21.4 C
Karnataka
Thursday, November 21, 2024

    ಷೇರುಪೇಟೆಯಲ್ಲಿ ಅಧಿಕ ಲಾಭಗಳಿಸಲು ಹೂಡಿಕೆ ನಿರ್ವಹಿಸುವುದು ಹೇಗೆ?

    Must read

    ಷೇರುಪೇಟೆಯ ಹೂಡಿಕೆಯನ್ನು ಕೇವಲ ವಾಹಿನಿಗಳಲ್ಲಿ ಬರುವ ಕಾರ್ಯಕ್ರಮಗಳನ್ನು, ವಿಶ್ಲೇಷಣೆಗಳನ್ನು ವೀಕ್ಷಿಸಿ ನಿರ್ಧರಿಸುವುದು ಯಶಸ್ಸು ಕಾಣಲು ಸಾಧ್ಯವಿಲ್ಲ. ಅದಕ್ಕೆ ಹಲವಾರು ಆಯಾಮಗಳ ಮೂಲಕ ಪರಿಶೀಲಿಸಿ ನಿರ್ಧರಿಸಬೇಕು.

    ಸಾಮಾನ್ಯವಾಗಿ ಒಂದು ಕಂಪನಿ ಪ್ರಕಟಿಸಿದ ಕಾರ್ಪೊರೇಟ್‌ ಫಲಗಳನ್ನಾಧರಿಸಿ ಅಂದರೆ ಲಾಭಾಂಶ, ಬೋನಸ್‌ ಗಳನ್ನು ಪ್ರಕಟಿಸಿದ ನಂತರ ಹೂಡಿಕೆ ಮಾಡಲು ಆಯ್ಕೆಮಾಡಿಕೊಳ್ಳುವುದು ರೂಢಿಯಲ್ಲಿದೆ. ಆದರೆ ಈಗಿನ ದಿನಗಳಲ್ಲಿ ಕಾರ್ಪೊರೇಟ್‌ ಫಲಗಳು ಪ್ರಕಟವಾಗುವ ಮುನ್ನವೇ ಅದನ್ನೊಳಗೊಂಡ ಬೆಲೆ ಏರಿಕೆಯಾಗಿರುತ್ತದೆ. ಕಾರ್ಪೊರೇಟ್‌ ಫಲಗಳು ಪ್ರಕಟವಾದ ನಂತರ ಹೆಚ್ಚಿನ ಲಾಭ ದೊರೆಯದಂತಾಗಿದೆ.

    • ಸಾಮಾನ್ಯವಾಗಿ ಷೇರುಪೇಟೆಯಲ್ಲಿ ಷೇರಿನ ಬೆಲೆಗಳು ಚುರುಕಾದ ಏರಿಕೆ ಕಂಡಮೇಲೆ ಸಾಮಾನ್ಯ ಹೂಡಿಕೆದಾರರು ಆ ಷೇರನ್ನು ಖರೀದಿಸುವತ್ತ ಗಮನಹರಿಸುತ್ತಾರೆ.ಇಳಿಕೆಯಲ್ಲಿದ್ದಾಗ ಖರೀದಿಸಿದರೆ ಆದಾಯ ಹೆಚ್ಚಿಸಿಕೊಳ್ಳಲು ಅವಕಾಶವಾಗಿರುತ್ತದೆ.
    • ಷೇರನ್ನು ಕೊಂಡಮೇಲೆ ಆ ಷೇರಿನ ಬೆಲೆ ಅನಿರೀಕ್ಷಿತ ಏರಿಕೆ ಕಂಡಾಗ ಅದರಿಂದ ಹೊರಬರದೆ, ಮತ್ತಷ್ಟು ಏರಿಕೆ ಕಾಣಬಹುದೆಂದು ಹೂಡಿಕೆ ಮುಂದುವರೆಸುತ್ತಾರೆ, ನಂತರ ಷೇರಿನ ಬೆಲೆ ಕುಸಿದಾಗ ಬೇಸರಿಸಿಕೊಳ್ಳುತ್ತಾರೆ.
    • ಷೇರಿನ ಬೆಲೆ ಕುಸಿದಾಗ, ಹೆಚ್ಚಿನ ಬೆಲೆಯಲ್ಲಿ ಕೊಂಡಿರುವ ಷೇರುಗಳನ್ನು ನೆನಪಿಸಿಕೊಂಡು, ಅದೇ ಉತ್ತಮ ಷೇರಿನ ಬೆಲೆ ಕುಸಿದಾಗ ಮತ್ತೊಮ್ಮೆ ಕಡಿಮೆ ಬೆಲೆಯಲ್ಲಿ ಖರೀದಿಸುವ ಅವಕಾಶದಿಂದ ವಂಚಿತರಾಗುತ್ತಾರೆ.
    • ಉತ್ತಮ, ಸಾಧನೆಯಾಧಾರಿತ ಕಂಪನಿಯ ಷೇರಿನ ಬೆಲೆ ಕುಸಿದಾಗ ಅದನ್ನು Value pick ಅವಕಾಶ ಎಂದು ಖರೀದಿಸುವುದು ಸೂಕ್ತ. ಕುಸಿತ ಕಾಣಲು ವಹಿವಾಟುದಾರರ ಚಟುವಟಿಕೆಯ ರೂಪವೂ ಪ್ರಮುಖವಾಗಿರುತ್ತದೆ.

    ಹೂಡಿಕೆಗೆ ಮುಂಚೆ ಅರಿಯಬೇಕಾದ ಸಂಗತಿಗಳು:

    ಈ ಕೆಳಗಿನ ಕಂಪನಿಗಳಲ್ಲಿ ಹೂಡಿಕೆಯು LOYALTY ಬೆಳೆಸದೆ ಕೇವಲ ROYALTYಗಾಗಿ ಎಂಬುದನ್ನು ಅರಿಯಬೇಕು. ಅಂದರೆ ಏರಿಕೆಯಾದಾಗ ಮಾರಾಟಮಾಡಿ ಹೊರಬರುವುದೇ ಲಾಭಕರ.

    ರಿಲಯನ್ಸ್‌ ಇಂಡಸ್ಟ್ರೀಸ್‌ :ಮಾಧ್ಯಮಗಳಲ್ಲಿ ಷೇರಿನ ಬೆಲೆ ಅತಿಯಾಗಿ ಏರಿಕೆಯಾದಲ್ಲಿ ಅಥವಾ ಭಾರಿ ಇಳಿಕೆಯಾದಲ್ಲಿ ಹೆಚ್ಚು ಪ್ರಚಾರ ನೀಡಲಾಗುವುದು. ಇತ್ತೀಚೆಗೆ ರಿಲಯನ್ಸ್‌ ಇಂಡಸ್ಟ್ರೀಸ್‌ ಬಗ್ಗೆ ಭಾರಿ ಪ್ರಚಾರ ನೀಡಲಾಗುತ್ತಿದೆ. ಈ ಕಂಪನಿಯ ಷೇರಿನ ಬೆಲೆ ಕಳೆದ ಮಾರ್ಚ್‌ ಅಂತ್ಯದಲ್ಲಿದ್ದ ರೂ.900 ರ ಸಮೀಪದಿಂದ ರೂ.2,100 ರ ಸಮೀಪಕ್ಕೆ ಜಿಗಿತ ಕಂಡಿದೆ. ಕಂಪನಿ ಉತ್ತಮವಾದುದೇ ಆದರೆ ಹೂಡಿಕೆ ಮಾಡುವ ಉದ್ದೇಶ ಲಾಭಗಳಿಕೆಯಲ್ಲವೇ? ಈಗಿನ ಬೆಲೆ ರೂ.2,100 ರ ಸಮೀಪ ಹೂಡಿಕೆಮಾಡಿದಲ್ಲಿ ಯಾವ ರೀತಿಯ ಏರಿಕೆ ನಿರೀಕ್ಷೆ ಮಾಡಬಹುದು. ಒಂದು ವೇಳೆ ಧೀರ್ಘಕಾಲೀನ ಹೂಡಿಕೆ ಎಂದಾದರೂ, ಆ ಕಂಪನಿ ವಿತರಿಸಬಹುದಾದ ಡಿವಿಡೆಂಡ್‌ ಆದರೂ ಏನು? ರೂ.2,100 ರ ಹೂಡಿಕೆಗೆ ರೂ.6.50 ಯ(ಹಿಂದಿನ ವರ್ಷದ ಡಿವಿಡೆಂಡ್‌ ಪ್ರಮಾಣ) ಡಿವಿಡೆಂಡ್‌ ಲಭಿಸುತ್ತದೆ ಅದು ಒಂದು ವರ್ಷದ ಕಾಲ ಸಲಹಬೇಕಾಗುತ್ತದೆ. ಅಂದರೆ ರೂ.2,100 ಹೂಡಿಕೆಗೆ ರೂ.6.50ಯ ನಿಶ್ಚಿತವಲ್ಲದ ಆದಾಯ ಉತ್ತಮ ಹೂಡಿಕೆಯೇ? ನೆನಪಿನಲ್ಲಿಡಿ: ಷೇರುಪೇಟೆಯಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರಿನ ಒಂದು ರೂಪಾಯಿ ಏರಿಕೆ ಆ ಕಂಪನಿಯ ಮಾರ್ಕೆಟ್‌ ಕ್ಯಾಪ್‌ ನ್ನು ರೂ.633.94 ಕೋಟಿಯಷ್ಟು ಹೆಚ್ಚಿಸುತ್ತದೆ. ಹಾಗಾಗಿ ಆ ಕಂಪನಿಯ ಮಾಲಿಕರ ನೆಟ್‌ ವರ್ಥ್‌ ಷೇರಿನಬೆಲೆಯೊಂದಿಗೆ ಹೆಚ್ಚುತ್ತಿದೆ. ಷೇರಿನ ಬೆಲೆ ಇಳಿಕೆಯಾದಲ್ಲಿ ಅದೇ ಪ್ರಮಾಣದ ಮಾರ್ಕೆಟ್‌ ಕ್ಯಾಪ್‌ ಇಳಿಕೆಯಾಗುತ್ತದೆ ಎಂಬುದು ಗಮನಿಸಬೇಕು.

    ಕೋಟಕ್‌ ಮಹೀಂದ್ರ ಬ್ಯಾಂಕ್:ಕೋಟಕ್‌ ಮಹೀಂದ್ರ ಬ್ಯಾಂಕ್‌ ಸಹ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನ ಸೆನ್ಸೆಕ್ಸ್‌ ನಲ್ಲಿರುವ ಒಂದು ಪ್ರಮುಖ ಕಂಪನಿಯಾಗಿದೆ. ಈ ಷೇರಿನ ಬೆಲೆ ಸಹ ಮಾರ್ಚ್‌ ನಲ್ಲಿ ರೂ.1,000 ದ ವರೆಗೂ ಕುಸಿದು ನಂತರ ರೂ.1,400 ರವರೆಗೂ ಪುಟಿದೆದ್ದು ಸಧ್ಯ ರೂ.1,342 ರ ಸಮೀಪ ವಹಿವಾಟಾಗುತ್ತಿದೆ. ಈಗಾಗಲೇ ಗರಿಷ್ಠ ಹಂತದಲ್ಲಿರುವ ಈ ಷೇರಿನಲ್ಲಿ ಹೂಡಿಕೆಗೆ ಮುಂಚೆ ಈ ಹಂತದಲ್ಲಿ ಹೂಡಿಕೆ ಯಾವ ರೀತಿ ಲಾಭ ಅಥವಾ ಆದಾಯ ಗಳಿಸಿಕೊಡುತ್ತದೆ ಎಂಬುದನ್ನು ಅರಿಯಬೇಕು. ಇನ್ನು ಈ ಕಂಪನಿ ವಿತರಿಸುವ ಡಿವಿಡೆಂಡ್‌ 2019 ರಲ್ಲಿ ಪ್ರತಿ ಷೇರಿಗೆ 80 ಪೈಸೆ ಮಾತ್ರ. ಈ ವರ್ಷ ಲಾಭಾಂಶವನ್ನು ಕೈ ಬಿಟ್ಟಿದೆ. ಅಂದರೆ ಹೂಡಿಕೆ ಮಾಡಬೇಕಾದಲ್ಲಿ ಷೇರಿನ ಬೆಲೆ ಏರಿಕೆಯ ನಿರೀಕ್ಷೆಯಿಂದ ಮಾಡಬೇಕು, ಅದರ ಸಾಧ್ಯತೆ ತೀರ ಕಡಿಮೆ. ಇನ್ನು ವಿತರಿಸುವ ಡಿವಿಡೆಂಡ್‌ ಪ್ರಮಾಣ ಕಳಪೆಮಟ್ಟದ್ದಾಗಿದೆ. ಅಂದರೆ ಕೇವಲ speculative interest ನಿಂದ ಹೂಡಿಕೆಗೆ ಆಯ್ಕೆಮಾಡಕೊಳ್ಳಬೇಕಷ್ಟೆ.

    ಹೂಡಿಕೆಯಿಂದ ಲಾಭವನ್ನು ಯಾವ ರೀತಿ ಗಳಿಸಲು ಸಾಧ್ಯ ಎಂಬುದಕ್ಕೆ ಹಿಂದಿನವಾರದ ಉದಾಹರಣೆ ಗಮನಿಸಿ:

    ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್‌: ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್‌ ಕಂಪನಿಯ ಮೊದಲ ತ್ರೈಮಾಸಿಕ ಸಾಧನೆಯ ಅಂಕಿ ಅಂಶಗಳು ಉತ್ತಮವಾಗಿದ್ದ ಕಾರಣ ಬುಧವಾರದಂದು ಷೇರಿನ ಬೆಲೆ ರೂ.471 ರ ಸಮೀಪದಿಂದ ಆರಂಭವಾಗಿ ನಂತರ ರೂ.440 ರ ಸಮೀಪಕ್ಕೆ ಕುಸಿಯಿತು. ಆದರೆ ಗುರುವಾರದಂದು ರೂ.480 ರವರೆಗೂ ಏರಿಕೆ ಕಂಡು ಶುಕ್ರವಾರ ರೂ.530 ರ ವಾರ್ಷಿಕ ಗರಿಷ್ಠ ದಾಖಲಿಸಿತು. ಅಂದರೆ ಎರಡೇ ದಿನಗಳಲ್ಲಿ ರೂ.90ರಷ್ಟು ಏರಿಕೆ ಕಂಡಿದೆ. ಇಂತಹ ಅಸಹಜ ಏರಿಕೆಯ ಲಾಭ ಪಡೆದುಕೊಂಡಲ್ಲಿ ಮಾತ್ರ ಹೂಡಿಕೆ ಸುರಕ್ಷಿತ. ಇದೇ ಷೇರಿನ ಬೆಲೆ ಮತ್ತೊಮ್ಮೆ ಕುಸಿದಾಗ ಪುನ: ಖರೀದಿಸಬಹುದಲ್ಲವೆ?

    ಗ್ರಾಫೈಟ್‌ ಇಂಡಿಯಾ:ಈ ಕಂಪನಿಯ ಷೇರು ಹಿಂದಿನ ವರ್ಷ ಜೂನ್‌ ತಿಂಗಳಲ್ಲಿ ಪ್ರತಿ ಷೇರಿಗೆ ರೂ.35 ರಂತೆ ಡಿವಿಡೆಂಡ್‌ ಘೋಷಿಸಿದಾಗ ಷೇರಿನ ಬೆಲೆ ರೂ.430 ರ ಸಮೀಪಕ್ಕೆ ಜಿಗಿದು ನಂತರದಿನಗಳಲ್ಲಿ ಕುಸಿಯುತ್ತಾ ಬಂದು ಈ ವರ್ಷ ಮಾರ್ಚ್‌ ನಲ್ಲಿ ರೂ.103ರವರೆಗೂ ಜಾರಿ ನಂತರ ಸ್ವಲ್ಪ ಚೇತರಿಕೆ ಕಂಡಿತು. ಹಿಂದಿನ ವಾರದ ಆರಂಭದಲ್ಲಿದ್ದ ರೂ.163 ರ ಸಮೀಪದಿಂದ ವಾರಾಂತ್ಯಕ್ಕೆ ರೂ.192 ವರೆಗೂ ಏರಿಕೆ ಕಂಡಿದೆ. ಈ ಕಂಪನಿಯು ಈ ತಿಂಗಳ 12 ರಂದು ತನ್ನ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿರುವ ಕಾರಣ ಈ ಜಿಗಿತ ಕಂಡಿದೆ.
    ಹೀಗೆ ರಭಸದ ಏರಿಳಿತಗಳನ್ನು ನಮ್ಮ ಅನುಕೂಲಕ್ಕೆ ಪರಿವರ್ತಿಸಿಕೊಳ್ಳುವ ನೈಪುಣ್ಯತೆ ಬೆಳೆಸಿಕೊಂಡಲ್ಲಿ ಈಗಿನ ಅತ್ಯಲ್ಪ ಬಡ್ಡಿ ಯುಗದಲ್ಲಿ ಬಂಡವಾಳವನ್ನು ಸ್ವಲ್ಪಮಟ್ಟಿನ ಸುರಕ್ಷತೆಯೊಂದಿಗೆ ಬೆಳೆಸಬಹುದು.
    ಹೃದಯ ಮತ್ತು ಮೆದುಳನ್ನು ಉಪಯೋಗಿಸುವ ಕಲೆಯನ್ನು ಕರಗತ ಮಾಡಿಕೊಂಡರೆ, ವೃತ್ತಿ , ಪ್ರವೃತ್ತಿಗಳಲ್ಲಿ ಯಶಸ್ಸು ಶತಸಿದ್ಧ.

    ಹೂಡಿಕೆಯನ್ನು ನಿರ್ದಿಷ್ಟ ಅವಧಿಗೆ ಎಂದು ಸೀಮಿತಗೊಳಿಸದೆ ಪೇಟೆ ನೀಡುವ ಅವಕಾಶಗಳನ್ನು ತನ್ನದಾಗಿಸಿಕೊಂಡಲ್ಲಿ ಹೆಚ್ಚಿನ ಆದಾಯವನ್ನು ಗಳಿಸುವುದರೊಂದಿಗೆ ಬಂಡವಾಳವನ್ನು ಸುರಕ್ಷಿತವಾಗಿರಿಸಬಹುದಲ್ಲವೇ? ಆದರೆ ಹೂಡಿಕೆ ಮಾತ್ರ ಉತ್ತಮ ಕಂಪನಿಗಳಲ್ಲಿರಬೇಕು.

    ಅಂತಿಮವಾಗಿ ಷೇರುಪೇಟೆಯ ಯಶಸ್ಸಿಗೆ ಅಧ್ಯಯನ, ಅನುಭವ, ಚಿಂತನೆಗಳು ಅತ್ಯವಶ್ಯಕ. ಅಧ್ಯಯನದಿಂದ ಅರಿವು, ಅನುಭವದಿಂದ ತಿಳಿವು, ಚಿಂತನೆಯಿಂದ ಸುಳಿವು ಲಭಿಸುತ್ತದೆ. ಅರಿವು- ತಿಳಿವು-ಸುಳಿವುಗಳಿಂದ ಹಣವು.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!