ಕೋವಿಡ್ ಕಾರಣಕ್ಕೆ ಜಗತ್ತು ಶತಮಾನದಷ್ಟು ಹಿಂದೆ ಸರಿದಂತೆ ಎನಿಸುತ್ತಿರುವ ಈ ಹೊತ್ತಿನಲ್ಲಿ ವ್ಯವಸ್ಥೆಯ ಎಲ್ಲ ಕ್ಷೇತ್ರಗಳಲ್ಲೂ ಆರ್ಥಿಕ ಹಿಂಜರಿತ ಕಾಣಿಸಿದ್ದರೆ ಕೆಲವು ಕ್ಷೇತ್ರಗಳಂತೂ ಭಾರಿ ಹೊಡೆತ ಅನುಭವಿಸುತ್ತಿವೆ.
ತತ್ಕಾಲದ ,ಮಧ್ಯಮ ಕಾಲದ ಮತ್ತು ದೀರ್ಘಕಾಲೀನ ಸಮಸ್ಯೆಗಳು ಬೇರೆ ಬೇರೆ ಕ್ಷೇತ್ರಗಳನ್ನು ಭಾದಿಸುತ್ತಿವೆ.ಕೃಷಿ ಮತ್ತು ತೋಟಗಾರಿಕಾ ವಲಯ ಕೂಡ ಇದಕ್ಕೆ ಹೊರತಾಗಿಲ್ಲ.ಹಣ್ಣು ತರಕಾರಿ,ಹೈನೋದ್ಯಮ ,ಪುಷ್ಪೋದ್ಯಮ ತತ್ಕಾಲದ ಸಮಸ್ಯೆಯನ್ನೂ ಅನುಭವಿಸಿದರೆ ಬೇಳೆಕಾಳು,ಆಹಾರಧಾನ್ಯಗಳ ಕೃಷಿ ಸ್ವಲ್ಪ ತಡೆದು ಹೊಡೆತ ಅನುಭವಿಸಿತು.ಇನ್ನೂ ತೋಟಗಾರಿಕೆಯ ಬೆಳೆಗಳು ದೀರ್ಘಕಾಲೀನ ಮತ್ತು ಬಹುದೊಡ್ಡ ಆಘಾತವನ್ನು ಎದುರಿಸಲಿಕ್ಕೆ ತಯಾರಾಗಬೇಕಿದೆ.
ಅದರಲ್ಲೂ ನಮ್ಮ ಕಾಫಿ ಉದ್ಯಮ ಕೋವಿಡ್ ಕಾರಣಕ್ಕೆ ಒಂದು ಪಲ್ಲಟದ ಹಾದಿಯನ್ನು ಇದಿರು ನೋಡ್ತಿದೆ ಎನ್ನಬಹುದು.ತೊಂಬತ್ತರ ದಶಕದ ಮುಕ್ತ ಮಾರುಕಟ್ಟೆಯ ಪ್ರಭಾವದಿಂದ ದೊರಕಿದ ಉತ್ತಮ ಬೆಲೆಯಿಂದಾಗಿ ಸಕಲೇಶಪುರ, ಆಲೂರು,ಅರಕಲಗೂಡು,ಚಿಕ್ಕಮಗಳೂರು, ಮಡಿಕೇರಿಯ ಬಹುತೇಕ ಕೃಷಿಭೂಮಿ ಕಾಫಿತೋಟವಾಗಿ ಪರಿವರ್ತನೆಯಾಯ್ತು. ಮತ್ತು ಆ ಪರಿವರ್ತನೆಯ ಪ್ರಕ್ರಿಯೆ ಇಂದಿಗೂ ಕೂಡ ಮುಂದುವರೆದಿದೆ.(ಇದರಿಂದ ಈ ಭಾಗದಲ್ಲಿ ಅರಣ್ಯದ ಶೇಕಡಾವಾರು ಪ್ರಮಾಣ ಬಹಳ ಉತ್ತಮ ಮಟ್ಟದಲ್ಲಿ ಇದೆಯೆಂಬುದು ಒಂದು ಹೆಮ್ಮೆ.)
ಬೆಲೆ ಕುಸಿತ, ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆ, ರೋಗ ಕೀಟಗಳ ಬಾಧೆ,ರಸಗೊಬ್ಬರ ಹಾಗು ಸಿಂಪರಣೆಗಳ ಬೆಲೆಯೇರಿಕೆ, ಕಾರ್ಮಿಕರ ತಗ್ಗಿದ ಕೆಲಸದ ಗುಣಮಟ್ಟ ,ಉದ್ಯಮ ಬೇಡುವ ಅತಿಯಾದ ಇನ್ಫ್ರಾಸ್ಟ್ರಕ್ಚರ್ ಇವೆಲ್ಲವೂ ಕಾಫಿ ಉದ್ಯಮ ಎದುರಿಸ್ತಿರುವ ಸಮಸ್ಯೆಗಳ ಪಟ್ಟಿ. ಅದರ ಜೊತೆಗೆ ಕಳೆದ ಎರಡೂವರೆ ದಶಕಗಳಿಂದ ಭಯಾನಕವೆನಿಸುವಂತೆ ಹೆಚ್ಚಿರುವ ಮಾನವ ವನ್ಯ ಜೀವಿ ಸಂಘರ್ಷ.ಅದರಲ್ಲೂ ಕಾಫಿತೋಟಗಳಿಗೆ ಆನೆಯಿಂದಾಗುವ ನಿರಂತರ ಬೆಳೆಹಾನಿ ,ವ್ಯವಸ್ಥೆಯ ಹಾನಿ ಹಾಗೂ ಪ್ರಾಣಹಾನಿ ಬೆಳೆಗಾರರ ಬದುಕನ್ನು ಮೂರಾಬಟ್ಟೆ ಮಾಡಿದೆ. ಇನ್ನೀಗ ಕೋವಿಡನ ಆಗಮನ.
ತೋರಿಕೆಯ ನೆಮ್ಮದಿಗೂ ಸಂಚಕಾರ
ಇಡೀ ಜಗತ್ತಿಗೆ ಕೋವಿಡ್ ಬಂದಿದೆ.ಬಳಲುತ್ತಿದೆ.ನಮ್ಮದೇನು ವಿಶೇಷ ಅಂತ ಅಂದುಕೊಂಡು ಸಮಾಧಾನ ಮಾಡಿಕೊಂಡರೂ ಕಾಫಿ ಬೆಳೆಗಾರ ತನ್ನ ಎಂದಿನ ತೋರಿಕೆಯ ನೆಮ್ಮದಿಯನ್ನು,ಸಂತೋಷವನ್ನು ಇನ್ನು ತೋರಿಸಿಕೊಳ್ಳುವುದು ತ್ರಾಸಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಕಳೆದೆರಡು ದಶಕಗಳಿಂದ ಮೇಲೆ ಹೇಳಿದ ಸಮಸ್ಯೆಗಳಿಂದಾಗಿ ಬಹುತೇಕ ಕಾಫಿ ಬೆಳೆಗಾರರ ಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆದು ಉದ್ಯೋಗ ಹಿಡಿದು ಮಹಾನಗರದಲ್ಲೋ,ವಿದೇಶದಲ್ಲೋ ನೆಲೆ ಕಂಡುಕೊಂಡಿದ್ದರು.
ನಗರಗಳಲ್ಲಿ ಸಣ್ಣಪುಟ್ಟ ಉದ್ಯೋಗ ಮಾಡಿ ಮನೆಗೆ ಆದಷ್ಟೂ ಹಣಕಾಸಿನ ನೆರವು ನೀಡುತ್ತಾ ತೋಟವನ್ನು ಅಭಿವೃದ್ಧಿ ಮಾಡಲಿಕ್ಕೆ ನೆರವಾಗ್ತಿದ್ದ ಯುವಪೀಳಿಗೆಯು ಇನ್ನೊಂದು ದೊಡ್ಡ ಸಮೂಹವೂ ಕೊರೊನಾ ಕಾರಣದಿಂದ ಮನೆಗೆ ಬಂದು ಕುಳಿತಿದೆ. ಇದರಲ್ಲಿ ಅರ್ಧ ಮಂದಿ ವರ್ಕಫ್ರಮ್ ಹೋಮ್ ಮಾಡ್ತಿದ್ರೆ ಉಳಿದವರು ಕೆಲಸ ಕಳೆದುಕೊಂಡವರೋ,ಆ ಭೀತಿಯಲ್ಲಿರುವವರೋ ಒತ್ತಾಯದ ರಜೆಯಲ್ಲಿರುವವರೋ ಆಗಿದ್ದಾರೆ.
ಇಬ್ಬರು ಗಂಡು ಮಕ್ಕಳ ಕುಟುಂಬದಲ್ಲಿ ಒಬ್ಬ ಮಗ ಆಚೆ ದುಡಿಯುತ್ತಿದ್ದರೆ ಇನ್ನೊಬ್ಬನಿಗೆ ಇರುವ ಸಣ್ಣ ತೋಟ ಸಾಕಾಗುತ್ತದೆ ಎಂಬ ಲೆಕ್ಕಾಚಾರ ತಲೆಕೆಳಗಾದ ಆಘಾತದಲ್ಲಿ ತಂದೆತಾಯಂದಿರಿದ್ದರೆ ಇಲ್ಲಿವರೆಗೆ ಎರಡು ದೇಹ ಒಂದು ಜೀವದಂತಿದ್ದ ಅಣ್ಣತಮ್ಮಂದಿರ ನಡುವೆ ದಾಯಾದಿ ಮತ್ಸರ ಆರಂಭವಾಗುತ್ತಿರುವ ಘಟನೆಗಳು ಅಲ್ಲಲ್ಲಿ ಕಾಣುತ್ತಿವೆ. ಕೊರೊನಾ ಕಾರಣದಿಂದ ಹಳ್ಳಿಗಳು ಹೆಚ್ಚಾಗಿಯೇ ತುಂಬಿಕೊಂಡಿವೆ.ಎಸಿ ಕೋಣೆಯ ಕೆಲಸ ಅಭ್ಯಾಸವಿದ್ದವರೂ ಗಮ್ ಬೂಟು ತೊಟ್ಟು ಹ್ಯಾಟ್ ಧರಿಸಿ ಕೈಯಲ್ಲಿ ಒಂದು ಕತ್ತಿಯೋ ಚಾಕೋ ಹಿಡಿದು ತೋಟಕ್ಕೆ ಹೋಗ್ತಿದ್ರೆ ನೋಡಲಿಕ್ಕೆ ಆಹ್ಲಾದವೆನಿಸ್ತದೆ.
ಆದರೂ..ಇದಾವುದೂ ಸರಿಯೆನಿಸುವುದಿಲ್ಲ.
ಕಾಫಿತೋಟದ ಪ್ರಮುಖ ಅದಾಯವಾದ ಕಾಳುಮೆಣಸು ಕಳೆದೆರಡು ವರ್ಷಗಳ ಮಹಾ ಮಳೆಯಿಂದಾಗಿ ರೋಗಕ್ಕೆ ತುತ್ತಾಗಿದೆ.ಕಾಫಿಗೆ ಸಿಗುತ್ತಿರುವ ಬೆಲೆ ಅದರ ಖರ್ಚು ವೆಚ್ಚ ನಿಭಾಯಿಸಲೇ ಕಷ್ಟವಾಗಿರುವಾಗ ನಗರದಿಂದ ಹಣದ ಹರಿವು ನಿಲ್ಲುವುದು ಪರೋಕ್ಷವಾಗಿ ಅಪಾಯದ ಮುನ್ಸೂಚನೆ.ಇದು ಕಾಫಿಯ ಮೇಲೆ ಕೋವಿಡ್ ಪರಿಣಾಮದ ಒಂದು ಮುಖ.ಇನ್ನೂ ಕಾಫಿಯ ಬೆಲೆ ಈಗಾಗಲೇ ನೆಲ ಕಚ್ಚಿದೆ.
ಹೋಟೆಲ್ ,ಮಾಲ್ ,ರೆಸಾರ್ಟ್ ಗಳು ಮುಚ್ಚಿದ ಕಾರಣ ಕಾಫಿಯ ಬಳಕೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಮದುವೆ ಮುಂತಾದ ಅದ್ದೂರಿ ಕಾರ್ಯಕ್ರಮಗಳು,ಸಭೆ ಸಮಾರಂಭ ಗಳು ಪೂರ್ಣ ಪ್ರಮಾಣದಲ್ಲಿ ನಿಂತು ಹೋದದ್ದರಿಂದ ಕಾಫಿಯ ಆಂತರಿಕ ಬಳಕೆ ಮುಕ್ಕಾಲು ಶೇಕಡಾ ಕ್ಷೀಣಿಸಿದೆ.ನಗರ ಜೀವನದಲ್ಲಿ ಅಚಾನಕ್ಕು ತಗ್ಗಿದ ಕುಟುಂಬದ ಆರ್ಥಿಕತೆಯಿಂದಾಗಿ ಕೂಡ ಕಾಫಿ ಸೇವನೆ ಇಳಿಮುಖವಾಗುತ್ತಿದೆಯಂತೆ.ಕಾಫಿ ಉದ್ಯಮ ಒಂದು ಹಂತಕ್ಕೆ ತನ್ನ ಬೆಲೆಗಾಗಿ ನೆಚ್ಚಿರುವ ಆಂತರಿಕ ಬಳಕೆ ಪ್ರತ್ಯಕ್ಷವಾಗಿ ಇಷ್ಟೆಲ್ಲಾ ಇಳಿಗತಿಯನ್ನು ಕಂಡಿದೆ, ಕಾಣುತ್ತಿದೆ.
ಜೊತೆಗೆ ಉತ್ಪಾದನೆ ಮತ್ತು ಬಳಕೆದಾರರ ನಡುವಿನ ಸರಪಳಿ ತುಂಡಾಗಿದ್ದು ಕೂಡ ಕಾಫಿ ಬಳಕೆ ಇಳಿಯಲು ಕಾರಣವಾಗಿದೆ.
ಕಾಫಿ ಟೂರಿಸಮ್ ಗೂ ಹೊಡೆತ
ಇದಲ್ಲದೇ ಕಾಫಿ ಟೂರಿಸಮ್ ಎನ್ನುವ ಕಾನ್ಸೆಪ್ಟ ಅಡಿ ಬೆಳೆಗಾರರು ತಮ್ಮ ತೋಟಗಳಲ್ಲಿ ನಡೆಸುತ್ತಿದ್ದ ರೆಸಾರ್ಟುಗಳು ,ಹೋಮ್ ಸ್ಟೇ ಗಳು ಸಂಪೂರ್ಣವಾಗಿ ಬಂದ್ ಆಗಿ ಹಣದ ಹರಿವಿಗೆ ದೊಡ್ಡ ಅಡಚಣೆ ಮಾಡಿದೆ.ಅಷ್ಟೇ ಅಲ್ಲ.ಈ ಹಾಸ್ಪಿಟಾಲಿಟಿ ಉದ್ಯಮವನ್ನು ಆರಂಭಿಸಲು ಪಡೆದ ಬ್ಯಾಂಕ್ ಸಾಲ ಬಡ್ಡಿ ಚಕ್ರಬಡ್ಡಿಗಳ ಲೆಕ್ಕದಲ್ಲಿ ಬೆಳೆದು ಬೃಹದಾಕಾರ ಪಡೆಯುತ್ತಿದೆ.ಕೊರೊನಾ ಕಾರಣಕ್ಕೆ ಬ್ಯಾಂಕುಗಳು ಯಾವುದೇ ಬಗೆಯ ಕನ್ಸಿಷನ್ನ್ ನೀಡುವ ಸುಳಿವನ್ನು ಇಲ್ಲೀವರೆಗೂ ಕೊಟ್ಟಿಲ್ಲ. ಅಲ್ಲಿಯೂ ಅಳಿವು ಉಳಿವಿನ ಸವಾಲು.
ಇದು ಕಾಫಿಯ ಆಂತರಿಕ ಮಾರುಕಟ್ಟೆಯ ವಿಚಾರವಾದರೆ ಜಾಗತಿಕವಾಗಿ ಮಹಾ ಹೊಡೆತ ಮುಂದಿನ ಒಂದೆರಡು ವರ್ಷದಲ್ಲಿ ಎದುರಾಗಲಿದೆ.
ಕೋವಿಡ್ ಕಾರಣದಿಂದ ಯುರೋಪ್‌ನ ಪ್ರಮುಖ ರಾಷ್ಟ್ರಗಳ ಆರ್ಥಿಕ ಹಿನ್ನಡೆ ಬಹುಶ: ಮುಂದಿನ ವರುಷದ ಭಾರತೀಯ ಕಾಫಿಗೆ ಬೇಡಿಕೆ ಕುಸಿಯಲು ಕಾರಣವಾಗಬಹುದು ಎನ್ನುತ್ತಿದ್ದಾರೆ ತಜ್ಞರು.ಇದು ಕಾಫಿ ಉದ್ಯಮದ ಅಧೋಗತಿಗೆ ಕಾರಣವೂ ಆಗಬಹುದು.ಜಾಗತಿಕವಾಗಿ ಕೂಡ ಕಾಫಿಯ ಬೇಡಿಕೆ ಇಳಿಮುಖವಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು ಎನ್ನುತ್ತದೆ ವರದಿಯೊಂದು.
ವಲಸೆ ಕಾರ್ಮಿಕರ ಕೊರತೆ
ಈ ಎಲ್ಲಾ ಸಮಸ್ಯೆಗಳ ನಡುವೆ ಈ ಸಾಲಿನಲ್ಲಿ ಕಾಫಿ ಕ್ಷೇತ್ರ ಕಾರ್ಮಿಕರ ಕೊರತೆಯನ್ನು ಬಹಳ ದೊಡ್ಡ ಮಟ್ಟದಲ್ಲಿ ಎದುರಿಸಬೇಕಾಗುತ್ತದೆ.ಬಹುತೇಕ ಕಾಫಿತೋಟಗಳಲ್ಲಿ ಅಸ್ಸಾಂ ಕಡೆಯ ವಲಸೆ ಕಾರ್ಮಿಕರು ಕೆಲಸವನ್ನು ನಿಭಾಯಿಸುತ್ತಿದ್ದರು.ವರ್ಷವಿಡೀ ಕೆಲಸ ಬೇಡುವ ಬೆಳೆ ಕಾಫಿಯಾದ್ದರಿಂದ ಮತ್ತು ಕಾರ್ಮಿಕರೇ ನಿಭಾಯಿಸಬೇಕಾದ ಮುಕ್ಕಾಲು ಕೆಲಸಗಳಿರುವುದರಿಂದ ಕಾರ್ಮಿಕ ಕೊರತೆ ಇದಿರಾದರೆ ಬೆಳೆಗಾರ ನೆಲ ಕಚ್ಚಿದಂತೆ.
ಪ್ರತ್ಯಕ್ಷವಾಗಿ ಪರೋಕ್ಷವಾಗಿ ಹತ್ತು ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ಕಲ್ಪಿಸಿರುವ ಕಾಫಿ ಬೆಳೆಗಾರ ಸರ್ಕಾರ ಕೊಡಬಹುದಾದ ಎಲ್ಲಾ ಸವಲತ್ತುಗಳನ್ನು ತನ್ನ ಕಾರ್ಮಿಕರಿಗೆ ಮುಫತ್ತಿನಲ್ಲಿ ನೀಡುತ್ತಾನೆ.
ಕೊರೊನಾ ಕಾರಣದಿಂದ ಈ ಬಾರಿ ಫೆಬ್ರವರಿ ಮಧ್ಯಭಾಗದಲ್ಲಿಯೇ ವಲಸೆ ಕಾರ್ಮಿಕರು ತಮ್ಮ ಊರು ಸೇರಿಕೊಂಡಿದ್ದಾರೆ.ಅವರನ್ನು ಸುರಕ್ಷಿತವಾಗಿ ಊರು ಸೇರಿಸುವ ಕೆಲಸವನ್ನು ಸ್ವತಃ ಬೆಳೆಗಾರರೇ ಮಾಡಿದ್ದಾರೆ.ಆದರೆ..ಕಾಫಿ ಕೊಯ್ಲು ಡಿಸೆಂಬರ ನಿಂದ ಆರಂಭವಾಗುತ್ತದೆ.ಕೊಯ್ಲು ಮತ್ತು ಕೊಯ್ಲೊತ್ತರ ಕೆಲಸಗಳಿಗೆ ಕಾಫಿ ಅತ್ಯಧಿಕ ಸಂಖ್ಯೆಯಲ್ಲಿ ಕಾರ್ಮಿಕರನ್ನುಬೇಡುತ್ತದೆ.ಬಹುಶಃ ಈ ಸಾಲಿನಲ್ಲಿ ಬೆಳೆದ ಬೆಳೆಯನ್ನು ಕಣಕ್ಕೆ ತರುವುದೇ ಹರಸಾಹಸವಾಗುವ ಎಲ್ಲ ಸಾಧ್ಯತೆಗಳೂ ಗೋಚರಿಸುತ್ತಿವೆ. ನೋಡೋಣಾ.ಹೋಪ್ ಫಾರ್ ದಿ ಬೆಸ್ಟ್ ಅಂದುಕೊಂಡು ಮುಂದಡಿ ಇಡಲೇ ಬೇಕಿದೆ.
ಈ ಎಲ್ಲದರ ನಡುವೆ ಮತ್ತೊಂದು ಪಲ್ಲಟ ವನ್ನು ಕಾಫಿ ನಾಡು ನೋಡುವ ಸಾಕಷ್ಟು ಮುನ್ಸೂಚನೆ ಕಾಣುತ್ತಿದೆ. ಬಹುತೇಕ ನಗರದ ಹಣವಂತರಿಗೆ ಒಂದು ಸಣ್ಣ ಕಾಫಿತೋಟದ ಒಡೆಯರಾಗುವ ಆಸೆ ಕೋವಿಡನ ದಯೆಯಿಂದ ಗರಿಗೆದರಿದೆ.ಐದು ಎಕರೆ ಒಳಗಿನ ಕಾಫಿ ತೋಟಗಳು ಅತ್ಯುತ್ತಮ ಬೆಲೆಯಲ್ಲಿ ಮಾರಾಟವಾಗುತ್ತಿದೆ.ಯಾವಯಾವುದೋ ಕಾರಣಕ್ಕೆ ಸಾಲದ ಸುಳಿಯಲ್ಲಿ ಸಿಕ್ಕಿಕೊಂಡಿದ್ದ ಬೆಳೆಗಾರ ಅಚಾನಕ್ಕು ಬಂದ ಒಳ್ಳೆಯ ಬೆಲೆಗೆ ತೋಟ ಮಾರಾಟ ಮಾಡಿ ಸಾಲದಿಂದ ಮುಕ್ತನಾಗಲು ಹವಣಿಸ್ತಿದ್ದಾನೆ.ತೋಟಕ್ಕೆ ಉತ್ತಮ ಬೆಲೆ ಬರುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿದೆಯಾದರೂ “ಭೂಮಿ ಮಾರಿ ಗೆದ್ದೋರಿಲ್ಲ” ಎನ್ನುವ ಮಾತು ಅಷ್ಟೇ ಸತ್ಯ .ಕಾಫಿ ‘ಕರೆಯೋ ಕಾಮಧೇನು’ಅಲ್ಲದಿದ್ರೂ ತೋಟದ ಒಡೆಯ ಎಂದಿಗೂ ಸ್ಥಿತಿವಂತನೇ.
ಕೊರೊನಾ ಕಾರಣದಿಂದ ಗ್ರಾಮೀಣ ಭಾಗದ ಬದುಕು ಅದರಲ್ಲೂ ಮಲೆನಾಡಿನ ಕಾಫಿ ನಾಡಿನ ದಿನಚರಿ ಬಹಳ ಬದಲಾಗಿಲ್ಲ.ಕಾಫಿ ತನ್ನ ಕೆಲಸಗಳನ್ನು ಕರಾರುವಕ್ಕಾಗಿ ಕೇಳುವುದರಿಂದ ಬೆಳೆಗಾರ ಮಾಮೂಲಾಗೇ ಇದ್ದಾನೆ.
ವಲಸೆ ಕಾರ್ಮಿಕರು ಹೋದ ನಂತರದ ಉಳಿದಿರುವ ಸ್ಥಳೀಯ ಕಾರ್ಮಿಕರು ದಿನಕ್ಕೆ ಎರಡ ಕೆಲಸಗಳನ್ನು ಮೀರಿ ಮಾಡುತ್ತಾ ದುಪ್ಪಟ್ಟು ,ಮೂರು ಪಟ್ಟು ಆದಾಯ ಪಡೆಯುತ್ತಿದ್ದಾರೆ.ಸರ್ಕಾರದ ಆಹಾರ ಭಾಗ್ಯ ಯೋಜನೆಯಲ್ಲಿ ಮಾಮುಲಿಗಿಂತ ಹೆಚ್ಚು ಪಡಿತರ ದೊರಕ್ತಿದೆ.ಆ ವರ್ಗ ಎಂದಿಗಿಂತಲೂ ಸುಖವಾಗಿದೆ.ಇರಲಿ. ಸದ್ಯ.ಬಹಳ ಬೇಗಎಲ್ಲವೂ ಇತ್ಯರ್ಥವಾಗಿ, ಕೊರೊನಾ ದೂರಾಗಿ ಬದುಕು ಸಹಜ ಸ್ಥಿತಿಗೆ ಬರುವುದನ್ನು ಎಲ್ಲರಂತೆ ಕಾಫಿ ಬೆಳೆಗಾರನೂ ಎದುರು ನೋಡ್ತಿದ್ದಾನೆ. ಹದಗೆಟ್ಟ ಪರಿಸ್ಥಿತಿಯಲ್ಲಿ ಯಾವುದಾದರೊಂದು ಬೆಳಕಿನ ಕಿರಣ ಕಾಣಬಹುದಾದ ಸಾಧ್ಯತೆಯನ್ನು ಇಲ್ಲಿನ ಯುವ ಸಮೂಹ ಅರಸುತ್ತಿರುವ ಕುರುಹುಗಳೂ ಅಲ್ಲಲ್ಲಿ ಕಾಣುತ್ತಿವೆ.
ತನ್ನ ಗತವೈಭವದ ದಿನಗಳು ಕಾಫಿ ಬೆಳೆಗಾರನಿಗೆ ಶೀಘ್ರ ಮರುಕಳಿಸುತ್ತವೆ ಎನ್ನುವ ಆಶಾವಾದವಂತೂ ಇದೆ.
ಕಾಫಿ ಬೆಳೆಗಾರರಿಗೆ ಮೊದಲೇ ಕಷ್ಟ.ಈಗಂತೂ ಹೇಳೋದೇ ಬೇಡ. ಲೇಖಕಿ ಹೇಳಿದ ಕಥೆನೇ ನಮ್ಮದು
ಕಾಫಿ ಉದ್ಯಮದ ಒಳ ಹೊರಗನ್ನು ಲೇಖಕರು ಚೆನ್ನಾಗಿ ವಿಶ್ಲೇಷಿಸಿದ್ದಾರೆ.
ಬಹಳ ವಿವರವಾಗಿ ಸಮಸ್ಯೆಗಳನ್ನು ವಿವರಿಸಿದ್ದೀರಿ.ನೀವೊಬ್ಬ ಕವಿಯಿತ್ರಿ ಮಾತ್ರವಲ್ಲದೆ ಉತ್ತಮ ಚಿಂತಕರೂ ಆಗಿದ್ದೀರಿ.ಕಾಫಿ ಸಮುದಾಯಕ್ಕೆ ನೀವೊಂದು ಆಸ್ತಿ.ಪ್ರತಿಭೆ ಗೆ ತಕ್ಕ ಅವಕಾಶಗಳು ಮತ್ತು ಪುರಸ್ಕಾರ ದೊರೆಯಲಿ ಎಂದು ಹಾರೈಸುತ್ತೇನೆ.ಮೊನ್ನೆ ಬಿಗ್ ಬಾಸ್ ವಿಜೇತ ಶಶಿಕುಮಾರ್ ಬೇಸಾಯದಲ್ಲಿ ಪ್ರಸ್ತುತ ವಾಗಿರಲು ಕಾರಣಗಳನ್ನು ಅದ್ಭುತ ವಾಗಿ ಟಿವಿ ಚಾನೆಲ್ ಯೊಂದರಲ್ಲಿ ವಿವರಿಸಿದರು.ಅಷ್ಟಾಗಿ ಟಿವಿ ನೋಡದ ನಾನು ಅಕಸ್ಮಾತ್ ಆಗಿ ನೋಡಿದೆ.ಯು ಟ್ಯೂಬ್ ನಲ್ಲಿರಬಹುದು ನೋಡಿ.ಇಂತಹ ಆವಿಷ್ಕಾರಗಳು ಮಾತ್ರ ರೈತನನ್ನು ಉಳಿಸಬಲ್ಲವು.ನನ್ನ ಅಭಿಪ್ರಾಯ ದಲ್ಲಿ ಕಾಫಿ ಬೆಳೆಗಾರರು ಅಲ್ಪ ತೃಪ್ತರು.ನನಗಿರುವ ಶಕ್ತಿಯನ್ನು ಧಾರೆ ಎರೆಯಲು ಕಾತರನಾಗಿದ್ದೇನೆ.ಉದ್ಯಮ ಶೀಲ ಯುವ ಪಡೆ ಸಿಕ್ಕಿದರೆ ಈಗ ಹಗಲೂ ರಾತ್ರಿ ದುಡಿದು ನಮ್ಮ ಕಾಫಿಯ ಮಾರುಕಟ್ಟೆ ಜಾಲದಿಂದ ಬೆಳೆಗಾರರನ್ನು ಉದ್ಯಮಿಗಳನ್ನಾಗಿಸುವ ಕನಸನ್ನು ಕಾಣುತ್ತಿದ್ದೇನೆ.ಕೊರೋನಾ ದಿಂದ ಮನೆಗೆ ಬಂದಿರುವ ಯುವ ಪಡೆಯನ್ನು ಒಗ್ಗೂಡಿಸಿ. ದಾರಿ ತೋರಿಸುತ್ತೇನೆ.