ಮೊದಲೆಲ್ಲ ಕೊಡೆಗಳೆಂದರೆ ಸಾಕು ಬಣ್ಣದಲ್ಲಿ ಕಪ್ಪು, ಗಾತ್ರದಲ್ಲಿ ದೊಡ್ಡದು ಹಿಡಿಕೆಯೊಂದು ಹಿಡಿಯಲು ಇರಲೇ ಬೇಕು. ಕೊಡೆ ಎಂದರೆ ಸಾಕು ಇವೆಲ್ಲವುಗಳ ಸಮಾಗಮವಿರುವ ಚಿತ್ರ ನಮ್ಮ ಕಣ್ಮುಂದೆ ಬರುತ್ತಿತ್ತು. ಹಳ್ಳಿಯಲ್ಲಿಯ ಪ್ರತಿಷ್ಠಿತರಿಗೆ ಶ್ರೀಮಂತರಿಗೆ ಬೇಸಿಗೆಯಲ್ಲಿ ಕೊಡೆ ಹಿಡಿಯಲೆಂದೇ ಕೆಲವರು ಇರುತ್ತಿದ್ದರು. ಸಿರಿವಂತರಿಗೆ ಕೊಡೆ ಹಿಡಿಯುವುದೇ ಅವರ ಕೆಲಸವಾಗಿತ್ತು. ಬಿಸಿಲಿನ ಧಗೆಗೆ ಮನೆಯ ಯಜಮಾನರು ಹಿರಿಯ ಜೀವಗಳು ಬಿಳಿ ಅಂಗಿ ಬಿಳಿ ಧೋತರವನ್ನುಟ್ಟುಕೊಂಡು ಕಪ್ಪು ಕೊಡೆ ಹಿಡಿದು ಬರುವ ಗತ್ತು, ಗಾಂಭಿರ್ಯ ನೋಡುಗರ ಕಣ್ಮನ ಸೆಳೆಯುತ್ತಿತ್ತು.
ಉಳ್ಳವರು ಮಾತ್ರ ಕೊಡೆ ಹಿಡಿದು ನಡೆಯುತ್ತಿದ್ದರು. ಗೋಣಿಚೀಲದ ಮೂಲೆಗಳು ತಲೆಯನ್ನಾವರಿಸಿಕೊಳ್ಳುವುದೇ ಇಲ್ಲದವರ ಕೊಡೆಗಳು.ಅವುಗಳನ್ನು ಎಳೆಯ ಕಣ್ಣುಗಳು ಜಗದ ಅಚ್ಚರಿಯನ್ನು ನೋಡಿದಂತೆ ಕಣ್ಣು ಪಿಳಿ ಪಿಳಿ ಬಿಟ್ಟು ನೊಡುತ್ತ ನಗುತ್ತಿದ್ದವು. ಗೋಣಿಚೀಲದ ಕೊಡೆಗಳಿಗೆ ಕೈಗಳ ಅವಶ್ಯಕತೆಯಿಲ್ಲ. ಹೆಗಲಿಗೆ ಹಾಕುವ ಚೀಲದಂತೆ ತಲೆಗೆ ಹಾಕಿಕೊಂಡು ನಡೆದರಾಯಿತು.
ಕಾಲ ಬದಲಾದಂತೆ ಪ್ಲಾಸ್ಟಿಕ್ ಚೀಲಗಳನ್ನು ಕೊಡೆಯಂತೆ ಉಪಯೋಗಿಸಿದ್ದೂ ಉಂಟು.’ಹೊಸ ಬಾಟಲಿಯಲ್ಲಿ ಹಳೆಯ ಮದ್ಯದಂತೆ.’ ಅದೇ ಬಣ್ಣ ಬಣ್ಣದ ಪ್ಲಾಸ್ಟಿಕ್ ಚೀಲಗಳನ್ನು ಹೊಲಿದು ರೇನ್ ಕೋಟ್ ಎಂಬ ಹೆಸರಿನೊಂದಿಗೆ ಸೃಜನಶೀಲ ಮಾರ್ಕೆಟ್ ತಲೆಯುಳ್ಳವರು ಮಾರುಕಟ್ಟೆಯಲ್ಲಿ ಬಿಟ್ಟರು. ಸಣ್ಣ ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ಇವು ವರದಾನವಾದವು. ಆಲ್ ಇನ್ ಒನ್ ಎಂಬಂತಿದ್ದ ಕೊಡೆಗಳು ಹೋಗಿ ಮನೆಯಲ್ಲಿರುವ ಪ್ರತಿಯೊಬ್ಬರಿಗೂ ಒಂದೊಂದು ಅವರದೇ ಅಳತೆಯ ರೇನ್ ಕೋಟ್ ಕೊಳ್ಳುವುದು ಚಾಲ್ತಿಗೆ ಬಂತು.
ಜೋರಾಗಿ ಸುರಿಯುವ ಮಳೆಗೆ ರೇನ್ ಕೋಟ್ ಒಂದೇ ಸಾಲದು ಎಂದು ಕೈಯಲ್ಲಿ ಕೊಡೆ ಹಿಡಿದು ಅದರ ಮುಖ ಅರಳಿಸಿ ನಡೆಯುವವರನ್ನು ನೋಡುವುದೇ ಒಂದು ಅಂದ. ಮೈಗಂಟಿದ ರೇನ್ ಕೋಟ್ ಒಂದು ಬಣ್ಣ ತಲೆ ಮೇಲಿನ ಕೊಡೆ ಒಂದು ಬಣ್ಣ. ಹೀಗೆ ವಿವಿಧ ರಂಗು ಕಂಡ ಕಣ್ಣಿಗೆ ಮಳೆಯಲ್ಲಿ ನಡೆದು ಬರುವವರು ಪಕ್ಕ ಬಿಚ್ಚಿ ಹಾರಿ ಬರುವ ಚಿಟ್ಟೆಯಂತೆ ಕಾಣುತ್ತಾರೆ.
ಮನಸ್ಸನ್ನು ಮತ್ತೆ ಹಳೆಯ ಕಪ್ಪು ಕೊಡೆಗಳಿಗೆ ಮರಳಿ ಕರೆದೊಯ್ದರೆ ಅಲ್ಲಿ ಕೊಡೆಗೆ ಕಪ್ಪು ಬಣ್ಣ ಬಿಟ್ಟು ಬೇರಾವ ಬಣ್ಣವೂ ಒಪ್ಪದು. ಅಷ್ಟೊಂದು ಛಾಪನ್ನು ನಮ್ಮ ತಲೆಯಲ್ಲಿ ಒತ್ತಿ ಬಿಟ್ಟಿತ್ತು. ಮಳೆಗಾಲ ಸಂಸ್ಕೃತಿಯ ಪ್ರತೀಕವಾಗಿ ಬಿಟ್ಟಿದ್ದವು. ಸಿರಿವಂತರು ಮಳೆ ಮತ್ತು ಬೇಸಿಗೆಯೆನ್ನದೇ ಸದಾ ಒಂದು ಸಂಗಾತಿಯಂತೆ ಗಾಂಭೀರ್ಯದಿಂದ ಕೊಡೆಯ ಹಿಡಿಕೆಯನ್ನು ಅಂಗಿಯ ಬೆನ್ನಿಗೆ ಸಿಕ್ಕಿಸಿಕೊಂಡು ಬಲು ಠೀವಿಯಿಂದ ನಡೆಯುವ ಪರಿಯು ಚೆಂದವೆನಿಸುತ್ತಿತ್ತು. ಸಮಯ ಸರಿದಂತೆ ಇಲ್ಲದವರ ತಲೆಯ ಮೇಲೂ ಮಳೆಗಾಲದಲ್ಲಿ ತಲೆಯ ಮೇಲೆ ಕಪ್ಪು ಕೊಡೆ ಕಂಗೊಳಿಸಹತ್ತಿತು.
ಈಗ ಕಾಲ ಬದಲಾಗಿದೆ. ಕೊಡೆ ಕೇವಲ ಮಳೆಗಾಲಕ್ಕೆ ಅಷ್ಟೇ ಅಲ್ಲ ಬೇಸಿಗೆಗೂ ತನ್ನ ರಂಗು ರಂಗಿನ ಮೈ ಅರಳಿಸಿಕೊಂಡು ರಸ್ತೆಯಲ್ಲಿ ನಮ್ಮ ಕಣ್ಮನ ಸೆಳೆಯುತ್ತದೆ. ವಿವಿಧ ವಿನ್ಯಾಸಗಳ ರಂಗು ರಂಗಿನ ಕೊಡೆಗಳನ್ನು ಕಣ್ತುಂಬಿಸಿಕೊಳ್ಳುವುದೇ ಚೆಂದ.
ತುಂತುರು ಮಳೆಯಲ್ಲಿ ಅಗ ತಾನೆ ಅರಳಿದ ತಾಜಾ ಹೂಗಳಂತೆ ನಳನಳಿಸುತ್ತವೆ ಕೊಡೆಗಳು. ಕೊಂಡುಕೊಳ್ಳುವ ಪ್ರತಿಯೊಂದು ವಸ್ತುಗಳಲ್ಲಿ ನಾವೀನ್ಯತೆಯನ್ನು ವೈವಿಧ್ಯತೆಯನ್ನು ಬಯಸುವವರು ನಾವೆಲ್ಲ. ಕೆಲವರಂತೂ ತಮ್ಮ ಉಡುಗೆ ತೊಡುಗೆಗಳಿಗೆ ಹೊಂದಿಕೆಯಾಗುವಂಥ ಕೊಡೆಗಳ ಹುಡುಕಾಟದಲ್ಲಿ ಇರುತ್ತಾರೆ. ಇನ್ನೂ ಕೆಲವು ಯುವತಿಯರಂತೂ ಟ್ರೆಂಡಿಯಾಗಿರಬೇಕು. ಸ್ಟೈಲಿಷ್ ಆಗಿರಬೇಕೆಂಬ ಹಟ ಹೊಂದಿರುತ್ತಾರೆ. ಇಂಥವರು ಅನೇಕ ಅಂಗಡಿಗಳನ್ನು ಹೊಕ್ಕು ತಮಗಿಷ್ಟವಾದುದನ್ನೇ ಹೆಕ್ಕಿ ತರುತ್ತಾರೆ. ಉದ್ಯೋಗಸ್ಥ ಮಹಿಳೆಯರು ತಮ್ಮ ವೆನಿಟಿ ಬ್ಯಾಗಿನಲ್ಲಿ ಕೂಡ್ರುವಂಥ ಥ್ರೀ ಫೋಲ್ಡ್ ಛತ್ರಿಗಳಿಗೆ ಹೆಚ್ಚಾಗಿ ಆದ್ಯತೆ ನೀಡುತ್ತಾರೆ.
ಕೊಡೆಗಳು ನಮ್ಮ ದಿನ ನಿತ್ಯ ಜೀವನದ ಅತ್ಯವಶ್ಯಕ ವಸ್ತುಗಳಾಗಿ ಬದಲಾಗಿವೆ. ನಾವು ಹೋದಲೆಲ್ಲ ನಮ್ಮೊಂದಿಗೆ ಅವೂ ಕಾಲು ಹಾಕುತ್ತಿವೆ.ತಲೆಗೆ ಮೈಗೆ ರಕ್ಷಣೆ ಕೊಡುತ್ತಿವೆ. ಹಾಗಂತ ಇವುಗಳ ಆಯ್ಕೆಯಲ್ಲಿ ಹೆಂಗಳೆಯರು ಕೈಗೆ ಸಿಕ್ಕದ್ದನ್ನು ಕಣ್ಣಿಗೆ ಕಂಡದ್ದನ್ನು ಸುಲಭವಾಗಿ ಕೊಳ್ಳುತ್ತಾರೆ ಅಂತಿಲ್ಲ. ಆಕರ್ಷಕವಾದ ಚಿತ್ತಾರ, ವಿಭಿನ್ನ ಬಣ್ಣ, ಗಾತ್ರಗಳನ್ನು ಹೊಂದಿದ ತಮ್ಮ ಧಿರಿಸಿಗೆ ಹೊಂದಿಕೆಯಾಗುವಂಥ ಎಲ್ಲ ರಂಗುಗಗಳನ್ನು ಹೊಂದಿದ ಕಾಮನ ಬಿಲ್ಲಿನ ಕೊಡೆಗಳನ್ನು ಕೊಳ್ಳೋಕೆ ಮನಸ್ಸು ಮಾಡುತ್ತಾರೆ. ಪುಸ್ತಕಗಳಂತೆ ತಮ್ಮ ಮೈ ಮೇಲೆ ಅಕ್ಷರಗಳನ್ನು ಬರೆಸಿಕೊಂಡ ಛತ್ರಿಗಳು ಲಭ್ಯವಿವೆ. ಶಾಲೆ ಕಾಲೇಜಿಗೆ ಹೋಗುವ ಹುಡುಗಿರೆಲ್ಲ ಇವುಗಳಿಗೆ ಮನಸೋತು ಖರೀದಿಸುತ್ತಾರೆ.
ಸಮಯ ಕಳೆದಂತೆ ಕೊಡೆಗಳ ಬೇಡಿಕೆ ಹೆಚ್ಚುತ್ತಿರುವುದನ್ನು ಕಂಡ ತಯಾರಕರು ಗ್ರಾಹಕರ ಉಪಯೋಗಕ್ಕೆ ತಕ್ಕಂತೆ ವಿವಿಧ ನಮೂನೆಯ ಕೊಡೆಗಳನ್ನು ತಯಾರಿಸುತ್ತಿದ್ದಾರೆ. ಅವುಗಳಲ್ಲಿ ಮಳೆಗಳಲ್ಲೂ ಓಡಾಡಿ ಕೆಲಸ ಮಾಡುವಂತವರಿಗೆ ಫುಲ್ ಬಾಡಿ ಅಂಬ್ರೆಲಾ, ಹಿಡಿಕೆಗಳಿಲ್ಲದ (ಹ್ಯಾಂಡ್ಸ್ ಫ್ರೀ) ಅಂಬ್ರೆಲಾ ಆಟಗಾರರಿಗೆ ಉಪಯುಕ್ತವಾಗುವಂಥ ಟೊಪ್ಪಿಗೆ ಹೊಂದಿರುವ ಕೊಡೆಗಳನ್ನೂ ನಿರ್ಮಿಸಿದ್ದಾರೆ. ಈ ವಿಷಯದಲ್ಲಿ ಚಿಕ್ಕ ಮಕ್ಕಳಂತೂ ಬಣ್ಣ ಬಣ್ಣದ ಚಿತ್ತಾರಗಳನ್ನು ಹೊಂದಿದ ನಾನಾ ನಮೂನೆಯ ಕೊಡೆಗಳನ್ನು ಕಂಡು ಮನೆಯಲ್ಲಿ ಹಳೆ ಛತ್ರಿಯಿದ್ದರೂ ಹೊಸ ಛತ್ರಿ ಖರೀದಿಸದೇ ಮಾರ್ಕೆಟಿನಿಂದ ಮರಳಿ ಮನೆಗೆ ಬರಲು ಬಿಡುವುದಿಲ್ಲ. ಅಂದರೆ ಪುಟ್ಟ ಪುಟಾಣಿಗಳಿಗೂ ಹೊಸ ಫ್ಯಾಷನ್ನಿನ ಕೊಡೆಗಳನ್ನು ಮಳೆಯುಲ್ಲಿ ಹಿಡಿದು ಓಡಾಡೋದು ಅಷ್ಟು ಇಷ್ಟ.
ಬಿಟ್ಟೂ ಬಿಡದೇ ಸುರಿಯುವ ಮಳೆಗೆ ಭೂತಾಯಿ ಹೊಸ ಹಸಿರು ಸೀರೆಯನ್ನುಟ್ಟು ತನ್ನ ಸೌಂದರ್ಯ ಹೆಚ್ಚಿಸಿಕೊಳ್ಳುತ್ತಾಳೆ. ಮನಮೋಹಕ ಕೊಡೆಗಳನ್ನು ಹಿಡಿದು ಆನಂದಿಸಲು ಇದೇ ಸಕಾಲ ಎಂದು ಇಷ್ಟವಾದ ಕೊಡೆಗಳನ್ನು ಅರಳಿಸಿಕೊಂಡು ಸುರಿಯುವ ಮಳೆಯಲ್ಲಿ ವಯ್ಯಾರದಿಂದ ಹೆಜ್ಜೆ ಹಾಕುವವರನ್ನು ನೋಡುವುದೂ ಚೆಂದಕಿಂತ ಚೆಂದ. ಹೀಗೆ ರಂಗು ರಂಗಿನ ಕೊಡೆಗಳು ಮಳೆಯ ಸೊಬಗಿನ ರಂಗನ್ನು ಇನ್ನಷ್ಟು ಹೆಚ್ಚಿಸುತ್ತವೆ. ನಾವೆಲ್ಲ ಮಳೆಗಾಲದ ಖುಷಿಯ ಹೂಮಳೆಯನ್ನು ಹೆಚ್ಚಿಸಿಕೊಳ್ಳಲು ಕೊಡೆಯ ಕಡೆ ಆಕರ್ಷಿತರಾಗುತ್ತಿರುವುದಂತೂ ಸುಳ್ಳಲ್ಲ. ಸಂಜೆ ಮಳೆಯಲ್ಲಿ ರಂಗು ರಂಗಿನ ಚಿತ್ತಾರದ ಚಿತ್ತಾಕರ್ಷಕ ಕೊಡೆ ಹಿಡಿದು ಹೆಜ್ಜೆ ಹಾಕಿ ಮಳೆಯ ಸವಿ ಸವಿಯೋಣವಲ್ಲವೇ?
Photo by Bozhidar Petkov on Unsplash
ಮಳೆ ಬರುತ್ತಿದೆ ಹಾಗೇ ಕುಳಿತು ನಿಮ್ಮ ಲೇಖನ ಓದಿದೆ. ನೀವು ಹೇಳಿದಂತೆ ಕೊಡೆ ಎಂದರೆ ಕರಿಕೊಡೆ ಮಾತ್ರ. ಈ ಬಣ್ಣ ಬಣ್ಣದ ಛತ್ರಿಯ ಆಕರ್ಷಣೆ ನನಗೆ ಕಮ್ಮಿ. ಲೇಖನ ಚೆನ್ನಾಗಿದೆ.
ಧನ್ಯವಾದಗಳು ಮೇಡಂ
ಕೊಡೆಯ ಪರಿಚಯದೊಂದಿಗೆ ಭೂತ ವರ್ತಮಾನ ಬದುಕುಗಳ ಪರಿಚಯವೂ ಆಗುತ್ತಿದೆ ಈ ಲೇಖನದಿಂದ ಮೆಡಮ್
ಲೇಖನ ತುಂಬಾ ಚನ್ನಾಗಿ ಮೂಡಿ ಬಂದಿದೆ. ಕೊಡೆ ಮಳೆಗಾಲದಲ್ಲಿ ಮಾನವನ ಅವಿಭಾಜ್ಯ ಅಂಗವಾಗಿದೆ
ಮೇಡಂ ಇದನ್ನು ಓದಿ ಹಳೇ ನೆನಪುಗಳು ಮರುಕಳಿಸಿ ದಂತೆ ಆಗಿತ್ತು.👏👏
ತಮಗೆಲ್ಲ ಧನ್ಯವಾದಗಳು
ಕೊಡೆ ಹಿಡಿದು 8ನೇ ಕ್ಲಾಸಿಗೆ ನಡೆದ ಸುಂದರ ದಿನಗಳು ನೆನಪಿಗೆ ಬಂದವು ಏನೇ ಅನ್ನಿ ಛತ್ರಿ ಹಿಡಿದು ನಡೆವ ಮಜವೇ ಮಜಾ
ಸತ್ಯದ ನುಡಿ
ನಿಮ್ಮ ಲೇಖನ ಒದಿ,
ನಾ ತೆಗೆದುಕೊಂಡು ಹೋದ ಕೊಡೆ ಎಲ್ಲೊ ಮರೆತು ಬಂದು, ಅಪ್ಪನ ಕೊಡೆ ಇಂದ ಬಿದ್ದ ಏಟು ನೆನಪುಗೆ ಬಂತು…. ಧನ್ಯವಾದಗಳು ಮೇಡಂ…