ಕದಡಿದ ವಾತಾವರಣದಲ್ಲಿ ಮನೆಯಲ್ಲೇ ಕುಳಿತು ಕೈಲಿರುವ ಹಣದಲ್ಲೇ ಸೀಮಿತ ಚಟುವಟಿಕೆ ನಡೆಸಿ ಹಣವನ್ನು ಗಳಿಸುವುದರೊಂದಿಗೆ ಮನಸ್ಸನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಹರ್ಷೋಲ್ಲಾಸಭರಿತವಾಗಿರಲು ಷೇರುಪೇಟೆ ಒಂದು ಉತ್ತಮ ಸಾಧನ. ಷೇರುಪೇಟೆಯ ಚಟುವಟಿಕೆಯಿಂದ ಲಾಭ ಗಳಿಸಿಕೊಂಡಲ್ಲಿ ಅದು ಸ್ವಕಾರ್ಯ, ಜೊತೆಗೆ ಈ ಚಟುವಟಿಕೆಯಿಂದ ದೇಶದ ಖಜಾನೆಗೂ ಆದಾಯ ಗಳಿಸಿಕೊಡುವ ಕಾರಣ ದೇಶದ ಸೇವೆ ಮಾಡಿದ ಸಾರ್ಥಕ ಕಾರ್ಯವಾಗುತ್ತದೆ.
ಇಂದಿನ ಸಂಕೀರ್ಣಮಯ ದಿನಗಳಲ್ಲಿ ಸುರಕ್ಷಿತ ಎಂಬುದು ನಾವೇ ನಿರ್ಮಿಸಿಕೊಳ್ಳಬೇಕಾಗಿದೆ. ಸರ್ಕಾರಗಳಾಗಲಿ, ನಿಯಂತ್ರಕರಾಗಲಿ ತೆಗೆದುಕೊಳ್ಳುವ, ಆದೇಶಿಸುವ ಕಾರ್ಯಗಳಿಂದಾಗಲಿ ಸುರಕ್ಷಿತತೆ ಸಾಧ್ಯವಿಲ್ಲ, ಅದಕ್ಕೆ ಪೂರಕವಾಗಿ ನಾವು ನಮ್ಮ ಕೌಶಲ್ಯ, ಅರಿವು, ತಿಳಿವು, ಅನುಭವ, ಪರಿಸರ ಮುಂತಾದ ವಾಸ್ತವ ಅಂಶಗಳನ್ನಾಧರಿಸಿ ತೆಗೆದುಕೊಳ್ಳುವ ನಿರ್ಧಾರಗಳಿಂದ ಮಾತ್ರ ಸಾಧ್ಯ. ಆರ್ಥಿಕ ಸಾಕ್ಷರತೆಯ ಮೂಲಕ ಮಾತ್ರ ಆರ್ಥಿಕ ಸುರಕ್ಷತೆ ಪಡೆಯಲು ಸಾಧ್ಯ.
ಸುರಕ್ಷಿತ ಎಂಬುದು ಎಷ್ಟರಮಟ್ಟಿಗೆ ಸರಿ:
ಷೇರುಪೇಟೆಯಲ್ಲಿ ಹೂಡಿಕೆ ಮಾಡಿದರೆ ಅಪಾಯ ಹೆಚ್ಚು ಎಂಬ ಕಲ್ಪನೆ ಹೆಚ್ಚಿನವರಲ್ಲಿದೆ. ಆದರೆ ಈಗಿನ ದಿನಗಳಲ್ಲಿ ಸುರಕ್ಷಿತ ಎಂಬುದು ಕೇವಲ ನಿಘಂಟಿನಲ್ಲಿದೆ. ಬ್ಯಾಂಕ್ ಗಳಲ್ಲಿ ತಮ್ಮ ಹಣ ಇರಿಸಿದಲ್ಲಿ ಸುರಕ್ಷಿತ ಎಂಬುದು ಹಿಂದಿನಿಂದ ಬಂದಿರುವ ಸಾಂಪ್ರದಾಯಿಕ ಚಿಂತನೆಯಾಗಿದೆ. ಇದು ಸ್ವಲ್ಪಮಟ್ಟಿಗೆ ಸರಿಯೂ ಹೌದು.
ಇದಕ್ಕೆ ಮುಖ್ಯ ಕಾರಣ ನಮಗೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಗಳ ಮೇಲಿರುವ ನಂಬಿಕೆಯಾಗಿದೆ. ಇದಕ್ಕೆ ಆಧಾರವೂ ಇದೆ. ದುರ್ಬಲ ಬ್ಯಾಂಕ್ ಗಳನ್ನು ಬಲಿಷ್ಠ ಬ್ಯಾಂಕ್ ನಲ್ಲಿ ವಿಲೀನಗೊಳಿಸಲು 1960 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಗೆ ಅಧಿಕಾರ ನೀಡಲಾಗಿದೆ. ಈ ಅಧಿಕಾರವನ್ನು ಆರ್ ಬಿ ಐ ಈ ಕೆಳಗಿನ ಬ್ಯಾಂಕ್ ಗಳ ಮೇಲೆ ಪ್ರಯೋಗಿಸಿದೆ.
ನೆಡಂಗಡಿ ಬ್ಯಾಂಕ್ ಲಿಮಿಟೆಡ್:2002 ರಲ್ಲಿ ನೆಡಂಗಡಿ ಬ್ಯಾಂಕ್ ಎಂಬ ಖಾಸಗಿ ಬ್ಯಾಂಕ್ ತೊಂದರೆಗೊಳಗಾದ ಕಾರಣ ಠೇವಣಿದಾರರ ಹಿತದಿಂದ ಆರ್ ಬಿ ಐ ಆ ಬ್ಯಾಂಕ್ ನ್ನು ಪಂಜಾಬ್ ನ್ಯಾಶನಲ್ ಬ್ಯಾಂಕ್ ನಲ್ಲಿ ವಿಲೀನಗೊಳಿಸುವ ಮೂಲಕ ಠೇವಣಿದಾರರ ಹಿತವನ್ನು ಕಾಪಾಡಿತು. ಈ ವಿಲೀನವಾಗಿ 18 ವರ್ಷವಾದರೂ ಇದುವರೆಗೂ ಷೇರುದಾರರಿಗೆ ಯಾವುದೇ ರೀತಿಯ ಪರಿಹಾರ ದೊರೆತಿಲ್ಲ. ಆದರೆ ಠೇವಣಿದಾರರಿಗೆ ಯಾವುದೇ ರೀತಿಯ ಹಾನಿಯಾಗದಂತೆ ನೋಡಿಕೊಳ್ಳಲಾಯಿತು.
ಗ್ಲೋಬಲ್ ಟ್ರಸ್ಟ್ ಬ್ಯಾಂಕ್:2004 ರಲ್ಲಿ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ವಿಫಲಗೊಂಡಾಗ ಠೇವಣಿದಾರರ ಹಿತ ಕಾಪಾಡಲು ಆ ಬ್ಯಾಂಕ್ ನ್ನು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ನಲ್ಲಿ ವಿಲೀನಗೊಳಿಸಲಾಯಿತು. ಇಲ್ಲಿಯೂ ಸಹ ಠೇವಣಿದಾರರಿಗೆ ತೊಂದರೆಯಾಗದಂತೆ ನಿರ್ವಹಿಸಿದ ಹೆಮ್ಮೆ ಆರ್ ಬಿ ಐ ಗೆ ಸಲ್ಲುತ್ತದೆ. ಷೇರುದಾರರಿಗೆ ಮಾತ್ರ ಇದುವರೆಗೂ ಯಾವುದೇ ಪರಿಹಾರ ದೊರೆತಿಲ್ಲ.
ಯುನೈಟೆಡ್ ವೆಸ್ಟರ್ನ್ ಬ್ಯಾಂಕ್ ಲಿಮಿಟೆಡ್:2006 ರಲ್ಲಿ ಯುನೈಟೆಡ್ ವೆಸ್ಟರ್ನ್ ಬ್ಯಾಂಕ್ ದುರ್ಬಲಗೊಂಡ ಕಾರಣ ಆ ಬ್ಯಾಂಕನ್ನು ಐ ಡಿ ಬಿ ಐ ಬ್ಯಾಂಕ್ ನಲ್ಲಿ ವಿಲೀನಗೊಳಿಸಲಾಯಿತು. ಈ ಸಂದರ್ಭದಲ್ಲಿ ಯುನೈಟೆಡ್ ವೆಸ್ಟರ್ನ್ ಬ್ಯಾಂಕ್ ಷೇರುದಾರರಿಗೂ ಅನುಕೂಲಕರವಾಗಿದೆ. ಅಂದರೆ ಠೇವಣಿದಾರರ ಹಿತ ಕಾಪಾಡುವುದರೊಂದಿಗೆ ಷೇರುದಾರರ ಹಿತವನ್ನೂ ಕಾಪಾಡಿದೆ.ಈ ಹಿನ್ನೆಲೆಯಲ್ಲಿ ಬ್ಯಾಂಕ್ ಗಳ ಮೇಲಿನ ನಂಬಿಕೆ ಮತ್ತಷ್ಟು ಬಲಿಷ್ಠವಾಯಿತು
ಯೆಸ್ ಬ್ಯಾಂಕ್ ಪ್ರಕರಣ
ಈ ವರ್ಷದ ಮಾರ್ಚ್ ನಲ್ಲಿ ಯೆಸ್ ಬ್ಯಾಂಕ್ ದುರ್ಬಲಗೊಂಡ ಸುದ್ಧಿಯ ಕಾರಣ ಆ ಬ್ಯಾಂಕ್ ಗೆ ಎಸ್ ಬಿ ಐ ನೇತೃತ್ವದಲ್ಲಿ ವಿವಿಧ ಬ್ಯಾಂಕ್ ಗಳು ಸೇರಿ ಆರ್ಥಿಕ ಬೆಂಬಲ ನೀಡಿದವು. ಈ ಸಂಪನ್ಮೂಲ ಕ್ರೋಡೀಕರಣ ಸಾಲದೆಂಬಂತೆ, ಬ್ಯಾಂಕ್ ಉತ್ತುಂಗದಲ್ಲಿದ್ದಾಗ ವಿತರಿಸಿದ ಅಡಿಷನಲ್ ಟೈರ್ 1 ಬಾಂಡ್ ಗಳನ್ನು ಸಂಪೂರ್ಣವಾಗಿ ರದ್ದುಮಾಡಿ, ಹೂಡಿಕೆಯನ್ನು ಶೂನ್ಯವಾಗಿಸಿತು. ಈ ಕ್ರಮವು ಸಾರ್ವಜನಿಕವಾಗಿ ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಅಲ್ಲಾಡಿಸಿದೆ.
ಮೂಲಭೂತ ಗುಣಕ್ಕೇ ಅಪವಾದ
ಯೆಸ್ ಬ್ಯಾಂಕ್ ನ ಈ ಹಗರಣವು ಅಲ್ಲಿಗೇ ನಿಲ್ಲದೆ, ಕ್ಯಾಪಿಟಲ್ ಮಾರ್ಕೆಟ್ ನ ಇತಿಹಾಸದಲ್ಲೇ ಮೊದಲ ಬಾರಿ ಬ್ಯಾಂಕ್ ನ 75% ರಷ್ಟು ಚಲಾವಣೆಯಿಂದ ಸ್ಥಗಿತಗೊಳಿಸಿದ ಕ್ರಮವು ಅನೇಕ ಸಣ್ಣ ಹೂಡಿಕೆದಾರರು ತೊಂದರೆಗೊಳಗಾಗಿದ್ದಲ್ಲದೆ ಈ ಕ್ರಮದ ನಂತರ ಕಂಡ ಷೇರಿನ ಬೆಲೆ ಏರಿಕೆಯ ಅವಕಾಶದಿಂದ ವಂಚಿತರಾಗುವಂತಾಯಿತು. ಈ ಕ್ರಮವು ಪೇಟೆಯ ಮೂಲಭೂತ ಗುಣವಾದ ಷೇರುಗಳ ದಿಢೀರ್ ನಗದೀಕರಣ( creating ready liquidity) ಕ್ಕೆ ಅಪವಾದವಾಗಿದೆ.
ಈ ಎಲ್ಲಾ ಬೆಳವಣಿಗೆಗಳು ಮತ್ತು ಘಟನೆಗಳ ಕಾರಣ, ಬ್ಯಾಂಕ್ ಗಳ ಮೇಲಿನ ನಂಬಿಕೆಗೆ ಕೊಡಲಿ ಏಟು ಕೊಟ್ಟಂತಾಗಿದೆ. ಹಾಗಾಗಿ ನಾವೇ ನಿಯಂತ್ರಿಸಬಹುದಾದ ಷೇರುಪೇಟೆ ಹೂಡಿಕೆಯೇ ಸ್ವಲ್ಪಮಟ್ಟಿನ ಸುರಕ್ಷಿತ ವಿಧವಾಗಿದೆ ಎಂಬ ಭಾವನೆ ಮೂಡುತ್ತಿದೆ. ಅದರಲ್ಲೂ ಉತ್ತಮವಾಗಿ ಕಾರ್ಯ ನಿರ್ವಹಿಸುವ ಹೂಡಿಕೆದಾರ ಸ್ನೇಹಿ ಕಂಪನಿಗಳು ಹೂಡಿಕೆಗೆ ಯೋಗ್ಯವಾಗಿರುತ್ತದೆ. ಲಾರ್ಜ್ ಕ್ಯಾಪ್ ಕಂಪನಿಗಳಲ್ಲಿ ಹೂಡಿಕೆಗೆ ಆಧ್ಯತೆ ಇರಲಿ. ಇವು ಒಂದು ರೀತಿಯ ಡ್ರೈ ಫ್ರೂಟ್ಸ್ ನಂತೆ ಹೆಚ್ಚಿನ ಅವಧಿಯವರೆಗೂ ಯೋಗ್ಯವಾಗಿರುತ್ತವೆ.
ಹಲವಾರು ಉತ್ತಮ ಕಂಪನಿಗಳು ಪ್ರದರ್ಶಿಸಿದ ಏರಿಳಿತಗಳ ಕೆಲವು ಉದಾಹರಣೆಗಳು ಇಂತಿವೆ
2018 ರ ಜುಲೈನಲ್ಲಿ ರೂ.1,000 ದ ಸಮೀಪವಿದ್ದ, 2019 ರಲ್ಲಿ ಪ್ರತಿ ಷೇರಿಗೆ ರೂ.35 ರಂತೆ ಲಾಭಾಂಶ ವಿತರಿಸಿದ ಗ್ರಾಫೈಟ್ ಇಂಡಿಯಾ ಕಂಪನಿ ಷೇರಿನ ಬೆಲೆ ರೂ.168 ರ ಸಮೀಪವಿದೆ.
2018 ರ ಜನವರಿಯಲ್ಲಿ ರೂ.250 ರ ಸಮೀಪವಿದ್ದ Rallis India ನಂತರದಲ್ಲಿ ಕುಸಿಯಿತು. ಈ ವರ್ಷದ ಮಾರ್ಚ್ ನಲ್ಲಿ ರೂ.127 ರವರೆಗೂ ಕುಸಿದು ನಂತರ ಕೇವಲ ಮೂರೇ ತಿಂಗಳಲ್ಲಿ ರೂ.324 ರ ವಾರ್ಷಿಕ ಗರಿಷ್ಠ ತಲುಪಿದೆ. ಅಂದರೆ ಶೇ.250 ಕ್ಕೂ ಹೆಚ್ಚಿನ ಲಾಭ ಗಳಿಸಿಕೊಟ್ಟಿದೆ.
2018 ರ ಮಾರ್ಚ್ ನಲ್ಲಿ ರೂ.265 ರ ಸಮೀಪವಿದ್ದ ಇಂಡೊಕೋ ರೆಮೆಡೀಸ್ ಷೇರಿನ ಬೆಲೆ 2019 ರ ಅಕ್ಟೋಬರ್ ನಲ್ಲಿ ರೂ.133 ರ ಸಮೀಪಕ್ಕೆ ಕುಸಿದಿತ್ತು. ನಂತರದಲ್ಲಿ ಚೇತರಿಕೆ ಕಂಡಿದೆ. ಈ ವರ್ಷದ ಮಾರ್ಚ್ ನಲ್ಲಿ ರೂ.145 ರ ಸಮೀಪವಿದ್ದ ಈ ಷೇರಿಗೆ ಕೋವಿಡ್ 19 ಕಾರಣ ಬೇಡಿಕೆ ಹೆಚ್ಚಾಗಿ ರೂ.260 ರ ವರೆಗೂ ಏರಿಕೆ ಕಾಣುವಂತಾಯಿತು. ಈ ಕಂಪನಿ ಉತ್ಪಾದಿಸುವ ಹೈಡ್ರಾಕ್ಸಿ ಕ್ಲೋರೋಕ್ವಿನ್ ಗೆ ಹೆಚ್ಚಿನ ಬೇಡಿಕೆ ಈ ಕಂಪನಿ ಷೇರಿಗೆ ಹೆಚ್ಚು ಬೆಂಬಲ ತಂದುಕೊಟ್ಟಿದೆ. ಸಧ್ಯ ಈ ಷೇರಿನ ಬೆಲೆ ರೂ.225 ರ ಸಮೀಪವಿದೆ.
2018 ಅಕ್ಟೋಬರ್ ತಿಂಗಳಲ್ಲಿ ಭಾರತ್ ಪೆಟ್ರೋಲಿಯಂ ಷೇರಿನ ಬೆಲೆ ರೂ.239 ರಲ್ಲಿ ವಹಿವಾಟಾಗುತ್ತಿತ್ತು. ಅಲ್ಲಿಂದ ಒಂದು ವರ್ಷದಲ್ಲಿ ಅಂದರೆ 2019 ರ ಅಕ್ಟೋಬರ್ ತಿಂಗಳಲ್ಲಿ ರೂ.550 ರ ಸಮೀಪಕ್ಕೆ ಜಿಗಿತ ಕಂಡಿತು. 2020 ರ ಮಾರ್ಚ್ ನಲ್ಲಿ ಕಂಡ ಜಾತ್ಯಾತೀತ ಕುಸಿತದ ಕಾರಣ ರೂ.252 ಕ್ಕೆ ಜಾರಿತು. ಜುಲೈ ತಿಂಗಳಲ್ಲಿ ಮತ್ತೆ ರೂ.480 ಕ್ಕೆ ಪುಟಿದೆದ್ದಿತು.
2010 ರಲ್ಲಿ ಪ್ರತಿ ಷೇರಿಗೆ ರೂ.610 ರಂತೆ ಷೇರು ವಿತರಿಸಿದ ಟಾಟಾ ಸ್ಟೀಲ್ ಕಂಪನಿಯಲ್ಲಿ ಅನೇಕ ಸ್ಥಳೀಯ ಮತ್ತು ವಿದೇಶಿ ವಿತ್ತೀಯ ಸಂಸ್ಥೆಗಳು ಹೂಡಿಕೆ ಮಾಡಿದವು. ಕ್ರಮೇಣದಲ್ಲಿ ಅಂದರೆ 2013 ರ ಆಗಸ್ಟ್ ತಿಂಗಳಲ್ಲಿ ರೂ.195 ರವರೆಗೂ ಕುಸಿಯಿತು. 2018ರ ಜನವರಿಯಲ್ಲಿ ಮತ್ತೆ ಚೇತರಿಕೆಯಿಂದ ರೂ.792 ರವರೆಗೂ ಪುಟಿದೆದ್ದಿತು. ಅ ಸಂದರ್ಭದಲ್ಲಿ ಕಂಪನಿಯು ಪ್ರತಿ ಷೇರಿಗೆ ರೂ.510 ರಂತೆ ಹಕ್ಕಿನ ಷೇರು ವಿತರಿಸಿತು. ಜೊತೆಗೆ ಭಾಗಶ: ಪಾವತಿಸಿದ (partly paid) ಷೇರುಗಳನ್ನು ಅಂದರೆ ಮೊದಲ ಕಂತು ರೂ.154 ನ್ನು ಪಾವತಿಸಿದ ಷೇರುಗಳನ್ನು ವಿತರಿಸಿ ಉಳಿದ ರೂ.461 ನ್ನು ಪಾವತಿಸಬೇಕಾಗಿದೆ. ಇದುವರೆಗೂ ಇನ್ನೂ ಅಂತಿಮ ಕಂತು ರೂ.461 ನ್ನು ಪಾವತಿಸಲು ಕರೆ ನೀಡಬೇಕಾಗಿದೆ. ಆದರೆ ಷೇರಿನ ಬೆಲೆ ರೂ.365 ರ ಸಮೀಪ ವಹಿವಾಟಾಗುತ್ತಿದೆ. ಅಂದರೆ ಮುಂದೆ ಬಾಕಿ ಇರುವ ರೂ.461 ನ್ನು ಪಾವತಿಸಲು ಕರೆ ನೀಡಬೇಕಾದರೆ ಮೂಲ ಷೇರಿನ ಬೆಲೆಯು ಸಹ ಹೆಚ್ಚಿರಲೇಬೇಕು. ಇಲ್ಲದಿದ್ದರೆ ಆ ಕರೆಗೆ ಮಾನ್ಯತೆ ದೊರೆಯದು. ಹಾಗಾಗಿ ಪ್ರತಿ ಕುಸಿತದಲ್ಲೂ ಈ ಷೇರು ಉತ್ತಮ ಹೂಡಿಕೆಯಾಗಬಹುದು. ಒಂದು ವೇಳೆ ಕುಸಿತಕ್ಕೊಳಗಾದರೆ ಅದರ ಪ್ರಮಾಣ ತೀರ ಕಡಿಮೆಯಾಗಿರುತ್ತದೆ.
2018 ರ ಜುಲೈನಲ್ಲಿ ರೂ.640 ರ ಸಮೀಪ ವಹಿವಾಟಾಗುತ್ತಿದ್ದ ಬಯೋಕಾನ್ ಲಿಮಿಟೆಡ್ ಒಂದು ವರ್ಷ ಅಂದರೆ ಆಗಸ್ಟ್ 2019 ರಲ್ಲಿ 1:1 ರ ಅನುಪಾತದ ಬೋನಸ್ ಷೇರು ವಿತರಿಸಿದ ನಂತರ ಷೇರಿನ ಬೆಲೆ ರೂ.211 ರವರೆಗೂ ಕುಸಿಯಿತು. ಆದರೆ ಅಲ್ಲಿಂದ ಪುಟಿದೆದ್ದು ಜುಲೈ 2020 ರಲ್ಲಿ ರೂ.455 ರವರೆಗೂ ಪುಟಿದೆದ್ದು ವಾರ್ಷಿಕ ಗರಿಷ್ಠಕ್ಕೆ ತಲುಪಿದೆ. ಸಧ್ಯ ರೂ.410 ರ ಸಮೀಪ ವಹಿವಾಟಾಗುತ್ತಿದೆ.
2018 ರ ಆಗಸ್ಟ್ ನಲ್ಲಿ ಫಾರ್ಮ ಕಂಪನಿ ಕ್ಯಾಡಿಲ್ಲಾ ಹೆಲ್ತ್ ಕೇರ್ ಷೇರಿನ ಬೆಲೆ ರೂ.400 ರ ಸಮೀಪವಿತ್ತು. ಒಂದು ವರ್ಷದ ನಂತರ ರೂ.206 ರವರೆಗೂ ಕುಸಿಯಿತು. ಈ ವರ್ಷ ಮಾರ್ಚ್ ನಲ್ಲಿ ರೂ.212 ರ ಸಮೀಪದಲ್ಲೇ ಸ್ಥಿರವಾಗಿತ್ತು. ಆದರೆ ಜುಲೈ ತಿಂಗಳ ಅಂತ್ಯದಲ್ಲಿ ರೂ.396 ರವರೆಗೂ ಏರಿಕೆ ಕಂಡು ರೂ.388 ರ ಸಮೀಪ ಕೊನೆಗೊಂಡಿದೆ.
2018 ರ ಫೆಬ್ರವರಿಯಲ್ಲಿ ಕ್ಲಾರಿಯಂಟ್ ಕೆಮಿಕಲ್ಸ್ ಕಂಪನಿಯು ರೂ.600 ಸಮೀಪ ವಹಿವಾಟಾಗುತ್ತಿತ್ತು. ಅದೇ ಷೇರು ಆಗಸ್ಟ್ 2019 ರಲ್ಲಿ ರೂ.265 ರ ಸಮೀಪಕ್ಕೆ ಜಾರಿತು. ಕಳೆದ ಮಾರ್ಚ್ ನಲ್ಲಿ ಪೇಟೆ ಕಂಡ ಭಾರಿ ಕುಸಿತದ ಕಾರಣ ರೂ.192ಕ್ಕೆ ತಲುಪಿತು. ಅಲ್ಲಿಂದ ಚೇತರಿಕೆ ಕಂಡ ಷೇರು, ಕಂಪನಿಯು ಪ್ರತಿ ಷೇರಿಗೆ ರೂ.140 ರಂತೆ ಡಿವಿಡೆಂಡ್ ಘೋಷಿಸಿದ ನಂತರ ಷೇರಿನ ಬೆಲೆ ರೂ.460 ರ ಸಮೀಪದಿಂದ ರೂ.608 ರ ವರೆಗೂ ಏರಿಕೆಯನ್ನು ಕೇವಲ ಎರಡೇ ದಿನಗಳಲ್ಲಿ ದಾಖಲಿಸಿತು. ಆದರೆ ಡಿವಿಡೆಂಡ್ ನಂತರ ಷೇರಿನ ಬೆಲೆ ಇಳಿಯುತ್ತಾ ರೂ.375 ರವರೆಗೂ ಇಳಿಕೆ ಕಂಡಿದೆ.
ಈ ಎಲ್ಲಾ ಕಂಪನಿಗಳೂ ಆಗಿಂದಾಗ್ಗೆ ಆಕರ್ಷಕ ಲಾಭಾಂಶಗಳನ್ನು ವಿತರಿಸಿವೆ. ಅಗ್ರಮಾನ್ಯ ಕಂಪನಿಗಳಲ್ಲಿ ಹೂಡಿಕೆ ಮಾಡಿದರೆ ಇಂತಹ ಏರಿಳಿತಗಳು ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತವೆ. ಆದ್ದರಿಂದಲೇ Value pick – Prfit book ಸದಾ ಹಸಿರಾದ ಸಮೀಕರಣವಾಗಿದೆ. Invest it and forget it ಎಂಬುದು ಈಗಿನ ದಿನಗಳಲ್ಲಿ ತಪ್ಪು ಕಲ್ಪನೆ. Invest and track it ಎಂಬುದು ಈಗ ಅನ್ವಯವಾಗುವ ಸೂತ್ರ.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.
👍