ಪ್ರತೀ ಮಗುವಿನ ಮುದ್ದಾದ ಚಟುವಟಿಕೆ ಅಂದ್ರೆ ಅದು ಬಾಗಿಲಲ್ಲಿ ಬಿಟ್ಟ ದೊಡ್ಡವರ ಚಪ್ಪಲಿಯಲ್ಲಿ ತನ್ನ ಪುಟ್ಟ ಪಾದಗಳನ್ನಿಟ್ಟು ನಡೆಯಲು ಪ್ರಯತ್ನಿಸುವುದು .
ಬಾಲ್ಯದಲ್ಲಿ ನಾವುಗಳು ಚಪ್ಪಲಿ ಇಲ್ಲದೇ ತುಂಬಾ ದಿನಗಳನ್ನ ಕಳೆದಿದೀವಿ.ಹೊಸ ಚಪ್ಪಲಿಗಳನ್ನ ಕೊಂಡು ಆನಂದಿಸಿದೀವಿ.ಅನುಭವಿಸಿದೀವಿ ಹಾಗೇ ಕಳ್ಕೊಂಡು ದುಖ್ಹಿಸಿದೀವಿ .
ಆಗೆಲ್ಲಾ ಚಪ್ಪಲಿ ತಗೋಬೇಕು ಅನ್ನೋದೇ ಒಂದು ದೊಡ್ ಸುದ್ದಿ .ಮನೆಯವರು, ಅಕ್ಕಪಕ್ಕದ ಮನೆಯವರು, ಫ್ರೆಂಡ್ಸು ಎಲ್ಲಾ ಯಾವ್ ಚಪ್ಪಲಿ ತಗೋತೀಯಾ ? ಕಂಪನಿ ಚಪ್ಪಲಿ ತಗೋ ಒಳ್ಳೇ ಬಾಳಿಕೆ ಬರುತ್ತೆ , ಅದು ಕಚ್ಚಲ್ಲ , ಕಿತ್ತೋದ್ರೆ ಪಟ್ಟೀ ಹಾಕಿಸ್ಕೋಬಹುದು ಅಂತೆಲ್ಲಾ ಸಲಹೆ ಸೂಚನೆಗಳನ್ನ ಕೊಡುತ್ತಿದ್ದರು.
ಬ್ರಾಂಡೆಡ್ ಚಪ್ಪಲಿ ಕಚ್ಚಲ್ಲ ಅನ್ನೋ ಬಲವಾದ ನಂಬಿಕೆ ಅವರಲ್ಲಿತ್ತು . ಮನೆಯವರು ನಮಗೆ ಕೊಡಿಸ್ತಿದ್ದಿದ್ದೇ ರಬ್ಬರಿನ ಹವಾಯಿ ಚಪ್ಪಲಿ. ಅದರಲ್ಲಿ ಕಲರಿನ ಅಯ್ಕೆಗೆ ಇದ್ದದ್ದು ಎರಡೇ ಆಪ್ಷನ್ ಒಂದು ನೀಲಿ ಬಣ್ಣದ್ದು ಮತ್ತೊಂದು ಕ್ರೀಂ ಬಣ್ಣದ್ದು.ಹೊಸತರಲ್ಲಿ ಅದೊಂಥರ ಮಜವಾದ ವಾಸನೆ ಇರೋದು.
ಅಪ್ಪ ಅಂಗಡೀಗೆ ಕರ್ಕೊಂಡೋಗಿ ಸೈಜ್ ಆಗುತ್ತಾ ನೋಡು ಎರಡೂ ಒಂದೇ ನಂಬರ್ರಾ ನೋಡು…. ಎಂದು ಚೆಕ್ ಮಾಡಿ ಕೊಡುಸ್ತಾಯಿದ್ರು. ಕಳಕೋಬೇಡ ಅಂತ ಎಚ್ಚರಿಸ್ತಾಯಿದ್ರು .ಅಕಸ್ಮಾತ್ ಚಪ್ಪಲಿ ಏನಾದ್ರೂ ಕಳ್ಕೊಂಡ್ ಮನೇಗ್ ಬಂದ್ರೆ ನಮಗಿರೋದು ಹಬ್ಬ ….ಇನ್ನೂ ಸ್ಟಿಕ್ಕರ್ರೇ ಕಿತ್ತಿರ್ಲಿಲ್ಲ ಆಗಲೇ ಕಳದಾಕ್ಕೊಂಡವ್ನೆ , ನಿಮ್ಮಪ್ಪ ಬರಲಿ ಇರು ನಿನಗೈತೆ , ಎಷ್ಟು ಧೈರ್ಯ ಇದ್ರೆ ಹೊಸಾ ಚಪ್ಪಲಿ ಕಳ್ಕೊಂಡು ಬರ್ತೀಯ , ಮೈಗೆ ಎಣ್ಣೆ ಹಚ್ಕೋ , ಇವತ್ತು ಎಡಗಡೆ ಎದ್ದಿದೀಯಾ ಅನ್ಸುತ್ತೆ……. ಹಿಂಗೆಲ್ಲಾ ಹೆದರಿಸಿ ಇಟ್ಬಿಡೋವ್ರು.
ಮನೆಗೆ ಅಪ್ಪ ಬಂದ್ ತಕ್ಷಣ ಅವರಿಗೆ ಸುದ್ದೀ ಮುಟ್ಸವ್ರು. ಅಪ್ಪ ಮನೆಯವರ ಮಾತಿನಂತೆ ಭಾರಿಸಿ ಕೆಡವವ್ರು. ನಮ್ಮ ನೋವು ಅಳುವಿನ ಆಕ್ರಂದನ ಅಕ್ಕಪಕ್ಕದ ಮನೆಯವರಿಗೂ ಮುಟ್ಟೋದು. ಅವರೂ ಹೊಸ ಚಪ್ಪಲಿ ಕಳದಾಕ್ಕೊಂಡಿರೋದಕ್ಕೆ ಹೊಡೀತಿರೋದು ಅಂತ ಮಾತಾಡ್ಕೋಳೋವ್ರು .
ಅತ್ತು ಸುರಿದು ಮಲಗಿ ಬೆಳಿಗ್ಗೆ ಎದ್ದು ಮುಖ ಗಂಟಾಕ್ಕೊಂಡು ಮೂಲೆಯಲ್ಲಿ ಕುಂತಿದ್ದಾಗ ” ಗೋಪಿ ಮನೇಲಿ ಬಿಟ್ಟಿದ್ನಂತೆ ಅಂತ ಯಾರೋ ಮಾತನಾಡಿಕೊಳ್ಳುವ ವಾಯ್ಸ್ ಕಿವಿಗೆ ಬೀಳೋದು , ಅದನ್ನ ಕೇಳ್ತಾಇದ್ದಂಗೆ ಮುಖ ಅರಳೋಗೋದು , ಗೋಪಿ ತಗೊಂಡು ಬಂದು ಕೊಡೋವ್ನು .ಗೋಪಿಯನ್ನು ಧನ್ಯತಾಭಾವದಿಂದ ನೋಡಿ ಅವನಿಂದ ಚಪ್ಪಲಿ ಈಸ್ಕೊತಾ ಇದ್ವಿ.
ಅಯ್ಯೋ ಮಗನನ್ನು ಅನ್ಯಾಯವಾಗಿ ಹೊಡೆದುಬಿಟ್ವಲ್ಲ ಅನ್ನೋ ಸಣ್ಣ ಪಶ್ಚಾತ್ತಾಪಾನೂ ಮನೆಯವರ ಮುಖದಲ್ಲಿ ಕಾಣ್ತಿರಲಿಲ್ಲ.ಬದಲಾಗಿ ಇನ್ನೊಂದ್ಸಲಾ ಯಾರ ಮನೇಲಾದ್ರೂ ಬಿಟ್ಟುಬಾ ಅದರಲ್ಲೇ ಬೀಳ್ತಾವೇ ಅಂತಾನೇ ಹೇಳೋವ್ರು . ಕೆಲವೊಮ್ಮೆ ರಾತ್ರಿ ಕನಸಿನಲ್ಲಿ ಚಪ್ಪಲಿ ಕಳೆದುಕೊಂಡ ಕೆಟ್ಟ ಕನಸು ಬೇರೇ ಬೀಳೋದು .
ಭಾನುವಾರಾನೋ ರಜಾದಿನಾನೋ ಅದನ್ನ ತೊಳೆದು ಬಿಸಿಲಲ್ಲಿ ಗೋಡೆಗೆ ಒರಗಿಸಿ ನಿಲ್ಲಿಸ್ತಾಇದ್ವಿ . ಕಿತ್ತೋದ್ರೆ ರಿಪೇರಿ ಮಾಡಿಸ್ಕೋತಾ ಇದ್ವಿ. . ಪಟ್ಟಿ ಕಿತ್ತು ಹೊಲಿಸಲಿಕ್ಕೆ ಆಗುವುದಿಲ್ಲ ಅನ್ನೊ ಸಂದರ್ಭದಲ್ಲಿ ಹೊಸ ಪಟ್ಟೀನ ಹಾಕಿಸ್ಕೋತಿದ್ವಿ .ಐದಾರು ಜನ ಫ್ರೆಂಡ್ಸು ಹೊಗ್ತಿದ್ರೆ ಹಿಂದ್ಗಡೆಯಿಂದ ತುಳಿದೋ , ಕಲ್ಲಿಗೆ ಎಡವೋ, ಗುಂಪಿನಲ್ಲಿ ಒಬ್ಬನ್ದಾದ್ರೂ ಚಪ್ಲಿ ಕಿತ್ತೋಗ್ತಿರೋದು ಉಳಿದವರು ಅವನಿಗೆ ಪಿನ್ ಹಾಕೋ , ಪಟ್ಟಿ ಸಿಕ್ಸು , ಹಿಂಗ್ ನಡೀ, ಹಿಂಗೆಲ್ಲಾ ಐಡಿಯಾ ಕೊಡ್ತಿರೋವ್ರು .ಸ್ಕೂಲಿಗೆ ಹೊಸಾ ಚಪ್ಪಲಿ ಹಾಕ್ಕೊಂಡೋದ್ರೆ ಮೇಷ್ಟ್ರು ಸಹ ಎಷ್ಟೋ ಚಪ್ಲಿ ? ಎಲ್ಲಿ ತಗೊಂಡೆ ಅಂತ ಕೇಳೋವ್ರು .
ಅಗೆಲ್ಲಾ ಮನೆಗಳಲ್ಲಿ ಚಪ್ಪಲಿ ಸ್ಟ್ಯಾಂಡ್ ಅಂತ ಇರ್ತಿರಲಿಲ್ಲ ಯಾಕಂದ್ರೆ ಮನೇಲಿ ಎಷ್ಟು ಜನ ಇರ್ತಿದ್ರೋ ಅಷ್ಟೇ ಜೊತೆ ಚಪ್ಪಲಿಗಳು ಇರ್ತಿದ್ವು , ಒಂದು ಜೊತೆ ಹಾಳಾಗೋವರೆಗೂ ಇನ್ನೊಂದ್ ಜೊತೆ ತಗೋತಿರ್ಲಿಲ್ಲ .
ಅಪ್ಪ ಮನೇಗೆ ಬಂದಿದಾರ ಇಲ್ವಾ ಅನ್ನೋದನ್ನ ಅವರ ಚಪ್ಪಲಿಯಿಂದ ಕಂಡುಹಿಡೀತಿದ್ವಿ . ಸಾಮಾನ್ಯವಾಗಿ ಅಪ್ಪನದ್ದು ಚರ್ಮದ ಚಪ್ಪಲಿಯಾಗಿರೋದು ಸಂಸಾರದ ಭಾರ ಹೊತ್ತು ತಿರುಗುತ್ತಿದ್ದಕ್ಕೊ ಏನೋ ಅವರ ಚಪ್ಪಲಿ ನನಗೆ ನೆನಪಿರುವಂತೆ ಸದಾ ಸವೆದಂತೆಯೇ ಕಾಣುತ್ತಿತ್ತು .ಅದಕ್ಕವರು ಸೋಲ್ ಹಾಕಿಸುತ್ತಿದ್ದರು . ಮಳೆ ಬಂದ್ರೆ ನೆಂದೋಗುತ್ತೆ ಅಂತ ಓಡೋಗಿ ಚಪ್ಪಲಿಗಳನ್ನ ಮನೆ ಒಳಗೆ ಇಡ್ತಾಇದ್ವಿ .
ಆಗೆಲ್ಲಾ ಬಸ್ ಸ್ಟ್ಯಾಂಡಿನ ಸಮೀಪ ಫುಟ್ ಪಾತಿನ ಮೇಲೆ ಚಪ್ಪಲಿ ರಿಪೇರಿ ಮಾಡುವವರು ತುಂಬಾ ಮಂದಿ ಕಾಣುತ್ತಿದ್ದರು . ಅವರ ಬಳಿ ನಾವು ಹೋಗಿ ಎಷ್ಟಾಗುತ್ತೆ ಅಂತ ಮುಂಚೆಯೇ ಮಾತಾಡಿ ಬಾರ್ಗೇಯ್ನ್ ಮಾಡತ್ತಿದ್ವಿ.ರಿಪೇರಿ ಮಾಡಿಕೊಟ್ಟ ಮೇಲೆ ಎಷ್ಟು ದಿನ ಬರುತ್ತೆ ಅಂತ ಕೇಳ್ತಿದ್ವಿ.
ಈಗೆಲ್ಲಾ ಬದಲಾಗಿದೆ …. ಮನೆ ಮನೇಗೆ ಚಪ್ಪಲಿ ಗೂಡು ಶೂ ಸ್ಟ್ಯಾಂಡ್ ಗಳಿವೆ .ನೂರಾರು ಬ್ರಾಂಡ್ ಗಳಿವೆ . ಮನೆ ಒಳಗೆ ಉಪಯೋಗಿಸಕ್ಕೇ ಚಪ್ಪಲಿಗಳಿವೆ . ಯಾವ್ ಶೂ ಹಾಕ್ಕೋಬೇಕು ಅಂತ ಕನ್ಫೂಸ್ ಆಗೋ ಅಷ್ಟು ಜೊತೆ ಷೂಗಳಿರುತ್ತವೆ. ಕಳದೋದ್ರೆ ತಲೇನೇ ಕೆಡಸ್ಕೋಳಲ್ಲ ದರಿದ್ರ ಹೋಯ್ತು ಅಂದ್ಕೋತಾರೆ .
ಏನೇ ಹೇಳಿ….. ಬದುಕಲ್ಲಿ ಎಷ್ಟೇ ಚಪ್ಪಲಿ ಸವೆದರೂ …..ಬದುಕು ಸವೆದರೂ ….ಬಾಲ್ಯದ ನೆನಪುಗಳು ಮಾತ್ರ ಯಾವುದೇ ಕಾರಣಕ್ಕೂ ಸವೆಯಲ್ಲ .
ಕಿರಣ ಆರ್
ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.
ನಿಮ್ಮ ಲೇಖನದಿಂದ ನಮ್ಮ ಬಾಲ್ಯದಲ್ಲಿಯೂ ಚಪ್ಪಲಿ ಬಗೆಯ ಅನೇಕ ಘಟನೆಗಳು ನೆನಪಿಗೆ ಬಂದವು. ನಾನು ಎಸ್ಸೆಸ್ಸೆಲ್ಸಿ ನಲ್ಲಿ ಮೊದಲು ಚಪ್ಪಲಿ ಹಾಕಿದ್ದು. ಹವಾಯ್ ಚಪ್ಪಲಿಗೆ ಪಿನ್ ಹಾಕಿದ್ದು, ಉಂಗುಷ್ಟ ಹರಿದರೆ ಅಜ್ಜನ ಚಪ್ಪಲಿ ಎಳುದುಕೊಂಡು ಹೊಲೆಸಿಕೊಂಡು ಬರುತಿದ್ದೆ. ಒಂದೆರಡು ಜೊತೆ ಚಪ್ಪಲಿ ಮನೆಯಲ್ಲಿದ್ದರೆ ಹೆಚ್ಚು. ಈಗಿನ ಟ್ರೆಂಡ್ ನಲ್ಲಿ ನಾವು ಹೋಲಿಕೆಗೂ ನಿಲುಕದ ಸ್ಥಿತಿ
Super 👌
ನಿಜ ಈಗ ಕಾಲ ಬದಲಾಗಿದೆ. ಈಗಿನವರ ಬಳಿ ಹಲವು ಬಗೆಯ ಚಪ್ಪಲಿಗಳು ಇವೆ. ಪುಟ್ಟ ಮಕ್ಕಳಿಗೇ ಚಪ್ಪಲಿಗಳೂ ಕೊಡಿಸುವರು. ನಾನು ಚಪ್ಪಲಿ ಹಾಕಿದು ಎರಡನೇ ವರ್ಷದ ಪಿ.ಯು. ಸಿ ನಲಿ. ಈಗಲೂ ಆ ನೆನಪುಗಳುಹಸಿರಾಗಿವೆ. ಆ ನೆನಪುಗಳೇ ಖುಷಿ ಕೊಡುತ್ತದೆ.
ಹೇಗೆ ವರ್ಣಿಸಲಿ ನನ್ನ ಆನಂದ… ನೆನಪನ್ನು ಬಿಚ್ಚಿಟ್ಟ ಮಾಸ್ತಿಯವರೇ… 🙏
ಹಳೆಯ ನೆನಪುಗಳು ಮಾಸುವುದಿಲ್ಲ
ಚಪ್ಪಲಿ ಏಟು ಅಂದ್ರೆ ಜೀವನ ಪೂರ್ತಿ ನೆನಪು…
ನಿಮ್ಮ ಬರಹ ನನಗೆ ನೆನಪಿನ ಹೊಸ ಚಪ್ಪಲಿ ಏಟು… 😄… ಅಂದ್ರೆ ಮರೆಯಲು ಸಾಧ್ಯವಿಲ್ಲ.
ಪರವಾಗಿಲ್ಲ ಮತೊಮ್ಮೆ ಓದುವ ಉತ್ಸಕ ತುಂಬಿದಿರಿ.
ನೀವು ಹೇಳಿದ ಎಲ್ಲಾವು ನಾನು ಅನುಭವಿಸಿದ್ದೇನೆ, ಆನಂದಿಸಿದ್ದೇನೆ ಜೊತೆಗೆ… ಇಂದು ಗುರುವಾರ ಪ್ರತಿ ಗುರುವಾರ ತಪ್ಪದೆ ಚಾಮರಪೇಟೆ ರಾಯರ ಗುಡಿ ಪ್ರದಕ್ಷಣೆ… ಪ್ರತಿ ಪ್ರದಕ್ಷಣೆಗೆ ಒಂದು ಇಣುಕು ಚಪ್ಪಲಿ ಕಡೆ ನೆನಪು ಮಾಡಿದ್ದಕ್ಕೆ ಕೃತಜ್ಞತೆ.
ಇನ್ನೂ ಬಹಳಷ್ಟು.. ಈಗ ಇಷ್ಟು ಮಾತ್ರ.
ಈ ಕತೆ ಓದುತ್ತಿದ್ದ ಹಾಗೆಯೇ ಬಾಲ್ಯದ ದಿನಗಳ ನೆನಪು ಮಾಡಿಕೊಂಡು ಸಾಮಾನ್ಯವಾಗಿ ಈ ತರಹದ ಅನುಭವ ಎಲ್ಲರಿಗೂ ಆಗಿರುತ್ತದೆ..ಇದು ಪಟ್ಟಣ ಮತ್ತು ದೊಡ್ಡ ಹಳ್ಳಿಯ ಮಕ್ಕಳಿಗಾದರೆ… ಸಣ್ಣ ಸಣ್ಣ ಹಳ್ಳಿಯ ಮಕ್ಕಳ ಚಪ್ಪಲಿ.. ಬೂಟುಗಳ ಅನುಭವವೇ ಬೇರೆ… ಲೇಖಕರು ತುಂಬಾ ಚನ್ನಾಗಿ ಬರೆದಿದ್ದಾರೆ….. ಕೆ. ಡಿ. ಬಡಿಗೇರ..