19.5 C
Karnataka
Thursday, November 21, 2024

    ಬಂಗಾರದ ಹೊಸ ನೀತಿ ಭಯ ಬೇಡ

    Must read

    ಚಿನ್ನ ಖರೀದಿಯ ಬಗ್ಗೆ ಹೊಸ ನೀತಿಯ ಘೋಷಣೆ ಆಗುತ್ತಿದೆ ಎನ್ನುವ ಸುಳಿವು ಸಿಕ್ಕಿದ ಕೂಡಲೇ ನಮ್ಮಲ್ಲಿ ಅದರ ಬಗ್ಗೆ ವಿಶ್ಲೇಷಣೆ ಮಾಡುವವರು, ಅದರ ಕುರಿತು ಅತಿಯಾಗಿ ತಜ್ಞರಾಗಿ ಮಾತನಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ.ಸರಕಾರ ಈ ಬಗ್ಗೆ ಇನ್ನು ಏನನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.ಅಕ್ರಮ ಚಿನ್ನವನ್ನು ಸಕ್ರಮಗೊಳಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಅಷ್ಟೆ.

    ಕೋವಿಡ್-19 ರೀತಿಯಲ್ಲೇ ಜನರಲ್ಲಿ ಮತ್ತೆ ಭಯ-ಭೀತಿಯನ್ನು ಹುಟ್ಟಿಸುವ ಕಾರ್ಯಕ್ರಮ ನಡೆಯುತ್ತಿದೆ. ಆದರೆ ಜನರಿಗೆ ನಿಜ ವಿಷಯವನ್ನು ತಿಳಿಸುವ ಕೆಲಸ ಆಗುತ್ತಿಲ್ಲ. ಚಾನಲ್ ಗಳಲ್ಲಿ ಒಂದು ಗಂಟೆ ಕಾರ್ಯಕ್ರಮದಲ್ಲಿ ತಮಗೆ ಬೇಕಾದ ರೀತಿಯಲ್ಲಿ ಬಂಗಾರದ ಕುರಿತ ಹೊಸ ನೀತಿಯ ಬಗ್ಗೆ ಚರ್ಚೆಗಳು, ತಜ್ಞರು ಎನ್ನುವವರಿಂದ ಅಭಿಪ್ರಾಯಗಳು, ಸಾರ್ವಜನಿಕರ ಆತಂಕಗಳು ಪ್ರಸಾರವಾಗುತ್ತಲೇ ಇದೆ.

    ಹಾಗಾದರೆ ನಿಜವಾಗಿ ಚಿನ್ನದ ಹೊಸ ನೀತಿ ಏನು ? ಅದರಲ್ಲಿ ಅಡಕವಾಗಿರುವ ಅಂಶಗಳಾವುದಾದರೂ ಯಾವುದು ? ಅದು ಸಾಮಾನ್ಯ ಚಿನ್ನ ಖರೀದಿದಾರರಿಗೆ ಅಂದರೆ ಮಧ್ಯಮ ವರ್ಗ ಮತ್ತು ಬಡವರ ಜೀವನಾಡಿಯಾದ ಬಂಗಾರದ ಖರೀದಿಯ ಮೇಲೆ ಬೀಳಬಹುದಾದ ಪರಿಣಾಮಗಳೇನು ? ಎಂಬ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ.

    ಭಾರತವು ಸುಮಾರು 25 ಸಾವಿರ ಟನ್ ಚಿನ್ನವನ್ನು ವಾರ್ಷಿಕವಾಗಿ ಆಮದು ಮಾಡಿಕೊಳ್ಳುತ್ತಿದೆ. ಅದರಲ್ಲಿ ಅನ್ ಅಕೌಂಟೆಡ್ ಅಂದರೆ ಲೆಕ್ಕಕ್ಕೆ ಸಿಕ್ಕದ (ರಾಮನ ಲೆಕ್ಕ-ಕೃಷ್ಣನ ಲೆಕ್ಕ) ಬಂಗಾರವೇ ಹೆಚ್ಚು. ಹೀಗಾಗಿ ಇದನ್ನು ನಿಯಂತ್ರಿಸಲು 2015ರಲ್ಲೇ ಕೇಂದ್ರ ಸರಕಾರ ಒಂದು ಸಮಿತಿಯನ್ನು ರೂಪಿಸಿ, ಇದನ್ನು ನಿಯಂತ್ರಿಸಲು ಯೋಜನೆ ಮಾಡಿ ಎಂದು ನಿರ್ದೇಶಿಸಿತ್ತು. ಇದರ ಉದ್ದೇಶ ಉತ್ತಮವಾಗಿತ್ತು. ಕಪ್ಪು ಹಣವನ್ನು ನಿಯಂತ್ರಿಸಲು ನಿರ್ದಿಷ್ಟ ಮುಖ ಬೆಲೆಯ ನೋಟು ಅಮಾನ್ಯ ಮಾಡಿದಂತೆ ಚಿನ್ನದ ಖರೀದಿಯ ಮೇಲೆಯೂ ನಿಯಂತ್ರಣ ಹೇರಬೇಕು ಎಂದಾಗಿತ್ತು. ಅದರಲ್ಲೂ ಮುಖ್ಯವಾಗಿ ನೋಟು ಅಮಾನ್ಯದ ಬಳಿಕ ಅನಿಯಂತ್ರಿತವಾಗಿಯೇ ಸಾಗುತ್ತಿದ್ದ ಚಿನ್ನ ಖರೀದಿಗೆ ಒಂದು ಕಡಿವಾಣ ಬೇಕಾಗಿತ್ತು.

    ಆದರೆ ನಮ್ಮ ಜನರು ತುಂಬಾ ಬುದ್ಧಿವಂತರು. ಅದರಲ್ಲೂ ಶ್ರೀಮಂತ ವರ್ಗಕ್ಕೆ ಸೇರಿದ್ದ ಜನರು ತಮ್ಮ ಕೋಟ್ಯಂತರ ರೂಪಾಯಿಯನ್ನು ಭೂಮಿ, ಶೇರು ಮಾರುಕಟ್ಟೆಯ ಬದಲಿಗೆ ಚಿನ್ನದ ಮೇಲೆ ಹೂಡಿಕೆ ಮಾಡಿದರು. ಇದರಿಂದಾಗಿ ಅವರಿಗೆ ಸಾಕಷ್ಟು ಲಾಭವಿತ್ತು. ಎಷ್ಟು ಚಿನ್ನವಿದೆ ಎಂಬ ಬಗ್ಗೆ ಸರಕಾರಕ್ಕೆ ಲೆಕ್ಕ ಕೊಡುವ ಅಗತ್ಯವೇ ಇರಲಿಲ್ಲ. ಆದರೆ ಹೊಸ ನೀತಿಯೇನಾದರೂ ಜಾರಿಗೆ ಬಂದರೆ (ಇದು ಕಷ್ಟ) ಆಗ ಅವರು ತಮ್ಮಲ್ಲಿರುವ ಚಿನ್ನಕ್ಕೆ ಉತ್ತರದಾಯಿಗಳು ಆಗಲೇಬೇಕಾಗುತ್ತದೆ.

    ಸಾಮಾನ್ಯರಿಗೆ ಯಾವುದೇ ಸಮಸ್ಯೆಯಿಲ್ಲ

    ಸಾಮಾನ್ಯ ಜನರಿಗೆ ಈ ಹೊಸ ನೀತಿಯಿಂದ ಯಾವುದೇ ಸಮಸ್ಯೆಯಿಲ್ಲ ಎಂಬುದನ್ನು ಇಲ್ಲಿ ಸ್ಪಷ್ಟ ಪಡಿಸಲೇಬೇಕಾಗುತ್ತದೆ. ಸುಮಾರು ಎರಡು ಕೆಜಿವರೆಗೆ ಅಂದರೆ 2,000 ಗ್ರಾಂ.ವರೆಗೆ ಚಿನ್ನವನ್ನು ಮನೆಯಲ್ಲಿ ಹೊಂದಿರುವವರು (ಉಡುಗೊರೆ, ತಂದೆ-ತಾಯಿ ಸೇರಿದಂತೆ ಪಾರಂಪರಿಕವಾಗಿ ಬಂದ ಬಳುವಳಿ ಅಥವಾ ವರ್ಗಾವಣೆ) ಯಾವುದೇ ತೊಂದರೆಗೆ ಸಿಲುಕುವುದಿಲ್ಲ.  ಆಮೇಲೆ ಇನ್ನು ಮುಂದೆ ತೆಗೆದುಕೊಂಡ ಪ್ರತಿಯೊಂದು ಗ್ರಾಂ ಚಿನ್ನಕ್ಕೂ ಅಂಗಡಿಯಲ್ಲಿ ಬಿಲ್ ತೆಗೆದುಕೊಂಡರೆ ಸಾಕಾಗುತ್ತದೆ. ಇದುವರೆಗೆ ಮನೆಯಲ್ಲಿ ಇರುವ ಚಿನ್ನಕ್ಕೆ ಇದು ಅನ್ವಯವಾಗುವುದಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಆದ್ದರಿಂದ ಜನ ಸಾಮಾನ್ಯರು ಏನಪ್ಪ ಇದು ಹೊಸ ಚಿನ್ನದ ನೀತಿ ಎಂದು ಭಯ ಪಡುವ ಅಗತ್ಯವಿಲ್ಲ. ಅಲ್ಲದೆ ವಿವಾಹಿತ ಮಹಿಳೆ, ಅವಿವಾಹಿತ ಪುರುಷ ಹೀಗೆ ನಾನಾ ವಿಭಾಗಗಳಲ್ಲಿ ನಾನಾ ಮಿತಿಗಳನ್ನು ನೀಡಿರುವುದರಿಂದ ಯಾವುದೇ ಸಮಸ್ಯೆಯಿಲ್ಲ. ಕೇವಲ ಕಪ್ಪು ಹಣವನ್ನು ಕೆಜಿಗಟ್ಟಲೆ ಚಿನ್ನಕ್ಕೆ ಹೂಡಿ ಮನೆಯಲ್ಲಿ ಕೂಡಿ ಹಾಕಿಕೊಳ್ಳುವವರಷ್ಟೇ ಭೀತಿ ಪಡಬೇಕು ಅಷ್ಚೇ, ಭೂಮಿ ಇರಲಿ, ಇನ್ಯಾವುದೇ ರೀತಿಯಲ್ಲಿ ಅಕ್ರಮ ಸಂಪಾದನೆ ಮಾಡಿರಲಿ ಅವರಿಗಷ್ಟೇ ತೆರಿಗೆ ಪಾವತಿಯ ಭಯ ಇದ್ದೇ ಇರುತ್ತದೆ.

    Photo by Sayak Bala on Unsplash

    ವಾಗೀಶ್ ಕುಮಾರ್ ಜಿ ಎ
    ವಾಗೀಶ್ ಕುಮಾರ್ ಜಿ ಎ
    ಪತ್ರಕರ್ತ, ಸಮಕಾಲೀನ ಸಂಗತಿಗಳ ಬಗ್ಗೆ ಆಸಕ್ತಿ
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!