ಕೇಳು ಜನಮೇಜಯ ರಾಜ ಧರಿತ್ರೀ ಪಾಲ ……. ಅಂತ ನಮ್ಮ ತಾತ ಬೆಳಗಿನ ಜಾವದ ಒಂದು ಹೊತ್ತಿನಲ್ಲಿ ರಾಗದಲ್ಲಿ ಹಾಡಲು ಶುರು ಮಾಡಿದನೆಂದರೆ, ಓಣಿಯ ಜನರೆಲ್ಲ ರಾಮಜ್ಜನಿಗೆ ರಾತ್ರಿಯೆಲ್ಲಾ ನಿದ್ದೆ ಬಂದಿಲ್ಲ ಬಿಡು ಅಂತ ಮಾತಾಡ್ತಾ ಮತ್ತೆ ಧ್ವನಿ ಕೇಳಿಸದ ಹಾಗೆ ಹೊದಿಕೆ ಹೊದ್ದು,ಮೊಗ್ಗಲು ಬದಲಿಸಿ ಮಲಗುತ್ತಿದ್ದರು. ಹರೆಯದ ಜೋಡಿಗಳನ್ನು ಬಿಟ್ಟರೆ,ಊರೆಲ್ಲ ಮಲಗುತ್ತಿದ್ದುದು ಅವರವರ ಮನೆಯ ಕಟ್ಟೆಗಳ ಮೇಲೆಯೇ…ಅದಕ್ಕೆ ನಮ್ಮ ಕಡೆಯ ಒಣ ಹವೆಯ ವಾತಾವರಣವೂ ಒಂದು ಕಾರಣ. ಓಣಿಗಳೆಂದರೆ ಅಳೆ ದರೆ ಆರು ಅಡಿಗಳು. ನಮ್ಮಜ್ಜಿಗಂತೂ ನಮ್ಮಜ್ಜನಿಂದ ಸಾಕಾಗಿಹೋಗಿತ್ತು ಅಂತ ಮತ್ತೆ ಹೇಳುವುದೇ ಬೇಡ. ಪೌರಾಣಿಕ ಹಿನ್ನೆಲೆಯುಳ್ಳ, ಪಂಪ ಭಾರತದ, ವಾಲ್ಮೀಕಿ ರಾಮಾಯಣದ ಸಾಲುಗಳನ್ನು, ಸೀಸ,ಕಂದ ಪದ್ಯಗಳನ್ನು ಹಳೆಗನ್ನಡಲ್ಲಿರುತ್ತಿದ್ದ ಇನ್ನು ಹಲವಾರು ಪದ್ಯ,ಗದ್ಯಗಳನ್ನು ರಾಗವಾಗಿ ಹಾಡುವುದು ನೋಡಿ,ಮನೆಯವರೂ,ಓಣಿಯವರೂ ಬೇಸರಿಸಿದರೆ ನನಗೆ ಆಶ್ಚರ್ಯ!
ತಾತಾ ನೀನೆಷ್ಟರ ವರೆಗೆ ಓದಿದ್ದಿಯಾ ಅಂತ ಕೇಳಿದರೆ, ಮೂರನೇ ತರಗತಿ ಅಂತ ಕೈಯ ಮೂರು ಬೆರಳುಗಳನ್ನು ತೋರಿಸುತ್ತಾ ಒಂದು ಥರಾ ನಗುತ್ತಿದ್ದರು. ಆ ನಗು ಹೇಗಿರುತ್ತಿತ್ತು ಅಂದ್ರೆ, ನೀವೆಲ್ಲ ಈಗ ಓದೋ ಹತ್ತಿಪ್ಪತ್ತು ವರ್ಷದ್ದು ಕೆಲಸಕ್ಕೆ ಬಾರದ್ದು ಅನ್ನುವ ರೀತಿಯಲ್ಲಿ ಇರುತ್ತಿತ್ತು. ಇಂಗ್ಲಿಷ್ ಬರ್ತಿರಲಿಲ್ಲ, ಸ್ವಚ್ಚ ಕನ್ನಡ ಓದಲು,ಬರೆಯಲು ಬರುತ್ತಿತ್ತು. ಹಾಗಾಗಿ ಏನೋ ಅಪ್ಪನನ್ನು ನಮ್ಮೂರಿನಿಂದ ಸುಮಾರು 100 ಕಿ.ಮೀ ದೂರ ಇರುವ ಜಗಳೂರಲ್ಲಿ (ಇದೇ ಹತ್ತಿರದ ಹೈಸ್ಕೂಲ್ ಅಂತೆ ಆಗ!) ಆಗ್ಗೇ ಸೈಕಲ್ ಮೇಲೆಯೇ ಕೂಡಿಸಿಕೊಂಡು ಹೋಗಿ ಮೆಟ್ರಿಕ್ ಮಾಡಿಸಿದ್ದರು.
ತಾತನ ಬಹು ಇಷ್ಟವಾದ ವಸ್ತುಗಳೆಂದರೆ ಈ ಕೂದಲು ಕತ್ತರಿಸಲು ಮತ್ತು ಗಡ್ಡ ತೆಗೆಯಲು ಬೇಕಾದ ಪರಿಕಗಳ ಒಂದು ಪೆಟ್ಟಿಗೆ ಮತ್ತು ಒಂದು ಹಳೆಯ ಸೈಕಲ್. ಮುಂದೆ ಒಂದು ಕನ್ನಡಿ ಇಟ್ಟುಕೊಂಡು ಕೂದಲು ಕತ್ತರಿಸುತ್ತ ಕುಳಿತ ನನ್ನ ತಾತನನ್ನು ಆಗಾಗ ಮಾತಾಡಿಸುವುದು ನನ್ನ ಬಲು ನೆಚ್ಚಿನ ಹವ್ಯಾಸ ಆಗ. ತನ್ನ ಯವ್ವನದ ದಿನಗಳನ್ನು,ಅಪ್ಪನ ಬಾಲ್ಯದ ದಿನಗಳನ್ನು ತಾತನಿಂದ ಅಜ್ಜಿಯ ಹತ್ತಿರ ಕುಳಿತು ಕೇಳುವ ಸಂಭ್ರಮವೇ ಮುದ ನೀಡುತ್ತಿತ್ತು. ತಾತನ ಹರಕತ್ತುಗಳಿಂದ ದರಿದ್ರದ ಅಂಚಿಗೆ ಬಂದಿದ್ದ ವಿಷಯ ಅಜ್ಜಿ ಹೇಳುತ್ತಿದ್ದರು ಬಿಟ್ಟರೆ,ತಾತ ಒಂದು ದಿನವೂ ಹೇಳಲಿಲ್ಲ. ಹಾಗೆ ಸೈಕಲ್ ವಿಷಯ ತೆಗೆದುಬಿಟ್ಟರೆ,ತಾತ ನನ್ನ ಜೊತೆ ಹುಡುಗನಾಗಿ ಸಂಭ್ರಮಿಸುತ್ತ ಹೇಳುವ ಯಶೋಗಾಥೆಗಳು ಒಂದೆರಡಲ್ಲ.
ಅಯ್ಯೋ ಈ ಮುರುಕಲು ಸೈಕಲ್ಲದು ಏನು ಕೇಳ್ತೀಯಾ ನನ್ನ ಕುದುರೆ ಲಕ್ಷ್ಮಿ ಅದು ಕೇಳು. ಅದನ್ನ ಈಗ ನಿನ್ನಪ್ಪ ಹೊಸಮನೆ ಅಂತ ಬಸ್ಟ್ಯಾಂಡ್ ಹತ್ತಿರ ಕಟ್ಟಿಸಿಕೊಂಡು ಇದಾನಲ್ಲ,ಅಲ್ಲಿ ನಡುಮನೆಯ ಕಂಬಗಳ ಹತ್ತಿರವೇ ಅದನ್ನು ಹೂಳಿಟ್ಟಿ ರೋದು. ಅದು ಸತ್ತ ನಂತರ ಹುಟ್ಟಿದ ನಿಮ್ಮ ದೊಡ್ಡ ಅತ್ತೆಗೆ(ಗುಡೆಕೋಟೆ ಹನುಮೇಗೌಡರ ಧರ್ಮಪತ್ನಿ) ಅದೇ ಹೆಸರು ಇಟ್ಟಿವಿ. (ನಮ್ಮ ಮನೆಗಳಲ್ಲಿ ದುಡಿದು ಸತ್ತ ಎತ್ತುಗಳಿಗೂ ನಮ್ಮ ಹೊಲಗಳಲ್ಲೇ ಹೂಳಿಟ್ಟಿರುವುದು) ಕೇಳು ಅಂತ ಶುರು ಮಾಡಿದ್ರು ಅಂದ್ರೆ,ನಾನು,ತಾತ ಬೇರೆ ಲೋಕದಲ್ಲಿರುತ್ತಿದ್ದೆವು.
ಒಂದು ಸಾರಿ ಏನಾಯ್ತು ಅಂದ್ರೆ ಹೂಲೆಪ್ಪನ(ಹುಲಿಕುಂಟೆರಾಯನ) ಜಾತ್ರೆಗೆ ಹೆಂಡದ ಅಂಗಡಿ ಹಾಕಿದ್ವಾ, ಒಬ್ಬ ಬ್ರಿಟಿಷನವನು, ಅಮಾಲ್ಡಾರ ಜಕಾತಿಗೆ ಅಂತ ಬಂದವನು ಹೆಂಡದ ಗಡಿಗೆಯನ್ನು ಇದು ತುಂಬಿದ್ಯಾ,ಇದು ಖಾಲಿ ಆಗಿದ್ಯಾ ಅಂತ ಲೆಕ್ಕ ಕೇಳುತ್ತ ಬೂಟಿನ ಕಾಲಿನಿಂದ ತುಂಬಿದ ಗಡಿಗೆಯನ್ನು ತಾಕಿಸಿಬಿಟ್ಟ. ಅದೆಲ್ಲಿತ್ತೋ ಸಿಟ್ಟು ನನಗೆ ನೆತ್ತಿಗೇರಿ, ಗಲ್ಲದಿಂದ ಎದ್ದು ಬಂದವನೇ ಅವನನ್ನು ಕೆಡವಿಕೊಂಡು ನಮ್ಮ ಅಮ್ಮನ್ನ ಬೂಟು ಕಾಲಿನಿಂದ ಒದ್ದೆಯಲ್ಲಲೇ ನಾಯಿ ಅಂತ ಚಪ್ಪಲಿ ಕಾಲಿನಿಂದ ಒದ್ದು ಬಿಟ್ಟೆ. ಜಾತ್ರೆಯ ಜನ ನೋಡ್ತಿದ್ದರು. ಅವನನ್ನು ಬಿಡಿಸಿಕೊಳ್ಳುವವರೇ ಇರಲಿಲ್ಲ. ಅಲ್ಲಿಯ ತನಕ ವಸೂಲಿ ಮಾಡಿದ್ದ ಜಕಾತಿ ದುಡ್ಡು ಅಲ್ಲಿ,ಇಲ್ಲಿ ಬಿತ್ತು. ಅವನಿಗೆ ಜೀವ ಉಳಿದರೆ ಸಾಕು ಅಂತ ಓಡಿ ಹೋದ….ಅಂತ ಮೀಸೆ ಮೇಲೆ ಕೈ ಇಟ್ಟು ಹೇಳುತ್ತಿದ್ದರೆ,ನನಗೆ ಸ್ವಾತಂತ್ರ ವೀರನ ಮುಂದೆ ಕುಳಿತ ಅನುಭವ.
ಅಷ್ಟರಲ್ಲೇ ಅಜ್ಜಿ ಮುಂದಕ್ಕೆ ಹೇಳು ಅಲ್ಲೇ ನಗಬೇಡ ಅಂದಮೇಲೆ, ಸಾಯಂಕಾಲ ನಿಮ್ಮ ಪಕ್ಕೀರಪ್ಪ ತಾತ ಬಂದು ಸರೀ ಬೈದು,ಊರಲ್ಲಿರಬೇಡ, ಅವರು ಸುಮ್ಮನಿರಲ್ಲ, ನಾನು ಸಂಭಾಳಿಸುತ್ತೇನೆ ಅಂತ ಹೇಳಿದರು. ನಾನು ಗಿಡಗಳ ಮೇಲೆ ಅಂತ ಅಡವಿ ಸುತ್ತುತ್ತಾ ಇದ್ದೆ. ಎರಡು ದಿನ ಆಗಿರಬಹುದು, ಗುಳ್ಳೆ ಲಕ್ಕಮ್ಮನ ಹಳ್ಳದ ಹತ್ತಿರ ಕುದುರೆ ಬಿಟ್ಟುಕೊಂಡು ಹಾಗೇ ಮಲಗಿದ್ದೆ. ಸಾಯಂಕಾಲ ಆಗಿತ್ತು. ಬೇರೆ ಕುದುರೆ ಕೆನೆಯುವುದು ಕೇಳಿ ತಿರುಗಿ ನೋಡಿದೆ. ಒಬ್ಬ ಬ್ರಿಟಿಷಿನವನ ಕುದುರೆ ಹಳ್ಳ ದಾಟದೆ ಒದರುತ್ತಿತ್ತು. ಅವನು ಇಳಿದು ನೀರಲ್ಲಿ ಬರಲು ಒಪ್ಪುತ್ತಿಲ್ಲ,ಕುದುರೆ ದಾಟಲು ಒಪ್ಪುತ್ತಿಲ್ಲ…ನನಗೆ ನೋಡಿ ನಗು ಬಂತು. ನಕ್ಕ ನನ್ನನ್ನು ಕರೆದು, ನಿಂದೋ ಆ ಕುದುರೆ, ನಗ್ತಿಯಲ್ಲ, ಹಾರಿಸು ಈ ಹಳ್ಳವನ್ನ ನೋಡ್ತೀನಿ ಅಂದ. ಲಕ್ಷ್ಮೀ ಅಂದೆ, ಎಗರುತ್ತ ಬಂತು ನೋಡು ನನ್ನ ಕುದುರೆ,ಹಾಗೇ ಎಗರಿ ಕುಳಿತು,ಒಂದುಸಾರಿ ಕಾಲಿನಿಂದ ಅದರ ಹೊಟ್ಟೆ ಭಾಗಕ್ಕೆ ಮೆಲ್ಲಗೆ ಸವರಿ,ಹ ಹಾ ಎಂದೆ. ಹಿಂದಕ್ಕೆ ಎರಡು ಹೆಜ್ಜೆ ಇಟ್ಟ ನನ್ನ ಕುದುರೆ,ಒಮ್ಮೆಲೇ ಕೆನೆಯುತ್ತ ಒಂದೇ ಜಿಗಿತಕ್ಕೆ ಹಳ್ಳವನ್ನ ಜಿಗಿದಾಗ ಆ ಕೆಂಪು ಮೂತಿ ನೋಡಬೇಕಿತ್ತು ಅಂತ ತಾತನ ವಿಜಯದ ನಗೆ ನನ್ನಲ್ಲಿ ಭಯಂಕರ ಕುತೂಹಲ ಹುಟ್ಟಿಸುತ್ತಿತ್ತು. ಆಮೇಲೆ ಅಂದ ನನಗೆ, ಇನ್ನೇನು ಇಳಿದು, ಬೂಟುಕಾಲಿನಲ್ಲಿ ನೀರಲ್ಲಿ ನೆನಸಿಕೊಂಡು ನನ್ನ ಹತ್ತಿರ ಬಂದ. ತೆಗೆದು ಬೀಡಿ ಕೊಟ್ಟೆ. ಸೇದಿಕೊಳ್ತಾ ಏನು ಈ ಕಡೆ ಬರ್ತಿರೋದು ಅಂದೆ. ಬೊಮ್ಮಘಟ್ಟದಲ್ಲಿ ಈಡಿಗರ ಪಕ್ಕಿರಪ್ಪನ ಮಗ ರಾಮಪ್ಪ ಅಂತ ಒಬ್ಬ ಇದ್ದಾನಂತೆ,ಅವನು ನಮ್ಮ ಅಮಾಲ್ಡಾರ ನನ್ನು ಹೊಡೆದು,ಹಣ ಕಿತ್ತುಕೊಂಡಿದ್ದಾನೆ,ಅದರ ವಿಚಾರಣೆಗೆ ಬಂದಿದ್ದೇನೆ ಅಂದುಬಿಡೋದಾ?!! ಅಂತ ನನ್ನ ಮುಂದೆ ಬೀಡಿ ಹಚ್ಚಿದ ನಮ್ಮ ತಾತ.
ಎರಡು ಧಂ ಎಳೆದು, ನೋಡಪ್ಪಾ,ನೀನ್ಯಾರೋ …ಆದ್ರೆ ಬೊಮ್ಮಘಟ್ಟ ಈಡಿಗರು ಹಾಗೆ ದುಡ್ಡು ಗಿಡ್ಡು ಕಸಕೊಳಲ್ಲ ಬಿಡು,ಅವನು ಸುಳ್ಳು ಹೇಳಿರಬೇಕು ಅಂದೆ. ಸರಿ ಬೊಮ್ಮಘಟ್ಟ ದಾರಿ ಇದೇನಾ ಅಂದ…ಹೂ ಹಿಂಗೆ ಉತ್ತರಕ್ಕೆ ನೆಟ್ಟಗೆ ಹೋಗ್ರಿ ಅಂದೆ. ಬಂದು ನನ್ನ ಕುದುರೆ ನೋಡಿ, ಕೈ ಆಡಿಸಿ ಇಂತಹ ಬಹದ್ದೂರ್ ಕುದುರೆ ಇಟ್ಟಿಯಲ್ಲಾ, ನೀ ಏನು ಮಾಡ್ತಿ ಅಂತ ಕೇಳಿದ. ನಾನು ಈಚಲು ಗಿಡದಿಂದ ಹೆಂಡ ತೆಗೆಸ್ತೀನಿ, ಅಂದೆ. ಶಹಬ್ಬಾಸ್, ನಿನ್ನಂತಹ ಕುದುರೇನ ನಮ್ಮ ಬ್ರಿಟಿಷರ ಕಂಪೆನಿನೂ ನಮ್ಮಂತ ಅಧಿಕಾರಿಗಳಿಗೆ ಕೊಟ್ಟಿಲ್ಲ ನೋಡು, ಸಖತ್ತಾಗಿ ಮೇಯಿಸಿದಿಯ, ನನಗೆ ಖುಷಿ ಆಯ್ತು,ಒಂದು ಸಾರಿ ಸವಾರಿ ಮಾಡ್ಲಾ ಅಂದ…ಏ ಹಂಗೆಲ್ಲ ನನ್ನ ಕುದುರೆ ಬೇರೆ ಯಾವನೂ ಏರಕ್ಕೆ ಬಿಟ್ಟಿಲ್ಲ ಬಿಡ್ರಿ,ನೀವು ಹೋಗ್ರಿ ಬೊಮ್ಮಘಟ್ಟಕ್ಕೆ ಅಂದೆ.
ಮದ್ರಾಸ್ ಪ್ರಾಂತ್ಯದ, ಚಿತ್ರದುರ್ಗ ಜಿಲ್ಲೆಯ, ಮೊಳಕಾಲ್ಮುರು ತಾಲೂಕಿನಲ್ಲಿತ್ತು ನನ್ನೂರು ಆಗ. ಮೊಳಕಾಲ್ಮುರು ಆಗ ಆಡಳಿತ ಕೇಂದ್ರ. ಬ್ರಿಟಿಷರ ಪೊಲೀಸ್,ರೆವೆನ್ಯೂ,ಅಬಕಾರಿ ಎಲ್ಲ ಅಲ್ಲೇ ಇತ್ತಂತೆ. ತಾತನ ಬಾಯಲ್ಲಿ ಚಿತ್ರದುರ್ಗ , ಚಿತ್ಳದುರ್ಗ ಆಗಿರುತ್ತಿತ್ತು. ಹಾಗೆ ಬಂದ ವಿಚಾರಣಾಧಿಕಾರಿಯನ್ನು ಊರ ಶಾನುಭೋಗರನ್ನೊಳಗೊಂಡ ಪಂಚರು ( ಊರ ನ್ಯಾಯಾಧೀಶರು) ಏನೇನೋ ಸಾಬೂಬು ಹೇಳಿ, ಅವನು ಕಳೆದುಕೊಂಡಿದ್ದ ಜಕಾತಿ ಹಣವನ್ನ ನಮ್ಮ ಮುತ್ತಜ್ಜನಿಂದ ಕಟ್ಟಿಸಿಕೊಂಡು ಕಳಿಸಿಕೊಟ್ಟಿದ್ದರಂತೆ, ಪೊಲೀಸ್,ಕೇಸ್ ಅಂತ ಆಗದ ರೀತಿಯಲ್ಲಿ. ನಮ್ಮೂರಲ್ಲಿ ಬಹಳ ದಿನಗಳವರೆಗೆ,ನನ್ನ ನೆನಪಲ್ಲು ಪೊಲೀಸ್,ಕೇಸ್ ಇರುತ್ತಿರಲಿಲ್ಲ. ಊರ ಪ್ರಮುಖರೇ ಎಲ್ಲ ತೀರ್ಮಾನಿಸುತ್ತಿದ್ದರು.
ಸುತ್ತ ಆರೆಂಟು ಹಳ್ಳಿಗಳಲ್ಲಿ ನಮ್ಮೂರಲ್ಲಿ ಬಹಳ ಹಿಂದಿನಿಂದಲೂ ಓದು,ಬರಹ ಎನ್ನುವುದು ಇದೆ. ಹೀಗೆ ಒಂದು ಸಾರಿ ವಿದ್ಯಾಭ್ಯಾಸದ ವಿಷಯ ಬಂದಾಗ …ಏ ಆಗ ಎಲ್ಲ ಶಾಲೆ ಇಲ್ಲಪ್ಪ…ಐನಾರ ಶಾಲೆ ಇತ್ತು, ನಾವೆಲ್ಲ ಮರಳಲ್ಲಿ ಅಕ್ಷರ ಕಲಿತಿದ್ದು, ನಿಮ್ಮಪ್ಪನ ಕಾಲಕ್ಕೆ ದೊಡ್ಡ ಮೇಷ್ಟ್ರ ಗುರುಕುಲದಂತಹ ಶಾಲೆ ಬಂತು. ಮನೆಯಲ್ಲೇ ಇಟ್ಟುಕೊಂಡು ಓದಿಸಿ, 7ನೇ ಕ್ಲಾಸ್ ಪರೀಕ್ಷೆ ಬರೆಯಲು ಮೊಳಕಾಲ್ಮುರಿಗೆ ಅವರೇ ಹುಡುಗರನ್ನು ಕರೆದುಕೊಂಡು ಹೋಗಿ, ವಾರಗಟ್ಟಲೆ ಅಲ್ಲಿದ್ದು ಪರೀಕ್ಷೆ ಬರೆಯಿಸಿ, ಕರೆತರುತ್ತಿದ್ದರು ಅಂತ ಹೇಳುತ್ತಿದ್ದರು.
ಆಗ ನಮ್ಮೂರಲ್ಲಿ 7ನೇ ತರಗತಿ ಪಾಸಾದವರು ಭಯಂಕರ ವಿದ್ಯಾವಂತರು, ಹೈಸ್ಕೂಲ್ ಅಂತ ಅನಂತಪುರ,ಹಿಂದೂಪುರ,ಅಪ್ಪನಂತೆ ಜಗಳೂರಿಗೆ ಹೋದವರು ವಿದೇಶಕ್ಕೆ ಹೋಗಿ ಕಲಿತಂತೆ!ಅಂದು ಸಾಯಂಕಾಲ ದೊಡ್ಡ ಮೇಷ್ಟ್ರ ಮನೆಗೆ ನಾನು ಏನಾದ್ರು ಸಾಮಾನು ಕೊಡಲು ಹೋದಾಗ ಅವರಿಗೆ ಇನ್ನೂ ಹೆಚ್ಚಿನ ಗೌರವದೊಂದಿಗೆ ನಮಸ್ಕಾರ ಮಾಡಿ ಬರ್ತಿದ್ದೆ…ಏನೋ ನಿಮ್ಮಪ್ಪ ಎರಡು ದಿನ ಆಯ್ತು ಬರ್ಲಿಲ್ಲ, ಬರಲು ಹೇಳು ಅಂತ ಅವರ ಮಡದಿ ಸರೋಜಕ್ಕ ಅವಲಕ್ಕಿ,ಬೆಲ್ಲ ಕೊಡ್ತಿದ್ದರು. ನಾನು ತಿಂತಾ ಇದ್ದರೆ, ಮೇಷ್ಟ್ರು ನಿನ್ನೆ ಹೇಳಿಕೊಟ್ಟಿದ್ದ ರಾಮ ರಾಮಾಯ,ರಾಮ ಭದ್ರಾಯ ವೇದಸೆ…. ಪೂರ್ತಿ ಹೇಳು ಕೇಳ್ತೀನಿ ಅಂತಿದ್ರು. ನಾನು ….. ಪತಯೇನ್ನಮಹಾ ಅಂತ ಮುಗಿಸಿಬಿಟ್ಟರೆ, ಸರೋಜಕ್ಕನಿಗೆ ಎಲ್ಲಿಲ್ಲದ ಖುಷಿಯಿಂದ ಕುಡಿಯಲು ನೀರು ಕೊಡ್ತಿದ್ದರು.
ದೊಡ್ಡ ಮೇಷ್ಟ್ರು ಅಂತ ಈಗಲೂ ನಮ್ಮೂರಲ್ಲಿ ಕರೆಯಿಸಿಕೊಳ್ಳುವ ಲಕ್ಷ್ಮೀನಾರಾಯಣಾಚಾರ್ ಗುರುಕುಲವನ್ನಿಟ್ಟುಕೊಂಡು ಜಾತಿ,ಮತಗಳ ಭೇದವಿಲ್ಲದೆ,ಮಕ್ಕಳಿಲ್ಲದ ಅವರು ತನ್ನ ವಿದ್ಯಾರ್ಥಿಗಳನ್ನೇ ಮಕ್ಕಳೆಂದು ಭಾವಿಸಿ ವಿದ್ಯೆಯನ್ನು ಧಾರೆ ಎರೆದವರು. ನನ್ನೂರಲ್ಲಿ ಅವರು ಭಿತ್ತಿದ ಅಕ್ಷರಗಳಿಂದ ನನ್ನನ್ನೂ ಸೇರಿಸಿ ಸಾವಿರ ಸಾವಿರ ಜೀವಿಗಳಿಗೆ ಇಂದಿಗೂ ಅಕ್ಷರ ಸಿಗುತ್ತಿದೆ. ಅಷ್ಟೇ ಅಲ್ಲ, ನಮ್ಮೂರ ಸಂಸ್ಕೃತಿಯೇ ಭಿನ್ನ ಎನ್ನುವ ರೀತಿ ಬುನಾದಿ ಹಾಕಿದ್ದಾರೆ.
ಅಪ್ಪ ಇವರ ಅತ್ಯಂತ ಪ್ರೀತಿಯ ಶಿಷ್ಯರಲ್ಲಿ ಒಬ್ಬರು. ಸಾಯುವ ತನಕ ಅವರ ಸೇವೆಯನ್ನು ಮಗನಿಗಿಂತಲೂ ಹೆಚ್ಚಾಗಿ ಮಾಡಿ, ನನ್ನ ಒಬ್ಬ ತಮ್ಮನಿಗೆ ಲಕ್ಷೀ ನಾರಾಯಣ ಅಂತ ಹೆಸರಿಸಿ, ಅವರು ಬದುಕಿದ್ದ ಅಷ್ಟೂ ದಿನ ಪಿತೃಮಾಸದಲ್ಲಿ ಪಿಂಡ ಪ್ರಧಾನ ಮಾಡಿದ್ದಾರೆ, ಅವರ ಇಚ್ಛೆಯಂತೆ. ಅಷ್ಟೇ ಅಲ್ಲ,ನನಗೂ ಪಾಲಿಸಲು ಹೇಳಿದ್ದಾರೆ. ಅಪ್ಪನಷ್ಟು ಶ್ರದ್ಧೆಯಿಂದ ಮಾಡಲಾಗಲ್ಲ, ನೆನೆಸಿಕೊಂಡು ಹೊಸಬಟ್ಟೆ ಇಡುತ್ತೇನೆ. ಈಗಲೂ ನಮ್ಮ ಮನೆಯಲ್ಲಿ ಅವರ ಫೋಟೋ ದಿನವೂ ಪೂಜೆಗೊಳ್ಳುತ್ತದೆ.
ನಾನು ಊರು ಅಂದ ತಕ್ಷಣ ಮುಗಿಯದ ನೆನಪುಗಳಲ್ಲಿ ಕೊಚ್ಚಿಹೋಗಿಬಿಡುತ್ತೇನೆ…
ಈಗ ಇದೆಲ್ಲ ಏಕೆ ನೆನಪಾಯ್ತು ಅಂದ್ರೆ, ಬ್ರಿಟಿಷರು ನಮ್ಮಲ್ಲಿಯ ಶಿಕ್ಷಣ ಪದ್ದತಿ, ಅದರಲ್ಲಿ ದೇವಾಲಯಗಳ ಪಾತ್ರ ಇವುಗಳ ಬಗ್ಗೆ ಸರ್ ಥಾಮಸ್ ಮನ್ರೋ ಎನ್ನುವ ಮದ್ರಾಸ್ ಪ್ರಾಂತ್ಯದ ಕಲೆಕ್ಟರ್ ನಿಂದ 1826 ರಲ್ಲಿ ಸರ್ವೇ ಮಾಡಿಸಿ ವರದಿ ಕೇಳುತ್ತದೆ. ಆಗ ಸುಮಾರು 1.30 ಕೋಟಿಯಷ್ಟಿದ್ದ ಮದ್ರಾಸ್ ಪ್ರಾಂತ್ಯದ ಜನಸಂಖ್ಯೆಯಲ್ಲಿ, ಸುಮಾರು 28,500 ಅಂದ್ರೆ ಸುಮಾರು ಸಾವಿರಕ್ಕೆ ಒಂದು ಗುರುಕುಲಗಳು,ವಿದ್ಯಾಕೇಂದ್ರಗಳಾಗಿ ಕೆಲಸ ಮಾಡುವ ದೇವಸ್ಥಾನಗಳೂ ಇವೆ. ಇವು ಯಾವ ಸರ್ಕಾರದಿಂದ,ಸಂಘ ಸಂಸ್ಥೆಗಳಿಂದ ನಡೆಯುವುದಿಲ್ಲ,ಬದಲಾಗಿ ದಾನಿಗಳಿಂದ, ಇವಕ್ಕೆ ಅಂತ ಇರುವ ಭೂಮಿಯಿಂದ ನಡೆಯುತ್ತಿವೆ ಅಂತ ಥಾಮಸ್ ಮನ್ರೋ ಕೊಟ್ಟ ದಿ ಬ್ಯುವಟಿಫುಲ್ ಟ್ರೀ ಅಂತ ಹೆಸರಿಟ್ಟ ವರದಿಯನ್ನು ಅಂದಿನ ಬ್ರಿಟಿಷ್ ಸರ್ಕಾರ ಮತ್ತು ಇಂಗ್ಲೆಂಡಿನ ರಾಣಿ ನೋಡಿ ಬೆರಗಾಗಿ ರಹಸ್ಯವಾಗಿ ಇಟ್ಟುಬಿಟ್ಟಿತಂತೆ!
ಅದಕ್ಕೇ ಏನೋ ನಾವು ನಮ್ಮೂರಲ್ಲಿ ಶಾಲೆಯನ್ನು ಶಾಲೆ ಗುಡಿ ಅಂತ ಇವತ್ತಿಗೂ ಕರೆಯುತ್ತಿರುವುದು. ಕಾರ್ಖಾನೆಯಲ್ಲಿ ಕೆಲಸ ಮಾಡುವವರ ಮಕ್ಕಳನ್ನು ಒಂದು ಗೋದಾಮಿನ ರೀತಿ ಇದ್ದ ಕಟ್ಟಡಗಳಲ್ಲಿ ಇಡುವ ವ್ಯವಸ್ಥೆ ಇದ್ದ ಇಂಗ್ಲೆಂಡ್ ನಲ್ಲಿ ಅವುಗಳನ್ನು school ಅಂತ ಆಗ ಕರೆಯುತ್ತಿದ್ದರಂತೆ. ನಮ್ಮಲ್ಲಿ ಆಗಲೇ ಗುರುಕುಲಗಳೂ,ದೇವಸ್ಥಾನಗಳೂ ಸಮಾಜದ ಎಲ್ಲ ವರ್ಗದವರಿಗೂ ವಿದ್ಯೆ ಕೊಡುವ ಕೆಲಸದಲ್ಲಿ ತೊಡಗಿದ್ದ ವ್ಯವಸ್ಥೆ ಕಂಡು ಅವರಿಗೆ ಹೇಗಾಗಿರಬೇಡ ಹೇಳಿ?! ತಾತಾ, ನೀನೇಕೆ ಜಾಸ್ತಿ ಓದಲಿಲ್ಲ ಅಂತ ಕೇಳಿದ್ದ ನನ್ನ ಪ್ರೆಶ್ನೆಗೆ ಅಂದು ಕೊಟ್ಟಿದ್ದ ನನ್ನ ತಾತನ ಉತ್ತರ ಏನು ಗೊತ್ತಾ?….ನಾನೇಕೆ ಜಾಸ್ತಿ ಓದಲಿ, ನನ್ನ ಮನೆ ಕಸುಬಾದ ಹೆಂಡದ ವ್ಯವಹಾರ ಮಾಡಲು ಆಗಿನ ಕಡ್ಡಾಯದ ಮೂರನೇ ತರಗತಿಯ ಶಿಕ್ಷಣ ಸಾಕಾಗುತ್ತಿತ್ತು. ಅಷ್ಟರಲ್ಲಿಯೇ ನಾವು ಮನುಷ್ಯರಾಗಿ ಸಮಾಜದಲ್ಲಿ ಬಾಳಲು ಬೇಕಾದ ಜ್ಞಾನ ಸಿಕ್ತಿತ್ತು. ಜ್ಞಾನದಿಂದಲೇ ಬದುಕಬೇಕೆನ್ನುವರು ಮುಂದೆ ಓದುತ್ತಿದ್ದರು…. ಅಂದಿದ್ದರು.
ಸರ್ ಥಾಮಸ್ ಮನ್ರೋ ವರದಿಯಲ್ಲಿಯೂ ಇದೇ ಅಂಶ ನಮೂದಾಗಿರುವುದು ನನಗೆ ಆಶ್ಚರ್ಯ ತರಿಸಿತು. ಶಾಲೆ ಗಣತಿಯ ಪ್ರತಿಶತ 65 ರಷ್ಟು ಶೂದ್ರರು, ಕಡ್ಡಾಯ ಶಿಕ್ಷಣದ ಮೂರು ವರ್ಷ ಮುಗಿಸಿ,ತಮ್ಮ,ತಮ್ಮ ವೃತ್ತಿಗಳಿಗೆ ತೊಡಗುತ್ತಿದ್ದರು. ಉಳಿದ 35 ಪ್ರತಿಶತ ಮೇಲ್ವರ್ಗ ಎನ್ನಿಸಿಕೊಂಡವರು ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೊಡಗಿಸಿಕೊಳ್ಳುತ್ತಿದ್ದರು ಎನ್ನುವ ಅಂಶ ನನ್ನನ್ನು ಈ ಲೇಖನಕ್ಕೆ ಪ್ರೇರೇಪಿಸಿತು.
ಅಲ್ಲದೆ ಮೊದಲನೇ ದುಂಡು ಮೇಜಿನ ಪರಿಷತ್ತಿನಲ್ಲಿ ಗಾಂಧೀಜಿಯವರು ಈ ವಿಷಯ ಇಂಗ್ಲೆಂಡಿನಲ್ಲೇ ಪ್ರಸ್ತಾಪಿಸಿ, ನೀವು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿ,ನಮ್ಮನ್ನು ಗುಲಾಮರನ್ನಾಗಿ ಮಾಡಿಕೊಂಡಿದ್ದೀರಿ ಎನ್ನುವ ಅಂಶವೂ ಒತ್ತು ನೀಡಿತು.ಇದನ್ನು ನೋಡುವಾಗ ನಮ್ಮ ಶಿಕ್ಷಣದ ವ್ಯವಸ್ಥೆ ಬ್ರಿಟಿಷರಿಗೆ ಹೊಟ್ಟೆಕಿಚ್ಚು ತರಿಸಿತ್ತಾ?ಇದನ್ನೇ ತಮ್ಮ ಒಡೆದು ಆಳುವ ನೀತಿಗೆ ಎಷ್ಟು ಸಮರ್ಥವಾಗಿ ಬಳಸಿಕೊಂಡು ನಮ್ಮನ್ನು ಮೂರ್ಖರನ್ನಾಗಿ ಮಾಡಿಬಿಟ್ಟಿದ್ದಾರಲ್ಲ ಅಂತ ವ್ಯಥೆಯೂ ಆಯ್ತು. ಅಷ್ಟೇ ಅಲ್ಲ ವರದಿಯಲ್ಲಿರುವಂತೆ ಸಾಂಸ್ಕೃತಿಕ ಕೇಂದ್ರಗಳೂ,ವಿದ್ಯಾಕೇಂದ್ರಗಳೂ ಆಗಿದ್ದ ನಮ್ಮ ದೇವಾಲಯಗಳಿಗೆ ತಮ್ಮದೇ ಆದ ಊರಿನ 35 ಪ್ರತಿಶತ ಭೂಮಿ, ನಮ್ಮೂರ ಹುಲಿಕುಂಟೆರಾಯನಿಗೂ (ದೇವಸ್ಥಾನ)ಇತ್ತು ಎನ್ನುವ ಅಂಶಕ್ಕೆ ನಾನೇ ಸಾಕ್ಷಿ. 35 ಪ್ರತಿಶತ ಇದ್ದ ತೆರಿಗೆ ವಿನಾಯಿತಿ ದೇವಸ್ಥಾನಗಳ ಭೂಮಿಯನ್ನು ಪ್ರತಿಶತ 5 ಕ್ಕೆ ಇಳಿಸಿದ್ದು ಈ ವ್ಯವಸ್ಥೆಯನ್ನು ಕೊಂದು ಹಾಕಲು ಮಾಡಿದ ಮೊದಲ ಹೆಜ್ಜೆ ಅಂತ ಅನ್ನಿಸ್ತಿದೆ.
ಬ್ರಿಟನ್ನಿನ ಮಕ್ಕಳು ಗೋದಾಮುಗಳಂತಾ,ತಂದೆ ತಾಯಿಯರ ಕೆಲಸಗಳಿಗೆ ಅಡ್ಡಿ ಬಾರದೇ ಇರಲಿ ಎನ್ನುವ ಉದ್ದೇಶಕ್ಕೆ ಸ್ಕೂಲ್ ನಲ್ಲಿ ಇರುತ್ತಿರಬೇಕಾದಾಗ, ನಮ್ಮ ತಾತಂದಿರು ಗುರುಕುಲಗಳಲ್ಲಿ ವಿದ್ಯಾಭ್ಯಾಸಕ್ಕೆಂದೇ ತೊಡಗಿದ್ದರು ಎನ್ನುವ ಅಂಶ ನನಗಂತೂ ಭಯಂಕರ ಗೌರವ ತರುವಂತಾದ್ದು ಅನ್ನಿಸ್ತಿದೆ….. ಇಂಗ್ಲೆಂಡಿನ ಮ್ಯೂಜಿಯಂ ನಲ್ಲಿ ಸಿಕ್ಕಿರುವ ಸರ್ ಥಾಮಸ್ ಮನ್ರೋ ತಯಾರಿಸಿ ಕೊಟ್ಟಿದ್ದ, ದಿ ಬ್ಯುಟಿಫುಲ್ ಟ್ರೀ ಎಂಬ ವರದಿಯನ್ನು ಭಾರತ ಸರ್ಕಾರ ರಾಜ ತಾಂತ್ರಿಕ ಮಾರ್ಗದಿಂದ ಪ್ರತಿಯೊಂದನ್ನು ತರಿಸಿ ನಮಗೆ ತಿಳಿಸುವ ಕೆಲಸ ಮಾಡಬೇಕು ಅನ್ನಿಸುತ್ತದೆ.
ಕಿರಣ್ ಮಾಡಾಳು
ಇಲ್ಲಿ ಪ್ರಕಟವಾಗಿರುವ animated illustration ರಚಿಸಿದವರು ಕಿರಣ್ ಮಾಡಾಳು. ಸಾಂಪ್ರದಾಯಿಕ ಚಿತ್ರಕಲೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಷ ನೀಡಿ ಅದು ಮತ್ತಷ್ಟು ಪರಿಣಾಮಕಾರಿಯಾಗುವಂತೆ ಮಾಡಬಲ್ಲ ನಾಡಿನ ಕೆಲವೇ ಕಲಾವಿದರಲ್ಲಿ ಇವರೂ ಕೂಡ ಒಬ್ಬರು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ. 3D ಚಿತ್ರ ರಚನೆಯಲ್ಲಿ ವಿಶೇಷ ಪ್ರಾವೀಣ್ಯ. ಆಧ್ಯಾತ್ಮಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156
ಅದ್ಭುತ ಜ್ಞಾಪಕ ಶಕ್ತಿ ಗೆಳೆಯ. ಬರವಣಿಗೆಯ ಬಗ್ಗೆ ಅನಿಸಿಕೆ ಬರೆಯಲು ಮತ್ತೊಮ್ಮೆ ಓದಿ ಬರವಣಿಗೆಯ ಆಳಕ್ಕೆ ಇಳಿದು ಅರ್ಥೈಸಿಕೊಳ್ಳಬೇಕಾಗಿದೆ.
ಇತಿಹಾಸದ ಗರ್ಭದಿಂದ ಹೆಕ್ಕಿ ತೆಗೆದಂತಿದೆ.
Hats off ಗೆಳೆಯ. 👍
ನಮ್ಮ ಗುರುಕುಲ ಪದ್ಧತಿಯನ್ನು ಗ್ರಾಮೀಣ ಜೀವನದ ಸೊಗಡಿನೊಂದಿಗೆ ವಿವರಿಸದ್ದೀಯ. ಬ್ರಿಟಿಷರು ನಮ್ಮ ಶಿಕ್ಷಣ ಪದ್ಧತಿಗೆ ಕೊಟ್ಟ ಪೆಟ್ಟು ಅತ್ಯುತ್ತಮ ವಾಗಿ ವಿಶ್ಲೇಷಣೆ ಮಾಡಿದ್ದೀಯ. ಉತ್ತಮ ಲೇಖನ
Manju ರವ ರ ನಮ್ಮಾ ಶಾಲೆಯ ಗುಡಿಯೂ, ತುಂಬ ಚೆನ್ನಾಗಿದೆ.
ತಾತನ ನೆನಪು, ತಾತನ ಬಾಯಿಂದ ಅಪ್ಪನ ಹೀರೋಯಿಸಂ , ತಾತನ adventure ಓದೋಕೆ ತುಂಬಾ ಸೊಗಸಾಗಿದೆ.
ಹ್ಯಾಟ್ಸ್ ಆಫ್
Keep it up sir
👏👏
Manju ರವ ರ ನಮ್ಮಾ ಶಾಲೆಯ ಗುಡಿಯೂ, ತುಂಬ ಚೆನ್ನಾಗಿದೆ.
ತಾತನ ನೆನಪು, ತಾತನ ಬಾಯಿಂದ ಅಪ್ಪನ ಹೀರೋಯಿಸಂ , ತಾತನ adventure ಓದೋಕೆ ತುಂಬಾ ಸೊಗಸಾಗಿದೆ.
ಹ್ಯಾಟ್ಸ್ ಆಫ್
Keep it up sir
👏👏
ನಮ್ಮ ಶಿಕ್ಷಣ ಪದ್ಧತಿ. ಮತ್ತು ಅದರ ವಿಶೇಷತೆ. ತುಂಬಾ ಮನೊಗ್ನ್ ವಾಗಿ ಮೂಡಿ ಬಂದಿದೆ. ಮತ್ತು ತಾತ ಮೊಮ್ಮೊಗನ ಅವಿನಾಭಾವ ಸಂಭಂದ ಎದ್ದು ಕಾಣುತ್ತಿದೆ. BM. ನಿನ್ನ ಬರವಣಿಗೆ ಯ ಬಗ್ಗೆ ಹೇಳಲು ಪದಗಳು ಸಿಗೋಲ್ಲ ಕಾರಣ. ಎಂತ ನೆನಪಿನ ಶಕ್ತಿ. ನಿನ್ನದು.ಈ ಲೇಖನ ಅ ಕಾಲಕ್ಕೆ ಓದುಗರನ್ನು ಕರೆದುಕೊಂಡು ಹೋಗಿ. ನಾವು ಈ ಚಿತ್ರಣ ದಲ್ಲಿ ಇದ್ದೇವೆ ಎನ್ನುವ ಭಾವನೆ ಮೂಡಿಸುತ್ತಿದೆ. ಯಾವ ನುರಿತ ಬರಹಗಾರ ನಿಗೂ ನೀ ಕಡಿಮೆ ಇಲ್ಲ. ಧನ್ಯವಾದಗಳು.
‘ಇಂಗ್ಲಿಷರ ಸ್ಕೂಲೂ, ನಮ್ಮ ಶಾಲೆ ಎಂಬ ಗುಡಿಯೂ…’ ಬಹಳ ಆಸಕ್ತಿಯಿಂದ ಓದಿಸಿಕೊಂಡು ಹೋಗುವ ಒಂದು ಅಪೂರ್ವವಾದ ಲೇಖನ. ಮೊಬೈಲ್, ಕಂಪ್ಯೂಟರ್, ಇಂಟರ್ನೆಟ್, ಟಿವಿ ಅಂತಹ ವಿದ್ಯುನ್ಮಾನ ಲೋಕದೊಳಗೆ ಮುಳುಗಿರುವ ಇಂದಿನ ಎಷ್ಟೋ ಮಕ್ಕಳಿಗೆ ತಮ್ಮ ಅಜ್ಜ, ಅಜ್ಜಿಯರ ಜೊತೆ ಬೆರೆಯುವ, ಕುಳಿತು ಅವರ ಕುತೂಹಲಭರಿತ ಅನುಭವಗಳನ್ನು ಕೇಳುವ ಅದೃಷ್ಟ ಇಲ್ಲ. ಒಂದು ವೇಳೆ ಇದ್ದರೆ, ಅದು ಎಷ್ಟು ಖುಷಿ ಕೊಡುತ್ತದೆ ಎನ್ನುವುದಕ್ಕೆ ಮಂಜುನಾಥ ಬೊಮ್ಮಘಟ್ಟ ಅವರ ಈ ಲೇಖನ ಒಂದು ತಾಜಾ ಉದಾಹರಣೆ. ತಮ್ಮ ತಾತನ ಮೂಲಕ ಪುಸ್ತಕದಲ್ಲಿ ದಾಖಲಾಗದ ಕೆಲವು ಐತಿಹಾಸಿಕ ಘಟನೆಗಳನ್ನು ಕಟ್ಟಿಕೊಟ್ಟಿರುವುದಕ್ಕೆ ಧನ್ಯವಾದಗಳು. ಕಿರಣ್ ಮಾಡಾಳು ಅವರ ಸುಂದರವಾದ ಎನಿಮೇಟೆಡ್ ಚಿತ್ರ ಲೇಖನಕ್ಕೆ ಪೂರಕವಾಗಿ ಮೂಡಿಬಂದಿದೆ.
ಕೆಲವು ಮನಸುಗಳೇ ಹಾಗೆ, ನಿನ್ನ ತಾತನಂತೆ. ಗಳಿಸಿದ್ದನ್ನು ಹೇಳುವಾಗ ಎಷ್ಟು ಖುಷಿಯೋ, ಕಳೆದದ್ದನ್ನು ಹೇಳುವಾಗಲೂ ಅದೇ ಉತ್ಸಾಹ. ಅಂತಹ ನಿಷ್ಕಲ್ಮಶ ಮನಸುಗಳನ್ನು ಈಗ ಹುಡುಕುವುದು ಹೇಗೆ, ಎಲ್ಲಿ???? ಬೋಧನೆಯೂ ಧನದ ಮೂಲವಾದ ಮೇಲೆ…. ಕಲಿಸಿದ ಕ್ವಾಲಿಟಿಗಿಂತ ಗಳಿಸಿದ ಹಣದ ಕ್ವಾಂಟಿಟಿಯೇ ಮುಖ್ಯ.
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ಕಿರಣ್ ಅವರ ಅನಿಮೇಟೆಡ್ ಚಿತ್ರ ನನ್ನ ಮನಸ್ಸು ಗೆದ್ದಿತು…ಕಿರಣ್ ಮಾಡಾಳು ಅವರಿಗೂ ಕನ್ನಡ ಪ್ರೆಸ್.ಕಾಮ್ ಗೂ ನನ್ನ ಶುಭಕಾಮನೆಗಳು.
ಅಣ್ಣಾ, ನಿನ್ನ ನೆನಪಿನ ಶಕ್ತಿಗೆ ನನ್ನದೊಂದು ಸಲಾಂ, ನಿನ್ನ ಬಾಲ್ಯದ ಘಟನೆಗಳನ್ನು, ಅಜ್ಜನೊಂದಿಗಿನ ಒಡನಾಟವನ್ನು, ನಮ್ಮೂರಿನ ಹಿರಿಯರ ಉದಾರ ಮನಸ್ಸುಗಳನ್ನು, ಜಾತಿ ಬೇಧ ಮಾಡದೇ ಎಲ್ಲಾ ಮಕ್ಕಳನ್ನು ತನ್ನ ಮಕ್ಕಳೆಂದೇ ಭಾವಿಸಿ ಶಿಕ್ಷಣ ನೀಡಿದ ದಿ – ಶ್ರೀ ಲಕ್ಷ್ಮೀನಾರಾಯಣಾಚಾರ್ ಗುರುಗಳನ್ನು, ಅವರ ದಾರಿಯಲ್ಲಿ ನಡೆದು ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅಕ್ಷರ ಬೀಜ ಬಿತ್ತಿದ ನಿಮ್ಮ ತಂದೆ ಶ್ರೀ ಹುಲಿಕುಂಟೆಪ್ಪ ಮಾಸ್ಟರ್, ಊರಿನ ಹಿರಿಯರ ಒಗ್ಗಟ್ಟು, ರಾಜಿ ಪಂಚಾಯಿತಿಗಳು “” ನನ್ನೂರಿನ ಮಣ್ಣಿನ ಗುಣವೇ ಹಾಗೆ – ಹಿಂದುಳಿದ ಸಂಡೂರ್ ತಾಲೂಕಿನಲ್ಲಿ ಅತಿ ಹೆಚ್ಚು ಅಕ್ಷರಸ್ಥರನ್ನು, ವಿದ್ಯಾವಂತರನ್ನು ಹೊಂದಿದ ಮಾದರಿ ಗ್ರಾಮ ಎಂಬ ಹೆಮ್ಮೆ. ಅಣ್ಣಾ ನಿನ್ನ ನೆನಪಿನ ಬುಟ್ಟಿಯಿಂದ ಇನ್ನಷ್ಟು ನೆನಪುಗಳಿಗೆ ಅಕ್ಷರ ರೂಪ ಕೊಡಿ. ತುಂಬಾ ಚಂದದ ಬರಹ. ಧನ್ಯವಾದಗಳು
ಅಣ್ಣಾ, ನಿನ್ನ ನೆನಪಿನ ಶಕ್ತಿಗೊಂದು ಸಲಾಂ. ಚಂದದ ಬರಹ, ನಿನ್ನ ಲೇಖನಗಳನ್ನು ಓದುತ್ತಾ ಓದುತ್ತಾ ನಾನು ನನ್ನ ಬಾಲ್ಯದ ದಿನಗಳ ನೆನಪಿಗೆ ಜಾರುತ್ತೇನೆ. ಸಾಹಿತ್ಯದ ವಿದ್ಯಾರ್ಥಿಗಳಾದ ನಾವೇ ಸಮಯ ಹೊಂದಿಸಿಕೊಂಡು ಬರೆಯಲಾರೆವು !? ಆದರೆ ನೀವೊಬ್ಬ ಬಹಳ ಬ್ಯುಸಿ ಇರುವ ಸಿವಿಲ್ ಇಂಜಿನಿಯರ್ ತುಂಬಾ ಸರಳವಾದ ಕನ್ನಡ ಬಳಸಿ ತುಂಬಾ ಚಂದದ ಬರಹ ನೀಡಿದ್ದೀರಿ ಧನ್ಯವಾದಗಳು. ನಾವೀರ್ವರೂ ಒಂದೇ ಗ್ರಾಮದವರೆಂಬ ಹೆಮ್ಮೆ..
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಬೊಮ್ಮಘಟ್ಟ ಗ್ರಾಮದ ಪ್ರಸಿದ್ಧ ಹಾಗೂ ಪ್ರಖ್ಯಾತಿಯನ್ನು ಹೊಂದಿದ ನನ್ನ ಗುರುಗಳು ಹಾಗೂ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಿ ಅವರ ಜೀವನಕ್ಕೆ ದಾರಿದೀಪವಾಗಿರುವ ಈಡಿಗರ ಹುಲಿಕುಂಟಪ್ಪ ಮಾಸ್ಟರ್ ಅವರ ಮಗ ಈಡಿಗರ ಮಂಜುನಾಥ ಹುದ್ದೆಯಲ್ಲಿ ಇಂಜಿನಿಯರ್ ಆಗಿದ್ದರು ಪ್ರವೃತ್ತಿಯಲ್ಲಿ ಸಾಹಿತಿಗಳಂತೆ ಶೋಭಿಸುತ್ತಿದ್ದಾರೆ. ಅಣ್ಣ ನಿಮ್ಮ ನೆನಪಿನ ಶಕ್ತಿ ಅಗಾಧವಾದುದು. ಹಿರಿಯರ ಜೀವನಾನುಭವದ ಅಂಶಗಳನ್ನು ಕೇಳಿದ ಹಾಗೂ ತಾವು ಕಂಡ ಕೇಳಿದ ವಿಷಯಗಳನ್ನು ಕಥನ ರೂಪದಲ್ಲಿ ಸರಳ ಸುಂದರವಾಗಿ ಸಹೃದಯನ ಮನಮುಟ್ಟುವಂತೆ ರಸವತ್ತಾಗಿ ಅಕ್ಷರಗಳ ರೂಪದಲ್ಲಿ ಹಿಡಿದಿಟ್ಟಿರುವ ಅಣ್ಣನಿಗೆ ತುಂಬು ಹೃದಯದ ಧನ್ಯವಾದಗಳು. ನಮ್ಮ ಊರು ನಮ್ಮ ಹೆಮ್ಮೆ.
This is a marvelous writing ,one who has taken life into heart,only can narrate like this ,mr Manjunath presents the facts ,where we feel as if we r in the one of the roles of his child hood days in village narration. It is no way less than a MALGUDI DAYS ,story
Very nice Manju, your writing has gone to a differ level 🌹🌹
ಶುರು ಮಾಡಿದ್ದೇ ತಡ… ಕೊನೆಸಾಲಿಗೆ ಬಂದಾಗಾ ಅಯ್ಯೋ ಮುಗಿದೇ ಹೋಯ್ತೇ ಎನ್ನಿಸಿತು!
ನಿನ್ನ ತಾತನವರ “ಚಿಟ್ಳದುರ್ಗ” ರೈಸ್ ಸಾಹೇಬರ ಕರ್ನಾಟಿಕ್ ಎಪಿಗ್ರಾಫಿಯಾದಲ್ಲಿ
“ಚಿಟ್ಲ್ ಡ್ರೂಗ್” 😀