19.5 C
Karnataka
Thursday, November 21, 2024

    ಐದು ತಿಂಗಳಿಂದ ಮನೆಯಲ್ಲೇ ಇರುವ ಮಕ್ಕಳನ್ನು ಹೇಗೆ ಸಂಭಾಳಿಸುವುದು

    Must read

    ಕೋವಿಡ್ ನಿಂದ ಉಳಿದ ದೇಶಗಳೆಲ್ಲ ಸ್ವಲ್ಪ ಸ್ವಲ್ಪವೇ ಚೇತರಿಸಿಕೊಳ್ಳುತ್ತಾ ಮೊದಲಿನಂತೆಯೇ ನಡೆಯುವ ಹಂತಕ್ಕೆ ನಿಧಾನವಾಗಿ ಬರುತ್ತಿದೆ.ಆದರೆ ಭಾರತದಲ್ಲಿ ಪರಿಸ್ಥಿತಿ ಇನ್ನೂ ಅಷ್ಟೊಂದು ಸುಧಾರಿಸಿಲ್. ಶಾಲೆಗಳು ಇನ್ನು ತೆರೆದಿಲ್ಲ. ಹೀಗಾಗಿ ಐದು ತಿಂಗಳಿನಿಂದ ಆಟವಾಡಲು ಕೂಡ ಮನೆಯಿಂದ ಹೊರಹೋಗದ ಸ್ಥಿತಿ ಇರುವ ಮಕ್ಕಳ ಬಗ್ಗೆ ಸ್ವಲ್ಪ ಯೋಚಿಸಿ. ಬೆಳೆಯುವ ಮಕ್ಕಳು ದಿನವಿಡೀ ನಾಲ್ಕು ಗೋಡೆಯ ಮಧ್ಯೆ ಇರಬೇಕು ಎಂದರೆ ಮಕ್ಕಳ ಮಾನಸಿಕ ತೊಳಲಾಟ ಏನಿರಬಹುದು ?. 

    ಕರೋನದಿಂದಾಗಿ ಮಕ್ಕಳೆಲ್ಲ ಮನೆಯಲ್ಲಿಯೇ ಕುಳಿತು ಕನಿಷ್ಠ ಐದು ತಿಂಗಳುಗಳಾಗಿವೆ ಎಂದರೆ ಖೇದವೆನಿಸುತ್ತದೆ. ಹಾಗೆಯೇ ಅವರನ್ನು ಇಡೀ ದಿನ ಸಂಬಾಳಿಸಲು ಪೋಷಕರು ಕೂಡ ಸಾಕಷ್ಟು ಪ್ರಯತ್ನಪಡುತ್ತಿರುತ್ತಾರೆ ಎಂಬುದರಲ್ಲಿ ಆಶ್ಚರ್ಯವಿಲ್ಲ. ಮಕ್ಕಳು ಹಳ್ಳಿಗಳಲ್ಲಿದ್ದರೆ ತೋಟ ,ಕಾಡುಮೇಡು ಸುತ್ತಬಹುದು ,ಅಜ್ಜ ಅಜ್ಜಿಯ ಜೊತೆ ಸಮಯ ಕಳೆಯಬಹುದು ಪ್ರತಿ ಬೇಸಿಗೆ ರಜೆಯನ್ನು ಕಳೆಯುವಂತೆ ಈ ಬಾರಿ ಇನ್ನಷ್ಟು ಮಜವಾಗಿ ಕಳೆಯಬಹುದು. ಆದರೆ ನಗರಗಳ ಅಪಾರ್ಟ್ಮೆಂಟ್ ಗಳಲ್ಲಿ, ಸಣ್ಣ ಸಣ್ಣ ಮನೆಗಳಲ್ಲಿ ಮನೆಯ ಒಳಗೇ ಕುಳಿತು ದಿನವಿಡೀ ಕಳೆಯಬೇಕು ಎಂದಾದಲ್ಲಿ ಮಕ್ಕಳ ಮಾನಸಿಕ ಸ್ಥಿತಿಯ ಬಗ್ಗೆ ಯೋಚಿಸಿ. ಇದು ಒಂದು ಎರಡು ದಿನವಲ್ಲ ಕಳೆದ ಐದು ತಿಂಗಳಿಂದ ಎಲ್ಲೂ ಹೊರಹೋಗದೇ ಮನೆಯೊಳಗೇ ಇರುವ ಮಕ್ಕಳ ಪರಿಸ್ಥಿತಿ ನಿಜಕ್ಕೂ ಆತಂಕ ತರಿಸುವಂತದ್ದು. ಇದು ಕೇವಲ ಮಕ್ಕಳಿಗೆ ಮಾತ್ರವಲ್ಲ ಪೋಷಕರಿಗೂ  ಸಹನೆ ಪರೀಕ್ಷಿಸುವ ಸಂದರ್ಭವಾಗಿರಬಹುದು. ಅದರಲ್ಲೂ ತಂದೆತಾಯಿ ಇಬ್ಬರೂ ಕೆಲಸ ಮಾಡುತ್ತಿದ್ದಲ್ಲಿ ಅವರ ಪರಿಸ್ಥಿತಿ ಇನ್ನೂ ಕಷ್ಟ. ಹಾಗಾದರೆ ನಮ್ಮ ಮಕ್ಕಳನ್ನು ಹೇಗೆ ದಿನವಿಡೀ ಉಲ್ಲಾಸಿತವಾಗಿ ಇಡಬಹುದು? 

    ಒಂದು ವರ್ಷಅಥವಾ ಎರಡು ವರ್ಷದೊಳಗಿನ ಮಗುವಾಗಿದ್ದಲ್ಲಿ ಈ ಲಾಕ್ಡೌನ್ ಅನುಕೂಲವೇ ಆಗಿರುತ್ತದೆ .ಆದರೆ ಮೂರರಿಂದ ಆರು ವರ್ಷದ ಮಕ್ಕಳಿಗೆ ಮನೆಯಲ್ಲಿಯೇ ಇರುವುದು ಕಷ್ಟದ ಕೆಲಸ. ಆರರ ನಂತರದ ಮಕ್ಕಳಿಗೆ ಶಾಲೆಯಿಂದಲೇ ಆನ್ಲೈನ್ ತರಗತಿಗಳು ನಡೆಯುವುದರಿಂದ ಸ್ವಲ್ಪ ಸಮಯ ಹೋಂ ವರ್ಕ್ ,ತರಗತಿಗಳಿಗೆ ತಯಾರಿ ಹೀಗೆ ಸಮಯ ಸರಿಹೊಂದಬಹುದು.  ಹಾಗಿದ್ದರೆ ನಿಮ್ಮ ಮಗು ಮೂರರಿಂದ ಆರು ವರ್ಷದವರಾದರೆ ಹೀಗೆ ಕೆಲವು ಟಿಪ್ಸ್ ಪಾಲಿಸಿ ನೋಡಿ. 

    ಟೈಮ್ ಟೇಬಲ್ ನಿರ್ಮಿಸಿಕೊಳ್ಳಿ :
    ಮಕ್ಕಳನ್ನು ದಿನವಿಡೀ ಬ್ಯುಸಿಯಾಗಿ ಇಡಲು ಒಂದರ ನಂತರ ಒಂದು ಎಂದು ಮೊದಲೇ ಟೈಂಟೇಬಲ್ ಮಾಡಿಕೊಂಡರೆ ಇಬ್ಬರೂ ಕೆಲಸ ಮಾಡುವ ಪೋಷಕರಿಗೆ ಬಹಳ ಅನುಕೂಲವಾಗುತ್ತದೆ. ಪ್ರತಿದಿನ ಈ ಟೈಮ್ ಟೇಬಲ್ ಜೊತೆ ಇರುವುದರಿಂದ ಮಕ್ಕಳಿಗೂ ಒಂದಲ್ಲ ಒಂದು ಟಾಸ್ಕ್ ಆಯ್ಕೆ ಮಾಡಿಕೊಂಡು ತಮ್ಮಷ್ಟಕ್ಕೆ ತಾವೇ ಸ್ವಲ್ಪ ಸಮಯ ಕಳೆಯಲು ಪ್ರಾರಂಭಿಸುತ್ತಾರೆ.
    ಮನೆ ಕೆಲಸದಲ್ಲಿ ತೊಡಗಿಸಿ:ಎಲ್ಲರೂ ಮನೆಯಲ್ಲಿಯೇ ಇದ್ದು ಕೆಲಸಕ್ಕೂ ಯಾರನ್ನೂ ಕರೆಯುವಂತಿಲ್ಲ ಎನ್ನುವ ಇಂತಹ ಸಂದರ್ಭದಲ್ಲಿ  ಮನೆಯ ಕೆಲಸ ಎಂದಿಗಿಂತ ದುಪ್ಪಟ್ಟು . ಮಕ್ಕಳು ಮನೆಯಲ್ಲಿಯೇ ಇರುವುದರಿಂದ ಸಾಕಷ್ಟು ಸಮಯವಿರುತ್ತದೆ , ಮನೆಯಲ್ಲಿ ಮಕ್ಕಳು ಮಾಡಬಹುದಾದ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಸಿ.ಉದಾಹರಣೆಗೆ ಬೆಳಗ್ಗೆ ಎದ್ದ ತಕ್ಷಣ ಹಾಸಿಗೆಯನ್ನು ಸರಿಯಾಗಿ ಹಾಸಿಡುವುದು.ವಾಷಿಂಗ್ ಮಷಿನ್ ಗೆ ಕೊಳೆಯಾದ ಬಟ್ಟೆಗಳನ್ನು ತೊಳೆಯಲು ಹಾಕುವುದು, ಬೆಳಗಿನ ತಿಂಡಿ ಊಟಗಳಾದ ತಕ್ಷಣ ಎಲ್ಲಾ ತಟ್ಟೆಗಳನ್ನು ತೆಗೆದುಕೊಂಡು ಹೋಗಿ ಸಿಂಕ್ ಗೆ ಹಾಕುವುದು,ಊಟಕ್ಕೆ ಮೊದಲು ತಟ್ಟೆ , ಲೋಟ ಗಳನ್ನು ತಂದು ತಯಾರುಮಾಡಿಡುವುದು . ಮನೆಯಿಂದಲೇ ಕೆಲಸ ಮಾಡುವ ಅಪ್ಪನಿಗೆ ಅಮ್ಮ ಮಾಡಿಕೊಟ್ಟ ಕಾಫಿ,ಟೀ ಅಥವಾ ಸ್ನಾಕ್ಸ್ ತೆಗೆದುಕೊಂಡು ಹೋಗಿ ನೀಡುವುದು.ಇನ್ನೂ ಆಸಕ್ತಿ ಇದ್ದರೆ ಕಿಟಕಿ ಬಾಗಿಲುಗಳನ್ನು ಒದ್ದೆ ಬಟ್ಟೆಯಲ್ಲಿ ಒರೆಸುವುದು ಹೀಗೆ ಸ್ವಲ್ಪ ಸಮಯವನ್ನು ಮನೆ ಕೆಲಸದಲ್ಲಿ ಕಳೆಯುವಂತೆ ಮಾಡಿ.ಮಕ್ಕಳಿಗೆ ಅಡುಗೆಯಲ್ಲಿ ಆಸಕ್ತಿಯನ್ನು ಕೂಡ ಬೆಳೆಸಬಹುದು ಸರಳವಾದ ಒಲೆಯನ್ನು,ಚಾಕುವನ್ನು ಬಹಳಸದ ಸುಲಭ ವಿಧಾನದ ,ಚಪಾತಿ ಉಂಡೆಗಳನ್ನು ಮಾಡುವುದು ಇನ್ನಿತರ ಕೆಲಸಗಳಿಗೆ ಕೆಲವು ಸಹಾಯವನ್ನು ಮಕ್ಕಳಿಂದ ಮಾಡಿಸಿಕೊಳ್ಳಿ.ತಾವು ಆಟವಾಡಿದ ಅಥವಾ ತಮ್ಮ ರೂಂ ಅನ್ನು ತಾವೇ ಸೇರಿಸಿ ಇಟ್ಟುಕೊಳ್ಳುವುದು. ಎಲ್ಲವನ್ನೂ ಒಂದೇ ದಿನವಲ್ಲದಿದ್ದರೂ ಒಂದೊಂದು ದಿನ ಒಂದೊಂದು ಟಾಸ್ಕ್ ಕೊಟ್ಟು ಸಮಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮಾಡಬಹುದು.ಹೀಗೆ ಅವರು ಹೇಳಿದ್ದನ್ನೆಲ್ಲ ಮಾಡಿದಾಗ ಪ್ರಶಂಸಿಸಿ ಪ್ರೋತ್ಸಾಹಿಸಲು ಮರೆಯಬೇಡಿ.
    ಆಟವಾಡಲು ಬಿಡಿ :ಮಕ್ಕಳನ್ನು ಸ್ವಲ್ಪ ಹೊತ್ತು ಮನೆಯೊಗಳೇ ಅವರಿಷ್ಟದ ಆಟವಾಡಲು ಬಿಡಿ. ಉದಾಹರಣೆಗೆ ಮೂರರಿಂದ ಆರುವರ್ಷದ ಮಕ್ಕಳಿಗೆ ಪಝಲ್ ಗಳನ್ನು ಮಾಡುವುದರಲ್ಲಿ ಅಥವಾ ಲೆಗೋ ಗಳಲ್ಲಿ ವಿವಿಧ ರೀತಿಯ ಮನೆ ಕಟ್ಟುವುದು,ಮನೆಯಲ್ಲಿಯೇ ಪ್ಲೇ ಡೋವ್ ಮಾಡಿ ಅದರಿಂದ ವಿವಿಧ ರೀತಿಯ ತಮಗಿಷ್ಟವಾದ ಪ್ರಾಣಿ, ಅಥವಾ ಶೇಪ್ ಗಳನ್ನು ಮಾಡುವುದು,ಈ ರೀತಿಯ ಆಟಗಳು ಆಸಕ್ತಿಕರವಾಗಿರುತ್ತವೆ. ಅವರಷ್ಟಕ್ಕೆ ಅವರು ಸುಮಾರು ಅರ್ಧ ಮುಕ್ಕಾಲು ಗಂಟೆ ಸಮಯ ಕಳೆಯಲು ಇದು ಸಹಾಯಮಾಡುತ್ತದೆ. ಹೀಗೆ ಮಾಡುವುದರಿಂದ ಮಕ್ಕಳ ಯೋಚನಾಶಕ್ತಿ ಹೆಚ್ಚುತ್ತದೆ ಮತ್ತು ಕ್ರಿಯಾಶೀಲರಾಗಲು ಕೂಡ ಇದು ಸಹಕರಿಸುತ್ತದೆ.ಸಂಜೆಯ ಸಮಯ ಮನೆಯವರೆಲ್ಲರೂ ಕುಳಿತು ಬೋರ್ಡ್ ಗೇಮ್ ಗಳನ್ನಾಡಬಹುದು.ಇದರಿಂದ ಮಕ್ಕಳಿಗೆ ಪೋಷಕರು ತಮ್ಮ ಜೊತೆ ಸಮಯ ಕಳೆಯುತ್ತಿದ್ದಾರೆ ಎಂಬುದು ಸಂತೋಷ ನೀಡುತ್ತದೆ. ಬಹುಶಃ ಈ ರೀತಿ ಪೋಷಕರ ಜೊತೆ ಕಳೆದ ಸಮಯ ಅವರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಬಹುದು.  
    ಅಪಾರ್ಟ್ಮೆಂಟ್ ಗಳಲ್ಲಿ ಏನಿಲ್ಲವೆಂದರೂ ಬಾಲ್ಕನಿ ಅಥವಾ ಯುಟಿಲಿಟಿ ಜಾಗ ಇದ್ದೇ ಇರುತ್ತದೆ. ಮಕ್ಕಳನ್ನು ಬೆಳಗಿನ ಎಳೆ ಬಿಸಿಲಿನಲ್ಲಿ ಅಥವಾ ಸಂಜೆಯ ತಂಗಾಳಿ ಬೀಸುವ ಸೂರ್ಯಾಸ್ತದ ಸಮಯದಲ್ಲಿ ಸ್ವಲ್ಪ ಹೊತ್ತು ಅಲ್ಲಿ ಬಿಡಿ. ಹಾಗೆಯೇ ಕೈಗೊಂದು ಪೆನ್ಸಿಲ್ ಪೇಪರ್ ಕೊಟ್ಟು ತಾವು ಹೊರಗೆ ಏನೆಲ್ಲಾ ನೋಡುತ್ತಿದ್ದಾರೆ ಮತ್ತು ಅದು ಯಾವ ಬಣ್ಣದಲ್ಲಿದೆ ಹೀಗೆ ಎಲ್ಲವನ್ನು ಬರೆಯಲು ಹೇಳಿ.ಹಾಗೆ ಬರೆಯಲು ಇನ್ನೂ ಪ್ರಾರಂಭಿಸಿರದ ಮಕ್ಕಳಿಗೆ ಚಿತ್ರ ಬಿಡಿಸುವ ಪ್ರಯತ್ನ ಮಾಡಲು ಹೇಳಬಹುದು. ಇದರಿಂದ ಮಕ್ಕಳು ಏಕಾಗ್ರತೆ,ಪ್ರಕೃತಿಯ ಬಗ್ಗೆ ಆಸಕ್ತಿ ಮತ್ತು ಕ್ರಿಯಾಶೀಲರಾಗಿ ಯೋಚಿಸುವುದನ್ನು (ಕ್ರಿಯೇಟಿವ್ ಥಿಂಕಿಂಗ್ ) ಬೆಳೆಸಿಕೊಳ್ಳುತ್ತಾರೆ.ಹೊರಗೆ ತಾವು ನೋಡಿದ ಸುಂದರ ದೃಶ್ಯಗಳ ಬಗ್ಗೆ ತಾವೇ ಕಥೆ ಕಟ್ಟಿ ಹೇಳುವಂತೆ ಪ್ರೋತ್ಸಾಹಿಸಿ. ಅಥವಾ ಬೈನಾಕ್ಯೂಲರ್ ಕೊಟ್ಟು ದೂರದ ಪ್ರಕೃತಿ, ಆಕಾಶ, ಹಕ್ಕಿ ಹೀಗೆ ಎಲ್ಲವನ್ನು ನೋಡುತ್ತಾ ಸಮಯ ಕಳೆಯಲು ಸಹಕರಿಸಿ. ರಾತ್ರಿಗಳಲ್ಲಿ ಆಕಾಶ ,ನಕ್ಷತ್ರ ,ಚಂದ್ರ , ಸಪ್ತರ್ಷಿ ಮಂಡಲಗಳನ್ನು ತೋರಿಸಿ ಅಂತರಿಕ್ಷದ  ಬಗ್ಗೆ ತಿಳಿಯುವ ತಿಳಿಯುವ ಕುತೂಹಲ ಹೆಚ್ಚಿಸಿ. ಇದು ಮಗುವಿನ ವಿಕಸನಕ್ಕೂ ಅನುಕೂಲವಾಗುತ್ತದೆ.
      ಚಿತ್ರಕಲೆ  :
    ಮಕ್ಕಳಿಗೆ ಬಣ್ಣ ಮತ್ತು ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿ: ದಿನಕ್ಕೊಂದು ಚಿತ್ರ ಬಿಡಿಸುವುದನ್ನು ಹೇಳಿಕೊಡಿ, ಸರಳವಾಗಿ ತಮಗೆ ಸಾಧ್ಯವಾದ ರೀತಿಯಲ್ಲಿ ಹೇಳಿಕೊಟ್ಟ ಚಿತ್ರ ಬಿಡಿಸಿ ಅದಕ್ಕೆ ಬಣ್ಣ ತುಂಬುವಂತೆ ಮಾಡಿ ಇದರಿಂದ ಮಕ್ಕಳಿಗೆ ಬಣ್ಣಗಳ ಬಗ್ಗೆ ಮಾಹಿತಿ ಮತ್ತು ಆಸಕ್ತಿ ಬೆಳೆಯುತ್ತದೆ. ಸಣ್ಣ ಮಕ್ಕಳಿಗೆ ಸ್ಕ್ರಬ್ ಮಾಡುವುದರಿಂದ ಬೆರಳು ಮತ್ತು ಕೈಯ ಮೇಲೆ ಹಿಡಿತ ಸಿಗುತ್ತದೆ ಇದು ಮುಂದೆ ಅವರ ಅಕ್ಷರ ಸುಂದರವಾಗಲು ಅನುಕೂಲವಾಗುತ್ತದೆ. ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಲು, ಏಕಾಗ್ರತೆಯನ್ನು ಹೆಚ್ಚಿಸಲು ಅಷ್ಟೇ ಅಲ್ಲ ಮಕ್ಕಳ ಮನಸ್ಸಿನಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು  ಕೂಡ ಡ್ರಾಯಿಂಗ್ ಮತ್ತು ಕಲರಿಂಗ್ ಸಹಕರಿಸುತ್ತದೆ. 
    ವಿಶ್ರಾಂತಿಯೂ ಅಷ್ಟೇ ಮುಖ್ಯ :ಮಧ್ಯಾಹ್ನದ ಸಮಯದಲ್ಲಿ ಮಕ್ಕಳಿಗೆ ವಿಶ್ರಾಂತಿಸಿಗಲಿ ,ಊಟದ ನಂತರ ಸ್ವಲ್ಪ ಹೊತ್ತು ಮಲಗುವಂತೆ ಪ್ರೋತ್ಸಾಹಿಸಿ ಬೆಳೆಯುವ ಮಕ್ಕಳಿಗೆ ಆಟ ಪಾಠದ ಜೊತೆಗೆ ವಿಶ್ರಾಂತಿ ಕೂಡ ಅಷ್ಟೇ ಅವಶ್ಯಕ. ಮಧ್ಯಾನ್ಹ ಒಂದೆರಡು ಗಂಟೆ ಮಲಗಿದರೆ ಮನಸ್ಸು ಉಲ್ಲಾಸಗೊಂಡು ಉತ್ಸಾಹ ಹೆಚ್ಚುತ್ತದೆ. 
    ಮಕ್ಕಳ ಮಾನಸಿಕ ಬೆಳವಣಿಗೆಯ ಜೊತೆಗೆ ದೈಹಿಕ ಬೆಳವಣಿಗೆ ಕೂಡ ಮುಖ್ಯವಾಗುತ್ತದೆ ಸಮಯಕ್ಕೆ ಸರಿಯಾಗಿ ಊಟ,ನಿದ್ದೆ ಇವುಗಳ ಜೊತೆಗೆ ದೈಹಿಕ ಶ್ರಮ ಕೂಡ ಬೇಕು. ಸಂಜೆಯ ಸಮಯವನ್ನು ಕುಟುಂಬ ಸಮೇತ ವ್ಯಾಯಾಮ, ಯೋಗ ಇವುಗಳನ್ನು ಮಾಡಿ ಸಮಯ ಕಳೆಯಿರಿ. ದೈಹಿಕ ವ್ಯಾಯಾಮಗಳು ಮಕ್ಕಳ ರಾತ್ರಿ ನಿದ್ದೆಗೆ ಅನುಕೂಲಮಾಡಿಕೊಡುತ್ತದೆ. 
    ಹಾಗೆಯೆ ಸಂಜೆಯ ಸಮಯದಲ್ಲಿ ಮಕ್ಕಳಿಗೆ ನೀತಿ ಕಥೆಗಳು , ರಾಮಾಯಣ ಮಹಾಭಾರತ ಕಥೆಗಳು ಇವುಗಳನ್ನು ಹೇಳುವುದನ್ನು ರೂಢಿಸಿಕೊಂಡರೆ ಮಕ್ಕಳಲ್ಲಿ ಸಂಸ್ಕೃತಿಯ ತಿಳಿವು ಹೆಚ್ಚುತ್ತದೆ. ಒಂದು ಅಧ್ಯಯನದ ಪ್ರಕಾರ ಮಕ್ಕಳಿಗೆ ಪ್ರತಿದಿನ ಮಲಗುವ ಮೊದಲು ಹೇಳುವ ಕಥೆ ಅವರ ಮನಸ್ಸಿಗೆ ಪರಿಣಾಮವನ್ನು ಬೀರುತ್ತದೆ ಇದು ಅವರ ಬದುಕನ್ನೇ ಬದಲಿಸಬಹುದು. ಹಾಗೆಯೇ ಪ್ರತಿದಿನ ಒತ್ತಡವನ್ನು ಕಡಿಮೆ ಮಾಡಲು,ಶಾಲೆಗೇ ಹೋಗದ ಮಕ್ಕಳಿಗೆ ಶೈಕ್ಷಣಿಕ ಆಸಕ್ತಿ ಉಳಿಸಲು  ದಿನದ  ಅರ್ಧ ಗಂಟೆ ಕಥೆ ಓದುವುದು,ಹೇಳುವುದು ಮಾಡಿದಲ್ಲಿ ಅವರಲ್ಲಿ ಯೋಚನಾಶಕ್ತಿ,ತಿಳಿವಳಿಕೆ ಹೆಚ್ಚುತ್ತದೆ.ಅಥವಾ ನಿಮ್ಮ ಮಗುವಿಗೆ ಅಕ್ಷರಗಳನ್ನು ಕೂಡಿಸಿ ಓದಲು ಹುರಿದುಂಬಿಸಿ. ಇವೆಲ್ಲವುಗಳನ್ನು ಒಟ್ಟಿಗೆ ಮಾಡಲು ಮಕ್ಕಳಲ್ಲಿ ಒತ್ತಡಹೇರಬೇಕಾಗಿಲ್ಲ. ಮಕ್ಕಳಿಗೆ ಆಯ್ಕೆಯನ್ನು ಕೊಡಿ. ಉದಾಹರಣೆಗೆ ಚಿತ್ರ ಬಿಡಿಸುತ್ತೀಯಾ ಅಥವಾ ನಿನ್ನ ರೂಮ್ ಅನ್ನು ಸೇರಿಸಿ ಇಟ್ಟುಕೊಳ್ಳುತ್ತೀಯ ? ಹೀಗೆ ಅವರಿಗಿಷ್ಟವಾದುದನ್ನು ಆಯ್ದುಕೊಳ್ಳಲು ಬಿಡಿ.ಈ ಕೊರೋನಾ ಬಂದನಂತರ ಎಲ್ಲವೂ ಆನ್ಲೈನ್ ನಲ್ಲೇ ಆಗಿರುವುದರಿಂದ ಈಗ ಸಂಗೀತ,ಡ್ರಾಯಿಂಗ್, ಮ್ಯೂಸಿಕಲ್ ಇನ್ಸ್ಟ್ರುಮೆಂಟ್ ಇವೆಲ್ಲವುಗಳನ್ನು ಆನ್ಲೈನ್ ನಲ್ಲಿಯೇ ಮನೆಯಲ್ಲಿಯೇ ಕುಳಿತು ಕಲಿಯುವ ಅವಕಾಶವಿದೆ.ಮಕ್ಕಳ ಆಸಕ್ತಿಯನ್ನು ಗಮನಿಸಿ ಅವರಿಷ್ಟದ ಯಾವುದಾದರೂ ಒಂದು ತರಗತಿಯನ್ನು ವಾರದಲ್ಲೆರಡು ದಿನ ಕಲಿಯಲು ಅವಕಾಶ ಒದಗಿಸಿಕೊಟ್ಟಲ್ಲಿ ಮಕ್ಕಳು ಶಾಲೆಗೆ ಹಿಂತಿರುಗುವಷ್ಟರಲ್ಲಿ ಸಾಕಷ್ಟು ಶಿಕ್ಷಿತರಾಗುವುದರಲ್ಲಿ ಅನುಮಾನವಿಲ್ಲ.ಇವೆಲ್ಲದರ ಜೊತೆಗೆ ಮಕ್ಕಳ ಕುತೂಹಲಕ್ಕೆ ಸಣ್ಣಪುಟ್ಟ ಪ್ರಶ್ನೆಗಳಿಗೆ ಸಹನೆ ಕಳೆದುಕೊಳ್ಳದೆ ತಾಳ್ಮೆಯಿಂದ ಉತ್ತರಿಸುವುದು ಕೂಡ ಅಷ್ಟೇ ಮುಖ್ಯ.ನಾಲ್ಕು ಗೋಡೆಯ ಒಳಗೆ ಕುಳಿತಿರುವ ಮಕ್ಕಳ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರಿಗೆ ಈ ಸಮಯದಲ್ಲಿ ಪ್ರೋತ್ಸಾಹ ,ಉತ್ತೇಜನ ಎಲ್ಲವನ್ನು ಪೋಷಕರೇ ನೀಡಬೇಕಾದ ಅನಿವಾರ್ಯತೆ ಇದೆ ಅಲ್ಲವೇ ?

    Photo by Aleks Marinkovic on Unsplash

    ಅರ್ಪಿತಾ ರಾವ್
    ಅರ್ಪಿತಾ ರಾವ್
    ಹುಟ್ಟಿ ಬೆಳೆದಿದ್ದು ಮಲೆನಾಡಿನ ಸೊರಬ ತಾಲೂಕಿನ ಬರಿಗೆ ಎಂಬ ಪುಟ್ಟಹಳ್ಳಿಯಲ್ಲಿ . ಓದಿದ್ದು ಉಜಿರೆ ಕಾಲೇಜಿನಲ್ಲಿ ಪತ್ರಿಕೋದ್ಯಮ .ಮದುವೆಯಾಗಿ ಕಳೆದ ಹತ್ತು ವರ್ಷಗಳಿಂದ ಯು.ಕೆ ಯಲ್ಲಿ ವಾಸ . ಬರವಣಿಗೆ ಹವ್ಯಾಸ . ಹಲವಾರು ಪತ್ರಿಕೆಗಳಲ್ಲಿ ಬರಹಗಳು ಪ್ರಕಟಗೊಂಡಿವೆ .
    spot_img

    More articles

    8 COMMENTS

    1. ಮಕ್ಕಳ ನಿರ್ವಹಣೆಗೆ ಉತ್ತಮ ಟಿಪ್ಸ್ ನೀಡಿದ್ದೀರಿ. ನಾವು ಬಾಲ್ಯದಲ್ಲಿ ಸಾಕಷ್ಟು ಕೆಲಸ ಮಾಡಿತ್ತಿದ್ದೆವು. ಅವು ಕ್ಲಿಷ್ಟಕರ ಕೆಲಸ. ಭಾರ ಹೊರುವುದು. ದುರಾದೃಷ್ಟವಶಾತ್ ಈಗ ಮನೆಯಲ್ಲಿ ಹೇಳಲು ಕೆಲಸವೇ ಇಲ್ಲ. ಭಾರ ಎತ್ತುವ ದೈಹಿಕ ಶ್ರಮವೇ ಇಲ್ಲ.

    2. Very good topic for appropriate time.Great lesson to both parents and children.Keep this type of habits. Thanks a lot

    LEAVE A REPLY

    Please enter your comment!
    Please enter your name here

    Latest article

    error: Content is protected !!