚು ಸುರಕ್ಷಿತವಾಗಿದೆ. ಹಾಗಂತ, ಇದರಿಂದ ಯಾವುದೇ ಅಪಾಯವಿಲ್ಲ ಎಂದು ಇದರ ಅರ್ಥವಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಫೋನ್, ಡೆಬಿಟ್ (ಎಟಿಎಂ) / ಕ್ರೆಡಿಟ್ ಕಾರ್ಡ್‌ ಬಳಸಿದಾಗಲೆಲ್ಲಾ
    ಕೈಗಳನ್ನು ಸೋಪ್ ಅಥವಾ ಸ್ಯಾನಿಟೈಜರ್ ಮೂಲಕ ತೊಳೆದುಕೊಳ್ಳುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು.

    ಒಂದು ನೈಜ ಘಟನೆ:
    ನವ ದೆಹಲಿಯ ಬುದ್ದ ವಿಹಾರ್ ಬಳಿ ಇತ್ತೀಚೆಗೆ ನಡೆದ ಒಂದು ಕುತೂಹಲಕಾರಿ ಘಟನೆ. ಸಾಮಾನ್ಯವಾಗಿ, ರಸ್ತೆಯ ಮೇಲೆ
    ಅನಾಮಧೇಯವಾಗಿ ಬಿದ್ದಿರುವ ಹಣವನ್ನು ನೋಡಿದ ತಕ್ಷಣ ಜನರು ಅದನ್ನು ಹೆಕ್ಕಿ ಜೇಬಿಗಿಳಿಸುತ್ತಾರೆ. ಆದರೆ, 2,000/-
    ರೂಪಾಯಿಯ ಕರೆನ್ಸಿ ನೋಟುಗಳ ಕಂತೆ ಸುಮಾರು ಹೊತ್ತು ರಸ್ತೆಯಲ್ಲಿ ಚದುರಿ ಬಿದ್ದಿದ್ದರೂ ನೋಡಿದವರ್ಯಾರು ತೆಗೆದುಕೊಳ್ಳಲು ಮುಂದೆ ಬರಲಿಲ್ಲ. ಕಾರಣ, ಕೊರೊನಾವೈರಸ್ ಭಯ. ಅಲ್ಲಿನ ಪೊಲೀಸ್ ಇಲಾಖೆ ತನಿಖೆ ನಡೆಸಿದಾಗ ವ್ಯಕ್ತಿಯೊಬ್ಬ ಎಟಿಎಂನಿಂದ ಹಣ ತೆಗೆದು ಕಿಸೆಯಲ್ಲಿ ತುರುಕಿಸುವಾಗ ರಸ್ತೆಯಲ್ಲಿ ಬೀಳಿಸಿಕೊಂಡು ಹೋಗಿರುತ್ತಾನೆ. ಆ ವ್ಯಕ್ತಿಯನ್ನು ಪತ್ತೆಹಚ್ಚಿ ಹಣವನ್ನು ಹಿಂದಿರುಗಿಸಲಾಯಿತು. ಕೋವಿಡ್- 19 ಮಹಾಮಾರಿ ಸ್ಫೋಟಗೊಂಡ ನಂತರ ದೇಶದ ಕೆಲವು ಭಾಗಗಳಲ್ಲಿ ಇದೇ ರೀತಿಯ ಘಟನೆಗಳುನಡೆದಿದ್ದು ಅನಾಮಧೇಯವಾಗಿ ಬಿದ್ದಿದ್ದ ಹಣವನ್ನು ಎತ್ತಿಕೊಳ್ಳುವ ಧೈರ್ಯ ಯಾರೂ ತೋರಿಸಲಿಲ್ಲ.

    ಮುಂಜಾಗ್ರತೆ ಏಕೆ ಮತ್ತು ಹೇಗೆ?
    ಸೋಂಕಿತ ವ್ಯಕ್ತಿಯು ಸೀನುವಾಗ, ಕೆಮ್ಮುವಾಗ ಅಥವಾ ಮಾತನಾಡುವಾಗ   ಸಿಂಪಡಣೆ ಆಗುವ ಎಂಜಲಿನ ಹನಿಗಳಿಂದ, ಹತ್ತಿರದಲ್ಲಿರುವ ವ್ಯಕ್ತಿಗಳು  SARS-CoV-2 ವೈರಾಣುವಿನಿಂದ ಸೋಂಕಿತರಾಗಬಹುದು. ಇದು ನೇರವಾಗಿ ಸೋಂಕು ಉಂಟಾಗುವ ವಿಧಾನ.
    ಅದಕ್ಕಾಗಿಯೇ, ಬಾಯಿ ಮೂಗು ಮುಚ್ಚಿಕೊಳ್ಳಲು ಫೇಸ್ ಮಾಸ್ಕ್ ಧರಿಸುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ 2 ಮೀಟರ್ ಸಾಮಾಜಿಕ ಅಂತರವನ್ನು ಕಾಪಾಡುವುದನ್ನು ಕಡ್ಡಾಯಗೊಳಿಸಲಾಗಿದೆ.  ಇನ್ನೊಂದು ರೀತಿಯಲ್ಲಿಯೂ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ; ಅದು, ಮೇಲ್ಮೈ-ಮಾನವ ಪ್ರಸರಣ. ವೈರಾಣುವಿನಿಂದ
    ಕಲುಷಿತಗೊಂಡಿರುವ ವಸ್ತುವನ್ನು ಸ್ಪರ್ಶಿಸಿದಾಗ ಅದರ ಮೇಲ್ಮೈಯಲ್ಲಿರುವ ರೋಗಾಣುಗಳು ಸುಲಭವಾಗಿ ದೇಹವನ್ನು ಪ್ರವೇಶಿಸುತ್ತವೆ.
    ಅದಕ್ಕಾಗಿಯೇ,  ಸಾಬೂನಿನಿಂದ ಆಗಾಗ್ಗೆ ತೊಳೆಯಿರಿ; ಸ್ಯಾನಿಟೈಜರ್ ಬಳಸಿ; ಮೂಗು, ಬಾಯಿ ಮತ್ತು ಕಣ್ಣುಗಳನ್ನು ಆವಾಗಾವಾಗ
    ಸ್ಪರ್ಶಿಸದಿರಿ ಎಂದು ಪದೇಪದೇ ಸರ್ಕಾರ  ಸಾರ್ವಜನಿಕರನ್ನು ಎಚ್ಚರಿಸುತ್ತಿರುವುದು.ಬಹುಬೇಡಿಕೆಯ ದೃಷ್ಟಿಯಿಂದ ಕೆಲವು ಕಂಪನಿಗಳು ‘ಫೋನ್‌ಮಾಪ್’ ಮತ್ತು ‘ಮೊಬಿವಾಶ್’ ಎಂಬ ಮೊಬೈಲ್
    ಸೋಂಕುನಿವಾರಕ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಇತ್ತೀಚೆಗೆ ಮಾಡಿವೆ.

    Photo by Austin Distel on Unsplash

    ಡಾ. ಪ್ರಶಾಂತ ನಾಯ್ಕ
    ಡಾ. ಪ್ರಶಾಂತ ನಾಯ್ಕ
    ಅನೇಕರಾಷ್ಟ್ರೀಯಸಮ್ಮೇಳನ, ಕಾರ್ಯಗಾರ, ಪರಿಸರ ಸಂರಕ್ಷಣೆಯ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ. ಸಹ-ಸಂಯೋಜಕರಾಗಿ ಜನತಾ ಜೀವವೈವಿಧ್ಯ ದಾಖಲಾತಿಯನ್ನು ಮಾಡಿರುತ್ತಾರೆ. ಅನೇಕ ಸಂಶೋಧನಾ ಲೇಖನಗಳನ್ನು, ಪುಸ್ತಕಗಳನ್ನು ಪ್ರಕಟಿಸಿರುತ್ತಾರೆ. ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯ ಜೀವವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
    spot_img

    More articles

    16 COMMENTS

    1. ಈ ಸಮಯದಲಿ ತುಂಬಾ ಉಪಯುಕ್ತ ಮಾಹಿತಿ. ವಂದನೆಗಳು

    2. ಒಳ್ಳೆಯ ಉಪಯುಕ್ತವಾದ ಲೇಖನ. ಹೆಚ್ಚಿನ ಜನರು ಡಿಜಿಟಲ್ ವ್ಯವಹಾರವೆಂದರೆ ಹೆದರುತ್ತಾರೆ. ಏನಾದರೂ ತೊಂದರೆ ಆದೀತೆಂದು. ಈ ಲೇಖನ ಅವರಂಥವರಿಗೆ ಮಾರ್ಗದರ್ಶನ ಮಾಡುತ್ತದೆ.

    3. ತುಂಬಾ ಸರಳವಾಗಿ ಹಾಗೂ ನೇರವಾಗಿ ವಿಷಯವನ್ನು ಚರ್ಚಿಸಲಾಗಿದೆ. ಪ್ರತಿಯೊಬ್ಬರಿಗೂ ಉಪಯುಕ್ತ ಮಾಹಿತಿ. ವಾಣಿಜ್ಯ ಕ್ಷೇತ್ರ, ಹಣಕಾಸು ಕ್ಷೇತ್ರ, ಬ್ಯಾಂಕಿಂಗ್ ಕ್ಷೇತ್ರದ ಆರ್ಥಿಕ ವಿದ್ಯಮಾನಗಳ ವಿಷಯವನ್ನು ವಿಜ್ಞಾನ, ತಂತ್ರಜ್ಞಾನ, ಜೀವಶಾಸ್ತ್ರ, ವ್ಯೆರಾಣು, ಸ್ವಚ್ಛತೆ, ಆರೋಗ್ಯ, ಜೀವವಿಜ್ಞಾನ ಕ್ಷೇತ್ರದೊಂದಿಗೆ ಸಂಯೋಜನೆ ಮಾಡಿರುವುದು ಅರ್ಥವತ್ತಾಗಿದೆ.
      ಇತ್ತೀಚೆಗೆ ಕ್ರಿಪ್ಟೂ ಕರೆನ್ಸಿ ಕೂಡ ಜಾಗತಿಕ ಅರ್ಥವ್ಯವಸ್ಥೆಯ ಚರ್ಚೆಯಲ್ಲಿದೆ. ಲೇಖಕರು ಅದನ್ನೂ ಚರ್ಚೆಗೆ ಬಳಸಬಹುದಾಗಿತ್ತು.

    4. Social commitment is the inherent strength of this article.it attracts our attention to address
      the social need of the people.

    5. ಜನರಿಗೆ ಉಪಯೋಗವಾಗುವಂತಹ ಸಕಾಲಿಕ ಮಾಹಿತಿಗಾಗಿ ಧನ್ಯವಾದಗಳು. ಜನರಿಗೆ ಡಿಜಿಟಲ್ ವ್ಯವಹಾರದಲ್ಲಿರುವ ಆತಂಕವೂ ಅರ್ಥವಾಗುವಂತಹುದೇ ಆಗಿದೆ. ಇತ್ತೀಚೆಗೆ ಡಿಜಿಟಲ್ ವ್ಯವಹಾರದಲ್ಲಿ “ಇ-ವೈರಸ್” ಮತ್ತು “ಫಿಶಿಂಗ್” ಗಳ ಹಾವಳಿಯಿಂದ ಹಲವರು ಹಣ ಕಳೆದುಕೊಂಡಿದ್ದನ್ನು ಅಲ್ಲಗಳೆಯಲಾಗದು. ಅದರಲ್ಲಿ ಸಾಮಾನ್ಯ ಜನರು ಮಾತ್ರವಲ್ಲ “ಇ-ಅಕ್ಷರಸ್ಥರೂ” ಕೆಲವೊಮ್ಮೆ ಮೋಸಕ್ಕೊಳಗಾಗಿದ್ದಾರೆ. ಇದಕ್ಕೆ ಪರಿಹಾರ ಕಂಡುಹಿಡಿದರೆ ಮಾತ್ರ ಜನರಿಂದ ಡಿಜಿಟಲ್ ವ್ಯವಹಾರಕ್ಕೆ ಪೂರ್ಣ ಸಹಮತವನ್ನು ಅಪೇಕ್ಷಿಸಬಹುದು.

    LEAVE A REPLY

    Please enter your comment!
    Please enter your name here

    Latest article

    error: Content is protected !!