ಸ್ವಾತಂತ್ರ್ಯೋತ್ತರ ಭಾರತದಲ್ಲಿ ಎರಡು ಮಂದಿರ ವಿವಾದಗಳು ಚಾರಿತ್ರಿಕ ಮಹತ್ವ ಪಡೆದಿವೆ. ಒಂದು ಸೋಮನಾಥ ದೇವಾಲಯದ ಪುನರುಜ್ಜೀವನ, ಇನ್ನೊಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ. ಈ ಎರಡನ್ನೂ ದೇಶವ್ಯಾಪಿ ಹಿಂದೂಗಳ ಆಸ್ಮಿತೆಯ ಸಂಕೇತವಾಗಿ ಪ್ರಚುರ ಪಡಿಸಿದ ಇಬ್ಬರು ನಾಯಕರು ಕೂಡ ಉಪ ಪ್ರಧಾನಿಗಳಾಗಿದ್ದವರು ಎಂಬುದು ಇಲ್ಲಿ ವಿಶೇಷ. ಒಬ್ಬರು ಸರ್ದಾರ್ ವಲ್ಲಭಭಾಯಿ ಪಟೇಲ್, ಇನ್ನೊಬ್ಬರು ಎಲ್. ಕೆ. ಅಡ್ವಾಣಿ. ಸೋಮನಾಥ ದೇಗುಲ ಪುನರುತ್ಥಾನ ಕಾರ್ಯ ಪೂರ್ಣಗೊಳ್ಳುವ ಮೊದಲೇ ಪಟೇಲ್ ನಿಧನರಾದರು. ಈಗ ರಾಮ ಮಂದಿರಕ್ಕೆ ಶಿಲಾನ್ಯಾಸ ಆಗುತ್ತಿರುವ ಸಂದರ್ಭದಲ್ಲಿ ರಥಯಾತ್ರೆ ಖ್ಯಾತಿಯ ಎಲ್. ಕೆ. ಅಡ್ವಾಣಿ ಒಂದು ರೀತಿಯಲ್ಲಿ ರಾಜಕೀಯ ಸನ್ಯಾಸದಲ್ಲಿದ್ದಾರೆ. ಗುಜರಾತಿನ ಸೌರಾಷ್ಟ್ರ ವಲಯದ ಸೋಮನಾಥ ದೇವಾಲಯ. ಘಜ್ನಿ ಮಹಮ್ಮದ್ ನಿಂದ ಏಳಕ್ಕೂ ಹೆಚ್ಚು ಬಾರಿ ಸೂರೆಗೊಂಡಿತ್ತು. ಸ್ವಾತಂತ್ರ್ಯ ಬಂದ ಬೆನ್ನಲ್ಲೇ ನಡೆದ ರಕ್ತಸಿಕ್ತ ಇತಿಹಾಸ, ಸಹಜವಾಗಿಯೇ ಹಿಂದೂಗಳಲ್ಲಿ ಸಾಂಸ್ಕೃತಿಕ ರಾಷ್ಟ್ರೀಯತೆ ಪರಿಕಲ್ಪನೆಯನ್ನು ಬಲಗೊಳಿಸಿತು. ಆಗ ಅವರ ಮನಸ್ಸಿನಲ್ಲಿ ಬಂದಿದ್ದೇ ಸೋಮನಾಥ ದೇವಾಲಯ.ಇದನ್ನು ಮನಗಂಡ ಸರ್ದಾರ್ ಪಟೇಲರು, ಸೋಮನಾಥ ದೇವಾಲಯ ಪುನರುತ್ಥಾನಕ್ಕೆ ಕಟಿಬದ್ಧರಾಗಿ ನಿಂತರು. ಜಾತ್ಯತೀತರೆಂಬ ಕರೆಸಿಕೊಳ್ಳುವ ತವಕದಲ್ಲಿದ್ದ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನೇ ಎದುರು ಹಾಕಿಕೊಂಡು ಸೋಮನಾಥ ದೇವಾಲಯವನ್ನು ಪುನರ್ ನಿರ್ಮಿಸಲು ಮುಂದಾದರು. ದೇವಾಲಯವಿದ್ದ ಜುನಾಗಢ ಪ್ರಾಂತ್ಯವನ್ನು ಭಾರತದ ಜತೆಗೆ ವಿಲೀನಗೊಳಿಸುವ ಮೂಲಕ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟ ಪಟೇಲ್, 1947 ನವೆಂಬರ್ 9ರಂದು ಅಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸೋಮನಾಥ ದೇವಾಲಯ ಮರು ನಿರ್ಮಾಣ ಮತ್ತು ಜ್ಯೋತಿರ್ಲಿಂಗದ ಮರು ಪ್ರತಿಷ್ಠಾಪನೆಯ ಘೋಷಣೆ ಮಾಡಿದರು. ಆಗ ನೆಹರು ಸಂಪುಟ ಸದಸ್ಯರಲ್ಲಿ ಕೆಲವರು ಅದನ್ನು ರಾಷ್ಟ್ರೀಯ ಸ್ಮಾರಕವಾಗಿ ಮಾತ್ರ ಘೋಷಿಸಬೇಕು ಎಂದು ಸಲಹೆ ನೀಡಿದರಾದರೂ, ಪಟೇಲ್ ದೃಢಮನಸ್ಕರಾಗಿ ದೇವಾಲಯ ಮರು ನಿರ್ಮಾಣ ಶತಸ್ಸಿದ್ಧ ಎಂದು ಹೇಳಿದರು. ಅಂತಿಮವಾಗಿ ನೆಹರು ಸಚಿವ ಸಂಪುಟದ ಅನುಮತಿಯನ್ನೂ ಇದಕ್ಕೆ ಪಡೆಯುವಲ್ಲಿ ಸಮರ್ಥರಾದ ಪಟೇಲ್, ಗಾಂಧೀಜಿಯವರನ್ನೂ ಮನವೊಲಿಸಿರುವುದು ಈಗ ಇತಿಹಾಸ. ಆದರೆ 1950ರಲ್ಲಿ ಪಟೇಲ್ ನಿಧನರಾದರು. ಈ ಹಂತದಲ್ಲಿ ಚಿಂತಕರ ಚಾವಡಿ ಎಂದು ಕರೆಸಿಕೊಳ್ಳುವವರಿಂದ ಒಂದಿಷ್ಟು ವಿರೋಧ ಎದುರಾಯಿತು. ಆದರೆ, ಪಟೇಲ್ ಕನಸನ್ನು ಕೇಂದ್ರ ಸಚಿವರಾಗಿದ್ದ ಕೆ. ಎಂ. ಮುನ್ಶಿಯವರು ಸಾಕಾರಗೊಳಿಸಲು ದೃಢ ಸಂಕಲ್ಪ ಮಾಡಿ ಅದರಲ್ಲಿ ಯಶಸ್ವಿಯಾದರು. ಈಗ ಎಲ್. ಕೆ. ಅಡ್ವಾಣಿಯವರ ವಿಷಯಕ್ಕೆ ಬರೋಣ. ಸೋಮನಾಥ ದೇವಾಲಯದ ಮಾದರಿಯಲ್ಲಿ ಈ ಪ್ರಕರಣವಲ್ಲ. ಬದಲಾಗಿ ನ್ಯಾಯಾಲಯದ ಮೆಟ್ಟಿಲೇರಿದ ವಿವಾದ ಇದು. ಆದಾಗ್ಯೂ, ರಾಮ ರಥಯಾತ್ರೆಯ ಮೂಲಕ ದೇಶಾದ್ಯಂತ ಸಂಚಲನ ಮೂಡಿಸುವಲ್ಲಿ ಎಲ್. ಕೆ. ಅಡ್ವಾಣಿ ಯಶಸ್ವಿಯಾದರು. ಪ್ರಖರ ಭಾಷಣಗಳ ಮೂಲಕ ಜನರಲ್ಲಿ ರಾಮ ಭಕ್ತಿಯನ್ನು ಉದ್ಧೀಪನಗೊಳಿಸಿ ಅವರನ್ನು ರಾಮ ಮಂದಿರ ನಿರ್ಮಾಣದ ಆಂದೋಲನದಲ್ಲಿ ಭಾಗಿಯಾಗುವಂತೆ ಮಾಡಿದರು. ಈಗೇನೋ ರಾಮ ಮಂದಿರ ನಿರ್ಮಾಣ ಸಾಕಾರವಾಗುತ್ತಿದೆ. ತಮ್ಮ ಮೈ ಲೈಫ್ ಮೈ ನೇಶನ್ ಪುಸ್ತಕದಲ್ಲಿ ಅವರು ಬರೆದಂತೆ ಸೋಮನಾಥ ದೇವಾಲಯದ ಪುನರುತ್ಥಾನದ ರೀತಿಯಲ್ಲೇ ಅಯೋಧ್ಯೆಯು ಹಿಂದೂಗಳ ಆಸ್ಮಿತೆಯ ಬಹುದೊಡ್ಡ ಸಂಕೇತ. ಇದಕ್ಕಾಗಿಯೇ ರಾಮ ರಥಯಾತ್ರೆಯನ್ನು ಸೋಮನಾಥದಿಂದಲೇ ಆರಂಭಿಸಿದೆ. ಆದರೆ ಒಂದು ಕಾಲದ ಫೈರ್ ಬ್ರಾಂಡ್ ನಾಯಕ ಈಗ ಅಧಿಕಾರದಲ್ಲಿದಲ್ಲಿಲ್ಲ. | | |