ರಾಮ ಜನ್ಮ ಭೂಮಿ ವಿವಾದ ತಾರ್ಕಿತ ಅಂತ್ಯ ಕಾಣುತ್ತಿದೆ.ಇದೇ 5ರಂದು ಭವ್ಯ ಮಂದಿರ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿ ಭೂಮಿ ಪೂಜೆ ನಡೆಯಲಿದೆ. ಈ ಹಿನ್ನೆಲೆಯಲ್ಲಿನ ವಿವಿಧ ಆಯಾಮಗಳನ್ನು ಇಂದಿನಿಂದ ಪ್ರತಿದಿನವೂ ಕನ್ನಡಪ್ರೆಸ್.ಕಾಮ್ ಅವಲೋಕಿಸಲಿದೆ.
ರಾಮಜನ್ಮಭೂಮಿ ವಿವಾದ ಈಗ ಒಂದು ಹಂತದಲ್ಲಿ ತಾರ್ಕಿತ ಅಂತ್ಯ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಅದನ್ನು ಎರಡು ಆಯಾಮಗಳಿಂದ ನೋಡಬಹುದಾಗಿದೆ. ಒಂದು ರಾಜಕೀಯ ನೆಲೆಯಾದರೆ ಇನ್ನೊಂದು ಧಾರ್ಮಿಕ ನಂಬಿಕೆ.
1528 ಆಗಿನ ಮೊಘಲ್ ದೊರೆ ಬಾಬರ್ ಇಲ್ಲಿದ್ದ ರಾಮ ಮಂದಿರವನ್ನು ಕೆಡವಿ ಮಸೀದಿ ನಿರ್ಮಾಣ ಮಾಡಿದ್ದ ಎನ್ನುವುದರಿಂದ ಇದು ಆರಂಭವಾಗಿ 1885ರಲ್ಲಿ ಮಹಾಂತ ರಘುವೀರ ದಾಸ್, ಶ್ರೀರಾಮನಿಗಾಗಿ ಅದೇ ಆವರಣದಲ್ಲಿ ಒಂದು ಕಟ್ಟಡ ನಿರ್ಮಿಸಲು (ಸೂರು) ಅನುಮತಿ ಕೋರಿ ಫೈಜಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವವರೆಗೆ ಹೋಗುತ್ತದೆ. ಬಳಿಕ ನಡೆದಿದ್ದು ಎಲ್ಲರಿಗೂ ತಿಳಿದ ಇತಿಹಾಸ.
ರಾಜಕೀಯ ಆಯಾಮ
ಭಾರತಕ್ಕೆ ಸ್ವಾತಂತ್ರ್ಯ ಬಂದ ಕೂಡಲೇ ಗುಜರಾತಿನಲ್ಲಿರುವ ಸೋಮನಾಥ ದೇವಾಲಯ ಪುನರ್ ನಿರ್ಮಾಣದ ನಿಟ್ಟಿನಲ್ಲಿ ಪ್ರಬಲ ವಾದ ಮಂಡಿಸಿದವರು ಆಗಿನ ಉಪ ಪ್ರಧಾನಿ ಸರ್ದಾರ್ ವಲ್ಲಭಬಾಯಿ ಪಟೇಲ್. ಅವರಿಗೆ ಬೆನ್ನೆಲುಬಾಗಿ ನಿಂತವರು ಆಗಿನ ಕೇಂದ್ರ ಸಚಿವ ಪಂಡಿತ ಮುನ್ಶಿ. ಪ್ರಧಾನಿ ಪಂಡಿತ ನೆಹರು ವಿರೋಧವನ್ನೂ ಲೆಕ್ಕಿಸದೆ ಸೋಮನಾಥ ದೇವಾಲಯ ಪುನರ್ ನಿರ್ಮಾಣ, ಜ್ಯೋತಿರ್ಲಿಂಗ ಸ್ಥಾಪನೆಯ ಕೆಲಸ ಯಶಸ್ವಿಯಾಗಿ ನಡೆಯಿತು. ಆದರೆ ಆಗ ಅಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಲಿಲ್ಲ. ಅಯೋಧ್ಯೆ ವಿವಾದ ನ್ಯಾಯಾಲಯದ ಕದ ತಟ್ಟಿದ್ದರಿಂದಲೇ ವಿಳಂಬವಾಗಲು ಆರಂಭವಾಯಿತು.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ದಾರುಣ ಹತ್ಯೆಯ ಬಳಿಕ ನಡೆದ ಚುನಾವಣೆಯಲ್ಲಿ ಪುತ್ರ ರಾಜೀವ್ ಗಾಂಧಿ ಅಭೂತಪೂರ್ವ ಬಹುಮತದೊಂದಿಗೆ ಪ್ರಧಾನಿಯಾದರು. ಆಗ ಅವರಿಗೆ ಎದುರಾದ ಸವಾಲೆಂದರೆ ಶಾ ಬಾನು ಪ್ರಕರಣ. ಆಗಲೆ ಬಹುಸಂಖ್ಯಾತ ಹಿಂದೂಗಳು, ಕಾಂಗ್ರೆಸ್ ನ ತುಷ್ಟೀಕರಣ ನೀತಿಯ ವಿರುದ್ಧ ಮನಸ್ಸಿನಲ್ಲೇ ಕತ್ತಿ ಮಸೆಯುತ್ತಿದ್ದರು. ಶಾ ಬಾನು ಪ್ರಕರಣದ ತೀರ್ಪಿನ ವಿರುದ್ಧ ಸಂಖ್ಯಾಬಲದಿಂದಾಗಿ ಸಂಸತ್ತಿನಲ್ಲಿ ಹೊಸ ಕಾನೂನು ರೂಪಿಸಿದ್ದು, ಹಿಂದೂಗಳ ಆಕ್ರೋಶವನ್ನು ಹೆಚ್ಚಿಸಲು ಕಾರಣವಾಯಿತು. ಇದಕ್ಕೆ ತುಪ್ಪ ಸುರಿಯುವಂತೆ, ಸ್ವಯಂ ಘೋಷಿತ ಚಿಂತಕರ ಚಾವಡಿಯು ಜಾತ್ಯತೀತ ತತ್ವಗಳ ಬಗ್ಗೆ ತಮ್ಮದೇ ಆದ ವ್ಯಾಖ್ಯಾನ ಮಾಡುತ್ತಾ, ಆಡಳಿತ ಪಕ್ಷದಿಂದಾಗುವ ಲಾಭವನ್ನು ಪಡೆಯಲು ಆರಂಭಿಸಿತು. ಇದು ಹಿಂದೂಗಳ ಸಹಜ ಭಾವನೆಯ ವಿರುದ್ಧವಾಗಿತ್ತು. ಇದರ ಒಂದಿಷ್ಟು ಸುಳಿವು ಸಿಕ್ಕ ರಾಜೀವ್ ಗಾಂಧಿ, ತಕ್ಷಣವೇ ಹಿಂದೂಗಳ ಮನವೊಲಿಸಲು, ಅದುವರೆಗೆ ಮುಚ್ಚಿದ್ದ ರಾಮ ಮಂದಿರದ ಬಾಗಿಲು ತೆರೆದು ಹಿಂದೂಗಳಿಗೂ ಪೂಜಿಸಲು ಅವಕಾಶ ಕಲ್ಪಿಸಿಕೊಟ್ಟರು.
ಟಿವಿ ಪ್ರಭಾವ
ಆಗಷ್ಟೇ ದೂರದರ್ಶನದಲ್ಲಿ ರಮಾನಂದ್ ಸಾಗರ್ ಅವರ ರಾಮಾಯಣ ಧಾರಾವಾಹಿ ಪ್ರಸಾರವಾಗಲಾರಂಭಿಸಿ, ಶ್ರೀರಾಮ ಪಾತ್ರಧಾರಿ ಅರುಣ್ ಗೋವಿಲ್ ಅವರು ಬಹಿರಂಗವಾಗಿ ಕಾಣಿಸಿದ ಕಡೆಯಲ್ಲಾ ಪಾದ ಪೂಜೆ ನಡೆಯುತ್ತಿತ್ತು. ಅಲ್ಲಿಗೆ ಶ್ರೀ ರಾಮ ಭಾರತದ ಜನ ಮಾನಸದಲ್ಲಿ ಸ್ಥಾಪಿತನಾಗಿಬಿಟ್ಟ.
ಆಗಲೇ ಆರಂಭವಾಯಿತು, ರಾಜಕೀಯದ ತಂತ್ರ ಮತ್ತು ಪ್ರತಿತಂತ್ರ. ಅದುವರೆಗೆ ತಾನೇ ರಾಜ ಎಂದು ಮೆರೆಯುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಹೊಸ ಪ್ರತಿ ರಾಜ ಹುಟ್ಟಿಕೊಂಡ. ಭಾರತೀಯ ಜನತಾ ಪಕ್ಷ (ಒಟ್ಟಾಗಿ ಸಂಘ ಪರಿವಾರ) ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ರಾಷ್ಟ್ರವ್ಯಾಪಿ ಆಂದೋಲನವನ್ನೇ ಆರಂಭಿಸಿತು. ಪ್ರಾಯಶಃ ಸ್ವಾತಂತ್ರ್ಯ ಹೋರಾಟದ ಬಳಿಕ ನಡೆದ ರಾಷ್ಟ್ರವ್ಯಾಪಿ ಹೋರಾಟ ಇದೆಂದೇ ಹೇಳಬಹುದು. ಅಂತಿಮವಾಗಿ ನ್ಯಾಯಾಲಯಗಳಿಂದ ನ್ಯಾಯಾಲಯಗಳಿಗೆ ಹಾದು ಹೋದ ಪ್ರಕರಣದಲ್ಲಿ ಅಂತಿಮ ತೀರ್ಪು ಹೊರ ಬಂದಿದ್ದು, ಈಗ ಭವ್ಯ ರಾಮ ಮಂದಿರ ನಿರ್ಮಾಣ ಸಾಕಾರವಾಗುವ ಕಾಲ ಸನ್ನಿಹಿತವಾಗಿದೆ.
ಧಾರ್ಮಿಕ ನೆಲೆ
ಹಾಗೆಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಪರೋಕ್ಷ ಆಂದೋಲನ ಈ ಶತಮಾನದಲ್ಲೇ ಆರಂಭವಾಗಿರಲಿಲ್ಲ. ಸಂತ ತುಳಸೀದಾಸರು (1497-1532ರ ನಡುವೆ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ಅವರ ಜನ್ಮದಿನ ಎಂದು ನಂಬಲಾಗಿದೆ). 16ನೇ ಶತಮಾನದಲ್ಲಿ ಶ್ರೀ ರಾಮ ಚರಿತ ಮಾನಸದ ಮೂಲಕ ಶ್ರೀ ರಾಮನನ್ನು ಜನರ ಮನೆ ಮನಕ್ಕೆ ತಲುಪಿಸುವ ಕೆಲಸ ಮಾಡಿದ್ದರು. ಅದುವರೆಗೆ ಉತ್ತರ ಭಾರತದಲ್ಲಿ ವಾಲ್ಮೀಕಿ ರಾಮಾಯಣ ಕೇವಲ ಸಂಸ್ಕೃತ ಭಾಷೆಗೆ ಸೀಮಿತವಾಗಿತ್ತು. ಆದರೆ ಸ್ವತಃ ಸಂಸ್ಕೃತ ವಿದ್ವಾಂಸರಾಗಿದ್ದ ತುಳಸೀದಾಸರು ಇದನ್ನು ಅವಧಿ ಭಾಷೆಯಲ್ಲಿ ಬರೆದರು ಅಥವಾ ಅನುವಾದ ಮಾಡಿದರು. ಅವರ ಇನ್ನೊಂದು ಕೃತಿಯೆಂದರೆ ಹನುಮಾನ್ ಚಾಲೀಸಾ.
ಇಷ್ಟಕ್ಕೆ ಅವರ ಕೆಲಸ ನಿಲ್ಲಲಿಲ್ಲ. ಶ್ರೀ ರಾಮನ ಕುರಿತು ರಾಮಲೀಲಾ ಕಾರ್ಯಕ್ರಮವನ್ನೂ ಆಯೋಜಿಸಿದ್ದರು. ರಂಗಭೂಮಿಯಲ್ಲಿ ರಾಮನ ನಾನಾ ವಿವರಗಳನ್ನು ನೀಡುವ ನಾಟಕವು ಇದಾಗಿತ್ತು. ಆ ಬಳಿಕವೇ ವಿಜಯ ದಶಮಿಯ ಮುನ್ನ ಒಂಬತ್ತು ದಿನಗಳ ಕಾಲ ರಾಮ ಲೀಲಾ ಉತ್ತರ ಭಾರತದೆಲ್ಲೆಡೆ ಆಚರಿಸಲ್ಪಡುತ್ತದೆ ಎಂಬುದು ಗಮನಾರ್ಹ.
ಭಾರತೀಯ ಸಂಸ್ಕೃತಿ ಅಧ್ಯಯನ ಮಾಡಿದ್ದ, ಹಿಂದಿ ಭಾಷೆಯ ವಿದ್ವಾಂಸನಾಗಿದ್ದ ಅಮೆರಿಕದ ಫಿಲಿಪ್ ಲ್ಯುಟೆಡೆಡ್ರಾಫ್ ಮಾತಿನಲ್ಲೇ ಹೇಳುವುದಾದರೆ, 16ನೇ ಶತಮಾನದಲ್ಲಿ ತುಳಸೀದಾಸರು ರಾಮಾಯಣ ಮಹಾಕಾವ್ಯವನ್ನು ಜನರಿಗೆ ನೇರವಾಗಿ ತಲುಪಿಸಿದರು. ಭಾರತೀಯ ಸಂಸ್ಕೃತಿಯ ಒಟ್ಟು ಮೊತ್ತವು ರಾಮಚರಿತ ಮಾನಸದಲ್ಲಿದೆ. ಮಹಾತ್ಮಾ ಗಾಂಧೀಜಿಯವರು ಕೂಡ ರಾಮಚರಿತ ಮಾನಸವು ಧಾರ್ಮಿಕ ಸಾಹಿತ್ಯದ ಅತಿ ಮಹತ್ವದ ಪುಸ್ತಕ ಎಂದು ಹೇಳಿರುವುದು ಇದಕ್ಕೆ ಸಾಕ್ಷಿ.
ಜುಲೈ 27ರಂದು ತುಳಸೀದಾಸರ ಜನ್ಮ ದಿನ. ಅಂದೇ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸದ ದಿನ ಘೋಷಣೆಯಾಗಿತ್ತು. ಬ್ರಿಟಿಷರ ದೌರ್ಜನ್ಯದಿಂದಾಗಿ ಮಾರಿಷಸ್, ಫಿಜಿ ಸೇರಿದಂತೆ ಅನೇಕ ದೇಶಗಳಿಗೆ ವಲಸೆ ಹೋದ ಕಾರ್ಮಿಕರು ತಮ್ಮ ಜತೆ ರಾಮಚರಿತ ಮಾನಸವನ್ನು ಕೊಂಡೊಯ್ದಿರುವುದು ಮಾತ್ರವಲ್ಲ ಈಗಲೂ ರಾಮಲೀಲಾ ವಿಧಿಯನ್ನು ನೆರವೇರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭವ್ಯ ಶ್ರೀ ರಾಮ ಮಂದಿರದ ಕನಸನ್ನು ಮೊದಲ ಬಾರಿಗೆ ಕಂಡ ತುಳಸೀದಾಸರ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ ಎಂದೇ ಹೇಳಬಹುದು.
ಲೇಖನದಲ್ಲಿ ರಾಮ ಮಂದಿರ ನಿರ್ಮಾಣದ ಪ್ರಗತಿ ಈ ಘಟ್ಟಕ್ಕೆ ತಲುಪಲು ಕಾರಣವಾದ ಅನೇಕ ಆಯಾಮಗಳನ್ನು ಸವಿಸ್ತಾರವಾಗಿ ಉಲ್ಲೇಖಿಸಲಾಗಿದೆ.