ರಾಮ ಜನ್ಮಭೂಮಿ ಇತಿಹಾಸವನ್ನು ಕೆದಕುತ್ತಾ ಹೋದರೆ ಹತ್ತು ಹಲವು ಕುತೂಹಲಕಾರಿ ವಿದ್ಯಮಾನಗಳು ಸಿಗುತ್ತಲೇ ಹೋಗುತ್ತವೆ. ಇವುಗಳ ಪೈಕಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಮ ಮಂದಿರಕ್ಕಿರುವ ಸಂಬಂಧವೂ ಒಂದು.
ಅಯೋಧ್ಯೆಯಿಂದ ಪೂರ್ವಕ್ಕೆ 137 ಕಿ.ಮೀ. ದೂರದಲ್ಲಿರುವ ಗೋರಖ್ ನಾಥ ಮಠ, ರಾಮಂದಿರ ನಿರ್ಮಾಣಕ್ಕೆ ಬ್ರಿಟಿಷರ ಆಡಳಿತ ಕಾಲದಲ್ಲೇ ಜನರನ್ನು ಸಂಘಟಿಸಲು ಆರಂಭಿಸಿತ್ತು. ಮಠದ ಮೂವರು ಮಹಾಂತರಾದ ದಿಗ್ವಿಜಯ ನಾಥ್, ಅವೈದ್ಯನಾಥ್ ಮತ್ತು ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್ ಮಂದಿರ ನಿರ್ಮಾಣ ಆಂದೋಲನದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈಗ ಯೋಗಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಸಂದರ್ಭದಲ್ಲೇ ಮಂದಿರಕ್ಕೆ ಶಿಲಾನ್ಯಾಸ. ಇದನ್ನೇ ಶ್ರೀರಾಮ ಕೃಪೆ ಎನ್ನಬಹುದೇ ?
1935ರಲ್ಲಿ ಗೋರಖ್ ನಾಥ ಮಠದ ಆಗಿನ ಮಹಾಂತರಾಗಿದ್ದ ದಿಗ್ವಿಜಯ ನಾಥ್, ಹಿಂದೂ ಮಹಾಸಭಾವನ್ನು ಸೇರಿ ಮಂದಿರ ನಿರ್ಮಾಣಕ್ಕಾಗಿ ಹಿಂದೂಗಳನ್ನು ಒಗ್ಗೂಡಿಸಲು ಆರಂಭಿಸಿದ್ದರು. 1949ರಲ್ಲಿ ಆಗ ಬರ್ಲಾಪುರದ ರಾಜನಾಗಿದ್ದ ಪಟೇಶ್ವರಿ ಪ್ರಸಾದ್ ಸಿಂಗ್ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಸ್ವಯಂ ಸೇವಕರ ನಿಯೋಗದೊಂದಿಗೆ ಭೇಟಿಯಾಗಿದ್ದರು. ಆದೇ ಸಂದರ್ಭದಲ್ಲೇ ಅಖಿಲ ಭಾರತೀಯ ರಾಮ ರಾಜ್ಯ ಪರಿಷತ್ ಪಕ್ಷ ಹುಟ್ಟಿಕೊಂಡಿತು.
ಅದೇ ವರ್ಷದ ಡಿ. 22-23 ರಾತ್ರಿ ವಿವಾದಿತ ಸ್ಥಳದಲ್ಲಿ ರಾಮಲಲ್ಲಾನ ವಿಗ್ರಹ ಕಾಣಿಸಿಕೊಂಡಿತು. ಅಂದು ದಿಗ್ವಿಜಯ ನಾಥ್ ಅಯೋಧ್ಯೆಯಲ್ಲೇ ಇದ್ದರು. ರಾಮ ಭಜನೆ ಮಾಡುವಂತೆ ಅವರು ತಮ್ಮೊಂದಿಗೆ ಬಂದಿದ್ದ ನಿಯೋಗ ಸದಸ್ಯರಿಗೆ ನಿರ್ದೇಶನ ನೀಡಿದ್ದರು. 1969ರಲ್ಲಿ ತಾವು ಸಾಯುವವರೆಗೂ ರಾಮ ಜನ್ಮಭೂಮಿ ಆಂದೋಲನ ಕಿಚ್ಚು ಆರದಂತೆ ನೋಡಿಕೊಂಡಿದ್ದರು ದಿಗ್ವಿಜಯ ನಾಥ್.
ಬಳಿಕ ಮಹಾಂತ ಪಟ್ಟವೇರಿದ ಅವೈದ್ಯನಾಥ್, ಆಂದೋಲನಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು. ಶ್ರೀ ರಾಮ ಜನ್ಮಭೂಮಿ ಮುಕ್ತಿ ಯಜ್ಞ ಸಮಿತಿ ಸ್ಥಾಪಿಸುವ ಮೂಲಕ ಹಿಂದೂ ಸಂಘಟನೆಗಳು, ಸಾಧು-ಸಂತರ ಒಕ್ಕೂಟಗಳನ್ನು ಒಂದೇ ವೇದಿಕೆಯಲ್ಲಿ ತಂದರು. ಮಂದಿರ ನಿರ್ಮಾಣಕ್ಕಾಗಿ ಬಿಹಾರದಿಂದ ಅಯೋಧ್ಯೆಗೆ ಬೃಹತ್ ಜಾಥಾವನ್ನು ಕೂಡ ಸಂಘಟಿಸಿದ್ದರು. 1986ರಲ್ಲಿ ವಿವಾದ ಕಟ್ಟಡದ ಬೀಗ ತೆರೆಯಲು ಫೈಜಾಬಾದ್ ಜಿಲ್ಲಾಡಳಿತ ಅನುವು ಮಾಡಿಕೊಟ್ಟ ದಿನವಾದ ಫೆ. 1ರಂದು ಅವೈದ್ಯನಾಥ್ ಕೂಡ ಅಯೋಧ್ಯೆಯಲ್ಲಿ ಹಾಜರಿದ್ದರು. 1989ರ ನವೆಂಬರ್ 9ರಂದು ಅಯೋಧ್ಯೆಯಲ್ಲಿ ಮಂದಿರದ ಶಿಲಾನ್ಯಾಸದ ಘೋಷಣೆಯನ್ನು ಕೂಡ ಮಾಡಿದವರು ಅವರೇ. ಬಳಿಕ ಉ.ಪ್ರ.ದ ಆಗಿನ ಮುಖ್ಯಮಂತ್ರಿ ನಾರಾಯಣ ದತ್ತ ತಿವಾರಿಯವರ ಮನವಿಯ ಮೇರೆಗೆ ಕಾರ್ಯಕ್ರಮವನ್ನು ಮುಂದೂಡಿದರೂ, ಮುಂದೆ ದೆಹಲಿಯಲ್ಲಿ ಆಗಿನ ಪ್ರಧಾನಿ ಪಿ. ವಿ. ನರಸಿಂಹ ರಾವ್ ಅವರನ್ನು ಭೇಟಿಯಾಗಿ ಮಂದಿರ ನಿರ್ಮಾಣಕ್ಕೆ ಮುಂದಾಗುವಂತೆ ಒತ್ತಡ ಹೇರಿದರು.
ಬಳಿಕದ ಸರದಿ ಯೋಗಿ ಆದಿತ್ಯನಾಥ್ ಅವರದ್ದು. ಅಜಯ್ ಸಿಂಗ್ ಭಿಶ್ಟ್ ಹೆಸರಿನ ಯುವ ಪದವೀಧರ 1992ರಲ್ಲಿ ಗೋರಖನಾಥ ಮಠಕ್ಕೆ ಭೇಟಿ ನೀಡುತ್ತಾನೆ. ಅವೈಧ್ಯನಾಥರ ಜತೆ ನಡೆಸಿದ ಮಾತುಕತೆಯಿಂದ ಪ್ರಭಾವಿತರಾಗಿ ಸನ್ಯಾಸಿಯಾಗಿ ಯೋಗಿ ಆದಿತ್ಯನಾಥ್ ಆಗುತ್ತಾರೆ. ರಾಮ ಮಂದಿರ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಯುವ ಸನ್ಯಾಸಿ, ಸಾಧು-ಸಂತರು, ಹಿಂದೂ ಸಂಘಟನೆಗಳ ಮುಖ್ಯಸ್ಥರ ಜತೆ ನಿರಂತರವಾಗಿ ಸಭೆ ನಡೆಸಿದರು. ಇವರ ಸಾಮರ್ಥ್ಯವನ್ನು ಕಂಡ ಅವೈದ್ಯನಾಥ್ 1996ರಲ್ಲಿ ತನ್ನ ಉತ್ತರಾಧಿಕಾರಿಯಾಗಿ ನೇಮಿಸುತ್ತಾರೆ.
ಆ ಸಂದರ್ಭದಲ್ಲಿ ಉತ್ತರ ಪ್ರದೇಶದ ಬಹುತೇಕ ಭಾಗಗಳಲ್ಲಿ ಆಂದೋಲನ ಕಾವು ಕಳೆದುಕೊಳ್ಳಲಾರಂಭಿಸಿತ್ತು. ಇದರ ಸೂಚನೆ ಸಿಕ್ಕ ಯೋಗಿ, 970 ಹಿಂದೂ ಸಂಘಟನೆಗಳು, 10,000 ಸಾಧುಗಳ ಬೃಹತ್ ಸಭೆ ನಡೆಸಿದರು. ವಿಶ್ವ ಹಿಂದೂ ಪರಿಷತ್ ನ ಆಗಿನ ಅಧ್ಯಕ್ಷರಾಗಿದ್ದ ಅಶೋಕ್ ಸಿಂಘಾಲ್ ಕೂಡ ಇದರಲ್ಲಿ ಭಾಗವಹಿಸಿದ್ದರು. ಬಳಿಕ ರಾಜಕಾರಣ ಪ್ರವೇಶಿಸಿ, ನಾಲ್ಕು ಬಾರಿ ಸಂಸದರಾದರು. ಈ ಮೂಲಕ ಅಯೋಧ್ಯೆ ಆಂದೋಲನಕ್ಕೆ ಹೊಸ ರೂಪ ನೀಡಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ.
ಒಟ್ಟಿನಲ್ಲಿ ವಿವಾದಿತ ಸ್ಥಳದಲ್ಲಿ ರಾಮಲಲ್ಲಾ ವಿಗ್ರಹ ಪ್ರತ್ಯಕ್ಷವಾಗುವಾಗ ಗೋರಖ್ ನಾಥ ಮಠದ ಆಗಿನ ಮುಖ್ಯಸ್ಥ ಮಹಾಂತ ದಿಗ್ವಿಜಯ ನಾಥ್ ಅಯೋಧ್ಯೆಯಲ್ಲಿದ್ದರೆ, ವಿವಾದ ಸ್ಥಳದ ಗೇಟ್ ತೆರೆಯುವ ಸಂದರ್ಭದಲ್ಲಿ ಅವೈದ್ಯನಾಥ್ ರಾಮ ಜನ್ಮಭೂಮಿಯಲ್ಲಿದ್ದರು. ಈಗ ಶಿಲಾನ್ಯಾಸ ಸಂದರ್ಭದಲ್ಲಿ ಅದೇ ಮಠದ ಮುಖ್ಯಸ್ಥರಾಗಿರುವ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ !