ಡ್ರ್ಯಾಗನ್ ಫ್ರುಟ್ ಎಂಬ ಹಣ್ಣು ಆಕಾರದಲ್ಲೇನು ಅಂಥಾ ದೊಡ್ಡದಲ್ಲ. ಗುಲಾಬಿ ಬಣ್ದದ ದೇಹದ ಮೇಲೆ ಹಳದಿಯ ಪಕಳೆಗಳು. ಹೊರನೋಟಕ್ಕೆ ಸುಂದರವಾಗಿ ಕಾಣುತ್ತದೆ. ಇಂಥ ಹಣ್ಣಿನ ರುಚಿಯನ್ನು ಒಮ್ಮೆ ನೋಡಬೇಕೆನ್ನಿಸಿತು.ಮಾರ್ಟಗಳಿಗೋ ಮಾಲ್ ಗಳಿಗೋ ಹೋದರೆ ಅಲ್ಲಿನ ಅಂಗಡಿಗಳಲ್ಲಿ ಇಂಥ ಬಣ್ಣ ಬಣ್ಣದ ತರಹೆವಾರು ಹಣ್ಣು- ತರಕಾರಿಗಳಿರುತ್ತವೆ. ಅವು ಬಣ್ಣದಿಂದಲೇ ಆಕರ್ಷಿಸುತ್ತವೆ. ಹಾಗೆ ಸಾಲಾಗಿ ಜೋಡಿಸಿಟ್ಟ ನೂರಾರು ಟ್ರೇಗಳಲ್ಲಿ ಡ್ರ್ಯಾಗನ್ ಫ್ರುಟ್ ಭಿನ್ನವಾಗಿ ಕಾಣುತ್ತದೆ. ಅದರ ಹೆಸರು ಕೇಳಿ ಚೀನಾದ್ದೇ ಎಂದು ಕಣ್ಣಗಲಿಸುತ್ತಿರುವಾಗಲೇ ಅದು ಅಮೇರಿಕಾದ ಹಣ್ಣು ಎಂದು ತಿಳಿದು ಕೊಂಚ ನಿರಾಳವಾಯಿತು.
ಸಾವಿರಾರು ಮೈಲಿ ದಾಟಿ ಬರುವ ಇಂಥ ಹಣ್ಣುಗಳು ಹೊತ್ತು ಬರುವ ಬ್ಯಾಕ್ಟೀರಿಯಾಗಳ ಬಗ್ಗೆ ನನಗೆ ಸದಾ ಎಚ್ಚರ. ಏಕೆಂದರೆ ಅವು ಬಂದು ಬೀಳುತ್ತಿರುವುದು ಭಾರತದಂಥ ಕ್ವಾಲಿಟಿ ಮಾಪಕಗಳೇ ಇಲ್ಲದ ಬ್ರಹತ್ ಮಾರುಕಟ್ಟೆಗೆ. ಒಮ್ಮೆ ಸೇಬು ಹಣ್ಣಿನ ಬಗ್ಗೆ ಓದುತ್ತಿದ್ದಾಗ ಯಾವ ಸೇಬಿನಲ್ಲಿ ಎಷ್ಟೆಷ್ಟು ಬ್ಯಾಕ್ಟೀರಿಯಾಗಳಿರುತ್ತವೆ ಎಂದು ನೋಡಿದರೆ ನಮ್ಮ ಕಾಶ್ಮೀರದ ಅಥವಾ ಶಿಮ್ಲಾದ ಸೇಬಿನಲ್ಲೇ ಕಡಿಮೆ ಇರುವುದು ತಿಳಿದಿತ್ತು. ಆಗಿನಿಂದ ದುಪ್ಪಟ್ಟು ಬೆಲೆಯ, ಆಕರ್ಷಕ ಹೊಳಪಿನ ‘ಗಾಲಾ’ ಇತ್ಯಾದಿ ಲೇಬಲ್ ಹಚ್ಚಿದ ಹಣ್ಣುಗಳನ್ನು ಮುಟ್ಟುವುದೇ ಇಲ್ಲ. ಆದರೂ ಡ್ರ್ಯಾಗನ್ ಫ್ರುಟ್ ಸೆಳೆತದಿಂದ ಅದನ್ನು ತರಿಸಿದ್ದಾಯಿತು. ಅದೂ ಸ್ಯಾಂಪಲ್ಲಿಗಾಗಿ ಒಂದೇ ಹಣ್ಣು! ಅದರ ಮೇಲಿನ ಸಿಪ್ಪೆ ತೆಗೆಯಲು ಆರಂಭಿಸಿದಂತೆ ಪಕ್ಕದಲ್ಲಿದ್ದ ಮಗ ‘ಅದು ನಮಗಲ್ಲ’ ಎಂದು ನಗಲು ಆರಂಭಿಸಿದ.
ಆ ಹಣ್ಣು ಕಾಣಲು ಮಾತ್ರ ಡ್ರ್ಯಾಗನ್ ಹಾಗೆ ಕಠಿಣ. ಮೇಲಿನ ಸಿಪ್ಪೆ ಸುಲಿದು ಹಣ್ಣನ್ನು ಕತ್ತರಿಸಿದರೆ ಒಳಗೆ ಜೆಲ್ಲಿಯ ಹಾಗೆ ಇರುವ ಬಿಳಿ ತಿರುಳಲ್ಲಿ ಸಾಲಾಗಿ ಜೋಡಿಸಿಟ್ಟ ಪುಟ್ಟ ಪುಟ್ಟ ಕರಿಮಣಿಗಳು. ನೋಡಲಂತೂ ಚಂದವೇ. ಒಂದು ಚೂರು ಕತ್ತರಿಸಿ ಮಗನ ಎದುರು ಹಿಡಿದರೆ ನನಗೆ ಬೇಡ ಎಂತಲೇ ಹೇಳಿದ. ಈಗ ಮಾಡಿದ್ದುಣ್ಣೋ ಮಾರಾಯ ಸರದಿ. ಒಂದು ಚೂರು ತಿನ್ನುವಷ್ಟರಲ್ಲೇ ಆಸ್ವಾದನೆಯ ಮಂದಹಾಸ ಮೂಡದಿದ್ದುದ ನೋಡಿ ಪಕ್ಕದಲ್ಲಿ ನಗು ಶುರುವಾಯಿತು.ಅದಕ್ಕೇ ನಾನು ಹೇಳಿದ್ದು ಅದು ನಮಗಲ್ಲ ಅಂತಾ. ಅದೇನಿದ್ದರೂ ಒಂದೊಂದು ಚೂರು ಹಣ್ಣು ತಿನ್ತಾರೆ ನೋಡು ಅವರಿಗೆ ಅಂದ. ಅಲ್ಲಿಗೆ ಡ್ರ್ಯಾಗನ್ ಫ್ರುಟ್ ಕತೆ ಮುಗಿಯಿತು.
ನಮ್ಮೂರ ಹಣ್ಣು
ಆ ಕ್ಷಣಕ್ಕೆ ನಮ್ಮ ಊರಲ್ಲಿ ಗೆಳತಿಯ ಮನೆಯ ಹಿತ್ತಲಲ್ಲಿದ್ದ ಪನ್ನೀರ ಹಣ್ಣಿನ. ಮರ ನೆನಪಾಯಿತು. ಹಸಿರು ಮೋದಕಗಳು ತೂಗಿದಂತೆ ಕಾಣುವ ಈ ಹಣ್ಣಿಗೆ ಇರುವ ಘಮ ಬೇರಾವ ಹಣ್ಣಿಗೂ ಇಲ್ಲ. ತಿಂದರೆ ಮನಸ್ಸೆಲ್ಲಾ ಆ ಘಮದಿಂದಲೇ ಉಲ್ಲಸಿತವಾಗುತ್ತಿತ್ತು. ಆ ಮರಕ್ಕೆ ನಮ್ಮ ಲಗ್ಗೆ ಮಧ್ಯಾನ್ಹ ಮೂರಕ್ಕೆ. ಅವಳ ಮನೆಯಲ್ಲಿ ಎಲ್ಲರೂ ಊಟ ಮಾಡಿ ಮಲಗಿದ ಮೇಲೆ ಗೆಳೆತಿಯರೆಲ್ಲ ಸೇರಿ ಅವಳ ಮನೆಯಲ್ಲಿ ಅವಳ ಜೊತೆಯೇ ಹಣ್ಣು ಕದಿಯುತ್ತಿದ್ದೆವು. ಮರದ ಹಣ್ಣುಗಳನ್ನೆಲ್ಲ ಖಾಲಿ ಮಾಡದೇ ಕದಲುತ್ತಿರಲಿಲ್ಲವಾದ್ದರಿಂದ ಕದಿಯುವುದು ಅನಿವಾರ್ಯವಾಗಿತ್ತು. ಆ ಹಣ್ಣಿನ ಕಂಪಿನಿಂದ ಸೇರಿದ ಸವಿ ಈಗಲೂ ನಾಲಿಗೆಗೆ ನೆನಪಿದೆ.
ಮಾವಿನ ಹಣ್ಣನ್ನು ಕತ್ತರಿಸಿ ತಿಂದ ಬಾಲ್ಯವೇ ಅಲ್ಲ ನಮ್ಮದು. ಎಲ್ಲರ ಮನೆಗಳಲ್ಲೂ ಮರಗಳಿರುತ್ತಿದ್ದವು. ಲೆಕ್ಕ ಮಾಡಿ ಕಲ್ಲು ಹೊಡೆದು ಹಣ್ಣು ಬೀಳಿಸಿ ಎಲ್ಲರೂ ಒಂದೊಂದು ಹಣ್ಣು ಹಿಡಿದು ಮುಂಗೈವರೆಗೆ ರಸ ವಸರಿ ತಿಂದರೇ ಆ ಹಣ್ಣಿಗೆ ಗೌರವ. ಆಗ ಹಣ್ಣುಗಳಿಗೆ ಕೆಜಿಯ ಲೆಕ್ಕ ಇರಲಿಲ್ಲ. ಅದೇನಿದ್ದರೂ ಬುಟ್ಟಿಗಳ ಲೆಕ್ಕದಲ್ಲಿ ಮಾರಾಟವಾಗುತ್ತಿದ್ದ ಕಾಲ. ಹಣ್ಣಿನಿಂದಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಮಕ್ಕಳು ನಾವಾಗಿದ್ದೆವು.
ಹಲಸಿನ ರಾಜ ಚಂದ್ರಬಕ್ಕೆ ಹಣ್ಣು. ಕೆಂಡಸಂಪಿಗೆಯ ಬಣ್ಣದ ಈ ಹಣ್ಣಿನಲ್ಲೇ ಜೇನುತುಪ್ಪದ ಸವಿ. ಮನೆಯ ಹಿರಿಯರ ಜೊತೆ ಸೇರಿ ಹಲಸಿನ ಹಣ್ಣು ಕತ್ತರಿಸುವುದನ್ನೂ ಕಲಿತಿದ್ದೆವು. ಅದರಲ್ಲಿ ಬಿಳಿಯ ಅಂಟು ದ್ರವ ಸೋರುವುದರಿಂದ ಕೈಗೆ ಎಣ್ಣೆ ಹಚ್ಚಿಕೊಂಡು ತೊಟ್ಟಿನ ಭಾಗದಲ್ಲಿ ಕತ್ತಿಯನ್ನು ತೂರಿ ಸ್ವಲ್ಪ ಸಡಿಲಿಸಿಕೊಂಡು ತೊಟ್ಟನ್ನು ತಿರುಗಿಸಿದರೆ ಒಳಗೆ ಹಣ್ಣಿಗೆ ಅಂಟಿಕೊಂಡಿರುವ ಆ ಭಾಗ ಪೂರ್ಣವಾಗಿ ಬಿಟ್ಟು ಹಣ್ಣು ಬಾಯಿಬಿಟ್ಟು ಭಾಗವಾಗುತ್ತದೆ. ತಿನ್ನಲು ಆರಂಭಿಸುವುದು ಮಾತ್ರ ಗೊತ್ತಾಗುತ್ತಿತ್ತು. ಕೊನೆಗೆ ಅಂದಿನ ಊಟವೂ ಅದೇ.
ಪೇರಲೇ ಮರದಲ್ಲಿ ಗಿಳಿಗಳಿಂದ ಹಣ್ಣುಗಳನ್ನು ರಕ್ಷಿಸಿ ತಿನ್ನುವುದಕ್ಕೆ ಉಳಿಸಿಕೊಳ್ಳುವುದು ಬಹಳ ಕಷ್ಟದ ಕೆಲಸ. ಮರದ ಮೇಲೆ ಕುಳಿತೇ ಹಣ್ಣನ್ನು ತಿನ್ನುವುದು ಪೇರಲೇ ಹಣ್ಣಿನ ಗಮ್ಮತ್ತು. ತೀರ ಎತ್ತರವಲ್ಲದ, ಸುಲಭವಾಗಿ ಹತ್ತಬಹುದಾದ ಹಾಗೂ ಸಾಕಷ್ಟು ಟಿಸಿಲುಗಳು ಇರುವುದರಿಂದ ಅಲ್ಲೇ ಕುಳಿತು ತಿಂದರೇನೇ ಪೇರಲೆ ಹಣ್ಣು ತಿಂದಂತೆ.
ಇನ್ನು ಕಾಡು ಹಣ್ಣುಗಳ ಸ್ವಾರಸ್ಯವೇ ಬೇರೆ. ಕವಳೆ ಹಣ್ಣು , ಮುಳ್ಹಣ್ಣು, ಸಂಪಿಗೆ ಹಣ್ಣು … ಅದೆಷ್ಟು ಬಗೆಯ ಹಣ್ಣುಗಳು. ಅವೆಲ್ಲ ಪಟ್ಟಣಗಳಿಗೆ ತಲುಪಿಯೇ ಇಲ್ಲ. ಮಲೆನಾಡ ಊರುಗಳಲ್ಲಿ ಇವೆಲ್ಲ ಈಗಲೂ ಸಿಗುತ್ತವೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕುಮಟಾ ಬಸ್ ಸ್ಟ್ಯಾಂಡಿನಲ್ಲಿ ಹಾಲಕ್ಕಿ ಹೆಂಗಸರು ಹಲಸಿನ ಎಲೆಗೆ ಕಡ್ಡಿ ಚುಚ್ಚಿ ದೊನ್ನೆ ಮಾಡಿ ಮಾರುತ್ತಾರೆ. ಅವರ ಬುಟ್ಟಿಗಳಲ್ಲಿ ತುಂಬಿರುವ ಕಂಡು ಬಣ್ಣಗಳ, ಸಹಜ ಹೊಳಪಿನ, ಯಾವುದೇ ರಾಸಾಯನಿಕವಿಲ್ಲದೆ ಕಾಡಲ್ಲಿ ಹಾಯಾಗಿ ಬೆಳೆದ ಮರಗಳು ನೀಡುವ ಈ ಹಣ್ಣುಗಳನ್ನು ತಿನ್ನುವ ಆನಂದವೇ ಬೇರೆ.
ನಮ್ಮ ಹಣ್ಣುಗಳೇ ನಮಗ ಪಾಡ
ಹೀಗೆ ಒಂದೊಂದು ಹಣ್ಣಿಗೂ ಒಂದೊಂದು ಕತೆ ತೆರೆದುಕೊಳ್ಳುತ್ತದೆ. ಅದಕ್ಕಾಗಿಯೇ ಅವನು ಹೇಳಿದ್ದು ಅದು ನಮಗಲ್ಲ ಎಂದು. ಏನಿದ್ದರೂ ನಮ್ಮ ಹಣ್ಣುಗಳೇ ನಮಗ ಪಾಡ. ಅಂದ ಹಾಗೆ ಅವನು ಚಿಕ್ಕವನಿದ್ದಾಗ ಹೇವರ್ಡ್ಸ್ 5000 ಜಾಹಿರಾತು ಆಗಷ್ಟೇ ಶುರುವಾಗಿತ್ತು. ಇದನ್ನೊಂದು ನಾನು ಕುಡಿದಿಲ್ಲ. ಒಮ್ಮೆ ಕುಡಿದು ನೋಡಬೇಕು ಎಂದಿದ್ದ. ಆಗ ನಾನು ಗಾಬರಿಯಾಗಿದ್ದೆ. ಅದೇ ಅವನು ಈಗ ಈ ಹಣ್ಣು ನಮಗಲ್ಲ ಎಂದು ಹೇಳಿದ್ದ. ಎಲ್ಲವೂ ಬಂದು ಬಂದು ಬೀಳುತ್ತಿರುವ ನಮ್ಮ ಮಾರುಕಟ್ಟೆಗಳಲ್ಲಿ ಈಗ ಆಯ್ಕೆಯೇ ಬಹಳ ಕಷ್ಟವಾಗಿದೆ. ಸಿಕ್ಕಿದ್ದನ್ನೆಲ್ಲ ಬಾಚಿಕೊಳ್ಳುವವರನ್ನು ಕಂಡಾಗ ದಿಗಿಲಾಗುತ್ತದೆ. ಒಂದು ಕಡೆ ನಾವು ಆತ್ಮ ನಿರ್ಭರರಾಗಬೇಕು. ಇನ್ನೊಂದು ಕಡೆ ಜಾಗತೀಕರಣದ ಹೊಡೆತಕ್ಕೆ ಪಕ್ಕಾಗಬೇಕು. ಎರಡೂ ಒಟ್ಟಿಗೇ ಹೇಗೆ ಸಾಧ್ಯ?
Photo by Heather Ford on Unsplash
ನೂತನ ಅವರ ಲೇಖನ ನೂತನವಾಗಿದೆ. ಹಣ್ಣುಗಳ ಬಗ್ಗೆ ಒಳ್ಳೆಯ research ಮಾಡಿದ್ದೀರಿ. Informative.
ಧನ್ಯವಾದಗಳು.
ಹೇಳಬಹುದಾದದ್ದು ಬಹಳವಿದೆ ಅಲ್ಲವೇ?
Article by Nutana M Doshetty takes back to childhood of 60’s & 70’s. We had lot of trees around our houses rental or own even in cities. We used to enjoy the govan fruit sitting on branches by hoodwinking owner. The papaya trees were in backyard along with variety of jackfruit trees. Also plenty of chakota which is rear now which were all healthy and available locally. The author has rightly cautioned not to be carried away by foreign tag or colour which passes through authorities without safe consumption. It is said looks are deceptive. Good article.
Thank you so much.
Let us try to bring back the old Glory by buying and eating more and more local fruits. Such fruits are advertised with nutrients in them. Our backyard fruits have all such properties and more.