ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ಕುರಿತಂತೆ ಭವಿಷ್ಯದಲ್ಲಿ ಯಾವುದೇ ವಿವಾದ ಎದುರಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕ್ರಮ ಕೈಗೊಂಡಿದೆ. ಇದರ ಅಂಗವಾಗಿಯೇ ಇಡೀ ವಿಷಯದ ಕುರಿತು ಸಮಗ್ರ ವಿವರ ಇರುವ ತಾಮ್ರ ಫಲಕವನ್ನು ಜನ್ಮಭೂಮಿ ಆವರಣದಲ್ಲಿ ಎರಡು ಸಾವಿರ ಅಡಿಗಳ ಆಳದಲ್ಲಿ ಹುದುಗಿಸಿಡಲು ಅದು ತೀರ್ಮಾನಿಸಿದೆ. ಈ ವಿಷಯವನ್ನು ಟ್ರಸ್ಟ್ ನ ಸದಸ್ಯ ಕಾಮೇಶ್ವರ ಚೌಪಾಲ್ ತಿಳಿಸಿದ್ದಾರೆ.
ಜನ್ಮಭೂಮಿಯ ಕುರಿತ ಐತಿಹಾಸಿಕ ಅಂಶಗಳು ಈ ತಾಮ್ರದ ಫಲಕದಲ್ಲಿ ಇರಲಿವೆ. ರಾಮ ಜನ್ಮಭೂಮಿ ಕುರಿತ ಸುದೀರ್ಘ ಆಂದೋಲನ, ನ್ಯಾಯಾಲಯದಲ್ಲಿ ನಡೆದ ಹೋರಾಟ, ಸುಪ್ರೀಂ ಕೋರ್ಟ್ ತೀರ್ಪು ಇತ್ಯಾದಿ ವಿವರಗಳನ್ನು ಭವಿಷ್ಯದ ಪೀಳಿಗೆಗೆ ತಿಳಿಸುವ ಉದ್ದೇಶ ಇದರ ಹಿಂದಿದೆ. ಜತೆಗೆ ಮುಂದೇನಾದರೂ ವಿವಾದ ಮತ್ತೆ ಸೃಷ್ಟಿಯಾದರೂ ಅದರ ಪರಿಹಾರಕ್ಕೆ ಈ ತಾಮ್ರ ಶಾಸನ-ಫಲಕ ನೆರವಾಗಲಿದೆ ಎಂದು ಚೌಪಾಲ್ ಹೇಳಿದ್ದಾರೆ.
ಭವಿಷ್ಯದಲ್ಲಿ ಯಾರೊಬ್ಬರೂ ಶ್ರೀ ರಾಮ ಮಂದಿರ ನಿರ್ಮಾಣದ ಇತಿಹಾಸವನ್ನು ಅಧ್ಯಯನ ಮಾಡಲು ಇಚ್ಚೆ ಪಟ್ಟರೆ ಆಗ ಶಾಸನದ ಮೂಲಕ ಸಂಪೂರ್ಣ ಮಾಹಿತಿ ಸಿಗಲಿದೆ. ಆ ಮೂಲಕ ಮತ್ತೊಂದು ವಿವಾದ ಸೃಷ್ಟಿಯಾಗುವ ಸಾಧ್ಯತೆಯಿಲ್ಲ ಎಂದವರು ಹೇಳಿದ್ದಾರೆ.
ಇದೊಂದು ರೀತಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮುಂದೆ ಬರುವ ಕಂಟಕವನ್ನು ಅಥವಾ ನಿರ್ಮಾಣದ ಬಳಿಕ ಎದುರಾಗಬಹುದಾದ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ತೆಗೆದುಕೊಂಡ ಮುಂಜಾಗ್ರತಾ ಕ್ರಮವೆಂದೇ ಪರಿಗಣಿಸಲಾಗುತ್ತಿದೆ. ಮುಂದೆ ವಿವಾದ ಮತ್ತೆ ಭುಗಿಲೆದ್ದರೆ ತಾಮ್ರ ಶಾಸನವೇ ಅತಿ ಮುಖ್ಯ ಸಾಕ್ಷಿಯಾಗಿ ಪರಿಗಣಿತವಾಗಲಿದ್ದು, ಅದನ್ನು ಅವಲಂಬಿಸಿಯೇ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇದರಲ್ಲಿ ಅಯೋಧ್ಯಾ, ಭಗವಾನ್ ಶ್ರೀರಾಮನ ಕುರಿತ ವಿವರಗಳಿರುತ್ತವೆ. ನಾನಾ ತಜ್ಞರನ್ನು ಸಂಪರ್ಕಿಸಿ ಅವರು ನೀಡುವ ಮಾಹಿತಿಯನ್ನು ಆಧರಿಸಿ, ಅಂತಿಮವಾಗಿ ಕನಿಷ್ಠ ಪದಗಳಲ್ಲಿ ಅದನ್ನು ವಿವರಿಸಲಾಗುತ್ತದೆ. ಸುಮಾರು ನೂರು ವರ್ಷಗಳಿಂದಲೇ ಇಂತಹ ಪ್ರಯತ್ನ ನಡೆದಿದ್ದು, ಈಗ ಮಂದಿರ ನಿರ್ಮಾಣ ಸಾಕಾರವಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಾಮ್ರ ಫಲಕದಲ್ಲಿ ಅಕ್ಷರ ರೂಪಕ್ಕೆ ಇಳಿಸಲಾಗುತ್ತಿದೆ.
Good information.